ವೃತ್ತಿ ಬಾಂಧವರು

ಹರ್ಷನಿಗೆ ವರ್ಗಾವಣೆ ಪತ್ರ ತಲುಪಿದಾಗ  ಮನಸ್ಸು ನಿರಾಳವಾಯಿತು.  ಈಗ ಇರುವ ಊರಿಂದ ವರ್ಗಾವಣೆ ಆದರೆ ಸಾಕಾಗಿತ್ತು. ಊರಿನದೇನೂ  ತೊಂದರೆಯಿಲ್ಲ.  ಹುಟ್ಟಿ ಬೆಳೆದ ಊರು. ಆದರೆ ಕೆಲಸ ಮಾಡುವ ಕಡೆ ಇರುವ ರಾಜಕೀಯದಿಂದ ರೋಸಿ ಹೋಗುವಂತೆ ಮಾಡಿತ್ತು. ಈ ಕಾರಣಕ್ಕೆ ಕೆಲಸ ಮುಗಿಸಿ ಮನೆಗೆ ಬಂದರೂ ಸಮಾಧಾನವಿಲ್ಲ. ಎಲ್ಲರ ಮೇಲೂ ರೇಗಾಟ. ಎಷ್ಟು  ದುಡಿದರೆ ಏನು?  ಜನರು ಏಕಾದರೂ ಈ ರೀತಿ ಬದುಕುತ್ತಾರೊ ಶಾಶ್ವತವಾಗಿ  ಭೂಮಿ ಮೇಲೇ ಇರ್ತರೇನೊ ಅನ್ನೋ ಹಂಗೆ. ಅದಕ್ಕೆಂದೇ ವರ್ಗಾವಣೆಗೆ  ಪ್ರಯತ್ನಿಸಿದ್ದು. ಹೇಗಾದರೂ ದುಡೀಬೇಕು. ಮುಂದೆ ಬರಬೇಕು ಎಂಬ ಧಾವಂತದಲ್ಲಿ  ನೈತಿಕತೆ ಮಾನವೀಯತೆ ಎಲ್ಲೊ ಹೋಗಿ ಕೂತಿದೆ.  ಹೀಗೆ ಪರೋಕ್ಷವಾಗಿ ಹೇಳಬಹುದು ಹೊರತು  ಯಾರಿಗೆ ನೀನು ಹೀಗೆ. ಎಂದರೆ ಸುಮ್ಮನಿರುತ್ತಾರೆ? ಎಲ್ಲಾ ಸತ್ಯ ಹರಿಶ್ಚಂದ್ರನ ತುಂಡುಗಳು….!

ಹರ್ಷ ಈಗ ಬಹಳ ಹರ್ಷದಲ್ಲಿದ್ದಾರೆ. ಅದೇ ಸಂತೋಷದಲ್ಲಿ ಒಂದ್ಮೂರು ದಿನ  ಉಡುಪಿ , ಮುರುಡೇಶ್ವರ, ಗೋಕರ್ಣ, ಬನವಾಸಿ ಹೋಗಿಬರಾಣಾಂತ   ಮೂರು ವರ್ಷದ ಮಗ ಸ್ವಯಂನೊಂದಿಗೆ ಸುತ್ತಿದರು. ಅಲ್ಲಿನ ಫೋಟೋ ವಿಡೀಯೊಗಳನ್ನು ಫೇಸ್ ಬುಕ್ ಗೆ ಹಾಕಿಕೊಳ್ಳಲು  ಕುಣಿಯುತಿದ್ದ ಹೆಂಡತಿ ಸ್ಪಂಧನಾಳ ಆಸೆಗೆ ತಣ್ಣೀರೆರಚಿದನು. ಸಮಾಜ ನಮಗೆ ಎಲ್ಲವನ್ನೂ  ಕಲಿಸುತ್ತದೆ. ಕೆಟ್ಟ ಅನುಭವಗಳು  ಹೆಚ್ಚಾದ ಹಾಗೆ ಜೀವನದ ಬಗ್ಗೆ ಭಯ ಹೆಚ್ಚುತ್ತದೆ.  ಪ್ರತಿ ಹೆಜ್ಜೆ ಇಡುವಾಗಲೂ ಎಚ್ಚರಿಕೆ ವಹಿಸುತ್ತಾನೆ.   ಸ್ವಲ್ಪ ದಿನಗಳ ಮಟ್ಟಿಗೆ ಸ್ಪಂದನಳನ್ನು ತವರು ಮನೆಗೆ ಕಳಿಸಿ ತಾನು ವರ್ಗವಾದ ಊರಲ್ಲಿ ಮನೆ  ಬಾಡಿಗೆಗೆ ಹಿಡಿದು ನಂತರ ಕುಟುಂಬವನ್ನು ಕರೆಸಿ ಕೊಳ್ಳುವ ಆಲೋಚನೆ ಮಾಡಿದ. ತನ್ನ ಜಾಗಕ್ಕೆ ಬರುತ್ತಿದ್ದ ಆದಿತ್ಯರವರಿಗೆ ಫೋನ್ ಮಾಡಿ ಮಾತನಾಡಿದ. ನೀವು ಇಲ್ಲಿಗೆ ಬರೋ ಮುಂಚೆ ನನಗೆ ಮನೆ ಹುಡಿಕಿ ಕೊಡಬೇಕು. ನೀವು ಈಗ ಇರೊ ಮನೆಯಾದ್ರೂ ಪರವಾಗಿಲ್ಲ. ಎಂದ. ಆ ಕಡೆಯಿಂದ ಸಾರಿ ಸರ್, ನಾವು ಇರೊ ಮನೇನ ಬಾಡಿಗೆ ಕೊಡೊದಿಲ್ಲಂತೆ. ಓನರ್ ಮಗಂದೂ  ಲಗ್ನಾತು ನೋಡ್ರಿ ಮನೆ ಅವರೀಗೆ ಬೇಕಂತ. ಆದ್ರ  ನೀವು ಯೋಚ್ನೆಮಾಡಬ್ಯಾಡ್ರಿ. ಒಳ್ಳೆ  ಬಡಾವಣಿಯೊಳಗ ಮನಿ ಹುಡಿಕಿಕೊಡಾದು ನನ್ನ ಜವಾಬ್ದಾರಿಯಾಗೇದ. ಎಂದಾಗ ಸಮಾಧಾನವಾಯಿತು.

 ಮುಂದಿನ ಶನಿವಾರದ ರಾತ್ರಿ  ಒಂಬತ್ತರ ಬಸ್  ಹತ್ತಿರು.  ಬೆಳಿಗ್ಗೆ  ಆರೂವರೆ ಏಳಕ್ಕೆ ಊರು ತಲುಪೋದು. ಮುಂದಿನ ತಿಂಗಳು ಒಂದನೆ ತಾರೀಖಿಗೆ ಡ್ಯೂಟಿ  ರಿಪೋರ್ಟ ಮಾಡ್ಕೊ ಬೇಕಾದ್ದರಿಂದ ಆದಿತ್ಯವರು ಈ ಕಡೆಗೆ ಬರೋ  ಮುಂಚೆನೆ ಅಲ್ಲಿ ಮನೆ ಹುಡಿಕಿಕೊಂಡ್ರೆ  ಮುಂದಿನದೆಲ್ಲಾ ಸಲೀಸು. ಎಂಬ ಯೋಚನೆ.  ಹರ್ಷ ಊರು ತಲುಪಿದ .ಬಸ್ಸ್ಟಾಂಡ್ ಹೋಟೆಲ್ನಲ್ಲಿ ಸ್ವಲ್ಪ ಮಟ್ಟಿಗೆ ಶುಚೀಭೂತನಾಗಿ ಇಡ್ಲಿ ವಡಿ  ಕಾಫಿ ಮುಗಿಸಿಕೊಂಡು ಸೀದಾ ಆದಿತ್ಯವರ ಮನೆ ಕಡೆಗೆ ಆಟೊ ಹತ್ತಿದ. ಆಗಲೆ ಅವರು ಎರಡು ಸಾರಿ ಫೋನ್ ಮಾಡಿ ವಿಚಾರಿಸಿ ಕೊಂಡಿದ್ದರು. ತಿಂಡಿಗೆ ಬಹಳ ಬಲವಂತ ಮಾಡಿ, ಆಗಿದೆ ಎಂದರೂ ಕೇಳದೆ ಜೋಳದ ರೊಟ್ಟಿ ಎಣಗಾಯಿ ಪಲ್ಯ ಹಾಕಿ ಕೊಟ್ಟರು. ಈಗ ನಾವಿರೊ ಬಡಾವಣೆಯೊಳಗ ಎರಡು ಮನಿಗಳು ಚೆನ್ನಾಗವೆ. ಪರಿಚಯದವರೆ ಮೊದಲು ಅವನ್ನು ನೋಡೊಣೂಂತ  ಅವರ  ಬೈಕಲ್ಲೆ ಹೊರಟರು.

ಮೂರು  ಮಹಡಿಗಳ ಮನೆ. ಕೆಳಗಡೆ ಮನೆ ಖಾಲಿ  ಇರೋದು. ಮೊದಲನೆ ಮಹಡಿಯಲ್ಲಿ ಮನೆಯ  ಯಜಮಾನ. ಮತ್ತೆ ಮೇಲಿನವು ಬಾಡಿಗೆಗೆ  ಕೊಟ್ಟಿದ್ದಾರೆ. ಸೂಕ್ಷ್ಮ ಪರಿಚಯ ಹೇಳುತ್ತಾ  ಮನೆಯೊಳಗೆ ಕರೆದುಕೊಂಡು ಹೋದರು. ಯಜಮಾನ  ಬರ್ರಿ ಬರ್ರೀ.. ಅಂತ ಚೆನ್ನಾಗಿ  ಮಾತನಾಡಿಸಿ  ಕೂರಲು  ಹೇಳಿದರು. ಅವರ ಎಲ್ಲಾ  ಪ್ರಶ್ನೆಗಳಿಗೆ ಆದಿತ್ಯ ತಾಳ್ಮೆ ಯಿಂದಲೇ  ಉತ್ತರಿಸಿದರು.  ಒಂದ್ ಮಿನಿಟ್  ಬರ್ರೀಂತ ಒಳಗಿಂದ ಅವರ ಹೆಂಡತಿ ಕರೆದರು.  ಹ್ಞ…  ಬಂದೆ. ಎದ್ದು ಹೋದವರು ಒಳಗೆ ಏನೊ ಗುಸು ಗುಸು ಮಾತಾಯಿತು. ಹ್ಞೂ.. ಹ್ಞೂ..  ಅನ್ನುತ್ತಾ ಬಂದು  ಆರಾಮಾಗಿ ಕುಳಿತರು. ಬಿಳಿ  ಪಂಚೆ,  ಸ್ಯಾಂಡೊ  ಬನಿಯನ್, ಹಣೆ ತುಂಬಾ ಮೂರು ವಿಭೂತಿ ಪಟ್ಟಿಗಳು ಎಣ್ಣೆಗಪ್ಪುಬಣ್ಣದ ಮಧ್ಯ ವಯಸ್ಕ ಬಹಳ ಆತ್ಮೀಯ ಸ್ವಭಾವದವರಂತೆ ಕಾಣುತ್ತಿದ್ದರು. ಯಾಕೊ ಒಂದು ರೀತಿಯ ಕಸಿವಿಸಿ  ವ್ಯಕ್ತ ಪಡಿಸುತ್ತಿದ್ದರು. ಎನೊ ಕೇಳಬೇಕು ಅನ್ನೊ ತವಕ. ಆದರೆ  ಕೇಳಲಾಗುತ್ತಿಲ್ಲ ಎಂಬಂತೆ  ಒದ್ದಾಡುತ್ತಿದ್ದರು. ಆದಿತ್ಯ ರವರು ಮುಂದುವರೆದು ಏನಾದರೂ ಕೇಳುವುದಿತ್ತಾ? ಅಂದ್ರು.  ಹ್ಞೆ.. ಹ್ಞೆ.. ಎಂದು ನಗುತ್ತಾ ಇವರು ಯಾವ ಪೈಕಿ ಅಂತ ತಿಳೀಲಿಲ್ಲ.  ಎನ್ನುತ್ತಿದ್ದಂತೆ ತಡವೆ ಇಲ್ಲದೆ,  ನಾವು ಈ ಪೈಕಿ ಎಂದು ಹರ್ಷ ಉತ್ಸಾಹದಿಂದಲೆ ಉತ್ತರಿಸಿದರು. ಹಂಗಾರೆ  ನೀವು ಕೋಳಿ ಕುರಿ ತಿಂತೀರಿ? ಆತನ  ಹಣೆಯ ಮೇಲೆ ನರಿಗೆಗಳು ಮೂಡಿದವು.  ಮುಜುಗರಕ್ಕೆ ಒಳಗಾದ ಹರ್ಷ, ತಿನ್ನೊದ್ರಾಗೆ  ಹುಟ್ಟೀವಿ. ಆದರೆ ನಾವು ಬಾಳ ಬಳಸಲ್ಲ   ತುಂಬಾ ಅಪರೂಪ. ಇಷ್ಟು ಹೇಳೋಷ್ಟರಲ್ಲಿ  ಕುಗ್ಗಿ ಹೋದ. ಮುಖ ಹುಳ್ಳಗೆ  ಮಾಡಿಕೊಂಡು ಹುಬ್ಬನ್ನು ಮೇಲೇರಿಸಿ  ಸೀದಾ  ಯಜಮಾನ  ಆದಿತ್ಯರ ಕಡೆ ತಿರುಗಿದರು.  ಅವರ ದೃಷ್ಟಿ ಹೇಗಿತ್ತೆಂದರೆ ಇಂತವರನ್ನು ಕರಕ್ಕೊಂಡು ಬಂದಿಯಲ್ಲ ಮಗನೇ  ಎಂಬಂತಿತ್ತು. ಅವರ ಬಾಡಿ ಲಾಂಗ್ವೇಜ್ ಅರ್ಥ ಮಾಡಿಕೊಂಡ ಆದಿತ್ಯ ಸರ್ ಬರ್ತೀವಿ ಎಂದು ಹೊರಟರು. ಚಾ.. ಅನ್ನುತ್ತಾ  ಯಜಮಾನನೂ  ಎದ್ದ.  ಇವರು ಪ್ರತಿಕ್ರಿಯೆ  ನೀಡದೆ ಜಾಗ ಖಾಲಿ ಮಾಡಿದರು.

ಮೆಟ್ಟಿಲನ್ನು ಇಳಿಯುತ್ತ  ನೀವೆನೂ ಬೇಜಾರಾಗ್ಬೇಡಿ  ಹರ್ಷಾರವರೆ, ಇನ್ನೊಂದು  ಮನೆಯಿದೆಯಲ್ಲಾ ಇದಕ್ಕಿಂತ ತುಂಬಾ ಚೆನ್ನಾಗಿದೆ. ಈ ಮನೇಲಿ  ಕಿಟಕಿಗಳು  ನೋಡಿದ್ರಲ್ಲ  ಸಣ್ಣವು. ಗಾಳಿ  ಬೆಳಕು ಎಲ್ಲಿಂದ  ಬರಬೇಕು? ಸಮಾಧಾನಿಸಲು ಪ್ರಯತ್ನಿಸಿದರು. ಹೌದು ಎನ್ನದೆ ಹರ್ಷನಿಗೆ ನಿರ್ವಾಹವೇಯಿರಲಿಲ್ಲ.  ಮುಂದಿನ ಕ್ರಾಸ್ನಲ್ಲೆ ಮನೆ. ಮುಗುಳಗುತ್ತಾ ಬೈಕ್  ಸ್ಟಾರ್ಟ್  ಮಾಡಿದರು.  ಉದ್ದಕ್ಕೆ ಎಡಭಾಗದ  ರಸ್ತೆಯಲ್ಲಿ ಹೋಗಿ ಬಲಕ್ಕೆ ತಿರುಗಿದರೆ ಅಲ್ಲಿ ದೊಡ್ಡದಾದ  ಸುಂದರವಾದ  ಪಾರ್ಕ್.  ಸುತ್ತಲೂ ಕಬ್ಬಿಣದ  ದಾರಗಳ ಬೇಲಿ. ನಂತರ ಒಳಗೆ ವಾಕ್ ಮಾಡೋರಿಗೆ ಕಿರು ದಾರಿ. ಪಾರ್ಕ್ ಒಳಗೆ ಹೋಗಲು ನಾಲ್ಕು ದಿಕ್ಕುಗಳಿಗೆ ನಾಲ್ಕು ಪ್ರವೇಶ ದ್ವಾರಗಳು. ಮಟ್ಟಸವಾಗಿ  ಕತ್ತರಿಸಿದ  ಗಿಡಗಳು ಬಾಬ್ ಮಾಡಿಸಿಕೊಂಡ  ಹುಡಿಗಿಯರಂತೆ ಚೆಂದವಾಗಿ  ಕಾಣುತ್ತಿದ್ದವು. ನಾನಾ ಬಣ್ಣದ ಹೂವುಗಳು ಅರಳಿ ನಗುವನ್ನು ಚೆಲ್ಲುತ್ತಿದ್ದವು. ಪಾರ್ಕನ ಉತ್ತರದ ಭಾಗವನ್ನು ಮಕ್ಕಳಿಗಾಗಿ ತಯಾರು ಮಾಡಲಾಗಿತ್ತು. ಅಲ್ಲಿ ಜಾರುಬಂಡಿ, ಜೋಕಾಲಿ, ಚಕ್ ಬುಕ್ ಆಟದ ಮಾದರಿ ಇನ್ನು ಏನೇನೊ ಮಾದರಿಗಳನ್ನು ಅಳವಡಿಸಿರುವುದನ್ನು ಬೈಕ್ ನಲ್ಲಿ ಹೋಗ್ತಾ  ನೋಡಿದ ಹರ್ಷನಿಗೆ ತುಂಬಾ ಸಂತೋಷವಾಯಿತು. ಮನೆಯನ್ನು ನೋಡುವ ಹಂಬಲ ಹೆಚ್ಚಾಯಿತು. ನೋಡಿ ಈ ಜಾಗ ತುಂಬಾ ಚೆನ್ನಾಗಿದೆ. ಬಲಭಾಗದ ಸಾಲಿನಲ್ಲಿ ಮನೆಗಳು ಆದಾವ ಎದುರಿಗೆ ಪಾರ್ಕ್.  ಆದಿತ್ಯ ವಿವರಿಸುತ್ತಿದ್ದರು. ಆಹಾ! ಇದಕ್ಕಿಂತ ಒಳ್ಳೆಯ ಮನೆ ಸಿಗಲಿಕ್ಕಿಲ್ಲ. ಆ ಮೊದಲಿನ ಮನೆ ತಪ್ಪಿದ್ದೆ ಒಳ್ಳೆಯದಾಯಿತು. ಸ್ಪಂದನ ಹಾಗೂ ಮಗ ಖಂಡಿತ ಕುಶಿಪಡ್ತಾರೆ. ಮನದಲ್ಲಿ ಮಂಡಿಗೆ ಹೊಸೆಯುತ್ತಿದ್ದ ಹರ್ಷ, ಬೈಕ್ ನಿಂತಾಗ ವಾಸ್ತವಕ್ಕೆ ಬಂದ.

ಇದೆ ಮನೆ ಬರ್ರಿ ಅನ್ನುತ್ತಾ ಬಹಳ ಸಲುಗೆಯಿಂದ  ಗೇಟ್ ಬಾಗಿಲು ತೆಗೆದು ಒಳ ಹೋದರು.  ಹರ್ಷ ಹಿಂಬಾಲಿಸಿದರು ಅಷ್ಟೇ. ಮುಂಬಾಗಿಲಿನ ಕಾಲಿಂಗ್  ಬೆಲ್  ಒತ್ತಿದರು. ಒಂದೆ ನಿಮಿಷದಲ್ಲಿ ಬಾಗಿಲು ತೆರೆದರು. ಬರ್ರೀ.. ಅಣ್ಣಾರ್ರೇ… ಆರಾಮೇನ್ರೀ.. ಕುಂದೂರ್ರಿ. ಆಸನ  ತೋರಿಸಿದ ಕಡೆ ಕುಂತಿದ್ದು ಆಯ್ತು.  ಅಕ್ಕಾರ್ರ, ಇವರು ಚಿತ್ರದುರ್ಗದವರು. ಬ್ಯಾಂಕ್ನಲಿದ್ದಾರೆ. ಅಂದ್ರೆ ಅದೆ ನಾನು ಅವರ  ಪ್ಲೇಸ್ಗೆ  ಹೋಗ್ತಯಿದ್ದೀನಿ. ಹರ್ಷರವರು ನನ್ನ ಜಾಗಕ್ಕೆ  ಬರ್ತಯಿದ್ದಾರೆ. ನಾನು ಇಲ್ಲಿ ಇದ್ದಂಗೆ ಇವರಿಗೆ ಮನೆ ಹುಡಿಕಿ ವೃತ್ತಿ ಬಾಂಧವನಿಗೆ ಸಣ್ಣ  ಸಹಾಯ ಮಾಡಿದ ಹಾಗೆ ಆಗುತ್ತೆ. ನೀವು ಹೇಳಿದ್ರಲ್ಲ  ಒಳ್ಳೆ ಜನ ಇದ್ರೆ ಹೇಳೀಂತ. ಮಾತು ನಿಲ್ಲಿಸಿದರು. ಭಾಳ ಉಪಕಾರ ಆಯಿತ್ರೀ..  ಮಕ್ಕಳಿಬ್ಬರು  ಬೆಂಗಳೂರು.  ಮನೇರು  ಸುಖಾ ಸುಮ್ಮನೆ ಕಣ್ಮಿಚ್ಚಿದ್ರು. ನಾನು ಒಬ್ಬಾಕೇ ನೋಡ್ರಿ… ಸೆರಗಿನ ತುದಿಯಿಂದ  ಕಣ್ಣೀರು  ಒರೆಸಿ ಕೊಳ್ಳುತ್ತಾ ಹೇಳಿಕೊಂಡರು. ಸಮಾಧಾನ  ಮಾಡ್ಕಳ್ರಿ  ಅಕ್ಕಾರೆ. ಇವರು ತುಂಬ ಒಳ್ಳೆ ಮಂದಿ ಅದಾರ.  ಸಂಸಾರಸ್ಥರು. ನಿಮಗೂ ಅನುಕೂಲ. ಆದಿತ್ಯ  ತಗ್ಗಿದ ದನಿಯಾಗೆ ಮನಸ್ಸಿಗೆ ಬಂದ ನಾಲ್ಕು ಮಾತು ಹೇಳಿದರು. ಮನಿ ನೋಡಲು  ಎದ್ದರು. ಕೆಳಗಿನ ಮನಿಯೊಳಗ  ಅಕ್ಕಾರಿದ್ದು, ಮೇಲಿನ ಮನಿ ಖಾಲೀದು.  ವರಾಂಡ ದೊಳಗ  ಚಪ್ಪಲಿ, ಯು ಪಿ ಎಸ್ ಇಡಾಕೆ ಜಾಗವಿತ್ತು.  ಮುಂದೆ ಹಾಲ್.  ಟಿ ವಿ ಇಡೊ ಜಾಗ  ಶೋಕೇಸ್ ಬೇರೆಯಿತ್ತು. ಎರಡು ರೂಮು. ಅಡಿಗೆ ಮನೆ. ಹಿಂದೆ ಬಟ್ಟೆ ಪಾತ್ರೆ  ತೊಳೆಯಲು  ಜಾಗವಿತ್ತು. ಮನೇನು  ಇಷ್ಟವಾಯಿತು. ಆಕೆಗೂ ಮನೆ  ಕೊಡಲು  ಒಪ್ಪಿರ ಬಹುದೆಂದು ಬಂದು ನಿರಾಳವಾಗಿ ಕುಳಿತರು. ತಡೀರಿ ಚಾ ಮಾಡಿ ತರ್ತೀನಂತ ಉತ್ತರಕ್ಕೂ ಕಾಯದೆ ಒಳಗೋದರು.. ಹರ್ಷನ ಮುಖದಲ್ಲಿ ಮಂದಹಾಸ  ತುಂಬಿತ್ತು. ಚಾ ಕೊಟ್ಟು ನಿಂತೆಯಿದ್ದ  ಅವರನ್ನು ನೀವು ಕುಂತ್ಕಳ್ರೀ ಅಕ್ಕಾರೆ. ಹಂಗೆ ಬಾಡಿಗೆ ಬಂಟ ಮಾತನಾಡಿ ಬಿಡಾನ ಆದಿತ್ಯ ಆತುರವಾಗೇ ಹೇಳಿದರು. ಮಾತಾಡಿಕೊಂಡೇ ಕೂತ ಆಕೆಯನ್ನು ನೋಡಿ ಪಾಪ ಅನ್ನಿಸಿತು ಹರ್ಷ ನಿಗೆ.ಅಲ್ಲಾ ಅವರ ಮನೆಯಲ್ಲೆ  ಸಂಕೋಚ. ಎಂತ ಭಯಸ್ಥೆ.  ಈಗಿನ ಕಾಲದಲ್ಲೂ ಇಂತವರು ಇದ್ದಾರಲ್ಲಾಂತ ಯೋಚಿಸುತ್ತಾ  ಚಾ ಖಾಲಿ ಮಾಡಿ ಮುಂದಿನ ಮಾತು ಕತೆಗೆ ಕಿವಿಯಾನಿಸಿದ. ಅಣ್ಣಾರ್ರೆ.. ಹಿಂದೆ ಇದ್ದವರು ಎಂಟು ಸಾವಿರ ಕೊಡ್ತಯಿದ್ರು.  ಎರಡು ಲಕ್ಷ ಅಡ್ವಾನ್ಸ. ಈಗ ಎಲ್ಲ  ರೇಟ್ಯಾಗೇತಿ  ಹತ್ತು ಸಾವಿರ  ಮಾಡ್ಕರಿ ಅಡ್ವಾನ್ಸ  ಬೇಕಾದರೆ ಅಷ್ಟೇ ಕೊಡ್ರಿ. ನಿಮ್ಗು  ಪಗಾರಯೆಲ್ಲಾ ಚಲೊ ಇರ್ತಾವ. ಇಷ್ಟು ಮಾತಾಡಿದರೂ ಆಕೆ ತಲೆ ಮೇಲಿನ ಸೆರಗಿನ ಚುಂಗು ಹಿಡಿದುಕೊಂಡೆಯಿದ್ರು. ಚೌಕಾಸಿ ಮಾಡಾಕೆ  ಶುರು ಮಾಡಿದ್ದ  ಆದಿತ್ಯರನ್ನ ಹರ್ಷ ಹಾಗೆ ಕೈಯಲ್ಲಿ ತಿವಿದು, ಪರವಾಗಿಲ್ಲ ಇರಲಿ ಎಂಬೊ ಸೂಚನೆ ಕೊಟ್ರು. ಮನೆ ಹಾಗೂ ಸುತ್ತಮುತ್ತಲಿನ ವಾತಾವರಣ ತುಂಬಾ ಹಿಡಿಸಿತ್ತು.ಅದೇ ಮುಖ್ಯ ಅಲ್ವ. ದುಡ್ಡು ಇರುತ್ತೆ ಹೋಗುತ್ತೆ ಮನಸ್ಸಿಗೆ ನೆಮ್ಮದಿ ಕಣ್ತುಂಬ ನಿದ್ದೆ ಹತ್ತಬೇಕು.

 ಆ ಲಕ್ಷಣಗಳೆಲ್ಲಾ ಇಲ್ಲಿ ಕಂಡು ಬಂದಿದ್ದರಿಂದ ಎರಡು ಸಾವಿರ ಜಾಸ್ತಿಗೆ ಅಷ್ಟು ತಲೆಕೆಡಿಸಿ ಕೊಳ್ಳೊದು ಬೇಡಾಂತ. ಆಯ್ತು ಅಕ್ಕಾರೆ, ನಿಮ್ಮ ಮಾತನ್ನು ತೆಗೆದು ಹಾಕಂಗಿಲ್ಲ. ಈ ತಿಂಗಳ ಕೊನೆ ವಾರದಲ್ಲಿ ಇವರು ಬರ್ತಾರೆ. ಒಂದನೆ ತಾರೀಖೆ ಡ್ಯೂಟಿ  ಜಾಯಿನ್ ಆಗಬೇಕು.. ಹಂಗಾದ್ರೆ ಅಡ್ವಾನ್ಸ ಕೊಡೋಣು? ಎದುರು ನೋಡಿದರು ಆದಿತ್ಯ.  ಅಯ್ಯೊ.. ಅಡ್ವಾನ್ಸ ಎತ್ಲಾಗೆ ಹೋಕೇತಿ. ಚಲೊ ಮಂದಿ ಇದ್ರೆ ಸಾಕು. ಮುಂದೆ ಏನು ಮಾಡ ಬೇಕೂಂತ  ತಿಳಿಯದಂಗಾಗಿ ಹರ್ಷ, ನಾವು ಇಲ್ಲಿಗೆ  ಬಂದ ಮೇಲೆ ಅಡ್ವಾನ್ಸ ಕೊಟ್ಟರೆ ಆಯ್ತಾ.. ಆಕೆಯ ಮುಖವನ್ನು ನೋಡಿದ. ಹಂಗೆ ಮಾಡ್ರೀ.. ಮನಿನ ಸ್ವಚ್ಛ ಮಾಡಿರ್ತಿನಿ. ನೀವು  ಬಂದು ಸಾಮಾನೆಲ್ಲ ಜೋಡಿಸ್ಕೊಂಡು  ಆರಾಮಾಗ್ರಿ.  ಆಮ್ಯಾಲಿಂದ ಕೊಡುವಂತ್ರಿ ಎಂದಾಗ ಆದಿತ್ಯರ ಮನಸ್ಸು ಹಗುರಾಯ್ತು. ಸದ್ಯ  ಕೆಲಸ ಹೂವೆತ್ತಿದಂಗಾತು. ಇಷ್ಟವಾದ ಮನೆ , ವಾತಾವರಣ ಸೂಪರ್!  ಹಿಗ್ಗಿದ ಹರ್ಷ. ನಾವು ಬರ್ತಿವಿ ಎನ್ನುತ್ತಾ ಇಬ್ಬರು ಎದ್ದರು.ಅವರನ್ನು ಹಿಂಬಾಲಿಸಿ ಕೊಂಡು ಗೇಟ್ ವರೆಗೂ ಬಂದು ನಿಂತ ಆಕೆ, ಇನ್ನೇನು ಬೈಕ್ ಹತ್ತಬೇಕು ಅನ್ನುವಾಗ ಅಣ್ಣಾರ್ರೇ.. ನೀವು ಯಾವ ಪೀಠದವರು? ಎಂಬ ಪ್ರಶ್ನೆಗೆ ಹರ್ಷ ಕಕ್ಕಾಬಿಕ್ಕಿಯಾದ. ಆತನ ಪರಿಸ್ಥಿತಿ ಅರಿತ ಆದಿತ್ಯ ಬೈಕಿನಿಂದ ಇಳಿದು  ಗೇಟ್ ಬಳಿಗೇ ಬಂದು ಕಮ್ಮಿ  ಉಸಿರಿಂದ ಅಕ್ಕಾರ್ರೇ..  ಅವರು ಈ ಪೈಕಿ ಅದಾರ. ಆದ್ರ ಮಂದಿ ಎಜುಕೇಟ್ ಅದಾರ.  ಭಾರಿ  ಸುಸಂಸ್ಕತರು, ಸಭ್ಯಸ್ಥರು   ಇರೊ ಬರೊ ಪದಗಳನ್ನೆಲ್ಲಾ ಬಳಸಿದ.ಹರ್ಷನಿಗೆ ಆಗಲೇ ಆತಂಕ ಶುರುವಾಗಿತ್ತು. ತಿನ್ನೋರಿಗೆ ಮಡಿ ಹುಡಿಯಿಂದ ಕಟ್ಟಿಸಿರೋ ಮನೀನ ಹೆಂಗಾರ ಕೊಡಾಕೆ ಬರ್ತೇತಿ.  ಮ್ಯಾಲಿರೊ ನನ್ನ ಗಂಡ ಒಪ್ಪತಾನೇನು. ಆದ್ರ ನಮ್ಮ ಪೀಠದವರೇ ಅಂತ ನಾನೇನು ಹೇಳಂಗಿಲ್ಲ.  ಬ್ಯಾರೆ ಯಾವ ಪೀಠದವರಾದರೂ ಸೈ. ಇದ್ರ ಹೇಳ್ರಿ. ಎಂದದ್ದೇ ತಲೆ ಮ್ಯಾಲಿನ ಸೆರಗ ಸರಿ ಮಾಡ್ಕೋತಒಳಗೋಗೆ ಬಿಟ್ರು.

ಬೈಕ್ ಬಳಿಗೆ ಬಂದ ಆದಿತ್ಯನಿಗೆ ಏನಂತೆ, ಅಡ್ವಾನ್ಸಜಾಸ್ತಿ ಬೇಕಂತ? ಕೇಳಿದ. ಇಲ್ಲಾ.. ಇತ್ಲಾಗೆ ಒಂದೇ…… ಸಮಸ್ಯೆ. ಅದ ಹೆಂಗ ಹೇಳೋದ್  ನಿಮ್ಗ. ಎಂದು ತನಗೆ ತಾನೇ  ಗುನುಗುತ್ತಾ, ಅವರು ಇಲ್ಲ ಅನ್ನಲಾರದೆ ಹಿಂಗ ಮಾತಾಡಿ ಕಳಿಸ್ಯಾರೆ. ಅಕ್ಕ ನೋಡ್ರಿ ಅಡ್ವಾನ್ಸ ಬ್ಯಾಡ ಅಂದ್ರು. ಮನೀನ ಆಗ್ಲೆ ಯಾರಿಗೊ ಮಾತಾಡಿರಬೇಕು. ಭಾರಿ ಪರಿಚಯ ದವರು, ಸಂಕೋಚದವರು ನೇರವಾಗಿ ಮಾತಾಡೋಕೆ  ಹಿಂಜರಿಕಿ. ಚಿಂತಿಮಾಡೊದು  ಬ್ಯಾಡ.  ಮನಿಗಳಿಗೇನು ಬರ. ಈ ದಿನ ಮನಿ ಕೊಡಿಸೋದುನನ್ನ ಜವಾಬ್ದಾರಿ. ಆಕಡೆ ಸರಸ್ವತಿ ಬಡಾವಣೆಯಲ್ಲಿ ಒಳ್ಳೊಳ್ಳೆಯ ಮನೆಗಳಿವೆ. ಬನ್ನಿ ಹೋಗೊಣ. ಎಂದು ಬೈಕ್ ಸ್ಟಾರ್ಟ್ ಮಾಡಿದ. ಹಿಂದಿನ ಸೀಟ್ ನಲ್ಲಿ ಕುಳಿತ ಹರ್ಷನಿಗೆ ಇಲ್ಲಿ ಏನೊ ಎಡವಟ್ಟು ಆಗ್ತಾಯಿದೆ ಅನ್ನಿಸತೊಡಗಿತು. ಮುಂದೆ ಹೋಗ್ತಾ… ಹೋಗ್ತಾ.. ಈ ಏರಿಯಾ ಹೇಗಿದೆಯೊ  ಅನ್ನೊ ಕುತೂಹಲ. ನಾಲ್ಕು ಕಿಲೋ ಮೀಟರ್ ಹೋಗಿದ್ದೇ ಹೋಗಿದ್ದು.  ರಸ್ತೆಯ ಎರಡು ಬದಿ ಮರಗಳಂತೂ ಇದ್ದವು. ಸರ್ಕಾರಿಶಾಲೆಯ ಆವರಣ ಮುಂದೆ ಕಾಣಿಸಿತು. ಆಶ್ಚರ್ಯ ವಾದರೂ ತನ್ನ ಓದಿನ ದಿನಗಳು ನೆನಪಾದವು. ಈಗ ಅದನ್ನೆಲ್ಲ ನೆನಪು ಮಾಡ್ತಾ ಕೂತ್ರೆ ಬಂದ ಉದ್ದೇಶ? ಈ ದಿನ ರಾತ್ರಿ ಒಂಬತ್ತರ ಬಸ್ಸಿಗೆ ಹತ್ತಿ ಬೆಳಿಗ್ಗೆ  ಊರಲ್ಲಿರಬೇಕು. ವಾಸ್ತವಕ್ಕೆ ಬಂದ. ಒಳ್ಳೆ ಮನೆ ಸಿಕ್ಕರೆ ಸಾಕಪ್ಪಾ  ದೇವರೆ ಎಂದು ಸಂಕಟದಲ್ಲಿ ವೆಂಕಟರಮಣ ಎಂಬಂತೆ ತನ್ನ ಮನೆ ದೇವರನ್ನು ನೆನಪಿಸಿಕೊಂಡು. ಇನ್ನು ಸ್ವಲ್ಪ ದೂರ ಅಷ್ಟೇ ಹರ್ಷರವರೆ ಎನ್ನುತ್ತಾ  ಬೈಕಿನ ವೇಗವನ್ನು ಆದಿತ್ಯ ಹೆಚ್ಚಿಸಿದ. ಎಡ ಭಾಗದ ತಿರುವಿನಲ್ಲಿ ತಿರುಗಿದ. ವಾತಾವರಣದಲ್ಲಿ ಬದಲಾವಣೆ ಕಂಡಿತು. ಸೀದ  ನಲ್ವತ್ತಡಿ ರೋಡಿನಿಂದ ಇಪ್ಪತ್ತು ಅಡಿ ರಸ್ತೆ. ಅಯ್ಯಪ್ಪ,! ಒಂದೆ ಸಮ ಚಿಕ್ಕ ಚಿಕ್ಕ ಮನೆಗಳು. ಇಪ್ಪತ್ತು. ಇಪ್ಪತ್ತೈದು ಮುವ್ವತ್ತು ಅಡಿ ಇರಬಹುದು. ರಸ್ತೆಯ ಎರಡು ಬದಿ ಮನೆಯವರು ರಸ್ತೆಯ ಐದಾರು ಅಡಿಗಳಷ್ಟು ಜಾಗದಲ್ಲಿ  ಹೂವಿನ ಗಿಡಗಳು ಹೊಂಗೆ ಮರಗಳನ್ನು  ಹಾಕಿಕೊಂಡಿದ್ದಾರೆ. ಕೆಲವರು ಬೈಕ್ ಕಾರುಗಳ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಧ್ಯೆ ಒಂದತ್ತಡಿ ರಸ್ತೆ ಮಾತ್ರ ಉಳಿದಿದೆ. ಆದಿತ್ಯನ ಬೈಕ್  ತಿರುವುಗಳನ್ನು ದಾಟುತ್ತಾ ಹೋದಂತೆ ನೆನಪೇ ಇಷ್ಟು ಕೊಳ್ಳಲಾಗದಂತೆ  ರಸ್ತೆಗಳು ಬದಲಾಗಿ ಕೊನೆಗೆ ಅಪಾರ್ಟ್ಮೆಂಟ್ ಎದುರು ಬೈಕ್ ನಿಂತಿತು.

 ಇಲ್ಲಿ ನಿಮಗೆ ಖಂಡಿತ ಮನೆ ಸೆಟ್ ಆಗುತ್ತೆ.  ಸ್ವಲ್ಪ ಇಕ್ಕಟ್ಟಿನ ರಸ್ತೆಗಳು ಅನ್ನೋದನ್ನ  ಬಿಟ್ಟರೆ ಎಲ್ಲ ಅನುಕೂಲಯಿದೆ .ಬನ್ನಿ ನೋಡೋಣ ಆದಿತ್ಯನ ಉತ್ಸಾಹ ಕಡಿಮೆ ಆದಂತೆ ಕಾಣಲಿಲ್ಲ. ಕೆಳಗಡೆ ಪಾರ್ಕಿಂಗ್. ಬೈಕ್  ಕಾರು ಏನಾರ ನಿಲ್ಲಿಸ್ಕೊ ಬಹುದು ಎನ್ನುತ್ತಾ ಪಕ್ಕದಲ್ಲಿದ್ದ  ಮ್ಯಾನೇಜರ್ ಕೌಂಟರ್ಗೆ ಹೋದರು. ಯಾವ ಊರು, ಕೆಲಸ ಕುಟುಂಬದ ಬಗ್ಗೆ ವಿಚಾರಿಸಿ ಅಪಾರ್ಟ್ಮೆಂಟ್  ಬಗ್ಗೆ ಕಂಠಪಾಠ ಮಾಡಿದ ರೀತಿ ವಿವರಿಸಿದ. ಇಲ್ಲಿ ಆರು ಮನೆಗಳಿವೆ. ಎಲ್ಲಾ ಹೆಚ್ಕೆ ಬಾಡಿಗೆ ಎಂಟು ಸಾವಿರ. ಮೇಯಿನ್ ಟೇನೇನ್ಸ  ಚಾರ್ಜ್  ಬ್ಯಾರೆ. ಅಡ್ವಾನ್ಸ ಪೂರ ಕ್ಲಿಯರ್ ಮಾಡಬೇಕು. ಇನ್ನು ಏನೇನೊ ಒದರಿದ. ಬನ್ನಿ ಮ್ಯಾಲೆ ಎಂದು ಕೀ ಸ್ಟಾಂಡಿಗೆ ಕೈ ಹಾಕಿದ. ಮೆಟ್ಟಿಲನ್ನು ಹತ್ತುತ್ತಾ ಇಲ್ಲಿ  ಕುಟುಂಬಸ್ಥರು ಇದ್ದಾರೆ.  ಬ್ಯಾಚುಲರ್  ಹುಡುಗರು ಇದ್ದಾರೆ. ಇದುವರೆಗೆ ಯಾರಿಂದಲೂ ಯಾವ ಕಂಪ್ಲೈಂಟ್  ಇಲ್ಲ. ಎಲ್ಲ ಅವರ ಪಾಡಿಗೆ ಅವರು ಇರ್ತಾರ ಅಂದ. ಮನೆ  ಬೀಗ ತೆಗೆದು ಒಳಗೆ ಬಿಟ್ಟ. ಮೊದಲ  ಜಾಗದಲ್ಲಿ ಚಪ್ಪಲಿಗಳನ್ನ ಜೋಡಿಸಿಡಲು ಖಾನೆಗಳು. ನಂತರ ಹಾಲ್  ಕಂ  ಡೈನಿಂಗ್.  ಬಲಕ್ಕೆ ಎರಡು ರೂಂಗಳು. ಬಟ್ಟೆ ಬರೆ ಇಡಲು ವಾರ್ಡೊಬ್ ಗಳು ಚಿಕ್ಕವಾದ್ರೂ  ವ್ಯವಸ್ಥೆ ಚೆನ್ನಾಗಿದೆ  ರೂಮಿನ ಕಿಟಕಿಯಿಂದ ಹೊರಗೆ ನೋಡಿದರೆ ಬರೀ ಮನೆಗಳೇ.. ಹಾಲ್ ನಿಂದ ನೋಡಿದರೆ ಎದುರಿನ ಇಕ್ಕಟ್ಟಾದ ರಸ್ತೆ ಕಾಣುತ್ತಿತ್ತು. ನೀರಿಗೆ ಪ್ರಾಬ್ಲಂಮ್ ಯಿದೆ. ಹೆಚ್ಚು ಬೇಕಾದ್ರೆ  ಟ್ಯಾಂಕರ್ ಹೊಡೆಸಿ ಕೊಳ್ಳಬೇಕು. ಅದರ ಖರ್ಚು ನಮಗೆ ಸಂಬಂಧಿಸಿದ್ದಲ್ಲ. ಕರೆಂಟ್ ಹೋದಾಗ ಯುಪಿಎಸ್ ಸಪ್ಲೈ ಇರುತ್ತೆ. ಆದ್ರೆ ಡಬ್ಬಲ್ ಯುನಿಟ್ ಚಾರ್ಜ್ಕೊಡ ಬೇಕಾಗುತ್ತದ . ಮನಿ ಕೆಲಸದವಳ ಸಿಕ್ತಾರ. ನಿಮ್ಮಿಷ್ಟ. ಗಂಟಾಕಿದ  ಮುಖದವ ಹೇ ಳುತ್ತಿದ್ದ. ಮನೆಯಲ್ಲಿ  ಒಂದು ರೌಂಡ್  ಹಾಕಿ ಮೇಲೆ ಬ್ಯಾಚುಲರ್ ಗಳು ಇದ್ದಾರೆ ಅಂತೀರಿ. ಗಲಾಟೆ ಮಾಡಲ್ವ? ಹರ್ಷ ಕೇಳಿದ  ಆದಿತ್ಯ ಮ್ಯಾನೇಜರ್ ಮುಖವನ್ನು ದಿಟ್ಟಿಸಿದ. ಅವನು ಅಷ್ಟೇ ನಿರ್ಲಿಪ್ತ ವಾಗಿ ಅವರೆಲ್ಲಾ ಕೆಲಸಕ್ಕೆ ಹೋಗೋರು. ದಿನಾ ಬ್ಯೂಸಿ ಇರ್ತಾರೆ.  ಭಾನುವಾರ ಮಾತ್ರ ಸ್ವಲ್ಪ ಗಲಾಟೆಯಿರುತ್ತೆ. ಅಷ್ಟೇ. ಈ ಏರಿಯಾದಲ್ಲಿ  ಇಷ್ಟು ಒಳ್ಳೆ ಮನೆ ಯಾರದೂಯಿಲ್ಲ. ಅನ್ನೊ ಧಿಮಾಕು ಮುಖದಲ್ಲಿ ಕಾಣುತಿತ್ತು. ಪದೇ ಪದೆ ವಾಚ್ ನ್ನು ನೋಡುತ್ತಿದ್ದ. ಹರ್ಷ ಪಕ್ಕಕ್ಕೆ ತಿರುಗಿ ಆದಿತ್ಯರನ್ನು ನೋಡಿದ. ಅವರು ಡೈನಿಂಗ್  ಹಾಲ್ ನಲ್ಲಿದ್ದ ಶಿಂಕ್ ನ  ನಲ್ಲ್ಲಿಯಲ್ಲಿ  ನೀರು ಬರುತ್ತೊ ಇಲ್ವೊ  ಚೆಕ್ ಮಾಡುತ್ತಾ ತಲ್ಲೀನವಾಗಿದ್ದರು.ಆಗಲೆ ಮಧ್ಯಾಹ್ನ ಎರಡೂವರೆ. ಸಮಯ ಹೇಗೆ ಹೋಯ್ತೊ ತಿಳಿಯಲಿಲ್ಲ. ಮನೆಯಿಂದ ಹೊರಬಂದ ನಂತರ ಬೀಗ ಹಾಕ್ಕೊಳಪ್ಫಾ  ಅಂದು, ಹೆಂಗೆ ಹರ್ಷ  ಮನೆ? ಕೇಳುತ್ತಾ ಮೆಟ್ಟಿಲಿಳಿಯ ತೊಡಗಿದರು.

 ಆದಿತ್ಯ ತುಂಬಾ ಸೂಕ್ಷ್ಮ ಮನುಷ್ಯ. ಮಾತಿಲ್ಲದೆಯೆ ಅರ್ಥ ಮಾಡಿಕೊಳ್ಳಬಲ್ಲಂತವರು. ಆತ್ಮೀಯ ಸ್ನೇಹಜೀವಿ. ಕಪಟವರಿಯದ ಮುಗ್ಧ. ಈಗ ಮೊದಲು ಮನೆಗೆ ಹೋಗಿ ಊಟ ಮಾಡಿ ಮುಂದಿನ ವಿಚಾರ ಮಾಡೋಣ. ಎಂದದ್ದು ಅಲ್ಲದೆ ಅದೇ ಉಸಿರಲ್ಲೆ ಯಾವುದಕ್ಕೂ ನಾಳೆ ಹೇಳ್ತೀವಿ ಅನ್ನುತ್ತಾ ಮ್ಯಾನೇಜರ್ ಕಡೆ ನೋಡದೇ ಹೊರ ಬಂದರು. ಊಟ ಇಲ್ಲೆ ಎಲ್ಲಾದರೂ ಹೋಟೆಲ್ನಲ್ಲಿ ಮಾಡೋಣ. ನಿಮಗೆ ತೊಂದರೆ ಯಾಕೆ? ಎಂದು ಹರ್ಷ ಸುತ್ತಲೂ ನೋಡಿದ. ಎರಡೂ ಕೈಗಳಿಂದ  ಪ್ಯಾಂಟನ್ನು ಮೇಲೇರಿಸಿಕೊಂಡ ಆದಿತ್ಯ ಇಲ್ಲ ಇಲ್ಲ ಯಾವ ತೊಂದರೆ. ಎಂತ ಮಾತು. ವೃತ್ತಿ  ಬಾಂಧವರು ನಾವು. ಬರ್ರಿ ಬರ್ರಿ ಬೈಕ್ ಸ್ಟಾರ್ಟ್  ಮಾಡಿಯೆ ಬಿಟ್ಟರು. ಫೋನ್ ಮಾಡಿ ಹೇಳಿರಬೇಕು ಒಳ್ಳೆ ಶ್ಯಾವಿಗೆ ಪಾಯಸ  ರೊಟ್ಟಿ ಬೇಳೆ ಪಲ್ಯ ಅನ್ನ ಮೊಸರು. ಆದರೆ ಊಟದ ಸವಿಯನ್ನು ಸವಿಯಲು ಮನೆಯ  ವಿಚಾರವೇ  ಅಡ್ಡ ಬರುತ್ತಿತ್ತು. ತನಗೆ ಒಪ್ಪಿಗೆ ಇರೋ ಬಡಾವಣೆಯಲ್ಲಿ  ಮನೆ ಸಿಗ್ತಾಯಿಲ್ಲ. ಮನೆ ಸಿಗೊ ಕಡೆ ತನಗೆ ಇಷ್ಟವಾಗಲೊಲ್ಲದು. ಗುಂಗಿ ಹುಳದಂತೆ ಗೊಯ್ ಅನ್ನುತಿತ್ತು ವಿಚಾರ. ತನ್ನ ತಪ್ಪಾದರೂ ಏನು? ಕೇಳಿದಷ್ಟು ಬಾಡಿಗೆ  ಅಡ್ವಾನ್ಸ ಕೊಡಲು ಒಪ್ಪಿದರೂ ನಮ್ಮ ಬಗ್ಗೆ  ಸಂಶಯ. ಮಾಂಸಹಾರಿ ಗಳು ಮನುಷ್ಯರಲ್ಲವೆ ಹಾಗೆ ನೋಡಿದರೆ ಸಸ್ಯಗಳಿಗೂ ಜೀವವಿದೆ. ಅದನ್ನು ಕಿತ್ತು ಕೊಯ್ದು ತಿನ್ನುವುದಿಲ್ಲವೆ.

ತಿನ್ನಬಾರದವರೆ ತಿಂದು ತೇಗುತಿರುವಾಗ ತಿನ್ನುವ ಕುಲದಲ್ಲಿ ಹುಟ್ಟಿ ಬೆಳೆದು ಅಭ್ಯಾಸವಾಗಿದ್ದರೆ ತಪ್ಪೇನು? ತನಗೆ ಇವರ ಮನೆಯಲ್ಲಿ ಊಟ ಹಾಕ್ಕಿದ್ದೆ ದೊಡ್ಡ ಮಾತು. ಆದರೂ ಆದಿತ್ಯನಿಗೆ ತಟ್ಟೆ. ತನಗೆ ಬಾಳೆಲೆ ಹಾಕಿದಾಗಲೆ ಒಂದು ರೀತಿ ಅನ್ನಿಸಿದರೂ  ಬುದ್ಧಿ ಹೇಳಿಕೊಂಡ. ಊಟ ಮುಗಿಸಿ ಕುಳಿತಾಗ ಒಂದು ತೀರ್ಮಾನಕ್ಕೆ ಬಂದಂತೆ ಮುಖ ಗಂಭೀರವಾಗಿತ್ತು. ಮತ್ತೆ ಯಾತ್ರೆ ಹೊರಟರು. ನಿಮಗೆ ಅಪಾರ್ಟ್ಮೆಂಟ್  ಬೇಡಾಂದ್ರೆ  ಸಿಂಗಲ್ ಮನೆಗಳನ್ನೆ ನೋಡೋಣಾಂತ ಮನೆ ಖಾಲಿಯಿದೆ ಎಂಬ ಬೋರ್ಡ್ ಹುಡುಕುತ್ತಾ ಬೀದಿ ಬೀದಿ ಸುತ್ತಿದರು. ಆ ಉರಿ ಬಿಸಿಲಿಗೆ ಬೆವರು  ಪುಟಿದೇಳುತಿತ್ತು. ಕರ್ಚೀಫನಿಂದ  ಎಷ್ಟೇ ಒರೆಸಿಕೊಂಡರೂ ಅದು ನಿರರ್ಥಕವೆಂದು ಗೊತ್ತಾದರೂ ಒರೆಸಿ ಕೊಳ್ಳುವುದು ಅನಿವಾರ್ಯ ವಾಗಿತ್ತು. 

ಸಂತೆ ಮೈದಾನದಂತೆ ವಿಶಾಲವಾದ ಜಾಗವಿತ್ತು. ಹತ್ತಾರು ಮರಗಳು ಅಲ್ಲಿ ಆವರಿಸಿದ್ದವು ಆ ಪ್ರದೇಶವನ್ನು ದಾಟಿದ ಮೇಲೆ ಮನೆ ಬಾಡಿಗೆಗೆ ಇದೆ. ಎಂದು ಗೋಡೆಗೆ ಬರೆದಿರುವುದು ಕಾಣಿಸಿತು. ಆದರೆ ಮನೆಗೆ ಬೀಗ. ಅಲ್ಲೆ ಆಡುತ್ತಿದ್ದ ಹುಡುಗರನ್ನು ಕೇಳಿದರು ಆದಿತ್ಯ. ತಮ್ಮಾ,.. ಈ ಮನೆಯ ಒನರ್ ಎಲ್ಲಿ ಇರ್ತರಾ? ಐದಾರು ಹುಡುಗರು ಅವರನ್ನು ಮುತ್ತಿಕೊಂಡರು. ಅಂಕಲ್ ಬಾಜೂ ಮನೀನೆ. ಅಂದ್ರು. ರಸ್ತೆಯ ಎರಡು ಕಡೆ ಚರಂಡಿಗಳು ತುಂಬಿ ತುಳುಕುತ್ತಾ ಕೊಳಚೆ ನೀರು ನಿಧಾನವಾಗಿ  ಹರಿಯುವುದನ್ನು ನೋಡಿ, ಹರ್ಷ  ಬೆರಳುಗಳನ್ನು ತನಗೆ ಅರಿವಿಲ್ಲದೆಯೆ ಮೂಗಿಗೆ ಅಡ್ಡವಿಟ್ಟುಕೊಂಡನು. ಮನೆಯ ಕಾಪೌಂಡಿನೊಳಗೆ ನಡುವೆ ಸಿಮೆಂಟಿನ ಕಾಲುದಾರಿ. ಎರಡು ಬದಿಗೆ ಗಿಡಗಳನ್ನು ಬೆಳೆಸಿದ್ದರು. ರೀ.. ಎಂದು ಕೂಗುತ್ತಾ ಕಾಲಿಂಗ್  ಬೆಲ್  ಆದಿತ್ಯ ಒತ್ತಿದರು. ಯಾರೂ… ಎನ್ನುತ್ತಾ ಬಾಗಿಲು ತೆರೆದ ವ್ಯಕ್ತಿ ಹೊಟ್ಟೆ ಮೇಲೆ ಕೈಯಾಡಿಸುತ್ತಲೆಯಿದ್ದ. ಹರ್ಷ ರವರು ರಸ್ತೆಯಲ್ಲಿ ಬೈಕ್ ಹತ್ತಿರವೇ ನಿಂತಿದ್ದರು. ಮಾಲೀಕರ ಮನೆ ಹೌದೊ ಅಲ್ಲವೊ ಎಂಬ ಅನುಮಾನದಿಂದ. ಸರ್, ಪಕ್ಕದ ಮನೆ ಬಾಡಿಗೆಗೆ ಇದೆ ಅಂತ ಬರಿದಿದೀರಾ. ರಾಗವೆಳೆಯುತ್ತಾ.. ನಿಮ್ದೆನಾ…ಕೊಡ್ತಿರಾ..ಎರೆಡೆರಡು ಪ್ರಶ್ನೆಗಳನ್ನು ಒಟ್ಟಿಗೆ ಕೇಳಿದರು ಆದಿತ್ಯ. ಹೌದು. ನಮ್ದೆ.. ಮನೆ ನೋಡ್ತೀರ. ಅಂದು, ಲೇ.. ಕೀ ಕೊಡೆ ಎಂದು ಒಳಗೆ ಕೇಳುವಂತೆ ಕೂಗಿದರು. ಸರ್, ಒಂದು ಮಾತು ಎಂದು ದನಿ ತಗ್ಗಿಸಿ ಹತ್ತಿರ ಬಂದು ಕೇಳಿದರು ಆದಿತ್ಯ. ತಿನ್ನೋರಾದ್ರೆ ಪರವಾಗಿಲ್ವ? ತಲೆಯನ್ನು ಸ್ವಲ್ಪ ತಗ್ಗಿಸಿದರು. ಹ್ಹ.. ಹ್ಹಾ.. ಎಂದುಜೋರಾಗಿ ನಕ್ಕ ಆತ ಸ್ವಾಮಿ ನಾವೂ ಅವರೆ.

ಎನ್ನುತ್ತ ಒಳಗಿನಿಂದ ಕೀ ಇಸಕಕೊಂಡು ಬನ್ನಿ ಎಂದರು. ಎರಡು ಮನೆ ಮಧ್ಯೆ ಕಾಂಪೌಂಡಿದೆ. ಪ್ರತ್ಯೇಕ ಗೇಟ್ ಗಳು. ಅಷ್ಟರಲ್ಲಿ ಹರ್ಷ ನೂ ಬಂದು ಮನೆಯೊಳಗೆ ಇಣುಕಿದ. ಮುಗ್ಗಲು ವಾಸನೆ. ಮುಖಭಾವ ಅರ್ಥ ಮಾಡಿಕೊಂಡ ಒನರ್, ಅದು ಕಿಟಕಿ ಬಾಗಿಲುಗಳನ್ನ ಎರಡು ತಿಂಗಳಿಂದ ಮುಚ್ಚಿದ್ದೀವಲ್ಲಾ… ರಾಗವೆಳೆದನು. ಹಾಗೆ ಒಳಗೆ ಕರೆದೊಯ್ದು ವಿವರಿಸಿದ್ದರು. ಇದು ವರಾಂಡ,   ಹಾಲ್  , ಅಡಿಗೆ ಮನೆ, ಬಚ್ಚಲುಮನೆ.

ಹಳೆಯ ಮಾದರಿ ಅನ್ನಿಸಿತು. ಅದನ್ನು ತೋರಗೊಡದೆ ಆಸಕ್ತಿ ಯಿಂದ ಕೇಳಿಸಿಕೊಂಡರು.ಬಚ್ಚಲುಮನೆಯಲ್ಲಿ ಕಟ್ಟಿಗೆ ಉರಿ ಹಾಕುವ ಹಂಡೆ ಹಾಕಿಸಿದ್ದರು.ಹಂಡೆ ಬೇಡಾಂದ್ರೆ ಗ್ಯಾಸ್ ಗೀಸರ್ ಹಾಕಿಸಿಕೊಳ್ಳಿ.  ಸ್ವಲ್ಪ ಡ್ರೈನೇಜ್ ಸಮಸ್ಯೆಯಿದೆ. ಹಿಂದುಗಡೆ ಪೈಪು ಕಟ್ಟಿಕೊಂಡಾಗ, ನೋಡಿ ಈ ಗಳ ಇದೆಯಲ್ಲಾ ಇದರಿಂದ ಎರಡು ಮೂರು ಸಲ ಆ ಪೈಪೊಳಗೆ ಅಲ್ಲಾಡಿಸಿದರೆ ಕಟ್ಟಿಕೊಂಡಿರೋದೆಲ್ಲಾ  ಹೋಗಿಬಿಡತ್ತೆ. ಹೆಮ್ಮೆ ಯಿಂದ ಹೇಳ್ತಯಿದ್ರು. ಪಾಪ. ಅವರ ಮನೆ ಅವರಿಗೆ ಚೆಂದ. ಹೆತ್ತೋರಿಗೆ ಹೆಗ್ಗಣ ಮುದ್ದು. ಕೂಡಿದೋರಿಗೆ ಕೋಡಗ ಮುದ್ದು. ಆತನ ಎಲ್ಲಾ ಗುಣಗಾನವನ್ನು ತಾಳ್ಮೆ ಯಿಂದ ಆಲಿಸಿ ನಾಳೆ ಹೇಳ್ತೀನಿ ಎಂದು ಇಬ್ಬರೂ ಹೊರಬಂದರು. ಮಾತಾಡುವಷ್ಟು ಆಸಕ್ತಿ ಇರಲಿಲ್ಲ.

ಸುಮ್ಮನೆ ಬೈಕ್ ಏರಿ ಬಂದ ದಾರಿಯಲ್ಲೆ ವಾಪಸ್ಸಾದರು. ಸುಮಾರು ದೂರ ವಾಪಸ್ಸಾದ ಮೇಲೆ ಪಾರ್ಕಯಿದ್ದ  ಏರಿಯಾ ತಲುಪಿದರು. ಬೈಕ್  ನಿಲ್ಲಿಸುವಂತೆ ಆದಿತ್ಯರ ಭುಜದ ಮಲ್ಲಮೆ ಲ್ಲಗೆ ತಟ್ಟಿದರು. ಅಲ್ಲೆ ಪಕ್ಕದಲ್ಲಿದ್ದ ಬೇವಿನ ಮರದ ನೆರಳಿಗೆ ಗಾಡಿ ತಂದು ನಿಲ್ಲಿಸಿದರು. ಬೇಜಾರಾಯ್ತೇನ್ರಿ.. ಎನ್ನುತ್ತಾ ಗಾಡಿ ಇಳಿದವರೆ  ಈಗ ಐದು ಗಂಟೆ. ರಾತ್ರಿ ಎಂಟರವರೆಗೆ ಪ್ರಯತ್ನ ಮಾಡೋಣ. ನಂತರ ನೀವು ಊಟ ಮಾಡಿ ಊರಿಗೆ ಹೊರಡಿ. ನಾನು ಇಲ್ಲಿ ಟ್ರೈ ಮಾಡಿ ತಿಳಿಸ್ತಾಇರ್ತೀನಿ. ಎಲ್ಲಿ ಹರ್ಷ ಬೇಜಾರಾದರೊ ಎಂಬ ಆತಂಕ. ರಾತ್ರಿಯೆಲ್ಲಾ ಪ್ರಯಾಣ. ಬಸ್ಸಿನಲ್ಲಿ ಸರಿಯಾಗಿ ನಿದ್ದೆಯಿಲ್ಲ. ಇವತ್ತು ಬರೀ ಸುತ್ತಿ ಸುತ್ತಿ ಸಾಕಾಗಿಹೋಗಿತ್ತು ಹರ್ಷನಿಗೆ. ಇದಕ್ಕೆ ಅಂತ್ಯ ಹಾಡಬೇಕು ಅನ್ನಿಸಿತು. ಮತ್ತೊಮ್ಮೆ ಬಂದರೂ ಈ ಗೋಳು ತಪ್ಪದು ಎಂಬುವುದೂ ಮನದಟ್ಟಾಯಿತು. ಇದು ಕಡೇ ಬಾರಿ ಒಳ್ಳೆ ಬಡಾವಣೆಯಲ್ಲೆ ಹುಡುಕೋಣ. ಗುಸಗುಸ ಪಿಸಪಿಸಾಂತ ಮಾತನಾಡಿಕೊಂಡರು. ಮೊದಲು ನೋಡಿದ ಅದೇ ಏರಿಯಾ ದಲ್ಲಿ ಒಂದೆರಡು ತಿರುವುಗಳನ್ನು ಸುತ್ತುತಿದ್ದಂತೆ, ಮನೆ ಬಾಡಿಗೆಗೆ ದೊರೆಯುತ್ತದೆ. ಬೋರ್ಡ್ ಕಂಡು  ಬೈಕ್ ಇಳಿದರು.

ಒಂದೆ ಗೇಟ್ ನೊಳಗೆ ಎರಡು ಮನೆಗಳು. ಮಾಲೀಕರು ಹೊರಗೆಯಿದ್ದರು. ಇವರು ಬಂದಿದ್ದು ಮನೆ ನೋಡಲೆಎಂಬುವದು ಅವರಿಗೆ ಮಾಮೂಲಿಯ ವಿಷಯವಾಗಿತ್ತು. ನಾಲ್ಕು ಹೊಂಗೆ ಮರಗಳು ಹಸನಾಗಿ ನೆರಳು ಚೆಲ್ಲಿದ್ದವು. ಕೆಳಗಿದ್ದ ಕಲ್ಲಬೆಂಚುಗಳ ಮೇಲೆ ಕುಳಿತು ಮಾತಿಗಿಳಿದರು. ಮನೆ ನೋಡಿ ಮಾತಾಡುತ್ತಿರೊ, ಮಾತನಾಡಿ ಮನೆ ನೋಡ್ತಿರೊ ಎಂದರು. ಹೊರಗಿಂದ ನೋಡಿದರೆ  ಗೊತ್ತಾಗುತ್ತೆ  ಮಾತು ಕತೆ ಹೊಂದಿಕೆಯಾದ ಮೇಲೆ ನೋಡೊಣ   ಆದಿತ್ಯ ಮುಂದುವರೆದು ಹೇಳಿದರು. ಉಲ್ಲಾಸ ಸುಮ್ಮನೆ ಮುಗುಳ್ನಕ್ಕರು.ಸಾಧಾರಣ ಜನ, ಆಡಂಬರ ಅಬ್ಬರ ಕಂಡು ಬರಲಿಲ್ಲ. ಬಾಡಿಗೆ ಬಂಟ ಮಾತಾಡಿದ್ದಾಯ್ತು. ಹಾಗಾದರೆ ಇನ್ನೇನು ಮನೆ ನೋಡಾನ ಮಾಲೀಕ ಜೊತೆಗೆ ಎಲ್ಲರು ಎದ್ದರು. ನೀವು ಯಾವ ಪೀಠದವರು? ಆದಿತ್ಯ ಜೋರಾಗಿಯೆ ಕೇಳಿದರು. ಅವರ ಉತ್ತರವನ್ನು ಕೇಳಿಸಿಕೊಂಡನೊ ಬಿಟ್ಟನೊ ಒಹೊ… ಚಲೊ ಆತು ನೋಡ್ರಿ. ಇವರು ನಿಮ್ಮ ಪೈಕಿ ಯವರೆ ಎಷ್ಟು ಮನಿಗಳನ್ನ ತೋರಿಸಿದರೂ ಒಲ್ಲೆ ಅನ್ನೋರು. ಈ ಮನೆ ಹೆಂಗೆ ಇದ್ದರು ನೂರಕ್ಕೆ ನೂರರಷ್ಟು ಹೊಂದಿಕೆ ಖಾಯಂ. ಕುಶಾಲಿಯಿಂದ ನಗಾಡಿದ. ಮಾಲೀಕ ಬಾಳ ಕುಶೀಲಿ ಮನೆ ತೋರಿಸಿ ಸಂತೋಷ ಗೊಂಡನು. ಚಾ ಕುಡಿಯಲು ಬಲವಂತ ಮಾಡಿದ್ರೂ ನಿಲ್ಲಲಿಲ್ಲ. ಏಕೆಂದರೆ ಚಾ ಕುಡಿತಾ ಮಾತು ಎಲ್ಲೆಲ್ಲಿಗೊ ಹೊರಳಿ ಮತ್ತೆ ಏನಾರ ಎಡವಟ್ಟಾದರೆ ಇಷ್ಟು ಕಷ್ಟಪಟ್ಟಿದ್ದೂ ವ್ಯರ್ಥ ವಾಗಿ ಹೊಳಿಯಾಗೆ ಹುಣುಸೆಹಣ್ಣು ಕಲಸಿದಂಗಾದಾತು ದಡಬಡನೆ  ಹೊಂಟು ಹೊರಗೆ ಬಂದು ಉಸ್ಸಪ್ಪಾಂದ್ರು.

ಆಗಲೆ ಏಳು ಗಂಟೆ. ಬಂದ ಕೆಲಸ ಪ್ರಯಾಸದಿಂದಲೆ  ಆದ್ರೂ ಆಯಿತು ಅನ್ನೋ ನಿರಾಳ ಒಂದು ಕಡೆಯಾದರೆ, ಕೊರಳಿಗೆ ಸುತ್ತಿಕೊಂಡ ಹಾವಿನಂಗೆ ಈ ಸುಳ್ಳನ್ನು ಸುತ್ತಿಕೊಂಡು ಹೇಗೆ  ಸಂಸಾರ ಸಂಭಾಳಿಸ ಬೇಕೊಂತ ಮನಸ್ಸಿನೊಳಗೆ ಕೊರೆಯುತಿತ್ತು. ಮನಸ್ಸನ್ನು ಓದೊ ಆದಿತ್ಯ  ನಮ್ಮ ನಡವಳಿಕೆ, ರೀತಿ ನೀತಿಗಳು ನಮ್ಮ ಧರ್ಮ. ಇದೆನೂ ತಪ್ಪು ಅನ್ನಿಸಂಗೆಯಿಲ್ಲ. ಒಂದು ಮಾತಿನಿಂದ ಒಳ್ಳೆ ದಾರಿ ಸಿಕ್ತದ ಅಂದ್ರೆ ಒಳ್ಳೆ ಮಾತು ಆಡಿ ಅದರಂತೆ ನಡೆದರೆ ಶಿವ ಮೆಚ್ಚೆ ಮೆಚ್ತಾನ. ಬರ್ರೀ… ಆ ಹುಳ ಕಿತ್ತು ಹೊರಗ ಬಿಸಾಕ್ರಿ. ಅರ್ಧ ತಾಸು ರೆಸ್ಟ ಮಾಡಿ  ಆರಾಮಾಗಿ ನಿಮ್ಮ ಪ್ರಯಾಣ ಬೆಳಸ್ರಿ. ಎಲ್ಲಾ ಒಳ್ಳೆದಾಗುತ್ತ.ಅವರ ಮಾತು ಬೆನ್ನೆಲಬಿನಂಗೆ ಆಧಾರವಾಗಿ ಹದಿನೈದು ವರ್ಷ ಅದೇ ಮನಿ ಅದೇ ಊರಾಗ ಜೀವನ ನಡೆಸಿದ ಹರ್ಷನಿಗೆ ಮತ್ತೆ ಬೇರೆ ಊರಿಗೆ ವರ್ಗವಾದಾಗ ಅಷ್ಟು ವರ್ಷಗಳ ಕಾಲ ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಅವರ ವಿದಾಯ

ಹರ್ಷನ ಕಣ್ಣಲ್ಲಿ ನೀರುತುಂಬಿತು.ಹೆಂಡತಿ ಸ್ಪಂಧನ ಅಷ್ಟೇ ಚೆಂದಾಗಿ  ಹೊಂದಿಕೊಂಡಿದ್ದಳು.ಮೂರು ವರ್ಷದ ಮಗನಿಗೆ ಯಾವ ಬೇಧ ಭಾವವೂ ತಿಳಿಯದೆ ಬೆಳೆದ. ಋತುಮಾನಕ್ಕೆ ತಕ್ಕಂತೆ ಪ್ರಕೃತಿ ಮಾತೆ ಬದಲಾಗುತ್ತಾಳೆ. ನಮ್ಮ ಜೀವನಗಳ ಸಹ ಇದಕ್ಕೆ ಹೊರತಾಗಿಲ್ಲ. ಭಾವಗಳ ಅಲೆಗಳು ಅಪ್ಪಳಿಸುತ್ತಿದ್ದವು. ಹರ್ಷ ಮತ್ತು ಕುಟುಂಬದವರು ಮನೆಯಿಂದ ಹೊರಬಂದರು.

*********

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter