ನನ್ನ ಕವಿತೆಗಳಲ್ಲಿ ನೀ ತುಂಬಿಟ್ಟ
ಬೆಳಕು ಪ್ರತಿಫಲಿಸಿ
ಈ ಗಾಢ ಕತ್ತಲೆಯಲ್ಲೂ
ಮಿಂಚುಹುಳುವೊಂದು
ಜೊತೆಯಾಗಿದೆ.
ಕತ್ತಲೆಯ ಭಯವಿಲ್ಲ ನನಗೆ
ತಾರಕೆಗಳು, ಚಂದಿರನ
ಕೂಡ ನಿನ್ನದೇ ನೆನಪುಗಳ ರಾಶಿ
ಮುಚ್ಚಿದರೂ ಕಣ್ಣೆವೆ
ತಿದಯೊತ್ತಿ ನಿಲ್ಲುವ ಅದೇ ನಿಲುವು
ನಾಯಿಗಳ ಕೂಗು, ನಿಶಾಚರಿಗಳ
ಕುಣಿತ ರಾತ್ರಿಗೆ
ತಂದಿಟ್ಟ ವಿರುದ್ಧ ಉಪಮೆಗಳ
ಬದಿಗಿಟ್ಟು ನೋಡು.
ಈ ರಾತ್ರಿಯಲ್ಲಿಯೇ
ಕಣ್ಣುಗಳಲ್ಲಿ ಕಣ್ಣಿಟ್ಟು ಕಾಣದ ಲೋಕವೊಂದು
ಅನಾವರಣಗೊಂಡಿದ್ದ
ನೆನಪಿಟ್ಟಿಕೋ..
ರಾತ್ರಿಗಳ ಪ್ರೀತಿಸದ ಹೊರತು
ಜಗದ ನಿಯಮವು ಬದಲಾಗದು
ಬಯಲ ನೆರಳಿನ ಅನಂಗತೆಯ ಆಲಿಂಗನದಲ್ಲಿ
ಈ ರಾತ್ರಿಯ ಸುದೀರ್ಘತೆ
ಎಷ್ಟು ಹಿತವಾಗಿದೆ..
ಒಮ್ಮೆಯಾದರೂ
ನೀ ಅಲ್ಲಿ ಬಚ್ಚಿಟ್ಟಿಕೋ….