ಅಭಿಪ್ರಾಯಗಳ ಬೆನ್ನೇರಿ ಒಂದು ಸವಾರಿ….

ಅಭಿಪ್ರಾಯಗಳು ತಮ್ಮದೇ ಅರ್ಥಗಳಲ್ಲಿ ಬರಿಯ ನಂಬಿಕೆಗಳಾಗಿರ ಬಹುದು, ಯೋಚನೆಗಳಾಗಿರಬಹುದು, ಆಲೋಚನೆಗಳಾಗಿರ ಬಹುದು, ನಿಜವಾಗಿರಬಹುದು, ಸುಳ್ಳಾಗಿರಬಹುದು, ಕಲ್ಪನೆಯಾಗಿರಬಹುದು, ಕನವರಿಕೆಯಾಗಿರಬಹುದು, ನಮ್ಮಮಿತಿಯಲ್ಲಿ ತಳೆವ ನೋಟವಾಗಿರ ಬಹುದು,  ದೃಷ್ಟಿಕೋನವಾಗಿರಬಹುದು, ಒಳನೋಟವಿರ ಬಹುದು, ಹೊರನೋಟ ವಿರಬಹುದು, ವಾಲಿಕೆ, ನಿಲುವು, ತತ್ವ, ಸಿದ್ಧಾಂತ, ಊಹಾಪೋಹ, ತಾರ್ಕಿಕವಾಗಿ ಸಾಧಿಸ ಬೇಕಾದ ಕಲ್ಪಿತ ಸಿದ್ದಾಂತ ಯಾವುದೂ ಆಗಿರ ಬಹುದು. ಒಟ್ಟಾರೆ ಯಾವುದೇ ವಿಚಾರ,  ವಸ್ತು, ವ್ಯಕ್ತಿ ಅಥವಾ ಬೇರೆ ಯಾವುದರ ಮೇಲೆಯೇ ಆಗಿರಲಿ, ಅವುಗಳ ಬಗ್ಗೆ ನಾವು, ನಮಗೆ ತಿಳಿದೋ, ತಿಳಿಯದೆಯೋ ನಮ್ಮ ಮನಸ್ಸಿನಲ್ಲಿ ತಳೆಯುವ ತೀರ್ಮಾನಗಳನ್ನೇ‘ ಅಭಿಪ್ರಾಯಗಳು ‘ ಅನ್ನುತ್ತೇವೆ. ಇದು ಕೂಡ ಅಭಿಪ್ರಾಯಗಳ ಬಗೆಗಿನ ಅಭಿಪ್ರಾಯ ಮಾತ್ರವೇ ಆಗಿದೆ ಎಂದರೂ ತಪ್ಪೇನಿಲ್ಲ.

ಏಕೆಂದರೆ ಅಭಿಪ್ರಾಯ ಎನ್ನುವ ಪದಕ್ಕೊಂದು ಮರು ವ್ಯಾಖ್ಯಾನ ಕೊಡುವುದು ಬಾರಿ, ಬಾರಿಯೂ ಸಾಧ್ಯವಿದೆ. ಅಭಿಪ್ರಾಯ ಎನ್ನುವುದು ಸಿದ್ಧ ಸೂತ್ರಗಳಿಗೆ ಮಾತ್ರ ಮಿತವಾಗುವ ಅರ್ಥವನ್ನು ಹೊಂದಿಲ್ಲದ ಪದ .ಬದುಕಿನ ಹಲವು ಕಂಪನಗಳಿಗೆ ಅಂಕ ತುಂಬಬಲ್ಲ ವಿಶಾಲಾರ್ಥದ ಪದ. ಹಲವು ಹತ್ತು ವಿಚಾರಗಳನ್ನು ಈ ಪದವೊಂದರ ಬಳಕೆಯಿಂದಲೇ ವಿವರಿಸ ಬಹುದು. ಇಷ್ಟೆಲ್ಲ ಆಯಾಮಗಳಿರುವ ಈ ಪದ ಊಸರವಳ್ಳಿಯಂತೆ ತನ್ನ ಹೊರ ರೂಪನ್ನು ಬದಲಿಸ ಬಲ್ಲದು. ಯಾಕೆಂದರೆ ಅಭಿಪ್ರಾಯಗಳು ಘನರೂಪದಲ್ಲಿರ ಬಹುದು, ದ್ರವ್ಯಾತ್ಮಕವಾಗಿರ ಬಹುದು ಅಥವಾ ಗಾಳಿಯಂತೆ ತನ್ನ ಸ್ವರೂಪವನ್ನು ಬದಲಿಸುತ್ತ ಸಾಗಬಲ್ಲವು.ಇವನ್ನು ಅತ್ಯಂತ ಸರಿಯಾಗಿ ರೂಪಿಸಿ ಕೊಳ್ಳಲು ಒಂದಷ್ಟು ಮಾಂತ್ರಿಕ ಶಕ್ತಿಯೇ ಬೇಕಾಗ ಬಹುದೇನೋ.

ಹಾಗಾದರೆ, ಅಷ್ಟಕ್ಕೂ ಅಭಿಪ್ರಾಯಗಳು ಎನ್ನುವ  ಅಮೂರ್ತತೆಯನ್ನು ಗುರುತಿಸಿದವರು ಯಾರು? ಎಷ್ಟು ಬಗೆಯ ಅಭಿಪ್ರಾಯಗಳಿವೆ? ಅವುಗಳಿಂದ ನಮಗೆ ಲಾಭವೇನು? ಇವು ಇಲ್ಲದಿದ್ದರೂ ನಡೆದೀತೆ? ಅಭಿಪ್ರಾಯಗಳೇ ಇಲ್ಲದವರನ್ನು ಜಗತ್ತಿನ ಯಾವುದೇ ಸಮಾಜ ಅಂಗೀಕರಿಸ ಬಲ್ಲದೇ? ಅಭಿಪ್ರಾಯಗಳು ಹೇಗಿರಬೇಕು ಅಥವಾ  ಹೇಗಿರಬಾರದು?

ಅಭಿಪ್ರಾಯಗಳ ಮಹತ್ವ

ಒಂದಂತೂ ನಿಜ. ಅಭ್ಯಾಗತರಾಗಿಯೇ ಉದಿಸಿದರೂ ಮನುಷ್ಯ ತನ್ನ ವಯಕ್ತಿಕ ಅಭಿಪ್ರಾಯಗಳನ್ನು ನಂಬುತ್ತಾನೆ, ಪ್ರೀತಿಸುತ್ತಾನೆ.  “ತನ್ನ ಅಭಿಪ್ರಾಯವೇ ಸರಿ “ಯೆಂದು ವಾದಿಸುತ್ತಾನೆ .ಒಮ್ಮೆ ಅಭಿಪ್ರಾಯಗಳನ್ನು ತಳೆದ ಮೇಲೆ, ಅವನ್ನಾತ ಅಳವಡಿಸಿ ಕೊಳ್ಳುತ್ತಾನೆ. ಅದಕ್ಕೆಹೊಂದುವಂತ ಜನರನ್ನೇ ಆರಿಸಿಕೊಂಡು ಒಡನಾಡುತ್ತಾನೆ. ಅವೇ ಅಭಿಪ್ರಾಯಗಳ ಮೇಲೆ ತನ್ನ ಯೋಚನೆಗಳ ಸೌಧಗಳನ್ನು ನಿರ್ಮಿಸಿ ಕೊಳ್ಳುತ್ತಾನೆ. ಕೆಲವೊಮ್ಮೆ ಆತ ತಳೆಯುವ ಅಭಿಪ್ರಾಯಗಳಿಂದಲೇ ಆತನ ಬದುಕು ನಿರೂಪಿತವಾಗುತ್ತದೆ. ಮತ್ತೆ ಕೆಲವು ಬಾರಿ ಒಬ್ಬ ಮನುಷ್ಯನಿಗಿಂತ ಆತನ ಅಭಿಪ್ರಾಯಗಳೇ ಹೆಚ್ಚು ಪ್ರಸಿದ್ಧವಾಗುತ್ತವೆ, ಎತ್ತರಕ್ಕೆ ಬೆಳೆಯುತ್ತವೆ. ಮತ್ತೆ ಕೆಲವು ಬಾರಿ ಅವು ಆತನ ಅಸ್ತಿತ್ವವನ್ನೇ ಕಬಳಿಸಿ ಬಿಡುತ್ತವೆ.

ಮೊದಮೊದಲು ಯಾದೃಚ್ಛಿಕವಾಗಿ ಮೂಡಿದರೂ ನಂತರ ಒಂದು ಮಿಡಿತವನ್ನು ಮೂಡಿಸಿ, ಅದರಲ್ಲೇ ನಂಬುಗೆಯನ್ನು ಬೆಳಸಿ ಮನುಷ್ಯನನ್ನು ಭಾವನಾತ್ಮಕವಾಗಿ ಸಂತೋಷ ಪಡಿಸಬಲ್ಲ, ಘಾಸಿಗೊಳಿಸ ಬಲ್ಲ, ಪ್ರೇರೇಪಿಸ ಬಲ್ಲ ನಿರಾಳಗೊಳಿಸ ಬಲ್ಲ ಶಕ್ತಿ ಅಭಿಪ್ರಾಯಗಳಿಗಿದೆ. ”ಅಯ್ಯೋ ನನ್ನನ್ನ  ಈ  ಸ್ಥಿತಿಯಲ್ಲಿ ಅವರು ನೋಡಿ ಬಿಟ್ಟರೆ ಏನೆಂದು ಅಭಿಪ್ರಾಯ ತಳೆಯುತ್ತಾರೋ? “ ಎಂದು ಸದಾ ಬೇರೊಬ್ಬರ ಅಭಿಪ್ರಾಯಗಳಿಗೆ ಮನುಷ್ಯ ಬೆಲೆ ಕೊಡುವುದನ್ನು ನೋಡುತ್ತೇವೆ.  ವ್ಯಕ್ತಿಗಳಿರಲಿ, ಇಡೀ ದೇಶಗಳು ತಮ್ಮ ಬಗೆಗಿನ ಅಭಿಪ್ರಾಯಗಳನ್ನು ಕಾದು ಕೊಳ್ಳಲು ಕಸರತ್ತು ಮಾಡುವುದನ್ನು ನಾವು ನೋಡಿದಾಗ ಅಭಿಪ್ರಾಯಗಳ ಬೆಲೆ ನಮಗೆ ವೇದ್ಯವಾಗುತ್ತದೆ.

ಆದರೆ,  ಬೇರೊಬ್ಬರ  ಅಭಿಪ್ರಾಯಗಳಿಗೆ  ಅತಿಯಾದ ಬೆಲೆ ಕೊಡಬೇಡಿ, ನಿಮ್ಮ ಆತ್ಮ ವಿಶ್ವಾಸವೇ ನಿಮಗೆ ಅತ್ಯಂತ ಮುಖ್ಯ ಎನ್ನುವ  ಬುದ್ದಿವಾದದ ಮಾತನ್ನು ಕೂಡ ನಾವು ಕೇಳುತ್ತೇವೆ. ಸಂದರ್ಭಾನುಸಾರ ಅವುಗಳನ್ನು ಅಳವಡಿಸಿಕೊಂಡು ನಡೆಯುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ.

ಆಭಿಪ್ರಾಯಗಳು ಹೇಗೆ ಹುಟ್ಟುತ್ತವೆ?

ನಾವು ಚಿಕ್ಕವರಾಗಿದ್ದಾಗ  ನಮ್ಮನೆಯಲ್ಲೊಂದು  ಕೆಟ್ಟ ಅಭ್ಯಾಸವಿತ್ತು. ಅದೆಂದರೆ ನಮ್ಮ ಮನೆಗೆ ಯಾರೇ ಬರಲಿ, ಎರಡೇ ನಿಮಿಷದ  ಭೇಟಿಯಾಗಿರಲಿ, ಅವರ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ತಳೆದು ಬಿಡುತ್ತಿದ್ದೆವು. ಯಾರನ್ನು  ನೋಡಿದರೂ, ವಿಚಾರಗಳ ಬಗ್ಗೆ ಸರಿಯಾಗಿ  ಗೊತ್ತಿಲ್ಲದಿದ್ದರೂ  ಎಲ್ಲದ್ದರ ಬಗ್ಗೆ ತಲೆಗೊಂದೊಂದರಂತೆ  ಅಭಿಪ್ರಾಯಗಳನ್ನು ತಟಕ್ಕನೆ ಬಹಿರಂಗವಾಗಿ ವ್ಯಕ್ತಪಡಿಸುತ್ತಿದ್ದೆವು. ಇನ್ನು ಭಿನ್ನಾಭಿಪ್ರಾಯಗಳಿಗೂ ಕೊರತೆಯಿರಲಿಲ್ಲ. ನಮ್ಮ ಅಭಿಪ್ರಾಯಗಳನ್ನು ಬಹು ಚರ್ಚೆಗೆ  ಒಳಪಡಿಸುತ್ತಿದ್ದೆವು. ತೀರ್ಮಾನಗಳೂ ಹೊರ ಬೀಳುತ್ತಿದ್ದವು.

ನಮ್ಮ ಅಭಿಪ್ರಾಯಗಳು ನಿಜಕ್ಕೆ ಹತ್ತಿರವಾಗಿದ್ದವೇ, ಅಗತ್ಯವಿದ್ದವೇ, ಅದರಿಂದ ನಮಗೇನಾದರೂ ಪ್ರಯೋಜನಗಳಾಗಿದ್ದವೋ  ಒಂದೂ ಗೊತ್ತಿರಲಿಲ್ಲ. ಆದರೆ ಅದು ಹೇಗೋ  ಒಂದು ಅಭ್ಯಾಸವಾಗಿ ಬೆಳೆದು ಬಿಟ್ಟಿತ್ತು.

ಅದೀಗ ಕ್ರಮೇಣವಾಗಿ ನಿಧಾನವಾಗಿದೆ ಎನ್ನಬಹುದು.ನಮ್ಮ ಹಲವು ಅಭಿಪ್ರಾಯಗಳು ಹುಸಿಯಾದ  ಅನೇಕ ಅನುಭವಗಳಾದ  ನಂತರ ಈ ವ್ಯಸನದಿಂದ ಹೊರಬಂದಿದ್ದೇವೆ ಅಂದು ಕೊಂಡಿದ್ದೇನೆ. ವಯಸ್ಸಾದಂತೆ  ಬದುಕು ಆ ಬಗ್ಗೆ ಹಲವು ವಿಚಾರಗಳನ್ನು ಕಲಿಸಿದೆ.ಆದರೂ ಈ ಬಗ್ಗೆ ನನ್ನ ಆಸಕ್ತಿ ತಣಿದಿಲ್ಲ. ಪ್ರಪಂಚವೇ ಈ  ಅಭಿಪ್ರಾಯಗಳ ಅಧೀನದಲ್ಲಿದೆಯಲ್ಲವೇ ಎಂಬ ಸೋಜಿಗವೂ ಹುಟ್ಟಿ ಅಭಿಪ್ರಾಯಗಳ ಬಗ್ಗೆ ಬಹಳ ಯೋಚಿಸಿದ್ದೇನೆ.

ಅಭಿಪ್ರಾಯಗಳು ತಂತಾನೇ ಮೂಡುತ್ತವೆ. ಇವು ನಮ್ಮ ಇಚ್ಛೆಯ ನಿಯಂತ್ರಣದಲ್ಲಿರದ ಸಂವೇದನೆಗಳು. ಕರೆಯದಿದ್ದರೂ ಅಭ್ಯಾಗತರಂತೆ ಮನಸ್ಸಿನಲ್ಲಿ ಉದಯಿಸಿ,  ಮೆದುಳಿಗೆ ಸಲಹೆ, ಸೂಚನೆ, ಎಚ್ಚರಿಕೆಗಳನ್ನು ನೀಡಿ ನಮ್ಮ ವರ್ತನೆಯನ್ನೇ ಬದಲಿಸಿ ಬಿಡುವ  ಈ ಅಭಿಪ್ರಾಯಗಳ ಬಗ್ಗೆ ನಮ್ಮಲ್ಲಿ  ಅರಿವಿರುವುದು ಕೂಡ ಅಗತ್ಯ. ಏಕೆಂದರೆ, ಒಮ್ಮೆ ಅಭಿಪ್ರಾಯಗಳು ಮೂಡಿದ ಮೇಲೆ ಅವೇ ನಮ್ಮಲ್ಲಿ  ಪೂರ್ವಾಗ್ರಹಗಳಂತೆ  ಕೆಲಸ ಮಾಡ ಬಲ್ಲವು .ಆ ಮೂಲಕ ಅವು ನಮ್ಮ ಮುಂದಿನ ಅಭಿಪ್ರಾಯಗಳನ್ನು ಪ್ರಭಾವಿಸ ಬಲ್ಲವು. ನಾವು ತಳೆಯುವ ಹಲವು ಅಭಿಪ್ರಾಯಗಳೇ ನಮ್ಮನ್ನು ತಾತ್ವಿಕ ಜಿಜ್ಞಾಸೆಗೆ ಒಳಪಡಿಸ ಬಲ್ಲ ಅಚ್ಚರಿ ಕೂಡ ಮೆಚ್ಚುಗೆಗೊಳಗಾಗುವಂಥದ್ದು.

ಉದಾಹರಣೆಗೆ,  ಅತ್ಯಂತ ಅಪರಿಚಿತ ಮನುಷ್ಯನನ್ನು ಭೇಟಿಯಾದಾಗ ಆ ಮನುಷ್ಯನ ಹೊರ ರೂಪಿನ ಆಧಾರದ ಮೇಲೆ ನಮ್ಮಲ್ಲಿ ಅಭಿಪ್ರಾಯಗಳು ಮೂಡುತ್ತವೆ.  ಆತನ ಉಡುಪು, ಕೂದಲು ಬಾಚುವ ರೀತಿ ಅಥವಾ ಇನ್ಯಾವುದೋ ಸಣ್ಣ ಸಣ್ಣ ಅವಲೋಕನಗಳು ತತ್ ಕ್ಷಣದಲ್ಲಿ ಆ ವ್ಯಕ್ತಿಯ ಬಗ್ಗೆ ಅಭಿಪ್ರಾಯಗಳ ಒಂದು ಚಿತ್ರವನ್ನು ಬಿಡಿಸಲು ಶುರು ಮಾಡಿಬಿಡುತ್ತವೆ. ಅದೇ ರೀತಿ ನಾವು ಈ ಹಿಂದೆ ಕೇಳಿದ ಉಕ್ತಿಗಳು ಇತರರು ವ್ಯಕ್ತ ಪಡಿಸಿದ ಅಭಿಪ್ರಾಯಗಳು ಕೂಡ ನಮ್ಮ ಯೋಚನೆಗಳ ಮೇಲೆ ಪ್ರಭಾವವನ್ನು ಬೀರ ಬಲ್ಲವು.  ಉದಾಹರಣೆಗೆ,  ಮನುಷ್ಯನೊಬ್ಬ ಉದ್ದಕ್ಕಿದ್ದಾನೋ, ಕುಳ್ಳಕ್ಕಿದ್ದಾನೋ ಎನ್ನುವುದರ ಮೇಲೆ ಅವರು ಇಂಥವರಾಗಿರಬಹುದು ಎಂದು ನಾವೇಕೆ ಅಭಿಪ್ರಾಯ ತಳೆಯುತ್ತೇವೆ? ಕಪ್ಪಗಿದ್ದಾನೋ, ಬೆಳ್ಳಗಿದ್ದಾನೋ ಎನ್ನುವುದರ ಮೇಲೆ ಆತನನ್ನು ನಂಬ ಬಹುದೇ, ಇಲ್ಲವೇ ಎನ್ನುವಂತಹ ವಿಚಾರಗಳನ್ನು ಜನರು ವ್ಯಕ್ತ ಪಡಿಸಿದಾಗ ಇಂತಹ ಅಭಿಪ್ರಾಯಗಳ ಮೂಲ ಎಲ್ಲಿದೆ? ಎಂಬ ಯೋಚನೆಗಳು  ಮೂಡಬಹುದು.

ಮೊದಲು ಹುಟ್ಟಿದ ಮಗು, ಮಧ್ಯದ ಮಗು, ಕೊನೆಯ ಮಗು ಎನ್ನುವ ಆಧಾರದ ಮೇಲೆ ಅವರ ಗುಣಗಳನ್ನು ಗುಣಿಸುವ ಅಚ್ಚರಿಯನ್ನು ಗಮನಿಸಿದರೆ ಈ  ಅಭಿಪ್ರಾಯಗಳು  ಕೆಲವರ  ಅನುಭವಗಳನ್ನು ಮಾತ್ರ ಆಧರಿಸಿ ಹುಟ್ಟಿರಬಹುದೆಂದು ಊಹಿಸ ಬೇಕಾಗುತ್ತದೆ. ಈ ರೀತಿ ತಾರ್ಕಿಕ,  ವೈಜ್ಞಾನಿಕ, ವಾಸ್ತವದ ತಳಹದಿಗಳಿಲ್ಲದಿದ್ದರೂ ಅಭಿಪ್ರಾಯಗಳು ಮನುಷ್ಯನನ್ನು ಆಳುವ ಉತ್ಪ್ರೇಕ್ಷೆಯನ್ನು ನೋಡಿದಾಗ ಅದು ಕೂಡ ಅಚ್ಚರಿಯನ್ನು ಮೂಡಿಸುತ್ತದೆ. ಅಂತೆಯೇ ಸಾಕ್ಷಿ ಆಧಾರಗಳ ಸಮೇತ ಒಂದು ನಿಖರ ವಿಚಾರವನ್ನು ಮಂಡಿಸಿದರೂ ಅದನ್ನು ಕಂಡು-ಕೇಳಿದ ಗುಂಪಿನಲ್ಲಿ ಹಲವು ಅಭಿಪ್ರಾಯಗಳು ಸೃಷ್ಟಿಯಾಗುವುದು ಕೂಡ ಕೌತುಕದ ವಿಚಾರವೇ ಸರಿ.

ಅಭಿಪ್ರಾಯಗಳ  ಅಭಿವ್ಯಕ್ತತೆಯನ್ನು ಆಧರಿಸಿದ ಅಭಿಪ್ರಾಯಗಳು!

ಬಲವಾದ ಅಭಿಪ್ರಾಯಗಳನ್ನು ಹೊಂದಿದವನನ್ನು “ತನ್ನ ಮೂಗಿನ ನೇರಕ್ಕೇ ಯೋಚಿಸುತ್ತಾನೆ“ ಎಂದು ದೂಷಿಸುತ್ತೇವೆ.  ಅಳ್ಳಕ ಅಭಿಪ್ರಾಯ ಹೊಂದಿದವರನ್ನು “ಯಾವುದರ ಬಗ್ಗೆಯೂ ನಿರ್ಧಾರ ತೆಗೆದು ಕೊಳ್ಳಲಾಗದ ವ್ಯಕ್ತಿ” ಎನ್ನುತ್ತೇವೆ. ತಮ್ಮ ಅಭಿಪ್ರಾಯಗಳನ್ನು ಅಳೆದೂ ಸುರಿದು ಸಮಯತಗೊಂಡು ಯೋಚಿಸುವವರನ್ನು “ಹುಶಾರಿನವನು” ಎನ್ನುತ್ತೇವೆ . ಅಭಿಪ್ರಾಯಗಳ ಆಧಾರದ ಮೇಲೆ ಅಭಿವ್ಯಕ್ತಿಸುವವರ ಮೇಲೆಯೇ ಅಭಿಪ್ರಾಯಗಳನ್ನು ತಳೆಯುವುದು ಸರಿಯಾದ ಅಭಿಪ್ರಾಯವೋ ಅಲ್ಲವೋ ಎಂದು ಕೂಡ ಯೋಚಿಸ ಬಹುದಾಗಿದೆ.

ಅಭಿಪ್ರಾಯಗಳು ಬದುಕಿನ ಅನುಭವದೊಡನೆ, ವಯಸ್ಸು ಮತ್ತು ಬದಲಾಗುವ ಸ್ಥಿತಿ- ಗತಿ ಗಳೊಡನೆ ಬದಲಾಗ ಬಲ್ಲವಾದರೂ, ಬದಲಾಗದೆ ಉಳಿವ ಅಭಿಪ್ರಾಯಗಳು ಅವನ ಸಂಗಾತಿಗಳಾಗಿ ಬಿಡುತ್ತವೆ. ಅವನೊಡನೆಯೇ ಅವುಗಳಿಗೂ ವಯಸ್ಸಾಗಿ, ಅವು ಬಲಿತು ಬಿಡುತ್ತವೆ.  ಉದಾಹರಣೆಗೆ- “ಬಿಗಿಯಾದ ಬಟ್ಟೆ ಹಾಕ ಬಾರದು, ಹಾಕಿದರೆ ಅದು ಚೆನ್ನಾಗಿ ಕಾಣುವುದಿಲ್ಲ|”- ಎಂದು ಬೆಲ್ಬಾಟಂ ಪ್ಯಾಂಟು, ದೊಗಲೆ ಶರ್ಟ್ ನ  ಕಾಲದಲ್ಲಿ ಬೆಳೆದ ಜನ ನಂಬಿರುತ್ತಾರೆ ಎನ್ನಿರಿ, ಅವರು ಬದುಕಿಡೀ ಅದೇ ಅಭಿಪ್ರಾಯ ಹೊತ್ತು ಬದುಕುತ್ತಾರೆ. ಅವರಿಗೆ ಫ್ಯಾಷನ್ ಬದಲಾಗಿ ಸ್ಕಿನ್ನಿ ಜೀನ್ಸ್,  ಬಿಗಿಯಾದ ಟಿ –ಶರ್ಟ್ ತೊಡುವ ಕಾಲ ಬಂದರೂ ತಾವು ದೊಗಲೆ ಬಟ್ಟೆಯಲ್ಲಿ ಕಂಡು ಕೊಳ್ಳುತ್ತಿದ್ದ ಸೌಂದರ್ಯವೇ ಹೆಚ್ಚೆ ಪ್ರಿಯವೆನಿಸುತ್ತದೆ. ಯಾಕೆಂದರೆ ಅವರ ಅಭಿಪ್ರಾಯಗಳು ಬದಲಾಗಿರುವುದಿಲ್ಲ. ಹಾಗಾಗಿ ಅಭಿರುಚಿಯೂ ಬದಲಾಗುವುದಿಲ್ಲ.  ನಂಬಿಕೆ, ನೋಟ, ದೃಷ್ಟಿಕೋನ ಯಾವುದೂ ಸಂಧಾನ ಮಾಡಿ ಕೊಳ್ಳುವುದಿಲ್ಲ. ಇವರಲ್ಲಿ ಅಭಿಪ್ರಾಯಗಳು ಘನ ರೂಪದಲ್ಲಿರ ಬಹುದು. ಅಥವಾ ಇವರು ಬದಲಾವಣೆಗೆ ಹೊಂದಾಣಿಕೆ ಮಾಡಿಕೊಳ್ಳಲು ತಯಾರಿಲ್ಲದೆ. ತಮ್ಮ ಹಳೆಯ ಅಭಿಪ್ರಾಯಗಳಿಗೇ ಗಟ್ಟಿಯಾಗಿ ಜೋತು ಬಿದ್ದಿರಬಹುದು. ಇನ್ನೂ ಹಲವುಗಳು ಇರಬಹುದು. ಆದರೆ ನೋಡುಗರ ಅಭಿಪ್ರಾಯದಲ್ಲಿ ಅವಕ್ಕೆ ಹೊಸ ರೂಪಗಳೂ ಸಿಗಬಹುದು. ಇಂತವರು ತಮ್ಮ ಅಭಿಪ್ರಾಯಗಳಿಗಾಗಿ ಬೇರೆಯ ಅಭಿಪ್ರಾಯಗಳ ಜನರ ಕುಚೋದ್ಯಗಳಿಗೆ ಒಳಗಾಗುವುದು ಬಿನ್ನ ಅಭಿಪ್ರಾಯಗಳು ತರ ಬಲ್ಲ ಚೋದ್ಯವೇ ನಿಜ. ವಿಪರ್ಯಾಸವೂ ಅನ್ನಿ.

ಮತ್ತೆ ಕೆಲವರದು,  ಸದಾ ಬದಲಾಗುತ್ತಲೇ ಇರುವ ಅಭಿಪ್ರಾಯಗಳು.  ವ್ಯಕ್ತಿಯೊಬ್ಬನನ್ನು “ಅವನೊಬ್ಬ ಧೂರ್ತ“  ಎನ್ನುವವರೇ ಮರುಕ್ಷಣ  “ಅವನೊಬ್ಬ ಸಂತ” ಎಂದ ತಮ್ಮ ಅಭಿಪ್ರಾಯಗಳನ್ನು ಸುಲಭವಾಗಿ ಬದಲಾಯಿಸಿ ಕೊಂಡು ಬಿಡುತ್ತಾರೆ. ಇವರಲ್ಲಿ ಅಭಿಪ್ರಾಯಗಳು ದ್ರವ್ಯಾತ್ಮಕವಾಗಿರುತ್ತವೆ. ಇಂತವರು ತಮಗೆ ಕಂಡ  ಆ ವ್ಯಕ್ತಿಯ ಹೊಸ ಹೊಸ ಮುಖಗಳ ಪ್ರಕಾರ ತಮ್ಮ ವಯಕ್ತಿಕ ಅಭಿಪ್ರಾಯಗಳನ್ನು ಬದಲಿಸಿ ಕೊಳ್ಳುತ್ತ ನಡೆಯುತ್ತಾರೆ. ಇವರದು ಬದಲಾಗುವ ಸ್ವಭಾವ. ಈ ಬಗೆಯ ಜನರನ್ನು“ಹೇ.. ಅವನು ಯಾರ ಬಗ್ಗೆಯೇ ಆಗಲಿ, ಯಾವುದರ ಬಗ್ಗೆಯೇ ಆಗಲಿ, ಈಗ ಹೇಳಿದ್ದನ್ನ ಇನ್ನೊಂದು ನಿಮಿಷದಲ್ಲಿ ಹೇಳದ,  ನಿಖರ ಅಭಿಪ್ರಾಯಗಳೇ ಇಲ್ಲದ ವ್ಯಕ್ತಿ“ ಅಂತ ಇತರರು ವರ್ಣಿಸ ಬಹುದು.

ಲಘುವಾಗಿ, ತೆಳ್ಳಗೆ, ಸುಲಭವಾಗಿ ಅಸ್ತಿತ್ವಕ್ಕೆ ಬಾರದ ಗಾಳಿಯಂತ ಅಭಿಪ್ರಾಯಗಳುಳ್ಳ ಕೆಲವು ಜನರೂ ಇರುತ್ತಾರೆ. ಇವರಿಗೆ ಯಾವ ಕಾಲದಲ್ಲೂ ಪರಿಪೂರ್ಣ ಅಭಿಪ್ರಾಯಗಳನ್ನು ತಳೆಯಲು ಬರುವುದಿಲ್ಲ. ಇಂತವರು ಗುಂಪಲ್ಲಿ ಗೋವಿಂದ ಎಂದು ಸುಮ್ಮನಿರುತ್ತಾರೆ. ಹಾಗಂತ ಅಭಿಪ್ರಾಯಗಳು ಇವರಲ್ಲಿ ಮೂಡುವುದಿಲ್ಲ ಅಂತ ಏನಲ್ಲ. ಅಭಿಪ್ರಾಯಗಳು ತುಂಡು, ತುಂಡಾಗಿ ನಿರ್ದಿಷ್ಟವಾಗಿರದ ಕಾರಣ ಅವುಗಳನ್ನು ಹೇಳಲು ಇವರಿಗೆ ಬರದಿರ ಬಹುದು.

ಅಭಿಪ್ರಾಯಗಳು ಮೂಡದೇ ಇರುವ ಜನರು ಒಂದರ್ಥಕ್ಕೆ ಸತ್ತಂತೆ. ಅಭಿಪ್ರಾಯಗಳು ಮನುಷ್ಯನಲ್ಲಿ ಅಷ್ಟೊಂದು ಹಾಸು ಹೊಕ್ಕಾಗಿರುತ್ತವೆ. ಹಾಗಾಗಿ ಒಂದು ಸಮಾಜದಲ್ಲಿ ಭಿನ್ನ,  ಭಿನ್ನ ಅಭಿಪ್ರಾಯಗಳು ಇರಬೇಕು. ಇಲ್ಲವೆಂದಲ್ಲಿ ಅಂತಹ ಸಮಾಜದ ಆಡಳಿತ, ಸರ್ವಾಧಿಕಾರೀ ಸರ್ಕಾರದ ಆಡಳಿತವಾಗಿರುತ್ತದೆ ಅಥವಾ  ಆ  ವೈಖರಿಯದಾಗಿರುತ್ತದೆ. ಅಂತಹ ಕಡೆ ಸರ್ಕಾರದ ಅಭಿಪ್ರಾಯಗಳು ಮಾತ್ರ ಜನರ ಮೇಲೆ ಹೇರಲ್ಪಟ್ಟಿರುತ್ತವೆ. ಹಾಗಂತ ಅಂತಹ ಸರ್ಕಾರದ ಕೆಳಗೆ ಒಂದೇ ಒಂದು ಅಭಿಪ್ರಾಯವಿರುತ್ತದೆ ಭಿನ್ನಾಬಿಪ್ರಾಯಗಳಿರುವುದಿಲ್ಲವೆಂದಲ್ಲ. ಅವುಗಳ ಅಭಿವ್ಯಕ್ತಿಗೆ ಅವಕಾಶ ಇರುವುದಿಲ್ಲ ಎಂದಷ್ಟೆ ಅರ್ಥ.

ಅಭಿಪ್ರಾಯಗಳ ಬಲವೇನು?

ಸತ್ತಂತಿರುವ ಸಮಾಜದಲ್ಲಿ ಸೃಜನಾತ್ಮಕ ಆಲೋಚನೆಗಳಿರುವುದಿಲ್ಲ. ಇದೇ ಕಾರಣಕ್ಕೆ ವಾಕ್      ಸ್ವಾತಂತ್ರ್ಯ ಇರುವ ಎಲ್ಲ ದೇಶಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಅಭಿವ್ಯಕ್ತಪಡಿಸಲು ಅವಕಾಶವಿರುತ್ತದೆ. ಹೀಗಾಗಿ ಅಭಿಪ್ರಾಯಗಳ ಮೇಲಿನ ನಮ್ಮ ಹಕ್ಕುಗಳು ನಮ್ಮ ಅಸ್ತಿತ್ವದಷ್ಟೇ ಮುಖ್ಯವಾಗಿ ಬಿಡುತ್ತವೆ.

ಕೆಲವು ವಿಚಾರಗಳ ಬಗ್ಗೆ ಸಾಮೂಹಿಕ ಅಭಿಪ್ರಾಯಗಳಿರುತ್ತವೆ. ಹೀಗಿದ್ದೂ ಕೇವಲ ಬೆರಳೆಣಿಕಯಷ್ಟು ಜನರು  ಈ ಸಾಮೂಹಿಕ ಅಭಿಪ್ರಾಯಗಳನ್ನು ನಂಬುವುದಿಲ್ಲ .ತಮ್ಮದೇ ಹೊಸ ಅಭಿಪ್ರಾಯವನ್ನು ಸೃಷ್ಟಿಸಿ ಕೊಳ್ಳುವ ಇವರಿಗೆ ಬದಲಾವಣೆಯ ಬಯಕೆಯಿರ ಬಹುದು. ಇಡೀ ಸಮುದಾಯದ ಅಭಿಪ್ರಾಯವನ್ನು ಬದಲಿಸುವ ಹುನ್ನಾರವಿರಬಹುದು.

ಈ ಅಭಿಪ್ರಾಯಗಳು ಅದೆಷ್ಟು ಭಿನ್ನವಾಗಿರಬಹುದು ಎನ್ನುವುದಕ್ಕೆ ಮತ್ತು ಇದು ಯಾವ ಕಾಲಕ್ಕೂ ನಿಜ ಎನ್ನುವುದಕ್ಕೆ ಒಂದು ಉದಾಹರಣೆಯನ್ನು ನೋಡೋಣ.

ರೋಮನ್ನರ ಕಾಲದಲ್ಲಿ ,ಕಾನ್ಸ್ಟಾಂಟಿನೋಪಲ್ ಎನ್ನುವ ಆಯಕಟ್ಟಿನ ಜಾಗ ಯೂರೋಪ್ ಮತ್ತು ಮಧ್ಯಪ್ರಾಚ್ಯ ದೇಶಗಳ ನಡುವೆ ಇತ್ತು (ಇವತ್ತಿನ ಟರ್ಕಿಯ ಇಸ್ತಾನ್ಬುಲ್). ಇದು ಸುಂದರವಾಗಿಯೂ ಸುಭಿಕ್ಷವಾಗಿಯೂ  ಇದ್ದು, ರೋಮನ್ನರ ಸಾಮ್ರಾಜ್ಯವಾಗಿತ್ತು. ಇದನ್ನು ಗೆಲ್ಲ ಬೇಕೆನ್ನುವುದು ಇತರೆ ರಾಜರ, ಸುಲ್ತಾನರ ಕನಸಾಗಿತ್ತು. ಆದರೆ ಇದಕ್ಕೆ ಒಂದು ಕೋಟೆಯಲ್ಲ ಬದಲಿಗೆ ಐದು ಅಭೇದ್ಯ ಕೋಟೆಗಳ ರಕ್ಷಣೆಯಿತ್ತು. ಈ ಐದೂ ಕೋಟೆಗಳನ್ನು ಭೇದಿಸಿ ಒಳ ಹೊಗುವುದು ದುಃಸ್ಸಾಧ್ಯವೆಂದೇ ಎಲ್ಲರ ಅಭಿಪ್ರಾಯವಾಗಿತ್ತು. ಇಂತಹ ಸಾಮೂಹಿಕ ಅಭಿಪ್ರಾಯಕ್ಕೆ ದೊಡ್ಡ ಕಾರಣವಿತ್ತು. ಈ ಗೋಡೆಗಳು ಅದೆಂತಹ ಎಂಜಿನಿಯರಿಂಗ್ ಅದ್ಭುತಗಳಾಗಿದ್ದವೆಂದರೆ 1700 ವರ್ಷಗಳಲ್ಲಿ 24 ಬಾರಿ ನಾನಾ ರೀತಿಯಲ್ಲಿ ಬಹಳಷ್ಟು ಚಕ್ರಾಧಿಪತಿಗಳು, ಸುಲ್ತಾನರು ಪ್ರಯತ್ನಿಸಿದ್ದರಾದರೂ ಯಾರೂ ಕೋಟೆಗಳನ್ನು ಬೇಧಿಸಿ ಒಳ ಹೋಗುವಲ್ಲಿ ಯಶಸ್ವಿಯಾಗಿರಲಿಲ್ಲ.

ಕಾನ್ಸ್ಟಾಂಟಿನೋಪಲ್ನ ಪೂರ್ವಕ್ಕಿದ್ದ ಸುಲ್ತಾನರಂತೂ  “ಸ್ವತಃ ಅಲ್ಲಾನಿಗೂ  ಈ ಕೋಟೆಗಳನ್ನು ಭೇದಿಸಲು ಸಾಧ್ಯವಿಲ್ಲ “ ವೆನ್ನುವ ಅಭಿಪ್ರಾಯವನ್ನು ಹೊಂದಿದ್ದರು .ಆದರೆ ಕೇವಲ 19 ವರ್ಷದ ಎರಡನೇ ಮೊಹಮ್ಮದ್ ಓಟ್ಟೊಮನ್ ಎನ್ನುವ ಸುಲ್ತಾನ ಮಾತ್ರ ಅದನ್ನು ಭೇದಿಸಲು  ‘ತನಗೆಸಾಧ್ಯ’ ಎನ್ನುವ ಅಭಿಪ್ರಾಯವನ್ನು ಹೊಂದಿದ್ದ.  ಮೇ 29, 1453 ಇದು ನಡೆದೂ ಹೋಯಿತು. ಮಿಕ್ಕೆಲ್ಲರ ಅಭಿಪ್ರಾಯಗಳು ಸುಳ್ಳಾದವು!

ಸಾಮೂಹಿಕ ಅಭಿಪ್ರಾಯಗಳ ಬುಡವನ್ನು ಬೇರು ಸಮೇತ ಕಿತ್ತು ಬಿಸಾಡಿದ ಈ ಒಂದು ಭಿನ್ನ ಅಭಿಪ್ರಾಯಕ್ಕೆ ನಿಜಕ್ಕೂ ಅಷ್ಟೊಂದು ಶಕ್ತಿಯಿತ್ತೇ?

ಖಂಡಿತ ಇಲ್ಲ. ಬದಲಿಗೆ ಸಾಧಿಸಬೇಕು ಎನ್ನುವ ಹಂಬಲ ಅದುವರೆಗೆ ಇದ್ದ ಸಾಮೂಹಿಕ ಅಭಿಪ್ರಾಯವನ್ನು  ಮೆಟ್ಟಿನಿಂತಿತು . ತಳೆದ ಅಭಿಪ್ರಾಯ ಗಟ್ಟಿಯಾಗಲು ಮನೋಬಲ ಸಹಕರಿಸಿತು. ನಂತರ ನಿಜಕ್ಕೂ ಮಾಡಿದ ಅವಿರತ ಪ್ರಯತ್ನ ಕೊನೆಗೆ ಫಲ ನೀಡಿತು. ಸಾವಿರಾರು ವರ್ಷಗಳಿಂದ ಬಲಿತು ನಿಂತಿದ್ದ ಸಾಮೂಹಿಕ  ಅಭಿಪ್ರಾಯಗಳನ್ನು ಮತ್ತೊಬ್ಬನ  ಅಭಿಪ್ರಾಯ ಬುಡಮೇಲು ಮಾಡಿತು.

ಇನ್ನೊಂದು ಅರ್ಥದಲ್ಲಿ  ಸಮಾಜದಲ್ಲಿರುವ  ಅಭಿಪ್ರಾಯಗಳನ್ನು ಕಾಲ ಬದಲಾಯಿಸುವುದು ಹೀಗೆಯೇ.  ಕಾಲ ತರುವ ಬದಲಾವಣೆಗೆ ಹೊಸ ಹೊಸ ಆವಿಷ್ಕಾರಗಳು, ವಾಣಿಜ್ಯ ಅನುಕೂಲಗಳು, ಆರ್ಥಿಕ ಪರಿಸ್ಥಿತಿಗಳು ಎಲ್ಲವೂ ಇಂಬಾಗಿ ನಿಂತಾಗ ಬಹುಕಾಲದಿಂದ ಇದೇ ಸರಿಯೆಂದು ನಂಬಿದ ಅಭಿಪ್ರಾಯಗಳು  ತಟ್ಟನೆ  ಬದಲಾಗಿಬಿಡುತ್ತವೆ. ಆದರೆ, ಈ ಬದಲಾವಣೆಗಳಿಗೆ  ಹೊಂದಿ ಕೊಳ್ಳುವವರು ತಮ್ಮ  ವ್ಯಕ್ತಿತ್ವವನ್ನು ಆಧರಿಸಿ ಅನುಸರಿಸುವಿಕೆಯನ್ನು ತೋರುತ್ತಾರೆ.

ಅಭಿಪ್ರಾಯಗಳು ನಮ್ಮಲ್ಲಿ ಮೂಡಿದಾಗ ಅವನ್ನು ಪಾಲಿಸಿ, ಪ್ರೀತಿಸಿ, ಪೋಷಿಸುವ ಮನುಷ್ಯನ ವಾಲಿಕೆಗಳು, ಅಭಿಪ್ರಾಯಗಳು ತಿಂದು ತೇಗಿ ಬೆಳೆದು ಹೆಮ್ಮರ ವಾಗಲು ಕಾರಣವಾಗುತ್ತವೆ .ಆದರೆ ಯಾವಾಗಲೂ ಅವು ನಂಬಿದವರನ್ನು ಗೆಲ್ಲಿಸ ಬೇಕೆಂದೇನಿಲ್ಲ. ಕೆಲವೊಮ್ಮೆ ಅವರ ಸರ್ವನಾಶಕ್ಕೂ ಕಾರಣವಾಗ ಬಹುದು.

ಇದನ್ನು ನೋಡಲು ಯಾವ ಚರಿತ್ರೆಯ ಪುಟವನ್ನೂ ನೋಡುವ ಅವಶ್ಯಕತೆಯಿಲ್ಲ. ಸಾಧಾರಣ ರಸ್ತೆ ಬದಿಯ ಜಗಳವೇ ಸಾಕು.  ’ನಾನು ಮಾಡಿದ್ದೇ ಸರಿ ’ಯೆನ್ನುವ ಅಭಿಪ್ರಾಯದ ಇಬ್ಬರು ವ್ಯಕ್ತಿಗಳು ಜಗಳಕ್ಕೆ ಬಿದ್ದರೆ, ಆ ಜಗಳಕ್ಕೆ ಕೊನೆಯೂ ಇರುವುದಿಲ್ಲ. ಇದರ ಜೊತೆ ಭಾವೋದ್ವೇಗಗಳೂ ಸೇರಿದರೆ ಕೈ- ಕೈ ಮಿಲಾಯಿಸಿ, ಜಗಳವಾಗಿ ಒಬ್ಬ ಇನ್ನೊಬ್ಬನನ್ನು ಕೊಲ್ಲುವಂತ ವಿಷಮ ಘಟನೆಗಳನ್ನು ನಾವು ಪತ್ರಿಕೆಗಳಲ್ಲಿ ಓದುತ್ತಲೇ ಇರುತ್ತೇವೆ.

ಅಭಿಪ್ರಾಯಗಳು ಎಲ್ಲರ ಸ್ವತ್ತು. ಅವಕ್ಕೆ ಬುದ್ಧಿವಂತರು, ದಡ್ಡರು ಎನ್ನುವ ಭೇದ ಭಾವವಿಲ್ಲ. ಹಾಗೆಯೇ ದಡ್ಡವಾಗಿ ಕಾಣುವ ಕೆಲವು ಅಭಿಪ್ರಾಯಗಳು ಕಾಲಾಂತರದಲ್ಲಿ ಅತ್ಯಂತ ಬುದ್ಧಿವಂತ ಆವಿಷ್ಕಾರಗಳಿಗೆ ಎಡೆ ಮಾಡಿ ಕೊಡಬಹುದು. ಉದಾಹರಣೆಗೆ ಒಂದು ಪುಟ್ಟ ಕಲ್ಲನ್ನು ಮೇಲಕ್ಕೆಸೆದರೆ ಅದು ಮರಳಿ ನೆಲಕ್ಕೆ ಬೀಳದೆ ವಿಧಿಯೇ ಇಲ್ಲ ಎನ್ನುವ ಅಭಿಪ್ರಾಯಗಳಿರುವ ಕಾಲವೊಂದಿತ್ತು. ಅಂತೆಯೇ ಕಲ್ಲೊಂದನ್ನು ನೀರಲ್ಲೆಸೆದರೆ ಮುಳುಗಿಯೇ ತೀರುತ್ತದೆಂಬ ನಂಬಿಕೆಯಿತ್ತು.  ಇವಕ್ಕೆ ಹೊರತು ಪಡಿಸಿದ್ದೇನೂ  ನಡೆಯಲಾರದು  ಎಂದೇ  ಬಹುಕಾಲ  ನಂಬಿದ್ದರು. ಏಕೆಂದರೆ  ಅದು ಎಲ್ಲರ ಅನುಭವವಾಗಿತ್ತು.  ಅದನ್ನು ಹೊರತು ಪಡಿಸಿದ್ದು  ನಡೆಯುವುದೆಂದರೆ  ಅದು ಕಥೆಗಳಲ್ಲಿ  ಮಾತ್ರ ಸಾಧ್ಯವಿತ್ತೇನೋ?

ಆ ಕಾಲದಲ್ಲಿ ಮನುಷ್ಯನೊಬ್ಬ ಗಾಳಿಯಲ್ಲಿ ಹಕ್ಕಿಯಂತೆ ಹಾರುವ ಬಗ್ಗೆ ಅಥವಾ ಹಡಗಿನಂತಹ ಘನವಸ್ತು ನೀರಿನಲ್ಲಿ ತೇಲ ಬಲ್ಲದು ಎನ್ನುವ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಲ್ಲಿ ಅದು ಅತ್ಯಂತ ಹಾಸ್ಯಾಸ್ಪದವಾಗಿ ಕಂಡಿದ್ದರೆ ಆಶ್ಚರ್ಯವಿರಲಿಲ್ಲ.

ಆದರೆ ಕೆಲವರು ಇಂತಹ ಅವಹೇಳನಗಳನ್ನು ಧಿಕ್ಕರಿಸಿದರು. ಅವಕ್ಕೆ ವ್ಯತಿರಿಕ್ತವಾಗಿ ತಾವೂ ಹಕ್ಕಿಗಳಂತೆ ಹಾರಾಡಬಲ್ಲೆವು ಎನ್ನುವ ಅಭಿಪ್ರಾಯಗಳನ್ನು ಹೊತ್ತು ಮುಂದುವರೆದರು. ಅದಕ್ಕಾಗಿ ಹಂಬಲಿಸಿ,  ಕಲ್ಪನೆಗಳನ್ನು ಹೊಸೆದು,  ತಮ್ಮ ನಿಯಂತ್ರಣದಲ್ಲಿ ಹಾರಾಡ ಬಲ್ಲಂತ, ತೇಲ ಬಲ್ಲಂತಹ ಸಾಧನಗಳನ್ನು ಕಂಡು ಹಿಡಿದರು. ಕೊನೆಗೆ, ವಿಮಾನದಂತಹ ನೂರಾರು ಟನ್ ತೂಕದ ವಸ್ತುವೊಂದು  ಈ ಗುರುತ್ವಾಕರ್ಷಕ ಶಕ್ತಿಯನ್ನು ಮೀರಿ ಆಗಸದ ಗಾಳಿಯನ್ನು ಸೀಳಿ, ಸುಯ್ಯೆಂದು ಹಾರ ಬಲ್ಲ ಹೊಸ ಆವಿಷ್ಕಾರದ ಮೂಲಕ ನಂಬಲಸಾದ್ಯವಾದದ್ದನ್ನು ಸಾಧಿಸಿ ಬಿಟ್ಟರು. ನೀರಿನ ಮೇಲೆ ಬಹು ಮಹಡಿ ಕಟ್ಟಡವನ್ನು ಹೊತ್ತು ತೇಲುವಂತಹ ಹಡಗನ್ನು ನಿರ್ಮಿಸಿ ಬಿಟ್ಟರು.

ಇದೇ ಕಾರಣಕ್ಕೆ  ಭಿನ್ನಾಭಿಪ್ರಾಯಗಳು  ಅತ್ಯಂತ  ಆರೋಗ್ಯಕರವೂ  ಹೌದು.  ಆದರೆ ಒಂದು ವಿಚಾರದ ಬಗ್ಗೆ ಅತಿಯಾದ ಭಿನ್ನಾಭಿಪ್ರಾಯಗಳಿದ್ದಲ್ಲಿ ಯಾವೊಂದು ಸೃಜನಾತ್ಮಕ  ಕೆಲಸಗಳೂ ಪೂರ್ಣವಾಗುವುದಿಲ್ಲ  ಎನ್ನುವುದನ್ನು ನಾವು ಗಮನದಲ್ಲಿಡ ಬೇಕಾಗುತ್ತದೆ.

ಮೊದಲ ಅಭಿಪ್ರಾಯಗಳು ಯಾವಾಗ ಮೂಡುತ್ತವೆ?

ಇದಕ್ಕೆ ನಿಖರ ಉತ್ತರವಿಲ್ಲ. ಜೈವಿಕವಾಗಿ ನಮ್ಮ ಮಿದುಳಿಗೆ ಅಭಿಪ್ರಾಯಗಳು ಲಗ್ಗೆಯಿಡಲು ಸಾಧ್ಯವಾಗುವುದು ನಮ್ಮ ಮಿದುಳಿನ ಆರೋಗ್ಯಕರ ಬೆಳವಣಿಗೆಯೊಂದಿಗೆ ಹೊಂದಿಕೊಂಡಿರುವ ವಿಚಾರ.

ಬಹುಶಃ ಶೈಶವಾಸ್ಥೆಯಲ್ಲೇ ನಮ್ಮಲ್ಲಿ ಅಭಿಪ್ರಾಯಗಳು ಮೂಡುತ್ತವೇನೋ? ಮಾತುಬಾರದ ಎಳೆಯ ಕಂದಮ್ಮಗಳು ಕೂಡ ತಮ್ಮ ವರ್ತನೆಯ ಮೂಲಕವೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸ ಬಲ್ಲರು.  “ಅಮ್ಮನೆಂದರೆ, ಒಳ್ಳೆಯವಳು,  ಗೊತ್ತಿಲ್ಲದ ಜನರು ತನಗೆ ಅಪಾಯಕಾರಿ“ ಎನ್ನವ ಅಭಿಪ್ರಾಯಗಳನ್ನು ಮಕ್ಕಳು ಆಂಗಿಕವಾಗಿ ವ್ಯಕ್ತ ಪಡಿಸುವುದನ್ನು ನಾವು ನೋಡುತ್ತೇವೆ. ಅಪರಿಚಿತರು ಎತ್ತಿಕೊಳ್ಳಲು ಹೋದಾಗ ಮಕ್ಕಳು ತಮ್ಮ ಅಸಮ್ಮತಿಯನ್ನು ಸೂಚಿಸಿ“ ನಿಮ್ಮ ಸಹವಾಸ ತನಗಿಷ್ಟವಿಲ್ಲ  “ ವೆಂದು ನಿಚ್ಚಳವಾಗಿ  ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿ ಬಿಡುತ್ತಾರೆ. ಈ ಅವಸ್ಥೆಯಲ್ಲಿ ಅಭಿಪ್ರಾಯಗಳು ನಮ್ಮ ಜೊತೆಯಲ್ಲಿಯೇ ಹುಟ್ಟಿ ಬಿಟ್ಟಿರುತ್ತವೇನೋ ಅನ್ನಿಸುವುದು ಸುಳ್ಳಲ್ಲ. ಮನುಷ್ಯರು ದೊಡ್ಡವರಾದಂತೆ ತಮಗಿಷ್ಟವಿಲ್ಲದವರಿಂದ ದೂರವಿರಲು ನೆಪಗಳನ್ನು ಹುಡುಕಿ, ತಮ್ಮ ಅಭಿಪ್ರಾಯಗಳನ್ನು ಮುಚ್ಚಿಟ್ಟು ಸೌಜನ್ಯವನ್ನು ತೋರಿಸುವುದನ್ನು ಕಲಿಯುತ್ತ ಹೋಗುತ್ತಾರೆ.

ಎಲ್ಲರಲ್ಲೂ ಅಭಿಪ್ರಾಯಗಳು ಇದ್ದೇ ಇರುತ್ತವೆ. ಈ ಕಾರಣ  “ನನ್ನಲ್ಲಿ ಯಾವ ಅಭಿಪ್ರಾಯಗಳೂ ಇಲ್ಲ್ಲ “ ಎಂದು ಹೇಳುವ ಜನರನ್ನು ಸಮಾಜ ಅಥವಾ ನಾವು ನಂಬುವುದಿಲ್ಲ.  “ನಿಮ್ಮ ಅಭಿಪ್ರಾಯವೇನು?” ಎನ್ನುವ  ಪ್ರಶ್ನೆಯನ್ನು  ಕೇಳುವುದನ್ನು  ಬಿಡುವುದಿಲ್ಲ.

 ಅಧಿಕೃತವಾಗಿ  ಯಾವ  ರೀತಿಯ  ಅಭಿಪ್ರಾಯಗಳಿವೆ?

ವಯಕ್ತಿಕ ಅಭಿಪ್ರಾಯಗಳು, ತಜ್ಞರ ಅಭಿಪ್ರಾಯಗಳು, ಎರಡನೇ ಅಭಿಪ್ರಾಯಗಳು, ಧನಾತ್ಮಕ-ಋಣಾತ್ಮಕ ಅಭಿಪ್ರಾಯಗಳು, ಸಮುದಾಯ ಮತ್ತು ಸಾಮೂಹಿಕ ಅಬಿಪ್ರಾಯಗಳು, ಪೂರ್ಣ, ಅಪೂರ್ಣ, ನೇರ ಮತ್ತು ನೇರವಲ್ಲದ ಅಭಿಪ್ರಾಯಗಳು, ತೀರ್ಪುಗಾರರ,  ಸಂಪಾದಕೀಯದ, ಆಡಿಟ್ ಮತ್ತು ನ್ಯಾಯಾಂಗದ ಅಭಿಪ್ರಾಯಗಳು ಎನ್ನುವ ಹಲವಾರು ಬಗೆಯ ಅಭಿಪ್ರಾಯಗಳಿಗೆ. ಇವು ನಿಜವೇ ಆಗ ಬೇಕೆಂದಿಲ್ಲ.  ಸುಳ್ಳು ಅಂತಲೂ ಅಲ್ಲ.  ಒಟ್ಟಾರೆ ಅಭಿಪ್ರಾಯಗಳು ಮನುಷ್ಯನ ಅನುಭವ, ತಿಳುವಳಿಕೆ,  ತೆರೆದುಕೊಳ್ಳುವಿಕೆ,  ಕಲಿಕೆಗಳ ಮೂಲಕ ಜೀವನ ಪೂರ್ತಿ ಕೂಡಿ ಕೊಳ್ಳುತ್ತಲೇ ಇರುತ್ತವೆ. ಹಲವು ಕಳೆಯುತ್ತವೆ. ಹೊಸವು ಹುಟ್ಟುತ್ತಿರುತ್ತವೆ. ಇದ್ದವು ಮಾರ್ಪಾಡಾಗುತ್ತವೆ.ಒಟ್ಟಿನಲ್ಲಿ ಚಲನಶೀಲತೆ ಇವುಗಳ ಗುಣ. ನಮ್ಮ ಬಗೆಗಿನ ಅಭಿಪ್ರಾಯಗಳೇ ನಮ್ಮಲ್ಲಿ ಸತತ ಬದಲಾಗ ಬಹುದಾದ ಕಾರಣ ಇತರರ ಬಗ್ಗೆ ಕೂಡ ನಮ್ಮ ಅಭಿಪ್ರಾಯಗಳು ಬದಲಾಗುತ್ತ ಸಾಗುತ್ತವೆ.

ಆದರೆ ಅಭಿಪ್ರಾಯಗಳಲ್ಲಿ  ಇನ್ನೂ ಹಲವು ವಿಧಗಳಿವೆ. ಹೊರ ನೋಟದ ಅಭಿಪ್ರಾಯಗಳು “ ಅಬ್ಬಾ ಅವನೆಂತಹ ಶ್ರೀಮಂತ “ ಅನ್ನುವ ಅಚ್ಚರಿಯನ್ನು ಮೂಡಿಸುತ್ತಿರುವಾಗಲೇ“ಎಲ್ಲ ಕಳ್ಳ ದುಡ್ಡಿರ ಬೇಕು “ಎನ್ನುವ ಒಳ ಅಭಿಪ್ರಾಯಗಳು ಮಳ್ಳಹೆಜ್ಜೆಯಿಟ್ಟು ನುಸುಳಿ ಬಿಟ್ಟಿರುತ್ತವೆ. ಹಾಗಾಗಿ ಅಭಿಪ್ರಾಯಗಳು ನಮ್ಮ ಆಲೋಚನೆಗಳ ರೂಪದಲ್ಲಿ ಕೂಡ ಇರುತ್ತವೆನ್ನಬಹುದು. ಇವೆಲ್ಲವನ್ನೂ ಮೀರಿ ನಮಗೇ ತಿಳಿಯದ ಸುಪ್ತ ಅಭಿಪ್ರಾಯಗಳನ್ನೂ ಗಮನಿಸ ಬಹುದು. “ ನನಗೆ… ಆರನೇ ಇಂದ್ರಿಯದ ಅನುಭಾವದ ಮೂಲಕ ಹಾಗೆ ಅನ್ನಿಸುತ್ತಿತ್ತು…….“ ಎನ್ನುವಾಗ ಎರಡನೇ ಸರದಿಯಲ್ಲಿರುವ ಅಭಿಪ್ರಾಯಗಳಿಗೆ ಪೂರ್ಣ ರೂಪು ಸಿಕ್ಕಿರುವುದಿಲ್ಲ. ಅಥವಾ ಬಲವಾಗಿ ಮೂಡುವ ಅಭಿಪ್ರಾಯಗಳ ಹಿಂದೆ ಇವು ಎರಡನೇ ಸ್ಥಾನದಲ್ಲಿ ನಿಂತಿರುತ್ತವೆ.

ಆದರೆ ನಮ್ಮ ಅಭಿಪ್ರಾಯಗಳನ್ನು ಇರುವಂತೆಯೇ ಒಂದಷ್ಟು ಕಾಲ ರಕ್ಷಿಸಿ ಕೊಳ್ಳುವುದು ಕೂಡ ಸಾದ್ಯವಾಗದ ಅತ್ಯಂತ ವೇಗವಾಗಿ ಮಾರ್ಪಾಡಾಗುತ್ತಿರುವ ಸಮಯವಿದು. ಯಾಕೆಂದರೆ ಇದು ಮಾಹಿತಿಗಳ ಯುಗ.  ದೂರದರ್ಶನ, ಫೋನ್,  ಅಂತರ್ಜಾಲ, ಸಾಮಾಜಿಕ ಜಾಲ ತಾಣಗಳು, ವಾಟ್ಸಾಪ್  ಮೀಡಿಯಗಳ ಮೂಲಗಳು, ಭಿನ್ನ ಬಗೆಯ ಮಾಹಿತಿಗಳನ್ನು ನಮ್ಮ ಕಿವಿ, ಕಣ್ಣಗಳಿಗೆ ಅಪ್ಪಳಿಸಿ ಮಿದುಳನ್ನು ಕಲಕಿ ಅಭಿಪ್ರಾಯಗಳ ಜುಟ್ಟು ಹಿಡಿದು ಅಲುಗಾಡಿಸುತ್ತಲೇ ಇದ್ದು ಯಾವೊಂದು ಅಭಿಪ್ರಾಯಗಳೂ ಆಳಕ್ಕೆ ಬೇರು ಬಿಡದಂತ ನೋಡಿ ಕೊಳ್ಳಲು ಸಾಧ್ಯವಾಗದ ಕಾಲವಿದು. ನಡುವೆ ಸಿಲುಕಿರುವ ಶ್ರೀಸಾಮಾನ್ಯರು ಯಾವುದೇ ನಿಖರ ಅಭಿಪ್ರಾಯಗಳನ್ನು ತಳೆಯಲು ಸಾಧ್ಯವಾಗದೆ ಗೊಂದಲಕ್ಕೊಳಗಾಗಿರುವುದು ವಾಸ್ತವ.

ಹಲವರು ತಮ್ಮ ಅಭಿಪ್ರಾಯಗಳನ್ನು ಬಲವಂತವಾಗಿ ಇತರರ ಮೇಲೆ ಹೇರುವ ಪ್ರಯತ್ನ ಮಾಡುತ್ತಿರಬಹುದು. ಉದಾಹರಣೆಗೆ ಪೊಳ್ಳು ಜಾಹೀರಾತೊಂದು ತಮ್ಮ ಸಾಧನ ಅತ್ಯಂತ ಕಾರ್ಯ ಕ್ಷಮತೆಯುಳ್ಳ ಸಾಧನ ಎನ್ನುವ ಅಭಿಪ್ರಾಯಗಳನ್ನು ಗ್ರಾಹಕರಿಗೆ ಮಾರುವ ಯತ್ನ ಮಾಡಬಹುದು.ಇನ್ನು ಕೆಲವರಿಗೆ ಇದು ತಮ್ಮ ಪ್ರಭಾವಲಯದ ಹರಡುವಿಕೆಯೆನಿಸಬಹುದು. ಒಟ್ಟಿನಲ್ಲಿ ಅಭಿಪ್ರಾಯಗಳು ಬಿಕರಿಯಾಗಬಹುದು. ಮೊದಲ ಅಭಿಪ್ರಾಯ ಋಣಾತ್ಮಕವಾಗಿದ್ದಲ್ಲಿ ಮುಂದಿನ ಕೆಲಸ ಸುಗಮವಾಗುವ ಕಾರಣ, ಅದಕ್ಕಾಗಿ ಜನರು ಬಹಳಷ್ಟು ಪ್ರಯತ್ನಿಸುವುದನ್ನು ನಾವು ನೋಡಬಹುದು.

ಈ ಕಾರಣ ಒಂದು ಬಗೆಯ ಅಭಿಪ್ರಾಯಗಳನ್ನು ಹೊತ್ತ ಜನ ತಮ್ಮಂತವರೇ ಇತರೆ ಜನರ ಜೊತೆ ಬೆರೆತು, ಅವರ ನಂಬುಗೆಯನ್ನು ಬಲಗೊಳಿಸುವ ವಿಚಾರಗಳನ್ನು ಮಾತ್ರವೇ ವಿನಿಮಯ ಗೊಳಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ಕಾಯ್ದು ಕೊಳ್ಳಲು ಹೆಣಗುತ್ತಾರೆ ಕೂಡ.

ಅಭಿಪ್ರಾಯಗಳು  ಹೇಗಿರಬೇಕು? ಅವನ್ನು ಹೇಗೆ ವ್ಯಕ್ತಪಡಿಸ ಬೇಕು?

ಅಭಿಪ್ರಾಯಗಳು  ಹೀಗೇ ಇರಬೇಕು ಎಂದು ನಿಗಧಿತವಾಗಿ ಹೇಳಲು  ಸಾಧ್ಯವಿಲ್ಲ. ಏಕೆಂದರೆ ಇವು ನಮ್ಮ ನಿಯಂತ್ರಣಕ್ಕೆ ಸಿಗುವುದಿಲ್ಲ. ಆದರೆ ಅವುಗಳನ್ನು ಹೇಗೆ ವ್ಯಕ್ತಪಡಿಸ ಬೇಕು ಅಥವಾ ಯಾವ ರೀತಿಯಲ್ಲಿ ಪೋಷಿಸಬೇಕು ಎನ್ನುವುದರ  ಬಗ್ಗೆ ತಿಳಿಯುವ ಅಗತ್ಯವಿದೆ.

“ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಇದು ಹೀಗೆ, ಅಥವಾ ಅವರು ಹಾಗೆ  “ಎನ್ನುವ ಹಲವರ ಹೇಳಿಕೆಗಳಲ್ಲಿ ಇನ್ನೊಬ್ಬರ ಅಭಿಪ್ರಾಯಗಳು ಭಿನ್ನವಾಗಿರುವ ಸಾಧ್ಯತೆಯ ಬಗ್ಗೆ ಅವರಲ್ಲಿ ಅರಿವಿರುವುದನ್ನು  ಮತ್ತು  ಅದಕ್ಕೆ ಅವರು ತೆರೆದ  ಕಿವಿಯವರಾಗಿದ್ದಾರೆಂದೂ ವೇದ್ಯವಾಗುತ್ತದೆ. ಇದನ್ನುಸಜ್ಜನ ಮಾತುಗಾರಿಕೆ ಎಂದು ಗುರುತಿಸುತ್ತೇವೆ. ಇದೇ ಕಾರಣಕ್ಕೆ ಇನ್ನೊಬ್ಬರ ಅಭಿಪ್ರಾಯಗಳನ್ನು ಗೌರವಿಸಬೇಕು ಎಂದು ಮಕ್ಕಳಿಗೆ ಕಲಿಸುತ್ತೇವೆ .ಸಮಾಜಕ್ಕೆ,  ಮನುಷ್ಯರಿಗೆ, ಪ್ರಾಣಿಗಳಿಗೆ, ಪ್ರಕೃತಿಗೆ, ಸೃಷ್ಟಿಗೆ ಇನ್ನೊಬ್ಬರಿಗೆ ಹಾನಿಯಾಗದಂತಹ ಅಭಿಪ್ರಾಯಗಳನ್ನು ನಮ್ಮ ಮುಂದಿನ ತಲೆಮಾರಿನವರಲ್ಲಿ ರೂಪಿಸಲು ಹೆತ್ತವರು,  ಶಿಕ್ಷಕರು, ಮತ್ತು ಸಮಾಜ ಕೆಲಸ ಮಾಡುತ್ತದೆ. ನಮ್ಮ  ಅಭಿಪ್ರಾಯಗಳನ್ನು ಬಲವಂತವಾಗಿ ಇನ್ನೊಬ್ಬರ ಮೇಲೆ ಹೇರುವುದನ್ನು, “ ನಮ್ಮದೇ  ಸರಿ “ ಎಂದು ವಾದಿಸುವವರನ್ನು  ಮತ್ತು ಅವನ್ನು ಒಪ್ಪಿಕೊಳ್ಳದಿದ್ದರೆ ಇತರರ ಭಾವನೆಗಳನ್ನು ಘಾಸಿಗೊಳಿಸುವವರನ್ನು ಸಮಾಜ ಗೌರವಿಸುವುದಿಲ್ಲ.

ಒಟ್ಟಾರೆ ಅಭಿಪ್ರಾಯದಲ್ಲಿ, ಅಭಿಪ್ರಾಯಗಳು ಸ್ಥಿತಿಸ್ಥಾಪಕ ರೂಪದಲ್ಲಿದ್ದರೆ, ಮೆದುವಾಗಿದ್ದು ಬದಲಾಗುವ ಹಲವು ಪರಿಸ್ಥಿತಿಗಳ ಜೊತೆ ಹೊಂದಾಣಿಕೆ ಯಾಗುವಂತಿದ್ದರೆ ಉತ್ತಮ. ನಮ್ಮ ಅಭಿಪ್ರಾಯಗಳು ಇನ್ನೊಬ್ಬರಿಗೆ  ಅನವಶ್ಯಕ ನೋವುಂಟು ಮಾಡದಿರಲಿ  ಎಂಬ ಎಚ್ಚರಿಕೆ ಇದ್ದರೆ ಒಳಿತು. ಇದೆಲ್ಲ ನಮಗೆ ತಿಳಿದಿದ್ದೂ ಅಭಿಪ್ರಾಯಗಳು ನಮ್ಮ ಅಧೀನದಲ್ಲಿರುವಂತವಲ್ಲ.  .ಆದರೆ, ಖಂಡಿತವಾಗಿ ನಾವು ನಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವಲ್ಲಿ ಮತ್ತು ರೂಪು ಗೊಳಿಸುವಲ್ಲಿ ಸ್ವಲ್ಪ ಮಟ್ಟಿಗಾದರೂ ಹತೋಟಿಯನ್ನು ಸಾಧಿಸ ಬಹುದು.

ನಮ್ಮಲ್ಲಿ ಮೂಡುವ ಮೊದಲ ಅಭಿಪ್ರಾಯಗಳನ್ನು ಲಘುವಾಗಿ ಮನಸ್ಸಿಗೆ ತೆಗೆದುಕೊಂಡು ಸಮಯಕ್ಕೆ ಅವಕಾಶ ಕೊಟ್ಟು ಅವೇ ವಿಚಾರಗಳನ್ನು,  ವ್ಯಕ್ತಿಗಳನ್ನು ಮತ್ತೆ ಕಾಲಾನುಕ್ರಮದಲ್ಲಿ ಅವಲೋಕಿಸಿದರೆ ಆಗ  ಮೂಡಬಹುದಾದ  ಅಭಿಪ್ರಾಯಗಳು  ಪ್ರಭುದ್ದವಾಗಿರ ಬಲ್ಲವು. ಅಲ್ಲಿಯವರೆಗೆ  ಅವುಗಳನ್ನು ಧಿಡೀರೆಂದು ವ್ಯಕ್ತಪಡಿಸದಂತಹ  ಸಮಾಧಾನವನ್ನು ನಾವು ಸಾಧಿಸಬೇಕು.

ನಮ್ಮ ಹಲವಾರು ಅಭಿಪ್ರಾಯಗಳು ನಮ್ಮ ಹಿಂದಿನ ಅನುಭವಗಳ ಮೂಸೆಯಲ್ಲಿ ಮರು ಹುಟ್ಟು ಪಡೆಯುತ್ತವೆ. ಈ ಕಾರಣ ನಮ್ಮನ್ನು ಅಪಾಯಗಳಿಂದ , ನೋವುಗಳಿಂದ,  ಕೆಟ್ಟ ಅನುಭವಗಳಿಂದ ದೂರ ವಿರಿಸಲು ಅಭಿಪ್ರಾಯಗಳು ಸಹಾಯ ಮಾಡುತ್ತವೆ. ಉತ್ತಮ, ಧನಾತ್ಮಕ, ಸಹಿಷ್ಣು ಅಭಿಪ್ರಾಯಗಳನ್ನು ಹೊಂದಿದವರು ಹೆಚ್ಚು ಹಿತವೆನಿಸುತ್ತಾರೆ. ಎಲ್ಲದರ ಬಗ್ಗೆ ಋಣಾತ್ಮಕವಾಗಿ ಅಭಿಪ್ರಾಯಗಳನ್ನು ಹೊಂದಿದವರು ಬೇರೆಯದೇ ಅಭಿಪ್ರಾಯಗಳಿಗೆ ಎಡೆ ಮಾಡಿ ಕೊಡುತ್ತಾರೆ. ಒಟ್ಟಾರೆ ನಮ್ಮ ಅಭಿಪ್ರಾಯಗಳು ನಮ್ಮನ್ನು ರೂಪಿಸುತ್ತವೆ. ನಮಗೊಂದು ಗುರುತನ್ನು ಸೃಷ್ಟಿಸುತ್ತವೆ. ಅಭಿಪ್ರಾಯಗಳ  ಬೆನ್ನೇರಿ  ಒಂದು ಸವಾರಿ ಮಾಡಿಳಿಯುವಲ್ಲಿ ‘ ಅಭಿಪ್ರಾಯಗಳು ’ ಎನ್ನುವ ಅಮೂರ್ತ ಪದಕ್ಕೂ ಬಲವಾದ ನೀತಿ ಮತ್ತು ಗುರುತರ  ಜವಾಬ್ದಾರಿಗಳಿರುವುದನ್ನು  ನಾವು ಗಮನಿಸ ಬಹುದು Afterall, opinions matter!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

8 thoughts on “ಅಭಿಪ್ರಾಯಗಳ ಬೆನ್ನೇರಿ ಒಂದು ಸವಾರಿ….”

  1. Managala+Prakash+Shetty

    ಅಭಿಪ್ರಾಯದ ಮೇಲಿನ ನಿಮ್ಮ ಅಭಿಪ್ರಾಯ ಚೆನ್ನಾಗಿದೆ ಎಂದು ನಮ್ಮ ಅಭಿಪ್ರಾಯ.

    1. ನಿಮ್ಮ ಸಹೃದಯಿ ಅಭಿಪ್ರಾಯಕ್ಕಾಗಿ ಧನ್ಯವಾದಗಳು ಮಂಗಳ ಅವರೆ.

  2. T.R.Anantharamu

    ‘ಪ್ರಾಯಂ ಕೂಸಾದೊಡಂ ಅಭಿಪ್ರಾಯಂ ಕೂಸಕ್ಕುಮೆ’ ಎಂದಿದ್ದಾನೆ ಕೇಶೀರಾಜ.ಡಾ.ಪ್ರೇಮಲತ ಆ ಪೈಕಿ

    1. ಹೌದೇ?…. . ಬಹಳ ಓದಿಕೊಂಡ ನಿಮ್ಮ ಮಾತು ಬಹಳ ಆಸಕ್ತಿದಾಯಕ. ಧನ್ಯವಾದಗಳು ಸರ್.

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter