ಸ್ಮರಣೆಯೊಂದೇ ಸಾಲದೆ ಎಂಬ ಮಾತಿದೆ. ಅದು ಯಾವೆಲ್ಲ ಭಾವ ಲೋಕಗಳನ್ನು ನಮ್ಮಲ್ಲಿ ಉದ್ದೀಪಸಬಲ್ಲದು ಎಂಬುದಕ್ಕೆ ಸಾಕ್ಷಿಯಾಗಿ ಈ ಕೃತಿ ಯಿದೆ ಎಂದರೆ ಉತ್ಪ್ರೇಕ್ಷೆಯಲ್ಲ.ಇಲ್ಲಿ ಏನುಂಟು ಏನಿಲ್ಲ.?ಜೀವಜಾತದಿಂದ ಹಿಡಿದು ಎಲ್ಲವನ್ನೂ ಇದು ಆವರಿಸಿದೆ. ಅವುಗಳನ್ನು ನಮ್ಮ ಅನುಕೂಲಕ್ಕಾಗಿ ಐದಾಗಿ ವಿಭಾಗಿಸಬಹುದು. ಅವು: ೧:ಮನುಷ್ಯ ಲೋಕ. ೨: ಪ್ರಕೃತಿ ಲೋಕ ೩: ವಸ್ತು ಲೋಕ. ೪ ನಾಗರಿಕ ಲೋಕ ೫ ಆಹಾರ ಲೋಕ:
ಮೊದಲ ಭಾಗದಲ್ಲಿನ ಮನುಷ್ಯ ಲೋಕದಲ್ಲಿ ಬಾಲ್ಯದ ಜತೆಗೆ ಸಜೀವವಾಗಿ ಹೆಣೆದುಕೊಂಡಿರುವ ಅಜ್ಜ, ಅಜ್ಜಿ, ದೊಡ್ಡಪ್ಪ , ಕಲಿಸಿದ ಅಕ್ಕೋರು ಮುಂತಾದವರು ಇದ್ದಾರೆ. ಅಜ್ಜ ಹೇಳುತ್ತಿದ್ದ ಕತೆಗಳು ಇವರ ಭಾವಲೋಕದ ವಿಸ್ತರಣೆಗೆ ಕಾರಣವಾದರೆ, ಅಜ್ಜಿ ತಿಂದ ಮಾವಿನ ಗೊರಟೆಗಳನ್ನು ಎಸೆಯದೆ ದಾರಿಯುದ್ದಕ್ಕೂ ನೆಡುವುದನ್ನು ತೋರಿಸುವ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳೆಸುವ ದಾರಿಯನ್ನು ಮನಗಾಣಿಸುತ್ತಾರೆ.ನಿರಕ್ಷರಿಯಾದ ದೊಡ್ಡಪ್ಪ ತಾವು ಹಾಕುತ್ತಿದ್ದ ಬಗೆ ಬಗೆಯ ರಂಗೋಲಿಗಳ ಮೂಲಕ ಒಂದು ವಿಸ್ಮಯ ಲೋಕವನ್ನು ಇವರ ಮುಂದೆ ಸೃಜಿಸುತ್ತಿದ್ದರು. ಅಕ್ಕೋರು ಇವರು ಅವರಿಗಾಗಿ ಒಯ್ಯುತ್ತಿದ್ದ ಬಗೆಯ ಹೂಗಳನ್ನು ಜೋಪಾಸನೆ ಮಾಡುವ ಸೌಂದರ್ಯದ ಪ್ರಾಥಮಿಕ ಪಾಠ ಕಲಿಸಿದರು.
ಎರಡನೇ ಭಾಗದ ಪ್ರಕೃತಿ ಲೋಕದ ಅನಂತ ವಿಸ್ಮಯದ ತಾಣವಾಗಿ ಇವರ ಭಾವಲೋಕವನ್ನು ಆವರಿಸಿದೆ. ಮಲೆನಾಡಿನ ಇವರು ಕಾಡು ತೊರೆ ಹಳ್ಳ ಮರಗಿಡಗಳ, ಅಲ್ಲಿ ಸಿಕ್ಕುವ ಬಗೆ ಬಗೆಯ ಹಣ್ಣು, ನೆಲ್ಲಿಕಾಯಿ, ಇತ್ಯಾದಿಗಳು ಲೇಖಕಿಯ ಬಾಲ್ಯದ ಅವಿಭಾಜ್ಯ ಅಂಗವಾಗಿದೆ.
ಮೂರನೇ ವಸ್ತು ಲೋಕದಲ್ಲಿ ಅಜ್ಜಿ ಹೆಣೆಯುತ್ತಿದ್ದ ಹಳೆಸೀರೆಗಳ ದುಪ್ಪಟ್ಟಿ, ಕರ್ಟನ್ ,ಚಳಿಗಾಲದಲ್ಲಿ ಹೊದೆಯಲು ಕಿತ್ತಾಡುತ್ತಿದ್ದ ಕಂಬಳಿಗಳು ಅವು ಉಂಟು ಮಾಡುತ್ತಿದ್ದ ಬೆಚ್ಚಗಿನ ಭಾವಲೋಕವನ್ನು ಒಳಗೊಂಡಿದೆ.
ನಾಲ್ಕನೆಯ ನಾಗರಿಕ ಲೋಕದಲ್ಲಿ ರಾತ್ರಿ ಬಸ್ಸುಗಳ ಪಯಣದ ಹಾದಿಯಲ್ಲಿ ಮೂಡುತ್ತಿದ್ದ ಕ್ಷಣಿಕವಾದ ಹೊಸ ಸಂಬಂಧಗಳು, ಕ್ಯಾಬಿನಲ್ಲಿ ಎಚ್ಚರದಿಂದ ಇರಲು ಚಾಲಕ ಹೇಳುತ್ತಿದ್ದ ಕತೆಗಳು ಮನುಷ್ಯ ಸಂಬಂಧಗಳ ವಿಸ್ತರಿಸುವ ಸಾಧನಗಳಾಗಿ ಇವರಿಗೆ ಕಂಡಿವೆ.
ಐದನೇ ಭಾಗದಲ್ಲಿ ಉತ್ತರ ಕನ್ನಡಕ್ಕೆ ವಿಶಿಷ್ಠವಾದ ಆಹಾರ ಖಾದ್ಯಗಳು ಇವೆ. ಬಾಳೆಹಣ್ಣಿನ ರೊಟ್ಟಿ, ತೆಳ್ಳೇವು ಇತ್ಯಾದಿ ಬ್ರೆಡ್ ಪಿಜ್ಜಾಗಳ ನಡುವೆಯು ಇವುಗಳ ನೆನಪು ಲೇಖಕಿಗೆ ದುತ್ತೆಂದು ಪ್ರತ್ಯಕ್ಷವಾಗಿ ಬಿಡುತ್ತವೆ.
ಒಂದರ ಜತೆಗೊಂದು ಕೊಂಡು ಒಂದು ಭಾವಲೋಕವನ್ನು ಸಮರ್ಥವಾಗಿ ನಿರ್ಮಿಸುವುದರಲ್ಲಿ ಸಫಲವಾಗುತ್ತವೆ. ದೈನಿಕ ಲೋಕ ವನ್ನು ಇವರ ಗದ್ಯಲಯ ಅದೆ ಉತ್ತರ ಕನ್ನಡಕ್ಕೆ ಸೇರಿದ ಜಯಂತ ಕಾಯ್ಕಿಣಿಯವರನ್ನು ದಟ್ಟವಾಗಿ ನೆನಪಿಗೆ ತರುತ್ತದೆ. ಅವೆ ಶಬ್ದ ಚಿತ್ರಗಳು ತಮ್ಮ ಶಬ್ದ ಜಾಲದ ಮೂಲಕ ಗಂಧರ್ವ ಲೋಕ ವನ್ನು ಸೃಜಿಸುವ ಸಾಮರ್ಥ್ಯ ಅವರ ಭಾಷೆಗೆ ಸಿದ್ದಿಸಿದೆ. ಇದನ್ನು ಕಳಿಸಿ ಓದಲು ಅನುವು ಮಾಡಿಕೊಟ್ಟ ಲೇಖಕಿಗೆ, ಅದಕ್ಕೆ ಕಾರಣವಾದ ಗೆಳೆಯರಾದ ವಿಶ್ವ ಧ್ವನಿಯ ಸಂಪಾದಕರಾದ ಪ್ರಕಾಶ ಪಯ್ಯಾರು ಅವರಿಗೆ ವಂದನೆ, ಅಭಿನಂದನೆ.
ಅಂಜನಾ ಹೆಗಡೆ ಅವರ ಬಗ್ಗೆ:
ಹುಟ್ಟಿ ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನಲ್ಲಿ. ಮದುವೆಯಾಗಿ ಬೆಂಗಳೂರಿನಲ್ಲಿ ವಾಸ. ಹತ್ತು ವರ್ಷಗಳ ಕಾಲ ಬಿಪಿಓ ಒಂದರಲ್ಲಿ ಕೆಲಸ ಮಾಡಿದ ಅನುಭವ. “ಕಾಡ ಕತ್ತಲೆಯ ಮೌನಮಾತುಗಳು” ಕವನ ಸಂಕಲನ ಹಾಗೂ “ಬೊಗಸೆಯಲ್ಲೊಂದು ಹೂನಗೆ” ಪ್ರಬಂಧಗಳ ಸಂಕಲನ ಪ್ರಕಟವಾಗಿವೆ. ಓದು-ಬರೆಹದ ಜೊತೆಗೆ ಗಾರ್ಡನಿಂಗ್ ನೆಚ್ಚಿನ ಹವ್ಯಾಸ. ಇವರು ವಿಶ್ವಧ್ವನಿ ಬಳಗದ ಲೇಖಕಿಯಾಗಿರುವರು.
ಕೃತಿ ಪ್ರಕಾಶಕರು : ಮೈತ್ರಿ ಪ್ರಕಾಶನ
ಬೆಲೆ: ರೂ. ೧೨೦/-