ವೈ.ವಿ.ರೆಡ್ಡಿಯವರ ‘ಭಿನ್ನ ಅಭಿಪ್ರಾಯ’ : ಒಂದು ಅವಲೋಕನ

ಭಿನ್ನ ಅಭಿಪ್ರಾಯ: ವೈ.ವಿ.ರೆಡ್ಡಿಯವರ ಆತ್ಮಕತೆ.

ನಿರೂಪಣೆ:ಎಂ.ಎಸ್. ಶ್ರೀರಾಮ

ಭಾರತೀಯ ರಿಸರ್ವ್ ಬ್ಯಾಂಕಿನ  ಗವರ್ನರ್ ಆಗಿದ್ದಂಥ ಶ್ರೀ ವೈ.ವಿ.ರೆಡ್ಡಿಯವರ ಆತ್ಮಕಥೆ ಮೂಲ ತೆಲುಗು (ನಾ ಜ್ಞಾಪಕಾಲು) ಮತ್ತು ಕೊಂಚ ವೃತ್ತಿಬದುಕಿನ ನೆನಪುಗಳು ( ಎಡವೈಸ್ ಅಂಡ್ ಡಿಸೆಂಟ್) ಆಂಗ್ಲ ಭಾಷೆಯಲ್ಲಿ ಅವರೇ ಬರೆದಂಥವು. ಅವನ್ನು ಕ್ರೋಢೀಕರಿಸಿ ಕನ್ನಡದಲ್ಲಿ ನಿರೂಪಿಸಿದ್ದಾರೆ ನಮ್ಮ ನಾಡಿನ ಹೆಸರಾಂತ ಸಾಹಿತಿಗಳಾದ ವೃತ್ತಿಯಲ್ಲಿ ಇಂಡಿಯನ್ ಇನಸ್ಟಿಟ್ಯೂಟ್ ಓಫ್ ಮ್ಯಾನೇಜ್ಮೆಂಟ್, ಬೆಂಗಳೂರಲ್ಲಿ ಪ್ರಾಧ್ಯಾಪಕರಾಗಿರುವ ಶ್ರೀ ಎಂ.ಎಸ್.ಶ್ರೀ ರಾಮ್ ಇವರು. ತೆಲುಗಿನಲ್ಲಿದ್ದುದು ಸಾಮಾನ್ಯ ಜನರನ್ನು ಗಮನದಲ್ಲಿರಿಸಿ ಬರೆದದ್ದಾದರೆ; ಆಂಗ್ಲ ಬರಹ ಹಣಕಾಸಿನ ವಿಷಯದ್ದಾಗಿದ್ದು ತಾಂತ್ರಿಕವಾದ ಸಂಕೀರ್ಣ ವಿಷಯಗಳೂ ಇದ್ದವು. ಇವೆರಡರ ಕ್ರೋಢೀಕರಣ ಕನ್ನಡದ “ಭಿನ್ನ ಅಭಿಪ್ರಾಯ”.

ಇದು ನಿರೂಪಕರಾದ ಎಂ.ಎಸ್. ಶ್ರೀರಾಮ್ ಅವರಿಗೆ ಸವಾಲಿನ ಕೆಲಸವೇ ಆಗಿದ್ದಿರಬೇಕು. ಕನ್ನಡಿಸಲು ಬೇಕಾದ ಆರ್ಥಿಕ ಮತ್ತು ಹಣಕಾಸಿಗೆ ಸಂಬಂಧಿಸಿದ ಪಾರಿಭಾಷಿಕ ಪದಗಳು ಮತ್ತು ಅವುಗಳ ಸಮರ್ಥ ಸಂವಹನಗಳ ಸವಾಲು ಇವರ ಮುಂದಿದ್ದವು. ಆದರೆ, ಶ್ರೀ ರಾಮ್ ಅವರು ಇಡೀ ಪುಸ್ತಕವನ್ನು ಅನುವಾದಿಸದೆ ಅದರ ಮರು ನಿರೂಪಣೆ ಮಾಡಿದುದರ ಪರಿಣಾಮವಾಗಿ ಈ ಪುಸ್ತಕ ಬಹ್ವಂಶ ಮೂಲ ಕನ್ನಡದ್ದೇ  ಎಂಬಂತೆ ಮೂಡಿಬಂದಿದೆ. ಕನ್ನಡ ಸಾಹಿತ್ಯಲೋಕಕ್ಕೆ ಇದು ತುಂಬಾ ಅಪೂರ್ವ ಪುಸ್ತಕವೆಂದರೂ ಅತಿಶಯೋಕ್ತಿಯಲ್ಲ.

ಭಾರತ ಕಂಡ ಕಠಿಣ ನಿಲುವಿನ ; ಯಾರಿಂದಲೂ ಮಣಿಸಲಾಗದ  ವ್ಯಕ್ತಿತ್ವದ ಆರ್.ಬಿ.ಐ ಗವರ್ನರ್ ಎಂಬ ನೆಗಳ್ತೆಗೆ ಪಾತ್ರರಾದ ಶ್ರೀಯುತ ರೆಡ್ಡಿಯವರು ಅವರ ಈ ಗುಣದಿಂದಾಗಿಯೇ ಭಾರತಕ್ಕೆ ಬರಬಹುದಾಗಿದ್ದ 2008ರ ಅಮೆರಿಕಾ ಮೂಲದ ಅತಿದೊಡ್ಡ ಆರ್ಥಿಕ ವಿಪತ್ತನ್ನು (ಸಬ್ ಪ್ರೈಮ್ ಕ್ರೈಸಿಸ್) ತಡೆದು ನಿಲ್ಲಿಸಿದ ಕೀರ್ತಿ    ಇವರಿಗೆ ಅರ್ಹವಾಗಿ ದೊರಕಿದೆ. ಭಾರತ ಸರಕಾರ ಪದ್ಮಭೂಷಣ ಪ್ರಶಸ್ತಿಯನ್ನು ಇವರಿಗೆ ದಯಪಾಲಿಸಿದೆ. 

ಆಂದ್ರಪ್ರದೇಶದ ಕಡಪಾ ಜಿಲ್ಲೆಯ ಪಾಟೂರು ಎಂಬ ಹಳ್ಳಿಯಲ್ಲಿ ಜನಿಸಿದ ಶ್ರೀ ವೈ.ವಿ.ರೆಡ್ಡಿಯವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದು ಭಾರತೀಯ ಆಡಳಿತ ಸೇವೆಗೆ (ಐ.ಎ.ಎಸ್) ಅತಿ ಕಿರಿಯ ವಯಸ್ಸಿನಲ್ಲೇ ಆಯ್ಕೆಯಾದರು. ಮೊದಲು

 ಆಂದ್ರಪ್ರದೇಶ ರಾಜ್ಯ ಸರಕಾರದ ಸೇವೆಯಲ್ಲಿ ತೊಡಗಿಸಿಕೊಂಡ ರೆಡ್ಡಿಯವರು ತದನಂತರ ಕೇಂದ್ರಸರಕಾರದ ಸೇವೆಗೆ ನಿಯುಕ್ತಿಗೊಂಡು ಸಮಾಜದ ಅತಿ ಕೆಳವರ್ಗದ ಜನರ ಜೀವನ ಸಂಕಷ್ಟಗಳನ್ನೂ ;ಮಧ್ಯಮ ವರ್ಗ ಜನರ ಆಸೆ ಆಕಾಂಕ್ಷೆಗಳನ್ನು; ಮತ್ತು ನೀತಿ ನಿಯಮಾವಳಿಗಳ ಮೂಲಕ ಭಾರತದ ಸಾಮಾನ್ಯ ಜನರ ಮೇಲಾಗುವ ಪರಿಣಾಮಗಳ ಗಂಭೀರ ಮತ್ತು ಆಳವಾದ ಪರಿಜ್ಞಾನವನ್ನು ತಮ್ಮ ಸೇವಾವೃತ್ತಿಯಲ್ಲಿ ಸಂಪಾದಿಸಿದುದು ಮಾತ್ರವಲ್ಲದೆ ವಿಶ್ವಬ್ಯಾಂಕ್ ಹಾಗು ಐ.ಎಮ್.ಎಫ್ ಸಂಸ್ಥೆಯಲ್ಲೂ ತಮ್ಮ ಸೇವೆಯನ್ನು ಸಲ್ಲಿಸಿ ಅತ್ಯಂತ ಶ್ರೀಮಂತ ಕಾರ್ಯಾನುಭವವನ್ನು ಪಡೆದವರಾಗಿ; ಎಲ್ಲಾ ಪಕ್ಷಗಳಿಗೂ ಆದರಣೀಯರಾಗಿ ಸೇವೆ ಸಲ್ಲಿಸಿದ ಘನ ವ್ಯಕ್ತಿತ್ತ್ವವನ್ನು ಪಡೆದವರಾಗಿದ್ದಾರೆ.

 ಪುಸ್ತಕದ ರಕ್ಷಾಕವಚದಲ್ಲೇ ಈ ಮಾತು ಅರ್ಹವಾಗಿಯೇ ಇದೆ: 

“ ಜನಸಾಮಾನ್ಯರ ಒಳಿತನ್ನೇ ತನ್ನ ಜೀವನೋದ್ದೇಶವಾಗಿಟ್ಟುಕೊಂಡಿದ್ದ  ಆರ್ಥಿಕ  ತಜ್ಞರ ಕಥೆ” ಎಂದು.

ಆಂದ್ರಪ್ರದೇಶ ರಾಜ್ಯ ಸರಕಾರದ ಸೇವೆಯಲ್ಲಿ ಸಹಾಯಕ ಕಮಿಷನರ್ ಆಗಿ ಜಿಲ್ಲಾಧಿಕಾರಿಯಾಗಿ ಮತ್ತು ಆರ್ಥಿಕ ಯೋಜನಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರೆಡ್ಡಿಯವರು ಸೇವೆಯಲ್ಲಿರುತ್ತಲೇ ತಮ್ಮ ಕನಸಿನ ಡಾಕ್ಟರೇಟ್ ಪದವಿಯನ್ನೂ ಪಡೆದವರು. ಇವರ ಕೇಂದ್ರ ಸರಕಾರದ ಹಣಕಾಸು ಇಲಾಖೆಯಲ್ಲಿ 1990ರ ದಶಕದ ಸೇವೆ ಬಹು ಮುಖ್ಯವಾದದ್ದು. ನಿರೂಪಕರು ಅಂದಿನ ಭಾರತದ ದಯನೀಯ ಆರ್ಥಿಕ ಪರಿಸ್ಥಿತಿಯ ಕುರಿತಾಗಿ ಚೆನ್ನಾದ ಚಿತ್ರಣವನ್ನೇ ಕೊಟ್ಟು; ಅಂದಿನ ವಿತ್ತ ಸಚಿವರಾಗಿದ್ದ ಮಾಜಿ ಪ್ರಧಾನಿ ಮನಮೋಹನ ಸಿಂಗ್, ವಿತ್ತ ಸಚಿವಾಲಯದ ಕಾರ್ಯದರ್ಶಿ ಮಾಜಿ ಗವರ್ನರ್ ರಂಗರಾಜನ್ ಮತ್ತು ಅಧಿಕಾರಿಯಾಗಿದ್ದ ವೈ.ವಿ.ರೆಡ್ಡಿ ಮುಂತಾದವರ ಕಾರ್ಯತತ್ಪರತೆಯನ್ನು ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಅದೇ ಸಂದರ್ಭದಲ್ಲಿ ಭಾರತದ ಅರುವತ್ತು ಟನ್ ಚಿನ್ನವನ್ನು ಒತ್ತೆ ಇಟ್ಟ ಸಂದರ್ಭದಲ್ಲಿನ ರೆಡ್ಡಿಯವರ ಪಾತ್ರ ಇವೆಲ್ಲ ಆಸಕ್ತಿ ಕೆರಳಿಸುವಂಥದ್ದು. ರೆಡ್ಡಿಯವರೇ ಈ ಸಂದರ್ಭದ ಆಫೀಸ್ ನೋಟ್ ತಯಾರಿಸಿದ್ದು.  ಚಿನ್ನವನ್ನು ವಿದೇಶದಲ್ಲಿ ಒತ್ತೆ ಇಡುವ ಅನಿವಾರ್ಯ ಪ್ರಸಂಗ ಮತ್ತು ಅದರ ಹಿಂದಿದ್ದ ಭಾರತ ಸರಕಾರದ ಹಣಕಾಸು ಇಲಾಖೆಯ ಅಧಿಕಾರಿಗಳ ದುಡಿತ;ಭಾರತವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಬೇಕಾಗಿದ್ದ ವಿಚಕ್ಷಣತೆಯ ನಿರ್ಧಾರ ಇವೆಲ್ಲದರ ಚಿತ್ರವೂ ಓದುಗನಿಗೆ ದೊರೆತು; ನೀತಿ ನಿಯಮಾವಳಿಯನ್ನು ರೂಪಿಸುವ ಕೇಂದ್ರಸರಕಾರದ ಇಲಾಖೆಗಳ ಕಾರ್ಯಪಟುತ್ವ ಮತ್ತು ಪ್ರಬುದ್ಧತೆಯ ಅರಿವನ್ನು ಕೊಡುತ್ತಾ ; ಅಂದಿನ ಭಾರತದ ನಿಜ ಪರಿಸ್ಥಿತಿಯನ್ನು ಪುಸ್ತಕ ತೆರೆದಿಡುತ್ತದೆ.

ಆರ್.ಬಿ.ಐ ಗೆ ಗವರ್ನರಾಗಿ ಭಾ.ಜ.ಪಾ ಸರಕಾರದಿಂದ ಐದುವರುಷದ ಅವಧಿಗೆ ನೇಮಿಸಲ್ಪಟ್ಟರೂ ಮುಂದಿನ ಯುಪಿಎ ಸರಕಾರದ ಜತೆಗೂ ಗೌರವನೀಯರಾಗಿಯೇ ಉಳಿದ ರೆಡ್ಡಿಯವರ ಘನತೆ ಮನಮುಟ್ಟುವಂಥದ್ದು. ಯುಪಿಎ ಸರಕಾರದ ಸಂದರ್ಭದಲ್ಲಿ ಭಾರತದ ಆರ್ಥಿಕತೆಯ ನಾಗಾಲೋಟಕ್ಕೆ  ವಿವೇಕದ ಕಡಿವಾಣ  ಹಾಕುವ ರೆಡ್ಡಿಯವರಿಗೆ  ಅಂದಿನ ವಿತ್ತ ಸಚಿವ ಶ್ರೀ ಚಿದಂಬರಮ್ ಜತೆಗಿನ ಭಿನ್ನಮತದ  ಚಿತ್ರಣವೂ ಆಯಾ ಕ್ಷೇತ್ರದ ದಿಗ್ಗಜಗಳ ಒತ್ತಡ, ತಲ್ಲಣ ಮತ್ತು ಪರಿಸ್ಥಿತಿಯ ಬಗೆಗೆ ಓದುಗರಿಗೆ ಹೊಸ ಒಳನೋಟವನ್ನು ಕೊಡುವಂಥದ್ದಾಗಿದೆ.

ಯಾವುದೇ ರಾಜಕೀಯ ಪಕ್ಷಕ್ಕೆ ಮುಡಿಬಾಗದೆ ತನ್ನ ವೃತ್ತಿಪರತೆಯನ್ನು ಸಾಮಾನ್ಯ ಜನರ ಆಶೋತ್ತರಗಳನ್ನು ಗಮನದಲ್ಲಿರಿಸಿಕೊಂಡು ಕೇಂದ್ರ ಬ್ಯಾಂಕ್ ನ ನೀತಿ ನಿರೂಪಣೆಗಳನ್ನು ರೂಪಿಸಿದ ಹೆಗ್ಗಳಿಕೆ ರೆಡ್ಡಿಯವರದ್ದು. ಆರ್.ಬಿ.ಐ ಸಂಸ್ಥೆಯಲ್ಲಿ ತಮ್ಮ ಅಧಿಕಾರಿ ವರ್ಗದವರಲ್ಲಿ ಕಲಿಕಾ/ಸಂಶೋಧನಾ ಸಂಸ್ಕೃತಿಯನ್ನು ಬೆಳೆಸಿ ಕಟ್ಟಿದ ಕೀರ್ತಿ ರೆಡ್ಡಿಯವರದ್ದೆನ್ನುವುದು ಈ ಪುಸ್ತಕದಿಂದ ಮನದಟ್ಟಾಗುತ್ತದೆ.

ಸಬ್ ಪ್ರೈಮ್ ಕ್ರೈಸಿಸ್ ಕುರಿತಾಗಿ RBI ತೆಗೆದುಕೊಂಡ ತೀರ್ಮಾನದ ಕುರಿತು ರೆಡ್ಡಿಯವರ ಮಾತು ಇಲ್ಲಿದೆ:

“2007ರ ನಂತರ ವಿಶ್ವವ್ಯಾಪಿ ಆರ್ಥಿಕ ಬಿಕ್ಕಟ್ಟಾಗುತ್ತದೆಂದು ನಿರೀಕ್ಷಿಸಿದ್ದೆವು. ಸೂಚ್ಯವಾಗಿ ಎಚ್ಚರಿಕೆ ನೀಡಿದ್ದರೂ ಪ್ರಗತಿಯ ರಭಸದಲ್ಲಿ ಯಾರೂ ಅದನ್ನು ಗಮನಿಸಿರಲಿಲ್ಲ. ಆದರೆ ನಾವು ನಮ್ಮ ಎಚ್ಚರಿಕೆಯಲ್ಲಿದ್ದೆವು. 2008ರ ಜನವರಿಗೆ ಆರ್ ಬಿ ಐ ಎಲ್ಲ  ತಯಾರಿಯನ್ನು ನಡೆಸಿ, ಒಂದು ತುರ್ತು ತಂತ್ರದ ರೂಪುರೇಷೆ ತಯಾರಿಸಿಟ್ಟಿತ್ತು. ನನ್ನ ಊಹೆ ನಿಜವಾಗಿ, ಅಮೆರಿಕದಲ್ಲಿ ವಸತಿ ಸಾಲದ ಗುಳ್ಳೆ ಒಡೆಯಿತು, ಅದರಿಂದ ಅಂತಾರಾಷ್ಟ್ರೀಯ  ಬಿಕ್ಕಟ್ಟಾಯಿತು. ತಮ್ಮ ಮುಂಜಾಗ್ರತಾ ಕ್ರಮಗಳಿಂದಾಗಿ ದೇಶವನ್ನು ಕಾಪಾಡಿದೆವು. ವಿಶ್ವವ್ಯಾಪೀ ಬಿಕ್ಕಟ್ಟಿನ ನಂತರವೇ ಹೂಡಿಕೆಯ ಖಾತೆಯ ನಿರ್ವಹಣೆ, ವಿನಿಮಯ ದರದ ನಿರ್ವಹಣೆ, ವಿದೇಶಿ ವಿನಿಮಯ ನಿಕ್ಷೇಪ, ಎನ್.ಬಿ,ಎಫ್.ಸಿಗಳಂತಹ ಮುಖ್ಯ ವಿಷಯಗಳಲ್ಲಿ ಕೈಗೊಂಡ ಧೈರ್ಯವಾದ ನಿಲುವು ಒಳ್ಳೆಯದನ್ನೇ ಮಾಡಿತು. ಆ ಸಮಯಕ್ಕೆ ಆರ್.ಬಿ.ಐಗೆ ಒಳ್ಳೆಯ ಹೆಸರು ಬಂದದ್ದು ನಮಗೆ  ಹೆಮ್ಮೆಯ ವಿಷಯ.”

ಅಮೆರಿಕಾದ ನೋಬೆಲ್ ಪುರಸ್ಕೃತ ಆರ್ಥಿಕ ತಜ್ಞ ಜೋಸೆಫ್ ಸ್ಟಿಗ್ಲಿಟ್ಸ್ ಅವರು ರೆಡ್ಡಿಯವರ ಕುರಿತಾಗಿ ಹೇಳಿದ ಮಾತು ಮಹತ್ತ್ವದ್ದು. ಡಾ.ರೆಡ್ಡಿಯವರೇನಾದರು Sub Prime Crisis ಸಂದರ್ಭ ಅಮೆರಿಕಾದ ಕೇಂದ್ರ ಬ್ಯಾಂಕಿನ ಮುಖ್ಯಸ್ಥರಾಗಿದ್ದುದಾಗಿದ್ದರೆ ಈ ಆರ್ಥಿಕ ಸಂಕಷ್ಟ ಎದುರಾಗುತ್ತಲೇ ಇರಲಿಲ್ಲ ಎಂದು ಹೇಳಿದ್ದು ಡಾ. ರೆಡ್ಡಿಯವರ ಮಹತ್ತನ್ನು ಪ್ರತಿಬಬಿಸುತ್ತದೆ.

ಆರ್ಥಿಕ ವಿವರಗಳನ್ನು ಕನ್ನಡದಲ್ಲಿ ತರುವುದು ನಿರೂಪಕರಿಗೆ ಸವಾಲಿನ ಕೆಲಸ ಎನ್ನುವುದು ಪುಟಪುಟಗಳಲ್ಲಿ ಅದರಲ್ಲೂ ಹಣಕಾಸು ವ್ಯವಹಾರಗಳ ನಿರೂಪಣೆಯಲ್ಲಿ ಕಾಣಿಸುತ್ತದೆ. ಕನ್ನಡದ ಮಟ್ಟಿಗೆ ಅಪೂರ್ವ ಪುಸ್ತಕವಿದು. ಈ ಪುಸ್ತಕ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರಗಳಲ್ಲಿ ತೊಡಗಿರುವವರಿಗೆ ಮತ್ತು ಸಾಮಾನ್ಯ ಜನರಿಗೆ ಏಕಕಾಲದಲ್ಲಿ ಓದಿಸಿಕೊಂಡು ಹೋಗುವಂತಿದೆ.  ಆದರೂ, ಹಣಕಾಸು ಕ್ಷೇತ್ರಕ್ಕೆ ಸೇರಿದವರಂತೂ ಓದಲೇ ಬೇಕಾದ ಪುಸ್ತಕ.

*** ನಾಡಿನ ಪ್ರತಿಷ್ಠಿತ ಅಕ್ಷರ ಪ್ರಕಾಶನದವರು ಹೊರತಂದ ಈ ಪುಸ್ತಕ ಒಟ್ಟು ಇನ್ನೂರೆಂಬತ್ತೆಂಟು ಪುಟಗಳಲ್ಲಿ ಹರಡಿದೆ. ಬೆಲೆ ರೂಪಾಯಿ ಇನ್ನೂರ ಎಪ್ಪತ್ತು.

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter