ಕಾದಂಬರಿ ಎನ್ನುವ ಸೃಜನಶೀಲ ಸಾಹಿತ್ಯ ಪ್ರಕಾರ ಬಾಣಭಟ್ಟನ `ಕಾದಂಬರಿ’ ಎಂಬ ಗದ್ಯ ಕಾವ್ಯದಿಂದ ಬಂದ ಹೆಸರು. ಈ ಸಾಹಿತ್ಯ ಪ್ರಕಾರ ಮನಸ್ಸನ್ನು ರಸಾಸ್ವಾದನೆಯಲ್ಲಿ ಮೈಮರೆಸಿಬಿಡುವುದರಿಂದ ಇದನ್ನು ಮತ್ತೇರಿಸುವ ಮದ್ಯ ಎಂದೂ ಅರ್ಥೈಸ ಬಹುದು. ಇಲ್ಲಿ ಬರಹಗಾರ ತನ್ನ ಪ್ರತಿಭೆಯನ್ನು ಯಥಾನುಶಕ್ತಿ ಬಳಸಿಕೊಳ್ಳುತ್ತಾನೆ. ಪ್ರಸ್ತುತ ಹಾಗೂ ಸಾರ್ವಕಾಲಿಕ ವಿದ್ಯಮಾನಗಳಿಗೆ ಹೊಂದಿಕೆಯಾಗುವಂತೆ ತನ್ನ ವಿಚಾರಗಳನ್ನು ಜೋಡಿಸುತ್ತಾನೆ. ಇದೊಂದು ಬಗೆಯ ಶಬ್ದ ಸೃಷ್ಟಿ. ಹೋರಾಟ ಕಥನವನ್ನು ಹಿಗ್ಗಿಸುವುದರ ಮೂಲಕ ಚರಿತ್ರೆಯನ್ನು ಕಟ್ಟಿಕೊಡುವ ಕೆಲಸವನ್ನು ನವೋದಯ ಕಾಲದಿಂದಲೂ ನಮ್ಮ ಕಾದಂಬರಿಕಾರರು ಮಾಡುತ್ತಲೇ ಬಂದಿದ್ದಾರೆ. ಕಾದಂಬರಿಯ ಪ್ರಕಾರಗಳಲ್ಲಿ ಇಂಥದ್ದು ಐತಿಹಾಸಿಕ ಕಾದಂಬರಿ ಎಂದು ಹೆಸರಾಯಿತು. ಕುರ್ತುಕೋಟಿಯವರು ಹೇಳುವಂತೆ “ಇಲ್ಲಿ ಇತಿಹಾಸದ ವಾಸ್ತವದೊಂದಿಗೆ ಕಾದಂಬರಿಯ ಕಲ್ಪನೆ ಆಟವಾಡುತ್ತದೆ. ಈ ಬೆರಕೆ ಸರಿಯಾದ ಪ್ರಮಾಣದಲ್ಲಿ ಇರುವಂತೆ ಲೇಖಕನ ಸಾಹಿತ್ಯ ಪ್ರಜ್ಞೆ ನೋಡಿಕೊಳ್ಳಬೇಕಾಗುತ್ತದೆ. ಇತಿಹಾಸದ ಸತ್ಯದ ನಿರ್ದಿಷ್ಟತೆಯೊಂದಿಗೆ ನಿರ್ದಿಷ್ಟವಾದ ಸ್ವತಂತ್ರವಾದ ಕಲ್ಪನೆಯ ಕ್ರೀಡೆಯಿಂದ ಒಟ್ಟು ಸತ್ಯದ ನಿರ್ಮಾಣವಾಗಬೇಕು.” ಇಂತಹ ನಿರ್ಮಾಣ ಕೆಲಸವನ್ನು ಡಾ. ಗಜಾನನ ಶರ್ಮ ಅವರು `ಚೆನ್ನ ಭೈರಾದೇವಿ’ ಎಂಬ ತಮ್ಮ ಕಾದಂಬರಿಯ ಮೂಲಕ ಮಾಡಿ ಓದುಗರ ಮುಂದೆ ಇರಿಸಿದ್ದಾರೆ.
ಭಾರತದ ಬಹುತೇಕ ಇತಿಹಾಸವನ್ನು ವಿದೇಶಿಗರು ಬರೆದಿರುವ ದಾಖಲೆಗಳ ಮುಖಾಂತರ ಅರ್ಥೈಸಿಕೊಳ್ಳಲಾಗಿದೆ. ಇದರಿಂದಾಗಿ ಅನೇಕ ಘಟನೆಗಳು ಬದಿಗೆ ಸರಿದು ನಗಣ್ಯವಾಗಿವೆ. ಸಾಳ್ವ ವಂಶದ ಕೊನೆಯ ಅರಸಿ ಚೆನ್ನ ಭೈರಾದೇವಿಯ ರಾಜ್ಯಾಡಳಿತವೂ ಇದೇ ಸಾಲಿಗೆ ಸೇರಿದೆ ಎಂದರೆ ತಪ್ಪಾಗಲಾರದು. ಆಕೆ ಆಳಿದ ಸೀಮೆಯಲ್ಲೇ ಹುಟ್ಟಿ ಬೆಳೆದವರಾದರೂ ಹೆಚ್ಚಿನವರಿಗೆ ಆಕೆಯ ಹೆಸರು ಹೊಸತು. ಹೀಗಿರುವಾಗ ಹದಿನಾರನೆಯ ಶತಮಾನದಲ್ಲಿ ಈಗಿನ ಉತ್ತರ ಕನ್ನಡದ ಗೇರುಸೊಪ್ಪೆ ಹಾಗೂ ಸುತ್ತಲಿನ ಪ್ರದೇಶಗಳನ್ನು ರಾಜಕೀಯವಾಗಿ ಹಾಗೂ ವ್ಯಾವಹಾರಿಕವಾಗಿ ಗಟ್ಟಿಗೊಳಿಸಿದ ದಿಟ್ಟ ರಾಣಿ ಚೆನ್ನಭೈರಾದೇವಿಯ ಚರಿತ್ರೆಯನ್ನು ಹಾಗೂ ಅದರ ಮೂಲಕ ಆ ಕಾಲದ ಘಟನೆಗಳನ್ನು ಕಾದಂಬರಿಯಾಗಿ ಕಟ್ಟಿಕೊಡುವ ಪ್ರಯತ್ನ ಪ್ರಸ್ತುತ ಸಾಹಿತ್ಯಲೋಕದ ಸಿರಿತನವನ್ನು ಹೆಚ್ಚಿಸಿದೆ. ವೃತ್ತಿಯಲ್ಲಿ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿ ನಿವೃತ್ತಿ ಹೊಂದಿದ ಡಾ. ಗಜಾನನ ಶರ್ಮ ಅವರು ಪ್ರಸಿದ್ಧ ನಾಟಕಕಾರ, ನಿರ್ದೇಶಕ ಮತ್ತು ಸಾಹಿತಿ. `ಪುನರ್ವಸು’ ಅವರ ಮೊದಲ ಕಾದಂಬರಿ. ದೇಶದಲ್ಲಿ ಅತ್ಯುತ್ತಮ ವಿದ್ಯುತ್ ಯೋಜನೆಯಾಗಿ ಅನುಷ್ಠಾನಗೊಂಡ ಶರಾವತಿ ಜಲವಿದ್ಯುತ್ ಯೋಜನೆಯ ಒಳಾಂಗಣ ನೋಟವಿರುವ ಈ ಕೃತಿಯಲ್ಲಿ ಅವರು ಈ ಯೋಜನೆಯ ಒಳಿತು-ಕೆಡುಕುಗಳನ್ನು ಒಪ್ಪಿಕೊಳ್ಳುತ್ತಲೇ ಶರಾವತಿ ಕಣಿವೆಯಲ್ಲಿ ತಲೆತಲಾಂತರದಿಂದ ಬದುಕಿದ ಅಮಾಯಕರ ಬದುಕನ್ನು ಶಿಥಿಲಗೊಳಿಸಿದ ಸತ್ಯವನ್ನು ಅನೇಕ ಮಾಹಿತಿ ಹಾಗೂ ರೋಚಕತೆಗಳೊಂದಿಗೆ ಕಥಾನಕವಾಗಿ ಕಟ್ಟಿಕೊಟ್ಟಿದ್ದಾರೆ.
`ಚೆನ್ನಭೈರಾದೇವಿ’ ಕಾದಂಬರಿಯಲ್ಲಿ ಕೃತಿಕಾರರು ಆರಿಸಿಕೊಂಡ ಐತಿಹಾಸಿಕ ವಿಷಯದ ಮೇಲಿನ ಆಳವಾದ ಅಧ್ಯಯನ ಹಾಗೂ ಅವರ ಸ್ವಯಂ ಪ್ರತಿಭೆ ಎರಡೂ ಹದಪಾಕವಾಗಿದೆ. ಓದಿದಷ್ಟೂ ರುಚಿಯನ್ನು ಹೆಚ್ಚಿಸುತ್ತ ಹೋಗುವ ಮೆಣಸಿನ ಕಾಳಿನ ರಾಣಿಯ `ಅಕಳಂಕ ಚರಿತೆ’ ನವರಸಗಳನ್ನು ಉದ್ದೀಪಿಸುವಂಥದ್ದು.
ಭರತಖಂಡದ ಇತಿಹಾಸದಲ್ಲಿ ಬೆರಳೆಣಿಕೆಯಷ್ಟು ರಾಜರನ್ನು ಬಿಟ್ಟರೆ ಚೆನ್ನಭೈರಾದೇವಿಯಷ್ಟು ಸುದೀರ್ಘ ಕಾಲ ರಾಜ್ಯವಾಳಿದವರಿಲ್ಲ. ಸಾಳುವ ವಂಶದ ಈ ವೀರ ನಾರಿ ಐವತ್ತ ನಾಲ್ಕು ವರ್ಷಗಳ ಕಾಲ (1552-1606) ಆಳಿದಳು. ತಮ್ಮ ವಸಾಹತನ್ನು ವಿಸ್ತರಿಸಲು ಮತಾಂತರ ಹಿಂಸೆ ಹಾಗೂ ದೌರ್ಜನ್ಯ ನಡೆಸಿ ಹೊಂಚುಹಾಕುತ್ತಿದ್ದ ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದಳು. ವ್ಯಾಪಾರ ವಹಿವಾಟುಗಳಲ್ಲಿ ಫಿರಂಗಿಗಳೊಡನೆ ಸ್ನೇಹಮಯವಾಗಿಯೂ, ರಾಜಕೀಯದಲ್ಲಿ ಕಠೋರವಾಗಿಯೂ ಸಂಬಂಧವನ್ನು ಇಟ್ಟುಕೊಂಡ ಭೈರಾದೇವಿ ಆ ಕಾಲದಲ್ಲೂ ಸ್ತ್ರೀಯ ಘನತೆಯನ್ನು ಮೆರೆದ ವೀರ ವನಿತೆ.ವಿಜಾಪುರವನ್ನು ಗೆದ್ದು ಗೋವಾವನ್ನು ವಶಪಡಿಸಿಕೊಂಡ ಫಿರಂಗಿಗಳು ಒಡೆತನವನ್ನು ವಿಸ್ತರಿಸುವಾಗ ಅತ್ಯಾಚಾರ ಹಾಗೂ ಅನಾಚಾರಗಳು ನಡೆದವು. ದೌರ್ಜನ್ಯಕ್ಕೊಳಗಾದ ಜನರಿಗೆ, ನಿರಾಶ್ರಿತರಿಗೆ ತನ್ನ ರಾಜ್ಯದಲ್ಲಿ ಆಶ್ರಯ ನೀಡಿ ರಕ್ಷಿಸಿದ ಕರುಣಾಮಯಿ ರಾಣಿ ಚೆನ್ನಭೈರಾದೇವಿ.ರಾಜ ವೈಭವಗಳಿಂದ ಹೊರತಾಗಿ ಉಳಿದು ಫಿರಂಗಿಗಳನ್ನು ಹಿಮ್ಮೆಟ್ಟಿಸುವಲ್ಲಿ ತನ್ನೆಲ್ಲ ವೈಯಕ್ತಿಕ ಸುಖಗಳನ್ನು ಒತ್ತೆಯಿಟ್ಟ ಛಲಗಾರ್ತಿ.
ಆಕೆಯ ಚರಿತ್ರೆಯ ಕುರಿತಾದ 435 ಪುಟಗಳ ಈ ಕಾದಂಬರಿಯ ಮೊದಲ 25 ಪುಟಗಳು ಪ್ರಸ್ತಾವನೆಗೆ ಮೀಸಲಾಗಿದೆ. ಇದರಲ್ಲಿ ಲೇಖಕರು ತಾನು ಬರೆಯುವ ಉದ್ದೇಶ ಹಾಗೂ ಭೈರಾದೇವಿಯ ಚಾರಿತ್ರಿಕ ಹಿನ್ನೆಲೆಯನ್ನು ಹೇಳಿರುತ್ತಾರೆ. ಮುಂದೆ ಕಾದಂಬರಿಯನ್ನು ಓದುತ್ತ ಹೋದಂತೆ ಆ ಕಾಲಘಟ್ಟ ತೆರವುಗೊಳ್ಳುತ್ತಾ ಹೋಗುತ್ತದೆ.
ಲೇಖಕರು ಹೇಳಿಕೊಂಡಂತೆ ಅವರ ಬಾಲ್ಯದುದ್ದಕ್ಕೂ ಸುತ್ತಮುತ್ತಲಿನ ಪರಿಸರದ ಸ್ಥಳನಾಮಗಳ ಕುರಿತಾಗಿ, ಕಂಡ ಅವಶೇಷಗಳ ಕುರಿತಾಗಿ ಹಿರಿಯರಿಂದ ಕಥೆಗಳನ್ನು ಕೇಳುವಾಗ ರಾಣಿ ಭೈರಾದೇವಿಯ ಹೆಸರು ಕಿವಿಯ ಮೇಲೆ ಹಾದು ಹೋಗುತ್ತಿತ್ತು. ಆದರೆ ವಿದ್ಯಾಭ್ಯಾಸದ ಸಮಯದಲ್ಲಿ ಪಠ್ಯಪುಸ್ತಕಗಳಲ್ಲಿ ಹಲವು ರಾಣಿಯರ ಚರಿತ್ರೆಗಳಿದ್ದರೂ ಗೇರುಸೊಪ್ಪೆಯ ಈ ರಾಣಿಯ ಹೆಸರಿಲ್ಲದಿದ್ದುದು ಲೇಖಕರ ನಿರಾಶೆಗೆ ಕಾರಣವಾಗಿತ್ತು. ತುಸುವೂ ಮಸುಕಾಗದೆ ಅವರ ಮನದಾಳದಲ್ಲಿ ಅಚ್ಚೊತ್ತಿದ್ದ ರಾಣಿ ಭೈರಾದೇವಿಯ ಬಗ್ಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲಾ ಅರಿಯಲು ಪ್ರಯತ್ನಿಸುತ್ತಿದ್ದರು. ಅನೇಕ ವಿದ್ವಾಂಸರ ಕೃತಿಗಳಲ್ಲಿ ದೊರೆತ ಮಾಹಿತಿಯ ಪ್ರಕಾರ ಆಕೆ ಒಬ್ಬ ಧೀರ, ಧೀಮಂತ, ದಿಟ್ಟ ರಾಣಿ ಎಂಬ ಚಾರಿತ್ರಿಕ ಸತ್ಯ ಮನದಟ್ಟಾಯಿತು. ಅಂತಹ ಒಬ್ಬ ಅಪ್ರತಿಮ ವೀರ ವನಿತೆಯ ಕುರಿತು ಇತಿಹಾಸ ಅವಜ್ಞೆ ತೋರಿದ ಕಾರಣವನ್ನು ಊಹಿಸಿಕೊಳ್ಳುತ್ತಲೇ ಈ ಕಾದಂಬರಿಯ ರಚನೆಗೆ ಲೇಖನಿ ಹಿಡಿದರು. ಅವರ ಊಹೆಯಲ್ಲೂ ಅನೇಕ ವಾಸ್ತವದ ಸತ್ಯಾಂಶಗಳಿವೆ.
ಚೆನ್ನಬೈರಾದೇವಿಯನ್ನು `ಅವ್ವರಸಿ’ ಎಂದು ಆಗಿನ ಸ್ಥಳೀಯರು ಪೂಜಿಸುತ್ತಾ ಬಂದದ್ದನ್ನು ಆಧಾರಗಳಿಂದ ಅರಿತ ಲೇಖಕರಿಗೆ ವಿದೇಶಿ ಪ್ರವಾಸಿಗರು ಆಕೆಯ ಬಗ್ಗೆ ಉಲ್ಲೇಖಿಸಿದ ಅನೇಕ ಅಂಶಗಳು ಸಂಶಯಾಸ್ಪದವಾದವು. ಸತ್ಯದ ಶೋಧಕ್ಕೆ ಹೊರಟ ಅವರು ದೇಶ-ವಿದೇಶದ ವಿದ್ವಾಂಸರ ಕೃತಿಗಳನ್ನು ಅಧ್ಯಯನ ಮಾಡುತ್ತಾರೆ. ಆಗ ಅವರಿಗೆ ವಿದೇಶೀ ಪ್ರವಾಸಿಗರು ಬರೆದ ಇತಿಹಾಸ ಕಥನಗಳನ್ನು ಆಧರಿಸಿ ವಿಭಿನ್ನ ಸಂಸ್ಕ್ರತಿ ಮತ್ತು ಭಾಷೆಯ ಕಾರಣದಿಂದ ಉಂಟಾಗುವ ಗ್ರಹಿಕೆಯ ವ್ಯತ್ಯಾಸ,ಅದು ಹೇಗೆ ಇತಿಹಾಸವನ್ನು ತಿರುಚಬಲ್ಲದು ಮುಂತಾದ ವಿಷಯಗಳ ಅರಿವಾಗುತ್ತದೆ. ಇದರಿಂದ ಇತಿಹಾಸದ ಪುನರಾವಲೋಕನದ ಮಹತ್ವವನ್ನು ಗಮನಕ್ಕೆ ತರುತ್ತಾರೆ. “ಸಹ್ಯಾದ್ರಿ ಶ್ರೇಣಿಯ ನಿಬಿಡ ಕಾನನದ ನಡುವಿನ ಕೆಲವು ಪ್ರದೇಶಗಳಲ್ಲಿ ಚದುರಿ ಬಿದ್ದ ಗತಕಾಲದ ಅವಶೇಷಗಳು ಚತುರ್ಮುಖ ಬಸದಿಯಂತಹ ಅಪರೂಪದ ನಿರ್ಮಾಣಗಳು, ಜನಮಾನಸದಲ್ಲಿ ಬೇರೂರಿರುವ ಅನೇಕ ಐತಿಹ್ಯಗಳು ಅವಳನ್ನು ಒಬ್ಬ ಸಾಧಾರಣ ಹಳ್ಳಿ ಹುಡುಗಿಯ ಮಟ್ಟದಿಂದ ಮೇಲೆತ್ತಿ ದೇಶ ವಿದೇಶದೊಂದಿಗೆ ಸಮರ್ಥವಾಗಿ ಸಂವಾದಿಸಿದ ಒಂದು ಅಪೂರ್ವ ವ್ಯಕ್ತಿತ್ವವನ್ನಾಗಿ ಬಿಂಬಿಸಿವೆ. ಚೆನ್ನಭೈರಾದೇವಿಯ ಕಥನ ಕೇವಲ ರಾಣಿಯೊಬ್ಬಳ ಚರಿತ್ರೆಯಾಗದೆ ಹೆಣ್ಣಿನ ಬದುಕಿನ ಹಲವು ಮಗ್ಗುಲುಗಳನ್ನು ಪರಿಚಯಿಸುವ ಕಥನವೆನ್ನಿಸಿದಾಗ ಮೂಡಿಬಂದದ್ದು ಈ ಕಾದಂಬರಿ”ಎಂದು ಲೇಖಕರು ಆರಂಭದಲ್ಲಿ ಉದ್ದೇಶಿಸಿದ್ದಾರೆ.
ಕಾದಂಬರಿಯ ಆರಂಭವಾಗುವುದೇ ಪುಟ್ಟಗೌರಿ ತನ್ನ ತಾಯಿಯನ್ನು ಸಂಬೋಧಿಸುವ `ಅವ್ವ’ ಎಂಬ ಪದದಿಂದ.ಓರ್ವ ಹೆಣ್ಣಿನ ಅತ್ಯುತ್ಕೃಷ್ಟ ಪಾತ್ರದಿಂದ ಆರಂಭವಾಗುವ ಕಾದಂಬರಿ ಅವಳ ಎಲ್ಲ ಸ್ವರೂಪಗಳನ್ನೂ ಭೈರಾದೇವಿಯಲ್ಲಿ ಗುರುತಿಸಿ ಚರಿತ್ರೆಯಾಗಿ ಕಟ್ಟಿಕೊಟ್ಟ ಪರಿ ಅನನ್ಯವಾಗಿದೆ.ಪುರಾಣಗಳಲ್ಲಿ ನವದುರ್ಗೆಯರನ್ನು ಯಾವ ಯಾವ ಸ್ವರೂಪಗಳಲ್ಲಿ ಕಲ್ಪಿಸಿಕೊಂಡು ಪೂಜನೀಯರೆಂದು ಪರಿಗಣಿಸಲಾಗಿದೆಯೋ ಆ ಎಲ್ಲ ಅಂಶಗಳು ಭೈರಾದೇವಿಯಲ್ಲಿ ಇತ್ತು. ಅದಕ್ಕಾಗಿಯೇ ಆಗಿನವರು ಅವಳನ್ನು ಅವ್ವರಸಿ ಎಂದು ಪೂಜಿಸುತ್ತಿರಬಹುದು ಎಂಬುದನ್ನು ಲೇಖಕರು ಪ್ರತಿಬಿಂಬಿಸಿದ್ದಾರೆ. ಆಕೆಯ ಆಳ್ವಿಕೆಯ ತಂತ್ರಗಳು ಕಾಲಾತೀತವಾಗಿ ಅನ್ವಯಿಸುವಂತೆ ಇಲ್ಲಿ ಮೂಡಿಬಂದಿದೆ.ಇಲ್ಲಿ ರಾಣಿಗೆ ಜಾತಿ ಧರ್ಮ ಕಟ್ಟುಪಾಡುಗಳು,ಪಕ್ಷ ಪಂಗಡಗಳು ಮುಖ್ಯವಾಗದೇ ಕೇವಲ ಪ್ರಜಾಹಿತವೇ ಮುಖ್ಯವಾಗುತ್ತದೆ. ರಾಜ್ಯದ ವಿಸ್ತರಣೆ ಲಕ್ಷ್ಯವಾಗಿರದೇ ಇರುವ ರಾಜ್ಯವನ್ನು ಕಾಪಾಡಿಕೊಂಡು ಸಮೃದ್ಧಿಗೊಳಿಸುವುದರ ಬಗ್ಗೆ ಗಮನವಿದೆ.”ಇದ್ದಷ್ಟು ದಿನ ತತ್ಪರತೆಯಿಂದ ಜನಸೇವೆ, ಜಿನಸೇವೆ ಮಾಡು. ಪ್ರಭುತ್ವದ ಎರಡು ಅತಿದೊಡ್ಡ ಶತ್ರುಗಳೆಂದರೆ ರಾಜನ ಕಾಮ ಮತ್ತು ಪ್ರಜೆಯ ಹಸಿವು.ಎರಡನ್ನೂ ಮಿತಿಯಲ್ಲಿಡಲು ಪ್ರಯತ್ನಿಸು. ಆಡಳಿತದಲ್ಲಿ ಅದ್ವೈತವನ್ನು ಅನುಸರಿಸು. ಆಡಳಿತದ ಅದ್ವೈತವೆಂದರೆ ಪ್ರಭುವಿನ ಹಿತ ಮತ್ತು ಪ್ರಜೆಗಳ ಹಿತ ಒಂದೇ ಆಗಿರುವುದು. ಸಮುದಾಯದ ಹಿತವನ್ನೇ ತನ್ನ ಹಿತವನ್ನಾಗಿ ಸ್ವೀಕರಿಸುವವನೇ ನಿಜವಾದ ಪ್ರಭು”(ಪು.68).ಇಂತಹ ಕೆಲವು ತತ್ವ ಬೋಧಕ ವಾಣಿಗಳು ಅಲ್ಲಲ್ಲಿ ಇಣುಕಿ ಓದುಗರ ಮನಸ್ಸನ್ನು ಹಸನು ಗೊಳಿಸುವ ಪ್ರಯತ್ನವನ್ನು ಮಾಡಿವೆ.
ಪೋರ್ಚುಗಲ್‍ನಲ್ಲಿ ಮೆಣಸಿನಕಾಳಿನ ಬೇಡಿಕೆ ಹೆಚ್ಚಾದಾಗ ತನ್ನ ಸೀಮೆಯ ಕಾಡಿನಲ್ಲಿ ಬೆಳೆಯುತ್ತಿದ್ದ ಅದನ್ನು ತೋಟದಲ್ಲಿ ಬೆಳೆಯಲು ರಾಣಿ ಪ್ರೋತ್ಸಾಹಿಸುತ್ತಾಳೆ.ಆ ಮೂಲಕ ಬೆಳೆಸಿರಿಯ ಸಂಪತ್ತು ತನ್ನ ರಾಜ್ಯದ ಜನತೆಗೆ ದಕ್ಕುವಂತೆ ಮಾಡುತ್ತಾಳೆ. ದಟ್ಟ ಕಾಡಿನ ನಡುವೆ ಇರುವ ಹೊಗೆವಡ್ಡಿ ಹಾಗೂ ಹಾಡುವಳ್ಳಿ ಪ್ರದೇಶ ಸೈನಿಕರ ದಂಡಿನ ತರಬೇತಿ ಕೇಂದ್ರವಾಗಿತ್ತು. ಒಳನಾಡಿನಿಂದ ಭಟ್ಕಳದ ಮೂಲಕ ಹೊರದೇಶಗಳಿಗೆ ಹೇರೆತ್ತು, ಕತ್ತೆ, ಕುದುರೆಗಳ ಮೇಲೆ ಹೇರಿ ಯುದ್ಧ ಸಾಮಗ್ರಿಗಳು ಹಾಗೂ ಆಹಾರ ಪದಾರ್ಥಗಳು ಸಾಗಣೆಯಾಗುತ್ತಿದ್ದವು. ಪ್ರಯಾಣಿಕರು ಹಾಗೂ ಸಾಕುಪ್ರಾಣಿಗಳ ಮೇಲೆ ಹುಲಿ, ಕರಡಿ, ಚಿರತೆ, ಸೀಳುನಾಯಿ, ಕಾಡುಹಂದಿ ಮುಂತಾದವು ಆಕ್ರಮಣ ನಡೆಸುತ್ತಿದ್ದವು. ಆನೆ ಕಾಡುಕೋಣಗಳ ಹಿಂಡುಗಳ ದಾಳಿ ನಡೆಯುತ್ತಿತ್ತು.ಅವುಗಳಿಂದ ಬಚಾವಾಗಲು ಯಾವ ವಿಧಾನಗಳನ್ನು ಬಳಸಲಾಗುತ್ತಿತ್ತು ಹಾಗೂ ಆ ಕಾಲದ ಯುದ್ಧ ತಂತ್ರಗಳು ಹೇಗೆ ಭಿನ್ನವಾಗಿದ್ದವು ಇತ್ಯಾದಿ ಅನೇಕ ವಿಷಯಗಳ ಬಗೆಗಿನ ಮಾಹಿತಿಗಳು ಸ್ವಾರಸ್ಯಪೂರ್ಣವಾಗಿ ನಿರೂಪಿತವಾಗಿವೆ. ಜೋಗಿ ಹತ್ವಾರ್ ಅವರು ಹೇಳುವಂತೆ “ಕಾದಂಬರಿಯಲ್ಲಿ ಲೇಖಕರು ನಡು ನಡುವೆ ತುಸು ವಿಶ್ರಮಿಸಿ ಮುಂದಿನ ಪ್ರಯಾಣಕ್ಕೆ ಮನಸ್ಸು ಅಣಿಯಾಗುವಂತೆ ಓದುಗರಿಗೆ ತಂಗುದಾಣಗಳನ್ನು ನಿರ್ಮಿಸಿರುವುದು ವಿಶೇಷ”.ಆ ತಂಗುದಾಣದಲ್ಲಿ ರಮ್ಯ ಮನೋಹರ ಪ್ರಕೃತಿ ಇದೆ, ಜಲಪಾತವಿದೆ,ಈಜು ಕೊಳಗಳಿವೆ,ಹಸಿರು ಹುಲ್ಲಿನ ಹಾಸು ಇದೆ.ಚೆನ್ನಭೈರಾದೇವಿ ಜೈನ ಧರ್ಮದ ಕುಡಿಯಾಗಿರುವುದರಿಂದ ಅದರ ತತ್ವಗಳು, ಸಲ್ಲೇಖನ ವ್ರತ ಇತ್ಯಾದಿ ಆಚರಣೆಗಳ, ರೂಢಿಗಳ ವಿವರಣೆ, ನಿರೂಪಣೆ ಸ್ವಾರಸ್ಯಕರವಾಗಿದೆ. “ಬದುಕು ಚೆನ್ನಭೈರಾದೇವಿಗೆ ಅತ್ಯುತ್ತಮವಾದದ್ದನ್ನು ಕೊಟ್ಟಿತ್ತೋ ಇಲ್ಲವೋ ಆದರೆ ಅವಳಂತೂ ಪ್ರಜೆಗಳಿಗೆ ಅತ್ಯುತ್ತಮ ಬದುಕನ್ನು ಕಟ್ಟಿ ಕೊಟ್ಟಿದ್ದಳು. ಆಡಳಿತದಲ್ಲಿ ರಾಣಿಯ ಬಿಗಿ ನಿಲುವಿನಿಂದಾಗಿ ನಗಿರೆ ಒಂದೇ ಒಂದು ಯುದ್ಧವನ್ನು ಕಂಡಿರಲಿಲ್ಲ. ಆ ಪ್ರಯುಕ್ತ ರಾಜ್ಯದಲ್ಲಿ ವಿಧವೆಯರ ಸಂಖ್ಯೆ ತಗ್ಗಿ ಸಾಮಾಜಿಕ ಬದುಕು ಸಂತೃಪ್ತವಾಗಿತ್ತು. ಸಜ್ಜನರು ನಿರ್ಭೀತಿಯಲ್ಲಿ ಬದುಕಿದ್ದರು. ಸಾಗರೋತ್ತರ ವ್ಯಾಪಾರದಿಂದ ರಾಜ್ಯಕ್ಕೆ ಸಂಪತ್ತು ತಾನಾಗಿ ಹರಿದು ಬರುತ್ತಿತ್ತು. ಪೋರ್ಚುಗೀಸರು ತಮ್ಮನ್ನು ವ್ಯಾಪಾರಕ್ಕಷ್ಟೇ ಮಿತಿಗೊಳಿಸಿ ಕೊಂಡಿದ್ದರು. ಮೆಣಸಿನ ಕಾಳನ್ನು ಸಂಗ್ರಹಿಸಿಡುತ್ತಿದ್ದ ಬಾವಿಗಳಲ್ಲಿ ಅಪಾರ ಪ್ರಮಾಣದ ಬೆಳ್ಳಿ-ಬಂಗಾರಗಳನ್ನು ರಕ್ಷಿದಳು.
ಈ ನಡುವೆ ಹೆಣ್ಣೆಂಬ ಕಾರಣಕ್ಕೆ ಆಕೆಯನ್ನು ಹತ್ತಿಕ್ಕಲು ಹಾಗೂ ಅಧಿಕಾರ ಲಾಲಸೆಯಿಂದ ಎಲ್ಲ ಬಗೆಯಲ್ಲಿ ರಾಜ್ಯದ ಒಳ ಹೊರಗೆ ಪಿತೂರಿಗಳು ನಡೆಯುತ್ತವೆ. ಎಲ್ಲವನ್ನೂ ಕೆಚ್ಚೆದೆಯಿಂದ ಎದುರಿಸಿ ಆಳಿದ ಅವ್ವರಸಿಯ ಚರಿತ್ರೆಯಿರುವ ಕಾದಂಬರಿ ಮನೋಜ್ಞವಾಗಿದೆ. ಆಡಳಿತದಲ್ಲಿ ಎಲ್ಲವೂ ಸಲೀಸಾಗಿ ನಡೆಯುತ್ತಿರುವಾಗ ಮೊದಲಿನಿಂದಲೂ ನಗಿರೆಯನ್ನು ವಶಪಡಿಸಿಕೊಳ್ಳುವ ಸನ್ನಾಹದಲ್ಲಿದ್ದ ಕೆಳದಿಯ ವೆಂಕಟಪ್ಪನಾಯಕ ವಂಚನೆಯಿಂದ ಆಕೆಯನ್ನು ಬಂಧಿಸುತ್ತಾನೆ.ಕೊನೆಯಲ್ಲಿ ಸಲ್ಲೇಖನ ವೃತದೊಂದಿಗೆ ರಾಣಿಯ ಅಂತ್ಯವಾಗುವಾಗ ಮೊಳಗುವ ಜನಮಾನಸದ ಜೈಜೈಕಾರ ರಾಣಿಯ ಶ್ರೇಷ್ಠತೆಯನ್ನು ಎತ್ತಿ ಹಿಡಿದಿದೆ.
ಜನರ ಸುಖ, ರಾಜ್ಯದ ಸಂಪತ್ತು,ಹೊರಗಿನವರ ಆಕ್ರಮಣ ಎಲ್ಲವನ್ನೂ ಒಟ್ಟೊಟ್ಟಿಗೆ ನಿಭಾಯಿಸುತ್ತ ದೀರ್ಘ ಕಾಲ ರಾಜ್ಯವಾಳಿದ ಒಬ್ಬ ಹೆಣ್ಣಿನ ಘನತೆಯನ್ನು ಯಾವ ಪೂರ್ವಾಗ್ರಹವೂ ಇಲ್ಲದೆ ಪ್ರಾಮಾಣಿಕವಾಗಿ ಕಟ್ಟಿಕೊಟ್ಟಿರುವ ಡಾ.ಗಜಾನನ ಶರ್ಮ ಅವರ ಈ ಕಾದಂಬರಿ ಕನ್ನಡ ಸಾಹಿತ್ಯಲೋಕಕ್ಕೆ ಒಂದು ಅತ್ಯಮೂಲ್ಯ ಕೊಡುಗೆ ಎಂಬುದರಲ್ಲಿ ಸಂದೇಹವಿಲ್ಲ.
* ಕಲಾ ಭಾಗ್ವತ್, ಮುಂಬೈ
********
ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: ರೂ.೩೯೫/-
3 thoughts on ““ಚೆನ್ನಭೈರಾದೇವಿ” – ಕೃತಿ ವಿಶ್ಲೇಷಣೆ (ಕರಿಮೆಣಸಿನ ಅವ್ವರಸಿಯ ಅಕಳಂಕ ಚರಿತೆ)”
Book review is written nicely. It is very interesting to know such a great queen ruled for so long. Very good analysis of the book.
Very introspective introduction by Kala Bhagawat for this very valuable book. Proud to know about this queen with unmatched virtues.
Very good article. Congrats