ಆಕಾಶ ನೀಲಿ, ಕಂದು, ಹಳದಿ ಬಣ್ಣದ ನೇರ ಗೀಟುಗಳು ಎಲ್ಲ ದಿಕ್ಕಿನಲ್ಲೂ ಹರಡಿರುವ ಚಿತ್ರವಿದ್ದ ಉಡುಪದು. ದೂರ ದಿಂದ ನೋಡಿದರೆ ನೀಲಿ ಬಟ್ಟೆ ಎಂದು ಹೇಳ ಬಹುದಾಗಿದ್ದ ನಂಜಮ್ಮನ ಚೂಡಿದಾರಿನ ಪ್ಯಾಂಟು ಚಿದ್ರ, ಚಿದ್ರವಾಗಿ ಹರಿದು ಹೋಗಿತ್ತು. ಅವಳೇ ತೊಟ್ಟಿದ್ದ ಉಡುಪು ಅವಳ ಕಣ್ಣಿನ ಮುಂದೆ ಚಿತ್ತಾರ ಬಿಡಿಸಿತ್ತಾದರೂ ಯಾಕೋ ಗೊತ್ತಿಲ್ಲ. ಕಾಲಿಂದ ರಕ್ತ ಹರಿಯುತ್ತಿತ್ತು . ಕಾಲಿನೆಡೆ ನೋಡಿಕೊಂಡಳು. ಎಡಗಾಲೇ, ಬಲಗಾಲೇ ಎಂದು ಲೆಕ್ಕಹಾಕಿದಳು. ಖಂಡಿತ ಅದು ಬಲಗಾಲು ಅಲ್ಲಿಂದಲೇ ರಕ್ತ ಹರಿಯುತ್ತಿತ್ತು. ಬಾಯೆಲ್ಲ ಒಣಗಿದ ಅನುಭವ. ನೀರುಬೇಕಿತ್ತು. ಕಾಲೆತ್ತಿ ಮುಂದಿಟ್ಟಳು. ನೋವಿರಲಿಲ್ಲ. ಭಾರವಾದ ಕಾಲನ್ನುಎಳೆಯುತ್ತ ಮುನ್ನೆಡೆದ ಅವಳ ಮುಂದೆ ರಸ್ತೆಯಿರಲಿಲ್ಲ. ಎದುರಿಗೆ ಒಂದು ಮಂಚ. ಅಮ್ಮನದೇ ಆಕಾರ.
“ಅಮ್ಮ ತಗೋ..” ಅಂತ ಮಾತ್ರೆ ಕೊಡಲು ಮಲ್ಲಮ್ಮನನ್ನು ತನ್ನೆಡೆ ತಿರುಗಿಸಿ ಕೊಂಡಳು. ಶೀತಲ ಮೈ ಅವಳ ಕೈಗೆ ತಗುಲಿತು. ಕಿಟಾರನೆ ಕಿರುಚಿ, ಹಿಂತುರುಗಿ ಓಡಲು ಕಾಲು ತೆಗೆದಳು. ಕತ್ತಿಯ ಅಲುಗಿನಂತೆ ಇರಿದ ನೋವಿಗೆ ಅವಳ ಮೈ ಬೆವರಿಟ್ಟಿತು. ತಟ್ಟಂತ ಕಣ್ಣು ಬಿಟ್ಟಳು. ಅವಳ ಕಾಲಿನ ಬ್ಯಾಂಡೇಜಿನಿಂದ ಹೊಸದಾಗಿ ರಕ್ತ ಹರಿದಿತ್ತು. ಪದೇ ಪದೇ ಅಮ್ಮನ ಸತ್ತ ದೇಹದ ಹಾಳಾದ ಕನಸು. ಇವತ್ತು ಹೊಸತಾಗಿ ಅವಳ ಕಾಲೂ ಅದರಲ್ಲಿ ಸೇರಿ ಕೊಂಡಿತ್ತು!
ಗರಗರನೆ ಆಸ್ಪತ್ರೆಯ ಪಂಕ ತಿರುಗುತ್ತಿತ್ತು. ಅದರಿಂದ ಯಾವ ಗಾಳಿಯೂ ಬರುತ್ತಿರಲಿಲ್ಲ ಎನ್ನಿಸಿತವಳಿಗೆ. ಗುಯ್…ಗುಯ್ ಎಂದು ಹಾರಾಡುತ್ತಿದ್ದ ನೊಣಗಳು. ಬೇಸಿಗೆ ಮುಗಿದರೂ ಮುಗಿಯದ ಬೇಗೆ. ಅವಳ ದೇಹ, ಬಟ್ಟೆ ಎಲ್ಲ ಬೆವರಿನಿಂದ ತೋಯ್ದು ಹೋಗಿತ್ತು. ಬರೀ ಸೆಖೆಯಿಂದ ಮಾತ್ರವಲ್ಲ , ಇಡೀ ರಾತ್ರಿ ನೋವಿನಿಂದ ಜ್ವರ ಕಾವೇರಿತ್ತು. ಹಲ್ಲುಗದೆ ಹಾಕಿ ಗಡಗಡನೆ ನಡುಗಿ ಮಲಗಿದವಳು ಹಲವು ತಾಸುಗಳ ನಂತರವೇ ಕಣ್ಣು ಬಿಟ್ಟಿದ್ದು. ಹಾಸಿಗೆಗೆ ಅಂಟಿದ್ದ ಬಟ್ಟೆಗಳು ಅವಳು ಮೈ ಪೂರ ಬೆವತದ್ದನ್ನು ಹೇಳುತ್ತಿದ್ದವು. ಆ ಸರ್ಕಾರೀ ಅಸ್ಪತ್ರೆಯಲ್ಲಿ ಸಾಲಾಗಿ ಮಲಗಿಸಿದ್ದ ರೋಗಿಗಳಲ್ಲಿ ನಿನ್ನೆ ಅವಳಿರಲಿಲ್ಲ. ಅವಳ ದಿನಚರಿ ಎಂದಿನಂತೆಯೇ ನಿನ್ನೆಯೂ ಶುರುವಾಗಿತ್ತು.
***
ಟೌಂನ್ ಹಾಲ್ ಮುಂದಿನ ಸರ್ಕಲ್ನಲ್ಲಿ ಸಿಗ್ನಲ್ಕೆಂಪು ದೀಪಕ್ಕೆ ತಿರುಗಿತು. ಸುತ್ತಲಿನ ನಾಲ್ಕು ರಸ್ತೆಗಳಲ್ಲಿ ಎರಡರಲ್ಲಿ ಸಣ್ಣಗೆ ಗುರ್ರೆನ್ನುತ್ತ ಹಲವು ವಾಹನಗಳು ನಿಂತಿದ್ದವು. ಒಂದು ಮೂಲೆಯಲ್ಲಿದ್ದ ಸರಕಾರೀ ಗ್ರಂಥಾಲಯದ ಮುಂದೆ ಒಂದು ಗುಲ್ಮೊಹರ್ಮರವಿತ್ತು. ಕೆಳಗಿದ್ದ ರೆಂಬೆ ಕೊಂಬೆಗಳನ್ನೆಲ್ಲ ಕಿಡಿಗೇಡಿಗಳು ಕಿತ್ತು ಹಾಕಿದ್ದರು. ಮೇಲಿದ್ದ ಹಲವು ರೆಂಬೆಗಳನ್ನು ಅದರ ಕೆಳಗೆ ಪಾರ್ಕಿಂಗ್ಮಾಡುವ ಉದ್ದೇಶದಿಂದ ಕಡಿದು ಹಾಕಿದ್ದರು. ಎಲ್ಲಕ್ಕಿಂತ ಮೇಲಿದ್ದ ಸಣ್ಣಕೊಡೆಯಂತೆ ಹರಡಿದ್ದ ರೆಂಬೆ ಕೊಂಬೆಗಳಲ್ಲಿ ಯಾವ ಎಲೆಗಳೂ ಇರಲಿಲ್ಲ. ಅದು ಕೆಂಪಗೆ ಹೂ ಬಿಟ್ಟಾಗ ಮಾತ್ರ ಜನರು ಆ ಕಡೆ ದೃಷ್ಟಿ ಹಾಕುತ್ತಿದ್ದರು. ಇಲ್ಲದಿದ್ದಲ್ಲಿ ಇಲ್ಲ. ಆಸರ್ಕಲ್ಲಿನಲ್ಲಿ ಬೇರೆ ಯಾವ ಹೇಳಿ ಕೊಳ್ಳುವಂತ ಮರಗಳೂ ಇರಲಿಲ್ಲ. ನಿಗಿ ನಿಗಿಸುವ ಸುಡು ಸುಡು ಬಿಸಿಲು ಅವತ್ತು ಬೆಳಿಗ್ಗೆ ಒಂಭತ್ತು ಗಂಟೆಗೆಲ್ಲ ಉರಿಯುತ್ತಿತ್ತು. ಬೀದಿ ದನಗಳು, ನಾಯಿಗಳು ಅಂಗೈಯಗಲ ನೆರಳನ್ನು ಹುಡುಕಿ ಅಲೆಯುತ್ತಿದ್ದವು. ಸರ್ಕಲ್ಲಿನ ತುಂಬಾ ನಿಂತ, ಚಲಿಸುತ್ತಿದ್ದ ವಾಹನಗಳು. ಅವು ಉಗುಳುತ್ತಿದ್ದ ಬಿಸಿ ಗಾಳಿಯಲ್ಲಿ ಬೆರೆತ ಸಣ್ಣ ಧೂಳು ಉಸಿರಿನೊಂದಿಗೆ ಮೂಗಿ ಗಡರುತ್ತಿತ್ತು
ಬಲಕ್ಕೆ ತಿರುಗುವ ದೀಪ ಹಾಕಿಕೊಂಡು ಒಂದು ಲಾರಿ ನಿಂತಿತ್ತು. ತನ್ನ ಗಾತ್ರ ಕ್ಕಿಂತ
ಎರಡು ಪಟ್ಟು ಹೆಚ್ಚು ಲೋಡ್ಹೊತ್ತು ನಿಂತು,ತುಂಬಿದ ಬಸಿರಿ ಹೆಂಗಸಂತೆ ಕಾಣುತ್ತಿತ್ತು .ಅದನ್ನು ನೋಡುತ್ತಲೇ ಕಿಸಕ್ಕೆಂದು ನಗು ಬಂದಿತ್ತವಳಿಗೆ. ಅದರ ಹಿಂದೆ, ಅಕ್ಕ, ಪಕ್ಕ ಇನ್ನೂ ಹಲವು ವಾಹನಗಳು ನಿಂತು ಗುರ್ರೆನ್ನುತ್ತಿದ್ದವು . ಬರ್ರೋ.. ಎಂದು ಹರಿದಾಡುವ ವಾಹನಗಳು ಎಡಗಡೆಯ ರಸ್ತೆಯ ಮೇಲೆ ಹರಿದಾಡುತ್ತಿದ್ದವು. ಇವೆರೆಲ್ಲರ ಜೊತೆ ಸರ್ಕಲ್ಲಿನ ಮದ್ಯೆ ದರಿದ್ರ ಧೂಳನ್ನು ಕುಡಿಯುತ್ತ ಪೋಲೀಸು ಪೇದೆ ನಿಂತು ಬೊಂಬೆ ಯಂತೆ ಕೈ ಯಾಡಿಸುತ್ತಿದ್ದ. ಬಲಕ್ಕೆ ತಿರುಗಲು ನಿಂತ ವಾಹನಗಳನ್ನು ದಾಟಿಯೇ ಅವಳು ಕೆಲಸಕ್ಕೆ ಹೋಗಬೇಕಾಗಿತ್ತು. ಈ ಬಿಜ್ಝಿ ರಸ್ತೆಗಳು ಯಾವ ಭಾವನೆಗಳನ್ನೂ ಮೂಡಿಸದಷ್ಟು ವರ್ಷ ಅವಳು ಇದೇ ಹಾದಿಯಲ್ಲಿ ಕೆಲಸಕ್ಕೆ ಹೋಗಿದ್ದಳು. ಮನೆಯಿಂದ ಪ್ರತಿದಿನ ಕೆಲಸಕ್ಕೆಎರಡು ಮೈಲಿನಡೆದೇ ಹೋಗಿ ಬರುತ್ತಿದ್ದಳು ಅವಳ ಜೊತೆ ಇವತ್ತು ನಾಗಮಣಿ ಕೆಲಸಕ್ಕೆ ಬಂದಿರಲಿಲ್ಲ. ಅವಳ ಅಣ್ಣನ ನಿಷ್ಕರ್ಷೆಯಂತೆ.
“ನಂಜಮ್ಮ…. ನೀಲಗ್ಣ ಆಗ್ತಿಯೋ, ಇಲ್ಲನಾ ಆಗಲೋ…” ಅಂತ ಅಣ್ಣ ಕೇಳಿದ್ದ. ನಾಚಿಕೆ-ಹೇಚಿಕೆ ಏನೂ ಇರಲಿಲ್ಲ ಅಣ್ಣನಿಗೆ. ಅಲ್ಲಿ ಇಲ್ಲಿ ಹೋರಿಯಂತೆ ಹಾಯ ಹೋಗಿ ಅವನು ಉಗಿಸಿ ಕೊಂಡು ಬಂದದ್ದೂ ಇವಳಿಗೆ ಗೊತ್ತಿತ್ತು. ಗಂಡನ್ನೇ ನೋಡದೆ “ಲಗ್ಣ ಆಗ್ತಿಯೋ ಇಲ್ವೋ “ ಅಂದರೆ ಇವಳೇನು ಮಾಡ್ಯಾಳು? ಅಮ್ಮನ ಜೊತೆ ನಂಜಮ್ಮ ಪ್ರತಿದಿನ ರೈಸ್ಮಿಲ್ಲಿನ ಕೆಲಸಕ್ಕೆ ಹೋಗುತ್ತಿದ್ದಳು. ಹದಿನೈದು ತುಂಬಿದ್ದೇ ತಡ, ನಂಜಮ್ಮ ಶಾಲೆ ತೊರೆದಿದ್ದಳು. ಪುಂಡು ಹುಡುಗರ ಆ ಹಟ್ಟಿಯಲ್ಲಿ ಜೌವನೆ ಹುಡುಗಿಯನ್ನು ಒಬ್ಬಳೇ ಬಿಡಲು ಅಥವಾ ಎಲ್ಲಿಗಾದರೂ ಕೆಲಸಕ್ಕೆ ಕಳಿಸಲು ಮಲ್ಲಮ್ಮ ನಿರಾಕರಿಸಿದ್ದಳು. ಮೊದ ಮೊದಲು ಅಮ್ಮನಕೆ ಲಸದಲ್ಲಿ ಸಹಾಯ ಮಾತ್ರ ಮಾಡುತ್ತಿದ್ದ ಅವಳು ಜರಡಿಹಿಡಿದು, ನುಚ್ಚು ತೆಗೆದು, ಹೊಟ್ಟುಕೇರಿ, ಅಕ್ಕಿಯನ್ನು ಶುಚಿಮಾಡುವ ಕೆಲಸವನ್ನು ಅಮ್ಮನೊಂದಿಗೆ ಬಹುಬೇಗ ಕಲಿತಳು. ಹಾಗಾಗಿ ಇವಳಿಗೆ ಅಮ್ಮ ಕೆಲಸ ಮಾಡುತ್ತಿದ್ದ ರೈಸ್ಮಿಲ್ಲಿನಲ್ಲಿಯೇ ಕೆಲಸ ಸಿಕ್ಕಿತ್ತು. ಆದರೂ ಅನುಭವ ಸಾಲದೆಂದು ನಿಧಾನವಾಗಿ ದಿನಗೂಲಿಯನ್ನು ಹೆಚ್ಚಿಸಿದ್ದರು ಧಣಿಗಳು.
“ಅಯ್ಯೋ…. ಇವತ್ತು ಬರ್ತಾರೆ ನಾಳೆ ಮದುವೆ ಗಿದುವೆ ಅಂತ ಹೋಗ್ತಾರೆ. ಇದೇ ಊರಲ್ಲಿದ್ರೆ ವಾಪಸ್ಸು ಬಂದ್ರೂ ಬರಬಹುದು ಆದ್ರೆ ಮಕ್ಳೂ ಮರಿ ಅಂತೆಲ್ಲ ಇರತಾವಲ್ಲ”…….ಎನ್ನುವುದು ಧಣಿಯ ಲೆಕ್ಕಾಚಾರದ ಮಾತುಗಳು.
ಆದರೆ ಲೆಕ್ಕಚಾರ ಮೀರಿದ ಘಟನೆಗಳೂ ನಡೆಯುವಂತವೇ ಅಲ್ಲವೇ?
ಒಂಭತ್ತು ವರ್ಷಗಳ ಕಾಲ ಅದೇ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ಮಲ್ಲಮ್ಮ ಗರ್ಭ ಕೋಶದ ಕ್ಯಾನ್ಸರಿಗೆ ತುತ್ತಾದಳು. ಬೆಂಗಳೂರಿನ ಯಾವ ಆಸ್ಪತ್ರೆಗಳೂ ಮಲ್ಲಮ್ಮನನ್ನು ಗುಣ ಪಡಿಸಲು ಶಕ್ಯವಾಗಿರಲಿಲ್ಲ. ಹಲವು ದೇವರು ದಿಂಡರುಗಳಿಗೆ ಪೂಜೆ ಮಾಡಿದ್ದು, ಔಷದ ಹಾಕಿಸಿ ತಾಯತ ಕಟ್ಟಿದ್ದು ಯಾವುದೂ ಪ್ರಯೋಜನಕ್ಕೆ ಬಂದಿರಲಿಲ್ಲ.ಮಲ್ಲಮ್ಮ ಮಗಳ ಮದುವೆಗೆಂದು ಕೂಡಿಟ್ಟ ಹಣ, ಆ ಪದ್ದನ, ಎಲ್ಲ ಅವಳ ಚಿಕಿತ್ಸೆಗೇ ಖರ್ಚಾಗಿತ್ತು. ಸಣ್ಣ ಪುಟ್ಟಕೈ ಸಾಲಗಳೂ ಆಗಿದ್ದವು. ಮಲ್ಲಮ್ಮನ ಮೈ ಮೇಲಿದ್ದ ತುಂಡು ಚಿನ್ನದ ತುಣುಕುಗಳೂ ಕರಗಿದ್ದವು. ಅಮ್ಮ ಹಾಸಿಗೆ ಹಿಡಿದ ನಂತರ ಮನೆಯ ಸಕಲ ಉಸ್ತುವಾರಿಯೂ ನಂಜಮ್ಮನಿಗೆ ವರ್ಗಾವಣೆ ಯಾಗಿತ್ತು. ಕೆಲಸಕ್ಕೆ ಹೋಗುವುದನ್ನು ನಿಲ್ಲಿಸಿದ್ದಳು. ಬೆಳಗಿನ ಕೆಲಸ, ಅಡಿಗೆ, ಆಸ್ಪತ್ರೆಯ ಓಡಾಟ, ಔಷದದ ಅಂಗಡಿಗಳಿಗೆ ತಾರಾಟ, ಮರಳಿ ಬಂದರೆ ಮನೆಗೆಲಸ ಇದರಲ್ಲಿ ಆರು ವರ್ಷಗಳು ಕಳೆದಿದ್ದವು.
“ ನಂಜಾ… ನಾ ಸಾಯೋ ಮುಂದ ನಿನ್ ಲಗ್ಣ ಒಂದು ಆಗಿದ್ರೆ ಸಂದಾಕಿತ್ತು…” ಅಂತ ಮಲ್ಲಮ್ಮ ಹಲವು ಬಾರಿ ಹಲುಬಿದ್ದಳು. ಅಮ್ಮ ಹಾಸಿಗೆ ಹಿಡಿದ ನಂತರ ಅವಳ ಸಂಪಾದನೆಯಲ್ಲಿ ಅಂಡಲೆಯುತ್ತಿದ್ದ ಅಣ್ಣ ತನ್ನ ಚಾಳಿ ಮುರಿದಿದ್ದ. ತರಾತುರಿಯಲ್ಲಿ ಆ ಕೆಲಸ, ಈ ಕೆಲಸ ಅಂತ ಎಲ್ಲ ಮಾಡಿ ಕೊನೆಗೆ ಅಗೀಗ ರಜಾಕ್ಕೆ ಕೊರತೆಯಿಲ್ಲದ ಲಾರಿ ಕ್ಲೀನರನ ಕೆಲಸಕ್ಕೆ ನಿಂತಿದ್ದ. ಲೋಡಿದ್ದರೆ ಕೆಲಸಕ್ಕೆ ಹೋಗ್ತಿದ್ದ. ಇಲ್ಲದಿದ್ರೆ ಮನೇಕಡೆ, ಹಟ್ಟಿ ಕಡೆ ನಿಲ್ತಿದ್ದ. ಕೆಲವು ವರ್ಷಗಳ ಕಾಲ ನರಳಿದ ಮಲ್ಲಮ್ಮ ಕೊನೆಗೆ ಸತ್ತಳು. ಮಲ್ಲಮ್ಮ ಸತ್ತ ನಂತರ ಹೊಟ್ಟೆ ಪಾಡಿಗಾಗಿ ನಂಜಮ್ಮ ಮತ್ತೆ ರೈಸ್ಮಿಲ್ಲಿಗೆ ಸೇರಿದ್ದಳು. ತಿರುಗಿ ಕೆಲಸ ಕೊಟ್ಟ ಸಾಹುಕಾರ ಮುಂದೆ ಸಂಬಳ ಹೆಚ್ಚಿಸುತ್ತೇನೆಂದು ಕೂಡ ಹೇಳಿದ್ದ. ಮನೆಯ ಕೆಲಸದ ಜೊತೆ ಮಿಲ್ಲಿನ ಕೆಲಸವೂ ಸೇರಿ ದಿನದಲ್ಲಿ ಬಿಡುವು ಎಂಬುದೇ ನಂಜಮ್ಮನಿಗೆ ಇರಲಿಲ್ಲ. ಹರೆಯದಲ್ಲಿ ತುಂಬಿ ಕೊಳ್ಳುತ್ತಿದ್ದ ಅಲ್ಪಸ್ವಲ್ಪ ಚರ್ಬಿಯೂ ಕರಗಿ ನಂಜಮ್ಮನ ದೇಹ ಸೊರಗಿತ್ತು.ಆದರೆ, ಮನೆಯ ಸಂಭಾವಣೆಯ ಹೊಣೆ ಹೆಚ್ಚುತ್ತಿದ್ದಂತೆ ಮಲ್ಲಮ್ಮನ ಧೈರ್ಯವೂ, ಮುಖದಲ್ಲಿನ ಆತ್ಮವಿಶ್ವಾಸವೂ ಅಧಿಕವಾಗ ತೊಡಗಿತ್ತು.
ಮಲ್ಲಮ್ಮ ಸತ್ತ ನಂತರ ಮನೆಗೊಂದು ಹೆಣ್ಣಿರಲಿ ಅಂತ ನಂಜಮ್ಮನಿಗೆ ಅಪ್ಪಯ್ಯ ಯಾವ ಗಂಡನ್ನೂ ತೋರಿಸಿರಲಿಲ್ಲ. ಅಣ್ಣನಿಗೊಂದು ಹೆಂಡ್ರು ಬಂದು ಮನೆಗೊಂದು ಹೆಣ್ಣಾದರೆ, ತನಗೆ ಮುಕ್ತಿಯಾದರೂ ಸಿಗಬಹುದೇನೋ ಎನ್ನುವುದು ನಂಜಮ್ಮನ ಜಾಣ ತರ್ಕವಾಗಿತ್ತು. ಹಾಗಂತ ಅಪ್ಪಯ್ಯ ಅಂದೂ ಇದ್ದ.
“ನೀನು ಆಗು, ನಂಗೀಗ್ಲೇಬ್ಯಾಡ ….” ಅಂದದ್ದೇ ತಡ ಅಣ್ಣ ವಾಲಗ ಊದಿಸಿಕೊಂಡಿದ್ದ. ಅಮ್ಮ ಸತ್ತ ನಂತರ ಬಂದ ಅತ್ತಿಗೆಗೆ ಲಗಾಮು ಹಾಕುವವರು ಆ ಹಟ್ಟಿಯಲ್ಲಿ ಯಾರೂ ಇರಲಿಲ್ಲ. ಕಳ್ಳು ಕುಡಿತದ ಮಧ್ಯೆ ಅಪ್ಪಯ್ಯ ಯಾವತ್ತೋ ಮಾತು ಕಳ ಕೊಂಡಿದ್ದ. ಮಲ್ಲಮ್ಮನಿರುವವರೆಗೂ ಅವಳಿಂದ ದುಡ್ಡು ಪಡೆದು ಈ ಅಪ್ಪಯ್ಯ ಜೂಜಾಡಿ, ಕುಡಿದು ಬರುತ್ತಿದ್ದ. ಅವಳು ಸತ್ತ ಮೇಲೆ ಹೇಗಾದರೂ ಮಗನಿಂದ ಒಂದೈವತ್ತು ರೂಪಾಯಿ ಸಿಕ್ಕರೆ ಅವತ್ತು ಮನೆಯಲ್ಲಿ ಕಾಣುತ್ತಿರಲಿಲ್ಲ. ಅಣ್ಣನಿಗೆ ತಂಗಿಯ ಮದುವೆ ಮಾಡಿ ಆ ಮೇಲೆ ನೀನು ಆಗೆಂದು ಹೇಳುವವರ್ಯಾರು? ಅಣ್ಣನೇ ಹುಡುಕಿ ಮದುವೆಯಾಗಿ ತಂದ ಇಪ್ಪತ್ತೆರಡುವರ್ಷದ ಅತ್ತಿಗ್ಯವ್ವ ಸರಿಸಮ ತನ್ನವಾರಿಗೆಯವಳೇ.
ಬಂದಾಗ ಒಣ ಕಳ್ಳಿಪುಳ್ಳೆಯಂತಿದ್ದವಳು, ವರ್ಷ ಕಳೆವಲ್ಲಿಗಬ್ಬಾಗಿದ್ದಳು. ಬುರ ಬುರನೆ ಊದಿದ ಅವಳ ಹೊಟ್ಟೆಯ ನೆನಪೇ ಗರ್ಭಧರಿಸಿ ನಿಂತ ಲಾರಿಯನ್ನು ಕಂಡು ಇವಳು ಕಿಸಕ್ಕನೆ ಕಿಸಿಯುವಂತೆ ಮಾಡಿದ್ದು. ತಾನೂ ಒಂದು ದಿನ ಬಸಿರಾಗುವುದಿದೆ ಅಂತ ನೆನೆದು ಅರೆಗಳಿಗೆ ನಂಜಮ್ಮನಿಗೆ ಏನೇನೋ ಅನ್ನಿಸಿತು.
ಕೆಂಪು ದೀಪ ಹಸಿರಾಯ್ತು. ವಾಹನಗಳು ಗುರ್ರೋ ಎಂದು ಹೊರಟವು. ಕಿಕಿಕೀ…. ಎನ್ನುವ ಹಾರನ್ನು ಗಳ ಸದ್ದಿಗೆ ಇವಳು ರಸ್ತೆ ದಾಟುವುದನ್ನು ತ್ವರಿತ ಗೊಳಿಸಿದಳು. ದಬ್ಬನೆ ಗುದ್ದಿದ ಸದ್ದು! ಮಾರು ದೂರ ಹೋಗಿ ಬಿದ್ದ ಇವಳ ಮೈ ಮೇಲೆ ದೈತ್ಯಾಕಾರವಾಗಿ ಲಾರಿ ಏರಿ ಬಂತು. ಲಾರಿಯಡಿ ಇವಳ ಒಂದು ಕಾಲು ಸಿಲುಕ್ಕಿತ್ತು.“ ಅಯ್ಯಯ್ಯೋ….. “ಎನ್ನುವ ಅವಳ ಆಕ್ರಂದನಕ್ಕೆ ಎಲ್ಲರ ಗಮನ ಅವಳೆಡೆ ಹರಿಯಿತು. ಲಾರಿಯ ಮುಂದಿನ ಚಕ್ರ ಹಿಂದಕ್ಕೆ ಮತ್ತೊಂದು ಉರುಳು ಉರುಳಿ ಸ್ಥಬ್ದವಾಯ್ತು. ಟ್ರಾಫಿಕ್ಬಂದಾಯ್ತು. ಪೋಲೀಸು ಪೇದೆ ಸ್ಥಳಕ್ಕೆ ಧಾವಿಸಿದ. ಹಲವರು ನಂಜಮ್ಮನನ್ನು ಮೇಲೆತ್ತಿದರು. ಹರಿದುನೇತಾಡಿ, ರಕ್ತದಲ್ಲಿ ನೆನೆದ ಅವಳ ಬಟ್ಟೆಗೆ, ಕಾಲಿಗೆ, ರಸ್ತೆಯಲ್ಲಿದ್ದ ಧೂಳೆಲ್ಲ ಮೆತ್ತಿ ಕೊಂಡಿತು. ನುಜ್ಜು ಗುಜ್ಜಾದ ಬಲಗಾಲನ್ನು ಎಳೆಯುತ್ತ ನಂಜಮ್ಮ ಎದ್ದು ನಿಂತಳು. ಅವಳ ಒಂದು ಕೈ ತನ್ನ ಹೆಗಲ ಚೀಲವನ್ನು ಇನ್ನೂ ಬಿಟ್ಟಿರಲಿಲ್ಲ.
ಪೋಲೀಸು ಪೇದೆ ಕರೆದ ಕಾರಣಕ್ಕೆ ಒಲ್ಲೆ ಎನ್ನಲಾಗದೆ ಬಂದು ನಿಂತ ಆಟೋದಲ್ಲಿ ಮುನ್ನೂರು ಅಡಿ ದೂರದಲ್ಲಿಯೇ ಇದ್ದ ಸರಕಾರೀ ಆಸ್ಪತ್ರೆಗೆ ದಾಖಲಾಗಿದ್ದಳು. ಸುರಿದು ನಿಂತು, ಆಟೋದ ತಳವನ್ನೆಲ್ಲ ತೋಯಿಸಿದ್ದ ರಕ್ತಧಾರೆಯಿಂದ ಇವಳಿಗೆ ಬಳಲಿಕೆ ಬಂದಿರಲಿಲ್ಲ. ಕ್ಷಣಾರ್ಧದಲ್ಲಿ ನಡೆದು ಹೋದ ಅವಗಡದಿಂದ ಅವಳು ದಂಗುಬಡಿದು ಹೋಗಿದ್ದಳು. ಹರಿದು ಹೋದ ಚೂಡಿದಾರದ ಪ್ಯಾಂಟನ್ನು ಎತ್ತಿ ಕಾಲನ್ನು ನೋಡಲು ಕೈಯಿಟ್ಟ ಪೇದೆಗೆ “ಬ್ಯಾ….ಡ “ ಅಂತ ಕೂಗಿದ್ದಳು. ಆಟೋದ ಡ್ರೈವರನೂ ಇದ್ದ ಕಾರಣಕ್ಕೆ ಸುಮ್ಮನಾದ ಪೇದೆಯ ಆ ನೋಟ ಅವನ ಬಗ್ಗೆ ನಂಜಮ್ಮನಲ್ಲಿ ಅಸಹ್ಯ ತರಿಸಿತ್ತು. ಅವನು ಬರಿ ತನ್ನ ಕಾಲನ್ನು ನೋಡಲು ಕೈಯಿಟ್ಟಿರಲಿಲ್ಲ. ಕಾಲು ಮುರಿದು ಕೊಂಡು ಬಿದ್ದ ಕುರಿ ಮರಿಯನ್ನು ಅಳೆಯುವಂತ ಕಣ್ಣುಗಳು! ಆನೋಟಕ್ಕೋ ಅಥವಾ ಕಾಲಿನ ನೋವಿಗೋ ವಾಂತಿ ಬರುವಂತಾಯ್ತು ನಂಜಮ್ಮನಿಗೆ. ಪೋಲೀಸು ಜೊತೆಗಿದ್ದ ಕಾರಣ ನರ್ಸಮ್ಮ ಬೇಗನೆ ಒಂದು ಸ್ಟ್ರೆಚರ್ತರಿಸಿದಳು. ಇಳಿದಾಗ ಆ ಪೋಲೀಸಪ್ಪ ಆಟೋದವನಿಗೆ ದುಡ್ಡು ಕೊಟ್ಟನೋ ಇಲ್ಲವೋ ಗೊತ್ತಿಲ್ಲ. ಸುರಿದ ರಕ್ತವನ್ನೆಲ್ಲ ತೊಳೆದು, ವರೆಸಿ ಆಟೋವನ್ನು ಶುಚಿಗೊಳಿಸುವವರೆಗೆ ಅವನಿಗೆ ಬಾಡಿಗೆಯಂತೂ ಸಿಗುವುದು ಸಾದ್ಯವಿರಲಿಲ್ಲ!
ಇದೇ ಆಸ್ಪತ್ರೆ ! ಅಮ್ಮ ಸಾಯುವ ಮುನ್ನ ಇದೇ ಆಸ್ಪತ್ರೆಯಲ್ಲಿದ್ದಳು. ಅಮ್ಮನನ್ನು ನೋಡಲು ಬಂದಾಗಲೆಲ್ಲ ಆ ಆಸ್ಪತ್ರೆಯ ವಾಸನೆಗೆ ವಾಕರಿಕೆ ಬರುತ್ತಿತ್ತು. ಸುತ್ತಲಿನ ಔಷದದ ಎಲ್ಲ ಅಂಗಡಿಗಳೂ ಇವಳಿಗೆ ಪರಿಚಯವಿದ್ದವು.
“ ಈ ಆಸ್ಪತ್ರೆ ಊಟ ಮಾಡ್ಬ್ಯಾಡ್ಕಣವ್ವ, ನಾನೇ ತಂದು ಕೊಡ್ತೀನಿ” ಅಂತ ನಂಜಮ್ಮ ಅವಳಮ್ಮನಿಗೆ ದಿನಾ ಊಟ ತಂದು ಕೊಟ್ಟಿದ್ದಳು. ಆದರೆ, ಇಲ್ಲಿಗೆ ತಾನೇ ರೋಗಿಯಾಗಿ ಬರುತ್ತೇನೆಂದು ಅವಳು ಎಣಿಸಿರಲಿಲ್ಲ. ಅವ್ವ ಸತ್ತ ಬಳಿಕ ಆಸ್ಪತ್ರೆಯ ರಸ್ತೆಯಲ್ಲಿ ನಡೆವಾಗಲೆಲ್ಲ ಅದರೆಡೆ ನೋಡದಂತೆ ನಂಜಮ್ಮ ಮುಖ ಬೇರೆಡೆ ಮಾಡಿ ಓಡಾಡುತ್ತಿದ್ದಳು . ಅಮ್ಮನ ಸಾವನ್ನು ನೋಡಿದ್ದು ಇದೇ ಆಸ್ಪತ್ರೆಯಲ್ಲಿ. ಅದಕ್ಕಿಂತ ಮೊದಲು ಸಾವೇ ನೋಡಿಲ್ಲದಿದ್ದ ನಂಜಮ್ಮ ಅವರಿವರು ಸತ್ತರೆಂದು ಕೇಳುತ್ತಿದ್ದಳು. ಸತ್ತವರ ಮೆರವಣಿಗೆ ಸ್ಮಶಾನದ ರಸ್ತೆಯಲ್ಲಿದ್ದ ಇವಳ ಮನೆ ಮುಂದೆಯೇ ಬೇಕಾದಷ್ಟು ಬಾರಿ ಹೋಗುತ್ತಿದ್ದರೂ, ಹೂವಲ್ಲಿ ಮುಚ್ಚಿರುತ್ತಿದ್ದ ದೇಹ ಪೂರ್ತಿ ಕಾಣಿಸುತ್ತಿರಲಿಲ್ಲ .ಅಮ್ಮನನ್ನೇ ಮೊದಲು ಪೂರ್ತಿ ನೋಡಿದ್ದು. ಸತ್ತ ಅಮ್ಮನನ್ನು ಹೊತ್ತು ಹೊರತಂದ ಅದೇ ಹೆಬ್ಬಾಗಿಲ ಮೂಲಕ, ನಾಲ್ಕು ಚಕ್ರದ ಮಂಚದಮೇಲೆ ಮಲಗಿ ನಂಜಮ್ಮ ಹಿಂತಿರುಗಿದ್ದಳು.
ಮನಸ್ಸಲ್ಲೇ ತನಗೆ ತಾನು “ಇನ್ನೂ ಸತ್ತಿಲ್ಲ… ಇನ್ನೂ ಸತ್ತಿಲ್ಲ…..” ಎಂದು ಪದೇ ಪದೇ ಹೇಳಿ ಕೊಂಡ ಅವಳಿಗೆ ತನ್ನ ಬ್ಯಾಗಿನಲ್ಲಿ ನಿನ್ನೆ ತಾನೇ ಪಡೆದ ಎರಡು ಸಾವಿರದೈನೂರು ರೂಪಾಯಿ ಸಂಬಳ ಇರುವುದು ಚೆನ್ನಾಗಿ ನೆನಪಿತ್ತು. ಒಂದು ಸಾವಿರವನ್ನು ಮನೆಯ ಖರ್ಚಿಗೆ, ತನ್ನ ಖರ್ಚಿಗೆ ಉಳಿಸಿ ಕೊಂಡು ಮದ್ಯಾನ್ಹ ಮಿಲ್ಲಿನ ಬಳಿಯಿರುವ ಬ್ಯಾಂಕಿಗೆ ಹಾಕೋಣವೆಂತ ಅದನ್ನು ಹಾಗೆಯೇ ತಂದಿದ್ದಳು. ಜೊತೆಗೆ ಒಂದು ಹೊಸ ಉಡುಪನ್ನು ವರ್ಷ ತೊಡಕಿನ ಹಬ್ಬಕ್ಕೆ ತಗೊಳ್ಳ ಬೇಕಂತಿದ್ದಳು .ಹಾಗಂತಲೇ ಅದರ ಕೈ ಬಿಟ್ಟಿರಲಿಲ್ಲ! ಅಕ್ಕಿಮಿಲ್ಲಿನ ಮಾಲೀಕನಿಗೆ ತನಗೆ ಹೀಗಾದ ವಿಚಾರ ಹೇಳುವವರು ಯಾರು? ಹೇಳದೇ –ಕೇಳದೇ ಬಂದಿಲ್ಲವಂತ ಕೋಪ ಗೊಂಡರೆ ಏನಾಗುವುದೋ? ಮನೆಯಲ್ಲಿ ಅಣ್ಣನಿಗೆ ಈ ಸುದ್ದಿ ತಲುಪಿಸುವವರ್ಯಾರು? ಆ ಲಾರಿ ಇನ್ನೂ ಅಲ್ಲೇ ನಿಂತಿರ ಬಹುದೇ? ಅಥವಾ ಡ್ರೈವರ್ರು ಇಳಿದು ಓಡಿ ಹೋಗಿರ ಬಹುದೇ?
“ಒಂದೇ ಚಪ್ಪಲೀ ತಾನೇ?….” ಗಡಸಾಗಿ ಬಂದ ಹೆಣ್ಣು ದನಿ ನರ್ಸಮ್ಮನದು. ತನ್ನ ಯೋಚನೆಯಲ್ಲಿ ನರ್ಸಮ್ಮ ಪ್ರತ್ಯಕ್ಷವಾದ್ದನ್ನು ನಂಜಮ್ಮ ಗಮನಿಸಿಯೇ ಇರಲಿಲ್ಲ. ಪೋಲೀಸು ಆಚೆಯೇ ನಿಂತಿದ್ದ.
ಸುಮ್ಮನೆ ತಲೆಯಾಡಿಸಿದಳು. ಅವಳ ಎಡಗಾಲಲ್ಲಿ ಮಾತ್ರ ಚಪ್ಪಲಿಯಿತ್ತು.
ನುಜ್ಜಾದ ಬಲಗಾಲಿನ ಚಪ್ಪಲಿ ಇನ್ನೂ ಆ ರಸ್ತೆಯಲ್ಲೇ ಬಿದ್ದಿರಬೇಕು. ಚಪ್ಪಲಿಯನ್ನು ಎತ್ತುವ ಯಾವ ಶಕ್ತಿಯೂ ಅವಳಿಗಿರಲಿಲ್ಲ. ಅಸಲಿಗೆ ಅದು ಕಾಲ ಮೇಲಿದೆಯೇ ಇಲ್ಲವೇ ಎನ್ನುವುದು ಕೂಡ ಇದುವರೆಗೂ ನಂಜಮ್ಮನಿಗೆ ತಿಳಿದಿರಲಿಲ್ಲ. ನೋವಿಗಿಂತ ಹೆಚ್ಚಿನ ಭಯ, ಗಾಬರಿ, ಆಘಾತ, ಅಯೋಮಯ ಸ್ಥಿತಿಯಲ್ಲಿ ಅವಳು ನಿಜವಾಗಿ ಪರಿಸ್ಥಿತಿಯ ಕೈ ಗೊಂಬೆ ಯಾಗಿದ್ಧಳು.
“ಯಾರಿಗೆ ಫೋನ್ಮಾಡ್ಲಿ?….. ನಂಬರೈತಾ ಆ ಬ್ಯಾಗಲ್ಲಿ?”
“ಇಲ್ರೀ..ಹಂಗೆ ಹೇಳ್ತೀನ್ಬರಕ್ಕಳ್ರೀ…. “ ಅಣ್ಣನ ನಂಬರನ್ನು ಬಾಯಲ್ಲೇ ಒಪ್ಪಿಸಿದಳು. ಪೋಲೀಸು ಇನ್ನೂ ಆಚೆ ನಿಂತಿದ್ದ. ಆ ಮೇಲೆ ಅವನು ಹೋದನೇನೋ. ನರ್ಸಮ್ಮ ಸ್ಟ್ರೆಚರನ್ನು ಒಂದು ಖಾಲಿ ಕೋಣೇಲಿ ಬಿಟ್ಟು ಮರೆಯಾದ್ಲು. ಇಡೀ ಕೋಣೆಯಲ್ಲಿ ಇವಳೊಬ್ಬಳೇ.
ಆಕ್ಸಿಡೆಂಟ್ ಆದ ನಂತರ ಅವಳೊಬ್ಭಳೇ ಇದ್ದ ಆ ಒಂದರೆ ಕ್ಷಣ ನೆಮ್ಮದಿಯೆನ್ನಿಸಿತು. ತನ್ನ ಕಾಲ ಕಡೆ ಅವಳು ನೋಡಿಯೇ ಇರಲಿಲ್ಲ. ನೋಡದಿರಲು ನಿರ್ಧರಿಸಿದಳು .ತನ್ನ ಕೈ ಚೀಲವನ್ನು ಅಪ್ಪಿಕೊಂಡಳು. ಅಮ್ಮನನ್ನು ನೆನೆದು ಗಳಗಳನೆ ಅಳುಬಂತು. ಒಡಲಾಳದಲ್ಲಿ ಇರಿಯುವ ತಳಮಳ. ಕಣ್ಣೀರು ಒರೆಸಿ ಕೊಂಡಳು. ದೂರ್ವಾಸಮುನಿಯಂತೆ ಮಾತು ಮಾತಿಗೆ ಕೋಪ ಮಾಡುವ ಅಣ್ಣ ಬಂದರೆ ಏನೆನ್ನುತ್ತಾನೆ ಎಂದು ನೆನೆದು ಅವಳಿಗೆ ಭಯವಾಯ್ತು. ಆಭಯಕ್ಕೆ ಅವಳ ಕಣ್ಣೀರಿನ ಕೋಡಿ ಆವಿಯಾಯ್ತು. ಅಮ್ಮನಿಲ್ಲದ ಬಡ ಹೆಣ್ಣು ಮಗಳಿಗೆ ಈ ಹೊತ್ತಲ್ಲಿ ಕಣ್ಣೀರು ಹಾಕಿ ಮನ ಹಗುರ ಮಾಡಿ ಕೊಳ್ಳುವ ಭಾಗ್ಯವೂ ಇರಲಿಲ್ಲ. ಗೆಳತಿ ನಾಗಮಣಿಯಾದರೂ ಎಂದಿನಂತೆ ಇವತ್ತು ನನ್ನ ಜೊತೆಗಿರಬಾರದಿತ್ತೇ ಅಂತ ನೆನೆದು ಅವಳಿಗೆ ಶಾಪ ಹಾಕಿದಳು. ತನ್ನವರು ಎಂದು ಯಾರಾದರೂ ಬರುವವರೆಗೆ ಅವಳು ತನಗೆ ತಾನೇ ಜವಾಬುದಾರಳಾಗಿದ್ದಳು. ಸ್ವಲ್ಪ ಹೊತ್ತಿಗೆ ಯಾರಾದರೂ ಬರುತ್ತಾರೆಂದು ಸಮಾಧಾನ ಹೇಳಿ ಕೊಂಡಳು. ಅಪಾರ ಬಾಯಾರಿಕೆ ಯಾಗುತ್ತಿತ್ತು.
ನಡೆದು ದಣಿದು ಆಘಾತಕ್ಕೀಡಾದ ಅವಳ ಕಣ್ಣುಗಳು ಮುಚ್ಚಿದವು. ತಾನು ಸಾಯುವೆನೇ? ತನ್ನ ಕಾಲುಗಳು ಉಳಿಯುತ್ತವೆಯೇ? ಒಂದು ಕಾಲನ್ನು ಅಲುಗಾಡಿಸಿದಳು. ಸ್ವಲ್ಪ ನೋವಾದರೂ ಅದು ಚೆನ್ನಾಗಿತ್ತು. ಬಲಗಾಲನ್ನು ಮಾತ್ರ ಒಂದಿಂಚೂ ಅಲುಗಾಡಿಸಲು ಸಾದ್ಯವಾಗಲಿಲ್ಲ. ಎಡಗಾಲಿನ ಮೇಲೆ ನಡೆಯ ಬಲ್ಲೆನೇನೋ? ಕುಂಟಿ ಕೊಂಡೇ ಕೆಲಸಕ್ಕೆ ನಡೆದು ಹೋಗಬಲ್ಲೆ ಅನ್ನಿಸಿತು. ತನಗೊಂದು ಸಂಪಾದನೆಯಿದ್ದರೆ ಅಣ್ಣನ ಮೇಲೆ ಅವಲಂಬಿತಳಾಗ ಬೇಕಿರಲಿಲ್ಲ. ಇಲ್ಲಿಂದ ಎದ್ದು ಹೋಗಿ ಬಿಡಲೇ ಎನ್ನುವ ತವಕ. ಏಳುವ ಪ್ರಯತ್ನ ಮಾಡಲು ಹೋದಳು, ತಲೆಯ ಹೊರತು ದೇಹ ಮೇಲೇಳಲು ತಕರಾರು ಮಾಡಿತು. ಹಾಗೇ ಮತ್ತೆ ಕಣ್ಣು ಮುಚ್ಚಿದಳು.
ನಲವತ್ತು ನಿಮಿಷಕಳೆದಿತ್ತೇನೋ, ನಾಲ್ಕು ಜನರ ಮಾತು ಕೇಳಿ ಕಣ್ಣು ಬಿಟ್ಟಾಗ ಅವಳ ಅಣ್ಣ ಪಕ್ಕದಲ್ಲಿ ನಿಂತಿದ್ದ. ಜೊತೆಗೆ ಅವನು ಕ್ಲೀನರನಾಗಿ ಕೆಲಸ ಮಾಡುತ್ತಿದ್ದ ಟ್ರಾನ್ಸಪೋರ್ಟ ಆಫೀಸಿನಿಂದ ಅವನ ಗೆಳೆಯ ಡ್ರೈವರು ಕುಮಾರನೂ ಬಂದಿದ್ದ. ಕುಮಾರನೇ ಅಣ್ಣನನ್ನು ಅವನ ಬೈಕಿನಲ್ಲಿ ಬೇಗ ಕರೆ ತಂದಿರಬೇಕು. ಅಣ್ಣ ಬಾಯಿ ಬಿಡುವ ಮೊದಲೇ ನಂಜಮ್ಮ ಬಾಯಿ ಬಿಟ್ಟಳು.
“ಅಣ್ಣಾ ನಿನಗೆ ಕ್ವಾಪ ಬಂದಿಲ್ಲ ತಾನೇ?…..” ಅವಳ ದನಿಯಲ್ಲಿ ಇವನ ಕೋಪಕ್ಕೆ ತುತ್ತಾಗದಿರುವ ಹವಣಿಕೆ!
ಅವಳ ಕಾಲ ಕಡೆ ನೋಡುತ್ತಿದ್ದ ಅಣ್ಣ ನಂಜಮ್ಮನ ಪ್ರಶ್ನೆಗೆ ಅವಕ್ಕಾಗಿ ಅವಳ ಮುಖದೆಡೆ ದೃಷ್ಟಿ ತಿರುಗಿಸಿದ
“ನೀನೇನು ಮನುಷ್ಯಳಾ …ಅಥವಾ ರಾಕ್ಷಸಿಯಾ ?….” ನಂಜಮ್ಮನ ಪ್ರಶ್ನೆಗೆ ಅವನು ಉತ್ತರ ಹೇಳಿದ್ದುಹಾಗೆ ! ನಿಂತ ಕಡೆ ನಿಲ್ಲಲಾಗದೆ ಅವನು ತೂಗಾಡುತ್ತಿದ್ದ. ಅವನ ಮುಖದಲ್ಲಿ ಕೋಪ ಇರಲಿಲ್ಲ. ಬದಲು ಆತಂಕ, ಆಶ್ಚರ್ಯ, ಚಡಪಡಿಕೆಯಿತ್ತು. ಅವನಿಗೆ ನಂಬಲೂ ಸಾದ್ಯ ವಾಗಿರಲಿಲ್ಲ. ಪದೇಪದೇ ಅವಳ ಕಾಲಿನೆಡೆ ದೃಷ್ಟಿ ಹೋಗುತ್ತಿತ್ತು. ಮುಖ ಕಿವಿಚುತ್ತಿತ್ತು.
ತಂಗಿಯ ಕಾಲಿನ ಮಾಂಸ, ಮಜ್ಜೆ ಹೊರಗಿಣುಕಿತ್ತು. ಮೂಳೆ ಕಾಣುತಿತ್ತು. ರಕ್ತ ಹರಿದು ಆ ಕಬ್ಬಿಣದ ಮಂಚದ ಮೇಲಿದ್ದ ಜೀರ್ಣವಾದ ಹಾಸಿಗೆಯ ಮೇಲಿನ ಹೊದಿಕೆ ಕೆಂಪಾಗಿತ್ತು. ಇಷ್ಟು ಜರ್ಜರಿತ ವಾದರೂ ತಂಗಿಯ ಕಣ್ಣಲ್ಲಿ ಕಣ್ಣೀರಿರಲಿಲ್ಲ. ಅದಕ್ಕೇ ಅವನು ಹಾಗೆ ಹೇಳಿದ್ದು! ಅಲ್ಲದೆ ಅವಳು ಅವನ ಕೋಪದ ಬಗ್ಗೆ ಕೇಳಿದ್ದಳು. ಅವನಿಗೆ ಪೆಚ್ಚಾಗಿತ್ತು. ದಂಗು ಬಡಿಸಿ ಚಡಪಡಿಸುವಂತೆ ಮಾಡಿತ್ತು. ಒತ್ತಟ್ಟಿಗೆ ಸೇರಿಸಿ ಉರಿದು ಬಿದ್ದಿದ್ದ.
“ಈ ಬ್ಯಾಗಲ್ಲಿ ದುಡ್ಡದೆ ತಗಾ….” ಅಂತ ಬ್ಯಾಗು ಕೊಟ್ಟಳು. ಅವಳ ಮನೋಬಲ ಅವನನ್ನು ಮೂಕನನ್ನಾಗಿಸಿತು. ಅವನಿಂದ ಇನ್ನು ಹೆಚ್ಚು ಕಾಲ ಅಲ್ಲಿರಲು ಸಾದ್ಯವಾಗಿರಲಿಲ್ಲ. ಧಡಾರನೆ ಹೊರಗೋಡಿದ.
ತನ್ನವರು ಯಾರಾದರೂ ಬಂದರೆ ಅವರನ್ನಪ್ಪಿ ಗಳಗಳನೆ ಅಳಲು ನಂಜಮ್ಮ ಇಲ್ಲಿಯವರೆಗೆ ಕಾದಿದ್ದಳು.ಈಗವಳು ತಾನು ಮಾಡಿದ್ದ ತಪ್ಪೇನೆಂದು ತಿಳಿಯದೆ ಕಂಗಾಲಾದಳು. ಅತ್ತರೆ ಇನ್ನೇನು ಅನಾಹುತವಾಗುತ್ತದೆಯೋ ಅಂತ ಹೆದರಿದಳು.
“ನಂಜೂ ಹೆಂಗೀದೀಯವ್ವಾ?… ನೋವಾಗುತ್ತೇನೆ ಕಂದಾ?…” ಅಂತ ಅಣ್ಣ ಅನ್ನುತ್ತಾನೆ ಎಂದೇನೂ ಅವಳು ಭಾವಿಸಿರಲಿಲ್ಲ ಆದರೆ ಮನದಲ್ಲೇ ಯಾರಾದರೂ ಅನ್ನುತ್ತಾರೆಯೇ ಎಂದು ಆಶಿಸುತ್ತಿದ್ದಳು. ಇಲ್ಲಿಯವರೆಗೂ ಕಾದಿದ್ದಳು. ನೋವಿಗಾಗಿ ನರ್ಸಮ್ಮ ಕೂಡ ಯಾವ ಮಾತ್ರೆಯನ್ನೂ ಕೊಟ್ಟಿರಲಿಲ್ಲ. ಅವಳಿಗೆ ವೈದ್ಯರು ಅನುಮತಿ ಬೇಕಿತ್ತೇನೋ?
“ಈ ಹುಡ್ಗೀನಾ…? “ ಕನ್ನಡಕ ಹಾಕಿದ್ದ, ಮಾಸಿದ ಬಿಳಿಕೋಟಿನ ವ್ಯಕ್ತಿಯೊಬ್ಬ ಒಳಬಂದ. ತನ್ನನ್ನು ಕಾಪಾಡುವ ವೈದ್ಯನಿರಬೇಕು. ಅವನಿಂದೆ ನರ್ಸಮ್ಮಇದ್ದಳು. ಅವರಿಂದೆ ಅಣ್ಣ ನಿಂತಿದ್ದ. ಅಣ್ಣನ ಕಣ್ಣುಗಳು ಕೆಂಪಾಗಿದ್ದವು .ಅವನು ಅತ್ತಿರಬಹುದೇ ಅಂತ ನಂಜಮ್ಮ ಅನುಮಾನಿಸಿದಳು .ಅವಳೆದೆ ದಸ್ಸಕ್ಕೆಂದಿತು. ತನಗೆ ಏನಾಗಿದೆಯೋ? ಎಂದು ಅವಳ ಮನಸ್ಸು ವಿಲವಿಲ ಒದ್ದಾಡಿತು.
“ಏನಮ್ಮಾ ಹೆಸರು?”- ಡಾಕ್ಟ್ರ್ ಕೇಳಿದ . ಅವನ ದನಿಯಲ್ಲಿ ಕರುಣೆಯೇನಿರಲಿಲ್ಲ. ಮುಂದಿನ ಕೆಲಸ ಎಂಬಂತ ಧೋರಣೆ.
“ನಂಜಮ್ಮ”… ದ್ವನಿಯಲ್ಲಿ ನಡುಕ ತುಂಬಿ ಹೋಗಿತ್ತು.
“ಇನ್ನೂ ಚಿಕ್ಕುಡ್ಗಿ … ಇದೇನು ಮಾಡ್ಕೊಂಡು ಬಂದಿದೀಯ ನೀನು?”- ವೈದ್ಯನ ದ್ವನಿಯಲ್ಲಿ ದರ್ಪವಿತ್ತು, ತನಗೂ ಸೇರಿದಂತೆ ಎಲ್ಲರಿಗೂ ತೊಂದರೆ ಕೊಡುತ್ತಿದ್ದೀಯಲ್ಲ ಎನ್ನುವಂತ ದೂಷಣೆಯೂ ಸೇರಿತ್ತೇನೋ.
ಇವಳು ಸುಮ್ಮನಿದ್ದಳು. ಏನಾಯ್ತು ಎಂದು ತಿಳಿವ ಮೊದಲೇ ಆಕ್ಸಿಡೆಂಟ್ನಡೆದು ಹೋಗಿತ್ತು. ಅದರಲ್ಲಿ ಇವಳ ತಪ್ಪಿತ್ತಾ? ಲಾರಿಗೆ ಬ್ರೇಕ್ ಇರಲಿಲ್ವಾ? ಮುಂದಿದ್ದ ಮನುಷ್ಯರು ಕಾಣದವೇಗದಲ್ಲಿ ನುಗ್ಗಿದ ಲಾರಿಯ ತಪ್ಪಿಲ್ಲವೇ? ಇದು ನಾನು ಮಾಡಿಕೊಂಡು ಬಂದ ಕೆಲಸವೇ? ನಂಜಮ್ಮ ತರಗೆಲೆಯಂತೆ ನಡುಗಿದಳು.
“ಹೆದರಬೇಡ… ಎಲ್ಲಸರಿ ಹೋಗತ್ತೆ , ನಾನು ಸಹಾಯ ಮಾಡಬಲ್ಲೆ “ಎನ್ನುವ ಸಾಂತ್ವನ ನೀಡುವಬದಲು ಡಾಕ್ಟರು ಇವಳದೇತಪ್ಪುಎನ್ನುವ ಮಾತಾಡಿದ್ದ. ಈಗ ಅಣ್ಣನೂ ಅದಕ್ಕೇ ಜೋತುಬಿದ್ದರೆ? ಈಗ ಅವಳಿಗೆ ಭಯವಾಯ್ತು. ಅವನೆಡೆ ನೋಡಿದಳು. ಅವನು ನೆಲನೋಡುತ್ತ ನಿಂತಿದ್ದ. ಅವಳ ಕಾಲೆಡೆ ಮತ್ತೆ ನೋಡುವ ಗಡಸು ಅವನಿಗೆ ಇರಲಿಲ್ಲ.
“ಕಾಲ ಮೇಲೆ ಒಂದು ಬೆಟ್ಶೀಟ್ಹಾಕು…” ಅಂತ ನರ್ಸಮ್ಮನಿಗೆ ಹೇಳಿದ ವೈದ್ಯನಿಗೆ ಇವಳ ಪರಿಸ್ಥಿತಿಯ ಅಂದಾಜು ಸಿಕ್ಕಿತ್ತು. ಯಾವ ಚಿಕಿತ್ಸೆ ಇವಳಿಗೆಬೇಕು ಅಂತ ಗೊತ್ತಾಗಿತ್ತು. ಇನ್ನು ಅವನು ಮುಂದಿನ ಕೆಲಸಕ್ಕೆ ಹೊರಡಲು ತಯಾರಾದಂತೆ ಕಂಡ.
“ನೀವಾ ಈ ಹುಡ್ಗಿಜೋತೇರು?..” ಅಂತ ಅಣ್ಣನ ಕಡೆ ನೋಡಿ ಅವನನ್ನು ಹೊರಗೆ ಕರೆದೊಯ್ದಿದ್ದ.
ಇವಳ ಕಾಲ ಮೇಲೆ ಒಂದು ಹೊದಿಕೆ ಹಾಕಿದ ನರ್ಸಮ್ಮ ಇವಳಿಗೆ ಒಂದು ನಗೆ ದಯೆ ಪಾಲಿಸಿದಳು. ಅಪಘಾತ ನಡೆದಾಗಿಂದ ಅವಳಿಗೆ ಸಿಕ್ಕ ಮೊದಲ ನಗೆಅದಾಗಿತ್ತು. ಉತ್ತರವಾಗಿ ಕ್ಷೀಣವಾಗಿ ನಗಲು ನಂಜಮ್ಮ ಯತ್ನಿಸಿದಳು. ಅಷ್ಟರಲ್ಲಿ ನರ್ಸಮ್ಮ ಎಲ್ಲಿ ಗೋಮಾಯವಾಗಿ ಬಿಟ್ಟಳು.
ಭಯಂಕರ ದಾಹವಾಗುತ್ತಿತ್ತು. ಯಾರಾದರೂ ನೀರು ಕೊಡಬಾರದೇ ಎಂದು ಹಲುಬಿದಳು. ಅಷ್ಟೊಂದು ರಕ್ತಕಳೆದುಕೊಂಡಿದ್ದ ಅವಳ ನಾಲಿಗೆ, ಗಂಟಲು ಎಲ್ಲ ಒಣಗಿ ಹೋಗಿತ್ತು. ನರ್ಸಮ್ಮ ಬಂದ ವೇಗದಲ್ಲೇ ಕಾಣೆಯಾಗಿದ್ದಳು .ಈ ಅವಘಡನಡೆದು ಒಂದೂವರೆ ಘಂಟೆಯಾಗಿತ್ತು. ನಂಜಮ್ಮನ ಬಿಳಿಚಿಕೊಂಡಿದ್ದ ಮುಖದಲ್ಲಿ ಬೆಳಕು ಕಡಿಮೆ ಯಾಗುತ್ತಿತ್ತು.
‘ನಾನು ಮಾಡ ಬಹುದಾದ್ದನ್ನೆಲ್ಲ ಮಾಡಿದ್ದಾಗಿದೆ..’ ಎಂಬಂತೆ ದೇಹ ಸೋಲುತ್ತಿತ್ತು. ಇನ್ನು ಯೋಚಿಸುವ ಶಕ್ತಿ ಅವಳಲ್ಲಿ ಇರಲಿಲ್ಲ. ಹತ್ತು ಹದಿನೈದು ನಿಮಿಷಗಳಲ್ಲಿ ನಂಜಮ್ಮನನ್ನು ಒಂದೆರಡು ಗಂಡು ನರ್ಸಪ್ಪಗಳು ತಳ್ಳಿಕೊಂಡು ಹೋದರು. ಅವರು ಇವಳೊಡನೆ ಮಾತಾಡಲಿಲ್ಲ. ತಮ್ಮ ನಡುವೆ ಏನೋ ಮಾತಾಡುವುದು ಕೇಳಿಸುತ್ತಿತ್ತಾದರೂ ಅದು ಏನೆಂದು ತಿಳಿಸಲು ಅವಳ ಮೆದುಳು ನಿರಾಕರಿಸಿತ್ತು. ಮುಂದೆ ನಡೆದದ್ದು ಅವಳಿಗೆ ಮಂಪರು ಮಂಪರಾಗಿ ನೆನಪಷ್ಟೇ.
*****
ಮಂಪರು ಸರಿದು ಅವಳಿಗೆ ಸರಿಯಾಗಿ ಎಚ್ಚರ ವಾಗುವಲ್ಲಿ ಸಂಜೆಯಾಗಿತ್ತು. ರಾತ್ರಿಯ ಕತ್ತಲು ಇಣುಕುತ್ತಿತ್ತು. ಮಂಚದ ಕಾಲಬಳಿಇವಳದೇ ಮೂತ್ರದ ಬ್ಯಾಗು ನೇತಾಡುತ್ತಿತ್ತು. ಮತ್ತದೇ ದಾಹ. ಅವಳ ಮಂಚದ ಬಳಿ ಯಾರೂ ಇರಲಿಲ್ಲ. ಅವಳು ಸುತ್ತನೋಡಿದಳು.
“ನೀರುಬ್ಯಾಕೇನವ್ವಾ?…. “ ಅಂತ ಪಕ್ಕದ ಮಂಚದ ಬಳಿ ಕುಕ್ಕರುಗಾಲಲ್ಲಿ ಕುಳಿತ ಮುದುಕ ಕೇಳಿದ್ದ.
“ಹ್ಹೂ…” ಅಂದಳು.
“ತಗಾ” ಅಂತ ಒಂದು ಬಾಟಲಿಯ ನೀರುಚಾಚಿದ. ಬಾಯಿ ಚಪ್ಪರಿಸಿ ಕೊಂಡು ಕುಡಿದಳು.
“ಬೋರಕತ ಹೋಂಟೋಗಿತ್ತಂತೆ…. ಈಗ ವಸಿ ಸುದಾರ್ಸೈತೇನು?” ಅಂತ ಕೇಳಿದ.
“ ಹೂ… “ ಅಂದಳು. ನೀರು ಕುಡಿದ ನಂತರ ಅವಳ ಹಸಿವುದ್ಡಿಗುಣಗೊಂಡಿತ್ತು. ಹೊಟ್ಟೆ ತೊಳಸಿ ಬರುತ್ತಿತ್ತು.
ಆ ಮುದುಕ ಹೆಂಡತಿಯನ್ನು ಕರೆತಂದು ಹದಿನಾರು ದಿನಗಳಾದವಂತೆ. ಆ ಸಂಸಾರದ ಬೆಳೆದಮಕ್ಕಳೆಲ್ಲ ಈಮುದುಕನನ್ನು ಇಲ್ಲಿ ಬಿಟ್ಟಿದ್ದರು. ಅವಾಗ ,ಇವಾಗ ಬಂದು ಅವರಮ್ಮನ್ನನ್ನು ನೋಡಿಕೊಂಡು ಹೋಗುತ್ತಿದ್ದರಂತೆ. ಆ ಕೋಣೆಯಲ್ಲಿದ್ದ ಎಲ್ಲ ರೋಗಿಗಳ ಬಗ್ಗೆಯೂ ಮುದುಕ ತಿಳಕೊಂಡಿದ್ದ. ಇವಳದು ಹೊಸಕಥೆ. ಅದಕ್ಕೇ ಇವಳು ಕಣ್ಣುಬಿಡುವುದನ್ನೇ ಕಾದು ಕುಳಿತಂತಿತ್ತು. ರಾತ್ರಿಯೆಲ್ಲ ಮುದುಕನೊಂದಿಗೆ ಹರಟುವ ಯಾವಶಕ್ತಿಯೂ ನಂಜಮ್ಮನಲ್ಲಿಇ ರಲಿಲ್ಲ.
ಮತ್ತೆ ಕಣ್ಣು ಮುಚ್ಚಿದಳು. ಇನ್ನೊಂದು ತಾಸು ಉರುಳಿತು. ಅಪ್ಪಯ್ಯ ಡಬ್ಬಿಯಲ್ಲಿ ಊಟ, ಬಾಟಲಲ್ಲಿ ನೀರು ತಂದಿದ್ದ. ತುತ್ತು ಮಾಡಿ ತಿನ್ನಿಸಿದ. ನೀರು ಕುಡಿಸಿದ. ಅವಳು ಗೋಳೋ ಎಂದು ಅಳ ತೊಡಗಿದಳು. ಯಾವತ್ತೂ ಅಪ್ಪಯ್ಯ ನಂಜಮ್ಮನಿಗೆ ತಿನ್ನಿಸಿರಲಿಲ್ಲ. ಅವಳಿಗೆ ನೆನಪು ನಿಂತಕಾಲದಿಂದಲೂ ಇವಳೇ ಅವನಿಗೆ ಸೇವೆ ಮಾಡುದ್ದಷ್ಟೇ ಅವಳ ನೆನಪಲ್ಲಿದ್ದುದು ! ಇವತ್ತು ಅವನ ಕೈಯಿಂದ ತಿಂದ ಅಸಹಾಯಕತೆಗೆ ಬೆಳಗಿಂದ ಕಟ್ಟಿರಿಸಿದ್ದ ದುಃಖವೆಲ್ಲ ಧಾರಾಕಾರವಾಗಿ ಹರಿಯಿತು.
“ವಸಿ ಸಮಾಧಾನ ಮಾಡ್ಕಳ್ಳವ್ವಾ…..“ ಅಂತಷ್ಟೇ ಅವನ ಬಾಯಿಂದ ಬಂದದ್ದು. ಅವಳ ಮೈದಡವ ಬೇಕಂತಲೂ ಅವನಿಗೆ ತಿಳಿಯಲಿಲ್ಲವೋ ಅಥವಾ ಹಾಗೆ ಎಂದೂ ಮಾಡದ ಅಪ್ಪಯ್ಯ ಆಅಧಿಕಾರ ಕಳೆದುಕೊಂಡು ಬಿಟ್ಟಿದ್ದನೇನೋ…?
ಪೆಟ್ಟು ತಿಂದು ಹಸುಳೆಯಾಗಿದ್ದ ನಂಜಮ್ಮನಿಗೆ ಇನ್ನೆಷ್ಟು ಸಮಾಧಾನ, ಹುಶಾರು, ಸಂಯಮ ತೋರಿಸಲು ಸಾದ್ಯವಿತ್ತು??
ಅಣ್ಣನೂ ಸೇರಿದಂತೆ ಆರುಜನ ಅವಳಿಗೆ ರಕ್ತ ನೀಡಿದ್ದರಂತೆ. ಅದಾದ ಮೇಲೆ ಡಾಕ್ಟರು ಅವಳ ಕಾಲಿನ ಗಾಯವನ್ನೆಲ್ಲ ತೊಳೆದು ಔಷದ ಹಾಕಿ ಪಟ್ಟಿ ಕಟ್ಟಿದ್ದರಂತೆ. ಎರಡು ಸಾವಿರ ರೂಪಾಯಿ ದುಡ್ಡು ಕೇಳಿದ ಡಾಕ್ಟರನ ಬಳಿ ಅಣ್ಣ ಗೋಳಾಡಿ ಒಂದೂವರೆ ಸಾವಿರಕ್ಕೆ ಇಷ್ಟು ಮಾಡಿಸಿ ಜೀವ ಉಳಿಸಿದ್ದನಂತೆ. ಇಷ್ಟೆಲ್ಲ ಆಗುವಲ್ಲಿ ಹೈರಾಣಾದ ಅಣ್ಣ ,ಅಪ್ಪಯ್ಯನಿಗೆ ತಾಕೀತು ಮಾಡಿ ಊಟ ಕಳಿಸಿದ್ದ. ಹಾಗಂತ ಅಪ್ಪಯ್ಯನೇ ಹೇಳಿದ್ದ. ಅಣ್ಣ ಈಗ ಮಲಗಿರ ಬಹುದು. ನಿನ್ನೆ ಈ ವೇಳೆಯಲ್ಲಿ ನಂಜಮ್ಮ ನೂತನ್ನಮನೆಯಲ್ಲಿ ಮಲಗಿದ್ದಳು. ಸಮಯವನ್ನು ಹಿಂದಕ್ಕೆ ತಿರುಗಿಸಲು ಸಾದ್ಯವಿದ್ದಿದ್ದರೆ ಏನೆಲ್ಲ ಮಾಡ ಬಹುದಿತ್ತು? ನಿನ್ನೆ ಎಂಬುದು ಅವಳ ಜೀವನದ ಅತ್ಯಂತ ಸಂತೋಷದ ದಿನದಂತೆ ಅನ್ನಿಸಿತು.
ಇಡೀ ರಾತ್ರಿಯನ್ನು ಕನಸು, ಎಚ್ಚರ, ಜ್ವರ, ನಿದ್ದೆ, ಚಳಿ, ಸೆಖೆಯ ನಾನಾ ಪ್ರಕಾರಗಳಲ್ಲಿ ತಳ್ಳಿದಳು.
*****
“ಹೇಗಿದ್ದೀಯ ತಾಯಿ..? “ ಅಂತ ಬೆಳಿಗ್ಗೆ ಬೆಳಿಗ್ಗೆಯೇ ಇವಳನ್ನು ಪಕ್ಕದ ಮಂಚದ ಮುದುಕ ಕೇಳಿದ್ದ. ಅವನ ಹೆಂಡತಿಯೂ ಮಂಚದ ಮೇಲಿಂದ ನರಳುತ್ತಲೇ ಇವಳ ಬಗ್ಗೆ ಕೇಳಿದ್ದಳು. ಅವರಿಗೆ ಗಂಡು ಮಕ್ಕಳ ಹೊರತಾಗಿ ಬೇರೆಮಕ್ಕಳಿರಲಿಲ್ಲ. ಅತ್ತೆಯ ಜೊತೆ ಹೊಂದದ ಸೊಸೆಯರು ಮಾತು ಬಿಟ್ಟಿದ್ದರು. ಗಂಡು ಮಕ್ಕಳು ಆಗೀಗ ಬಂದು ಒಂದಿಷ್ಟು ರೊಕ್ಕ ಕೊಟ್ಟುಅಮ್ಮ ಇನ್ನೂಬದುಕಿರುವಳೇ ಎಂದು ನೋಡಿಕೊಂಡು ಹೋಗುತ್ತಿದ್ದರು. ಹಳ್ಳಿಯಲ್ಲಿ ಈ ಮುದುಕ ದಂಪತಿಗಳಿಬ್ಬರೇ ಉಳಿದದ್ದು. ಈಗ ಮನೆಗೆ ಬೀಗ ಹಾಕಿ ಆಸ್ಪತ್ರೆಯನ್ನೇ ಮನೆ ಮಾಡಿ ಕೊಂಡಿದ್ದರು,. ಮುದುಕಿ ಇಲ್ಲಿಯೇ ಸತ್ತರೆ ಮುದುಕನೊಬ್ಬನೇ ಆ ಹಳ್ಳಿಗೆ ಹಿಂತುರುಗ ಬೇಕಿತ್ತು. ಇಲ್ಲ ಆ ಮನೆ, ತೋಟವನ್ನು ಪೂರ್ಣ ತೊರೆದು ಗಂಡು ಮಕ್ಕಳ ಮನೆಗೆ ಹೋಗ ಬೇಕಿತ್ತು. ಅವರ ಕಥೆ ಕೇಳಿ ಪುಂಡನಾದರೂ ಅಪ್ಪಯ್ಯನ ಜೊತೆ ಇರುವ ಅಣ್ಣ ಎಷ್ಟೋ ವಾಸಿ ಅನ್ನಿಸಿತು. ಅಪ್ಪಯ್ಯನ ಸುಳಿವು ಎಲ್ಲೂ ಇರಲಿಲ್ಲ.
ಅಣ್ಣನಿಗೆ ಖಾತರಿಯಾದ ಕೆಲಸ ವಿಲ್ಲದಿದ್ದರೂ ಅತ್ತಿಗ್ಯೆವ್ವ ಮದುವೆಯಾಗಿ ಬಂದಿದ್ದಳು. ಅಪ್ಪನನ್ನು ಚಿಕ್ಕಂದಿನಲ್ಲೇ ಕಳ ಕೊಂಡಿದ್ದಳು. ಅವಳಮ್ಮನೇ ಮನೆಗೆಲಸ ಮಾಡಿಕೊಂಡು ಇವಳನ್ನು ಬೆಳೆಸಿದ್ದಳು. ಅವಳಿಗೆ ಅದೆಂತದೋ ಖಾಯಿಲೆಯಾಗಿ ಕಣ್ಣು ಮಂಜಾಗಿದ್ದವಂತೆ. ಮಗಳ ಮದುವೆಯಾದ ಹೊಸತರಲ್ಲೇ ಕಣ್ಣುಗಳು ಪೂರ ಕಾಣಿಸದಂತಾಗಿ ತನ್ನ ಒಡಹುಟ್ಟಿದ ಅಕ್ಕ-ತಂಗಿಯರು ವಾಸವಿದ್ದ ವೀರುಪಾಳ್ಯಕ್ಕೆ ಹೋಗಿ ಅವರ ಹಂಗಲ್ಲಿ ವಾಸವಿದ್ದಳು. ಹೀಗಿದ್ದವಳಿಗೆ ತನ್ನ ಮಗಳ ಬಾಣಂತನ ಮಾಡುವ ಶಕ್ತಿಯಿರಲಿಲ್ಲ. ಹೆರಿಗೆಗೆ ಮತ್ತು ಬಾಣಂತನಕ್ಕೆ ಅತ್ತಿಗ್ಯೆವ್ವ ಗಂಡನ ಮನೆಯಲ್ಲೇ ಇರುವುದು ಅಂತ ಮಾತಾಗಿತ್ತು. ಆಗಿಂದ ಅತ್ತಿಗೆ ನಂಜಮ್ಮನಿಗೆ ಮಗಳಾಗಿದ್ದಳು. ಅವರಿಬ್ಬರ ನಡುವೆ ಜಗಳಗಳೇನೂ ಇರಲಿಲ್ಲ. ತುಂಬು ಬಸಿರಿ ಹಡೆದರೆ ಮಗುವನ್ನು ನೋಡಿಕೊಳ್ಳಲು ನಂಜಮ್ಮನಿದ್ದಳು. ನಂಜಮ್ಮನಿಗೆ ಮದುವೆಯಾಗಿ ಬಸಿರಾಗಿ ತವರಿಗೆ ಬಂದರೆ ಬಾಣಂತನ ಮಾಡಬೇಕ್ಕಿದ್ದುದು ಅತ್ತಿಗ್ಯವ್ವನೇ ತಾನೇ? ಅತ್ತ ಕಡೆ ಹೆಂಡತಿಯ ಬಸಿರು, ಇತ್ತ ಕೆಲಸಕ್ಕೆ ಬಾರದ ಅಪ್ಪಯ್ಯ, ಇವರ ನಡುವೆ ಆಗಾಗ ಲೋಡುಗಳ ಜೊತೆ ನಾಲ್ಕು–ಐದು ದಿನ ಮನೆಯಲ್ಲಿರದ ಅಣ್ಣಯ್ಯನಿಗೆ ನಂಜಮ್ಮಳ ಸಹಾಯ ಅನಿವಾರ್ಯವಾಗಿತ್ತು. ಆ ಲೆಕ್ಕಾಚಾರದಲ್ಲೇ ಇನ್ನಾರು ತಿಂಗಳು ನಂಜಮ್ಮನ ಮದುವೆಯ ಬಗ್ಗೆ, ಅವಳಿಗೆ ಗಂಡು ತೋರಿಸುವ ಬಗ್ಗೆ ಚಕಾರವೆತ್ತದೆ ಸುಮ್ಮನಿರಲು ಅವನು ನಿರ್ಧರಿಸಿದ್ದ. ಹಾಗಿರುವಾಗ ಈ ಘಟನೆ ನಡೆದು ಹೋಗಿತ್ತು.
ನಂಜಮ್ಮನೊಬ್ಬಳಿಲ್ಲದಿದ್ದರೆ ಹಲವರಿಗೆ ತೊಂದರೆ ಯಾಗುತ್ತಿತ್ತು. ಹೀಗಿರುವಾಗ ಇಂತಹ ಅವಘಡ ನಡೆದು ಹೋದ್ದರಿಂದ ಅವರ ಸಂಸಾರ ನೌಕೆ ಅಲ್ಲೋಲ ಕಲ್ಲೋಲವಾಗಿತ್ತು. ಹಾಗಾಗಿಯೇ ಅಣ್ಣ ಎಲ್ಲಿ ಹರಿಹಾಯುತ್ತಾನೋ ಎಂದು ನಂಜಮ್ಮ ಹೆದರಿದ್ದು. ಅವಳಿಗೆ ತಾನೇ ಹೀಗಾಗ ಬಹುದೆಂಬ ಅರಿವಿತ್ತೇನು? ಆದರೆ ಎಲ್ಲರಿಗೂ ತೊಂದರೆಯಾದ ಬಗ್ಗೆ ಅವಳಲ್ಲಿ ಅಪರಾಧಿ ಪ್ರಜ್ಞೆ ಹೇಗೋ ಇಣುಕಿಹಾಕಿತ್ತು.
ಅಷ್ಟರಲ್ಲಿ ಗಡಗಡನೆ ನಡುಗುವಂತೆ ಸುತ್ತಿ ಕೊಂಡ ಚಳಿಯ ಜೊತೆ ಜ್ವರ ನಂಜಮ್ಮನನ್ನು ದಹಿಸ ತೊಡಗಿತು. ಇಡೀ ದೇಹ ಲಟಲಟನೆ ನಡುಗ ತೊಡಗಿತು. ಕಣ್ಣು ಬಿಟ್ಟರೆ ಸೊಂಟದವರೆಗೆ ಇರಿಯುವಂತ ನೋವು ! ಗಾಯಕ್ಕೆ ಪಟ್ಟಿ ಬಿದ್ದನಂತರ ಯಮ ಯಾತನೆ ಶುರುವಾಗಿತ್ತು. ನಾಗಮಣಿ, ಸಾಹುಕಾರ, ಅಣ್ಣ, ಅಪ್ಪಯ್ಯ, ಪಕ್ಕದ ಮಂಚದ ಮುದುಕ,ಆಸ್ಪತ್ರೆಯ ವಾಸನೆ, ಅತ್ತಿಗ್ಯೆವ್ವನ ಬಸಿರು ಎಲ್ಲವೂ ಮರೆಯಾದವು. ಬರಿ ನೋವನ್ನು ಬಿಟ್ಟರೆ ನಂಜಮ್ಮನಲ್ಲಿ ಇನ್ಯಾವ ಸಂವೇದನೆಗಳಿರಲಿಲ್ಲ. ಕಂಬಳಿ ಹೊದ್ದು ನಡುಗುತ್ತ ಮಲಗಿದಳು. ನರ್ಸಮ್ಮ ಯಾವಾಗಲೋ ಬಂದು ಗುಳಿಗೆ ನೀಡಿ ಹೋದಳು.
ಹನ್ನೊಂದರ ಹೊತ್ತಿಗೆ ಅಣ್ಣ ಊಟದ ಜೊತೆ ಬಂದ. ಜೊತೆಗೆ ಲಾಯರನ್ನು ಕರೆತಂದಿದ್ದ. ಅವನ ಕಣ್ಣುಗಳೂ ಬಾತು ದಪ್ಪಗಾಗಿದ್ದವು. ಅವನು ರಾತ್ರಿ ನಿದ್ದೆ ಮಾಡಿಲ್ಲವೆಂದು ಯಾರು ಬೇಕಾದರೂ ಹೇಳಬಹುದಿತ್ತು .ಲಾಯರು ಇವಳನ್ನು ಮಾತಾಡಿಸಲಿಲ್ಲ. ಅತ್ತಿಗೆವ್ವನ ಜೊತೆ ಮಾತಾಗಿತ್ತೋ ಏನೋ? ಹೇಗಿದ್ದೀಯ ಎಂದು ಅಣ್ಣನೂ ಕೇಳಲಿಲ್ಲ. ಅವಳೇ ಹೇಳಿಕೊಳ್ಳುಲು ಅವಕಾಶವೂ ಸಿಗಲಿಲ್ಲ.
ಅವರಿಬ್ಬರೂ ಬಂದು ಸುಮ್ಮನೆ ನೋಡಿ ಕೊಂಡು ಏನೇನೋ ಮಾತಾಡಿಕೊಂಡು ಹೊರಟರು. ಲಾಯರಿನ ದ್ವನಿ ಕೋರ್ಟಿನಲ್ಲಿ ಮಾತಾಡುತ್ತಿರುವಂತೆ ಜೋರಾಗಿಯೇಇತ್ತು.
“ ಇನ್ನೂ ಮದುವೆಯಾಗಿಲ್ಲ , ಆಗುವುದೂ ಕಷ್ಟ ಅಂತ ಜಾಸ್ತಿನೇಕ್ಲೈಮ್ಮಾಡಬಹುದು. ಮುಂದೆ ಕಾಲು ಹೋದರೆ ಅದಕ್ಕೆಇನ್ನೂ ಜಾಸ್ತಿ ಕೇಳಬಹುದು… ಹೋಗಿಲ್ಲ ಅಂದ್ರೆ ಪೇಯ್ನ್ಅಂಡ್ಸಫರಿಂಗ್ ಅಂತ ಜಾಸ್ತಿ ಏನೂ ಸಿಗಲ್ಲ.. ಅಂತೇನೋ ಹೇಳ್ತಾ ಇದ್ದದು ಕೇಳಿಸ್ತು.
ಅವರು ಹೋದ ಅರ್ಧ ಗಂಟೆಗೆ ನಂಜಮ್ಮನಿಗೆ ವಾರ್ಡಿನ ಕಿಟಕಿಯ ಮೂಲಕ ಯಾವುದೋ ಪರಿಚಿತ ಮುಖ ಕಾಣಿಸಿದಂತಾಯ್ತು. ಬಾಗಿಲ ಮೂಲಕ ವ್ಯಕ್ತಿ ಒಳಗಡಿಯಿಟ್ಟ ಕೂಡಲೇ ಅವನ್ಯಾರೆಂದು ನಂಜಮ್ಮನಿಗೆ ಹೊಳೆಯಿತು. ನಿನ್ನೆ ಇವಳನ್ನು ಆಸ್ಪತ್ರೆಗೆ ಸೇರಿಸಿದ ಅದೇ ಪೋಲೀಸು ಪೇದೆ. ಇವತ್ತು ಕೆಲಸಕ್ಕೆ ರಜೆಯಿರಬೇಕು. ಬಣ್ಣದ ಉಡುಪು ತೊಟ್ಟಿದ್ದ.ಇವಳು ತಟ್ಟನೆ ಕಣ್ಣು ಮುಚ್ಚಿದಳು. ಅವನನ್ನು ನೋಡುವುದು ನಂಜಮ್ಮನಿಗೆ ಬೇಕಿರಲಿಲ್ಲ. ಅವನು ಅರೆಕ್ಷಣ ಇವಳ ಮಂಚದ ಪಕ್ಕ ನಿಂತ. ಪಕ್ಕದ ಮುದುಕನಾದರೂ ಈ ಪೇದೆಯನ್ನು ಓಡಿಸಬಾರದೇ ಎಂದು ನಂಜಮ್ಮನಿಗೆ ಅನ್ನಿಸಿತು.
“ಈ ಯಮ್ಮನ ಕಡೇವ್ರು ಯಾರಿದ್ದಾರಜ್ಜಾ…?” ಪೇದೆ ಪಕ್ಕದ ಮುದುಕನನ್ನು ಕೇಳುತ್ತಿದ್ದ.
“ಈ ಉಡ್ಗೀ ಅಣ್ಣ ಆಚಿಕಡೆ ಇರ್ಬದ್ಯಾನಾ… ವಸಿ ಮುಂದ ಲಾಯರಿ ಜೊತೆ ಬಂದಿದ್ದ ಕಣಪ್ಪಾ, ನೀ ಯೇನು ಈ ಯಮ್ಮನ ನೆಂಟನ್ಯಾ?”
“ಅವನ್ನ ಹೊರಗೇ ನೋಡ್ತೀನ್ಬಿಡಜ್ಜಾ …” ಅಂದವನೇ ತಾನು ಯಾರೆಂದು ಹೇಳದೆ ಪೇದೆ ಅಲ್ಲಿಂದ ಹೊರಟು ಬಿಟ್ಟ.ಅವನ ದ್ವನಿ ನಿನ್ನೆಗಿಂತ ಕುಗ್ಗಿತ್ತು. ಯಾರಿಗೂ ತಾನು ಪೋಲೀಸನೆಂದು ತಿಳಿಯದಿರಲೆಂದೇ ಬಣ್ಣದ ಬಟ್ಟೇಲಿ ಬಂದಿದ್ದ. ನಿನ್ನೆ ಲಾರಿ ಹೊಡೆದದ್ದಕ್ಕೆ ತನ್ನನ್ನು ಅರೆಷ್ಟ್ಮಾಡಲು ಅವನು ಬಂದಿಲ್ಲ ಅಂತ ನಂಜಮ್ಮನಿಗೆ ನಿರಾಳವಾಯ್ತು.
ಸ್ವಲ್ಪ ಹೊತ್ತಲ್ಲಿ ಡಾಕ್ಟರು ಬಂದರು. ಅವಳ ಹಿಂದೆ ಬಂದ ನರ್ಸಮ್ಮ ಪರದೆ ಎಳೆದು ಅವನ ಪಕ್ಕಕ್ಕೆ ನಿಂತಳು. ಅಣ್ಣ ಈ ಹೊತ್ತಲ್ಲಿ ಇಲ್ಲಿರ ಬಾರದಿತ್ತೇ ಎನ್ನುವ ಭಾವ ನಂಜಮ್ಮನದು. ತನ್ನ ಚಿಕಿತ್ಸೆ ಮುಗಿದಿದೆಯೆಂದೂ, ಇನ್ನು ಸ್ವಲ್ಪ ದಿನ ನೋವು ತಿಂದರೆ ಗಾಯ ಮಾಯುತ್ತದೆಂದೂ ನಂಜಮ್ಮ ನಂಬಿದ್ದಳು. ತನಗೇನೂ ರೋಗವಿಲ್ಲವಲ್ಲ. ಆಸ್ಪತ್ರೆ, ವೈದ್ಯರು, ನರ್ಸಮ್ಮ, ನರ್ಸಪ್ಪ ಎಲ್ಲರೂ ನಿನ್ನೆಯೇ ತನಗೆ ಚಿಕಿತ್ಸೆ ನೀಡಿ ಜೀವ ಉಳಿಸಿದ್ದರು. ಯಾವಾಗ ಮನೆಗೆ ಹೋಗ ಬಹುದೆಂದು ಹೇಳಬಹುದೆಂದು ನಂಜಮ್ಮನ ಹುನ್ನಾರ. ಅದಕ್ಕೇ ಲಾಯರಿಯ ಜೊತೆ ಹಾಳಗಿ ಹೋಗಿದ್ದ ಅಣ್ಣ ಅಲ್ಲಿರ ಬಾರದಿತ್ತೇ ಅನ್ನಿಸಿತ್ತು ನಂಜಮ್ಮನಿಗೆ
ವೈದ್ಯರು ಇವತ್ತು ಸ್ವಲ್ಪ ಗಂಭೀರವಾದ ದನಿಯಲ್ಲಿ ಶುರು ಮಾಡಿದರು.
“ನಂಜಮ್ಮ ನಿನ್ಕಾಲ ಗಾಯ ಭಾಳ ದೊಡ್ಡದು, ರೋಡಲ್ಲಿರೋ ಧೂಳು, ಮಣ್ಣು ಎಲ್ಲ ತುಂಬ್ಕೊಂಬ್ಬಿಟ್ಟಿದೆ. ನಿನ್ನೆ ಎಲ್ಲ ತೊಳೆದು, ಔಷದ ಹಾಕಿ, ಬ್ಯಾಂಡೇಜು ಹಾಕಿದೀವಿ. ಆದ್ರೂ ಇನ್ನೂ ಕ್ಲೀನ್ಮಾಡಿ ಗಾಯ ವಾಸಿಮಾಡ್ಬೇಕು. ಇಲ್ಲಾಂದ್ರೆ ತುಂಬ ಇನ್ಫೆಕ್ಷನ್ ಆಗಿ ಜೀವಕ್ಕೆ ಅಪಾಯ ಆಗ್ಬೋದು… , ಕಾಲು ಉಳಿಸೋಕೆ ಪ್ರಯತ್ನ ಪಡಬಹುದು ಆದರೆ ಇಲ್ಲಾಗಲ್ಲ… ಇಲ್ಲಿ ಅದಕ್ಕೆಲ್ಲ ವ್ಯವಸ್ಥೆ ಇಲ್ಲ..” ನಂಜಮ್ಮ ಕೇಳಿಸಿ ಕೊಳ್ಳುತ್ತಿದ್ದಳು
ಅದೆಲ್ಲ ಬೇಡ ಅಂದ್ರೆ ಕಾಲು ತೆಗೀ ಬೇಕಾಗುತ್ತೆ .ಕಾಲು ತೆಗೆದ್ರೆ ಜೀವನಾದ್ರೂ ಉಳೀಯುತ್ತೆ. ಇದೇ ಆಸ್ಪತ್ರೇಲಿ ಅದನ್ನು ತೆಗೆಯಕ್ಕೆ ಹತ್ತುಸಾವಿರ ಖರ್ಚಾಗಬಹುದು. ಎಲ್ಲ ಸೇರಿ ಯೋಚನೆ ಮಾಡಿ ಹೇಳಿ. ಇಲ್ಲಾಂನ್ದ್ರೆ ಬೇರೆಆ ಸ್ಪತ್ರೆಗೆ ಹೋಗ್ಪ್ರ ಯತ್ನಪಡಿ. ಸಂಜೇಲಿ ನಾನು ಬೇರೆ ನರ್ಸಿಂಗ್ಹೋಂನಲ್ಲಿ ಕೆಲಸಮಾಡ್ತೀನಿ. ಅಲ್ಲಿ ಬೇರೆ ವ್ಯವಸ್ಥೆ ಇದೆ. ಪ್ಲಾಸ್ಟಿಕ್ ಸರ್ಜರಿ ಕೂಡ ಕೊಡಬೇಕು.ಹಾಗಾಗಿ ಐದಾರು ಲಕ್ಷ ಖರ್ಚಾಗ ಬಹುದು. ನೀವು ದುಡ್ಡು ಎಲ್ಲಿಂದ ತರ್ತೀರಿ ಅಂತ ಯೋಚನೆ ಮಾಡಿ…. ಯಾವುದಕ್ಕೂ ತಡ ಮಾಡದೆ ನಿರ್ಧಾರ ತಗಂಡ್ರೆ ಉತ್ತಮ…..”
ನಂಜಮ್ಮ ಎಲ್ಲ ಅರ್ಥವಾದಂತೆ ತಲೆಯಾಡಿಸಿದಳು. ಡಾಕ್ಟರು ಹೊರಟು ಹೋದರು.ನಂಜಮ್ಮ ಮೂಕವಾಗಿ ಹೋಗಿದ್ದಳು!!
ಸ್ವಲ್ಪ ಹೊತ್ತಲ್ಲಿ ಅಣ್ಣ ಬಂದ. ಇವಳ ಜೊತೆ ಕೂತು ಒಂದರೆ ಗಳಿಗೆ ಮಾತಾಡಿದ
ನಿನ್ನೆಇವಳನ್ನುಕರೆ ತಂದ ಅದೇ ಪೋಲೀಸು ಪೇದೆ ಇವತ್ತು ಬಂದು “ ನಾನು ಕರೆ ತಂದು ಸೇರಿಸಲಿಲ್ವ…” ಅಂತ ಒಂದೈ ನೂರು ಪೀಕಿಸಿ ಕೊಂಡು ಹೋಗಿದ್ದನಂತೆ. ಇಲ್ಲದಿದ್ದರೆ ಕೋರ್ಟು ಕೇಸಾದಲ್ಲಿ ತಾನು ಸಾಕ್ಷಿ ನೀಡಲ್ಲ ಅಂದಾಗ ಅಣ್ಣ ಮರು ಮಾತಾಡದೆ ಕೊಡ ಬೇಕಾಯ್ತುಂತೆ.
ಲಾಯರೇನೋ ತನಗೆ ಜಡ್ಜ ಸಾಹೇಬರು ಚೆನ್ನಾಗಿ ಗೊತ್ತಂತಲೂ, ಹೇಗಾದರೂ ಲಕ್ಷಗಳಲ್ಲಿ ಹಣ ದೊರಕುವ ತೆ ಮಾಡುವೆನಂತಲೂ ಆಶ್ವಾಸನೆ ಕೊಟ್ಟನಂತೆ.ಇವರ ಮಾಲೀಕನ ಶಿಫಾರಿಸಿನ ಮೇಲೆ ಈ ಲಾಯರನ್ನು ಅಣ್ಣ ಹಿಡಿದಿದ್ದನಂತೆ .ಇದೇ ಜಡ್ಜ ಸಾಹೇಬರು ಸೀಟಿನಲ್ಲಿದ್ದರೆ ಈ ಕೇಸು ಖುಲಾಸ್ಮಾಡಲು ಐದಾರು ವರ್ಷಸಾಕೆಂದೂ, ಸಾಹೇಬರು ಬದಲಾಗಿ ಬೇರೆ ಯಾರಾದರೂ ಸೀಟಿಗೆ ಬಂದ್ರೆ ಹತ್ತು ವರ್ಷಗಳಾದರೂ ಆಗಬಹುದು ಅಂತ ಹೇಳಿದ್ದನಂತೆ. ಕೇಸು ಹಿಂತೆಗೆದುಕೊಂಡು ಒಪ್ಪಂದ ಮಾಡಿ ಕೊಂಡರೆ ಐವತ್ತು ಸಾವಿರದಿಂದ ಲಕ್ಷದವರೆಗೆ ಕೇಳಲು ಸಾದ್ಯವಿದೆಯೆಂದು ಹೇಳಿದ್ದ. ಆದರೆ ಪೋಲೀಸರಿಂದ ಮಾಹಿತಿ ಪಡೆದು, ಇನ್ಶ್ಯೂರೆನ್ಸ ಇರುವ ಲಾರಿ ಚಾಲಕನ ಮೇಲೆ ದಾವೆ ಹೂಡಲು ತತ್ಕ್ಷಣ ಐದು ಸಾವಿರ ಮುಂಗಡ ಬೇಕೆಂದು ಅಣ್ಣನ ಕೈ ಬರಿದು ಮಾಡಿ ಹೋಗಿದ್ದನಂತೆ.
ನಂಜಮ್ಮನಿಗೆ ಎದೆ ದಸಕ್ಕೆಂದಿತು. ಡಾಕ್ಟರು ಬಂದು ಹೋದಾಗಿಂದ ಅವಳ ಮನಸ್ಸಲ್ಲಿ ಕುಂಟಿ ನಂಜಮ್ಮ ವಿಕಾರವಾಗಿ ಕೇಕೆ ಹಾಕಿ ನೋವು ಕೊಡುತ್ತಿದ್ದಳು. ತನ್ನ ಕಾಲು, ಅತ್ತಿಗೆಯ ಬಸಿರು, ಔಷದಗಳು, ಓಡಾಟ, ಮನೆ ಖರ್ಚುಎಲ್ಲ ಭಾರವಾಗಿ ಕಂಡವು. ಮದುವೆಯ ಕನಸು ಸಾವಿರ ಮೈಲಿ ದೂರಕ್ಕೆ ಹಾರಿತ್ತು. ನಂಜಮ್ಮನ ಸಹಾಯದ ಅಗತ್ಯವಿದ್ದ ಜನರ ಅನುಭೂತಿಗಳಿಗೆ ನಂಜಮ್ಮನಿಗೆ ನೆರವು ನೀಡುವ ಶಕ್ತಿಯಿರಲಿಲ್ಲ. ನಂಜಮ್ಮನ ಅವಘಡದ ಲಾಭ ಪಡೆಯ ಬಯಸುತ್ತಿದ್ದವರಲ್ಲಿ ನಂಜಮ್ಮನ ಬಗ್ಗೆ ಯಾವ ಅನುಭೂತಿಗಳೂ ಇರಲಿಲ್ಲ. ಅವಳು ತನ್ನ ಕಾಲಕಡೆ ನೋಡಿಕೊಂಡಳು. ಈ ಕಾಲೊಂದಿದ್ದರೆ….ಎಲ್ಲ ಬದಲಾಗುತ್ತಿತ್ತು ಅಲ್ಲವೇ?
“ ಅಣ್ಣ, ನಾನ್ಲಗ್ಣಕ್ಕೆಅಂತ ಐದು ವರ್ಷದಿಂದ ದುಡಿದು ಬ್ಯಾಂಕಲ್ಲಿ ಮೂವತ್ತು ಸಾವಿರ ಇಟ್ಕಂಡಿದೀನಿ. ನಂಗೇನುಲಗ್ಣಬ್ಯಾಡ….. ಈ ಆಸ್ಪತ್ರೆಬ್ಯಾಡ,ಹೆಂಗಾರ ಬ್ಯಾರೆ ಕಡೆ ಕರ್ಕಂಡ ಹೋಗೋ….” ಅಂತ ಗೋಳೋ ಎಂದು ಅತ್ತಳು.
ಅಣ್ಣ ದುರದುರನೆ ತಂಗಿಯನ್ನು ನೋಡಿದ. ತಲೆ ತಗ್ಗಿಸಿದ. ಅವಳ ಕೈಯನ್ನು ಹಿಡಿದು ಒಂದೇ ಸಮನೆ ಗಳಗಳನೆ ಅಸಹಾಯಕನಾಗಿ ಅಳತೊಡಗಿದ.
————————————————– ಡಾ. ಪ್ರೇಮಲತ ಬಿ.
7 thoughts on “ಅನುಭೂತಿಗಳು”
ತುಂಬಾ ಚೆನ್ನಾಗಿ ಬರೆದಿದ್ದೀರ ಮೇಡಂ..ನಿಮ್ಮ ಬರಹ ನಂಗೆ ತುಂಬಾ ಇಷ್ಟ ಆಯಿತು
ಧನ್ಯವಾದಗಳು ಕವಿತೆ ಅವರೆ 🙏
very good story of satire in life.
Thank you very much Manohar Tonse 🙏
Thank you very much Manohar Avare.
Excellent narration.
Thank you very much Keshav avare.