ಘನಶ್ಯಾಮ್ ಅಗ್ರವಾಲ್ ಅವರ ಹಿಂದಿ “ಕಿರು“ ಕತೆಗಳು:
ಅನುವಾದ: ಡಾ. ಮಾಧವಿ ಎಸ್. ಭಂಡಾರಿ
ತುಂಬಾ ಹಳೆಯ ಕತೆಯಿದು. ಸಂಸತ್ತಿನಲ್ಲಿ ‘ಜುರಾಸಿಕ್ ಪಾರ್ಕ್’ ಸಿನೇಮಾ ಪ್ರದರ್ಶನ ಏರ್ಪಡಿಸಲಾಗಿತ್ತು. ಎಲ್ಲರೂ ಸೇರಿ ಶಾಂತ ಚಿತ್ತರಾಗಿ, ಪಕ್ಷ ಭೇದ ಮರೆತು ವೀಕ್ಷಿಸಿದರು. ಮುಗಿದ ಬಳಿಕ ಎಲ್ಲರೂ ಸೇರಿ ಏಕ ರೂಪವಾಗಿ ಚಪ್ಪಾಳೆ ತಟ್ಟಿದರು, ಒಟ್ಟಿಗೆ ಚಹಾ ಕುಡಿದರು, ಒಮ್ಮತದಿಂದ ಚರ್ಚೆಯಲ್ಲಿ ಪಾಲ್ಗೊಂಡರು.
ಚರ್ಚೆಗೆ ಬಂದ ಮುಖ್ಯ ವಿಷಯ: ಸಾವಿರಾರು ವರ್ಷ ಹಿಂದಿನ ಡೈನಾಸೋರ್ ಮತ್ತೆ ಹುಟ್ಟಿ ಬರುತ್ತದೆ ಎಂದಾದರೆ, ನೂರೋ-ಇನ್ನೂರೋ ವರ್ಷ ಹಿಂದಿನ ನೇತಾರರೂ ಪುನರ್ಜನ್ಮ ಪಡೆಯಬಹುದಲ್ಲ?… ಹಾಗೆ ನೋಡಿದರೆ ಇದೊಂದು ಸಿನೇಮಾ. ಇದರಲ್ಲಿ ವಾಸ್ತವಕ್ಕಿಂತಲೂ ಕಲ್ಪನೆಗೆ ಹೆಚ್ಚು ಒತ್ತು ಕೊಡಲಾಗಿದೆ. ಆದಾಗ್ಯೂ ವಿಜ್ಞಾನದ ಬೆಳವಣಿಗೆಗೆ ಕಲ್ಪನೆಯೇ ಆಧಾರವಲ್ಲವೇ?… ಸಾಕಷ್ಟು ಚರ್ಚೆಯಾದ ಬಳಿಕ ವಿಷಯ ಗಾಂಧೀಜೀಯವರ ಕಡೆಗೆ ಹೊರಳಿತು.
ಮಹಾತ್ಮಾ ಗಾಂಧಿಯವರು ಮೈತುಂಬ ಬಟ್ಟೆ ಧರಿಸುತ್ತಿರಲಿಲ್ಲ. ಹಾಗಾಗಿ ಅವರಿಗೆ ಸೊಳ್ಳೆ ಕಚ್ಚುತ್ತಿರುವುದನ್ನು ಅಲ್ಲಗಳೆಯುವಂತಿರಲಿಲ್ಲ. ಒಪ್ಪಂದದ ಪ್ರಕಾರ ಆಳುವ ಹಾಗೂ ವಿರೋಧಿ ಬಣದವರಿಬ್ಬರೂ ಗಾಂಧೀಜೀಯವರನ್ನು ಸಮಾನವಾಗಿ ಹಂಚಿಕೊಳ್ಳುವ ನಿರ್ಧಾರಕ್ಕೆ ಬಂದರು. ವಿಜ್ಞಾನಿಗಳ ಒಂದು ತಂಡ ಪೋರಬಂದರಿನಿಂದ ವರ್ಧಾದ ವರೆಗೆ ಹೋಗಿ ಗಾಂಧೀಜೀಯವರಿಗೆ ಕಚ್ಚಿದ್ದ ಸೊಳ್ಳೆಗಳನ್ನು ಶೋಧಿಸಲಿ. ಗಾಂಧೀಜೀ ಬಂದರೆ ದೇಶದಲ್ಲಿ ರಾಮರಾಜ್ಯ ಮರಳಿ ಬರುತ್ತದೆ. ಒಮ್ಮತದ ನಿರ್ಣಯದಿಂದಲೇ ಆತ್ಮತೃಪ್ತರಾಗಿ ಮತ್ತೊಮ್ಮೆ ‘ಜುರಾಸಿಕ್ ಪಾರ್ಕ್’ ನೋಡಿದರು. ಆದರೀಗ ಮರು ನೋಟ ಅವರೆಲ್ಲರ ಮೈ ಬೆವರಿಸಿತ್ತು.
ಎರಡೂ ಪಕ್ಷದವರ ಆಲೋಚನಾ ಲಹರಿ ಒಂದೇ ತೆರನಾಗಿತ್ತು: ಗಾಂಧೀಜೀ ಮತ್ತೊಮ್ಮೆ ಹುಟ್ಟಿ ಬಂದರೆ, ಅವರು ಡೈನಾಸೋರ್ ಹಾಗೆ ಅಪಾಯಕಾರಿ ಆಗಲಾರರು ಎಂಬುದಕ್ಕೆ ಯಾವ ಗ್ಯಾರಂಟಿಯಿದೆ?… ಗಾಂಧೀಜೀಯವರನ್ನು ನಂಬುವುದು ಹೇಗೆ?
‘ಈ ಪಕ್ಷಗಳೆಲ್ಲ ಬೇಡ…ಕುರ್ಚಿಯ ವ್ಯಾಮೋಹ ಬಿಟ್ಟುಬಿಡಿ…ಅಧಿಕಾರ ದಾಹಕ್ಕಿಂತ ದೇಶ ದೊಡ್ಡದು…ಸತ್ಯದ ಜೊತೆ ಅನುಸಂಧಾನ ಮಾಡಿಕೊಳ್ಳಿ…ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಳ್ಳಿ…ಮಣ್ಣು-ಮಸಿ…ಎಂದೆಲ್ಲ ಹುಟ್ಟಿದ ಮರುಕ್ಷಣದಲ್ಲೇ ತಲೆತಿರುಕರಂತೆ ಈ ಪರಿಯ ಆದೇಶ ಹೊರಡಿಸಿಬಿಟ್ಟರೆ!’
ಗುಲಾಮಗಿರಿಯಿಂದ ಬಳಲುತ್ತಿದ್ದ ದೇಶಕ್ಕೆ ಗಾಂಧೀಜೀ ಸರಿಯಾಗಿದ್ದರು, ಆದರೆ ಸ್ವತಂತ್ರ ಭಾರತದಲ್ಲಿ ಜೀವಂತ ಗಾಂಧೀಜೀ ಏನು ಮಾಡಬಹುದು ಗೊತ್ತಾ?… ‘ಜುರಾಸಿಕ್ ಪಾರ್ಕ್’ನಲ್ಲಿಯ ಡೈನಾಸೋರ್ ಕೊನೆಯಲ್ಲಿ ಮಾಡುವುದನ್ನೇ ಮಾಡಬಹುದು. ರಾಮರಾಜ್ಯ ಬೇಕು ಎಂಬ ಮಹದಾಸೆಯಲ್ಲಿ ನಾವು ರಾಜಕಾರಣಿಗಳೆಲ್ಲ ಸೀತಾಪಹರಣ ಮಾಡದೆಯೂ ರಾವಣನಂತೆ ದುರ್ಗತಿ ಅನುಭವಿಸಬೇಕಾದೀತು. ಗಾಂಧೀಜೀ ಮತ್ತೆ ಹುಟ್ಟಿ ಬರಬಾರದು. ನಮ್ಮ-ನಮ್ಮೊಳಗಾದ ಕರಾರಿನ ಕಾಗದ ಪತ್ರವನ್ನು ಕೇವಲ ಹರಿದು ಹಾಕುವುದಷ್ಟೇ ಅಲ್ಲ, ಅದನ್ನು ಎಲ್ಲರ ಸಮಕ್ಷಮದಲ್ಲಿ ಅಗ್ನಿಗೆ ಆಹುತಿ ನೀಡಬೇಕು.
ಒಪ್ಪಂದ ಪತ್ರ ಸುಡುತ್ತಿರುವಾಗ ಪತ್ರಕರ್ತರೊಬ್ಬರು ಕೊಂಕು ನುಡಿಯಲ್ಲಿ ಹೇಳಿದರು, “ಕುರ್ಚಿಯಿಂದ ಬೇರ್ಪಡದ ರಾಜಕಾರಣಿಗಳೇ, ನೀವೆಲ್ಲ ಗಾಂಧೀಜೀಯವರಿಂದ ಎಲ್ಲಿಯ ತನಕ ತಪ್ಪಿಸಿಕೊಳ್ಳುವವರಿದ್ದೀರಿ? ಗಾಂಧೀಜೀಯವರು ವಿದೇಶಕ್ಕೂ ಹೋಗಿದ್ದರು. ಅಲ್ಲೇನು ಸೊಳ್ಳೆಗಳಿರಲಿಲ್ಲವೆ? ಅಲ್ಲಿಯ ವಿಜ್ಞಾನಿಗಳು ಗಾಂಧೀಜೀಯವರನ್ನು ಸೃಷ್ಟಿಸಿ ಭಾರತಕ್ಕೆ ಕಳಿಸಿದರೆ ಆಗೇನು ಮಾಡ್ತೀರಾ?”
ಅರೆಕ್ಷಣ ಆಳುವ ಮತ್ತು ವಿರೋಧ ಪಕ್ಷದ ನೇತಾರರುಗಳು ದಂಗಾಗಿಬಿಟ್ಟರು. ತುಸು ಸಾವರಿಸಿಕೊಂಡು ಹೇಳಿದರು, “ಗಾಂಧೀಜೀ ಮತ್ತೆ ಹುಟ್ಟಿಬಂದರೂ ನಮಗೇನೂ ಭಯವಿಲ್ಲ. ಪ್ರಕೃತಿಯ ನಿಯಮ ಎಲ್ಲರಿಗೂ ಒಂದೇ. ಆ ಗಾಂಧೀಜೀಯವರನ್ನು ನಾವೂ ನೋಡಿಯೇಬಿಡ್ತೇವೆ…ನೋಡಿ ಪತ್ರಕರ್ತರೆ, ಆ ಸೊಳ್ಳೆಗಳು ಕೇವಲ ಗಾಂಧೀಜೀಯವರಿಗಷ್ಟೇ ಕಚ್ಚಿರಲಿಕ್ಕಿಲ್ಲ, ಗೋಡ್ಸೆಯ ರಕ್ತದ ರುಚಿಯನ್ನೂ ನೋಡಿರಲೇಬೇಕು!”
“ಬೋಲೋ ಮಹಾತ್ಮಾ ಗಾಂಧೀಜೀ ಕೀ ಜೈ!”
ಮುಂದಿನ ಬುಧವಾರ ಇನ್ನೊಂದು ಕಿರು ಕಥೆ: ‘ದ ಲಾಸ್ಟ್ ಶೋ’
1 thought on “ಗಾಂಧೀಜೀಯವರ ಭ್ರೂಣಹತ್ಯೆ”
ತುಂಬ ಚೆಂದದ ಬರೆಹ