ಹೊರಗಿರುವ ಕತ್ತಲೆ
ಒಳಗಿರುವ ಬೆಳಕನ್ನು
ಒಳಗಿರುವ ಕತ್ತಲನ್ನು
ಹೊರಗಿರುವ ಬೆಳಕು
ಆವರಿಸಿತ್ತು
ನಂಬುತ್ತಲೇ ಇದ್ದೀಯ
ಮತ್ತೆ ಮಳೆ ಬಂದೇ ಬರುವುದೆಂದು
ದೂರದ ಪರ್ವತದ ಮೇಲೆ ಬಿದ್ದ ಹನಿಗಳು
ನದಿಯಾದಂತೆ, ತೊರೆಯಾದಂತೆ
ತುಂಬಿಕೊಂಡವು ಮನೆಯೊಳಗೆ ಕಾಳು ಕಡ್ಡಿ ನೀರು
ಉರುವಲು ತಾನೂ ಬೆಂದು
ಬೇಯಿಸಿದ ನಂಬಿಕೆಯಂತೆ
ಅದೆಷ್ಟು ನಂಬಿಕೆ ನಿನಗೆ
ಸಹನೆ ಸುಡುತ್ತದೆ ಅಲ್ಲವೇ?
ನಂಬಿ ನಂಬಿ ಹತ್ತಿರವಾಗುವ
ನದಿಯಂತೆ, ಗಾಳಿಯಂತೆ
ಉರಿವ ಸೂರ್ಯನಂತೆ
ನಾನು ಹತ್ತಿರವಾಗಲೇ ಇಲ್ಲ
ದೂರವೇ ನಿಂತಿದ್ದ
ರೆಕ್ಕೆಗಳನು ಮಾತ್ರ ನಂಬಿದ್ದ ಹಕ್ಕಿ
ಹಾರುವಾಗ ಹಗುರ
ಇಳಿದಾಗ ಮತ್ತೆ ಬಹುಭಾರ
ತಪ್ಪು ಒಪ್ಪಿಗೆ ಅದೆಷ್ಟು ಕ್ಷಮೆ ನಿನ್ನಲ್ಲಿ
ಕರುಣೆಗೆ ಮಾತು ಬರಲೇಬೇಕು ತಾನೇ?
ಒಳಗಿನ ಗಾಳಿ ಸುರುಳಿ ಸುತ್ತಿ
ಸುಳಿಯುತ್ತಿತ್ತು ಒಳಗೇ
ನಿಧಾನಕ್ಕೆ ಕಿಟಕಿ ಪರದೆ ಸರಿಸಿ
ಬೀಸುತ್ತದೆ ತಂಪಾದ ಗಾಳಿ
ಹೊರಗಿನಿಂದ ಒಳಕ್ಕೆ
ಬಿಗಿ ಹಿಡಿದ ಉಸಿರು ಹಗುರಾದಂತೆ
ಜೀವದ ಮೇಲೆ ಅದೆಷ್ಟು ಮಮಕಾರ ನಿನಗೆ
ಭಕ್ತಿಯೆಂದರೆ ಕೇವಲ ದೇವರ ಮನೆಯ ಬಾಬತ್ತಲ್ಲ ಅಲ್ಲವೇ?
ಸದಾ ನಂಬುವ
ಕರುಣಾಳು ಕ್ಷಮಾ
ನೀ ಎಂದಿಗೂ ಕ್ಷಮಾ

1 thought on “ಕ್ಷಮಾ”
Saralavagi hrudayakke eliyuthade