ಅಂಬೆಯ ಪ್ರೇಮದ ಪರಿಯೇ ಬೇರೆ
ಚೆಲುವೆ ಹೆಣ್ಣು ಮಗಳು
ಸಾಲ್ವನ ಅಂದಕೆ ಮನ ಸೋತವಳು
ಇನ್ನಾರಿಗೂ ಸಿಗಳು!
ಕ್ಷತ್ರಿಯ ಪ್ರತಿಷ್ಠೆ ಎದುರು ನಿಂತಾಗ
ಭೀಷ್ಮ ರೂಪದಲ್ಲಿ
ಕೇಳಿದಳವಳು ಹೇ ಪರಾಕ್ರಮಿ
ಒಲವಿಗೆ ಎಡೆ ಎಲ್ಲಿ?
ಅವಳ ಪ್ರೇಮಕಥೆ ಕೇಳಿದ ಭೀಷ್ಮ
“ಒಪ್ಪಿದೆ ಎಲೆ ಮಗಳೆ”
“ನೀನು ಅವನವಳು.ಸುಖವಾಗಿರಮ್ಮ,
ಕಳುಹಿಸಿ ಕೊಡುತಿರುವೆ”
ಸಾಲ್ವ ಒಪ್ಪುವನೆ? “ಅಸಾಧ್ಯ,ಹೆಣ್ಣೇ”
“ಅಂದು ಸೋತೆ ನಾನು”
“ಭೀಷ್ಮನ ಭಿಕ್ಷೆಗೆ ಬಾಯೊಡ್ದುವೆನೇ?
ಕ್ಷತ್ರಿಯ!ಸತ್ತೇನು!”
ಗೊತ್ತೇ ಇದೆ ಕಥೆ. ಅಂಬೆ ವಾಪಸು.
ಒಲವಿಗೆ ನೆಲೆಯಿಲ್ಲ.
ಅಲೆದಳು ಅಲ್ಲಿಂದಿಲ್ಲಿಗೆ ಅಲ್ಲಿಗೆ
ಒಲವಿಗೆ ಬೆಲೆಯಿಲ್ಲ
ಅಂಬೆಯ ಪ್ರೀತಿ ಮಗುಚಿ ಹಠಾತ್ತನೆ
ಕುರುಡು ದ್ವೇಷವಾಗಿ
ಧಗಧಗಿಸುವ ಉರಿಗಾಹುತಿಯಾದಳು
ಘೋರ ಮಾತನಾಡಿ
ಮುಗ್ಧೆಯ ಪ್ರೇಮದ ಪರಿಯಿಂತಾಯಿತು
ಚೆಲುವೆ ಹೆಣ್ಣುಮಗಳು
ಎಲ್ಲರ ಮಗ್ಗುಲ ಮುಳ್ಳಾಗಿ ಬಿಟ್ಟಳು
ಇಂದೂ ನೋಯಿಸುವಳು
******
8 thoughts on “ಅಂಬೆಯ ಪ್ರೀತಿ”
ಅಂಬೆ ಹೀಗೆಯೇ ಕಾಡುತ್ತಿರುತ್ತಾಳೆ, ಪ್ರೀತಿ-ಪ್ರತಿಷ್ಠೆಯ ಇರ್ಬಾಯ ಖಡ್ಗವಾಗಿ. ಚಿಂತಾಮಣಿ ಕೊಡ್ಲಕೆರೆಯವರ ಕವಿತೆ ಚೆನ್ನಾಗಿದೆ.
ಸರಳ ಕವಿತೆ.
ಆದರೆ ಧ್ವನಿ ಗಟ್ಟಿಯಾಗಿದೆ.
ಇಷ್ಟವಾಯ್ತು
ಅಂಬೆಯ ಕಥೇಯೇ ಒಂದು ರೀತಿಯ ಗೊಂದಲ. ಪುರುಷರ ಒಣ ಪ್ರತಿಷ್ಠೆಗೆ ಬಲಿಯಾದಳೇ? ಯಾರದು ಸರಿ ಯಾರದು ತಪ್ಪು? ಚರ್ಚಾರ್ಹ ವಸ್ತು. ಕವನ ಚೆನ್ನಾಗಿದೆ.
ಸದಾ ಕಾಡುತ್ತಲೇ ಇರುವಳು ಸುಂದರ ಕವನ
ಎಲ್ಲರ ಮಗ್ಗುಲ ಮುಳ್ಳಾದಳು. ಪಾಪ ನ್ಯಾಯ ಸಿಗಲಿಲ್ಲ. ತುಂಬ ಚೆನ್ನಾಗಿದೆ ವಸ್ತು ವಿಶ್ಲೇಷಣೆ.
“ಭೀಷ್ಮನ ಭಿಕ್ಷೆಗೆ ಬಾಯೊಡ್ದುವೆನೇ?
ಕ್ಷತ್ರಿಯ!ಸತ್ತೇನು!”
ಪೌರುಷದ ಅಹಂಕಾರಕ್ಕೆ ಆಹಾರವಾದ ಹೆಣ್ಣು… ಧ್ವನಿಪೂರ್ಣ ಪ್ರಸ್ತುತಿ ಸರ್
ಯಕ್ಷಗಾನ ಪ್ರಿಯರ ಸಂಚಿ ಯಲ್ಲಿ ಒಂದು ಶಾಶ್ವತ ಪ್ರಸಂಗ – – ಬೇಕೆಂದಾಗಲೆಲ್ಲ ಚಿಂತನೆಗೆ ಕವಳ ಆಗುವಂಥಾದ್ದು 🤗
ಪ್ರೇಮ ,ಸೋಲು ಒಟ್ಟಾಗಿ ಸಂಭವಿಸದ್ದರಿಂದಲೋ ಏನೋ- ವಿಷಯ ಕವಿ ಹೃದಯಕ್ಕೆ ವಸ್ತುವಾಗಿ – ನೀಳ ಕವಿತೆಯಾಗಿ / ಮನಸ್ಸ್ಸಿಗೂ ಬುದ್ಧಿಗೂ ತಟ್ಟಿತು – ಮಹಾಭಾರತದಲ್ಲೊಂದು ವಿಶಿಷ್ಟ ಘಟನೆ – ಕುರುಕ್ಷೆತ್ರಕ್ಕೂ ನಾಂದಿ 🙏🤗
ಅಂಬೆಯ ಪ್ರೀತಿ ಪ್ರತಿಷ್ಠೆಯ ಉರಿಯಲ್ಲಿ ಕಮರಿತು ಮಹಾಭಾರತದಲ್ಲಿ ಸದಾ ಕಾಡುವಳು ಅಂಬೆ ಕಲಿಯುಗದ ಅಂಬೇಯರ ಪ್ರೀತಿ ಜಾತಿ ಧರ್ಮಗಳ ಪ್ರತಿಷ್ಠೆಯ ಉರಿಯಲ್ಲಿ ಕಮರುವುದು ಕವನ 👌