ಜಗ ಮೆಚ್ಚಿದ ಚುಟುಕು ಕವಿ ಜರಗನಹಳ್ಳಿ

ತಮ್ಮ 72ನೆಯ ವಯಸ್ಸಿನಲ್ಲಿ ಇದೀಗ ಇಹಲೋಕ ತ್ಯಜಿಸಿದ ಕನ್ನಡದ ಹಿರಿಯ ಕವಿ ಜರಗನಹಳ್ಳಿ ಶಿವಶಂಕರ್ ಚುಟುಕು ಕವಿಯೆಂದೇ ಪ್ರಸಿದ್ಧರು. ದಿನಕರ ದೇಸಾಯಿ, ಅಕ್ಬರ್ ಅಲಿ, ದುಂಡಿರಾಜ್‍ರಂತಹ ಪ್ರಬುದ್ಧ ಚುಟುಕು ಕವಿಗಳ ಸಾಲಿನಲ್ಲಿ ನಿಲ್ಲ ಬಹುದಾದ ಗೇಯುತೆ, ಗಂಭೀರತೆ ಎರಡನ್ನೂ ಒಳಗೊಂಡ  ಜರಗನಹಳ್ಳಿಯವರ ಹನಿಗವನಗಳು ಕನ್ನಡಿಗರಿರುವ ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಚಿರಪರಿಚಿತವಾಗಿವೆ. ಅವರು ಕವನ ಓದುವ ಶೈಲಿಯಿಂದ ಅವುಗಳಲ್ಲಿನ ಅರ್ಥವಂತಿಕೆಯಿಂದ, ಅವು ಕೇಳುಗರನ್ನು ಮಂತ್ರ ಮುಗ್ಧಗೊಳಿಸುತ್ತವೆ. ಓದುವ ಶೈಲಿಯಂತೂ ಯಾವ ಅಬ್ಬರವೂ ಇಲ್ಲದ, ಅನವಶ್ಯಕ ಹಾಸ್ಯಾಲಾಪಗಳಿಲ್ಲದ, ಘನ ಗಂಭೀರ ಮಂದನೆಯ ತೈಲ(ಜಲ)ಪಾತದಂತೆ ಭಾಸವಾಗುತ್ತದೆ. ಇದರಿಂದಾಗಿ ಇವರು ಬಹುಶೃತರೂ ಹೌದು.ಅಮೇರಿಕ, ಸಿಂಗಾಪೂರ್, ದುಬೈ, ಬಹರೇನ್ ಮುಂತಾದ ದೇಶಗಳಲ್ಲಿ ಇವರ ಕಾವ್ಯಾಭಿಮಾನಿಗಳಿದ್ದಾರೆ.ನೀವು ಯಾವಾಗಲಾದರೂ ಬನ್ನಿ ನಾವೇ ಟಿಕೆಟ್ ಮಾಡಿಸಿ, ಆತಿಥ್ಯ ಮಾಡುತ್ತೇವೆ ಎಂದೆನ್ನುವ ಕಟ್ಟಾ ಅಭಿಮಾನಿಗಳು ಇವರಿಗಿರುವುದನ್ನು ನಾನೇ ಅಲ್ಲೆಲ್ಲ ಕಣ್ಣಾರೆ ನೋಡಿದ್ದೇನೆ.

ಜರಗನಹಳ್ಳಿಯವರ ಕಾವ್ಯ ವಸ್ತುವಿನ ಹರವೂ ಬಹು ವಿಶಾಲವಾದದ್ದು. ಮುಖ್ಯವಾಗಿ ಅವರೇ ಹೇಳುವಂತೆ ನಿಸರ್ಗ, ಪ್ರೀತಿ, ನೀರು, ನದಿಗಳೆ ಆಗಿದ್ದರೂ ಮನುಷ್ಯ ಪ್ರೀತಿ, ಪ್ರೇಮ, ಗಾಢ  ಮಾನವೀಯ ಸಂಬಂಧ ಇವುಗಳ ಅನಾವರಣವೂ ಅವರ ಕಾವ್ಯದಲ್ಲಿ ಎದ್ದು ಕಾಣುತ್ತದೆ. ವಚನಗಳು, ದಾಸರ ಪದಗಳು, ಉಗಾಭೋಗಗಳು, ಡಿ.ವಿ.ಜಿ., ಸರ್ವಜ್ಞಇವರೆಲ್ಲರ ಅಧ್ಯಯನದಿಂದಾಗಿ ಮತ್ತು ಕಿ.ರಂ. ನಾಗರಾಜ್, ಲಂಕೇಶ್, ಲಕ್ಷ್ಮಣರಾವ್, ಕಂಬಾರರಂತಹ ಹಿರಿಯ ಕವಿಗಳ ಒಡನಾಟದಿಂದಾಗಿ ಇವರ ಸಾಹಿತ್ಯ ನಿರ್ಮಿತಿಗೊಂದು ವಿಶೇಷ ಕಳೆ ಹಾಗೂ ಶಕ್ತಿ ಬಂದಿದೆ.ವ್ಯಂಗ್ಯ, ವಿನೋದಗಳನ್ನು ಅರ್ಥಪೂರ್ಣವಾಗಿ ಉಪಯೋಗಿಸಿ ಕೊಳ್ಳುವ, ಓರೆಕೋರೆಗಳೆಡೆ ಚಾಟಿ ಬೀಸುವ ಗುಣ ಇವರ ಕಾವ್ಯದ ಇನ್ನೊಂದು ವೈಶಿಷ್ಟ್ಯ.ಅವರ ಪ್ರೀತಿಯಇಂತಹ ಹತ್ತಾರು ಚುಟುಕುಗಳಲ್ಲಿ ಒಂದೆರಡನ್ನುಇಲ್ಲಿ ನೋಡಿ :

ಹತ್ತಾರು ವರುಷ

ನೆರಳಾಗಿ ನಿಂತ ಮರ

ತೊಲೆಯಾಗಿ ಉಳಿಯಿತು

ನೂರಾರು ವರುಷ

ನೂರಾರು ವರುಷ

ಆಳಿದ ಅರಸ

ಹೆಣವಾಗಿ ಉಳಿಯಲಿಲ್ಲ

ಮೂರು ದಿವಸ

                                (ಬಾಳಿಕೆ ಎಂಬ ಕವನ)

ಮೂರ್ನಾಲ್ಕು ದಶಕಗಳ ಹಿಂದೆ ಈ ಕಿರುಗವನಗಳ ಬಗ್ಗೆ ಇದ್ದ ಕೆಲವರ ತಾತ್ಸಾರದಿಂದ ನೊಂದ ಜರಗನಹಳ್ಳಿಯವರು ಕಾವ್ಯದಲ್ಲಿ ಸಣ್ಣದುದೊಡ್ಡದು ಎಂಬ ಬೇಧ ಭಾವ ಇರಕೂಡದು, ಕಾವ್ಯ ಪರಿಣಾಮಕಾರಿಯಾಗಿರಬೇಕು ಅದೇ ಮುಖ್ಯಎಂದು ಪ್ರಬಲವಾಗಿ ಮಂಡಿಸಿ ಅದನ್ನು ಸಾಧಿಸಿ ತೋರಿಸಿದರು. ಇಗೋ ನೋಡಿ:

ಅಗಾಧ ಕಡಲಿಗೂ ಹಾರಿ ಮುಗಿಲಾಗಿ

ಹನಿ ಹನಿಯಾಗುವ ಆಶೆ

ನೆಲದ ಪ್ರತಿ ಹನಿಗೂ

ಓಡಿ ಓಡಿಕಡಲಾಗುವ ಆಸೆ

ಹೀಗೆಯೇ ಇನ್ನೊಂದು ಹನಿ ಹೀಗಿದೆ:

ದೊಡ್ಡ ಆನೆ ಒಂಟೆಗಳಿಗಿಲ್ಲದ ವಿಷ

ಸಣ್ಣ ಹಾವು ಚೇಳಿನೊಳಗೆ ಬಂತು

ಉದ್ದ ತೆಂಗು ತಾಳೆಗಳಿಗಿಲ್ಲದ ಖಾರ

ಸಣ್ಣ ಮೆಣಸಿನ ಗಿಡದೊಳಗೆ ಬಂತು

ಇಂತಹ ಅಪ್ರತಿಮ ಹನಿಗವನಗಳ ರಚನೆಗಳಿಂದಾಗಿ ಕಿರಂರಂತಹವರನ್ನು ಸೆಳೆದು, ಅವರ ಬೆಂಬಲ, ಒತ್ತಾಸೆ, ಮಾರ್ಗದರ್ಶನದಿಂದಾಗಿ ಚುಟುಕುಗಳ ಪ್ರಾಮುಖ್ಯತೆಯನ್ನು ಸಮರ್ಥಿಸುವ ಕವಿತೆ ಹಾಗೂ ಮಾತುಗಳನ್ನು ಶಿವಶಂಕರ್ ಮುಂದುವರಿಸುತ್ತಲೇ ಬಂದರು.ಬಾಲ್ಯದಿಂದ ಪ್ರಾಸಕ್ಕೆಆಕರ್ಷಿತರಾಗಿ ಬರವಣಿಗೆ ಪ್ರಾರಂಭಿಸಿದ್ದರೂ ತದನಂತರ ಆರ್ಥ, ವ್ಯಾಪ್ತಿ, ಆಳಗಳನ್ನು ಹೆಚ್ಚಿಸಿಕೊಳ್ಳುತ್ತಲೇ ಮುನ್ನೆಡೆರು.ಮಾನವೀಯ ಸಂಬಂಧಗಳ ಹಿರಿಮೆಗಳ ಬಗ್ಗೆ ಬರೆಯುತ್ತ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ನಿಜ ಬಸವ ಭಕ್ತರಿರವರು.ತೊಂದರೆಯಲ್ಲಿರುವ ಹಿರಿಯ ಸಾಹಿತಿಗÀಳಿಗೆ ಉದಾರವಾಗಿ ಆರ್ಥಿಕ ಸಹಾಯ ಮಾಡಿದರು. ಪ್ರಕಾಶಕರು ಸಿಗದೇ ನಿರಾಶರಾದಯುವ ಬರಹಗಾರರಿಗೆ ತಮ್ಮ ‘ಶುಭದ’ ಪ್ರಕಾಶನದಲ್ಲಿ ಲೋಕದರ್ಶನ ಮಾಡಿಸಿದರು.ಹೀಗೆ ಕೇವಲ ಕಾವ್ಯಕ್ಕಾಗಿಯೇ ಮೀಸಲಾಗಿದ್ದು, ಐವತ್ತಕ್ಕಿಂತಲೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ ಹೆಮ್ಮೆ ಈ ಸಂಸ್ಥೆಯದಾಗಿದೆ.ಇದರ ಜೊತೆ ಅನೇಕ ಕವಿಗೋಷ್ಠಿಗಳನ್ನು, ಸಾಹಿತ್ಯ ಕೂಟಗಳನ್ನು, ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ಅವಕಾಶ ವಂಚಿತ ಕವಿ, ಸಾಹಿತಿಗಳಿಗೆ ಪ್ರೋತ್ಸಾಹ ನೀಡಿದರು.

ನಾನು ರೈಲಿನಲ್ಲಿ ಪ್ರಯಾಣ ಮಾಡಿ ಬಂದೆ

ಒಂದೆರಡು ಬೋಗಿಗಳಿಗೂ ಆಚೆಯಿದ್ದ

ಅದರ ಚಾಲಕ ನನಗೆ ಕಾಣಲಿಲ್ಲ

ನಾನು ವಿಮಾನದಲ್ಲೂ ಹಾರಿಬಂದೆ

ಆಗಲೂ ಅಷ್ಟೇ, ಅದರ ಚಾಲಕ ನನಗೆ ಕಾಣಲಿಲ್ಲ

ಇನ್ನು ಜಗದ ಚಾಲಕ ನನಗೆ ಕಾಣುವುದುಂಟೆ?

ಇಲ್ಲ, ಅವನ ಕಾಯಕ ಅವನದು

ನನ್ನ ಪಯಣ ನನ್ನದು

ಅವರ ಈ ಹನಿಗವನದ ಅರ್ಥಗರ್ಭಿತ ಸಾಲಿನಂತೆ, ಜರಗನಹಳ್ಳಿಯವರು ತಮ್ಮಜೀವನದ ಪಯಣವನ್ನುಇಲ್ಲಿಗೇ ನಿಲ್ಲಿಸಿ, ಕಾಣದ ಲೋಕದಕಡೆ ಹೆಜ್ಜೆಯನ್ನಿರಿಸಿದ್ದಾರೆ.ಮಾರಾಣಾಂತಿಕ ಕೊರೋನಾಗೆ ತುತ್ತಾಗಿ, ಬದುಕಿನ ಯಾತ್ರೆಯನ್ನು ಕೊನೆಗಾಣಿಸಿದ್ದಾರೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರು ಉಳಿಸಿ ಹೋದ ಕಾವ್ಯದ ಮೂಲಕ ಅವರನ್ನು ಸದಾ ಸ್ಮರಿಸೋಣ.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

1 thought on “ಜಗ ಮೆಚ್ಚಿದ ಚುಟುಕು ಕವಿ ಜರಗನಹಳ್ಳಿ”

  1. ಅರುಣ ರಾವ್

    ಹೌದು, ನಮ್ಮಂತ ಎಷ್ಟೋ ಕವಿಗಳ ಬೆನ್ನೆಲುಬಾಗಿದ್ದರು. ಅಂತಹ ಮಹಾನ್ ಚೇತನವನ್ನು ಕಳೆದುಕೊಂಡು ನಾವಿಂದು ನಿಜಕ್ಕೂ ತಬ್ಬಲಿಗಳಾಗಿದ್ದೇವೆ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter