“ಮುಂಬಯಿ ಕನ್ನಡ ಲೋಕದ ಹಿರಿಯಕ್ಕ” ಡಾ.ಸುನೀತಾ ಶೆಟ್ಟಿಯವರಿಗೆ ತೊಂಬತ್ತರ ಹರೆಯದ ಹುಟ್ಟು ಹಬ್ಬ

ಮುಂಬಯಿ ಕನ್ನಡದ ಕ್ರಿಯಾಶಕ್ತಿ ಡಾ.ಸುನೀತಾ ಎಂ.ಶೆಟ್ಟಿಯವರಿಗೆ ತೊಂಬತ್ತರ ಹರೆಯದ ಹುಟ್ಟು ಹಬ್ಬದ ಶುಭಾಶಯಗಳು: ೧೯೮೫: ಆಗತಾನೇ ನಾನು ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂಶೋಧನಾ ಸಹಾಯಕನಾಗಿ ಸೇರಿದ್ದೆ. ನನ್ನ ನ್ನು ಇಲ್ಲಿಗೆ ಕರೆಸಿದ ಡಾ.ಶ್ರೀ ನಿವಾಸ ಹಾವನೂರರು ನನಗೆ ಕನ್ನಡ ಎಂ.ಎ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಹಚ್ಚಿದರು. ಆಗ ತರಗತಿಗಳು ನಡೆಯುತ್ತಿದ್ದುದು  ಮಾಟುಂಗಾದ ರೂಪಾರೇಲ್ ಕಾಲೇಜ್ ನಲ್ಲಿ. ಅದೂ ರಾತ್ರಿ ಆರರಿಂದ ಎಂಟು ಗಂಟೆಗಳಗಳ ವರೆಗೆ. ಬೆಂಗಳೂರು ವಿ.ವಿಯ ಕನ್ನಡ ಅಧ್ಯಯನ ಕೇಂದ್ರದಲ್ಲಿ ಬೆಳಿಗ್ಗೆ ನಡೆಯುತ್ತಿದ್ದ ಪಾಠಗಳು ಇಲ್ಲಿ ರಾತ್ರಿ. (ಅಲ್ಲಿ ಕೂಡ ರಾತ್ರಿ ತರಗತಿಗಳು ನಡೆಯುತ್ತಿದ್ದುದನ್ನು ಅಲ್ಲಿ ಪಾಠ ಮಾಡುತ್ತಿದ್ದ ಡಾ.ಸಿದ್ದಲಿಂಗಯ್ಯ ನವರು ತಮ್ಮ ಊರು ಕೇರಿ ಆತ್ಮಕಥೆಯಲ್ಲಿ ಹೇಳಿಕೊಂಡಿದ್ದಾರೆ) ಅಲ್ಲಿಗೆ ಬರುತ್ತಿದ್ದ ವಿದ್ಯಾರ್ಥಿಗಳ ಜತೆಗೆ ಅಧ್ಯಾಪಕರು ಮಧ್ಯ ವಯಸ್ಕರು. ಹಾಗೆ ನೋಡಿದರೆ ನಾನೆ ಅವರ ನಡುವೆ ವಿದ್ಯಾರ್ಥಿ ಯಂತೆ ಕಾಣಿಸುತ್ತಿದ್ದೆ. ಅವರ ನಡುವೆ ಏಕೈಕ ಮಹಿಳಾ ಅಧ್ಯಾಪಕಿಯಾಗಿದ್ದವರು ಸುನೀತಾ ಶೆಟ್ಟಿಯವರು. ಅವರು ಅಲ್ಲಿನ ಸ್ಥಳೀಯ ಕಾಲೇಜ್ ನಲ್ಲಿ ಅಧ್ಯಾಪಕರಾಗಿದ್ದರು.                                                                                        

ಅವರು ಕಲಿಸುತ್ತಿದ್ದ ಕಾಲೇಜ್ ( ಜೆ.ಎನ್.ಖಾಲ್ಸಾ) ನ ಕನ್ನಡ ವಿಭಾಗಕ್ಕೆ ಒಂದು ವಿಶಿಷ್ಟವಾದ ಇತಿಹಾಸ ಇದೆ. ಅದು ಮು.ವಿ.ವಿ ದ  ಕಾಲೇಜುಗಳಲ್ಲಿ ಮೊದಲಿಗೆ ಕನ್ನಡ ವಿಭಾಗ ಆರಂಭ ಗೊಂಡ ಕಾಲೇಜ್ (೧೯೫೦) .ಅದಕ್ಕೆ ಕಾರಣರಾದವರು ಡಾ.ಬಿ.ಆರ್.ಅಂಬೇಡ್ಕರ್. ಅವರಿಗೆ ಸಂಸ್ಕೃತ ಕಲಿಸಿದ ನಾಗಪ್ಪಶಾಸ್ತ್ರಿಗಳು ಕನ್ನಡದ ವಿದ್ವಾಂಸರು. ಅವರಿಗೆ ಉದ್ಯೋಗ ಕಲ್ಪಿಸುವ ಸಲುವಾಗಿ ಅವರ ಅಪೇಕ್ಷೆಯಂತೆ ಕಾಲೇಜ್ ನವರು ಕನ್ನಡ ವಿಭಾಗ ಆರಂಭಿಸಿದರು. ಅವರ ನಿವೃತ್ತಿಯ ನಂತರ ಅವರ ಜಾಗದಲ್ಲಿ ಜಿ.ವಿ.ಕುಲಕರ್ಣಿಯವರು ಕೆಲವು ವರ್ಷ ಅಲ್ಲಿ ಅಧ್ಯಾಪಕರಾಗಿದ್ದರು. ಅವರು ಇನ್ನೊಂದು ಕಾಲೇಜ್ ಗೆ ಹೋದಮೇಲೆ ಅಲ್ಲಿನ ಕನ್ನಡ ವಿಭಾಗದ ಕರ್ಣಧಾರತ್ವವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು ಅವರ ನಿವೃತ್ತಿಯವರೆಗೆ(೧೯೯೦).   

 ನನಗೆ ಅವರು ಪರಿಚಯವಾದ ಕೂಡಲೇ ಅವರು ಅವರ ಕಾಲೇಜ್ ನಲ್ಲಿ ನಡೆಯುತ್ತಿದ್ದ ಅಂತರ್ ಕಾಲೇಜು ಪ್ರತಿಭಾಸ್ಪರ್ಧೆಗಳಿಗೆ  ತೀರ್ಪುಗಾರನನ್ನಾಗಿ ಆಹ್ವಾನಿಸಿದರು.   ಅಲ್ಲಿಯವರೆಗೆ ಯಾವುದೇ ಸ್ಪರ್ಧೆಯಲ್ಲಿ ಭಾಗವಹಿಸದ ನಾನು ಇಲ್ಲಿ ಮೊದಲಿಗೆ ತೀರ್ಪುಗಾರ. ಅದೇನು ಕಂಡರೋ ನನ್ನಲ್ಲಿ ಸುನೀತಾ ಶೆಟ್ಟಿಯವರು. ನನಗೆ ಇಂದಿಗೂ ವಿಸ್ಮಯ. ನನ್ನ ಮಾತ್ರ ವಲ್ಲ ನನ್ನ ನಂತರ ಮು.ವಿ.ವಿ ಕನ್ನಡ ವಿಭಾಗದಲ್ಲಿ ಸಂಶೋಧನಾ ಸಹಾಯಕಿಯಾಗಿ ಆಯ್ಕೆಗೊಂಡ ಗಿರಿಜಾ ಶಾಸ್ತ್ರೀಯವರನ ನ್ನು ತೀರ್ಪುಗಾರಳನ್ನಾಗಿ ಆಹ್ವಾನಿಸಿ ಗೌರವ ನೀಡಿದರು. ಅಲ್ಲಿ ನೋಡಿದರೆ ನೂರಾರು ವಿದ್ಯಾರ್ಥಿಗಳು. ಅವರನ್ನು ನೋಡಿಯೆ ನನಗೆ ಆಶ್ಚರ್ಯ. ನಾನಿರುವುದು ಬೆಂಗಳೂರುನಲ್ಲೋ ಮುಂಬಯಿನಲ್ಲೋ.! ಪ್ರತಿಯೊಂದು ಕಾಲೇಜ್ ನಿಂದ ಬಂದ ವಿದ್ಯಾರ್ಥಿಗಳು ಉತ್ಸಾಹದಿಂದ ಸ್ಪರ್ಧೆಯಲ್ಲಿ ಭಾಗವಹಿಸುವುದನ್ನು ನೋಡಿ ನನ್ನ ಆಶ್ಚರ್ಯ ಮತ್ತಷ್ಟು ಹೆಚ್ಚಿತು. ಅಷ್ಟೆಲ್ಲ ವಿದ್ಯಾರ್ಥಿಗಳನ್ನು ಏಕಾಂಗಿಯಾಗಿ ಸಂಬಾಳಿಸುತ್ತ ನಡುವೆ ಬಂದು ನಮ್ಮನ್ನು ಉಪಚರಿಸುತ್ತಾ ಅವರು ಅದನ್ನು ಸಂಪನ್ನಗೊಳಿಸಿದ ಬಗೆ ನನ್ನ ಮೂಕ ವಿಸ್ಮಿತನನ್ನಾಗಿ ಮಾಡಿತು. 

ಅವರು ಆಜೀವ ಸದಸ್ಯತ್ವವನ್ನು ಹೊಂದಿದ ಬಂಟರ ಸಂಘ ನಡೆಸುವ ಎಲ್ಲಾ ಸಾಹಿತ್ಯಕ ಸಾಂಸ್ಕೃತಿಕ ಕಾರ್ಯಕ್ರಮಗಳ ಬೆನ್ನೆಲುಬಾಗಿ ಇರುವವರು ಸುನೀತಾ ಶೆಟ್ಟಿಯವರು. ಅಲ್ಲಿ ನಡೆಸುವ ಶಾಲೆ ಕಾಲೇಜ್ ಗಳ ವಿದ್ಯಾರ್ಥಿಗಳಿಗೆ ನಡೆಸುವ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಎಷ್ಟು ಆಸಕ್ತಿ ಯೋ ಅಷ್ಟೇ ಆಸಕ್ತಿ ಅಲ್ಲಿ ನಡೆಸುವ ಸಾಹಿತ್ಯಕ ಕಾರ್ಯ ಕ್ರಮಗಳ ಕುರಿತು. ವಿಷಯದ ಆಯ್ಕೆಯಿಂದ ಹಿಡಿದು ವಿದ್ವಾಂಸರ ಸಂಪರ್ಕ, ಕಾರ್ಯಕ್ರಮದ ರೂಪುರೇಷೆಗಳನ್ನು ಯೋಜಿಸಿ ಅದನ್ನು ಕಾರ್ಯಗತಗೊಳಿಸುವವರಗೆ.  ದಕ್ಷಿಣ ಕನ್ನಡದ ಕವಿಗಳ ಕುರಿತು ಅವರು ಆಯೋಜಿಸಿದ ಮೂರು ಕಾರ್ಯ ಕ್ರಮಗಳು ಇದಕ್ಕೆ ಸಾಕ್ಷಿ. 

ಆ ಮೂರು ಗೋಷ್ಠಿಗಳಲ್ಲಿ ಭಾಗವಹಿಸಿದ ಭಾಗ್ಯ ನನ್ನದು. ಮೊದಲ ವಿಚಾರ ಗೋಷ್ಠಿಯಲ್ಲಿ ಗೋವಿಂದ ಪೈ ಅವರ ಬಹುಮುಖಿ ವ್ಯಕ್ತಿತ್ವ ಮತ್ತು ಸಾಧನೆಗಳ ಕುರಿತು ಮಾತನಾಡುವ ಭಾಗ್ಯ ನನ್ನದಾಗಿತ್ತು. ಎರಡನೇ ಗೋಷ್ಠಿಯಲ್ಲಿ ಕಾಸರಗೋಡಿನಲ್ಲಿ ಕನ್ನಡದ ಧ್ವಜ ಎತ್ತಿ ಹಿಡಿದ ಕಯ್ಯಾರ ಕಿಞ್ಞಣ್ಣರೈ ಅವರ ಉಪನಿಷತ್ತುಗಳ ಕುರಿತ ಪಂಚಮಿ ಕಾವ್ಯವನ್ನು ಕುರಿತು ಮಾತನಾಡುವ ಭಾಗ್ಯ ನನ್ನದಾಯಿತು. ಇದಲ್ಲದೆ ನನ್ನ ಮೊದಲ ಗೋಷ್ಠಿಯಲ್ಲಿ ರತ್ನಾಕರ ವರ್ಣಿಯನ್ನು ಕುರಿತು ಮಾತನಾಡಿದ ಕೋಡುಭೋಜ ಶೆಟ್ಟಿಯವರ ಕಾವ್ಯದ ಕುರಿತು ಮಾತನಾಡುವ ಭಾಗ್ಯ ವನ್ನು  ಒದಗಿಸಿಕೊಟ್ಟ ಶ್ರೇಯಸ್ಸು ಡಾ.ಸುನೀತಾ ಶೆಟ್ಟಿ ಯವರಿಗೆ ಸಲ್ಲಬೇಕು. ಅಷ್ಟಕ್ಕೇ ಅವರು ಸುಮ್ಮನೆ ಇರದೆ ಗೋಷ್ಠಿಯಲ್ಲಿ ಮಂಡಿತವಾದ ಪ್ರಬಂಧಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದರು. ಮತ್ತು ಗೌರವ ಪ್ರತಿಗಳನ್ನು ಲೇಖಕರಿಗೆ ತಲುಪಿಸಿದರು. ಬಹುಶಃ ಇಲ್ಲಿನ ಯಾವ ಕನ್ನಡ ಸಂಘವು ಈ ಕಾರ್ಯಮಾಡಿದ ನೆನಪು ಇಲ್ಲ. ವಿ.ವಿ.ದ ವಿಭಾಗಗಳು ಮಾಡುವ ಕೆಲಸವನ್ನು ಸುನೀತಾ ಶೆಟ್ಟಿಯವರು ತಮ್ಮ  ಕರ್ತೃತ್ವಶಕ್ತಿ ಮತ್ತು ಕ್ರಿಯಾಶೀಲತೆಯಿಂದ ಆಗುಮಾಡಿಸಿದರು. 

ಇದು ಕೇವಲ ಬಂಟರ ಸಂಘಕ್ಕೆ ಸೀಮಿತವಲ್ಲ. ಎರಡು ದಶಕಗಳ ಹಿಂದೆ ಅವರು ಪ್ರಾರಂಭಿಸಿದ ಮುಂಬಯಿ ಮಹಿಳಾ ಲೇಖಕಿಯರ ಬಳಗ ಸೃಜನಾಕ್ಕೂ ಸಲ್ಲುತ್ತದೆ. ಅಲ್ಲಿ ಅವರು ವಿಚಾರ ಸಂಕಿರಣ ‌ಏರ್ಪಡಿಸಿದರೆ ಅದು ಪುಸ್ತಕ ರೂಪದಲ್ಲಿ ಬಂದಿತು ಎಂದೆ ಅರ್ಥ. ಅಲ್ಲಿ ಕೂಡ ಎರಡು ಬಾರಿ  ಪುಸ್ತಕ ಬಿಡುಗಡೆ ಮತ್ತು ಪರಿಚಯ ಮಾಡಿಕೊಡುವ ಅವಕಾಶ ಕಲ್ಪಿಸಿ ನನಗೆ ಪ್ರೋತ್ಸಾಹ ನೀಡಿದರು. ಮೊದಲ ಬಾರಿಗೆ ಇಲ್ಲಿನ ಮೂವತ್ತು ಮೂರು ಲೇಖಕಿಯರಿಂದ ಅನುಭವ ಕಥನಗಳನ್ನು ಬರೆಯಲು ಪ್ರೇರಣೆ ನೀಡಿ ಅವನ್ನು” ಹಚ್ಚಿಟ್ಟ ಹಣತೆಗಳು” ಹೆಸರಿನಲ್ಲಿ ಪ್ರಕಟಿಸಿದರು. ಕವಿತಾ ಸಂಕಲನ, ಅನುವಾದ ಸಂಕಲನ, ಲೇಖನಗಳ ಸಂಕಲನ , ಕಥಾಸಂಕಲನಗಳನ್ನು ಪ್ರಕಟಿಸಿದ ಶ್ರೇಯಸ್ಸಿನ ಬಹುಭಾಗ ಅವರಿಗೆ ಸಲ್ಲಬೇಕು.             

ಮುಂಬಯಿ ಕನ್ನಡ ಸಂಘಸಂಸ್ಥೆಗಳನ್ನು ಸುನೀತಾ ಶೆಟ್ಟಿಯವರು ಪೋಷಿಸುತ್ತಾ ಬಂದಿದ್ದಾರೆ. ಅದರಲ್ಲಿ ಅವರ ಕಾಲೇಜು ಕನ್ನಡ ಸಂಘಕ್ಕೆ ” ಖಾಲ್ಸಾ ಕಾಲೇಜ್ ಕನ್ನಡ ಪ್ರೇಮಿ ಮಂಡಳಿ ” ಎಂದು ಹೆಸರನ್ನು ಇಟ್ಟು ಕನ್ನಡ ವಿದ್ಯಾರ್ಥಿಗಳ ಪ್ರತಿಭಾ ಪೋಷಣೆಗೆ ಕಾರಣ ಕರ್ತರಾದರಲ್ಲದೆ ಅವರ ನಿವೃತ್ತಿ ಹೊಂದಿದ ನಂತರ ಕೂಡ ಅದರ ಹೆಸರಿನಲ್ಲಿ ಮುಂಬಯಿ ಕನ್ನಡ ಸಂಘದಲ್ಲಿ ನಿರ್ದಿಷ್ಟ ಮೊಬಲಗನ್ನು ಠೇವಣಿಯಾಗಿಟ್ಟು ಅದರಲ್ಲಿ ಬರುವ ಬಡ್ಡಿಯಿಂದ ಪ್ರತಿವರ್ಷ ದತ್ತಿನಿಧಿ ಉಪನ್ಯಾಸ ನಡೆಯುವ ಹಾಗೆ ವ್ಯವಸ್ಥೆ ಮಾಡಿದ್ದಾರೆ. ಅವರು ಮಾಡಿದ ಸಾಹಿತ್ಯ ಸೇವೆಯನ್ನು ಗಮನಿಸಿ ಕರ್ನಾಟಕ ಸರ್ಕಾರ ಅವರಿಗೆ ಅತ್ತಿಮಬ್ಬೆ ಪ್ರಶಸ್ತಿ ನೀಡಿ ಗೌರವಿಸಿತು. ಆಗ ಅದು ನೀಡಿದ ಒಂದು ಲಕ್ಷ ರೂಪಾಯಿಗೆ ಇನ್ನೂ ಇಪ್ಪತ್ತೈದು ಸಾವಿರ ಕೈಯಿಂದ ಹಾಕಿ ಅವರ ಹೆಸರಿನಲ್ಲಿ ಪ್ರತಿಷ್ಠಿತ ಕನ್ನಡ ಲೇಖಕರಿಗೆ ದೊರೆಯುವ ಹಾಗೆ ಮುಂಬಯಿ ಕರ್ನಾಟಕ ಸಂಘಕ್ಕೆ ದಾನ ನೀಡಿದ ಏಕೈಕ ಮಹಿಳೆ.

   ನಾನು ಕಾಲೇಜ್ ನಲ್ಲಿ ಅಧ್ಯಾಪಕನಾಗಿ ಅಲ್ಲಿ ಕನ್ನಡ ಸಂಘದ ಅಂತರಕಾಲೇಜು ಪ್ರತಿಭಾಸ್ಪರ್ಧೆಗಳಿಗೆ ಅವರನ್ನು ಕರೆದಾಗ ಬಂದು ಉದ್ಘಾಟಿಸಿದರಲ್ಲದೆ ವಿದ್ಯಾರ್ಥಿಗಳಿಗೆ ಉದ್ಬೋಧಕವಾದ ಭಾಷಣ ಮಾಡಿದರು. ನನಗೆ ವೃತ್ತಿಯಲ್ಲಿ ಬಡ್ತಿ ದೊರೆಯಲು ಆಯ್ಕೆ ಸಮಿತಿ ಸದಸ್ಯರಾಗಿ ಬಂದು ಆರಿಸಿ ಉದ್ಯೋಗದಲ್ಲಿನ ಬಡ್ತಿಗೆ ಕಾರಣರಾದರು. ನನ್ನ ವೃತ್ತಿ ಪ್ರವೃತ್ತಿಗಳಲ್ಲಿನ ಭೌತಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಮುಂಬಯಿಯಲ್ಲಿ ಅಸ್ತಿವಾರ ಹಾಕಿ ನಿರಂತರವಾಗಿ ಪೋಷಿಸಿದ ಶ್ರೇಯಸ್ಸು ಡಾ.ಸುನೀತಾ ಶೆಟ್ಟಿಯವರಿಗೆ ಸಲ್ಲಬೇಕು.

ಹಲವು ಪ್ರಥಮಗಳ  ಸುನೀತಾ ಶೆಟ್ಟಿಯವರು:        

೧: ವರದಕ್ಷಿಣೆ ಕೊಡದೆ ಮದುವೆ ಆದ ಮೊದಲ ಬಂಟ ಮಹಿಳೆ ಮುಂಬಯಿನಲ್ಲಿ.                                     

೨: ಅಂತರಜಾತಿಯ ವಿವಾಹ ಮಾಡಿಕೊಂಡ ‌ಮಗನನ್ನು ಪ್ರೋತ್ಸಾಹಿಸಿದವರು.                                           

೩: ದೀರ್ಘಕಾಲ ಏಕಾಂಗಿಯಾಗಿ ಕಾಲೇಜ್ ನಲ್ಲಿ ಕನ್ನಡ ಅಧ್ಯಾಪನ ನಡೆಸಿದವರು.

೪: ದೀರ್ಘಕಾಲ ಮು.ವಿ.ವಿ.ಕನ್ನಡ ವಿಭಾಗದ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು.

೫: ನಿವೃತ್ತಿ ಹೊಂದಿದ ನಂತರ ಕನ್ನಡದಲ್ಲಿ ಕಾರಂತರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳನ್ನು ಕುರಿತು ಅಧ್ಯಯನ ಮಾಡಿ ಪಿಎಚ್ಡಿ ಪದವಿ ಪಡೆದ ಕಾಲೇಜು ಅ ಧ್ಯಾಪಕರರು. 

 ೬: ಮು.ವಿ.ವಿ.ಕನ್ನಡ ಎಂ.ಎ ಪ್ರಾರಂಭಿಸಿದಾಗ ಮೊದಲ ವಿದ್ಯಾರ್ಥಿನಿ(೧೯೬೩)                                            

೭: ಇಲ್ಲಿನ ಲೇಖಕಿಯರ ಜೊತೆಗೂಡಿ ಮುಂಬಯಿ ಕನ್ನಡ ಲೇಖಕಿಯರ ಸಂಘ (ಸೃಜನಾ) ಆರಂಭಿಸಿದರು (೨೦೦೦).

೮:ಜಾಗತಿಕ ಬಂಟರ ಸಂಘ ಆಯೋಜಿಸಿದ ಸಮ್ಮೇಳನದಲ್ಲಿ ಭಾಗವಹಿಸಿದ ಮೊದಲ ಮಹಿಳೆ.

೯: ವಿದೇಶಿ ಪ್ರವಾಸ ಮಾಡಿ ಪ್ರವಾಸ ಕಥನ ( ಪ್ರವಾಸಿಯ ಹೆಜ್ಜೆಗಳು) ಪ್ರಕಟಿಸಿದವರು

ಮುಂಬಯಿ ಕನ್ನಡ ಲೋಕದ ಹಿರಿಯಕ್ಕ ಡಾ.ಸುನೀತಾ ಶೆಟ್ಟಿಯವರಿಗೆ ತೊಂಬತ್ತರ ಹುಟ್ಟಿದ ದಿನದ ಶುಭಾಶಯಗಳೊಂದಿಗೆ ಶತಮಾನದ ಹೊಸ್ತಿಲು ಮುಟ್ಟಿ ನಮಗೆಲ್ಲಾ  ಮಾರ್ಗದರ್ಶನ ಮಾಡುತ್ತಿರಲಿ ಎಂಬ ಹಾರೈಕೆ ‌ನಮ್ಮದು.

******

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

2 thoughts on ““ಮುಂಬಯಿ ಕನ್ನಡ ಲೋಕದ ಹಿರಿಯಕ್ಕ” ಡಾ.ಸುನೀತಾ ಶೆಟ್ಟಿಯವರಿಗೆ ತೊಂಬತ್ತರ ಹರೆಯದ ಹುಟ್ಟು ಹಬ್ಬ”

  1. ನಾ.ದಾಮೋದರ ಶೆಟ್ಟಿ

    ಸುನೀತಾ ಶೆಟ್ಟಿಯವರನ್ನು ಯಾವತ್ತು ಭೇಟಿ ಮಾಡಿದರೂ ಅವರು ನನ್ನ ಅಕ್ಕ ಎಂಬಂತೆ ಭಾಸವಾಗುತ್ತಿದ್ದರೇ ಹೊರತು ಅತಿಥಿ ಎಂಬಂತೆ ಭಾಸವಾಗುತ್ತಿರಲಿಲ್ಲ.ಅವರ ಜೊತೆಗಿನ ಸ್ನೇಹಾಚಾರ ಎಲ್ಲರಿಗೂ ಇದೇ ಅನುಭವ ಕೊಟ್ಟಿರಬೇಕು. ತೊಂಬತ್ತರ ಹರೆಯ ಮತ್ತೂ ಮುಂದಕ್ಕೆ ದಾಪುಗಾಲಿಡುತ್ತಿರಲಿ.

  2. Shalini Santosh Shetty

    ಹೊರನಾಡಲ್ಲಿ ತುಳು ಕನ್ನಡದ ದೀಪ ಹಚ್ಚಿದ *ಕಬಿತೆ ಬರೆಪಿನ ಸುನೀತಕ್ಕ* ..ಹೆಸರು ಪಡೆದ ಡಾ.ಸುನೀತಾ ಎಮ್ ಶೆಟ್ಟಿಯವರ ಒಡಲಾಳದಿ ಮೂಡಿದಂತ ಬರಹಗೋಪುರಕ್ಕೆ ನಮನಗಳೊಂದಿಗೆ ಅವರ ೯೦ ನಾವೇ ಜನುಮ ದಿನದ ಶುಭಾಶಯಗಳು… *ಶಾಲಿನಿ ಸಂತೋಷ್ ಶೆಟ್ಟಿ*

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter