ಸರೋಜ ಆ ಹೊತ್ತು ತುಂಬಾ ದುಗುಡಗೊಂಡಿದ್ದಳು ಹಾಸ್ಟೆಲ್‍ನಿಂದ ಬರುವಾಗಲೇ ಬಸ್‍ಸ್ಟಾಪಿನಲ್ಲಿ ಸಣ್ಣ ಕಲ್ಲೋಂದನ್ನು ಎಡವಿ ಬಿದ್ದಿದ್ದಳು. ಸಣ್ಣ ತರಚಿದ ಗಾಯಗಳು ಅವಳನ್ನು ಘಾಸಿಗೊಳಿಸಿದ್ದವು. ಅಲ್ಲಿಂದ ಯಥಾಪ್ರಕಾರ ನೇರ ತರಗತಿಗೆ ಬಂದು ಕುಳಿತಿದ್ದವಳು ಮೌನದಲ್ಲೇ ಮಾತನಾಡುತ್ತಿದ್ದವಳು ಮೊದಲ ಬೆಲ್‍ಗೆ ಕಾದುಕುಳಿತಿದ್ದವಳು ಕನ್ನಡ ಪಿರಿಯಡ್, ಅವಳಲ್ಲಿ ಕಾತರ. ತನ್ನ ದುಗುಡವನ್ನೆಲ್ಲ ಸೇರಿಸಿ ಪ್ರಶ್ನೆಗಳನ್ನು ಕೇಳಬೇಕು. ಮೇಷ್ಟ್ರು ತರಗತಿಗೆ ಬಂದೊಡನೆ “ಸಾರ್ ಆಫ್ರಿಕಾ ಕಗ್ಗತ್ತಲೆಯ ಖಂಡ ಅಂತಾರಲ್ಲ ಅಲ್ಲಿ ಸೂರ್ಯ ಹುಟ್ಟೋದೆ ಇಲ್ವಾ ಸಾರ್”. ದಿಢೀರ್ ಪ್ರಶ್ನೆಗೆ ‘ಯಾಕೆ’? ಎಂದಷ್ಟೇ ಕೇಳಿದಾಗ, ನಾನು ಅಲ್ಲೇ ಹುಟ್ಟಿದ್ರೆ ಎಷ್ಟು ಚೆನ್ನಾಗಿರ್ತಿತ್ತು. ಆ ಕತ್ತಲೆಯ ಜಗತ್ತಿನಲ್ಲಿ ನಿರುಮ್ಮಳವಾಗಿ ಇದ್ದು ಬಿಡಬಹುದಿತ್ತು”. ಸರೋಜ ಪ್ರತಿದಿನವು ಇಂತಹ ಯಾವುದಾದರೊಂದು ಪ್ರಶ್ನೆಯನ್ನು ಕೇಳದೆ ತರಗತಿಯಲ್ಲಿ ಸುಮ್ಮನೆ ಕುಳಿತು ಪಾಠ ಕೇಳುವ ಹುಡುಗಿಯಲ್ಲ. ಅವಳ ಇಂತಹ ಪ್ರಶ್ನೆಗಳಿಗೆ ಮೇಷ್ಟ್ರಿಂದ ಬರುವ ಉತ್ತರಕ್ಕೆ ಕಾಯುತ್ತ ಮೈಯೆಲ್ಲ ಕಿವಿಯಾಗಿ ಕುಳಿತಿರುತ್ತಿದ್ದಳು. “ನೋಡ್ರಿ ಸರೋಜ ಆಫ್ರಿಕಾವನ್ನು ಕಗ್ಗತ್ತಲೆಯ ಖಂಡ ಅಂತ ಕರೆದದ್ದು ಅಲ್ಲಿ ಬರೀ ಕತ್ತಲು ಅನ್ನೋ ಕಾರಣಕ್ಕಲ್ಲ” ಮತ್ತೆ ಆ ಖಂಡವನ್ನು ಯೂರೋಪಿಯನ್ನರು ನಾನಾ ದೇಶಗಳಿಗೆ ಲಗ್ಗೆ ಇಡೋವಾಗ ಈ ದೇಶವು ಅವರಿಗೆ ಗೋಚರವಾಯ್ತು. ಅಂತಾದ್ದೊಂದು ಕಪ್ಪು ಜನಾಂಗ ಇರೋ ದೇಶ ಇದೆ ಅಂತಾ ಗೋತ್ತಾಗಿದ್ದೇ ಆ ಹೊತ್ತು. ಅದರಿಂದ ಅವರು ಅದನ್ನು ಕಗ್ಗತ್ತಲ ಖಂಡ ಅಂತ ಕರೆದರು. ಮೇಷ್ಟ್ರ ಉತ್ತರಕ್ಕೆ ಹತಾಶೆಗೊಂಡು “ಹೌದಾ ಸಾರ್ ನಾನೆಲ್ಲೋ ಆ ಇಡೀ ಖಂಡವೇ ಕತ್ತಲೆಯಿಂದ ಇರುತ್ತದೆ ಅಂದುಕೊಂಡಿದ್ದೆ. ಸರ್ ನಿಜವಾಗ್ಲೂ ಪ್ರಪಂಚದ ಯಾವ ದೇಶದ ಮೂಲೇಲೂ ಮೂರ್ಹೊತ್ತು ಕತ್ತಲೇನೇ ತುಂಬಿರೋದಿಲ್ವಾ ಸಾರ್”? ಈ ಬಾರಿ ತನ್ನಷ್ಟಕ್ಕೆ ತಾನೇ ಉತ್ಸಾಹ ತುಂಬಿಕೊಂಡು ಕೇಳಿದ ಸರೋಜ ಮೇಷ್ಟ್ರ ಉತ್ತರಕ್ಕಾಗಿ ಕತ್ತನ್ನು ನಿಕ್ಕಳಿಸಿದಳು. ಇನ್ನಿತರೆ ವಿದ್ಯಾರ್ಥಿಗಳು ಮೇಷ್ಟ್ರ ಮಾತಿಗೆ ಕಾದುಕುಳಿತಿದ್ದರು. “ನೋಡಿ ಈ ಭೂಮಿ ಒಂದು ರೀತಿ ಗುಂಡಕ್ಕಿದೆ. ಇದು ಸೂರ್ಯನ ಸುತ್ತುಹಾಕಬೇಕಾದರೆ ತಾನೂ ಸುತ್ತುತ್ತಾ ಸೂರ್ಯನನ್ನು ಸುತ್ತುತ್ತಾ ಚಲಿಸುತ್ತಿರುತ್ತದೆ. ಇಂತಹ ಚಲನೆಯಲ್ಲಿ ಸೂರ್ಯನ ಬೆಳಕು ಸಂಪೂರ್ಣ ಬೀಳದೆ ಇರೋ ಪ್ರದೇಶವೂ ಇದೆ. ಕತ್ತಲೇಯೇ ಇಲ್ಲದ ದೇಶವೂ ಇದೆ. ಅಂದ್ರೆ ಉತ್ತರ ಧ್ರುವಕ್ಕೆ ಬಂದರೆ ಪೂರ್ತಿ ಕತ್ತಲು. ದಿನಕ್ಕೊಮ್ಮೆ ಕೆಲವು ಕ್ಷಣ ಸೂರ್ಯನ ಬೆಳಕು ‘ಹೀಗೆ ಅಂದು ಹಾಗೆ’ ಬ್ಯಾಟರಿ ಬಿಟ್ಟಂತೆ ಇರುತ್ತದೆ. ಉಳಿದಂತೆ ಬರೀ ಕತ್ತಲು. ಹಾಗೇ ಸೂರ್ಯನ ಕಡೆಯೇ ಮುಖ ಮಾಡಿರೋ ದೇಶವೂ ಇದೆ ಅಲ್ಲಿ. ಯಾವಾಗಲೂ ಬೆಳಕೇ ಇರುತ್ತದೆ. ಜಗತ್ತಿನ ವೈವಿದ್ಯ ಇಷ್ಟೇ ಅಲ್ಲ ಇನ್ನು ಏನೇನೋ ಇದೆ. ಒಂದೋಂದಾಗಿ ತಿಳಕೋಬೇಕಷ್ಟೇ”. ಮೇಷ್ಟ್ರು ತರಗತಿ ಮುಗಿದ ಕಾರಣ ಹೊರಡುವುದರಲ್ಲಿದ್ದವರಿಗೆ ಸರೋಜಳ ಉತ್ತರ ತಡೆದು ನಿಲ್ಲಿಸಿತು. “ಸಾರ್ ನಾನು ಉತ್ತರ ಧ್ರುವದ ಕಡೆ ಹೋಗಿ ಅಲ್ಲೇ ಇದ್ದು ಬಿಡಬೇಕು ಅನ್ಸುತ್ತೆ ಸಾರ್. ನೀವು ಸೂರ್ಯ ಮುಳುಗದ ಆ ನಾಡಿಗೆ ಹೋಗಿ ದಿನವಿಡೀ ಪಾಠ ಮಾಡ್ತಾ ಇದ್ದು ಬಿಡಿ ಸಾರ್”. ಅವಳ ತೀರ್ಮಾನಕ್ಕೆ ನಕ್ಕ ಮೇಷ್ಟ್ರು ಸ್ವಲ್ಪ ಯೋಚಿಸುತ್ತಾ “ಜಗದ ನಿಯಮ ಕತ್ತಲೆ-ಬೆಳಕು ಎರಡೂ ಬೇಕು. ಬೆಳಕೇ ಇಲ್ಲದ ಕತ್ತಲು, ಕತ್ತಲೆಯೇ ಇಲ್ಲದ ಬೆಳಕು ಇಂತ ಯಾವ ಪ್ರದೇಶವೂ ಅಷ್ಟು ಖುಷಿ ಕೊಡುವುದಿಲ್ಲ. ಅದಿರಲಿ ನೀವ್ಯಾಕೆ ಆ ಕತ್ತಲೆ ರಾಜ್ಯಕ್ಕೆ ಹೋಗಬೇಕು. ಬೆಂಗಳೂರು ಚೆನ್ನಾಗಿಲ್ವ”. ಮೇಷ್ಟ್ರ ಪ್ರಶ್ನೆಗೆ “ಏನೋ ಸಾರ್ ನೀವೂ ಈ ನಮ್ಮ ಕ್ಲಾಸ್‍ಮೇಟ್ಸ್ ಎಲ್ಲರಿಗೂ ಕತ್ತಲೆ-ಬೆಳಕು ಎರಡರ ಅನುಭವವಿದೆ. ಆದರೆ ನಾನು ಹಾಗೆ ನನ್ನಂತಹ ಬ್ಲೈಂಡ್‍ಗಳಿಗೆ ಹುಟ್ಟಿದಾಗಿನಿಂದ ಸಾಯೋವರೆಗೂ ಬರೀ ಕತ್ತಲೇ. ಮಸಿಯಂತ ಕತ್ತಲೆ ಬಿಟ್ಟರೆ ನಮಗೇನು ಕಾಣ್ತದೆ. ಕುರುಡಿಯಾಗಿ ಹುಟ್ಟಬಾರದಿತ್ತು ಸಾರ್”. ಇಡೀ ತರಗತಿಯೇ ಅವಳ ಮಾತಿನಿಂದ ದುಃಖಕ್ಕೊಳಗಾದಂತೆ ಮೌನ ವಹಿಸಿದ್ದನ್ನು ಗಮನಿಸಿ “ಅರೆ ಎಲ್ಲರೂ ಯಾಕೆ ಸುಮ್ಮನಾಗಿಬಿಟ್ರಿ, ಓಹೋ ಅನುಕಂಪ, ನನಗೆ ಅರ್ಥವಾಗ್ತಿದೆ, ನೀವೆಲ್ಲ ನನ್ನನ್ನು ಕರುಣೆಯಿಂದ ನೋಡ್ತಿದ್ದೀರಾ ಅಂತ. ಅಯ್ಯೋ ಮಾತಿಗೆ ಹೇಳಿದೆ ಅಷ್ಟೇ. ನನಗೆ ಯಾವ ದುಃಖವೂ ಇಲ್ಲ. ಈ ಜೀವನದ ಬಗ್ಗೆ ಬೇಸರವೂ ಇಲ್ಲ. ಹಾಗಿದ್ದಿದ್ರೆ ನಾನು ಕಾಲೇಜಿನವರೆಗೂ ಅಷ್ಟು ದೂರದಿಂದ ಬಸ್‍ನಲ್ಲಿ ಬಂದು ಓದ್ತಿದ್ನಾ, ಚೆಸ್ ಕಲಿತಿದ್ನಾ, ಡ್ಯಾನ್ಸ್ ಕಲಿತಿದ್ದೀನೀ… ನನಗೂ ಅನೇಕ ಕನಸುಗಳಿವೆ. ಅದರಲ್ಲಿ ಬೇಸರವೆಲ್ಲಿಂದ ಬಂತು. ಸಾರ್ ಬೆಲ್ ಆಯ್ತು ಬಾಯ್ ಸಾರ್”.
*******
ಸರೋಜ ಹಾಸನ ಹತ್ತಿರದ ನುಗ್ಗೇಹಳ್ಳಿಯ ಹುಡುಗಿ. ಬಿ.ಎ ಫೈನಲ್ ಇಯರ್‍ನಲ್ಲಿ ಓದುತ್ತಿದ್ದಾಳೆ. ನುಗ್ಗೇಹಳ್ಳಿ ಸರೋಜ ಬೆಂಗಳೂರಿಗೆ ಬಂದು ನಾಲ್ಕು ವರ್ಷಗಳಾಗಿವೆ. ಎಸ್.ಎಸ್.ಎಲ್.ಸಿ ಫಸ್ಟ್‍ಕ್ಲಾಸ್ ನಲ್ಲಿ ಪಾಸ್ ಆಗಿದ್ದವಳಿಗೆ ಮುಂದೆ ಓದಲು ಆಸೆ. ಆದರೆ ಮನೆಯಲ್ಲಿನ ಬಡತನ. ಅದಕ್ಕೆ ಅಡ್ಡಿ ಪಡಿಸಿದಾಗ ಸರೋಜ ಬೆಂಗಳೂರು ಸೇರುವ ಮನಸ್ಸು ಮಾಡಿದಳು. ತನ್ನದೇ ಊರಿನ ತನ್ನಂತೆ ಕುರುಡಿಯಾಗಿರುವ ಮಾಲಾಶ್ರೀ ಈಗಾಗಲೇ ಬೆಂಗಳೂರಿನ ಪರಿವರ್ತನ ಅಂಧರ ಟ್ರಸ್ಟ್‍ಗೆ ಸೇರಿ ಅಲ್ಲಿಂದಲೇ ಜಯನಗರದ ಕಾಲೇಜಿನಲ್ಲಿ ಬಿ.ಎ ಮುಗಿಸಿ ಎಲ್.ಎಲ್.ಬಿ ಮಾಡುತ್ತಿದ್ದ ವಿಚಾರ ಗೊತ್ತಿತ್ತು. ಅವಳ ಸಹಾಯದಿಂದ ಸರೋಜಳೂ ಪರಿವರ್ತನ ಅಂಧರ ಶಾಲೆ ಸೇರಿದಳು. ಮೊದ ಮೊದಲು ಇದಕ್ಕೆ ವಿರೋಧಿಸಿದ ಅವಳ ಅಪ್ಪ ಅಮ್ಮ ಕಡೆಗೆ ಕಿತ್ತು ತಿನ್ನುವ ಬಡತನ ಅದರಲ್ಲೂ ಕುರುಡಿಯಾಗಿದ್ದ ಮಗಳು ಹೊರೆಯೂ ಆಗಿದ್ದರಿಂದ ಬೆಂಗಳೂರಿಗೆ ಕಳುಹಿಸಿ ಕೊಟ್ಟಿದ್ದರು.
ಬೆಂಗಳೂರಿಗೆ ಬಂದ ಹೊಸದರಲ್ಲಿ ಹಾಸ್ಟೆಲ್‍ನ ನಿಯಮಿತ ಊಟ, ಸುತ್ತಲೂ ಇವಳಂತ ಅನೇಕರು ಓಡಾಡುತ್ತಿರುವ ಇರುವ ಸ್ಥಿತಿಯಿದ್ದರೂ ಒಂಟಿಯೆನಿಸಿ ತನ್ನೂರಿನ ಅಮ್ಮನ ಮಡಿಲು ಸೇರಬೇಕೆನ್ನುವ ಹಂಬಲ ಹುಟ್ಟಿದರೂ ಏನನ್ನಾದರೂ ಸಾಧಿಸುವ ಛಲ ಅವಳಲ್ಲಿ ಬೆಂಗಳೂರು ಒಳಗೊಳ್ಳುತ್ತಾ ಬಂತು. ಬಿ.ಎ ಓದುತ್ತಲೇ ಟ್ರಸ್ಟ್‍ನಲ್ಲಿ ಕಲಿಸುತ್ತಿದ್ದ ಸಂಗೀತ, ನೃತ್ಯವನ್ನು ಅತ್ಯಂತ ಶ್ರದ್ದೆಯಿಂದ ಕಲಿಯುತ್ತಿದ್ದಳು. ಕಾಲೇಜು ದಿನಾಚರಣೆಯಂದು ಸರೋಜಳ ಒಂದು ಡ್ಯಾನ್ಸ್ ಕಡ್ಡಾಯವಾಗುವ ಹಾಗಾಯಿತು.ಐದಡಿ ಎತ್ತರದ ಸಾಧಾರಣ ಮೈಕಟ್ಟಿನ ಬೆಳಗಿನ ಸುಂದರ ಹುಡುಗಿ ಸರೋಜಳ ಮುಖದಲ್ಲಿ ಅಪಾರ ಕಾಂತಿ ಹೊತ್ತ ಸಹಜ ಸುಂದರಿ. ಅವಳ ಮುಖದಲ್ಲಿ ಕೊರತೆ ಎನಿಸುತ್ತಿದ್ದುದು, ಕುಳಿಬಿದ್ದ, ರೆಪ್ಪೆ ಮುಚ್ಚಿದ ಕಣ್ಣುಗಳು, ನಿರಂತರ ಚಲಿಸುವ ಅರೆ ತೆರೆದ ರೆಪ್ಪೆಗಳು ಕುರುಡಿ ಎನಿಸಿಬಿಟ್ಟಿದ್ದವು.
*******
“ಯಾಕ್ರಿ ಒಂದು ತಿಂಗಳು ಆಯ್ತಲ್ಲಾ ಕಾಲೇಜಿಗೆ ಚಕ್ಕರ್ ಹಾಕಿ ಊರಲ್ಲಿ ಹೋಗಿ ಕುಂತುಬಿಟ್ರಾ? ಅಟೆಂಡೆನ್ಸ್ ಹಾಕುವಾಗ ಮೇಷ್ಟ್ರ ಪ್ರಶ್ನೆಗೆ ಸರೋಜ ಕೊಟ್ಟ ಉತ್ತರ ಅನಿರೀಕ್ಷಿತವಾಗಿತ್ತು. “ಊರಿಗೆ ಹೋಗಿರಲಿಲ್ಲಾ ಹೊರದೇಶಕ್ಕೆ ಹೋಗಿದ್ದೆ ಸಾರ್”. “ಏನು ವಿದೇಶಕ್ಕೆ! ಯಾಕೆ”? ಹೌದು ಸಾರ್ ಅಬ್ರಾಡ್ ಗೆನೆ, ಡ್ಯಾನ್ಸ್ ಪ್ರೋಗ್ರಾಮ್ ಕೊಡಕ್ಕೆ. ಅಮೆರಿಕಾ ಮತ್ತೆ ಕೆನಡಾ ಗೆ ಹೋಗಿದ್ದೆ. ನಿನ್ನೆ ಬಂದೆ. ಅದಕ್ಕೆ ಕಾಲೇಜಿಗೆ ಬಂದಿರಲಿಲ್ಲ ಸಾರ್”. “ಏನ್ರೀ ಗೊತ್ತೇ ಆಗ್ಲಿಲ್ವಲ್ರೀ”. “ಹೂ ಸಾರ್ ಸಸ್‍ಪೆನ್ಸ್. ಎಲ್ಲ ಹೇಳಿಬಿಟ್ಟು ಮಾಡಿದ್ರೆ ಸರಿಯಿರಲ್ಲ ಸಾರ್. ಹೇಳದೆ ಹೀಗೆ ಸರ್‍ಪ್ರೈಸ್ ಕೊಡಬೇಕು”. ಎಲ್ಲರ ನಗುವಿನಲ್ಲಿ ಇವಳು ನಗುತ್ತಿದ್ದಾಳೆ. ವಿಷಯ ತಿಳಿದವರು, ಈಗ ಕೊಂಚ ತಿಳಿದವರು ನಗುತ್ತಿದ್ದಾರೆ. ತಮ್ಮ ಸಹಪಾಠಿ ಹೊರ ದೇಶಕ್ಕೆ ಹೋಗಿ ಬಂದಿರುವುದು. ಅಲ್ಲಿಂದ ನಮಗೇನಾದರೂ ತಂದು ಅವರೆಲ್ಲರಿಗೂ ಸಂಭ್ರಮದ ವಿಷಯವಾಗಿತ್ತು. ಮೇಷ್ಟ್ರು ಅವಳನ್ನೇ ದಿಟ್ಟಿಸುತ್ತಿದ್ದರೂ, ಅವರ ತಲೆಯಲ್ಲಿ ನೂರು ಪ್ರಶ್ನೆಗಳೆದ್ದಿರಬಹುದು. ನೃತ್ಯದಲ್ಲಿ ಪ್ರಾವೀಣ್ಯ ಪಡೆದವರು ಅನೇಕರಿದ್ದಾರೆ. ಅಂತವರು ಎಲ್ಲೆಡೆ ಹೆಸರು ಮಾಡಿದ್ದಾರೆ. ಅಲ್ಲದೆ ನೃತ್ಯಗಾರ್ತಿಯಾದವಳು ಸುಂದರವಾಗಿದ್ದಷ್ಟು ನೃತ್ಯ ಸೊಗಸಾಗಿರುತ್ತದೆ. ತಾವು ಓದಿದ ಭರತನ ನಾಟ್ಯ ಶಾಸ್ತ್ರ ನೆನಪಿಗೆ ಬಂತು. ಹಾಗೆಯೇ ಅದಕ್ಕೆ ವ್ಯತಿರಿಕ್ತವಾಗಿರುವ ಸುಮತೀಂದ್ರ ನಾಡಿಗ್ ಅವರು ಅನುವಾದಿಸಿರುವ ‘ಬೊಕ್ಕ ತಲೆಯ ನರ್ತಕಿ’ ನಾಟಕವು ನೆನಪಿಗೆ ಬಂತು. ತಲೆಯಲ್ಲಿ ಕೂದಲೇ ಇಲ್ಲದವಳು ನರ್ತಿಸುತ್ತಾಳೆಂದರೆ ಕಣ್ಣಿಲ್ಲದವಳು ನರ್ತಿಸಿದರೆ ಏನಾಗುತ್ತದೆ ಬೊಕ್ಕತಲೆಯ ನರ್ತಕಿ – ನಾಟಕ ಅಸಂಗತತೆಯನ್ನು ಹೇಳುವುದು ಸೌಂದರ್ಯವಿಲ್ಲದ ನೃತ್ಯ. ಸಂಗತತೆ ಅಸಂಗತತೆ-ಸಂಗತತೆ ಯಾವುದು ಸೌಂದರ್ಯ ಜಿಜ್ಞಾಸೆಯಲ್ಲಿ ತೊಡಗಿದಂತೆ ತರಗತಿಯಲ್ಲಿನ ಎಲ್ಲರ ಮಾತುಗಳು ಹೆಚ್ಚಾಗುತ್ತಲೇ ಹೋಯಿತು. ಅವರ ಗಲಾಟೆಗೆ ವಾಸ್ತವಕ್ಕೆ ಬಂದ ಮೇಷ್ಟ್ರು ಸರೋಜಳಿಗೆ ಶುಭಾಷಯ ಕೋರಿ ಹೊರ ನಡೆದರು.
*********
ಬಿ.ಎ ಕೊನೆಯ ವರ್ಷ ಪರೀಕ್ಷೆ ದಿನಗಳು ಹತ್ತಿರವಾದಂತೆ ಸರೋಜ ಒಂದು ವಾರ ನಾಪತ್ತೆಯಾದಳು. ಅರೆ ಈ ಹುಡಿಗಿಗೆ ಬುದ್ದಿ ಇಲ್ಲ. ಡ್ಯಾನ್ಸ್ ಡ್ಯಾನ್ಸ್ ಅಂತ ಹೇಳಿ ದೇಶ ಸುತ್ತಿ ಓದೋದನ್ನ ಕಡೆಗಣಿಸುತ್ತಿದ್ದಾಳೆ. ಅದರಿಂದ ಲಾಭವೂ ಇದ್ದಂಗಿಲ್ಲ. ಟ್ರಸ್ಟ್‍ನವರ ದಂದೆಯಾಗಿರೋ ಈ ಕಾರ್ಯಕ್ರಮಗಳು ಹೊರ ದೇಶದವರ ಸಿಂಪಥಿ ಗಿಟ್ಟಿಸಿ ಇವರನ್ನ ಬಂಡವಾಳ ಮಾಡಿಕೊಂಡು ಚೆನ್ನಾಗಿ ದುಡ್ಡು ಮಾಡ್ತಿವೆ. ಸರೋಜ ಬಂದಾದ ಮೇಲೆ ಅವಳಿಗೆ ಸ್ವಲ್ಪ ತಿಳುವಳಿಕೆ ಹೇಳಬೇಕು ಅಂದುಕೊಂಡರು ಕ್ಲಾಸ್ ಮುಗಿಸಿ ಹೊರ ನಡೆಯುತ್ತಿದ್ದವರಿಗೆ ಎದುರಿಗೆ ಸರೋಜ ಬರುತ್ತಿರುವುದು ಗಮನಿಸಿ ಮಾತನಾಡಿಸಿದರು. “ಏನ್ರೀ ಸರೋಜ? ಒಂದು ವಾರದಿಂದ ಪತ್ತೆ ಇಲ್ಲ ಅಮೆರಿಕಾನೋ, ಶ್ರೀಲಂಕಾನೋ”? ಎಲ್ಲಿಗೂ ಹೋಗಿರ್ಲಿಲ್ಲಾ ನಮ್ಮ ಊರಿಗೆ ಹೋಗಿದ್ದೆ ಸಾರ್. ನಿಮ್ಮನ್ನೇ ಹುಡುಕ್ತಿದ್ದೆ ನಿಮಗೊಂದು ಗುಡ್ ನ್ಯೂಸ್ ಹೇಳ್ಬೇಕು. ಲಂಚ್ ಟೈಮ್‍ನಲ್ಲಿ ಬರ್ತೀನಿ ಸಾರ್” ಒಗಟಿನಂತೆ ಮಾತಾಡಿ ಕೈಯಲ್ಲಿನ ಕೋಲಿನಿಂದ ನೆಲ ಬಡಿಯುತ್ತಾ ಮುಂದೆ ಸಾಗಿದಳು.
ಮೇಷ್ಟ್ರುಗೆ ಕುತೂಹಲ. ಮಧ್ಯಾಹ್ನ ಲಂಚ್ ಟೈಮ್‍ಗೆ ಸರಿಯಾಗಿ ಸ್ಟಾಫ್ ರೂಂಗೆ ಬಂದವಳೇ ಬ್ಯಾಗಿನಿಂದ ಏನನ್ನೋ ತೆಗೆಯುತ್ತಿದ್ದಳು, ನೋಡಿದರೆ ಲ್ಯಾಪ್ ಟಾಪ್. “ಇದನ್ನು ಈ ಟೇಬಲ್ ಮೇಲಿಡಲಾ ಸಾರ್”.. “ಇಡಿ” “ನನಗೆ ನಮ್ಮೂರಲ್ಲಿ ಸನ್ಮಾನ ಮಾಡಿದ್ರು ಸಾರ್. ಗಿಪ್ಟ್ ಆಗಿ ಈ ಲ್ಯಾಪ್ ಟಾಪ್ ಕೊಟ್ಟರು. ಓಹ್ congratulations ಖುಷಿ ಆಯ್ತು. “ಸಮಾರಂಭ ತುಂಬಾ ಚೆನ್ನಾಗಿತ್ತು ಸಾರ್. ಅದರಲ್ಲೂ ಸುಭದ್ರಮ್ಮ ಮನ್ಸೂರ್ ಜೊತೆ ಪ್ರಶಸ್ತಿ ತಗೊಂಡೆ ಸಾರ್. “ಸುಭದ್ರಮ್ಮ ಮನ್ಸೂರ್ ವಾಹ್ ಒಳ್ಳೆ ಹಾಡುಗಾರ್ತಿ ಅವರ ಹಾಡು ನಾನು ಕೇಳಿದ್ದೀನಿ. ಒಳ್ಳೆಯದಾಯ್ತು ಬಿಡಿ, ನಾನೆಲ್ಲೋ ನಿಮ್ಮ ಟ್ರಸ್ಟ್‍ನವರು ಯಾವುದೋ ದೇಶಕ್ಕೆ ಕರೆದುಕೊಂಡು ಪ್ರೋಗ್ರಾಮ್ ಕೊಡ್ಸಕ್ಕೆ ಹೋಗಿದ್ದಾರೇನೋ ಅಂದುಕೊಂಡೆ. ಸುಮ್ಮಸುಮ್ಮನೆ ಒಪ್ಪಿಕೊಳ್ಳಬ್ಯಾಡ್ರಿ. ನಿಮ್ಮನ್ನು ಮುಂದಿಟ್ಟುಕೊಂಡು ಅವರು ದುಡ್ಡು ಮಾಡ್ತಾರೆ. “ಇಲ್ಲ ಸಾರ್ ನಮಗೂ ಕೊಡ್ತಾರೆ”. “ಎಷ್ಟು ಕೊಡ್ತಾರೆ? ಎಲ್ಲ ಮೋಸ”. ಮೇಷ್ಟ್ರ ವಿಷಾದದ ಉತ್ತರಕ್ಕೆ “ಮೋಸ ಮಾಡಿದ್ರೆ ನಾನು ಬಿಟ್ಟು ಬಿಡ್ತೀನಾ ಸಾರ್. ಮೊದಲು ಮೊದಲು ಬಂದಿದ್ದ ದುಡ್ಡಲ್ಲಿ ನೂರು ಇನ್ನೂರು ಕೊಡೋರು. ನಾನು ಚೆನ್ನಾಗಿ ಗಲಾಟೆ ಮಾಡಿ ಈಗೆಲ್ಲ ಥ್ರೀ ಡಿಜಿಟ್ ಎಲ್ಲ ಮುಟ್ಟಲ್ಲಾ ಸಾರ್ ಏನಿದ್ರೂ ಪೋರ್ ಡಿಜಿಟ್. ಕೇಳದೆ ಸುಮ್ಮನೆ ಇದ್ರೆ ಎಲ್ಲ ಮೋಸಾನೆ ಸಾರ್”. ಅವಳ ವ್ಯವಹಾರ ಜ್ಞಾನಕ್ಕೆ ಮೇಷ್ಟ್ರು ತಲೆದೂಗಿ ಸುಮ್ಮನಾದಂತೆ ಈ ಹಿಂದೆ ಹತ್ತು ನಿಮಿಷದಲ್ಲಿ ಮಾತಾನಾಡಿದ್ದೆಲ್ಲ ಮತ್ತೆ ಕೇಳಿಸಿದಂತಾಗಿ ಆಶ್ಚರ್ಯದಿಂದ ಮೇಷ್ಟ್ರು ಕೇಳಿದರು “ಏನ್ರೀ ಇದು? “just for fun ಸಾರ್ ನೀವು ಮಾತಾಡಿದ್ದು ರೆಕಾರ್ಡ್ ಮಾಡ್ದೆ ಅಷ್ಟೆ. ಡಿಲೀಟ್ ಮಾಡ್ತೀನಿ ಬಿಡಿ ಸರ್”. ಏನು ಹೇಳಬೇಕು ತೋಚಲಿಲ್ಲ. ಮೇಷ್ಟ್ರು ಸುಮ್ಮನಾದರೂ ಸರೋಜ ಬಾಯ್ ಹೇಳಿ ಹೊರ ಹೊರಟಳು.
********
ನುಗ್ಗೆಹಳ್ಳಿ ಸರೋಜ ಎಲ್ಲೇ ಇರಲಿ ಅಲ್ಲಿ ಪ್ರಶ್ನೆ ಮಾಡುವವಳು. ಮೋಸವಾದಲ್ಲಿ ದನಿ ಎತ್ತುವವಳು ಸರ್ಕಾರದ ಅಂಗವಿಕಲರಿಗೆ ಕೊಡುವ ಹಣವನ್ನು ಮೋಸವಾಗದ ರೀತಿಯಲ್ಲಿ ತಾನು ಪಡೆದು ಇತರ ಊರಿನ ಗೆಳತಿಯರಿಗೂ ಕೊಡಿಸುವವಳು. ಸರ್ಕಾರಿ ಕಛೇರಿಗೆ ಹೋದರೆ ಯಾರನ್ನೂ ಮುಲಾಜಿಲ್ಲದಂತೆ ಪ್ರಶ್ನಿಸಿ ಕಾರ್ಯ ಸಾಧಿಸಿ ಬರುತ್ತಿದ್ದವಳು. ಪದವಿಯೂ ಮುಗಿಸಿದಳು. ಕಾಲ ಸರಿಯಿತು ಅವಳ ಬಗೆಗಿನ ವಿಚಾರಗಳು ಮರೆಯಾಗುತ್ತಾ ಹೋದವು.
ಏನ್ರೀ ನುಗ್ಗೇಹಳ್ಳಿ ಕಾಲೇಜಿನ ಕಡೆ?” ಆಫೀಸಿನ ಮುಂದೆ ಕುಳಿತಿದ್ದ ಸರೋಜಳಿಗೆ ಮೇಷ್ಟ್ರ ಧ್ವನಿ ಎಚ್ಚರಿಸಿ ಏಳಿಸಿತು. “ಸಾರ್ ನಮಸ್ಕಾರ ಏನಿಲ್ಲ ಪಿಡಿಸಿ ಬೇಕಿತ್ತು ಅದಕ್ಕೆ ಬಂದೆ. ಚೆನ್ನಾಗಿದ್ದೀರಾ ಸಾರ್” ಹೌದು ಚೆನ್ನಾಗಿದ್ದೀನಿ ಕುಳಿತುಕೊಂಡು ಸರೋಜ ತನ್ನ ಪಕ್ಕದಲ್ಲಿ ಕುಳಿತಿದ್ದ ಹುಸೇನ್ ಕಡೆ ಕೈ ತೋರಿಸಿ “ಸರ್ ಹುಸೇನ್‍ದು ಮುಂದಿನ ತಿಂಗಳು ಮದುವೆ”. “ಹೌದೇನ್ರೀ ಹುಡುಗಿ ಏನ್ಮಾಡ್ತಾಳೇ”? ಸಹಜ ಪ್ರಶ್ನೆಗೆ ಸರೋಜಳೇ ಉತ್ತರಿಸಿದಳು. “ನಮ್ಮ ಟ್ರಸ್ಟ್‍ನಲ್ಲೇ ಇದಾಳೆ ಸಾರ್ ಅವಳು ಬ್ಲೆಂಡೇ. ಬಿ.ಎಸ್ಸಿ ಮುಗ್ಸಿದ್ದಾಳೆ”. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ಟೀಚರ್ “ಸರೋಜ ನಿಮ್ಮ ಮದುವೆ ಯಾವಾಗ” ಈ ಅನಿರೀಕ್ಷಿತ ಪ್ರಶ್ನೆಗೆ ಸಾವಧಾನದಿಂದಲೇ “ಮಿಸ್ ನನ್ನ ಮದುವೆ ಮುಂದಿನ ವರ್ಷ ಆಗಬಹುದು. ನಮ್ಮದು ಗೊತ್ತಲ್ಲ. ನಾವು ಬ್ಲೈಂಡು. ಸ್ವಲ್ಪ ಲೇಟ್ ಅಲ್ವಾ”. ಅಸಹಾಯಕತೆಯ ಧ್ವನಿ ಅಲ್ಲಿರಲಿಲ್ಲ. ಭರವಸೆಯ ನಿರೀಕ್ಷೆಯಿತ್ತು ಅವಳಲ್ಲಿ. ಎಲ್ಲ ಪ್ರಶ್ನೆಗಳಿಗೂ ಎಲ್ಲ ಉತ್ತರಗಳು ಕೊನೆಯಲ್ಲ. ಉತ್ತರಗಳಿಲ್ಲದ ಪ್ರಶ್ನೆಗಳು ನಮ್ಮ ನಡುವೆ ಸಾವಿರಾರಿವೆ.
*********
ಪ್ರಬುದ್ದ ಸರೋಜ ದೇಶ ವಿದೇಶ ಸುತ್ತಿ ಬಂದವಳು. ತನ್ನನ್ನು ತಾನು ಅಲಂಕರಿಸಿಕೊಂಡು ಹೆಣ್ಣಂತೆ ವರ್ತಿಸುವವಳು ತನ್ನ ನೃತ್ಯದ ಮೂಲಕ ಲಕ್ಷಾಂತರ ರೂಪಾಯಿ ಕೂಡಿಟ್ಟು ಕೊಂಡಿರುವವಳು. ಎಲ್ಲೇ ಹೋದರು ಬದುಕಬಲ್ಲೆ ಎಂಬ ಉತ್ಸಾಹ ಛಲ ಉಳ್ಳವಳು. ಪದವಿ ಮುಗಿಸಿ ಉನ್ನತ ಶಿಕ್ಷಣಕ್ಕೆ ಅರ್ಜಿ ಹಾಕಲು ಬಯಸಿರುವವಳು. ಇನ್ನು ಮದುವೆ ಜೊತೆಗಾರ ಹುಸೇನ್‍ಗೆ ಮದುವೆ ಗೊತ್ತಾಗಿಲ್ಲವೆ. ಕಾಲವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ. ಮರದ ಎಲೆ ಉದುರಿ ಬೋಳಾಗಿ ಮತ್ತೆ ಚಿಗುರಿ ಮತ್ತೆ ಬೋಳಾಗುವ ಆವರ್ತನೆ ಎಂದೂ ನಿಲ್ಲವುದಿಲ್ಲ. ಇದು ಜಗದ ನಿಯಮ. ಸರೋಜ ಈ ನಾಲ್ಕು ವರ್ಷಗಳಲ್ಲಿ ಎಲ್ಲಿ ಹೋದಳೋ ಏನು ಮಾಡುತ್ತಿದ್ದಳೋ ಅಜ್ಞಾತವಾದಂತೆನಿಸುತ್ತಿತ್ತು.
ಒಂದು ಸಂಜೆ ಮೇಷ್ಟ್ರ ಪೋನಿಗೆ ಒಂದು ಅನಾಮಧೇಯ ಕರೆ ಬಂತು. “ಹಲೋ.. ಸಾರ್ ನಾನು ನುಗ್ಗೇಹಳ್ಳಿ ಸರೋಜ”. ಆ ಕಡೆಯಿಂದ ಸರೋಜ ಮಾತನಾಡುತ್ತಿದ್ದಾಳೆ ಉತ್ಸಾಹದ ಚಿಲುಮೆಯಂತೆ ಮಾತನಾಡಿದಳು. ಯೋಗಕ್ಷೇಮ ವಿಚಾರಿಸಿದಳು. ತನ್ನ ಮದುವೆಯ ಆಮಂತ್ರಣ ನೀಡಿದಳು ಪೋನ್ ಮೂಲಕ ವಿಳಾಸ ಮೆಸೇಜ್ ಮಾಡ್ತೀನಿ ಖಂಡಿತಾ ಬರ್ಬೇಕು. ನೀವು ಬಂದರೆ ನನಗೆ ಸಂತೋಷ ಆಗ್ತದೆ. ದಯವಿಟ್ಟು ಬರಬೇಕು ಸಾರ್. ಪೋನ್ ಕಟ್ಟಾಯಿತು.
ಮದುವೆ ನಾಡಿದ್ದೆ, ಅವಳೂರಲ್ಲಿ ಇನ್ನು ಇರುವುದು ಎರಡೇ ದಿನ. ನಗರದ ಜಂಜಾಟಗಳು, ಕರ್ತವ್ಯದ ಹೊಣೆಗಾರಿಕೆಗಳು, ಹೇಳದೆ ಕೇಳದೆ ಬಂದು ವಕ್ಕರಿಸುವ ತರಾವರಿ ಕೆಲಸಗಳು, ನಮ್ಮವು, ಬೇರೆ ಯಾರವೊ ಯಾವ್ಯಾವೋ ಕೆಲಸಗಳು. ನೂರಾರು ಯೋಚನೆಗಳು ಕೆಲಸಕ್ಕೆ ರಜೆ ಹಾಕಿ ಹೋಗಲೇ? ದೂರದಹಳ್ಳಿ ಅದು ವಿದ್ಯಾರ್ಥಿಯೊಬ್ಬರ ಮದುವೆಗೆ ಹೋಗುವುದು ಎಷ್ಟು ಸೂಕ್ತ. ಕುರುಡಿಯಾದವಳು ನನ್ನನ್ನು ಕಂಡು ಮಾತನಾಡಿಸಿ ಉಪಚರಿಸುವುದಾದರೂ ಹೇಗೆ.? ಆ ಅಪರಿಚಿತ ಜನಗಳ ನಡುವೆ ನಾನು ಒಂಟಿಯಾದರೆ? ಬೇಸರವಾದರೆ? ಛೇ. ಎಷ್ಟು ಆತ್ಮೀಯತೆಯಿಂದ ಕರೆದಿದ್ದಾಳೆ. ಅನೇಕ ಗೊಂದಲಗಳಿಗೆ ಒಳಗಾದ ಮೇಷ್ಟ್ರು ಕಡೆಗೂ ನಗರದ ಧಾವಂತದಲ್ಲಿ ಸಣ್ಣ ಮನಸ್ಸಿನಲ್ಲಿ ತಣ್ಣಗೆ ಸರೋಜಳ ಮದುವೆಯನ್ನು ಮರೆತು ಬಿಟ್ಟರು.
ಯಾಕೆ ಹೀಗೆ ಅನೇಕರು ಕಾಡುತ್ತಾರೆ? ಅವರ ಅಮಾಯಕತನ, ಬಡತನ, ಮುಗ್ಧತೆಗಳು ನನ್ನನ್ನು ಯಾಕೆ ಹೀಗೆ ಜೀವ ಹಿಂಡುತ್ತವೆ. ಮೃದು ಮನಸ್ಸಿನ ಮೇಷ್ಟ್ರಲ್ಲಿ ತಾಕಲಾಟಗಳು ನಿರಂತರವಾಗಿದ್ದವು. ಮತ್ತೆ ಕಾಲೇಜು ಆರಂಭವಾಯಿತು. ತರಗತಿಗಳು ಭರದಿಂದ ನಡೆದವು. ಅನೇಕ ಕಾರ್ಯಕ್ರಮಗಳ ನಡುವೆ ಅನೇಕ ಸಂಘ ಸಂಸ್ಥೆಗಳಿಗೆ ದೇಣಿಗೆ ಕೊಡುವ ಸಂಸ್ಥಾಪಕರ ದಿನವೂ ಬಂತು. ಆ ದಿನದ ಕಾರ್ಯಕ್ರಮದಲ್ಲಿ ಪರಿವರ್ತನ ಅಂಧರ ಟ್ರಸ್ಟ್‍ನವರು ಒಳ್ಳೆಯ ನೃತ್ಯ ಪ್ರದರ್ಶಿಸಿದರು. ಮೇಷ್ಟ್ರು ಸಂಭ್ರಮಿಸಿ ಆ ತಂಡದ ಮುಖ್ಯ ನೃತ್ಯಗಾರನ ಹತ್ತಿರ ಹೋಗಿ ಕುಳಿತವರು. ಅವನಿಗೆ ಶುಭಕೋರಿದರು. ಹೆಸರು ಕೇಳಿದಾ ಅವನು ರಂಗರಾಜು ಎಂದು ಹೇಳಿ ತನ್ನ ವಿವರ ಹೇಳಿಕೊಂಡ.
ನಾನು ಹುಬ್ಬಳ್ಳಿ ಕಡೆಯವನು ಈ ಟ್ರಸ್ಟಿಗೆ ಬಂದು ಸೇರಿ ಎಂಟು ವರ್ಷ ಆಯ್ತು ನಾನು ಜಯನಗರ ಕಾಲೇಜಿನಲ್ಲಿ ಬಿ.ಎ ಮುಗಿಸಿದೆ ಈಗ ಬಿ.ಎಡ್ ಮಾಡ್ತಿದ್ದೀನಿ. ಅವನು ಹೇಳುತ್ತಾ ಹೋದಂತೆ ಮೇಷ್ಟ್ರಲ್ಲಿ ಮೂಡಿದ ಪ್ರಶ್ನೆ ಕೇಳಿಯೇ ಬಿಟ್ಟರು.
“ಹಾಗಾದರೆ ನುಗ್ಗೇಹಳ್ಳಿ ಸರೋಜ ಗೊತ್ತಾ ನಿಮಗೆ”. ಆಕೆ ನನ್ನ ಸ್ಟೂಡೆಂಟ್ ಒಳ್ಳೆ ಡ್ಯಾನ್ಸರ್ ಅಂದರು. “ಓಹ್ ಗೊತ್ತು ಅವಳಿಗೆ ಡ್ಯಾನ್ಸ್ ಹೇಳಿಕೊಟ್ಟಿದ್ದು ನಾನೇ”. ಸ್ವಲ್ಪ ಹೊತ್ತು ಸುಮ್ಮನಾದ ಮತ್ತೆ ಮೇಷ್ಟ್ರು ಹೇಳಿದರು. “ರೀ ಅವರನ್ನ ಕೇಳಿದೆ ಅಂತ ಹೇಳಿ ಪಾಪ ಅವರ ಮದುವೆಗೆ ಎಷ್ಟು ವಿಶ್ವಾಸದಿಂದ ಕರೆದಿದ್ದರು ನಾನು ಹೋಗಕ್ಕಾಗಲಿಲ್ಲ. ಸಾರಿ ಹೇಳಿ ಒಂದ್ಸಾರಿ ಅವರನ್ನು ಕಾಲೇಜಿನ ಹತ್ತಿರ ಬರಲು ಹೇಳಿ” ಅವನ ಹತ್ತಿರ ಮಾತನಾಡಿದ ಮೇಷ್ಟ್ರಿಗೆ ಸಮಾಧಾನವೆಂದಂತೆನಿಸಿತು. ರಂಗರಾಜು ನಿಧಾನಕ್ಕೆ ತಲೆ ಬಗ್ಗಿಸಿ ಹೇಳಿದ “ಹೌದು ಸಾರ್ ನೀವು ಮದುವೆಗೆ ಬರಲೇ ಬೇಕಿತ್ತು. ಅವಳು ತುಂಬಾ ನಿರೀಕ್ಷೆ ಇಟ್ಟುಕೊಂಡಿದ್ಲು. “ನಿಮಗೆ ಹೇಗೆ ಗೊತ್ತು ಇದೆಲ್ಲ”. ಸಾರ್ ನಾನೇ ಅವಳ ಗಂಡ. ಮೇಷ್ಟ್ರು ಹಾಗೆ ನೋಡಿದರು. ನೋಡಲು ಲಕ್ಷಣವಾಗಿರುವ ಹುಡುಗ, ಎತ್ತರದ ಮೈಕಟ್ಟು, ಕಣ್ಣು ಕಾಣುವುದಿಲ್ಲ ಎನ್ನುವುದನ್ನು ಹೊರತು ಪಡಿಸಿದರೆ ಜವಾಬ್ದಾರಿ ಹುಡುಗ.
“ಹಾಗಾದರೆ ಒಳ್ಳೆಯದೆ ಆಯ್ತು. ಕರೆದುಕೊಂಡು ಬನ್ನಿ ಒಂದಿನ”
“ಇಲ್ಲ ಈಗ ಬರಕ್ಕಾಗಲ್ಲ ಸಾರ್”
“ಯಾಕೆ”
“ಅವಳು pregant ಮೂರು ತಿಂಗಳು” ನಾಚುತ್ತಾ ಹೇಳಿ ತಲೆ ತಗ್ಗಿಸಿದ.
ಮೇಷ್ಟ್ರು ಸಮ್ಮನಾದರೂ ಒಳಗೊಳಗೆ ಏನೋ ಮಾತನಾಡಿಕೊಂಡಂತೆ ಇಬ್ಬರೂ ಸ್ವಲ್ಪ ಹೊತ್ತು ಕುಳಿತಿದ್ದವರು ಮಧ್ಯೆ ಕೊಂಚ ಮಾತನಾಡಿದರು.
*********
ರಂಗರಾಜು ನುಗ್ಗೇಹಳ್ಳಿ ಸರೋಜ ಒಂದೇ ಸಂಸ್ಥೆಯಲ್ಲಿ ವಾಸವಿದ್ದವರು. ನೃತ್ಯದಲ್ಲಿ ಇಬ್ಬರಿಗೂ ಆಸಕ್ತಿ . ಹೆಚ್ಚು ನೃತ್ಯ ಕಲಿತಿದ್ದ ರಂಗರಾಜು ಸರೋಜಳಿಗೆ ನೃತ್ಯ ಹೇಳಿಕೊಡುತ್ತಾ ಹೋದ. ಅವನ ಸ್ಪರ್ಶ ಅವಳಲ್ಲಿ ಪುಳಕ ಮಾಡಿ ಆತ್ಮೀಯತೆ, ಪ್ರೀತಿಗೆ ತಿರುಗಿ ಪ್ರೀತಿಸಿ ಮದುವೆಯಾದವರು. ಅಲ್ಪಸ್ವಲ್ಪ ಮನೆಯವರ ವಿರೋಧದ ನಡುವೆಯೂ ಪ್ರೀತಿಗೆ ಜಯ ತಂದು ಕೊಟ್ಟವರು.
ಅಂಧರಿಗೆ ನೃತ್ಯ ಹೇಳಿಕೊಡುವಾಗ ದೂರ ನಿಂತು ನೃತ್ಯದ ಭಂಗಿಗಳನ್ನು ಹೇಳಿಕೊಡುವುದಿಲ್ಲ. ಬದಲಾಗಿ ಪ್ರತಿಯೊಂದು ಭಂಗಿಯನ್ನು ಮುದ್ರೆಯನ್ನು ಶರೀರದ ಅವಯವ ಸ್ಪರ್ಷಿಸಿ ಹೇಳಿಕೊಡಬೇಕಾಗುತ್ತದೆ. ರಂಗರಾಜು ನೃತ್ಯ ಕಲಿತಿದ್ದವ, ಜೊತೆಗೆ ಕತ್ತನ್ನು ಓರೆಯಾಗಿಸಿ ನೋಡಿದರೆ ಕಣ್ಣು ತುಸು ಕಾಣುತ್ತಿತ್ತು. ಪೂರ್ತಿ ಕುರುಡನೇನಲ್ಲ.
ಮದುವೆಯಾಗಿ ಕೆಲ ದಿನಗಳಲ್ಲೇ ಜಯನಗರದ ಅಶೋಕ ಪಿಲ್ಲರ್ ಹತ್ತಿರ ಬಾಡಿಗೆ ಮನೆಯಲ್ಲಿ ದಾಂಪತ್ಯ ಆರಂಭಿಸಿದರು ಎರಡು ಜೀವಗಳು. ಉಳಿದಂತೆ ನೀನೆ ಎನ್ನುವವರಿಲ್ಲ ಸರೋಜ ಪೂರ್ತಿ ಕುರುಡಿ. ರಂಗರಾಜುವಿಗೆ ಕೊಂಚ ಕಾಣುತ್ತೆ. ಅದೂ ಅಸ್ಪಸ್ಟವಾಗಿ ಮಬ್ಬಿನಂತೆ, ನೆರಳಿನಂತೆ ಹೊಸ ಮನೆ, ಬೆಳಗ್ಗೆ ಸರೋಜ ಆಫೀಸಿಗೆ ಹೋಗಿ ಬರುತ್ತಾಳೆ. ರಂಗರಾಜು ನೃತ್ಯ ಹೇಳಿಕೊಡಲು ಅಂಧರ ಶಾಲೆಗಳಿಗೆ ನೇಮಕವಾಗಿದ್ದಾನೆ. ಸಂಜೆ ರಂಗರಾಜುವೇ ಅಡಿಗೆ ಮಾಡುತ್ತಾನೆ. ಎಚ್ಚರ ವಹಿಸಿ ತರಕಾರಿ ಹೆಚ್ಚಿಕೊಡುತ್ತಾಳೆ ಸರೋಜ. ಗ್ಯಾಸ್ ಸ್ಟವ್ ಹಚ್ಚುವಾಗ ರಂಗರಾಜುವೇ ಹುಷಾರಾಗಿ ಆ ಕೆಲಸ ಮಾಡುತ್ತಾನೆ. ಕಿಟಕಿ ಬಾಗಿಲುಗಳನ್ನು ಯಾವಾಗಲೂ ಭದ್ರಪಡಿಸಿರುತ್ತಾರೆ. ಸರೋಜಳಂತೂ ಆಗಾಗ ಗಂಟೆಗೊಮ್ಮೆ ಬಾಗಿಲ ಚಿಲಕ ಭದ್ರಪಡಿಸಿದೆಯೇ ಎಂದು ಖಚಿತಪಡಿಸಿಕೊಳ್ಳುತ್ತಾಳೆ.
“ರೀ ಈಗ ಟೈಮೆಷ್ಟು”
“ರಾತ್ರಿ ಒಂಭತ್ತು ಗಂಟೆ ಯಾಕೆ”?
“ಯಾಕಿಲ್ಲ ಸುಮ್ಮನೆ ಕೇಳ್ದೆ” ಮೌನ ಕತ್ತಲು ಹೆಪ್ಪುಗಟ್ಟಿದಂತೆ ದಟ್ಟವಾಗತೊಡಗಿತು. ಮದುವೆಯ ಸಂಭ್ರಮ ಆ ದಿನಗಳ ಪುಳಕ ಈಗಿಲ್ಲ. ಹಾಸ್ಟೆಲ್‍ನಲ್ಲಿದ್ದು ಉಳಿದವರೊಟ್ಟಿಗೆ ದಿನ ಕಳೆಯುವಾಗ ಅಡಿಗೆಯವನು ಮಾಡಿ ಹಾಕುತ್ತಿದ್ದ ಊಟ ಮಾಡುವಾಗ ಸಮಸ್ಯೆ ಎನಿಸುತ್ತಿರಲಿಲ್ಲ. ಯಾರೋ ಕದ ಹಾಕುತ್ತಾರೆ, ಇನ್ಯಾರೋ ಗೇಟಿಗೆ ಬೀಗ ಹಾಕುತ್ತಾರೆ. ಕೊಂಚ ಕಣ್ಣು ಕಾಣುವವರು ಎಲ್ಲದಕ್ಕೂ ಸಹಕರಿಸುತ್ತಾರೆ. ಓದಿಸುವುದಕ್ಕೆ, ಚೆಸ್, ಹಾಡು, ನೃತ್ಯ ಹೇಳಿಕೊಡುವುದಕ್ಕೆ ಜನ ಬರುತ್ತಾರೆ. ನಾವು ಉಟ್ಟ ಬಟ್ಟೆಯ ಬಗ್ಗೆ ಮಾತನಾಡುತ್ತಾರೆ. ನಮ್ಮನ್ನು ಹೊಗಳುತ್ತಾರೆ. ದಿನ ಕಳೆಯುವುದು ಗೊತ್ತಾಗುವುದಿಲ್ಲ. ಎಲ್ಲವೂ ಈಗ ಅಯೋಮಯ. ನೀನೆ ಎನ್ನುವವರಿಲ್ಲ, ನನಗೆ ಅವನು ಅವನಿಗೆ ನಾನು ಎಲ್ಲವನ್ನು ಇಬ್ಬರೇ ಇಲ್ಲವೇ ಅವನೇ ಮಾಡಬೇಕು. ಹೊಸ ಪ್ರದೇಶ ಭಯ ಬೇರೆ. ಬೇಕಂತಲೇ ಸ್ನೇಹಿತರನ್ನು ಬರಮಾಡಿಕೊಳ್ಳುತ್ತಿಲ್ಲ. ಹೊಸದಾಗಿ ಮನೆ ಮಾಡಿದಾಗ ಎಲ್ಲ ವ್ಯವಸ್ಥೆ ಮಾಡಿಕೊಡಲು ಊರಿಂದ ಅಪ್ಪ ಅಮ್ಮ ಬಂದವರು. ಮರಳಿ ಹೋಗಿದ್ದಾರೆ. ಮೂರು ತಿಂಗಳಾಯಿತು. ಸರೋಜಳ ಮನಸ್ಸಿನಲ್ಲಿ ದುಗಡದ ಛಾಯೆ ಆವರಿಸಿ ನಿಟ್ಟುಸಿರು ಬಿಟ್ಟಳು. “ಸರೂ ಏನಾಯ್ತು, ಸುಮ್ನೆ ಮಾತನಾಡದೆ ಕುಂತುಬಿಟ್ಟೆಯಲ್ಲ”. ಒಂದೇ ಕೊಠಡಿಯ ಮನೆ ಅಲ್ಲೇ ಇದ್ದ ಸ್ಟೌವ್ ಮೇಲಿನ ಪಾತ್ರೆಯಲ್ಲಿನ ಸಾಂಬರ್ ತಿರುವುತಿದ್ದ ರಂಗರಾಜು ಸಾಮಾನ್ಯವೆಂಬಂತೆ ಕೇಳಿದ ಮತ್ತೆ ಮೌನ ತನ್ನ ಹೆಂಡತಿ ಅಳುವ ಸದ್ದಿಗೆ ತಿರುಗಿದ. ಸರೋಜ ಅಳುತ್ತಿದ್ದಾಳೆ. ಧಾವಿಸಿ ಬಂದವನು ಬಾಚಿ ತಬ್ಬಿದ ಅವಳ ಅಳು ಇನ್ನು ಜೋರಾಯಿತು. ರಮಿಸಿದ ಅಳುತ್ತಲೇ ಇದ್ದಾಳೆ. ಕಡೆಗೆ ಘಟ್ಟಿಸಿ ಕೇಳಿದ “ಸರೋಜ ಅಳೋ ಅಂತಾದ್ದೇನಾಯಿತು” ಸಣ್ಣಗೆ ಕಿರುಚಿದ “ರೀ ನನಗೆ ಈಗ ಮೂರು ತಿಂಗಳು” “ಗೊತ್ತಿದೆ ಅಲ್ವಾ ಅದನ್ನೇ ಎಷ್ಟು ಸಾರಿ ಹೇಳ್ತ್ಯಾ”. ಹಾಗಲ್ಲ..” ಮತ್ತೀನ್ಹೇಗೆ ಪ್ರತಿದಿನ ಲೆಕ್ಕ ಹಾಕ್ತ್ಯಾ, ಬಿಟ್ಟುಕೊಡು ಸುಮ್ಮನೆ ಆತಂಕಪಡಬೇಡಾ” ಮತ್ತೆ ಮತ್ತೆ ಸಮಾಧಾನ ಪಡಿಸಬೇಕು. ಸರೋಜ ದಿನಂಪ್ರತಿ ದುಗುಡ ಲೆಕ್ಕಾಚಾರದಲ್ಲೇ ಇದ್ದಾಳೆ. ದಿನಗಳುರುಳಿದಂತೆ ತುಂಬು ಬಸುರಿ.. ಈಗ ಧೈರ್ಯ ಹೇಳುತ್ತಿದ್ದ ಗಂಡನಲ್ಲೂ ಆತಂಕ. ಸಹಾಯಕ್ಕೆ ಅಂತ ಹಳ್ಳಿಯಿಂದ ಅಮ್ಮ ಬಂದಿದ್ದಾಳೆ. ಆದರೂ ಮನೆಯೆಲ್ಲ ಬಣ ಬಣ. ಮೂರು ಹೊತ್ತು ಮೌನ. ಸರೋಜಳ ಅಮ್ಮ ಮಾತನಾಡಿಸಿದರಷ್ಟೇ ಶಬ್ಧ ಉಳಿದಂತೆ ನೀರವತೆ.
ರಂಗರಾಜು ಸರೋಜರಲ್ಲಿ ಒಂದೇ ತಹತಹ ದುಗುಡ. ನಮಗೆ ಹುಟ್ಟುವ ಮಗು ಕುರುಡಾಗಿ ಬಿಟ್ಟರೆ ದಿಕ್ಕು ತೋಚದವರಂತೆ ವಿಲಿವಿಲಿ ಒದ್ದಾಡುತ್ತಾರೆ. ಹಿಂದೊಮ್ಮೆ ಡಾಕ್ಟರ್‍ನಿಂದ ಸಲಹೆ ಸಾಂತ್ವನ ಪಡೆದಿದ್ದರೂ ಆತಂಕ ಕಡಿಮೆಯಾಗಿಲ್ಲ. ಕಣ್ಣಿದ್ದ ಅಪ್ಪ ಅಮ್ಮನಿಗೇ ಕುರುಡರಾದ ನಾವು ಹೊರೆಯಾಗಿಬಿಟ್ಟೆವು. ಇನ್ನು ಕುರುಡರಾದ ನಮಗೆ ಕುರುಡು ಮಗು ಹುಟ್ಟಿದರೆ ಇನ್ನಾರು ಗತಿ. ಯೋಚಿಸಿದಂತೆಲ್ಲಾ ಭಯಂಕರ ಯಾತನೆಯಂತೆ ಕಾಡುವ ವಿಚಾರವು ಅವರನ್ನು ಹೆಚ್ಚಾಗಿ ಸರೋಜಳನ್ನು ಕುಗ್ಗಿಸಿಬಿಟ್ಟಿತು. ಅವಳು ದಿನಕಳೆದಂತೆ ಮೌನಕ್ಕೆ ಶರಣಾದಳು. ಹೆರಿಗೆಯ ಬೇನೆ ಆರಂಭವಾಗಿ ಆಸ್ಪತ್ರೆ ಸೇರಿಸಿದ್ದಾಯಿತು. ಸುಸೂತ್ರ ಹೆರಿಗೆ ಸಾಧ್ಯವಿಲ್ಲ. ಸಿಸೇರಿಯನ್ ಮಾಡಬೇಕಾಗುತ್ತದೆ. ಒಪ್ಪಿಗೆ ಕೊಟ್ಟ ರಂಗರಾಜು ಲೇಬರ್ ವಾರ್ಡ್‍ನ ಹೊರಗೆ ಶತಪಥ ತಿರುಗುತ್ತಿದ್ದಾನೆ. ಗೆಳೆಯರು ಬಂದಿದ್ದಾರೆ. ಎಲ್ಲರಲ್ಲೂ ಸಂಭ್ರಮ. ಮಗುವಿನ ಅಳು ಕೇಳಲು ಕಾತರ ನೋಡಲೆಲ್ಲಿ ಸಾಧ್ಯ. ಎಲ್ಲ ಕುರುಡರೇ ಸರೋಜಳ ತಾಯಿ, ಡಾಕ್ಟರ್ ನರ್ಸ್‍ಗಳು ನೋಡಿ ಹೇಳಬೇಕಷ್ಟೆ ಹುಟ್ಟಿದ ಮಗು ಗಂಡೋ ಹೆಣ್ಣೋ ಎಂದು. ರಂಗರಾಜನಿಗೆ ಯಾವುದಾದರೂ ಸರಿ ಕುರುಡು ಮಗು ಹುಟ್ಟಬಾರದಷ್ಟೆ. ಸಮಯ ಸರಿದದ್ದು ಆಮೆಯಂತೆ… ಲೇಬರ್ ವಾರ್ಡಿನಿಂದ ಒಮ್ಮೆಲೆ ಮಗುವೊಂದು ಕಿಟಾರನೆ ಕಿರುಚಿದ ಸದ್ದು. ಹೊರಗಿದ್ದ ಎಲ್ಲರಲ್ಲೂ ಆತಂಕ, ಸಂತೋಷ ರಂಗರಾಜು ಚಡಪಡಿಸುತ್ತಿದ್ದಾನೆ. ಒಂದು ಗಂಟೆ ನಿತ್ರಾಣನಾದಂತೆ ಕಾಯುತ್ತಿದ್ದಾನೆ. ಬಾಗಿಲು ತೆರೆದ ಶಬ್ದ ಮಗುವಿನ ಮೆಲ್ಲನೆ ಅಳು. ಹೊರಗೆ ಬಂದ ನರ್ಸ್ ಮಗುವನ್ನು ಎತ್ತಿ ತಂದಿದ್ದಾಳೆ. ರಂಗರಾಜು ನೀವೇನಾ. ಕಂಗ್ರಾಟ್ಸ್ ನಿಮಗೆ ಗಂಡುಮಗು ಆಗಿದೆ. ಬಾಣಂತಿಗಿನ್ನು ಪ್ರಜ್ಞೆ ಬಂದಿಲ್ಲ. ಆದರೂ ಒಳಗೆ ಬನ್ನಿ. ಲೇಬರ್ ವಾರ್ಡಿನ ಸರೋಜಳ ಮಂಚನ ಹತ್ತಿರ ಹೋದ. ನರ್ಸ್ ಜೊತೆಯಲ್ಲಿದ್ದಾಳೆ. ಮಗು ಅಳುತ್ತಿದೆ. ಸರೋಜಳಿಗೆ ಪ್ರಜ್ಞೆ ಬಂದಿದೆ. ಒಮ್ಮೆಲೇ ಡಾಕ್ಟರ್.. ಡಾಕ್ಟರ್ ಎಲ್ಲಿದ್ದೀರಾ ನನ್ನ ಮಗು ಎಲ್ಲಿ. ನನ್ನ ಮಗುಗೆ ಕಣ್ಣು ಕಾಣಿಸುತ್ತಿದಿಯಾ?” ಸರೋಜ ಚಡಪಡಿಸಿದಳು. ರಂಗÀರಾಜುನೂ ಇದೇ ಪ್ರಶ್ನೆಯನ್ನೇ ಕೇಳಿದ. ಡಾಕ್ಟರ್ ಸಮಾಧಾನದಿಂದಲೇ ಹೇಳಿದರು. ”Don’t think he is blind.”ಇಬ್ಬರ ಕಣ್ಣಾಲಿಗಳಿಂದ ಕಣ್ಣೀರು ಹರಿಯುತ್ತಿದೆ. ನರ್ಸ್ ಮಡಿಲಲ್ಲಿ ಮಗು ಮೆಲ್ಲಗೆ ಕಣ್ಣರಳಿಸಿ ನಗುತ್ತಿದೆ…
******
3 thoughts on “ಕತ್ತಲ ರಾಜ್ಯದ ಕೂಸು”
ಚೆನ್ನಾಗಿದೆ
ಕಗ್ಗತ್ತಲೆಯ ನಾಡಿನಲ್ಲಿ ಕತ್ತಲ ರಾಜ್ಯದ ಕೂಸು ಅಂಧ ತಂದೆ – ತಾಯಿಗಳಿಗೆ ಭರವಸೆಯ ಬೆಳಕಾಗಿ ಜನಿಸುವ ಮಗುವಿನ ಕಥೆಯು ಸುಖಾಂತ್ಯ ಕಂಡಿದ್ದು ಅದ್ಭುತವಾಗಿದೆ.
ಕಣ್ಣಿಲ್ಲದವರ ಒಳಗಿನ ಬೇಗುದಿಯನ್ನು ಕತೆ ಅನಾವರಣಗೊಳಿಸುತ್ತದೆ. ಹೆರಿಗೆ ಸುಸೂತ್ರವಾಗಿ ಜಗತ್ತಿನ ಬೆಳಕನ್ನು ಕಾಣುವ ಮಗು ಹುಟ್ಟಿದ್ದು, ನಿಟ್ಟುಸಿರು ಬಿಡುವಂತಾಯಿತು. ಕತೆ ಚೆನ್ನಾಗಿದೆ.