ಕೊರೊನಾ ಎಂಬ ಸಾವುಗಳ ಶಕೆಯೇ ಆರಂಭವಾದ ಭೀಕರ ಸ್ಥಿತಿ ನಿರ್ಮಾಣಗೊಂಡಿದೆ. ಸುದ್ದಿ ಛಾನಲ್ಲುಗಳ ಸಹವಾಸ ಸಾಕು ಸಾಕಾಗಿ, ಸಾಮಾಜಿಕ ಜಾಲತಾಣಗಳೆಂಬ ಯುನಿವರ್ಸಿಟಿಗಳನ್ನು ಜಾಲಾಡುತ್ತಿದ್ದರೆ ಅಲ್ಲಿ ನಿತ್ಯವೂ ಗುಡ್ಡೆ, ಗುಡ್ಡೆ ಸಾವುಗಳ ಗುಡ್ಡವೇ ಗೋಚರ. ವಿದ್ಯುನ್ಮಾನ ಮಾಧ್ಯಮಗಳು ಮನಸಿನ ಮೃದುತ್ವ ಕಳಕೊಂಡಿವೆ. ಅಲ್ಲಿ ಸುದ್ದಿ ವಾಚಿಸುತ್ತಿಲ್ಲ. ಮರಣಮೃದಂಗ, ಸಾವಿನ ರಣಕೇಕೆ ಇತ್ಯಾದಿ ಅರಚಾಟ ಕಿರುಚಾಟಗಳ ಮೇಲೋಗರ.
ಜತೆಯಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿಗಳು ಸೇರಿದಂತೆ ನಮ್ಮ ಸಾಂಸ್ಕೃತಿಕ ಬಳಗದ ಒಡನಾಟದಲ್ಲಿರುವ ಸಾಹಿತಿ, ಕಲಾವಿದರು, ಹೋರಾಟಗಾರರ ಸಾಲು ಸಾಲು ಸಾವುಗಳು. ಸಾವಿನ ಸಾನಿಧ್ಯದಲ್ಲಿರುವವರ ಸುದ್ದಿಗಳು. ಹೀಗೆ ಸಾಂಸ್ಕೃತಿಕ ಲೋಕದ ಗಣ್ಯರ ಸಾವಿಲ್ಲದ ದಿನಗಳೇ ಇಲ್ಲ ಎನ್ನುವಂತಾಗಿದೆ…
ನಾಳೆ ಯಾರ ಸರದಿಯೋ !..?
ಸಾವಿನ ಸರದಿಯಲ್ಲಿ ಕಾಯುತ್ತಾ ನಿಂತಂತಹ ನಡುಕ ಹುಟ್ಟಿಸುವ ದುಗುಡ, ದುಮ್ಮಾನ. ಇಂತಹ ಕ್ರೂರ ಅನುಭವ ಬಹುತೇಕ ನಮ್ಮೆಲ್ಲರನ್ನೂ ಕಾಡುತ್ತಿರುವುದು ಸುಳ್ಳಲ್ಲ. ಅರೇ! ಇದೇನಿದು ಸಂಸ್ಕೃತಿ ಚಿಂತಕರು, ವಿಚಾರವಾದಿಗಳು ಈ ಪರಿಯಾಗಿ ಸಾವಿಗಂಜುವುದೇ!? ಅಂತ ಅನಿಸಬಹುದು. ಹಾಗೆ ಅಂಜಿ ಅಡಗಿ ಕುಳಿತರೇನು ಸಾವು ದೂರ ಸರಿಯುವುದುಂಟೇ ? ಇಲ್ಲವೇ ಇಲ್ಲ ಅದು ಯಾರನ್ನೂ ಬಿಡುವುದಿಲ್ಲ. ಸಾವಿಲ್ಲದವರ ಮನೆಯ ಸಾಸಿವೆ ತಗೊಂಬಾ ಎಂಬ ಬುದ್ಧನ ಮಾತು, ಜಾತಸ್ಯ ಮರಣಂ ಧ್ರುವಂ ಎಂಬ ಬಸವಣ್ಣನ ವಚನ ಉಲ್ಲೇಖಗಳು ವರ್ತಮಾನದ ಎಲ್ಲರನ್ನು ಕಾಡುತ್ತಿವೆ. ಭೂಮಂಡಲವೇ ಮಸಣವಾಗುತ್ತಿರುವ ಸುಡು ಸುಡುವ ಕಡು ವಾಸ್ತವ.
ಸಾವು ಬಂದರೇನು ಸಿಟ್ಟಿಲ್ಲ//
ಅದು ಮಹಾ ಮಹಾಂತರನೇ ಬಿಟ್ಟಿಲ್ಲ// ಎಂಬ ತತ್ವಪದ ನೆರವಿಗಿದ್ದರೂ
*ಎಂಥದಾದರೂ ಸಾವು ಬರಲಿ*.
*ಆದರೆ ಕೊರೊನಾ ಬಾರದಿರಲಿ*.
ಎಂಬ *ಆಫ್ಷನ್* ಗೆ ಮೊರೆ ಹೋಗುವಂತಾಗಿದೆ. ಸೋಜಿಗವೆಂದರೆ ದುಗುಡ ತುಂಬಿದ ಈ ದುರಿತ ಕಾಲದಲ್ಲೇ ಬಹಳಷ್ಟು ಬರಹಗಳು, ವೆಬಿನಾರ್ ಚಿಂತನೆಗಳು, ಆನ್ ಲೈನ್ ಎಂಬ ಮಹಾಬಯಲು ಆಲಯದಲ್ಲಿ ಅನೇಕಾನೇಕ ಸಾಂಸ್ಕೃತಿಕ ಚಟುವಟಿಕೆಗಳು ಬೆಳಕು ಕಾಣುತ್ತಿವೆ.
*ಆದರೆ ಆ ಚಟುವಟಿಕೆಗಳಲ್ಲಿ ಜೀವಪರ ತಾಜಾತನಗಳಾಗಲಿ, ವರ್ತಮಾನದ ಬಿಕ್ಕಟ್ಟುಗಳಿಗೆ, ಸಾಂಸ್ಕೃತಿಕ ತಲ್ಲಣಗಳಿಗೆ ಪರಿಹಾರದ ಸುಳಿವುಗಳಿರುತ್ತಿಲ್ಲ*. ಬದುಕಿ ಉಳಿಯುವುದೇ ದುಸ್ತರವಾಗಿರುವಾಗ ನಿಮ್ಮ ಸಂಸ್ಕೃತಿ ಚಿಂತನೆಗಳು ಯಾವನಿಗೆ ಬೇಕಾಗಿದೆ.? ” *ಹೇಳು ಕೊರೊನಾ ನಿರ್ನಾಮ ಆಗಲು ನಿಮ್ಮ ಬಳಿ ಅದೇನು ಪರಿಹಾರಗಳಿವೆ ಅದನ್ನು ಉಸುರು* ” ಎಂದು ಗೆಳೆಯನೊಬ್ಬ ಏರುಧ್ವನಿಯಲ್ಲೇ ನನ್ನನ್ನು ಗದರಿಕೊಂಡ.
*ಹೌದು ನಮ್ಮ ಸಾಂಸ್ಕೃತಿಕ ಚಿಂತನೆಗಳು ಅಂದರೆ ಹೊಟ್ಟೆ ತುಂಬಿದವರು ಹೇಳುವ ಉಪದೇಶಗಳೋ, ಇಲ್ಲವೇ ತಮ್ಮ ಬೌದ್ದಿಕ ಪಾಂಡಿತ್ಯ ಪ್ರದರ್ಶನದ ಪ್ರವಚನಗಳೇ.?. ಸಾಮಾನ್ಯ ಮನುಷ್ಯರು ಸೇರಿದಂತೆ ಪಂಡಿತರಿಗೆ ಸಾಹಿತ್ಯ, ಕಲೆಗಳ ಆಕರ ವಸ್ತುಗಳಂತೆ ಅವು ಹಾಗೆ ಬಳಕೆ ಆದುದೇ ಅಧಿಕ. ಕೇವಲ ಮಾತುಕತೆಗಳಿಂದಲೇ ದೊಡ್ಡವರಾದವರ ಮಾತುಕತೆಗಳು ಈಗ ಬೇಡ*.
ಒಂದು ಮಾತು ಮಾತ್ರ ಖರೇ, ಅದೇನೆಂದರೆ : ಸಾವಿಗಂಜದವರೂ ಪ್ರಾಣಹಂತಕ ಕೊರೊನಾ ವೈರಾಣುವಿಗೆ ಬರೋಬ್ಬರಿ ಹೆದರಿದ್ದಾರೆ. ಹೀಗೆ ಕೊರೊನಾಕ್ಕೆ ಹೆದರಿ, ಹೆದರಿ ಸಮುದಾಯದ ಖಿನ್ನತೆಯ ದರಪ್ರಮಾಣ ಯದ್ವಾತದ್ವಾ ಏರಿಕೆಯಾಗಿದೆ. *ಸಮೀಕ್ಷೆಯೊಂದರ ಪ್ರಕಾರ ಶೇಕಡಾ ಎಪ್ಪತ್ತಕ್ಕೂ ಹೆಚ್ಚುಮಂದಿ ಮಧ್ಯಮ ವರ್ಗದವರು ಕೊರೊನಾ ಭೀತಿರೋಗದ ಖಿನ್ನತೆಯಿಂದ ನರಳುತ್ತಿದ್ದಾರೆ*.
ಯಾವುದೇ ಮನುಷ್ಯರ ಸಾವಿನ ಸುದ್ದಿ ಕೇಳುತ್ತಿದ್ದಂತೆಯೇ ತತಕ್ಷಣ ನೆನಪಿಗೆ ಬರುವುದೇ ಕೊವಿಡ್. ” ತೀರಿಹೋದ ಅವರಿಗೆ ಬಂದುದು ಕೊವಿಡ್ ಅಲ್ಲರಿ, ಅದು ಹಾರ್ಟ್ ಅಟ್ಯಾಕ್, ಸಹಜ ಸಾವು ” ಅಂತ ಹೇಳಿದರೂ ಕೇಳುಗರಿಗೆ ನಂಬುಗೆಯೇ ಬರುವುದಿಲ್ಲ. ಕೊವಿಡ್ ಎಂಬ ಕ್ರೂರ ಕಳಂಕದ ಅಪರಾಧಪ್ರಜ್ಞೆ ಭಲೇ ಭಲೇ ವಿದ್ಯಾವಂತರನ್ನೇ ಗಾಢವಾಗಿ ಕಾಡುತ್ತಿದೆ.
ಪತ್ರಿಕೆ, ಟೀವಿ, ಮೊಬೈಲುಗಳ ತುಂಬೆಲ್ಲಾ ದಿನನಿತ್ಯವೂ ಸಾವಿನ ಸುದ್ದಿಗಳದೇ ಸುಗ್ಗಿ. ವಾಟ್ಸ್ಯಾಪ್, ಮುಖಹೊತ್ತಿಗೆಗಳನ್ನು ಓಪನ್ ಮಾಡಲು ಧೈರ್ಯಬಾರದು. ಅಬ್ಬಾ! ಇವತ್ತು ಯಾರು ನಮ್ಮನ್ನು ಅಗಲಿದ್ದಾರೆಂಬ ಭಯಾನಕ ಹೆದರಿಕೆ. ತೀರಿಹೋದ ಸಾಹಿತಿ, ಕಲಾವಿದರ ಕೃತಿಗಳು ಅವರ ಬದುಕಿನ ಸಾಂಸ್ಕೃತಿಕ ಒಡನಾಟಗಳು, ಅವರ ಸಕ್ರಿಯ ಚಟುವಟಿಕೆಗಳು ನನ್ನಂಥ ಅನೇಕರನ್ನು ಆರ್ದ್ರವಾಗಿ ಕಾಡುವುದು ಸಹಜ. ಅದೆಲ್ಲ ಭಾವನಾತ್ಮಕ ನಡವಳಿಕೆ, ಪುಕ್ಕಲು ಮನಸ್ಥಿತಿ ಮುಂತಾಗಿ ಹಗುರ ನಜರಿನಿಂದ ಯಾರೂ ಪರಿಗಣಿಸಲು ಬಾರದು, ಅದು ತರವಲ್ಲ.
ಹೀಗೆ ಕಾಡುತ್ತಲೇ ಇರುವ ಕಾಡಾಟದ ಹಿಂದೆ ಮನುಷ್ಯರ ದೈಹಿಕ ಸಾವಿಗೆ ಕಾರಣವಾದ ಪೈಶಾಚಿಕ ಗಾತ್ರದ ಪ್ಯಾಂಡಮಿಕ್ ಹುಡುಕಾಟ. ಈ ಜಿಜ್ಞಾಸೆ ಅತಿರೇಕಗೊಂಡು ದುಃಸ್ವಪ್ನದಂತೆ ನಮಗೆ ನಾವೇ ಕಂಡುಕೊಳ್ಳುವ ಸತ್ಯವೆಂದರೆ ಎಲ್ಲ ಸಾವುಗಳ ಹಿಂದಿನ ಕಾರಣವೇ ಕೊರೊನಾ. ಅದೀಗ ಜಾಗತಿಕ ಮಟ್ಟದಲ್ಲಿ ಮೃತ್ಯುವಿನ ಪೆಡಂಭೂತವಾಗಿದೆ. ಹೌದು ಸಾವಿಗೆ ಪರ್ಯಾಯ ಪದವೇ ಮತ್ತೆ ಮತ್ತೆ ಕೊರೊನಾ.. ಕೊರೊನಾ.. ಮಾತ್ರ ಎನ್ನುವಂತಾಗಿದೆ.
ಹೀಗೆ ಎಲ್ಲ ಸಾವುಗಳ ಹಿಂದೆ ಕೊರೊನಾ ಡೊಕ್ಕು ಹೊಡೆದಿರುತ್ತದೆಂಬ ಅಚಲ ನಂಬಿಕೆಯು ಸಾರ್ವತ್ರಿಕವಾಗತೊಡಗಿದೆ. ಅಕ್ಷರಶಃ ಅಕ್ಷರಸ್ಥ ಮತ್ತು ವಿದ್ಯುನ್ಮಾನ ಲೋಕದ ಒಡನಾಟವಿರುವ ಎಲ್ಲರಲ್ಲಿ ನೂರಕ್ಕೆ ನೂರರಷ್ಟು ಇಂತಹ ನಂಬುಗೆ ಮನೆ ಮಾಡಿದೆ. ಅದೇನೆಂದರೆ ನಿಸ್ಸಂದೇಹ ಎಂಬಂತೆ ಜಗತ್ ಪ್ರಸಿದ್ದ ಜಡ್ಡು ಎಂಬ ಖ್ಯಾತಿ ಗಳಿಸಿರುವ ಕೊರೊನವೇ ಎಲ್ಲ ಸಾವುಗಳ ಮೂಲ. ಅದೀಗ ಹಳ್ಳಿ ಹಳ್ಳಿಗಳಲ್ಲಿಯೂ ರುದ್ರನರ್ತನ ಶುರುಮಾಡಿದೆ.
ಕೊರೊನಾ ವೈರಾಣುಗಿಂತ ಅದರ ಸುತ್ತ ಹೆಣೆದು ಸ್ಥಾಯೀಗೊಳಿಸಿದ ಥರಾವರಿ ಹುನ್ನಾರದ ಕಥಾಕಥಿತ ಭಯಾನಕ ವಿದ್ಯಮಾನಗಳೇ ಮರಣವನ್ನು ತರುತ್ತಿವೆ. ಇಂತಹ ಸಾವುಗಳ ಶವಸಂಸ್ಕಾರ ಮತ್ತೊಂದು ಘನಘೋರ ಎಪಿಸೋಡ್. ಟೀವಿ ಕ್ಯಾಮೆರಾಗಳು ಆಸ್ಪತ್ರೆ ಮತ್ತು ರುದ್ರಭೂಮಿಯಿಂದಲೇ ಭೀಕರ ಪ್ರಸಾರಕ್ಕಿಳಿದಿವೆ. ಎಂಥವರಿಗೂ ಸ್ಮಶಾನ ಮತ್ತು ದವಾಖಾನೆಗಳೆಂದರೆ ಸಾವಿನ ಸಂತೆಯಲಿ ನಿಂತ ಘೋರ ಅನುಭವ. ಕ್ರೂರಿ ಕೊರೊನಾದ ಈ ಕಾಲಘಟ್ಟದಲ್ಲಿ ವಯೋಸಹಜ ಸಾವಿಗೂ ಸಿಗಬೇಕಾದ ಗೌರವ ಖಂಡಿತಾ ಸಿಗುತ್ತಿಲ್ಲ.
ಎಲ್ಲಾ ಸಾವುಗಳನ್ನು ಕೊರೊನಾ ಕನ್ನಡಕದ ಮೂಲಕ ನೋಡುವಂತಾಗಿ ಸತ್ತವರ ಮನೆಯ ಸನಿಹ ಸುಳಿಯಲು ಸಾಧ್ಯವಾಗುತ್ತಿಲ್ಲ. ಹೀಗೆ ನಾವು ಹಾಕಿಕೊಂಡಿರುವ ಚಾಳೀಸಿನ ಮೇಲೆ ಬೃಹತ್ ನಂಬುಗೆ ಬರುವಂತೆ ಮಾಡಿದ್ದು ವಿದ್ಯುನ್ಮಾನ ಮಾಧ್ಯಮಗಳು. ಮುಂಬಯಿನಂತಹ ಮಹಾನಗರಗಳಲ್ಲಿ ಕೊರೊನಾ ಪೀಡಿತರ ಸಾವುಗಳ ಕುಟುಂಬದವರೇ ಶವವನ್ನು ಪಡೆಯದೇ ಅನಾಥ ಶವಗಳಂತೆ ಮಹಾನಗರ ಪಾಲಿಕೆಗೆ ಶವ ಒಪ್ಪಿಸಿ ಬಿಡುವ ಅಮಾನವೀಯ ಸ್ಥಿತಿ ನಿರ್ಮಾಣಗೊಂಡಿದೆ.
ನಮ್ಮಲ್ಲಿಯೂ ಪರಿಸ್ಥಿತಿ ಅಷ್ಟೇನು ಭಿನ್ನವಾಗಿಲ್ಲ. ಮಹಾನಗರ ಪಾಲಿಕೆಗಳು ನೆರವೇರಿಸುವ ಕೊವಿಡ್ ಶವಸಂಸ್ಕಾರ ಹೇಗಿರುತ್ತದೆಂಬುದನ್ನು ಮಾಧ್ಯಮಗಳಲ್ಲಿ ನೋಡಿದ್ದೇವೆ. ಅಸಲಿಗೆ ಅಲ್ಲಿ ಶವಸಂಸ್ಕಾರದ ತರಬೇತಿ ಪಡೆದ ಸಿಬ್ಬಂದಿ ಇರುವುದಿಲ್ಲ. ಮನುಷ್ಯರಿಗೆ ಬದುಕಿದ್ದಾಗಲೂ ಗೌರವ ಸಿಗದ ಸನ್ನಿವೇಶದ ಈ ಕಾಲಮಾನದಲ್ಲಿ ಸತ್ತಾಗಲಾದರೂ ಕಿಂಚಿತ್ ಮಾನ, ಗೌರವ ನೀಡುವುದು ಬೇಡವೇ.?
ನಿದರ್ಶನಗಳೆಂಬಂತೆ ಕಳೆದ ವರ್ಷದ ಬಳ್ಳಾರಿ, ಚನ್ನಗಿರಿ, ಯಾದಗಿರಿ ಘಟನೆಗಳು ನಮ್ಮೆದುರಿಗಿವೆ. ಬಳ್ಳಾರಿಯಲ್ಲಂತೂ ಒಂಬತ್ತು ಹೆಣಗಳನ್ನು ಸತ್ತ ನಾಯಿ, ಹಂದಿಗಳನ್ನು ಎಳಕೊಂಡು ಬರುವಂತೆ ದರದರನೆ ಎಳಕೊಂಡು ಬಂದು ಎಲ್ಲಾ ಒಂಬತ್ತು ಹೆಣಗಳನ್ನು ಒಂದೇ ಗುಣಿಯಲ್ಲಿ ಎಸೆದು ಬಿಡುವ ದೃಶ್ಯಗಳನ್ನು ನೋಡುತ್ತಿದ್ದರೆ ಕೊರೊನಾ ಎಂತಹ ರಣಭೀಕರ ಭಯ ಹುಟ್ಟಿಸಿದೆಯೆಂಬುದು ತಿಳಿಯುತ್ತದೆ.
ಅದೊಂದು ಕಡೆಯಾದರೆ, ಕೊರೊನಾದಿಂದ ತೀರಿಹೋದ ಕೇಂದ್ರದ ಮಂತ್ರಿಯೊಬ್ಬರ ಶವಸಂಸ್ಕಾರ ಪ್ರಕ್ರಿಯೆ ಮಿತಿ ಮೀರಿದ ವೈಜ್ಞಾನಿಕ ಮಾದರಿಗಳನ್ನು ಅನುಸರಿಸಿ ಅದೂ ಕೂಡಾ ಮತ್ತೊಂದು ಮಾದರಿಯ ಭಯಾನಕ ವಾತಾವರಣವನ್ನೇ ಸೃಷ್ಟಿಸಿತು.
ಸಾರ್ವತ್ರಿಕವಾಗಿ ಅದೆಂತಹ ಸ್ಥಿತಿ ನಿರ್ಮಾಣವಾಗಿದೆಯೆಂದರೆ, ಖುದ್ದು ಮಗನೇ ತಂದೆ ತಾಯಿ ಹೆಣದ ಮುಖ ನೋಡಲು ಸಿದ್ದನಿಲ್ಲ. ಅಂಥ ಮಗನಿಂದ ಹೆತ್ತವರ ಸಾವಿಗಾಗಿ ದುಃಖಿಸುವ ಮತ್ತು ಶವಸಂಸ್ಕಾರದ ಪ್ರಕ್ರಿಯೆ ದೂರದ ಮಾತೇ. ಇನ್ನು ಕೆಲವುಕಡೆ ಒಡಹುಟ್ಟಿದವರು ತಮ್ಮ ತಮ್ಮ ಮನೆಯವರ ಕೊವಿಡ್ ಹೆಣಗಳನ್ನು ಖುದ್ದು ನಿಂತು ಶವಸಂಸ್ಕಾರಕ್ಕೆ ಸಿದ್ಧರಿಲ್ಲ. ಒಂದು ಅಪ್ರಸ್ತುತವಾದ ಘೋರಭೀತಿ ಎಲ್ಲರಲ್ಲೂ ಮನೆ ಮಾಡಿದೆ.
ಹೀಗೆ ಮನುಷ್ಯ ಸಂಬಂಧ, ಪ್ರೀತಿ, ಅಂತಃಕರಣಗಳು ನಿರ್ನಾಮಗೊಳ್ಳುತ್ತಿವೆ. ಒಟ್ಟು ಮಾನವ ಸಮಾಜ ಮಾನವೀಯತೆ ಕಳೆದುಕೊಳ್ಳುವ ಹೆದ್ದಾರಿಯಲ್ಲಿ ನಿಂತಿದೆ. ಅಂತಹದ್ದೊಂದು ಕ್ರೌರ್ಯದ ಬೃಹತ್ ಭೀತಿ ದೇಶದ ತುಂಬೆಲ್ಲ ತುಂಬಿ ತುಳುಕುತ್ತಿದೆ. ಕ್ರೂರಸಾವು ಮತ್ತು ಕೊವಿಡ್ ಒಂದೇ ನಾಣ್ಯದ ಎರಡು ಮುಖಗಳಂತೆ ಲೋಕಮಾನಸದ ತುಂಬೆಲ್ಲ ತುಂಬಿಕೊಂಡಿವೆ.
ಇದೆಲ್ಲ ಗಮನಿಸುತ್ತಿದ್ದರೆ ಕರಾಳ ಕೊರೊನಾ ಸಂವೇದನಾಶೀಲ ಜೀವಸಂಬಂಧಗಳನ್ನೇ ಛಿದ್ರ ವಿಛಿದ್ರಗೊಳಿಸಿದ್ದು ಖರೇ. ತಂದೆ, ತಾಯಿ, ಮಕ್ಕಳ ನಡುವಿನ ಜೀವ ಸಂಬಂಧಗಳನ್ನೇ ಕೊಂದು ಹಾಕಿದೆ. ಇಂತಹ ಘನಂಧಾರಿ ಕಾರ್ಯದಲ್ಲಿ ತಿಂಗಳುಗಟ್ಟಲೇ ವಿದ್ಯುನ್ಮಾನ ಮಾಧ್ಯಮಗಳು ಕೊರೊನಾ ಕುರಿತು ರಣಭಯಂಕರ ಭಯ ಹುಟ್ಟಿಸಿ ಈಗೀಗ ಹೈರಾಣಗೊಂಡಿವೆ. ಮತ್ತೊಂದೆಡೆ ಹೃದಯ ಕರುಳು ಹಿಂಡುವ ಮನುಷ್ಯ ಸಂಬಂಧಗಳ ಹಲವಾರು ಘಟನೆಗಳು. ಅಂತಹ ಘಟನೆಗಳ ಹಿಂದೆಯೂ ಕೊರೊನಾದ ಕರಾಳತೆ.
*ಇದಕ್ಕೆ ಪರಿಹಾರವೇನು*??
ಕೊವಿಡ್ ಕೇಂದ್ರಗಳು ಮತ್ತು ಜಿಲ್ಲಾ ಮಟ್ಟದ ಎಲ್ಲಾ ಆಸ್ಪತ್ರೆಗಳಲ್ಲಿ ಮುಖ್ಯವಾಗಿ ಕೂಡಲೇ ಬೇಕಿರುವುದು ಆಪ್ತಸಮಾಲೋಚನೆಗಳ ಘಟಕಗಳು. ಅಲ್ಲಿ ಪರಿಣಿತ ಸೂಕ್ತ ಸಿಬ್ಬಂದಿಗಳಿರಬೇಕು. ಎಷ್ಟೋಮಂದಿ ಭಯಭೀತರಾಗಿ ಕೊರೊನಾ ಶಂಕೆಯಿಂದಾಗಿ ಆತ್ಮಹತ್ಯೆಯ ಮೊರೆ ಹೋಗಿರುವುದುಂಟು. ಇಂಥವರಿಗೆ ಸಕಾಲದಲ್ಲಿ ಆಪ್ತಸಮಾಲೋಚಕರಿಂದ ಸೂಕ್ತ ಕೌನ್ಸೆಲಿಂಗ್ ದೊರಕಿದ್ದರೆ ಬದುಕುಳಿಯುವ ಸಾಧ್ಯತೆಗಳಿದ್ದವು.
ಕೊರೊನಾಕ್ಕೆ ಚಿಕಿತ್ಸೆಯೇ ಇಲ್ಲವೆಂದಾದಲ್ಲಿ ಹೆಚ್ಚುಪಾಲು ಆಪ್ತ ಸಮಾಲೋಚನೆಯೇ ಸರಿಯಾದ ಮದ್ದು. ಕೊವಿಡ್ ಪರೀಕ್ಷೆಯ ನಂತರದ ಕೋವಿಡ್ ರೋಗಿಯ ಮನೋಸ್ಥೈರ್ಯ ಪೂರ್ಣ ಕುಸಿದು ಹೋಗಿ ಅವನು ತನಗೆ ಬಂದ ರೋಗ ನಿವಾರಿಸಿಕೊಳ್ಳಲು ಧೈರ್ಯ ತುಂಬುವ ಕೆಲಸಗಳು ಆಗುತ್ತಲೇ ಇಲ್ಲ. ಸರ್ಕಾರದ ಕೋವಿಡ್ ಆಸ್ಪತ್ರೆಗಳ ನರಕಸದೃಶ ಕತೆಗಳನ್ನು ಕುರಿತು ಬರೆಯದಿರುವುದೇ ವಾಸಿ. ಸರಕಾರದ ಯಾವುದೇ ಅಂಕುಶಗಳಿಲ್ಲದ ಖಾಸಗಿ ಆಸ್ಪತ್ರೆಗಳು ಮನುಷ್ಯರ ಜೀವ, ಚರ್ಮ, ಜೇಬು ಸುಲಿಯುವ ಕಾರ್ಖಾನೆಗಳಾಗಿವೆ.
ಇಂತಹ ಹತ್ತು ಹಲವಾರು ಘೋರ ಕಾರಣಗಳ ಅರಿವಿನಿಂದಾಗಿ ಬಹಳಷ್ಟು ಜನ ಕೊರೊನಾ ಕುರಿತು ಪ್ಯಾನಿಕ್ ಆಗಿಯೇ ರೋಗನಿರೋಧಕ ಶಕ್ತಿ ಕಳೆದುಕೊಳ್ಳುತ್ತಾರೆ. ಅಂಥವರೇ ಅಧಿಕ ಸಂಖ್ಯೆಯಲ್ಲಿರುವುದರಿಂದ ಆಪ್ತ ಸಮಾಲೋಚನೆಗೆ ಅಧಿಕ ಆದ್ಯತೆ ನೀಡಬೇಕಿದೆ. ಕೊವಿಡ್ ಪಾಜಿಟಿವ್ ಅಂತ ಗೊತ್ತಾದ ಕೂಡಲೇ ವೈದ್ಯಕೀಯ ಲೋಕದ ಮೊದಲ ಆದ್ಯತೆ ಕ್ವಾರಂಟೈನ್. ಏಕಾಂಗಿಯಾಗಿ ನರಕಕ್ಕೆ ತಳ್ಳುವ ಮುನ್ನ ಕೊವಿಡ್ ಪೀಡಿತರಿಗೆ ಅತ್ಯಗತ್ಯವಾಗಿ ಬೇಕಿರುವುದು ಸೂಕ್ತ ಕೌನ್ಸೆಲಿಂಗ್.
ಮಾಸ್ಕ್ ಬಿಸಾಕಿ ನಿರ್ಭಯವಾಗಿ ಜನರ ನಡುವೆ ಸಹಜವಾಗಿ ಓಡಾಡುವ, ಮೊದಲಿನಂತೆ ಸಮುದಾಯದಲ್ಲಿ ನಿರ್ಭೀತಿಯಿಂದ ಬೆರೆತು ಬಾಳುವ ಸಹಭಾಗಿತ್ವದ ವಾತಾವರಣ ಇನ್ನುಮುಂದೆ ಸಾಧ್ಯವೇ ಇಲ್ಲವೇ? ಸಾಯೋಆಟದ ಸಂತೆಯಲ್ಲಿ ಬದುಕುವುದು ಸಾಧ್ಯವೇ.? ಕೊವಿಡ್ ಹತ್ತೊಂಬತ್ತರ ದುರಿತಕಾಲ ಕೊನೆಗೊಂಡು ಮತ್ತೆ ಮರಳಿ ಹಿಂದಿನ ಆ ದಿನಗಳನ್ನು ಕಾಣಬಲ್ಲೆವೇ ? ಏಕೆಂದರೆ ಒಬ್ಬೊಬ್ಬರು ಒಂದೊಂದು ತೆರನಾಗಿ ವಿಶ್ಲೇಷಣೆ ಮಾಡುತ್ತಿದ್ದಾರೆ. ಮೂರನೇ ಅಲೆಯ ಸುದ್ದಿಗಳು ಮುಂಚಿತವಾಗಿಯೇ ಸಾವಿನ ಭಯ ಹುಟ್ಟಿಸುತ್ತಿವೆ.
ಮತ್ತೆ ನೆಮ್ಮದಿಯ ದಿನಗಳನ್ನು ಕಾಣುವುದಾದರೆ ಯಾವಾಗ, ಯಾವ ವರ್ಷ, ಯಾವ ತಿಂಗಳ, ಯಾವ ದಿನಗಳಿಂದ ? ಇಂತಹ ಮಣಭಾರದ ಅನೇಕ ಪ್ರಶ್ನೆಗಳಿಗೆ ಸರಕಾರದ ಬಳಿ, ವಿಜ್ಞಾನಿಗಳ ಬಳಿ, ವೈದ್ಯರ ಬಳಿ, ಹೋಗಲಿ ದೇವರಿದ್ದರೆ ದೇವರ ಬಳಿ… ಹೀಗೆ ಯಾರ ಬಳಿಯಲ್ಲಾದರು ಉತ್ತರಗಳಿದ್ದರೆ ಸಾರ್ವಜನಿಕವಾಗಿ ತಿಳಿಸಿ ಪುಣ್ಯ ಕಟ್ಟಿಕೊಳ್ಳಲಿ.
*ಮಲ್ಲಿಕಾರ್ಜುನ ಕಡಕೋಳ
ನಿತ್ಯವೂ ಸಾವುಗಳ ಸಂತೆಯಲಿ ನಿಂತು, ಬದುಕ ಪ್ರೀತಿಯ ಧೇನಿಸುವುದೆಂದರೆ …….
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಮಲ್ಲಿಕಾರ್ಜುನ ಕಡಕೋಳ
ಇವರ ಹುಟ್ಟೂರು ಕಲಬುರ್ಗಿ ಜಿಲ್ಲೆಯ ಕಡಕೋಳ. ಆರೋಗ್ಯ ಇಲಾಖೆಯಲ್ಲಿ, ಬೋಧಕರಾಗಿ, ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪ್ರಕಟಿಸಿದ ಸಾಹಿತ್ಯ ಕೃತಿಗಳು :
ಫಲ್ಗುಣಿಯಲಿ ಕೇಳಿಬಂದ ರುದ್ರವೀಣೆ (ವೈಚಾರಿಕ ಲೇಖನಗಳು)
ಅವಳ ಸನ್ನಿಧಿಯಲಿ...(ಅಂಕಣ ಬರಹ)
ರಂಗ ಸುನೇರಿ ( ವಿಮರ್ಶಾ ಸಂಕಲನ)
ದ್ರುಪದ (ಶಾಸ್ತ್ರೀಯ ಸಂಗೀತ ಕೃತಿ )
ಕಡಕೋಳ ಮಡಿವಾಳಪ್ಪನವರ ತತ್ವಜ್ಞಾನ ಪದಗಳು - ಎರಡು ಆವೃತ್ತಿಗಳು (ಸಂಪಾದಿತ ಕೃತಿಗಳು)
ಜೀವನ್ಮುಖಿ (ಸಂ : ಅಭಿನಂದನ ಗ್ರಂಥ)
ರಂಗ ವಿಹಂಗಮ (ಕ. ನಾ. ಅಕಾಡೆಮಿ ಪ್ರಕಟಣೆ)
ದಾವಣಗೆರೆ ಜಿಲ್ಲೆ ರಂಗಭೂಮಿ (ಕ. ನಾ. ಅಕಾಡೆಮಿ ಪ್ರಕಟಣೆ)
ಕಂಚಿಕೇರಿ ಶಿವಣ್ಣ (ಜೀವನ ಚರಿತ್ರೆ - ಕ. ನಾ. ಅಕಾಡೆಮಿ ಪ್ರಕಟಣೆ)
ರಂಗ ಬಾಸಿಂಗ (ಡಾ. ರಾಜಕುಮಾರ ಬಿಡುಗಡೆ ಮಾಡಿದ ಕೃತಿ)
ರಂಗ ಕಂಕಣ (ಸಂಪಾದಿತ ಕೃತಿ)
ರಂಗ ಮಲ್ಲಿಗೆ (ಕ. ನಾ. ಅಕಾಡೆಮಿ ಪ್ರಕಟಣೆ)
ಲಾಸ್ಟ್ ಬೆಲ್ (ಮಾನವಿಕ ಕೃತಿ)
ತೆನೆ ತೇರು (ದಾವಣಗೆರೆ ಜಿಲ್ಲಾಡಳಿತ ಪ್ರಕಟಣೆ)
ಕಾಯಕ (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ನೌಕರ ಬಂಧು (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ಸಂವೇದನೆ (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ಯಡ್ರಾಮಿ ಸೀಮೆ ಕಥನಗಳು (ಜಿಂದಾ ಮಿಸಾಲ್ ಕಹಾನಿ)
ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳು ಏರ್ಪಡಿಸಿದ ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ಕಡೆಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಮೆಚ್ಚುಗೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ಪ್ರಬಂಧ ಮಂಡನೆ.
ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಸುಧಾ, ತರಂಗ, ತುಷಾರ, ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರ್, ಕರ್ಮವೀರ, ಅನ್ವೇಷಣೆ, ಸಂಕ್ರಮಣ... ಮೊದಲಾದ ಪತ್ರಿಕೆಗಳಲ್ಲಿ ಕತೆ, ಕವನ, ಸಂದರ್ಶನ, ಲೇಖನಗಳು ಪ್ರಕಟ. ಕನ್ನಡಪ್ರಭ, ತುಷಾರಗಳಿಗೆ ಆಮಂತ್ರಿತ ಕತೆ, ಲೇಖನಗಳ ಪ್ರಕಟಣೆ. ತುಷಾರದಲ್ಲಿ ಈಗ್ಗೆ 35 ವರ್ಷಗಳಷ್ಟು ಹಿಂದೆ ಪ್ರಕಟವಾದ ನನ್ನ ಕತೆಯೊಂದರ ಕುರಿತು ಐದು ತಿಂಗಳ ಕಾಲ ಚರ್ಚೆಯಾಗಿ ಹೆಸರಾಂತ ಕತೆಗಾರ ಡಾ. ಶಾಂತಿನಾಥ ದೇಸಾಯಿ ಅವರು ಚರ್ಚೆಯಲ್ಲಿ ಪಾಲ್ಗೊಂಡು ಅಪಾರ ಮೆಚ್ಚುಗೆ ತೋರಿದ್ದರು.
ಕೆಂಡ ಸಂಪಿಗೆ ಬ್ಲಾಗ್ ಹಾಗೂ ಜನತಾವಾಣಿ, ಪತ್ರಿಕೆಗಳಿಗೆ ನಾಲ್ಕೂವರೆ ವರ್ಷಕಾಲ ಅಂಕಣ ಬರಹಗಳ ಪ್ರಕಟನೆ.
ಪ್ರಶಸ್ತಿ, ಪುರಸ್ಕಾರ ಗಳು :
ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ
ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕೈವಾರ ನಾರಾಯಣ ತಾತ ಪ್ರಶಸ್ತಿ
ಮೈಸೂರಲ್ಲಿ ಜರುಗಿದ 83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ. ...ಇನ್ನೂ ಅನೇಕ ಪ್ರಶಸ್ತಿಗಳು.
ಯಡ್ರಾಮಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ - 2019
ಎರಡು ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿ "ಬಾ ಅತಿಥಿ" ಯಂತಹ ಅಪರೂಪದ ಕಾರ್ಯಕ್ರಮ ನಡೆಸುವ ಮೂಲಕ ರಂಗ ಸಂಸ್ಕೃತಿಗೆ ಹೊಸ ಆಯಾಮ ದಕ್ಕಿಸಿದ್ದಾರೆ. ಕರ್ನಾಟಕ ರಂಗ ಸಮಾಜ ನಿಕಟಪೂರ್ವ ಸದಸ್ಯ.
ಇವರ ಬದುಕು ಮತ್ತು ಸಾಧನೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೂರದರ್ಶನ ಸಾಕ್ಷ್ಯಚಿತ್ರ ತಯಾರಿಸಿವೆ. ಕುವೆಂಪು ವಿ.ವಿ.ಯ ಶಶಿಕುಮಾರ್ ಎಂಬುವರು ಇವರ ಸಾಧನೆಗಳ ಕುರಿತು ಎಂ.ಫಿಲ್. ಮಾಡಿದ್ದಾರೆ.
All Posts
1 thought on “ನಿತ್ಯವೂ ಸಾವುಗಳ ಸಂತೆಯಲಿ ನಿಂತು, ಬದುಕ ಪ್ರೀತಿಯ ಧೇನಿಸುವುದೆಂದರೆ …….”
ವಾಸ್ತವವನ್ನು ಚೆನ್ನಾಗಿ ವಿವರಣೆ ಮಾಡಿದ್ದೀರಿ🙏
ಸೂಕ್ತ ಮಾರ್ಗದರ್ಶನ,ಕೌನ್ಸೆಲಿಂಗ್ ಅಗತ್ಯತೆ ಬಗ್ಗೆ ಹೇಳಿದ್ದೀರಿ,ಅದು ಅವಶ್ಯ ಕೂಡ🙏🙏