ಜೀವನ ತೋಟದ ಉಸ್ತುವಾರಿಯ ಬಂಟರು ನಾವು
ದೊರೆತಿಹುದೆಮಗೆ ನಾನಾತೆರನ ಕಾಳುಗಳ ಬಟ್ಟಲು
ನಮ್ಮದೇ ತೋಟವಿದು ನಮ್ಮಂತೆ ಬೆಳೆಯಬಹುದು
ಜೀವನವ ಸೊಗಯಿಸಲು ನಮ್ಮದೇ ಅಳತೆಗೋಲು
ಶಿಶಿರ ಋತುಬರಬಹುದು ಅಂಜಿಕೆಯ ತರಬಹುದು
ನೆನಪಿರಲಿ ಮುಂದಿಹುದು ವಸಂತ, ಶ್ರಮಿಸುವುದ ಬಿಡದಿರು
ತಾಳಬೇಕು ತಾಳಿಗೆಲ್ಲಬೇಕು , ಪಡೆಯಬೇಕು ಬಯಸಿದುದು
ಖಿನ್ನನಾಗದೆ ’ಸೋವಾಟ್?’ಎನುತ ನಗುತ ಮುನ್ನುಗ್ಗುತಿರು
ಪ್ರತಿಕೂಲದಲಿ ನೆನೆ ವಾಲ್ಮೀಕಿಯ ’ಮರಾ’ ದಲ್ಲಿದ್ದ’ರಾಮ’
ನೆಗೆತದಲಿ ನುರಿತವಗೆ ಉಂಟು ತಡಕೆ ಪಂದ್ಯದ ಜಯ
ಬಾಗಿಲೊಂದು ಮುಚ್ಚಿದೆಅಷ್ಟೆ, ತೆರೆದಿರುವುವಸೀಮ
ನೀರ ಕೊರತೆಯಲಿ ನೆಲವಗೆದು ತೆಗೆವಾ ತೋಳ್ಬಲಕೆ ಜಯ
ಹುಟ್ಟದಿದ್ದರೇನು ಅಮಿತ ಭಾಗ್ಯವ ಹೊತ್ತು
ಆತ್ಮನಂಬಿಕೆಯಿರೆ ಒಣಮರವು ಚಿಗುರುವುದು
ಸೋತರೇನು ತರಬಹುದದೇ! ಗೆಲುವಿನ ರಾಗದ ಸೊತ್ತು
ನಾಗರ ಹೆಡೆಯಲೂ ಮಣಿಯ ಕಾಣ್ವ ಶಕ್ತಿ ಮೂಡುವುದು
ನಿರಾಶೆಯನು ಬದಿಗಿಡು, ಆಶಾವಾದಿಯಾಗಿರು ಸದಾ
ಕಮರಿಯಲಿ ಬಿದ್ದರೂ ಮೆಲೇರು ಭರವಸೆಯ ಹಗ್ಗಹಿಡಿದು
ಧೈರ್ಯದಲಿ ಮುನ್ನುಗ್ಗು ,ಹೊಸ ಹಾದಿ, ಬೆಳಕು ನಿನಾದ
ನೂರಾರು ಕವಲುಗಳು , ಒಂದೊಂದೂ ಉಜ್ವಲವಹುದು
ನೆಲಕಂಟಿದ ಮರವಾಗದಿರು, ಅಸಹಾಯತೆಗೆ ಶರಣಾಗದಿರು
ಓಡಲು ಕಾಲುಗಳಿಗೆ ಬಲವುಂಟು, ರೆಕ್ಕೆಗಳುಂಟು ಹಾರಲು
ಹುಟ್ಟುಸ್ವತಂತ್ರ ನೀನು, ಹಿಡಿದಿಡುವ ಬಂಧನಕೆ ಬೆದರದಿರು
ಜಯದೇವಿಯಪ್ಪುವಳು ಸಾಧನೆಯ ಹಾದಿಯಲಿ ನೀನಿರಲು
***********
(ಈ ಕವನ ಡಾ ಜೀ.ವಿ ಕುಲಕರ್ಣಿ ಯವರ “ಹೋಪ್” ಕವನದ ಭಾವಾನುವಾದ)