ಆ ವಿಶಾಲವಾದ ಹಾಲ್ನಲ್ಲಿ ಬೆತ್ತದ ಖುರ್ಚಿಯಲ್ಲಿ ಒರಗಿ ಕುಳಿತ ಪರಶಿವಯ್ಯ, ಶಿವರಾಮಯ್ಯ ಹರಟೆ ಹೊಡೆಯುತ್ತ ಕುಳಿತಿದ್ದರು. ಅವರಿಬ್ಬರೂ ಒಂದೇ ಸಮಯದಲ್ಲಿ ಪೋಸ್ಟಾಫೀಸಿನಲ್ಲಿ ಉದ್ಯೋಗಕ್ಕೆ ಸೇರಿ ಇಪ್ಪತ್ತೆಂಟು ವರ್ಷ ಉದ್ಯೋಗ ಮಾಡಿದ ಸಹೋದ್ಯೋಗಿ ಸ್ನೇಹಿತರು. ‘ಶಿವರಾಮು ದಿನಕ್ಕೊಂದು ಹೊಸ ಜವಾಬ್ದಾರಿ ಹಾಕತಾರಲ್ಲಪ್ಪಾ ಈ ಆಫೀಸಿನ್ಯಾಗ.. ನಿನಗೇನಪ್ಪಾ ಮಗನ ಓದಿಸಿ ನೌಕರಿ ಹಿಡಿಸಿದ್ದಾತು. ಮಗಳ ಮದುವೆ ಮಾಡಿದ್ದಾತು.ಕೆಲಸ ಹೆಚ್ಚೆನಿಸಿದರೆ ವಾಲಂಟರಿ ತೆಗೆದುಕೊಂಡರೂ ಜೀವನಾ ಆಗತದ’ ಎಂದು ಪರಶಿವಯ್ಯ ಹೇಳಿದ.
‘ನಿನ್ನ ಗಂಡು ಮಕ್ಕಳಿಗೂ ಒಂದೊಂದು ನೆಲೆ ಆತಲ್ಲೋ. ಇನ್ನು ಇರೋದು ನಳಿನಿ ಒಬ್ಬಳು ಅಷ್ಟೇ’.. ಎಂದು ಪರಶಿವಯ್ಯ ಹೇಳುವ ಸಮಯಕ್ಕೆ ಸರಿಯಾಗಿ ಮನೆ ಮುಂದೆ ರಿಕ್ಷಾ ನಿಂತ ಶಬ್ದವಾಯಿತು.. ಸೌಮ್ಯ ಮೊದಲು ಕೆಳಗಿಳಿದವಳೆ ‘ಹಗೂರ ಇಳಿ’ ಎನ್ನುತ್ತ ನಳಿನಿಯನ್ನಿಳಿಸಿ ಕೈ ಹಿಡಿದು ಮನೆಯ ಮೆಟ್ಟಿಲವರೆಗೆ ತಂದು ಬಿಟ್ಟಳು.
‘ಇಲ್ಲಿ ತನಾ ಬಂದಿದಿ ಬಾರೆ ಒಳಗೆ’ ಎಂದು ನಳಿನಿ ಗೆಳತಿಯನ್ನು ಕರೆದಳು.‘ಅಯ್ಯಯ್ಯ ಆಟೋ ನಿಲ್ಲಿಸಿ ಬಂದೀನಿ.ಈಗ ಬರಂಗಿಲ್ಲವಾ. ಬ್ಯಾಸ್ರ ಮಾಡಿಕೋಬ್ಯಾಡ, ಇನ್ನೊಂದು ದಿನ ಬರ್ತೀನಿ.ನಾಳೆ ಕಾಲೇಜನ್ಯಾಗ ಭೆಟ್ಟಿ ಆಗೋಣ’ ಎನ್ನುತ್ತ ಸೌಮ್ಯ ಓಡಿದಳು.ನಳಿನಿ ಮೆಲ್ಲಗೆ ಮೆಟ್ಟಿಲೇರಿ ಮನೆಯೊಳಗೆ ಬಂದಳು.ಶಿವರಾಮಯ್ಯ ‘ನಳಿನಿ ಚೆನ್ನಾಗಿದ್ದೀಯಾ?’ ಮಮತೆಯಿಂದ ಎಂದು ಕೇಳಿದರು.
ನಳಿನಿ ತಟ್ಟನೆ ದ್ವನಿ ಬಂದತ್ತ ಹೊರಳಿ ನಗುತ್ತ ‘ಓ ಶಿವರಾಮ ಅಂಕಲ್ ನಾ ಚೆನ್ನಾಗಿದ್ದೀನ್ರೀ. ಯಾವಾಗ ಬಂದ್ರಿ? ನೀವ ಹೇಂಗದೀರಿ? ನಮ್ಮಮ್ಮ ನಿಮಗೆ ಚಹಾ ಕೊಟ್ರೋ ಇಲ್ಲೋ ಅದನ್ನ ಮೊದಲು ಹೇಳಿ ಅಂಕಲ್ಲ.ಇಲ್ಲಾ ಅಂದ್ರೆ ನಾನೇ ನಿಮಗಿಷ್ಟವಾದ ಸ್ಟ್ರಾಂಗ್ ಟೀ ತಂದು ಕೊಡತೀನಿ’ ಎಂದು ಅರಳು ಹುರಿದಂತೆ ಮಾತನಾಡಿದಳು.
“ಪರಶ್ಯಾ ಗಡಿಬಿಡಿ ಮಾಡಿ ಉಪ್ಪಿಟ್ಟು ಚಹಾ ಎಲ್ಲಾ ಕೊಟ್ಟು ನನ್ನ ಬೇಗ ಬೇಗ ಮನೆಯಿಂದ ಕಳಿಸಿ ಬಿಡಬೇಕು ಅಂತ ನೋಡಾ ಹತ್ತಾನ. ಅನ್ಯಾಯವಾಗಿ ನಿನ್ನ ಕೈರುಚಿ ಟೀ ಕುಡ್ಯೋದು ತಪ್ಪಿಸಿದ ನೋಡು. ನಾ ಆಗ್ಲೇ ಹೋಗಬೇಕು ಅಂತ ಅಂದಕೊಂಡಾಂವ ನಿನ್ನನ್ನ ಒಮ್ಮೆ ನೋಡಿ ಹೋದ್ರಾತು ಅಂತ ಸ್ವಲ್ಪ ಕೂತೆವ್ವಾ.ಇದೊಂದು ವರ್ಷ ಮುಗಿಸಿದೆ ಅಂದ್ರೆ ಎಮ್.ಎ ಪಧವೀಧರೆ ನಮ್ಮ ನಳಿನಿ. ಮೊನ್ನೆ ವಿದ್ಯಾವರ್ಧಕ ಸಂಘದಾಗ ನಿನ್ನ ಸಂಗೀತ ಕಾರ್ಯಕ್ರಮಾ ಭಾಳ ಚೊಲೋ ಆತು..” ಎಂದು ಮೆಚ್ಚಿಗೆಯಿಂದ ನುಡಿಯುತ್ತಾ ಆಪ್ಯಾಯತೆಯಲ್ಲಿ ಅವಳ ತಲೆ ಸವರಿದರು ಶಿವರಾಮಯ್ಯ.
‘ಎಲ್ಲಾ ನಿಮ್ಮಂಥವರ ಆಶೀರ್ವಾದದ ಫಲ ಅಂಕಲ್. ಇನ್ನೊಂದು ದಿನಾ ಮತ್ತೆ ಬನ್ನಿ ಅಂಕಲ್. ನಾನೇ ಚಹಾ ಮಾಡಿ ಕೊಡತೀನಿ ನಿಮಗೆ’ ಎಂದು ಅವರ ಕಾಲ್ಮುಟ್ಟಿ ನಮಿಸಿದಳು. ‘ಖಂಡಿತಾ ಬರತೀನಿ’ ಎನ್ನುತ್ತಾ ಶಿವರಾಮು ಅವರ ಮನೆಗೆ ಹೊರಟರು.ನಳನಿ ಮನೆಯೊಳಗೆ ನಡೆದಳು. ಪರಶ್ಯಾ ನಳಿನಿಗೆ ಗಂಡು ಹುಡಕಾಕ ಹತ್ತೀಯೇನೋ?’ಶಿವರಾಮ ಅವರ ಪ್ರಶ್ನೆ ಹಾಲ್ನ ಬಾಗಿಲಷ್ಟೇ ದಾಟಿದ ನಳಿನಿಯ ಕಿವಿಗೂ ಬಿತ್ತು.ಅಪ್ಪ ಏನು ಉತ್ತರಿಸುತ್ತಾನೆ ಕೇಳುವ ಕುತೂಹಲದಿಂದ ಅಲ್ಲೇ ಬಾಗಿಲ ಮರೆಗೆ ಸರಿದಳು.
‘ಮುಕ್ಕಾಲು ಆಯುಷ್ಯ ಕಳೀತು ಅವಳಿಗೆ.ಕುರುಡು ಹುಡುಗಿಗೆ ಎಂತಾ ಮದುವೆಯೋ?’ಅಪ್ಪನ ನಿರಾಸಕ್ತಿಯ ದ್ವನಿ ಕೇಳಿದಾಗ ನಳಿನಿ ತರತರನೇ ನಡುಗಿದಳು.ಇಪ್ಪತ್ತೆರಡು ವರ್ಷಕ್ಕೆ ತನಗೆ ಮುಕ್ಕಾಲು ಆಯುಷ್ಯ ಎನ್ನುವ ಅಪ್ಪನ ಮಾತು ಸಹಿಸಲಾರದ ಸತ್ಯವೆನಿಸಿತು.ಧಡ ಧಡನೇ ತನ್ನ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡು ಮಂಚದ ಮೇಲೆ ಬಿದ್ದು ಬಿಕ್ಕಿ ಬಿಕ್ಕಿ ಅತ್ತಳು. ಅದೆಷ್ಟೋ ಸಮಯದ ನಂತರ ಎದ್ದು ತನ್ನ ಮೈ ಕೈ ಎಲ್ಲ ಸವರಿಕೊಂಡಳು..‘ನಳಿನಿ ತುಂಬಾ ಸ್ಮಾರ್ಟ್ ಅದಾಳ’ ಎನ್ನುವ ಸೌಮ್ಯಾಳ ಮಾತು ನೆನಪಿಗೆ ಬಂತು.ತನಗೆ ಕಣ್ಣು ಕೊಡದೇ ಅನ್ಯಾಯ ಮಾಡಿದ ದೇವರ ಮೇಲೆ ಎಲ್ಲಿಲ್ಲದ ಸಿಟ್ಟು ಬಂತು. ತನ್ನ ಚೆಂದವನ್ನು ಕನ್ನಡಿಯೆದುರು ತಾನೆಂದೂ ನೋಡಿಕೊಳ್ಳಲಾರೆ.. ಎಂಬ ಅಸಹಾಯಕತೆಯೂ ಕಾಡಿತು.
ಸೌಮ್ಯ ನನ್ನ ಬಗ್ಗೆ ಅತ್ಯಂತ ಪ್ರೀತಿ ಇಟ್ಟುಕೊಂಡ ಹುಡುಗಿ ಅವಳು ಸುಳ್ಳು ಹೇಳಿರಲಾರಳು..‘ನಾ ಚೊಲೋ ಇರಬೇಕು.’‘ಒಮ್ಮೆ ಕಲಿಸಿದರೆ ಸಾಕು.ಕೇಳಿದ್ದೆಲ್ಲವನ್ನೂ ನೆನಪಿಟ್ಟುಕೊಂಡು ಪರೀಕ್ಷೆ ಬರೀತಾಳೆ ನಳಿನಿ ಎಂದು ಪ್ರಾಧ್ಯಾಪಕರೆಲ್ಲ ಹೊಗಳುವುದಿಲ್ಲವೇ?’ ನಾ ತೀರಾ ಜಾಣೆ ಅಲ್ಲದಿದ್ದರೂ ದಡ್ಡಳಂತೂ ಅಲ್ಲ..ಆದರೆ ಹೆತ್ತ ನನ್ನಪ್ಪನಿಗೆ ನಾನು ನಿರುಪಯುಕ್ತಳು ಎನ್ನಿಸುವುದೇಕೆ?..
ಅಪ್ರಯತ್ನಪೂರ್ವಕವಾಗಿ ತನ್ನ ಕಣ್ಣುಗಳ ಮೇಲೆ ಕೈ ಇಟ್ಟ ನಳಿನಿ..‘ಎಲ್ಲಾ ಇವುಗಳಿಂದಲೇ.ಎಂದು ಗೊಣಗುಟ್ಟಿದಳು. ನನಗೆ ಕಣ್ಣಿಲ್ಲ, ನನ್ನಪ್ಪನಿಗೆ ಮನಸ್ಸಿಲ್ಲ..ಅವನೂ ವಿಕಲಾಂಗನೇ.ಜೀವನದಾಗ ಏನಾರ ಸಾಧಿಸಲೇಬೇಕು’ ಎಂದು ಆ ಕ್ಷಣದಲ್ಲಿ ತೀರ್ಮಾನಿಸಿದಳು.
************
‘ನಳಿನಿ ಮುಂದಿನ ವಾರ ಸಂಗೀತ ಕಾರ್ಯಕ್ರಮ ಕೊಡಾಕ ಆಕ್ಕೆತೇನು? ಮನ್ಸೂರ ಟ್ರಸ್ಟನವರು ಕೇಳಿಕೊಂಡು ಬಂದಿದ್ದರು..ಎರಡು ತಾಸು ಹಾಡ ಬೇಕಂತವ್ವಾ. ಸಾಥಿದಾರರನ್ನು ನೀನೇ ಹೊಂದಿಸಿಕೊಬೇಕಂತ. ಹದಿನೈದು ಸಾವಿರ ರೂಪಾಯಿ ಕೊಡುತ್ತಾರಂತ. ನೀನು ಕಾಲೇಜಿಂದ ಬಂದ ಮೇಲೆ ನಿನ್ನನ್ನು ಕೇಳಿ ಹೇಳ್ತೀನಿ ಅಂದ ಕಳಿಸಿದೆ’ ಎಂದಳು ಸಾವಿತ್ರಿ.
‘ಅಮ್ಮ ನನ್ನಂಥಹ ಉದಯೋನ್ಮುಖ ಕಲಾವಿದೆಗೆ ಅಷ್ಟು ದುಡ್ಡು ಕೊಟ್ಟು ಕಾರ್ಯಕ್ರಮ ಮಾಡಿಸೋದೇ ದೊಡ್ಡ ವಿಷಯಾ..ನನ್ನನ್ನ ಕೇಳೋದೇನಿತ್ತು? ಒಪ್ಪಿಕೊಂಡು ಬಿಡಬೇಕಿತ್ತು..ಇರಲಿ. ಅವರಿಗೆ ಫೋನ್ ಮಾಡಿಬಿಡಮ್ಮಾ. ಯಾವತ್ತು ಕಾರ್ಯಕ್ರಮ ಅನ್ನೋದನ್ನ ಹೇಳಿದರೆ ನನ್ನ ಜೊತೆ ಎಮ್.ಎ. ಮಾಡುವ ವಿವೇಕನಿಗೆ ತಬಲಾ ಸಾಥಿಗೆ ಹೇಳ್ತೀನಿ. ನಮ್ಮ ಗುರುಗಳೇ ಹೆಂಗೂ ಹಾರ್ಮೋನಿಯಮ್ ಸಾಥಿಗೆ ಬರ್ತಾರ.ಅವರಿಗೂ ಹೇಳ್ತೀನಿ. ಎಂದವಳೇ ನಳಿನಿ ಫೋನ್ ಮಾಡಿ ಅವರ ಒಪ್ಪಿಗೆ ಪಡೆದಳು.
‘ಅಮ್ಮಾ ನಾನು ರೂಮಿನಲ್ಲಿ ಪ್ರಾಕ್ಟೀಸ್ ಮಾಡತೀನಿ. ಮುಗಿಸೋವರೆಗೆ ನೀವ್ಯಾರು ಡಿಸ್ಟರ್ಬ ಮಾಡಬೇಡಿ’ ಎಂದು ರೂಮು ಸೇರಿದಳು ನಳಿನಿ.. ರಾಗಯಮನ್ನಲ್ಲಿ ಮೇರೋ ಮನ ಬಾಂದ್ ಹಾಡಲಾರಂಭಿಸಿದಳು.. ಹಾಡುತ್ತಾ ಹಾಡುತ್ತಾ ಮನಸ್ಸು ತುಂಬಾ ಪ್ರಸನ್ನವಾಯ್ತು. ಸುಲಲಿತವಾಗಿ ಹೊಸ ಹೊಸ ತಾನುಗಳನ್ನು ಪ್ರಾಕ್ಟೀಸ್ ಮಾಡಿದಳು. ಈ ಸಲ ಕ್ಲಾಸಿಕಲ್ಹಾಡುವುದರೊಂದಿಗೆ ದಾಸರ ಪದ ಹಾಡಿ, ಭಾವಗೀತೆಯನ್ನು ಹಾಡಬೇಕು ಎಂದುಕೊಂಡಳು ಮನಸ್ಸಿನಲ್ಲಿ ಹೊಳೆದವನೆ ಕನಸಿನಲ್ಲಿ ಬೆಳೆದವನೆ ..ಬೇಂದ್ರೆಯವರ ಹಾಡನ್ನೂ ಹಾಡಿ ಮುಗಿಸುವುದರೊಳಗೆ ಅವಳಪ್ಪ ರೂಮಿನ ಕದ ತಟ್ಟಿದ.
‘ಇಂತಹ ಹಾಡೆಲ್ಲ ಹಾಡೋದು ಬ್ಯಾಡ. ದಾಸರ ಪದ, ವಚನಾ ಬೇಕಾದರೆ ಹಾಡು’ ಎಂದ ಗಡುಸಾಗಿ. ‘ನನಗೂ ನನ್ನಿಷ್ಟ ಅಂತ ಇರಂಗಿಲ್ಲೇನಪ್ಪಾ?’ಮೊದಲ ಬಾರಿಗೆ ಅಪ್ಪನ ಮಾತಿಗೆ ಪ್ರತಿರೋಧ ತೋರಿದಳು ನಳಿನಿ.
‘ನಿನ್ನ ಅಣ್ಣ ನಮ್ಮನ್ನ ನಡುನೀರಿನಲ್ಲಿ ಬಿಟ್ಟು ಸನ್ಯಾಸ ಸ್ವೀಕಾರ ಮಾಡ್ತೀನಿ ಅಂತಹೋದ.ಇನ್ನೊಬ್ಬಾಂವ ಹೆಂಡ್ತಿ ಮಾತು ಕೇಳಿ ಮನಿ ಬಿಟ್ಟು ಹೋದ.ನೀನೂ ಮಾತಿಗೆ ಪ್ರತಿ ಮಾತ ಹೇಳಾಕ್ಹತ್ತಿ. ಯಾವ ಭಾಗ್ಯಕ್ಕೆ ಮಕ್ಕಳು ಬೇಕೋ ಗಿರಿಧಾರಿ?’ಎಂದು ಒದರಾಡಲಾರಂಭಿಸಿದರು ಪರಶುರಾಮಯ್ಯನವರು.
ಸಾವಿತ್ರಿ ಅವರಿಬ್ಬರ ಮಧ್ಯ ಪ್ರವೇಶ ಮಾಡಿ ಒಂದು ಗ್ಲಾಸ್ ಜ್ಯೂಸ್ನ್ನು ಗಂಡನ ಕೈಗೆ ಕೊಟ್ಟು ‘ಸ್ವಲ್ಪ ಸಮಾಧಾನ ಮಾಡಿಕೋರಿ. ಒಂದ ಮಾತ ಯಾರಾದ್ರೂ ನೀವ ಹೇಳಿದ್ದಕ್ಕೆ ಅಲ್ಲಾ ಅಂದ್ರ ಸಾಕು, ಹೆಡೆ ತುಳಿದ ಹಾವಿನ ಹಾಂಗ ಬುಸ್ ಅನ್ನತೀರಿ’ ನಳಿನಿ ಪೆಚ್ಚಾಗಿ ಸುಮ್ಮನೇ ಹಾಸಿಗೆಯಲ್ಲಿ ಬಿದ್ದುಕೊಂಡಳು.ದೃಷ್ಟಿ ಇರದಿದ್ದರೂ ಕಣ್ಣಿನಲ್ಲಿ ನೀರಿತ್ತು. ಅದು ಧಾರಳವಾಗಿ ಹರಿದು ದಿಂಬನ್ನು ತೋಯಿಸಲಾರಂಭಿಸಿತು. ಇಂತಹ ಮಾತುಗಳನ್ನು ಕೇಳುತ್ತಲೇ ಬೆಳೆದ ತನ್ನ ಬದುಕಿನ ಗತ ಬದುಕಿನತ್ತ ಅವಳ ಮನ ಹೊರಳಿತ್ತು..
ಮಗಳಿಗೆ ಕಣ್ಣಿದ್ದರೂ ದೃಷ್ಟಿ ಇಲ್ಲ ಎಂಬುದು ಅವಳ ಹೆತ್ತವರಿಗೆ ತಿಳಿದಿದ್ದೆ ಅವಳು ಹುಟ್ಟಿ ಆರು ತಿಂಗಳ ನಂತರ..ಆಮೇಲೆ ಇದ್ದ ಬಿದ್ದ ದೇವರಿಗೆ ಹರಕೆಹೊತ್ತರು. ಕಂಡ ಕಂಡ ನೇತ್ರಾಲಯಕ್ಕೆ ಅವಳನ್ನು ಕರೆದುಕೊಂಡು ಹೋಗುತ್ತಿದ್ದರು.. ಇವಳ ಕಣ್ಣುಗಳಿಗಿರುವ ನರಗಳೇ ಶಕ್ತಿಹೀನವಾಗಿರುವುದರಿಂದ ಸರಿಪಡಿಸಲಾರದ ದೃಷ್ಟಿ ದೋಷ ಎಂದೇ ಎಲ್ಲ ಡಾಕ್ಟರುಗಳು ಹೇಳುತ್ತಿದ್ದರು. ಅವಳಿಗೆ ಐದು ವರ್ಷವಾಗುವವರೆಗೂ ಇದೇ ಬಗೆಯ ಅಲೆದಾಟ ನಡೆಸಿದ ನಂತರ ಭೇಟಿಯಾದ ಡಾಕ್ಟರ್ ಮಧುಸೂದನ ಪರಶುರಾಮಯ್ಯ ಹಾಗೂ ಸಾವಿತ್ರಿಯನ್ನು ತನ್ನೆದುರಿನಲ್ಲಿ ಕೂಡಿಸಿಕೊಂಡು ಮಾತನಾಡಿದ್ದಿನ್ನೂ ಅವಳಿಗೆ ನೆನಪಿತ್ತು.. “ನಿಮ್ಮ ಮಗಳು ಚುರುಕಾಗಿದ್ದಾಳೆ ಅವಳಿಗೆ ದೃಷ್ಟಿ ಬರುತ್ತದೆ ಎಂಬ ವ್ಯರ್ಥ ಆಸೆ ಇಟ್ಟುಕೊಂಡು ಆಸ್ಪತ್ರೆಗಳಿಗೆ ಅಲೆಯುವುದರ ಬದಲು ಶಾಲೆಗೆ ಸೇರಿಸಿ ಯೋಗ್ಯ ಶಿಕ್ಷಣ ಕೊಡಿಸಿ. ಹಾಡ್ತೇನೆ ಎಂದಳು ಅವಳು. ಅವಳಿಗೆ ಸಂಗೀತ ಕಲಿಸಿ.. ಪಂಚೇದ್ರೀಯಗಳಲ್ಲಿ ಒಂದು ಊನವಿದ್ದರೆ ಉಳಿದವುಗಳನ್ನು ಅವರು ಮಾಮೂಲಾಗಿರುವವರಿಗಿಂತ ಹೆಚ್ಚು ಶಕ್ತಿಯುತವಾಗಿ ಬಳಸಿಕೊಳ್ಳುತ್ತಾರೆ.. ಅಂಧರಲ್ಲಿಯೂ ಎಷ್ಟೋ ಸಾಧಕರಿದ್ದಾರೆ. ಪಾಲಕರು ಮೊದಲು ವಸ್ತು ಸ್ಥಿತಿಯನ್ನು ಸಮಸ್ಯೆಯನ್ನು ಒಪ್ಪಿಕೊಳ್ಳಬೇಕು”….
ಅಷ್ಟರ ನಂತರ ಸಾವಿತ್ರಮ್ಮ ಅವಳನ್ನು ಶಾಲೆಗೆ ಸೇರಿಸಿದ್ದರು.ಮಾಮೂಲು ಶಾಲೆಯಲ್ಲಿಯೂ ಟೀಚರುಗಳು ‘ಇವಳನ್ನು ನಮ್ಮ ಶಾಲೆಗೆ ಸೇರಿಸಬೇಡಿ.. ಅಂಧರ ಶಾಲೆಗೆ ಕಳಿಸಿ’ ಎಂದು ಕ್ಯಾತೆ ತೆಗೆದಿದ್ದರು.ಆದರೆ ತಮ್ಮ ಮನೆಯಿಂದ ಇಪ್ಪತ್ತು ಕಿಲೋಮೀಟರ್ ದೂರವಿದ್ದ ಅಂಧರ ಶಾಲೆಗೆ ಕಳಿಸುವುದು ಸಮಸ್ಯೆ ಆಗುತ್ತದೆ ಎಂದು ಹೆತ್ತವರು ಮಾತಾಡಿಕೊಳ್ಳುವುದು ನಳಿನಿಯ ಕಿವಿಗೆ ಬಿತ್ತು. ಅಮ್ಮನೊಂದಿಗೆ ಹಠ ಮಾಡಿಕೊಂಡು ಶಾಲೆಯ ಮುಖ್ಯೋಪಾಧ್ಯಾಯಿನಿಯ ಬಳಿ ಹೋದ ನಳಿನಿ ‘ನನಗ ಕೇಳಿದ್ದೆಲ್ಲ ನೆನಪಿರತದರ್ರೀ.ನಾನು ಪಾಸಾಗತೆನ್ರೀ. ಉಳಿದವರ ಜೋಡಿನನಗೂ ಕಲಿಸಿ’ ಎಂದು ಕೇಳಿದಳು. ಆಗ ಮನ ಕರಗಿದ ಶಿಕ್ಷಕಿ ಅವಳ ಮಾತಿಗೊಪ್ಪಿದರು. ಇವಳು ಹೇಳಿದ್ದನ್ನೆಲ್ಲ ಪರೀಕ್ಷೆಯಲ್ಲಿ ಬರೆದುಕೊಟ್ಟು ಪರೀಕ್ಷೆಯಲ್ಲಿ ಪಾಸಾಗಲೂ ನೆರವಾದವರು ಸಹಪಾಠಿಗಳೇ! ಶಾಲೆಯಲ್ಲಿ ಗೆಳತಿಯರಿಂದ ಸಿಕ್ಕ ಪ್ರೀತಿ ಮನೆಯಲ್ಲಿ ಅಣ್ಣಂದಿರಿಂದ ದೊರೆಯುತ್ತಿರಲಿಲ್ಲ. ನಳಿನಿ ಹಾಡಿದರೂ ಅವರಿಗೆ ಕಿರಿಕಿರಿಯಾಗುತ್ತಿತ್ತು. ಏನಾದರೂ ಓದಿ ಹೇಳ್ರೋ ಎಂದರೂ ‘ನೀನೊಬ್ಬಳು ಕುಡ್ಡಿ ನಮ್ಮ ಮನ್ಯಾಗ ಹುಟ್ಟಬಾರದಿತ್ತು. ಅಪ್ಪ ಅಮ್ಮನಿಗೆ ಕಷ್ಟ’ ಎಂದೆಲ್ಲ ಹೇಳಿಬಿಡುತ್ತಿದ್ದರು.
‘ನಾನು ಸಾಧ್ಯವಾದಷ್ಟು ಸ್ವಾವಲಂಬಿಯಾಗಬೇಕು.ಯಾರಿಗೂ ಹೊರೆಯಾಗಬಾರದು’ ಎಂದು ತೀರ್ಮಾನಿಸಿದ
ನಳಿನಿ ನನಗೊಂದು ವಾಕಿಂಗ್ ಸ್ಟಿಕ್ ತಂದುಕೊಡಿ ಎಂದು ಹಠ ಹಿಡಿದು ತರಿಸಿಕೊಂಡಳು. ಅದನ್ನು ಹಿಡಿದುಕೊಂಡು ಮನೆಯ ರಚನೆ ಹೇಗಿದೆ, ಸ್ವತಂತ್ರವಾಗಿ ತಾನು ಹೇಗೆ ಅದರಲ್ಲಿ ಸಂಚರಿಸುವುದು ಎಂಬುದನ್ನು ಅಭ್ಯಾಸ ಮಾಡಿಕೊಂಡಳು. ಸ್ನಾನ ಮಾಡುವುದು ಬಟ್ಟೆ ತೊಳೆಯುವುದು,ಎಲ್ಲವನ್ನೂ ರೂಢಿ ಮಾಡಿಕೊಂಡಳು.. ‘ನಿನ್ನ ಅಣ್ಣಂದಿರ ಬಟ್ಟೆಯನ್ನೆ ತೊಳೆಯುತ್ತೇನೆ.. ನೀನೂ ಬಟ್ಟೆಗಳನ್ನು ಇಟ್ಟುಬಿಡು’ಎಂದು ಅವಳ ತಾಯಿ ಹೇಳಿದರೆ‘ಇಲ್ಲಮ್ಮ ಎಷ್ಟು ದಿನಾ ಅಂತ ಎಲ್ಲರ ಕೆಲಸ ನೀನೊಬ್ಬಳೇ ಮಾಡ್ತೀಯಾ.. ನನಗೂ ಸ್ವತಂತ್ರವಾಗಿ ಬದುಕಲು ಬಿಡು ಸಾಧ್ಯವಾದ ಎಲ್ಲ ಕೆಲಸಗಳನ್ನು ಕಲಿಸು’ ಎನ್ನುತ್ತಲೇ ಹೂವಿನ ಮಾಲೆ ಕಟ್ಟುವುದರಿಂದ ಸೂಜಿ ಪೋಣಿಸುವವರೆಗಿನ ಕೆಲಸಗಳನ್ನೂ ಹಠ ಹಿಡಿದು ಕಲಿತಳು..
ಆ ಪ್ರಯತ್ನದಲ್ಲಿ ಗೋಡೆಗೆ ಬಡಿಸಿಕೊಂಡ್ಡಿದ್ದೆಷ್ಟು ಸಲವೋ, ಬಿದ್ದು ನೋವನ್ನು ಸಹಿಸಿಕೊಂಡಿದ್ದೆಷ್ಟು ಸಲವೋ, ಮತ್ತೆ ಗಟ್ಟಿಯಾದೆ ಅಲ್ಲವೇ.. ಎಲ್ಲ ಅವಮಾನ ಕಷ್ಟಗಳನ್ನು ಸಹಿಸಲು ಸಂಗೀತವೇ ನೆರವಾಗುತ್ತಿತ್ತು.ದೈವದತ್ತವಾದ ಕಂಠಕ್ಕೆ ಗುರುಗಳಾದ ಶ್ಯಾಮಲಾ ವಝೆಯವರು ಸಂಸ್ಕಾರ ನೀಡಿದ್ದರು. ‘ಒಮ್ಮೆ ಕಲಿಸಿದ್ರೆ ಸಾಕು ನಮ್ಮ ನಳಿನಿಗೆ ಹಸಿ ಗೋಡೆಗೆ ಹರಳು ಕೂಡಿಸಿದ ಹಂಗ ಭಾಳ ಲಗೂ ತಿಳಕೋಳಾಳ’ ಎಂದು ಮೆಚ್ಚಿಕೊಂಡು ಕಲಿಸುತ್ತಿದ್ದರು. .. ಅವರ ಸಮರ್ಥ ಮಾರ್ಗದರ್ಶನದಲ್ಲಿಯೇ ಸಂಗೀತವನ್ನು ಚೆನ್ನಾಗಿ ಕಲಿತು ವಿದ್ವತ್ತು ಮುಗಿಸಲು ಸಾಧ್ಯವಾಗಿದ್ದು. ಬಿ ಮ್ಯೂಸಿಕ್ಕಿನಲ್ಲಿ ಪದವಿ ಪಡೆದಿದ್ದು..
‘ಊಟಕ್ಕೆ ಬಾರೇ’ ಎಂಬ ಅಮ್ಮನ ಕೂಗಿನಿಂದ ವಾಸ್ತವಕ್ಕೆ ಮರಳಿದ ನಳಿನಿ ಅಡುಗೆ ಮನೆಗೆ ತೆರಳಿದಳು.
*************
ಅಂದು ನಳಿನಿಯ ಅಣ್ಣ ನಂದಕುಮಾರ ಅವನ ಹೆಂಡತಿಯೊಂದಿಗೆ ಮನೆಗೆ ಬಂದಿದ್ದ.ಎಲ್ಲರೂ ಮಾತನಾಡುತ್ತಾ ಕುಳಿತಾಗ ‘ಏನಾದ್ರೂ ಹೊಸಾ ಸುದ್ದಿ ಇದೆಯಾ ಶಮಾ? ಮದುವೆ ಆಗಿ ಎರಡು ವರ್ಷಾ ಆತು” ಎಂದು ಮೊಮ್ಮಗಿವಿನ ಬರವಿನ ಆಸೆಯಲ್ಲಿ ಸಾವಿತ್ರಮ್ಮ ಸೊಸೆಯ ಬಳಿ ಕೇಳಿದರು.
‘ಈ ಪ್ರಶ್ನೆ ನನಗ ಕೇಳಬ್ಯಾಡ್ರೀ ಅತ್ಯಾರ ನಿಮ್ಮ ಮಗಗ ಕೇಳ್ರೀ’ ಎಂದು ಬಿಗುವಿನಿಂದ ಶಮಾ ಉತ್ತರಿಸಿದಳು. ‘ಅಮ್ಮಾ ನಮಗೆ ಮಕ್ಕಳೇ ಬ್ಯಾಡ ಅನಕೊಂಡಿವಿ. ಹುಟ್ಟಿನಿಂದ ಬರುವ ಅಂಧತ್ವ ನಳಿನಿಗೆ ಬಂದ ಹಾಂಗ ನಮಗೆ ಹುಟ್ಟೋ ಕೂಸಿಗೂ ಬಂದ್ರೆ ಭಾಳ ಕಷ್ಟಪಡಬೇಕಾಗ್ತತಿ. ಆಗ ಜೀವನದ ಗುರಿ ಮಗು ಬೆಳೆಸೊದೇ ಆಕ್ಕೇತಿ. ಅದಕ್ಕಾಗಿ ನಮಗೆ ಮಕ್ಕಳೇ ಬ್ಯಾಡಾ ಅಂತ ಶಮಾ ಕೂಡ ಹೇಳೀನಿ. ಆಕಿ ಮಗು ಬೇಕೇ ಬೇಕು ಅಂತ ಹಟಾ ಹಿಡಿದ್ರೆ ಅನಾಥಾಶ್ರಮದಿಂದ ಒಂದು ಆರೋಗ್ಯವಂತ ಮಗುನಾ ದತ್ತು ತಗೋತೀವಿ’ ಎಂದ ನಂದಕುಮಾರ.
‘ಹಾಂಗ ಹೆಂಗ ಆಕ್ಕೇತಿ’..ಎಂದೇನೋ ಹೇಳಲು ಹೊರಟ ಅಮ್ಮ ಮಾತನ್ನು ಕತ್ತರಿಸಿ ನನಗೆ ನಳಿನಿಯನ್ನಾ ಬೆಳೆಸಾಕ ನೀವು ತುಗೊಳ್ಳೋ ಟೆನ್ಶನ್ ನೋಡಿ ನೋಡಿ ಸಾಕಾಗೇತಿ. ಅದಕ್ಕ ಈ ಮನೆ ಬಿಟ್ಟು ಹೋಗಿವಿ. ಮತ್ತ ಅದೇ ರೀತಿ ಮಕ್ಕಳು ನಮ್ಮನ್ಯಾಗ ಹುಟ್ಟೋದಿಲ್ಲ ಅನ್ನೋದೆನು ಗ್ಯಾರೆಂಟಿ? ಈ ವಿಷಯದಾಗ ನೀವೇನೂ ಒತ್ತಾಯ ಮಾಡೋದು ಬ್ಯಾಡ’ ಎನ್ನುತ್ತ ಊಟ ಮುಗಿಸಿ ಎದ್ದು ಹೋದ ನಂದಕುಮಾರನನ್ನು ಶಮಾ ಮೌನವಾಗಿ ಹಿಂಬಾಲಿಸಿದ್ದಳು. ಇದನ್ನೆಲ್ಲ ಕೇಳಿಸಿಕೊಂಡ ನಳಿನಿಗೆ ‘ಸೀತಾಮಾತೆಯಂತೆಯೇ ತನ್ನನ್ನೂ ಭೂಮಿಯೇ ಬಾಯ್ಬಿಟ್ಟು ತೆಗೆದುಕೊಂಡು ಹೋಗಬಾರದೇ’ ಎನ್ನಿಸಿಬಿಟ್ಟಿತ್ತು..
‘ಈ ಮನ್ಯಾಗ ನಾ ಯಾರಿಗೂ ಬ್ಯಾಡದಾಕಿ’ ಎಂದು ನೋಯುತ್ತ ರೂಮು ಸೇರಿದಳು.ಅಷ್ಟರಲ್ಲಿ ಫೋನು ರಿಂಗಣಿಸಿತು.
‘ನಳಿನಿ ಎಮ್.ಎ. ರಿಸಲ್ಟ ಬಂದಿದೆ.ನಿಮ್ಮದು ಎಪ್ಪತ್ತು ಪರ್ಸೆಂಟ್ ಅಂತೆ ನನ್ನದು ಅರವತ್ತೆಂಟು ಪರ್ಸೆಂಟ್. ನಮಗೆ ಆಸಕ್ತಿ ಇದ್ದರೆ ಅಲ್ಲಿಯೇ ಪಿ.ಎಚ್.ಡಿ. ಮಾಡಬಹುದು ಅಂತ ಪ್ರೋಫೆಸರ್ ಪ್ರೇಮಕುಮಾರ್ ಹೇಳಿದ್ದಾರೆ.
“ಹೌದಾ? ವಿವೇಕ್ ಎಷ್ಟು ಒಳ್ಳೆಯ ಸುದ್ದಿ ಹೇಳಿದ್ರಿ. ಸಮಸ್ಯೆಯ ನದಿಯಲ್ಲಿ ಮುಳುಗುವವಳಿಗೆ ತೆಪ್ಪ ಸಿಕ್ಕ ಹಾಂಗ ಅನಿಸೇತಿ.ನೀವು ಮುಂದೇನು ಮಾಡತೀರಿ?ನಿಮ್ಮೂರಿಗೆ ಹೋಗುತ್ತೀರಾ?”
‘ಇಲ್ಲ ನಳಿನಿಯವರೇ ನನಗೆ ‘ಶ್ರೀಮಾತಾ ಗುರುಕುಲ’ ದಲ್ಲಿ ನೌಕರಿ ಸಿಕ್ಕಿದೆ. ನಾನು ಹುಬ್ಬಳ್ಳಿಗೆ ಹೋಗುತ್ತೇನೆ. ನಿಮಗೇ ಗೊತ್ತಲ್ಲ ನನ್ನ ಪರಿಸ್ಥಿತಿ.ಊರಿನಲ್ಲಿ ನಮಗೆ ಸ್ವಂತ ಮನೆ ಅಂತೇನಿಲ್ಲ. ಇರುವುದು ಪುಟ್ಟ ಗುಡಿಸಲು ಅಷ್ಟೇ.ಅದರಲ್ಲಿ ಅಣ್ಣ ಅತ್ತಿಗೆ ಅವನ ಎರಡು ಮಕ್ಕಳಿದ್ದಾರೆ. ಅಪ್ಪ ಅಮ್ಮನೂ ಇಲ್ಲ. ಇನ್ನೂ ನಮ್ಮೂರಲ್ಲಿ ಮೇಲ್ಜಾತಿಯವರು ನಮ್ಮನ್ನು ತುಂಬಾ ಕೇವಲವಾಗಿ ನೋಡುತ್ತಾರೆ.. ಹೊಲೆಯರು ಎಂದು ಹಂಗಿಸುತ್ತಾರೆ.. ಅಲ್ಲಿ ಹೋದರೆ ಕಾರ್ಯಕ್ರಮಗಳು ಹಾಳಾಗಲಿ ಪ್ರಾಕ್ಟೀಸ್ ಮಾಡಲೂ ಸಾಧ್ಯವಿಲ್ಲ. ಇನ್ನು ನಿನ್ನ ಅನ್ನ ನೀನೇ ಹುಡುಕಿಕೊಳ್ಳಬೇಕಪ್ಪಾ ಅಂತ ಅಣ್ಣ ಹೇಳಿಯೇಬಿಟ್ಟಿದ್ದಾನೆ’ ‘ಹಾಗಾದರೆ ನನಗೆ ನೀವಿನ್ನು ಸಿಗುವುದಿಲ್ಲ.ನಿಮ್ಮ ತಬಲಾ ಸಾಥ್ ಇಲ್ಲಾ ಅಂದ್ರೆ ಕಾರ್ಯಕ್ರಮಗಳಲ್ಲಿ ನನಗೆ ಇನ್ನು ಕಷ್ಟವೇ’ ಒಂದು ಬಗೆಯ ನಿರಾಶೆಯಿಂದ ನಳಿನಿ ಹೇಳಿದಳು.
‘ನಳಿನಿ ನನಗೆ ಉದ್ಯೋಗ ಸಿಕ್ಕಲ್ಲಿಯೇ ಇನ್ನೊಂದು ಪೋಸ್ಟ ಖಾಲಿ ಇದೆ.ಅವರಿಗೆ ಹಾಡುಗಾರರೂ ಬೇಕಾಗಿದ್ದಾರೆ. ಅಲ್ಲಿ ಆಯ್ಕೆ ಆಗಿರುವವರು ಹಂಪಿ ಯುನಿರ್ವಸಿಟಿಯಲ್ಲಿಯೂ ಕೆಲಸ ಸಿಕ್ಕಿತು ಅಂತ ಇದನ್ನು ಬಿಟ್ಟು ಹೋಗಿದ್ದಾರೆ.. ನೀವೂ ಬರ್ತೀರಿ ಅಂದರೆ ಅಲ್ಲಿಯ ಪ್ರಿನ್ಸಿಪಾಲರಿಗೆ ಕೇಳ್ತೇನೆ..ಊಟ ವಸತಿ ಎಲ್ಲಕ್ಕೂ ಕ್ಯಾಂಪಸ್ಸಿನಲ್ಲಿಯೇ ಅನುಕೂಲವಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಸಾಕಷ್ಟು ಕಾರ್ಯಕ್ರಮಗಳೂ ನಿಮಗೆ ಸಿಗಬಹುದು..ನನ್ನ ಸಹಕಾರ ನಿಮಗಿದ್ದೇ ಇರುತ್ತದೆ’ ಎಂದ ವಿವೇಕ.
ಇಂತಹದೊಂದು ಅವಕಾಶ ಬಿಡಬಾರದು ಎನಿಸಿತು ನಳಿನಿಗೆ. ‘ವಿವೇಕ ಪ್ರಿನ್ಸಿಪಾಲರಿಗೆ ಕೇಳಿ ಪ್ಲೀಸ್.. ನನಗೂ ಉದ್ಯೋಗ ಸಿಕ್ಕರೆ ಸಾಕು. ಹೆತ್ತವರಿಗೆ ಹೊರೆಯಾಗದೇ ಬದುಕಬಹುದು. ಚಾಮರಾಜನಗರದ ನೀವೇ ಅಲ್ಲಿದ್ದು ಕೆಲಸ ಮಾಡೋದಾದ್ರೆ ಧಾರವಾಡದ ನನಗೂ ಕೆಲಸಾ ಮಾಡಲಿಕ್ಕಾದೀತು’ ಎಂದಳು.
***************
ಒಟ್ಟಾಗಿ ಕೆಲಸಕ್ಕೆ ಸೇರಿದ ನಳಿನಿ ವಿವೇಕ ಇಡೀ ಜೀವನವನ್ನು ಒಟ್ಟಿಗೇ ಕಳೆಯಬೇಕೆಂದು ತೀರ್ಮಾನಿಸಿ ಮದುವೆಯಾದರು.
ವಿವೇಕನ ಹೆಗಲಿಗೊರಗಿ ಕುಳಿತ ನಳಿನಿ ತನ್ನ ನಾಲ್ಕು ತಿಂಗಳ ಬಸಿರು ಹೊಟ್ಟೆಯ ಮೇಲೆ ಕೈ ಇಟ್ಟುಕೊಂಡು ದೇಸ್ ರಾಗವನ್ನು ಗುನುಗುತ್ತಿದ್ದ ನಳಿನಿ ಒಮ್ಮಲೇ ಹಾಡುವುದನ್ನು ನಿಲ್ಲಿಸಿ “ವಿವೇಕ ಯಾಕೆ ನಮ್ಮ ಮಗುವನ್ನು ಯಾರೂ ಸಂತಸದಿಂದ ಸ್ವಾಗತಿಸುತ್ತಿಲ್ಲ? ನಿನ್ನ ಹಾಗೆ ಕುರುಡು ಮಗು ಹುಟ್ಟಿದರೆ ಕಷ್ಟ ತೆಗೆಸಿಬಿಡು ಅಂತ ಅಮ್ಮನೂ ನಿನ್ನೆ ಫೋನಿನಲ್ಲಿ ಕೇಳಿದಳು ಆಮ್ಯಾಲೆ ತಟ್ಟ ಅಂತ ಫೋನಿಟ್ಟು ಬಿಟ್ಟಳು. ನನ್ನ ಅಣ್ಣಂದಿರಿಗೂ ಮಕ್ಕಳಿಲ್ಲ. ಹಾಂಗ ನೋಡಿದ್ರೆ ಇದು ಅವಳ ಮೊದಲ ಮೊಮ್ಮಗು. ಎಷ್ಟು ಖುಷಿ ಆಗಬೇಕಿತ್ತು ಅಕಿಗ..ನೀನು ನನ್ನನ್ನ ಮದುವೆ ಆಗ್ತೀನಿ ಅಂದಾಗಲೂ ಕೆಳ ಜಾತಿ ಅಂತ ಬೊಬ್ಬೆ ಹಾಕಿದರು. ನಿನ್ನನ್ನ ಅಳಿಯಾ ಅಂತ ಒಂದ ದಿನಾ ಕರೆಯಲಿಲ್ಲ, ಉಪಚರಿಸಲಿಲ್ಲ. ಮಾನವೀಯತೆಯೇ ಇಲ್ಲದವರು ಯಾವ ಜಾತಿ ಆದರೇನು? ಛೇ”
ಹೆಂಡತಿಯ ಕೆನ್ನೆಗೊಂದು ಹೂ ಮುತ್ತನ್ನಿತ್ತು “ಹೋಗ್ಲಿ ಬಿಡೇ ಚಿನ್ನಾ. ಮಗೂನ ಬೆಳೆಸಬೇಕಾದವರು ನಾವಲ್ಲವಾ. ಅದು ಹೇಗಾದರೂ ಹುಟ್ಟಲಿ ಅದು ನಮ್ಮ ಪ್ರೇಮದ ಫಲ.ನಾವು ಸಂತೋಷವಾಗಿ ಸ್ವೀಕರಿಸೋಣ.ಕೆಲಸ ನಿಂಗಮ್ಮ ಅಂತೂ ಬಾಣಂತನ ಮಾಡಲಿಕ್ಕೆ ಒಪ್ಪಿಕೊಂಡಿದ್ದಾಳೆ.ಒಂದು ವರ್ಷ ಅವಳನ್ನ ನಾವೇ ಕೆಲಸಕ್ಕಿಟ್ಟುಕೊಂಡುಬಿಡೋಣ.ಅವಳಿಗೂ ಕುಡುಕ ಮಗ ಸೊಸೆಯಿಂದ ಬಿಡುಗಡೆ ಸಿಕ್ಕ ಹಾಗಾಗ್ತದೆ. ನಾನೂ ಒಂದು ತಿಂಗಳು ರಜಾ ಹಾಕಿ ನಿನ್ನ ಬಾಣಂತನಾ ಮಾಡ್ತೀನಿ ಆಯ್ತಾ”
‘ನಮ್ಮ ವಿದ್ಯಾರ್ಥಿಗಳು ಮಾತ್ರ ಭಾಳ ಖುಷಿ ಪಟ್ಟರು ವಿವೇಕ. ಮೇಡಮ್ ಈಗ ನಿಮಗೆ ಹೊಟ್ಟೆ ಸ್ವಲ್ಪ ಸ್ವಲ್ಪ ಕಾಣ್ತಾ ಇದೆ.ನಮ್ಮ ಗುರುಕುಲದಲ್ಲಿ ಪುಟ್ಟ ಪಾಪೂ ಬರತದ ಅಂತ ನಮಗೆ ಭಾಳ ಖುಷಿ.ನಾವೆಲ್ಲಾರೂ ಬಂದು ಅದನ್ನ ಆಟ ಆಡಿಸ್ತೇವಿ ಅಂದ್ರು… ಬಿಜಾಪುರದ ಸಹನಾ ಅಂತೂ ತಮ್ಮೂರಿಂದ ಬರುವಾಗ ಒಂದ್ರಾಶಿ ಹುಗ್ಗಿ ಹೋಳಿಗೆ ಖಡಕ್ ರೊಟ್ಟಿ ಝುಣಕದ ಒಡಿ ಎಲ್ಲಾ ನಮಗಂತ ಅವರ ಅಮ್ಮ ಕಡೆ ಹೇಳಿ ಮಾಡಿಸಿಕೊಂಡು ಬಂದಾಳ. ಇವತ್ತು ಅಡುಗೆ ಮಾಡೋ ಕೆಲ್ಸಾನೇ ಇಲ್ಲ’
ನಮ್ಮ ಪ್ರಿನ್ಸಿಪಾಲ್ ಮೀನಾಕ್ಷಿ ಅವರೂ ತುಂಬಾ ಒಳ್ಳೆಯವ್ರು. ನೀವಿಬ್ಬರೂ ತುಂಬಾ ಪ್ರತಿಭಾವಂತರು.ಗುರುಕುಲಕ್ಕೆ ಆಸ್ತಿ ಇದ್ದ ಹಾಂಗ. ನಾನೇ ನಿಂತು ಸೀಮಂತ ಮಾಡ್ತೀನಿ ಅಂದ್ರು… ಇಷ್ಟು ಪ್ರೀತಿಯನ್ನು ನನ್ನ ಅತ್ತಿಗೆಯೂ ತೋರಿಸಲಿಲ್ಲ ನೋಡು.ಬ್ಯಾಡ ಬ್ಯಾಡಾ ಅಂದ್ರು Pಣ್ಣಿಲ್ಲದವಳನ್ನ ಮದುವೆ ಮಾಡಿಕೊಂಡೆ. ಇನ್ನು ಅವಳಂಥಾದ್ದೇ ಮಗನೋ ಮಗಳೋ ಹುಟ್ಟಿದರೆ ಇಬ್ರನ್ನ ನೋಡಿಕೊಳ್ಳಬೇಕಾಗ್ತದೆ ಎಂದಳು! ನಮ್ಮ ಕಷ್ಟಕ್ಕೂ ಇಲ್ಲ ಸುಖಕ್ಕೂ ಇಲ್ಲದವರನ್ನೆಲ್ಲ ನಮ್ಮವರು ಅಂದುಕೊಳ್ಳುವುದೇ ಬೇಡ ಬಿಡು.. ನಾವಿಬ್ಬರು, ನಮಗಿಷ್ಟವಾದ ಸಂಗೀತ, ಈ ಗುರುಕುಲ.. ನಮ್ಮನ್ನ ಗೌರವಿಸೋ ಶಿಷ್ಯವೃಂದ, ಇನ್ನು ಐದು ತಿಂಗಳಿಗೆ ಬರಲಿರುವ ನಮ್ಮ ಮಗು ಇಷ್ಟೇ ಸಾಕು ನಮಗೆ…
ವಿವೇಕ ‘ನಮಗೆ ಹೆಣ್ಮಗು ಆಗಲಿ ಅಥವಾ ಗಂಡು ಮಗವಾದರೂ ಸರಿ. ಆದರೆ ನಿನ್ನ ಹಾಗೇ ಒಳ್ಳೆಯ ಮನಸ್ಸಿನ ಮಗು ಹುಟ್ಟಲಿ’ ಎಂದು ಗಂಡನ ಕೈಗಳನ್ನು ತನ್ನ ಕೆನ್ನೆಗೊತ್ತಿಕೊಂಡಳು.
********
ಲೇಬರ್ ವಾರ್ಡನ ಹೊರಗಿದ್ದ ವಿವೇಕ ಚಟಪಡಿಸುತ್ತಿದ್ದ ನಳಿನಿಯ ನೋವಿನ ಚೀರಾಟವನ್ನು ಕಳೆದ ನಾಲ್ಕು ತಾಸುಗಳಿಂದ ಕೇಳಿ ಕೇಳಿ ಗಾಭರಿಯಾಗಿದ್ದ ವಿವೇಕನಿಗೆ ನಿಂಗಮ್ಮ ಆಗಾಗ ಸಮಾಧಾನ ಹೇಳುತ್ತಿದ್ದಳು.
ಸರ ಎಷ್ಟ ಹೆದ್ರಾಕ ಹತ್ತೀರಿ.ಒಂದ ಜೀವಾ ಎರಡು ಜೀವಾ ಆಗೂ ಮುಂದ ಎಲ್ಲಾ ಹೆಣ್ಣಮಕ್ಕಳಿಗಿ ಹೀಂಗ ತ್ರಾಸ ಆಕ್ಕೇತರಿ. ಸಧ್ಯೆ ಸಿಹಿ ಸುದ್ದಿ ಹೇಳ್ತಾರ ತಡ್ರಿ..ಮೀನಾಕ್ಷಿ ಮೇಡಂ ನೀವರ ಒಂದೀಟ ಧೈರ್ಯ ಹೇಳ್ರೀ.. ಮುಂಜಾನಿಂದ ಒಂದ ಹನಿ ನೀರೂ ಬಾಯಿಗೆ ಹಾಕಲಾರದೇ ಹಿಂಗ ಕುಂತಾರ..
ಮೀನಾಕ್ಷಿ ನಗುತ್ತಾ ನಮ್ಮ ವಿವೇಕ ಹೆಂಡ್ತಿ ಅಂದ್ರ ಭಾಳ ಜೀವ ಮಾಡ್ತಾನ ಅದಕ್ಕ ಹೀಂಗ ಕುಂತಾನ ಇರ್ಲಿ ಬಿಡು ಸಿಹಿ ತಿಂದೇ ಚಾ ಕುಡಿತಾನ ಅಲ್ಲೇನಪ್ಪಾ.. ಅಲ್ಲ ಕೇಳೋ ಅಳೋ ಸದ್ದು ಕೇಳಲಿಕ್ಕೆ ಹತ್ತಿತು. ನರ್ಸ ಲೇಬರ್ ವಾರ್ಡ ಬಾಗಿಲು ಕೊಂಚ ತೆಗೆದು ಗಂಡ ಮಗು ಹುಟ್ಟೇತಿ.ಆರೋಗ್ಯವಾಗೈತಿ .ದೃಷ್ಟಿನೂ ಐತಂತ ಡಾಕ್ಟ್ರು ಹೇಳತಾ ಇದ್ದಾರ ಇನ್ನರ್ಧ ತಾಸಿನಾಗ ನಿಮಗ ಕೂಸಿನ್ನ ತೋರಸ್ತೀವಿ. ನಳಿನಿನೂ ಆರಾಮದಾರ.. ಎಂದು ತಟ್ಟನೇ ಬಾಗಿಲು ಹಾಕಿಕೊಂಡಳು…
ವಿವೇಕನ ಕಣ್ಣಲ್ಲಿ ಆನಂದಾಶ್ರು ತುಂಬಿತ್ತು..ಮಗು ತುಂಬಾ ಮುದ್ದಾಗಿತ್ತು. ಎಳೆ ಬೊಮ್ಮಟೆಯಂತಹ ಮಗುವನ್ನೆತ್ತಿಕೊಂಡ ನಳಿನಿಗಂತೂ ಹಿಗ್ಗೋ ಹಿಗ್ಗು. ಮತ್ತೆ ಮತ್ತೆ ಮಗುವಿನ ಮೈ ಸವರಿ ನನಗೂ ಕಣ್ಣು ಬೇಕಾಗಿತ್ತು ಅಂತ ಈಗ ಭಾಳಾ ಅಂದ್ರೆ ಭಾಳ ಅನ್ನಿಸಾಕ ಹತ್ತೇತಿ..ಮಗು ಹೇಗಿದೆ ಹೇಳು ..
ವಿವೇಕ ನಳಿನಿಯ ಅಂಗೈ ಹಿಡಿದುಮಗುವಿನ ಪ್ರತೀ ಅವಯವದ ಮೇಲೆಯೂ ಬೆರಳುಗಳನ್ನಿರಿಸುತ್ತ.. ವರ್ಣಿಸಿದ ಇದು ಮಗೂನ ಪುಟ್ಟ ತಲೆ..ರೇಶಿಮೆ ದಾರಸಂತಹ ದೂದಲಿದೆ..ಒಳಗೆ ನಿನ್ನ ಹಾಗೇ ಜಾಣತನ ತುಂಬಿದ ಮೆದುಳಿರಬೇಕು. ಹುಬ್ಬಿನ್ನೂ ಉಬ್ಬಿದ ಸರಿಯಾಗಿ ಕಾಣತಾ ಇಲ್ಲ,ಕೆನ್ನೆಗಳಿಗೂ ಗಲ್ಲಕ್ಕು ತುಟಿಗಿಂತ ಸ್ವಲ್ಪ ಕಡಿಮೆ ಬಣ್ಣ, ಸಣ್ಣ ಕಣ್ಣು ಪಿಳುಕಿಸ್ತಾ ಅಮ್ಮನ್ನೇ ನೋಡ್ತಾ ಇದ್ದಾನ ಕಳ್ಳಾ, ತುಟಿ ಅಂತೂ ಗುಲಾಬಿ ಎಸಳಿನಷ್ಟು ಮೃದು ಅದ, ಚೋಟು ಚೋಟು ಕಾಲು, ಕುತ್ತಿಗೆಯೇ ಕಾಣಿಸ್ತಾ ಇದೆ, ಎದೆಯ ಮೇಲೆ ತಲೆ ಅಂಟಿಕೊಂಡ ಹಾಗಿದೆ. ಎದೆ ಹೊಟ್ಟೆ ಎಲ್ಲಾ ಮೆತ್ತಗೆ, ನಿನ್ನ ಹೊಟ್ಟೆಗೆ ಪುಟ್ಬಾಲ್ ಹಾಗೇ ಒದೆಯುತ್ತಿದ್ದವು ಇವೇ ಕಾಲುಗಳು, ಈ ಮುಷ್ಟಿಗಳಲ್ಲಿ ಅಮ್ಮನಿಗೆ ಗುದ್ದುತ್ತಾನಂತೆ ಇಂವಾ ಎನ್ನುತ್ತ ಮಗುವಿನ ಮುಷ್ಟಿಯಲ್ಲಿ, ಹೆಂಡತಿಯ ಹಸ್ತಗಳಿಗೆ ಗುದ್ದಿಸಿದ..ಅವರಿಬ್ಬರ ಸಂಭ್ರಮವನ್ನು ಆಸ್ಪತ್ರೆಯವರೆಲ್ಲ ಬೆಕ್ಕಸಬೆರಗಾಗಿ ನೋಡುತ್ತಿದ್ದರು..
ನಿಂಗಮ್ಮ ತನಗೇ ಒಂದು ಮೊಮ್ಮಗು ಹುಟ್ಟಿದೆ ಎನ್ನುವಂತೆ ಆರೈಕೆ ಮಾಡಿದಳು..ಸರ ಯಾರ ಬರ್ತಾರೋ ಬಿಡತಾರೋ. ಮೇಡಮ್ಮಾರ ಅಪ್ಪಾ ಅಮ್ಮಾಗ, ನಿಮ್ಮ ಅಣ್ಣಾ ಅತ್ತಿಗೆಗೆ ಪೋನ್ ಮಾಡಿ ‘ನಮಗ ಗಂಡ ಪಾಪೂ ಹುಟ್ಟೇತಿ, ಕಣ್ಣೂ ಅದಾವು ಅಂತ ಹೇಳ್ರೀ’ ಎಂದಳು..ಫೋನ್ ಮಾಡಬೇಕೇನೆ ನಳಿನಿ?’ ಕೇಳಿದ ವಿವೇಕ.
“ಅವರ ಕಲ್ಲ ಮನಸ್ಸು ಕರಗತದ ಅಂತ ನನಗನಿಸಾಕ ಹತ್ತಿಲ್ಲ.. ಆದ್ರೂ ಪೋನ್ ಮಾಡಿ ಹೇಳ್ರೀ.. ಕುರುಡು ತಾಯಿಗೆ ಕಣ್ಣಿರೋ ಮಗು ಹುಟ್ಟಬಹುದು ಅನ್ನೋ ಸತ್ಯ ಅವ್ರಿಗೆ ಗೊತ್ತಾಗಬೇಕು’ .. ಎಂದು ನಿರಾಸಕ್ತಿಯಿಂದ ನಳಿನಿ ಹೇಳಿದಳು. .ವಿವೇಕ ಎಲ್ಲರಿಗೂ ಫೋನ್ ಮಾಡಿದ..
ಮರುದಿನವೇ ಆಸ್ಪತ್ರೆಯ ರೂಮಿಗೆ ಪರಶುರಾಮಯ್ಯನವರು ಸಾವಿತ್ರಿಯ ಸಮೇತ ಹಾಜರಿ ಹಾಕಿದರು! ಸಾವಿತ್ರಿಯ ಕೈಯಲ್ಲಿ ಅಳವಿ, ಕಾಳುಮೆಣಸು, ಹತ್ತಿಬಟ್ಟೆಯ ಮಗುವಿನ ಅಂಗಿ, ಟೊಪ್ಪಿಗಳು ತುಂಬಿದ ಬ್ಯಾಗಿತ್ತು. ಪರಶುರಾಮಯ್ಯನವರ ಕೈಯಲ್ಲಿ ಹಣ್ಣು ಬಿಸ್ಕೀಟಿರುವ ಚೀಲ. ಪರಶುರಾಮಯ್ಯನವರು ಅಳಿಯನ ಮುಖವನ್ನು ನೇರವಾಗಿ ನೋಡಲೇ ಇಲ್ಲ..ಸೀದಾ ತೊಟ್ಟಿಲ ಬಳಿ ಹೋಗಿ ಮಗುವನ್ನೇ ಪ್ರೀತಿಯಿಂದ ನೋಡಿದರು.‘ಹೆಂಗದಿ ನಳಿನಿ? ನೀ ಭಾಳ ಛಲವಾದಿ ಇದ್ದಿ, ಮದವಿನೂ ಮಾಡಿಕೊಂಡು ಮಗೂನೂ ಹಡದಿ.ಮೊಮ್ಮಗು ಭಾಳ ಚೆಂದದ.ನೀನೂ ಮಗುವಾದಾಗ ಹಿಂಗÀ ಕಾಣ್ತಿದ್ದಿ. ಇನ್ನೂ ಒಂದ ಸಂತೋಷದ ಸುದ್ದಿ ಸಿಕ್ಕೇದ ಬೆಳಿಗ್ಗೆ.ಈ ವರ್ಷ ರಾಜ್ಯ ಪ್ರಶಸ್ತಿಗೂ ನಿನ್ನನ್ನ ಆಯ್ಕೆ ಮಾಡ್ಯಾರಂತ’ ಎಂದು ಒಂದೇ ಸವನೆ ಮಾತನಾಡುತ್ತ ಮಗಳ ನೆತ್ತಿ ಸವರಿದರು… ಮಗುವಿನ ಅಳು ಮಂಜುಳಗಾನದಂತೆ ಕೊಠಡಿಯನ್ನು ತುಂಬಿತ್ತು.
*ಮಾಲತಿ ಹೆಗಡೆ
6 thoughts on “ಚೌಕಟ್ಟಿನಾಚೆಯ ಚಿತ್ತಾರ”
ತುಂಬಾ ಚೆನ್ನಾಗಿದೆ
ತುಂಬಾ ಚೆನ್ನಾಗಿದೆ ಮೂಡಿ ಬಂದಿದೆ.ನಳಿನಿಯ ಸಾಧನೆ ಎಲ್ಲರಿಗೂ ಆದರ್ಶ. 🙏🏻🙏🏻💐
ಬಹಳ ಚೆಂದದ ಕತೆ . ನಿಜಜೀವನದಲ್ಲಿ ಕಂಡ ಘಟನೆಗಳನ್ನು, ವಾಸ್ತವಕ್ಕೆ ಹತ್ತಿರದ ಕತೆಗಳನ್ನಾಗಿ ಜನರಿಗೆ ತಲುಪಿಸುವ ಮಾಲತಿ ಹೆಗಡೆಯವರು ಪ್ರತಿಭಾವಂತ ಬರಹಗಾರ್ತಿ.
ವಾಸ್ತವಾಂಶವನ್ನು ಅತ್ಯಂತ ಮನಮುಟ್ಟುವಂತೆ ಬರೆದಿದ್ದೀರಿ ಮಾಲತಿ,ಅಭಿನಂದನೆಗಳು.
ವಸ್ತುನಿಷ್ಠೆ ಕಥೆ. ಓದಿಸಿಕೊಂಡು ಹೋಗುತ್ತೆ. ಇಷ್ಟವಾಯಿತು.
ತುಂಬಾ ಚೆನ್ನಾದ ಕಥೆ. ಮಗು ಹೇಗಿರುತ್ತದೋ ಎಂಬ ದುಗುಡದಿಂದಲೇ ಕೊನೆ ವರೆವಿಗೂ ಓದಿದೆ. ಸಮಾಜದ ಹೀಯಾಳಿಕೆಗೆ ಇನ್ನೊಂದು ಪುಟ್ಟ ಜೀವವೂ ಬಲಿಯಾಗದಿರಲಿ ಎಂಬ ಹಾರೈಕೆಯಿತ್ತು ಮನದಲ್ಲಿ. ಎಲ್ಲ ಸುಖಾಂತವಾಯ್ತು. ಮನಸ್ಸು ನಿರಾಳವಾಯ್ತು.