ಬೆಲೆ ಕಟ್ಟಲಾಗದ ಉಡುಗೊರೆ

ಬೆಳಿಗ್ಗೆ ಮಂತ್ರಗಳನ್ನೆಲ್ಲಾ ಪಠಿಸಿ ಪೂಜೆ ಮುಗಿಸಿ ದಿನಪತ್ರಿಕೆ ಓದಲು ಕುಳಿತರು ರಾಮರಾಯರು. ಕಾಲಿಂಗ್ ಬೆಲ್ ಶಬ್ದ ಕೇಳಿ ಹೋಗಿ ಬಾಗಿಲು ತೆಗೆದರು. ಎದುರಿಗೆ ಒಬ್ಬ ಯುವಕ ಮದುವೆ ಕರೆಯೋಲೆಗಳೊಂದಿಗೆ ನಿಂತಿದ್ದ. “ ಚೆನ್ನಾಗಿದ್ದೀರಾ ಮೇಷ್ಟ್ರೇ” ಎಂದು ಕೇಳಿದ. ವಯೋಮಾನದ ಪ್ರಭಾವದಿಂದಾಗಿ ಗುರ್ತು ಹಿಡಿಯದೆ ಏನು ಹೇಳಬೇಕೆಂದು ಗೊತ್ತಾಗದೇ “ಒಳಗೆ ಬಾರಪ್ಪ…..” ಎಂದು ಕರೆದರು ರಾಯರು. ಒಳಗೆ ಬಂದ ಯುವಕ ಸೋಫದ ಮೇಲೆ ಆಸೀನನಾದ ರಾಯರು ಎದುರಿಗೆ ಇದ್ದ ಕುರ್ಚಿಯಲ್ಲಿ ಕೂತು ಆಲೋಚಿಸಿದರು. ಆ ಯುವಕ ಯಾರಿರಬಹುದೆಂದು. ಮನೆಗೆ ಬಂದವರ ಅತಿಥಿ ಸತ್ಕಾರ ನೆನಪಾಗಿ ಕುಡಿಯಲಿಕ್ಕೆ ನೀರು ಏನಾದರೂ ಬೇಕಾ? ಎಂದು ಕೇಳಿದರು. ನಯವಾಗಿ “ಬೇಡ” ಎಂದುತ್ತರಿಸಿದ ಯುವಕ.

ಒಂದೆರಡು ಕ್ಷಣದ ಬಳಿಕ ಯುವಕನೇ ಪ್ರಶ್ನಿಸಿದ.“ ನನ್ನನ್ನು ಗುರುತಿಸಿದಿರಾ ಗುರುಗಳೇ”… ಎಂದನು. ರಾಯರು ತಲೆ ಕೆರೆದುಕೊಂಡರು. ಕಣ್ಣನ್ನು ಚಾಳೀಸಿನೊಳಿಗಿಂದ ಮತ್ತಷ್ಟು ಹಿಗ್ಗಿಸಿ ನೋಡಿದರು. “ಉಹೂಂ…. “ನೆನಪಾಗ್ತಿಲ್ಲ. ಅದನೆಲ್ಲಾ ಗಮನಿಸಿದ ಯುವಕ ನಗುತ್ತಾ “ನಾನು ವಾದಿರಾಜ್, ನಿಮ್ಮ ಸ್ಕೂಲಲ್ಲಿ ಓದಿದ್ದೀನಿ.  ಸ್ಕೂಲಿನ ಪಕ್ಕದಲ್ಲಿದ್ದ ಬ್ಯಾಂಕಿನ ಮ್ಯಾನೇಜರ್ ಆಗಿ ನಮ್ಮ ತಂದೆ ಕೆಲಸ ಮಾಡುತ್ತಿದ್ದರು… ಎಂದ.”

ಆಗ ನೆನಪಾಯ್ತು. ವಾದಿರಾಜ್ ಅತ್ಯಂತ ಒಳ್ಳೇ ವಿದ್ಯಾರ್ಥಿ. ಕ್ಲಾಸಿಗೆ ಯಾವಾಗಲೂ ಫಸ್ಟ್ ಬರುತ್ತಿದ್ದ, ನಯ, ವಿನಯ ಪ್ರತಿಭೆಯ ಸಮ್ಮಿಲನ ವಾದಿರಾಜ್. ಅವನನ್ನು ಸ್ಕೂಲಿಗೆ ಸೇರಿಸಿದ ದಿನ ಬಂದು ಅವರ ತಂದೆ ಬ್ಯಾಂಕ್ ಮ್ಯಾನೇಜರ್ ರಾಮರಾಯರನ್ನು ಭೇಟಿ ಮಾಡಿದರು. “ ಮಾಷ್ಟ್ರೇ…. ನನ್ನ ಮಗ ಚೆನ್ನಾಗಿ ಓದಿ ಅಭಿವೃದ್ಧಿಗೆ ಬರಬೇಕು ಅಂತ ನನ್ನಾಸೆ. ಮ್ಯಾನೇಜರ್ ಮಗ ಅಂತ ನೀವು ಕನಿಕರ ತೋರಿಸದೆ ತಪ್ಪು ಮಾಡಿದ್ರೆ ಒದ್ದು ಗುಣಪಾಠ ಹೇಳಿ ಕೊಡಿ” ಎಂದು ನಿಸ್ಸಂಕೋಚವಾಗಿ ಮನಸ್ಸಿನಲ್ಲಿದ್ದ ಮಾತು ಹೊರಹಾಕಿದ್ದರು.  ಬ್ಯಾಂಕ್ ಮ್ಯಾನೇಜರ್. ಆಗ ರಾಮರಾಯರು ಸ್ಕೂಲಲ್ಲಿ ಹೆಡ್ ಮಾಷ್ಟ್ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮಕ್ಕಳಿಗೆ ಸೈನ್ಸ್ ಮತ್ತು ಗಣಿತ ಹೇಳಿ ಕೊಡುತ್ತಿದ್ದರು.

ಆದರೆ ವಾದಿರಾಜನನ್ನು ಎಂದೂ ಶಿಕ್ಷೆಗೆ ಒಳಪಡಿಸುವ ಪ್ರಸಂಗ ಓದಲಿಲ್ಲ. ಯಾಕೆಂದರೆ ಅವನು ಚೆನ್ನಾಗಿ ಓದುತ್ತಿದ್ದ. ಅಲ್ಲದೆ ಅವನಿಗೆ ಗಣಿತದ ಮೇಲೆ ಹೆಚ್ಚು ಆಸಕ್ತಿಯಿದೆ ಎಂದು ಮನಗಂಡ ರಾಮರಾಯರು ಮತ್ತಷ್ಟು ಉತ್ಸಾಹದಿಂದ ಅವನಿಗೆ ಗಣಿತ ಕಲಿಸಿಕೊಡುತ್ತಿದ್ದರು. ಉಭಯ ಕುಶಲೋಪರಿ ಆದ ಬಳಿಕ ವಾದಿರಾಜ್ ತಾನು ಬಂದ ಕಾರಣ ಹೇಳಿದ. “ಮೇಷ್ಟ್ರೇ… ಬರೋ ಇಪ್ಪತ್ತನೇ ತಾರೀಖು ನಮ್ಮ ಹಳ್ಳಿಯಲ್ಲಿ ಮದುವೆ.. ರಿಸಿಪ್ಷನ್ನು ಮರುದಿನ ಸಂಜೆ ಇದೇ ಊರಲ್ಲೇ! ನೀವು ಮತ್ತು ಅಮ್ಮ ಮದುವೆಗೆ ತಪ್ಪದೆ ಒಂದು ಆಶೀರ್ವದಿಸಬೇಕು. ನೀವು ಯಾವ ಸಮಯದಲ್ಲಿ ಬರುತ್ತೀರೋ ಹೇಳಿದರೆ ತಾವು ಮದುವೆಗೆ ಬರಲು ಹಾಗೂ ಹಿಂದಿರುಗಲು ಕಾರೊಂದನ್ನು ಏರ್ಪಾಟು ಮಾಡಿ ಕಳುಹಿಸುತ್ತೇನೆ” ಎಂದ ವಾದಿರಾಜ ಸವಿನಯವಾಗಿ.

ಮದುವೆ ಕರೆಯೋಲೆ ತೆಗೆದು ನೊಡಿದರು ರಾಮರಾಯರು. ರಾತ್ರಿ 10.30ಕ್ಕೆ ಮುಹೂರ್ತ!. “ನನ್ನ ಅನಾರೋಗ್ಯದ ದೃಷ್ಟಿಯಿಂದ ರಾತ್ರಿ ಪ್ರಯಾಣ ಮಾಡಬಾರದು ಎಂದುಕೊಂಡಿದ್ದೇನೆ. ಅದರೆ ರಿಸಿಪ್ಷನ್‍ಗೆ ಖಂಡಿತ ಬರುತ್ತೇವೆ” ಎಂದರು ರಾಮರಾಯರು. “ಮದುವೆಗೆ ಬಂದಿದ್ದರೆ ಚೆನ್ನಾಗಿರುತ್ತಿತ್ತು ಮೇಷ್ಟ್ರೇ…. ಓಕೆ ಆಗಲಿ. ರಿಸಿಪ್ಷನ್‍ಗೆ ತಪ್ಪಿಸಬೇಡಿ ಎಂದು ರಾಯರಿಂದ ಪ್ರಾಮಿಸ್ ಮಾಡಿಸಿಕೊಂಡು ಎದ್ದ ವಾದಿರಾಜ. “ನೀನು ಯಾವ ಕಾರು ಕಳಿಸಬೇಡ. ನಾವು ಸಂಜೆಯ ರಿಸಿಪ್ಷನ್‍ಗೆ ಖಂಡಿತ ಬರುತ್ತೇವೆ “ ಎಂದರು ರಾಮರಾಯರು ವಾದಿರಾಜನುದ್ದೇಶಿಸಿ. ದಂಪತಿಗಳಿಗೆ ನಮಸ್ಕಾರ ಮಾಡಿ ಹೊರಟ ವಾದಿರಾಜ.

ಇನ್ನೊಂದೆರಡು ದಿನದಲ್ಲಿ ಮದುವೆ ರಿಸಿಪ್ಷನ್ ಇದೆ ಎಂದು ನೆನಪಿಸಿದರು. ರಾಮರಾಯರ ಹೆಂಡತಿ ಸುಭದ್ರಾ. “ಉಡುಗೊರೆ ಏನನ್ನು ಕೊಡೋಣ”? ಎಂದು ಪ್ರಶ್ನಿಸಿದರು. “ವಾದಿರಾಜ್‍ರದು ಧನಿಕ ಕುಟುಂಬ ಅಲ್ಲದೆ ಲಕ್ಷಾಂತರ ಸಂಬಳ ಬರುವ ದೊಡ್ಡ ಹುದ್ದೆಯಲ್ಲಿದ್ದಾನೆ. ಅವನ ಲೆವೆಲ್‍ಗೆ ಉಡುಗೊರೆ ಕೊಡೋದು ಈ ನಿವೃತ್ತಿ ಶಿಕ್ಷಕನಿಂದಾಗುವುದಿಲ್ಲ. ಬಹಳ ಹೊತ್ತು ಆಲೋಚಿಸಿ ಒಂದು ನಿರ್ಧಾರಕ್ಕೆ ಬಂದು ಮಡದಿ ಸುಭದ್ರಗೆ ಹೇಳಿದರು ತನ್ನ ಉದ್ದೇಶ ಏನೆಂದು. “ಸರಿ ಹಾಗೆ ಮಾಡೋಣ” ಎಂದುತ್ತರಿಸಿದರು ಸುಭದ್ರ. ರಿಸಿಪ್ಷನ್‍ಗೆ ದಂಪತಿಗಳಿಬ್ಬರೂ ಹಾಜರಾದರು.

ವಾದಿರಾಜನ ಅನೇಕ ಸ್ನೇಹಿತರು ಮತ್ತು ರಾಮರಾಯರ ಹಳೆಯ ವಿದ್ಯಾರ್ಥಿಗಳು ಬಂದು ಮಾತನಾಡಿಸಿದರು. ಮೇಷ್ಟ್ರನ್ನ ವಾದಿರಾಜನ ತಂದೆ, ನಿವೃತ್ತಿ ಬ್ಯಾಂಕ್ ಮ್ಯಾನೇಜರ್ ಬಂದು ಆರೋಗ್ಯವನ್ನು ವಿಚಾರಿಸಿ ನಂತರ ರಿಸಿಪ್ಷನ್‍ಗೆ ದಂಪತಿ ಸಮೇತ ಬಂದುದಕೆ ಧನ್ಯವಾದ ಹೇಳಿದರು. ರಿಸೆಪ್ಷನ್ ಆರಂಭಗೊಂಡ ಬಳಿಕ ದಂಪತಿಗಳು ವೇದಿಕೆಯನ್ನೇರಿ ವಧು-ವರರಿಗೆ ಆಶೀರ್ವದಿಸಿದರು. ವಾದಿರಾಜನ ಕೈಗೆ ರಾಮರಾಯರು ತಾವು ತಂದಿಟ್ಟ ಕವರ್ ನೀಡಿದರು.

ಅದರಲ್ಲಿ ಹೀಗೆ ಬರೆದಿದ್ದರು.

ಚಿ|| ವಾದಿರಾಜ್‍ಗೆ…. ಆಶೀರ್ವಾದಗಳು.

ಈ ಸಮಯದಲ್ಲಿ ಇದೇನಿದು ಪತ್ರ ಎಂದು ಸೋಜಿಗವಾಗಬಹುದು ನಿನಗೆ. ಆದರೆ ನಿನ್ನಂತೆ ಉನ್ನತವಾದ ಸ್ಥಾನವನ್ನು ಗಳಿಸಲು ಪ್ರಾಥಮಿಕ ಶಾಲೆಯಲ್ಲಿ ಹಾಕಿದ ಭದ್ರ ಬುನಾದಿ ಕಾರಣ ಎಂದು ಎಷ್ಟು ಜನ ಜ್ಞಾಪಿಸಿಕೊಳ್ಳುತ್ತಾರೆ? ಅಂಥದರಲ್ಲಿ ನೀನು ಪ್ರಾಥಮಿಕ ಶಾಲೆಯ ಶಿಕ್ಷಕನನ್ನು ನೆನಪಿಸಿಕೊಂಡು ಮನೆಗೆ ಬಂದು ಮದುವೆ ಕರೆಯೋಲೆ ಕೊಟ್ಟು ಆಹ್ವಾನಿಸಿದ್ದು ನಿಜಕ್ಕೂ ಸಂತೋಷ ತಂದಿದೆ ನನಗೆ. ಈ ವೃದ್ಯಾಪ್ಯದಿಂದಾಗಿ ನಾನು ಬಂಧುಗಳ ಅನೇಕ ಮದುವೆಗಳಿಗೆ  ಹಾಜರಾಗಲಿಲ್ಲ. ಆದರೆ ಯಾಕೋ ನಿನ್ನ ವಿಷಯದಲ್ಲಿ ನಿರಾಸೆಯುಂಟು ಮಾಡಲು ಮನಸ್ಸಾಗಲಿಲ್ಲ ನೀನು ಆಗಿನ ನನ್ನ ಪ್ರೀತಿಯ ವಿದ್ಯಾರ್ಥಿಯಾಗಿದ್ದು ಹಾಗೂ ನಿಮ್ಮ ತಂದೆಯ ಮೇಲಿದ್ದ ಗೌರವದಿಂದ ಹಾಜರಾದೆ, ಅದೂ ದಂಪತಿಯೊಂದಿಗೆ.

ನಿನಗೆ ಏನು ಉಡುಗೊರೆ ಕೊಡಬೇಕು? ಹಾಗೆ ಕೊಟ್ಟಿದ್ದು ಬೇರೆಯವರಿಗೂ ಉಪಯೋಗವಾಗಿರಬೇಕು ಅಂತ ನನ್ನ ವೈಯಕ್ತಿಕ ಅಭಿಪ್ರಾಯ.ಸದ್ಯ ನಿವೃತ್ತನಾಗಿ ಪಿಂಚಣಿ ತೆಗೆದುಕೊಳ್ಳುತ್ತಿರುವ ನಾನು ನಿನಗೇನು ಕೊಡಬೇಕು ಅಂತ ರಾತ್ರಿ ಯೆಲ್ಲ ಆಲೋಚಿಸಿದೆ.  ವಸ್ತುಗಳನ್ನು ಕೊಡೋಣವೆಂದರೆ ನಿನ್ನಲ್ಲಿ ಆಗಲೇ ಸಾಕಷ್ಟಿರುತ್ತವೆ. ಅಲ್ಪ ಹಣವನ್ನು ಉಡುಗೊರೆಯಾಗಿ ಕೊಡೋಣವೆಂದರೆ ನಿನ್ನ ಲೆವೆಲ್‍ಗೆ ತುಂಬಾ ಕಡಿಮೆ ಎನಿಸಿತು. ಹೀಗಾಗಿ ಕೊನೆಗೊಮ್ಮೆ ನಿರ್ಧಾರ ಮಾಡಿ ಇದರ ಜೊತೆಯಲ್ಲಿರಿಸಿದ ರಸೀದಿಯೇ ನಿನಗೆ ನಾನು ಕೊಡುವ ಮದುವೆ ಉಡುಗೊರೆ .ನೀನು ನಿನ್ನ ಹೆಂಡತಿ ಸುಖವಾಗಿ ಸಂತೋಷವಾಗಿ ನೂರು ಕಾಲ ಬಾಳಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.

                                                                                                         ಆಶೀರ್ವಾದದೊಂದಿಗೆ,

                                                                                                            ನಿನ್ನ ಮೇಷ್ಟ್ರು

                                                                                                ರಾಮರಾಯರು

ಊಟದ ಬಳಿಕ ಬಲವಂತದಿಂದ ವಾದಿರಾಜನ ತಂದೆ-ತಾಯಿಂದಿರು ರಾಮರಾಯರ ದಂಪತಿಗೆ ವಸ್ತ್ರಗಳ ಉಡುಗೊರೆ ನೀಡಿದರು. ಬೇಡವೆಂದರೆ ವಾದಿರಾಜ ಬೇಜಾರು ಮಾಡಿಕೊಳ್ತಾನೆ ಅಂತ ಹೇಳಿ ಒತ್ತಾಯ ಮಾಡಿದರು. ನಂತರ ಬೇಡ ಬೇಡವೆಂದರೂ ಕಾರೊಂದರಲ್ಲಿ ದಂಪತಿಗಳನ್ನು ಮನೆಗೆ ತಲುಪಿಸಿದರು. ಸುಮಾರು ಒಂದೂವರೆ ತಿಂಗಳ ಬಳಿಕ ರಾಮರಾಯರಿಗೊಂದು ಕವರ್ ಬಂತು. ಒಡೆದು ಓದಿದರೆ ಅದು ವಾದಿರಾಜ ಬರೆದಿದ್ದು.

ನನ್ನ ಪ್ರೀತಿಯ ಮೇಷ್ಟ್ರೇ,

ಅನಂತಾಂನಂತ ನಮಸ್ಕಾರಗಳು.

ನನ್ನ ರಿಸಿಪ್ಷನ್‍ಗೆ ಶಿವ-ಪಾರ್ವತಿಯಂತೆ ದಂಪತಿಗಳಿಬ್ಬರು ಬಂದು ಹರಿಸಿದ್ದಕ್ಕೆ ತುಂಬಾ ಸಂತೋಷವಾಯ್ತು. ಆ ದಿನ ನೀವು ಕವರಿನಲ್ಲಿ ಇಟ್ಟುಕೊಟ್ಟ ಬಹುಮಾನ ನಿಜಕ್ಕೂ ಬೆಲೆ ಕಟ್ಟಲಾಗದು ಮೇಷ್ಟ್ರೇ! ಹೀಗೆ ಕೂಡಾ ಗಿಪ್ಟ್ ಕೊಡಬಹುದೆಂಬ ಆಲೋಚನೆ ಬರೋದು ಕೇವಲ ಉನ್ನತ ವ್ಯಕ್ತಿಗಳಿಗೆ ಮಾತ್ರ ಬರಲು ಸಾಧ್ಯ.

ರೂ.1001/-ನ್ನು ಅನಾಥ ಶರಣಾಲಯಕ್ಕೆ ನನ್ನ ಹೆಸರಿನಲ್ಲಿ ದೇಣಿಗೆ ನೀಡಿ ಅದರ ರಸೀದಿಯನ್ನು ನನಗೆ ಉಡುಗೊರೆಯಾಗಿ ನೀಡಿದಿರಿ. ನನ್ನ ಮದುವೆ ರಿಸಿಪ್ಷನ್‍ನಲ್ಲಿ ಬಂದ ನೂರಾರು ಉಡುಗೊರೆಗಳಲ್ಲಿ ಇದು ಅತ್ಯಂತ ಬೆಲೆಯುಳ್ಳದ್ದು ಎಂದು ಭಾವಿಸುತ್ತೇನೆ. ಪರಿಪೂರ್ಣ ಮನುಷ್ಯ ಹೇಗಿರಬಹುದೆಂದು ನಿಮ್ಮನ್ನು ನೋಡಿದರೆ ಸಾಕು ಗೊತ್ತಾಗುತ್ತದೆ. ನೀವು ನನಗೊಬ್ಬ ರೋಲ್ ಮಾಡೆಲ್ ನಾನು ಸ್ಕೂಲಲ್ಲಿ ಓದುವಾಗಷ್ಟೆ ಅಲ್ಲ ಈಗಲೂ ಕೂಡ. ಶಾಲೆಯ ಆಟಗಳಲ್ಲಿ ಗೆದ್ದವರಿಗೆ ತಾವು ಕಪ್ಪುಗಳನ್ನು, ಮೆಡಲ್ಸ್‍ಗಳನ್ನು ನೀಡುತ್ತಿದ್ರಿ. ಅದೇ ರಸಪ್ರಶ್ನೆಗಳಲ್ಲಿ , ಪ್ರಬಂಧ ಸ್ಪರ್ಧೆಗಳಲ್ಲಿ ಗೆದ್ದವರಿಗೆ ಪುಸ್ತಕಗಳನ್ನು ಬಹುಮಾನ ರೂಪದಲ್ಲಿ ಕೊಡ್ತಾ ಇದ್ರಿ. ಅವು ಜಿ.ಕೆಗೆ ಸಂಬಂಧಿಸಿದ್ದು ಅಥವಾ ಮಹನೀಯರ ಜೀವನ ಚರಿತ್ರೆಗಳು , ಆತ್ಮ ಕಥೆಗಳು ಆಗಿರುತ್ತಿದ್ದವು.

ಹತ್ತು-ಹನ್ನೆರಡು ದಿವಸಗಳ ಬಳಿಕ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಪುಸ್ತಕಗಳಿಗೆ ಸಂಬಂಧಿಸಿ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಿರಿ. ಇದರ ಉದ್ದೇಶ ಆ ವಿದ್ಯಾರ್ಥಿ ಆ ಪುಸ್ತಕವನ್ನು ಓದಿದ್ದಾನೋ, ಇಲ್ಲವೋ ತಿಳಿದುಕೊಳ್ಳುವುದರ ಜೊತೆ ಆ ಪುಸ್ತಕ ವಿದ್ಯಾರ್ಥಿಯನ್ನು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದು ಅರಿಯಲು. ಮೊದಲು ತಮ್ಮ ಉದ್ದೇಶ ಅರ್ಥವಾಗದೆ ಬಹುಮಾನ ಯಾಕಾದರೂ ಬಂತಪ್ಪ ಅಂತ ಪೇಚಾಡಿಕೊಳ್ಳುತ್ತಿದ್ದೇವು. ಆದರೆ ಬರ ಬರುತ್ತಾ ಒಳ್ಳೇಯ ಪುಸ್ತಕಗಳನ್ನು ಓದುವುದರಿಂದ ನಮ್ಮ ಮನಸ್ಸಿಗೆ- ಭವಿಷ್ಯಕ್ಕೆ ಎಷ್ಟು ಉಪಯೋಗ ಅಂತ ಅರಿತೆವು.

ಈಗ ಉದ್ಯೋಗ ನಿಮಿತ್ತ ಬಹಳಷ್ಟು ಸಮಯ ರೈಲು -ವಿಮಾನಗಳ ಮೂಲಕ ಪಯಣಿಸುತ್ತೇನೆ. ಆದರೆ ನನ್ನ ಜೊತೆ ಅತ್ಯುತ್ತಮ ಪುಸ್ತಕಗಳಿರುತ್ತವೆ. ಹೀಗಾಗಿ ನನ್ನದು ಎಂದೂ ಒಂಟಿ ಪ್ರಯಾಣ ಅಂತ ಅನಿಸುತ್ತಿಲ್ಲ. ಆ ಪುಸ್ತಕಗಳು ನನ್ನ ಕೆಲಸಕ್ಕೆ ನೆರವಾಗುವದರ ಜೊತೆ ನಿತ್ಯವೂ ನಾನು ಪ್ರಫುಲ್ಲವಾಗಿ ಇರಲು ನೆರವಾಗ್ತಿವೆ.

ಸಮಯ ಪಾಲನೆಗೆ ತಾವು ಮತ್ತೊಂದು ಹೆಸರೆಂದು ನಾನು ಚಿಕ್ಕಂದಿನಿಂದ ಬಲ್ಲೆ. ಅದರ ಜೊತೆಗೆ ಸಹೋದ್ಯೋಗಿಗಳನ್ನು ಸೋದರರಂತೆ ಕಾಣುವ ಹೃದಯ ವೈಶಾಲ್ಯತೆ ತಮಗಿದೆ ಎಂದು ನನಗೆ ಗೊತ್ತು. ನಾನು ಜೀವನದಲ್ಲಿ ಎತ್ತರಕ್ಕೆ ಏರಲು ಕಾರಣ ನೀವು. ನನ್ನ ಭವಿಷ್ಯಕ್ಕೆ ಸ್ಕೂಲಿನಲ್ಲಿ ಅತ್ಯುತ್ತಮ ಅಡಿಗಲ್ಲು ಹಾಕಿ ನನ್ನನ್ನು ಉತ್ತಮ ಪ್ರಜೆಯಾಗಿಸಿದಿರಿ.

ಬಹುಮಾನಗಳನ್ನು ವಿವಿಧ ರೀತಿಯಲ್ಲಿ ಎಲ್ಲರೂ ಕೊಡುತ್ತಾರೆ. ಆದರೆ ಆ ಬಹುಮಾನ ಇನ್ನೊಬ್ಬರ ಬದುಕಿಗೆ ನೆರವಾಗುವಂತಹುದು ಎಷ್ಟು ಜನ ಕೊಡುತ್ತಾರೆ. ನಿಮ್ಮ ಬಹುಮಾನ ನನ್ನ ದೃಷ್ಟಿಕೋನವನ್ನೇ ಬದಲಿಸಿದೆ. ಏಕೆಂದರೆ ನನಗೆ ಕೊಟ್ಟ ಬಹುಮಾನ ಅನಾಥಶ್ರಮಕ್ಕೆ ನನ್ನ ಹೆಸರಿನಲ್ಲಿ ನೀವು ನೀಡಿದ ದೇಣಿಗೆಯ ರಸೀದಿ!

ನೀವು ಹಾಕಿಕೊಟ್ಟ ಹೊಸ ಮಾರ್ಗದಲ್ಲಿ ನಾನು ನಡೆದೆ. ಒಂದು ವಾರದ ಹಿಂದೆ ಮದುವೆಯದ ನನ್ನ ಕಜಿನ್‍ಗೆ ನಿಮ್ಮ ಮಾದರಿಯನ್ನೇ ಅನುಸರಿಸಿದೆ. ಆಗರ್ಭ ಶ್ರೀಮಂತನಾದ ಅವನ ಹೆಸರಲ್ಲಿ ರೂ.25,000/- ಅನಾಥಾಶ್ರಮಕ್ಕೆ ದೇಣಿಗೆ ನೀಡಿ ಆ ರಸೀದಿಯನ್ನು ಮದುವೆ ಉಡುಗೊರೆಯಾಗಿ ಕೊಟ್ಟೆ.

ಅದನ್ನು ಪಡೆದ ಮೇಲೆ ಅವನಿಗಾದ ಸಂತೋಷ ಅಷ್ಟಿಷ್ಟಲ್ಲ. ಅವನು ಹೇಳಿದ ತಾನು ಕೂಡಾ ಇದೇ ಪಥವನ್ನು ತುಳಿಯುತ್ತೇನೆ ಎಂದು ಜೊತೆಗೆ ತನ್ನ ಗೆಳೆಯರಿಗೆ ಕೂಡಾ ಇದರ ಬಗ್ಗೆ ಹೇಳಿ ಈ ದಾರಿ ಹಿಡಿಯಲು ನೆರವಾಗುತ್ತಾನಂತೆ. ಇಂತಹ ವಿಭಿನ್ನ ಆಲೋಚನೆಯಿಂದ ಒಂದು ಹೊಸ ಟ್ರೆಂಡ್ ಹುಟ್ಟು ಹಾಕಿದಿರಿ. ನೀವು ನಮಗೆ ಮೇಷ್ಟ್ರಿದ್ದಾಗ ನಿಮ್ಮ ಬಗ್ಗೆ ಎಷ್ಟು ಅಭಿಮನ ಪಡುತ್ತಿದ್ದೆನೋ. ಈಗ ನೀವು ನಿವೃತ್ತರಾದ ಬಳಿಕ ಅದು ದುಪ್ಪಟ್ಟಾಗಿದೆ.

ನಿಮ್ಮ ಆಶೀರ್ವಾದ ಅನುಗಾಲ ಹೀಗೆ ಇರಲಿ ಮೇಷ್ಟ್ರೇ…….

                                                                                    ನಿಮ್ಮನ್ನೆಂದೆಂದೂ ಮರೆಯದ ಶಿಷ್ಯ

                                                                                                  ವಾದಿರಾಜ.

ಶಿಷ್ಯನ ದೊಡ್ಡ ವ್ಯಕ್ತಿತ್ವಕ್ಕೆ ಮನಸ್ಸಿನಲ್ಲೇ ಸಂತೋಷಗೊಂಡು ಪತ್ರವನ್ನು ಮಡದಿ ಸುಭದ್ರಾಳ ಕೈಗಿತ್ತರು ಓದಲು.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಬೆಲೆ ಕಟ್ಟಲಾಗದ ಉಡುಗೊರೆ”

  1. JANARDHANRAO KULKARNI

    ರಾಘವೇಂದ್ರ ಮಂಗಳೂರು ಅವರ ಅನೇಕ ಕಥೆಗಳನ್ನು ಓದಿದ್ದೇನೆ. ಈ ಕಥೆಯ ಸಂದೇಶ ಅದ್ಭುತವಾದದ್ದು. ಬರೀ ಕತೆಯಾಗಿರದೆ ಎಲ್ಲರಿಗೂ ಒಂದು ಒಳ್ಳೆಯ ಸಂದೇಶ. ಮುಂದೆ ನಾವೆಲ್ಲರೂ ಅನುಸರಿಸಬೇಕಾದ ಅಭ್ಯಾಸ. ಅಭಿನಂದನೆಗಳು.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter