ಆ ರಾತ್ರಿ … (ನೈಜ ಘಟನೆ ಆಧಾರಿತ)

(ನೈಜ ಘಟನೆ  ಆಧಾರಿತ  ಈ  ಕತೆ  :  ಸುಜಾತ ರಮೇಶ)

ನೀರವ,  ನಿರ್ಜನ  ರಸ್ತೆ.  ಅದರಲ್ಲೊಂದು  ಕೆಂಪು  ಮಾರುತಿ ಕಾರು  ವೇಗವಾಗಿ  ಹೋಗುತ್ತಿತ್ತು.  ಕಾರೊಳಗಿದ್ದದ್ದು ಮೂವರು,  ಆಕೆ, ಆಕೆಯ  ಅಣ್ಣ  ಮತ್ತು  ಅಣ್ಣನ ಹೆಂಡತಿ. ಅದೇನೊ  ಗಹನವಾದ  ವಿಷಯದ ಕುರಿತಾದ  ಮಾತುಕತೆಯಲ್ಲಿ  ತಲ್ಲೀನರಾಗಿದ್ದರು. ಅಂದು ಬೆಳಿಗ್ಗೆ  ಮಂಗಳೂರಿನಿಂದ,  ಅಣ್ಣ ಮತ್ತೆ ಅತ್ತಿಗೆಯ  ಜೊತೆ ಮೈಸೂರಿಗೆ ಹೊರಟಿದ್ದಳವಳು.  ರಾತ್ರಿ ಮೈಸೂರಿನಲ್ಲಿ  ಅಣ್ಣನ ಮಗನ ಮನೆಯಲ್ಲಿದ್ದು,  ಮರುದಿನ  ಬೆಂಗಳೂರಿಗೆ ಪಯಣಿಸುವವಳಿದ್ದಳು.  ಎಷ್ಟು  ಬೇಗ ಎದ್ದರೂ    ಕೆಲಸವೆಲ್ಲ  ಮುಗಿಸಿ    ಹೊರಡುವಾಗ    ಗಂಟೆ 12 ಬಾರಿಸಿತ್ತು.   ಮನೆ ಹತ್ತಿರ ಇದ್ದ  ಭಟ್ರ ಹೋಟೆಲ್ ನಲ್ಲಿ  ಊರಿನ  ಕುಚ್ಚಲಕ್ಕಿಯ  ಊಟ ಮಾಡಿ , ಅಂತೂ  ಇಂತೂ  ಮಂಗಳೂರು ಬಿಡುವಾಗ ಗಂಟೆ  1 ದಾಟಿತ್ತು.

ಕಾರಿನ   ಕಿಟಕಿಯಿಂದ  ಕಾಣುವ     ಹಚ್ಚ ಹಸಿರಿನ  ಪ್ರಕೃತಿಯ  ಸೌಂದರ್ಯವನ್ನು  ಆಸ್ವಾದಿಸುತ್ತಾ,  ಪಕ್ಕದಲ್ಲಿದ್ದ  ಅತ್ತಿಗೆಯ  ಜೊತೆ  ಮಾತನಾಡುತ್ತಾ  ಪ್ರಯಾಣ  ಬೆಳೆಸಿದ್ದಳು.  ಡ್ರೈವ್  ಮಾಡುತ್ತಿದ್ದ  ಅಣ್ಣ,  ಆಗಾಗ  ಇವರ  ಮಾತಿನಲ್ಲಿ  ತಮ್ಮ  ಧ್ವನಿಯೂ  ಸೇರಿಸುವ  ಪ್ರಯತ್ನ  ಮಾಡುತ್ತಿದ್ದರು . ಸಮಯ  ಕಳೆಯುತ್ತಿತ್ತು, ಸೂರ್ಯ ಬಾನಲ್ಲಿ  ಇಳಿಯುತ್ತಿದ್ದ,  ಕಾರು  ವೇಗವಾಗಿ ಮುಂದೆ  ಸಾಗುತ್ತಿತ್ತು. ಥಳುಕಿಲ್ಲದ  ಹಳ್ಳಿಗಳ  ಪೇಟೆಯ  ಮಧ್ಯ ನುಸುಳಿಕೊಂಡು,  ಇಕ್ಕೆಲಗಳಲ್ಲಿ  ಹರಡಿದ್ದ  ಅಡಿಕೆಯ  ತೋಟದ  ಮಧ್ಯದಿಂದ ಸಾಗಿದ  ಕಾರು  ಮಡಿಕೇರಿಯ ಘಾಟಿ  ತಲುಪುವ ವೇಳೆಗೆ  ಸಂಜೆಯಾಗಿತ್ತು. ಕೆಂಪೇರುತ್ತಿದ್ದ  ಸೂರ್ಯನ  ರಶ್ಮಿಯಲ್ಲಿ,   ಕೊಡಗಿನ  ಪ್ರಾಕೃತಿಕ  ಸೌಂದರ್ಯವನ್ನು    ಆಸ್ವಾದಿಸುತ್ತಾ, ಅಂಕುಡೊಂಕಾದ  ಘಾಟಿಯ  ರಸ್ತೆಯಲ್ಲಿ ಚಲಿಸುತ್ತಾ  ಮಡಿಕೇರಿಯನ್ನು ತಲುಪುವಾಗ  ರವಿ  ಆಗಸದಿಂದ  ಕೆಳಗೆ  ಇಳಿದಿದ್ದ. ನಿಧಾನವಾಗಿ  ಆವರಿಸಿಕೊಂಡ  ಕತ್ತಲೆಯನ್ನು  ಕಾರಿನ ಹೆಡ್ ಲೈಟ್  ಬೆಳಕಿನಲ್ಲಿ  ಸೀಳಿಕೊಂಡು ಮುಂದೆ  ಸಾಗಿದ ಕಾರು  ಕುಶಾಲನಗರ  ತಲುಪುವಾಗ  ಕಪ್ಪನೆಯ  ಕತ್ತಲು ಗಪ್ಪನೆ  ಕವಿದಿತ್ತು.

ಲಗುಬಗೆಯಿಂದ  ಕುಶಾಲನಗರದಲ್ಲಿ ಇಡ್ಲಿ ತಿಂದು, ಮೈಸೂರಿನತ್ತ ಪ್ರಯಾಣ  ಬೆಳೆಸಿದರು.  ನಿರ್ಜನ  ರಸ್ತೆಯಲ್ಲಿ, ಕತ್ತಲಲ್ಲಿ , ಕಾರು  ಒಂಟಿಯಾಗಿ  ಚಲಿಸುತಿತ್ತು. ಅಂಧಕಾರವನ್ನು  ಸೀಳಿಕೊಂಡು  ಕಾಡುಪ್ರಾಣಿಗಳ ಸದ್ದು  ಹೊರಗೆ  ಕೇಳುತ್ತಿತ್ತು,  ಕಾರಿನೊಳಗೆ  ಇವರೆಲ್ಲರ  ಮಾತು ಸದ್ದು ಮಾಡುತ್ತಿತ್ತು. ರಾಜಕೀಯ,  ಸಿನಿಮಾ, ಅಡುಗೆ, ಹೀಗೆ ಅನೇಕ  ವಿಷಯದ ಕುರಿತು ನಡೆದ  ಮಾತುಕತೆ, ಮೆಲ್ಲನೆ  ಜೋತಿಷ್ಯ, ಭೂತ  ಮತ್ತು ಆಗೋಚರ  ಶಕ್ತಿಯ  ಕಡೆಗೆ  ತಿರುಗಿತು.  ಗ್ರಹಗಳು,  ಭೂತದ  ಭಯ, ಮುಂತಾದವು ಜನಜೀವನದ ಮೇಲೆ ಬೀರುವ ಪರಿಣಾಮಗಳ  ಬಗ್ಗೆ ಅವರು ಮೂವರೂ ಗಹನವಾದ  ವಿಶ್ಲೇಷಣೆಯಲ್ಲಿ  ತೊಡಗಿದ್ದರು. ಅತ್ತಿಗೆ  ಹೇಳುತ್ತಿದ್ದಳು ಶನಿಯ  ಪ್ರಭಾವ  ಅವರು  ಮೂವರ ಮೇಲೆ ಆಗ   ಅನುಕೂಲವಾಗಿಲ್ಲ, ದೇಹಕ್ಕೆ ಅಪಾಯ ಉಂಟಾಗುವ ಸಂಭವ ಇದೆ ಎಂದು.  ಆಕೆ  ಕೂಡಲೆ  ಹೇಳಿದಳು ಎಲ್ಲ ದೇವರ ಮೇಲೆ  ಭಾರ  ಹಾಕಿದರೆ ಯಾರಿಗೂ ಏನೂ ತೊಂದರೆಯಾಗುವುದಿಲ್ಲ. ಇದ್ದಕ್ಕಿದ್ದ  ಹಾಗೆ  ಅವರಿಗೆ ಡಬ್ ಅಂತ  ದೊಡ್ಡ ಸದ್ದು ಕಾರಿನ  ಹೊರಗಿನಿಂದ  ಕೇಳಿಸಿತು. ಗೊಂದಲದಲ್ಲಿ  ಕಾರಿನ ಹೊರಗೆ ನೊಡಲು, ಏನೋ  ಕೆಂಪು ಮಿಶ್ರಿತ ಬಿಳಿ ಆಕಾರವೊಂದು ಕಾರಿನ  ಬೊನೆಟ್  ಮೇಲೆ  ಬಿದ್ದು, ಎದ್ದು ಸರಿದು    ಹೋಯಿತು. ಅಣ್ಣ ಕಾರಿನ ಬ್ರೇಕ್ ಕೂಡಲೇ ಒತ್ತಿದರು. ಆ ಕ್ಷಣ  ಒಮ್ಮಿಂದೊಮ್ಮೆ ಗಾಢವಾದ ನಿಶಬ್ದ ಅಲ್ಲೆಲ್ಲಾ  ಆವರಿಸಿತು.  ಮಿಂಚಿನಂತೆ  ಏನೋ ಅಚಾತುರ್ಯ  ಘಟಿಸಿತ್ತು .

ಕ್ಷಣ ಕಾಲ  ಎಲ್ಲೆಲ್ಲೂ  ಮೌನ. ಎಲ್ಲರ  ಮುಖದಲ್ಲೂ  ಭಯ ಮಿಶ್ರಿತ ಆತಂಕ. ಏನಾಯಿತು  ಎಂದು ಗೊತ್ತಾಗದ  ಕಳವಳ.  ಆಕೆಯ  ಎದೆ ಬಡಿತ ಆಕೆಗೆ ಕೇಳಿಸುವಷ್ಟು  ಜೋರಾಗಿತ್ತು. ಸ್ಥಬ್ಧ  ಚಿತ್ರದಂತೆ  ಅವರೆಲ್ಲರೂ ನಿಷ್ಕ್ರಿಯರಾಗಿದ್ದರು. ಸಮಯ ಸರಿಯುತ್ತಿರುವ  ಪರಿವೆ ಇಲ್ಲದೇ ಗರಬಡಿದವರಂತೆ ಕುಳಿತಿದ್ದರು. ಇದ್ದಕ್ಕಿದ್ದ ಹಾಗೆ  ಅಣ್ಣ ಆತಂಕದಿಂದ  ಟಾರ್ಚು ಹಿಡಿದು  ಕಾರಿನಿಂದ ಹೊರಗೆ ಹೊರಟರು. ಭಯದಿಂದ  ಆಕೆಯೂ, ಅತ್ತಿಗೆಯೂ , ಇಳಿಯ  ಬೇಡಿ ಎಂದು ಕಿರುಚಿದರು.  ಅಲ್ಲಿ  ಕಾರಿನ  ಬೊನೆಟ್  ಬಜ್ಜಿ ಆಗಿದೆ, ಪೆಟ್ರೋಲ್ ಲೀಕ್  ಇದ್ದರೆ,  ಕಾರಿಗೆ ಬೆಂಕಿ ಹಿಡಿಯ ಬಹುದು,  ನೀವು ಸುಮ್ಮನೆ ಇರಿ, ನಾನು  ಹೋಗಿ ನೋಡಿ ಬರುತ್ತೇನೆ ಎಂದು ಅಣ್ಣ ತಾಕೀತು ಮಾಡಿ, ಕಾರಿನಿಂದ ಇಳಿದರು. ಭಯದಿಂದ  ಕಂಗಾಲಾಗಿದ್ದ  ಆಕೆಯೂ ಅತ್ತಿಗೆಯೂ, ಮೌನವಾಗಿ   ಅಣ್ಣನನ್ನೂ, ಅಕ್ಕಪಕ್ಕವನ್ನೂ   ಗಮನಿಸುತ್ತಾ, ಕುಳಿತಿದ್ದರು.

 ಜಜ್ಜಿ  ಹೋದ  ಬಾನೆಟ್ ಎತ್ತಿ  ಇಂಜಿನ್  ಪರೀಕ್ಷಿಸಿ ಬಂದ ಅಣ್ಣ  ಚಿಂತಾಕ್ರಾಂತರಾಗಿದ್ದರು.    ಈ  ಕಾರಿನಲ್ಲಿ  ಕೇವಲ  70  ಕಿಲೋಮೀಟರ್  ದೂರವಿದ್ದ     ಮೈಸೂರಿನತ್ತ  ಪ್ರಯಾಣ  ಮುಂದುವರೆಸುವುದು  ಸಾಧ್ಯವೇ  ಇರಲಿಲ್ಲ . ಏನು  ಮಾಡುವುದು  ಎಂದು  ಸಂದಿಗ್ಧದಲ್ಲಿ  ಇರುವಾಗ,   ತಮ್ಮ  ಕರ್ತವ್ಯದ ನೆನಪಾಗಿ, ಕಾರಿಗೆ   ಅಪ್ಪಳಿಸಿ ಗಾಯಗೊಂಡಿರ ಬಹುದಾದ  ಆ ಆಕೃತಿಯ  ಹುಡುಕಾಟ  ಟಾರ್ಚ ಬೆಳಕಿನಲ್ಲಿ  ನಡೆಸಿದರು. ಮೆಲ್ಲನೆ ಧೈರ್ಯದಿಂದ  ಆಕೆಯೂ ಕಾರಿನಿಂದ ಹೊರಗೆ ಬಂದಳು , ಅತ್ತಿಗೆಯೂ ಕೆಳಗಿಳಿದಳು.  ಮೂವರು ಸೇರಿ  ಹುಡುಕಿದರೂ, ಅಲ್ಲಿ  ಯಾವ ಆಕೃತಿಯಾಗಲಿ,  ಪ್ರಾಣಿಯಾಗಲಿ,  ಮನುಷ್ಯರಾಗಲಿ  ಇರಲಿಲ್ಲ.  ಮೂವರ ಮನದಲ್ಲೂ ಏನೊ ಸಂಶಯ, ಅವ್ಯಕ್ತ ಭಯ  ಪ್ರಾರಂಭವಾಯಿತು. 

 ಕಾರಿನ  ಈ ಅವಸ್ಥೆಯಲ್ಲಿ  ಪ್ರಯಾಣಿಸಲು  ಸಾಧ್ಯವೇ ಇಲ್ಲದ ಕಾರಣ,  ಅಣ್ಣನ ಮಗನಿಗೆ  ಫೋನ್ ಮಾಡಲು  ಮೊಬೈಲ್  ತೆಗೆದಾಗ  ಮತ್ತೊಂದು ಆಘಾತ  ಎದುರಾಗಿತ್ತು.  ಎಲ್ಲರ ಮೊಬೈಲ್  ಬ್ಯಾಟರಿ  ಮುಗಿದಿತ್ತು,  ಫೋನ್ ಮೌನವಾಗಿತ್ಥು, ಮನದಾಳದ  ಭಯ ಎಲ್ಲೆ ಮೀರಿತ್ತು.  ಧೈರ್ಯದಿಂದ  ಅಣ್ಣ  ಕಾರು  ಸ್ಟಾರ್ಟ ಮಾಡಿ, ತಮ್ಮ ಮೊಬೈಲ್ ಕಾರ್ ಇಂಜಿನ್ ಸಹಾಯದಿಂದ  ಚಾರ್ಜ್ ಮಾಡಲು  ಪ್ರಾರಂಭಿಸಿದರು.  ಸ್ವಲ್ಪ ಹೊತ್ತಿನಲ್ಲಿ  ಅವರ  ಮೊಬೈಲ್ ಗೆ  ಜೀವ ಬಂದ ಕೂಡಲೇ,  ಮಗನಿಗೆ ಫೋನ್ ಮಾಡಿ  ವಿಷಯ ತಿಳಿಸಿ, ಬೇರೆ  ಕಾರು ಮಾಡಿಕೊಂಡು ಬರಲು ತಿಳಿಸಿದರು.  ಇನ್ನು  ಹೆಚ್ಚು ಸಮಯ  ಇಲ್ಲಿರುವುದು  ಸರಿಯಲ್ಲ, ಮಗ ಬರುವವರೆಗೆ  ಏನು ಮಾಡುವುದು,  ಎಲ್ಲಿ  ನಿಲ್ಲುವುದು  ಎಂದು  ಆಚೀಚೆ  ನೋಡಲು,  ಸ್ವಲ್ಪ  ದೂರದಲ್ಲಿ   ಯಾವುದೊ ಮನೆಗಳ ಬೆಳಕು  ಕಂಡಂತಾಯಿತು.

ಹುಚ್ಚು ಧೈರ್ಯದಿಂದ  ಎಲ್ಲರೂ ಕಾರಲ್ಲಿ  ಕುಳಿತೆವು.  ಅಣ್ಣ ಕೀ  ಹಾಕಿ ತಿರುಗಿಸಲು  ಅಚ್ಚರಿಯೆಂಬಂತೆ     ಕಾರು  ಚಲಿಸಲು ಆರಂಭಿಸಿತು.  ಮೆಲ್ಲನೆ  ದೂರದ  ಆ ಬೆಳಕಿನಲ್ಲಿಗೆ  ಕಾರು  ಚಲಾಯಿಸಿದರು  ಅಣ್ಣ.  ಬೆಳಕು  ಸಮೀಪಿಸಿದಂತೆ,  ಅಲ್ಲಿ ಕೆಲವು  ಮನೆಗಳು ಇರುವುದು ಕಂಡಿತು. ಕಾರು ನಿಲ್ಲಿಸಿದ ಅಣ್ಣ,  ಆ ಮನೆಗಳು ಇರುವಲ್ಲಿಗೆ  ಹೋಗಿ, ಒಂದು ಮನೆಯ ಬಾಗಿಲು ಬಡಿದರು.  ಹೊರಗೆ ಬಂದ ಮನೆಯವರಲ್ಲಿ  ನಡೆದ ಘಟನೆಯ ಬಗ್ಗೆ  ತಿಳಿಸಿ,  ಮೈಸೂರಿನಿಂದ  ಮಗನ ಕಾರು  ಬರುವ ವರೆಗೆ ಅಲ್ಲೆಲ್ಲಾದರು  ಕುಳಿತುಕೊಳ್ಳಲು  ಅನುಮತಿ  ಕೇಳಿದರು . ಕೂಡಲೇ  ಒಪ್ಪಿಕೊಂಡ  ಅವರು, ಅಕ್ಕ ಪಕ್ಕದ ಮನೆಯ ಕೆಲವರು ಗಂಡಸರನ್ನು  ಕರೆದುಕೊಂಡು  ದೊಣ್ಣೆ, ಮಚ್ಚು  ಹಿಡಿದುಕೊಂಡು ಅಪಘಾತ  ನಡೆದ ಸ್ಥಳಕ್ಕೆ  ಹೊರಟರು .  ಯಾಕೆ ಹೋಗುತ್ತೀರಿ  ಎಂದು  ವಿಚಾರಿಸಿದಾಗ,  ಕಾಡುಪ್ರಾಣಿ ನಮ್ಮ  ಕಾರಿಗೆ  ಸಿಲುಕಿ ಅಲ್ಲಿ  ಬಿದ್ದಿದ್ದರೆ,  ಅದರ  ಮಾಂಸ  ತಿನ್ನಲು  ತರಲು  ಹೋಗುತ್ತಿದ್ದೇವೆ  ಎಂದು  ತಿಳಿಸಿದರು .  ಅವರಲ್ಲಿ   ಕೆಲ ಗಂಡಸರು ಹಿಂದೆ  ಬಂದು   ಅಲ್ಲಿ  ಯಾವ  ಪ್ರಾಣಿಯೂ  ಇಲ್ಲ,    ನೀವು  ಲಕ್ಕಿ,  ಅಲ್ಲೇ  ಪಕ್ಕದಲ್ಲಿ  ಸ್ಮಶಾನವಿದೆ,  ನೀವು  ಬದುಕ್ಕಿದ್ದೇ  ಪವಾಡ  ಎಂದಾಗ,   ನಮ್ಮ  ಮನಸ್ಸಿನ  ಅವಸ್ಥೆ     ದೇವರಿಗೆ     ಪ್ರೀತಿಯಾಗಿತ್ತು.   ಹಾಗೆ    ಹಿಂದೆ  ಬಂದ  ಗಂಡಸರು  ದೊಣ್ಣೆ  ಹಿಡಿದು ನಮ್ಮನ್ನೇ  ನೋಡುತ್ತಾ  ಆಚೀಚೆ     ಅಡ್ಡಾಡ ತೊಡಗಿದರು .  ಮೊದಲೇ ನಮ್ಮದು  ಭಯಗ್ರಸ್ತ  ಮನ . ಆ ಗಂಡಸರು ನಮ್ಮನ್ನು ನೋಡುತ್ತಾ  ಅವರಲ್ಲೇ  ಮಾತನಾಡುವುದನ್ನು  ನೋಡಿ , ನಮ್ಮ  ಮನದಾಳದಲ್ಲಿ ಭಯಂಕರ  ಸಂಶಯವೊಂದು  ಮೂಡಿತು . ಇಲ್ಲೇ ಇದ್ದರೆ ಅಪಾಯ ತಪ್ಪಿದ್ದಲ್ಲ  ಎಂದು ಭಾಸವಾಗ ತೊಡಗಿತು.

ಆ  ಕೂಡಲೇ ಅಲ್ಲಿಂದ  ಜಾಗ  ಖಾಲಿ ಮಾಡುವ  ಉದ್ದೇಶದಿಂದ,  ನೀರು ಕುಡಿಯುವ  ನೆಪದಿಂದ  ನಾವು ಕಾರಿಗೆ  ಮರಳಿದೆವು. ಕಾರು ಸ್ಟಾರ್ಟ ಮಾಡಿ,  ಅಲ್ಲಿನ ಜನರು ನಿಲ್ಲಿ ಎಂದು ಕೂಗುತ್ತಿದ್ದರೂ,  ನಾವು ಕೂಡಲೇ  ಹೊರಟೆವು.  ಸ್ವಲ್ಪ  ದೂರ  ಬಂದ ನಂತರ ಒಂದು ಬದಿಯಲ್ಲಿ ಕಾರು ನಿಲ್ಲಿಸಿ, ಅಣ್ಣನ ಮಗನಿಗೆ ಕಾಯುತ್ತಾ  ನಿಂತೆವು. ಆ ಕಗ್ಗತ್ತಲ , ಗವ್ವೆನ್ನುವ  ವಾತಾವರಣದಲ್ಲಿ,  ಕೊರೆಯುವ  ಚಳಿಯಲ್ಲಿ,  ಭಯದಿಂದ  ಮೆಲ್ಲನೆ  ಬೆವರುತ್ತಾ, ನಮ್ಮ ಜೀವನದ ಅತ್ಯಂತ ದೀರ್ಘ  ಕಾಯುವಿಕೆ ಪ್ರಾರಂಭವಾಯಿತು.   ನಿಮಿಷಗಳು ಗಂಟೆಗಳಂತೆ ಭಾಸವಾಗುತ್ತಿತ್ತು .  ಗೊತ್ತಿದ್ದ  ದೇವಸ್ಥಾನಗಳಿಗೆ  ನಮ್ಮ  ಹರಕೆಯ  ಪಟ್ಟಿಯೂ  ಏರುತ್ತಿತ್ತು.  ಅಂತೂ ಇಂತೂ,  ಸುಮಾರು ಒಂದು  ಘಂಟೆ ಕಳೆದ ನಂತರ  ಅಣ್ಣನ ಮಗ ಬಂದನು.  ಆ ರಾತ್ರಿ ಬಾಡಿಗೆ ಕಾರು ಸಿಗುವುದು ತಡವಾಗಿ,  ಅವನು ಬರುವುದು ನಿಧಾನವಾಯಿತು.     ಕೂಡಲೇ  ಮಾರುತಿ  ಕಾರಿನ ಕಂಪೆನಿಗೆ   ಫೋನ್  ಮಾಡಿ,  ನಮ್ಮ  ಕಾರನ್ನು    ರಿಪೇರಿಗೆ  ತೆಗೆದುಕೊಂಡು  ಹೋಗಲು  ಹೇಳಿ, ನಾವೆಲ್ಲರೂ  ಮೈಸೂರಿಗೆ  ಹೊರಟೆವು.  ಸುಮಾರು  ಹನ್ನೆರಡು   ಘಂಟೆಗೆ  ಮನೆ  ಸೇರಿದ  ನಾವು,  ರಾತ್ರಿಯೆಲ್ಲ  ಈ ಘಟನೆಯ  ಬಗ್ಗೆ ಚರ್ಚಿಸಿದರೂ,  ಕಾರಿಗೆ  ಅಡ್ಡ  ಬಂದದ್ದು ಏನು  ಎಂದು ನಮಗೆ  ನಿಖರವಾಗಿ  ತಿಳಿಯಲಾಗಲಿಲ್ಲ.

ಮಾರನೇ  ದಿನ  ಬೆಳಗೆದ್ದು  ಆಕೆ  ಹೊರಟು ಬೆಂಗಳೂರಿನ  ತನ್ನ  ಮನೆಗೆ  ಹೋದಳು.  ನಡೆದ ಘಟನೆಯಿಂದ  ಮನ ಅಧೀರವಾಗಿದ್ದರೂ,  ನಿಧಾನವಾಗಿ  ಸಮ ಸ್ಥಿತಿಗೆ ಮರಳಲು  ಆರಂಬಿಸಿತ್ತು.  ಹೀಗಿರುವಾಗ  ಒಂದು  ದಿನ  ಅತ್ತಿಗೆಯ  ಫೋನ್  ಬಂತು.  ಆ ಕಡೆಯಿಂದ  ಒಂದೇ  ಉಸಿರಲ್ಲಿ  ಅವಳು ಹೇಳುತ್ತಿದ್ದಳು,  ಆ ದಿವಸ  ನಮ್ಮ  ಕಾರಿನ  ಅಪಘಾತ  ನಡೆದ ಜಾಗದಲ್ಲಿ  ಹಿಂದೆಯೂ  ಅನೇಕ  ಅಪಘಾತ  ನಡೆದಿದೆ  ಅಂತೆ,  ಯಾರೂ  ಬದುಕಿ  ಉಳಿಲಿಲ್ಲವಂತೆ,  ಅಲ್ಲೇ  ಪಕ್ಕದಲ್ಲಿ  ಸ್ಮಶಾನ  ಇರುವುದು  ನಿಜವಂತೆ, ನಮ್ಮ  ಜಜ್ಜಿ  ಹೋಗಿದ್ದ ಕಾರು  ನೋಡಿ,  ಮೆಕ್ಯಾನಿಕ್  ಹೇಳಿದನಂತೆ ಈ ಕಾರು  ಒಂದಿಂಚೂ  ಮುಂದೆ  ಸರಿಯಲು  ಸಾಧ್ಯವಿಲ್ಲ,  ನೀವು  ಹತ್ತು ನಿಮಿಷ ಡ್ರೈವ್  ಮಾಡಲು ಸಾಧ್ಯವೇ ಇಲ್ಲ , ಸುಳ್ಳು  ಹೇಳುತ್ತಿದ್ದೀರಿ………….. ಅತ್ತಿಗೆಯ  ಮಾತು  ಸಾಗಿತ್ತು……. ಆಕೆಯ ಎದೆಬಡಿತದ  ಲೆಕ್ಕ ತಪ್ಪಿತ್ತು, ಅಗೋಚರ  ದುಷ್ಟ ಶಕ್ತಿಯ ಭಯ  ಮನಸ್ಸಿನ ಮೇಲೆ  ಹಿಡಿತ ಸಾಧಿಸುವ ಪ್ರಯತ್ನದಲ್ಲಿರುವಾ ಗ, ದೈವ ಶಕ್ತಿಯ  ಪವಾಡ  ಮನಸ್ಸಲ್ಲಿ  ಧೈರ್ಯ  ಹುಟ್ಟು ಹಾಕಿತ್ತು. ದೇವರ ಮೇಲೆ   ನಂಬಿಕೆ ಧೃಢವಾಗಿತ್ತು.

*****************

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

7 thoughts on “ಆ ರಾತ್ರಿ … (ನೈಜ ಘಟನೆ ಆಧಾರಿತ)”

    1. ತುಂಬ ಚೆನ್ನಾಗಿದೆ ನಿಮ್ಮ ನಿಜ ಕಥೆ.
      ಕಥೆಯ ಕೊನೆಯ ಸಂದೇಶವಂತೂ ಎಷ್ಟು ಸರಳವೋ ಅಷ್ಟೇ ಮಾರ್ಮಿಕ.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter