‘ಕತಾರ್ ನಲ್ಲಿ ನಿಯಂತ್ರಣ ಆದರೂ ಮೈಮರೆವಿಲ್ಲ’

ಕತಾರ್‌ನಲ್ಲಿ ಪರಿಸ್ಥಿತಿ ಬಹುತೇಕ ಸಾಮಾನ್ಯ ಸ್ಥಿತಿಗೆ ಬಂದಿದೆ. ಕಳೆದ ತಿಂಗಳು ಪ್ರತಿದಿನ 350-400 ಹೊಸ ಸೋಂಕಿತರು ಪತ್ತೆಯಾಗುತ್ತಿದ್ದರು ಹಾಗೂ 3-4 ಸೋಂಕಿತರು ನಿಧನರಾಗುತ್ತಿದ್ದರು. ಶೇ.60-70 ನಾಗರಿಕರಿಗೆ ಲಸಿಕೆ ನೀಡಲಾಗಿತ್ತು. ಈಗ ಶೇ.80 ಜನರಿಗೆ ಲಸಿಕೆ ನೀಡಲಾಗಿದ್ದು, ಅದಕ್ಕೆ ಅನುಗುಣವಾಗಿ ಸೋಂಕಿನಲ್ಲಿ ಭಾರೀ ಕಡಿತವಾಗಿದೆ. ಸದ್ಯ ಪ್ರತಿದಿನ 100-125 ಹೊಸ ಸೋಂಕಿತರು ಪತ್ತೆಯಾಗುತ್ತಿದ್ದು, ವಾರಕ್ಕೆ 1-2 ಸೋಂಕಿತರು ನಿಧನರಾಗುತ್ತಿದ್ದಾರೆ. ಜೂ.28ರ ಅಂಕಿ ಅಂಶದಂತೆ 118 ಹೊಸ ಸೋಂಕಿತರು ಪತ್ತೆಯಾಗಿದ್ದು, ಯಾರೂ ನಿಧನರಾಗಿಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ಸೋಮಕಿತರ ಸಂಖ್ಯೆಗಿಂತಲೂ ಗುಣಮುಖರಾಗುವವರ ಸಂಖ್ಯೆ ಹೆಚ್ಚಾಗಿದೆ. ಸೋಮವಾರ 145 ಸೋಂಕಿತರು ಗುಣಮುಖರಾಗಿದ್ದಾರೆ. ಇಲ್ಲಿವರೆಗೆ 588 ಸೋಂಕಿತರು ನಿಧನರಾಗಿದ್ದಾರೆ. ಜೂನ್ 25ರಂದು 1,836 ಇದ್ದ ಸಕ್ರಿಯ ಪ್ರಕರಣಗಳ ಸಂಖ್ಯೆ ಇದೀಗ 1,744ಕ್ಕೆ ಇಳಿದಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಕೋವಿಡ್-19 ನಿರ್ಭಂಧಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ಮೇ 28ರಿಂದ ಚಾಲನೆ ನೀಡಲಾಯಿತು. ಜೂ.18ರಿಂದ ಎರಡನೇ ಹಂತದ ಲಾಕ್‌ಡೌನ್ ತೆರವು ಚಾಲ್ತಿಯಲ್ಲಿದೆ. ಜು.9ರಿಂದ ಮೂರನೇ ಹಾಗೂ ಜು.30ರಂದು ಅಂತಿಮ ಹಂತದ ನಿರ್ಬಂಧ ತೆರವುಆರಂಭವಾಗಲಿದೆ.

ಸದ್ಯ 10ಕ್ಕಿಂತ ಕಡಿಮೆ ಜನರು ಒಟ್ಟಿಗೆ ಸೇರಲು ಅವಕಾಶವಿದ್ದು, ಮೂರನೇ ಹಂತದಲ್ಲಿ 40 ಜನರಿಗೆ ಏರಿಕೆ ಆಗಲಿದೆ. ಮಸೀದಿಗಳನ್ನು ತೆರೆಯಲು ಇದ್ದ ನಿರ್ಬಂಧ ಸಡಿಲಗೊಳ್ಳಲಿದ್ದು, ಶುಕ್ರವಾರದ ಪ್ರಾರ್ಥನೆಗೆ 54 ಮಸೀದಿಗಳಲ್ಲಿ ಅವಕಾಶ ನೀಡಲಾಗಿದೆ. ಸದ್ಯ ಅತ್ಯಂತ ಅವಶ್ಯಕತೆ ಇರುವವರು ಮಾತ್ರ ದೋಹಾದಿಂದ ಹೊರಕ್ಕೆ ವಿಮಾನ ಪ್ರಯಾಣ ಮಾಡಬಹುದಾಗಿದ್ದು, ವಾಪಸಾದಾಗ, ಸರ್ಕಾರ ನಿಗದಿ ಪಡಿಸಿದ ಹೋಟೆಲ್ ಕ್ವಾರಂಟೈನ್‌ನಲ್ಲಿ ಶುಲ್ಕ ನೀಡಿ ಎರಡು ವಾರ ಇರಬೇಕು. ಮೂರನೇ ಹಂತದಲ್ಲಿ, ಕೆಲವು ವಿಮಾನಗಳ ಆಗಮನಕ್ಕೆ ಅನುಮತಿ, ಚಾಲನಾ ತರಬೇತಿ ಶಾಲೆಗಳು ಮುರನೇ ಹಂತದಲ್ಲಿ ತೆರಯಲಿವೆ. ವೃತ್ತಿಪರ ತರಬೇತಿಗೆ ಸದ್ಯ ಇರುವ 10 ಜನರ ಗರಿಷ್ಠ ಮಿತಿ ಮೂರನೇ ಹಂತದಲ್ಲಿ 40ಕ್ಕೆ ಹೆಚ್ಚಲಿದೆ. ವೈದ್ಯಕೀಯ ಸಂಸ್ಥೆಗಳು ಸದ್ಯ ಶೇ.60 ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೂರನೇ ಹಂತದಲ್ಲಿ ಶೇ.80ಕ್ಕೆ  ಹೆಚ್ಚಲಿದೆ. ಮಾಲ್‌ಗಳು ನಿಗದಿತ ಸಮಯಗಳಲ್ಲಿ ಮಾತ್ರ ತೆರೆದಿದ್ದು, ಮೂರನೇ ಹಂತದಲ್ಲಿ ಪೂರ್ಣ ಪ್ರಮಾಣದಲ್ಲಿ ತೆರೆಯಲಿವೆ. ಸದ್ಯ ಶೇ.50 ನೌಕರರು ಕೆಲಸ ಮಾಡಬಹುದಾಗಿದ್ದು, ಮೂರನೇ ಹಂತದಲ್ಲಿ ಶೇ.80ಕ್ಕೆ ಹೆಚ್ಚಲಿದೆ.

ಒಟ್ಟಿನಲ್ಲಿ ಹೇಳುವುದಾದರೆ ಕತಾರ್ ಸಾಕಷ್ಟು ಪರಿಣಾಮಕಾರಿಯಾಗಿ ಕರೊನಾ ವಿರುದ್ಧ ಹೋರಾಟದಲ್ಲಿ ಜಯದ ಹಾದಿಯಲ್ಲಿ ಸಾಗಿದೆ. ಇಷ್ಟೆಲ್ಲದರ ನಂತರವೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸುವುದು, ವೈಯಕ್ತಿಕ ಅಂತರ ನಿಭಾಯಿಸುವುದರ ಜತೆಗೆ ಎಲ್ಲ ಸರ್ಕಾರಿ ಸೂಚನೆಗಳನ್ನು ಪಾಲನೆ ಮಾಡಲಾಗುತ್ತಿದೆ.ಎಲ್ಲರೂ ಧನಾತ್ಮಕವಾಗಿ ಯೋಚಿಸೋಣ, ಆತ್ಮಸ್ಥೈರ್ಯದಿಂದಲೇ ಕರೊನಾವನ್ನು ಎದುರಿಸಬಹುದು.

ವರದಿ: ಸುಬ್ರಹ್ಮಣ್ಯ ಹೆಬ್ಬಾಗಿಲು, ಕತಾರ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter