ಪುಸ್ತಕ – ವಠಾರ ಮೀಮಾಂಸೆ
ಲಲಿತ ಪ್ರಬಂಧ ಸಂಕಲನ
ಲೇಖಕಿ – ಆರತಿ ಘಟಿಕಾರ್
ತೇಜು ಪ್ರಕಾಶನ, ಬೆಂಗಳೂರು
‘ಮನಸಿನ ಲಹರಿಯನ್ನು ಅಕ್ಷರರೂಪಕ್ಕೆ ಇಳಿಸಿ, ಭಾವಲೋಕವನ್ನು ಅನಾವರಣಗೊಳಿಸಿ’ ಎನ್ನುವಂತೆ ಲಲಿತ ಪ್ರಬಂಧ ಉಳಿದ ಪ್ರಕಾರಗಳಿಗಿಂತ ಭಿನ್ನವಾಗುವುದು ಭಾಷೆ, ಭಾವಗಳ ಲಾಲಿತ್ಯದಿಂದಾಗಿಯೇ. ಲಲಿತ ಪ್ರಬಂಧಗಳನ್ನು ‘ಗದ್ಯದ ಭಾವಗೀತೆ’ ಎಂದು ಕರೆಯುತ್ತಾರೆ. ಭಾವಗೀತೆಗಳು ಭಾವಲೋಕವನ್ನು ತುಂಬಿ ಬಿಡುವ ಸಾಮರ್ಥ್ಯ ಹೊಂದಿರುವಂತೆ ಲಲಿತ ಪ್ರಬಂಧಗಳು ಓದುಗರ ಚಿತ್ತವೃತ್ತಿಯ ಮೇಲೆ ಲಲಿತವಾದ/ಸುಂದರ ಮೋಡಿಯನ್ನು ಹಾಕಬಲ್ಲವು.
‘ವಠಾರ’ ಎನ್ನುವ ಪದವೇ ಮನಸ್ಸಿಗೆ ಹತ್ತಿರ ವಾಗುತ್ತದೆ.. ಆಪ್ತವಾಗುತ್ತದೆ. ವಠಾರದ ಕಷ್ಟ ಸುಖಗಳನ್ನು ಲೇಖಕಿ ಲಘು ಹಾಸ್ಯದ ಮೂಲಕ ಸೊಗಸಾಗಿ ಪ್ರಸ್ತುತ ಪಡಿಸಿದ್ದಾರೆ. ಒಬ್ಬೊಬ್ಬರ ಅನುಭವ ಒಂದೊಂದು ರೀತಿ ಇರಬಹುದು.. ಆದರೆ ಪ್ರತಿಯೊಬ್ಬರೂ ಇಂತಹುದೇ ಹಲವಾರು ಹಾಸ್ಯಮಿಶ್ರಿತ ಅನುಭವಗಳಲ್ಲಿ ಮಿಂದೆದ್ದಿರುತ್ತಾರೆ.. . `ವಠಾರ ಮೀಮಾಂಸೆ’ಯಲ್ಲಿನ ಬರಹಗಳು ಕೆಲವೆಡೆ ನಮ್ಮನ್ನು ನಗೆಗಡಲಲ್ಲಿ ತೇಲಿಸಿದರೆ, ಇನ್ನೂ ಕೆಲವೆಡೆ ಗಂಭೀರ ಚಿಂತನೆಗಳಿಗೆ ಹಚ್ಚುತ್ತವೆ.. ಲೇಖಕಿ ತಮ್ಮ ಬದುಕಿನ ಅನುಭವಗಳನ್ನು ಸರಳವಾಗಿ ಓದುಗರ ಜೊತೆ ಹರಟುತ್ತಾ ಹಂಚಿಕೊಳ್ಳುತ್ತಾರೆ. ಕಿರಿಕಿರಿ, ಕಷ್ಟ ಎನಿಸುವ ಘಟನೆಗಳು ಲೇಖಕಿಯ ಕೈಯಲ್ಲಿ ಹಾಸ್ಯದ ಲೇಪನವನ್ನು ಬಳಿದುಕೊಳ್ಳುತ್ತಾ ಬದುಕನ್ನು ಬೇರೆ ಬೇರೆ ದೃಷ್ಟಿಕೋನದಿಂದಲೂ ನೋಡಬಹುದು ಎನ್ನುವ ಭಾವನೆಯನ್ನು ಹುಟ್ಟು ಹಾಕುತ್ತವೆ.
ಲೇಖಕಿಯೇ ಹೇಳುವಂತೆ ಇಡೀ ಜಗತ್ತೇ ಕೊರೋನಾ ವೈರಸ್ಸಿನ ಕಬಂಧ ಬಾಹುವಿಗೆ ಸಿಕ್ಕಿ ನಲುಗುತ್ತಿರುವ ಹೊತ್ತಿನಲ್ಲಿ ಬಡವ ಬಲ್ಲಿದ ಎನ್ನುವ ಭೇದವಿಲ್ಲದೇ ಎಲ್ಲರೂ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ.. ತಮ್ಮ ಆತ್ಮ ಸ್ಥೈರ್ಯದಿಂದ ಈ ಸಾಂಕ್ರಾಮಿಕ ರೋಗವನ್ನು ಗೆದ್ದು ಬಂದವರು ಮಾನಸಿಕ ದೃಢತೆ, ಅಪಾರ ಜೀವನೋತ್ಸಾಹಕ್ಕೆ ಉದಾಹರಣೆಯಾಗಿ ನಮ್ಮ ಮುಂದೆ ನಿಲ್ಲುತ್ತಾರೆ..ಜೀವನ ಶೈಲಿಯನ್ನೇ ಬದಲಿಸಿದ ಈ ರೋಗದ ವಿರುದ್ಧ ಹೋರಾಡಲು ದೈಹಿಕ ಅಂತರ ಅವಶ್ಯಕವಾದರೂ, ಮಾನಸಿಕ ಅಂತರವನ್ನು ಸೃಷ್ಟಿಸದೇ ಇರಲಿ.. ಕೊರೋನಾ ಬದುಕನ್ನು ಹತ್ತಿಕ್ಕಿರಬಹುದು.. ಸೃಜನಶೀಲತೆಯನ್ನಲ್ಲ ಎನ್ನುವುದಕ್ಕೆ ಲೇಖಕಿಯ ಈ ಕೃತಿಯೇ ಸಾಕ್ಷಿ.. ಬದಲಾದ ಬದುಕಿನಲ್ಲಿ , ಉತ್ಸಾಹ ಕಳೆದುಕೊಳ್ಳದೆ, ಅಂಬೆಗಾಲಿಡುತ್ತಾ ನಡೆಯುವುದನ್ನು ಕಲಿಯುತ್ತಿರುವ ಮಗುವಿನಂತೆ, ಸರಕಾರದ ನಾನಾ ಕಠಿಣ ನಿಯಮಗಳನ್ನು ಪಾಲಿಸುತ್ತಾ, ಹೊಸ ಜೀವನ ಕ್ರಮಕ್ಕೆ ಒಗ್ಗಿಕೊಳ್ಳುತ್ತಿರುವಾಗ ನಡೆಯುವ ಮೋಜಿನ ಪ್ರಸಂಗಗಳು, ಲೇಖಕಿಯ ಸ್ವಂತ ಅನುಭವಗಳು, ಹಳೆಯ ಸಮಸ್ಯೆಗಳು/ಘಟನೆಗಳು ಮೋಜಿನ ಸಂಗತಿಗಳಾಗಿ ಬದಲಾಗುವುದು, ತಮ್ಮದೇ ಸುತ್ತಲಿನ ಸ್ವಾರಸ್ಯಕರ ಪ್ರಸಂಗಗಳು, ತಮ್ಮ ದುಬೈ ಜೀವನದ ಮೆಲುಕುಗಳನ್ನು ಆರತಿಯವರು ಆತ್ಮೀಯವಾಗಿ ನಿರೂಪಿಸುತ್ತಾ ಸಾಗಿದ್ದಾರೆ..
ವಠಾರ ಮೀಮಾಂಸೆ ಒಟ್ಟು ಹದಿನೇಳು ಲೇಖನಗಳ ಗುಚ್ಛವನ್ನು ಹೊಂದಿರುವ ಲಲಿತ ಪ್ರಬಂಧ ಸಂಕಲನ.. ಎಲ್ಲವೂ ಒಂದಕ್ಕಿಂತ ಒಂದು ಸೊಗಸಾಗಿ ಮೂಡಿ ಬಂದಿವೆ..
‘ಗಡ್ಡ ಈಸ್ ಗುಡ್’ , ದಾಡಿ ಮಾಡಿಕೊಳ್ಳಲು ಸೋಮಾರಿಯಾಗಿರುವ ಮಗನ ಶೇವಿಂಗ್ ನ ಸಾಹಸಗಾಥೆ ಓದುಗರನ್ನು ನಗೆಯ ಹಗುರ ಸಿಂಚನದಿಂದ ತೋಯಿಸುತ್ತದೆ.. ಹರೆಯಕ್ಕೆ ಕಾಲಿಡುತ್ತಿರುವ ಮಗ ದುತ್ತನೆ ಎದುರಾಗುವ ಈ ದಾಡಿ ಎನ್ನುವ ಹೊಸ ಭೂತವನ್ನು ನಿವಾರಿಸಲಾಗದೆ, ಅಸಹಾಯಕತೆಯಿಂದ ಗೊಣಗಾಡುವ ಪರಿ ದಾಡಿ ಮತ್ತು ಶೇವಿಂಗ್ ಬ್ಲೇಡ್ ನ ನಡುವಿನ ಸಮರದಂತೆಯೇ ಭಾಸವಾಗುತ್ತದೆ..ಪ್ರತಿ ಬಾರಿಯೂ ದಾಡಿ ಮಾಡಿಕೊಳ್ಳುವಾಗ ನಡೆಯುವ ರಗಳೆಗಳು, ಕೆನ್ನೆಯ ಮೇಲಿಗುವ ಗಾಯಗಳು ಲೇಖಕಿಗೆ ಸಮರ ಗೆದ್ದು ಬಂದ ಯೋಧನನ್ನು ನೆನಪಿಸುತ್ತದೆ.. ದಾಡೀ ಮಾಡಿಕೊಳ್ಳುವ ಕಾಟಕ್ಕೆ ಬೇಸತ್ತು, ಗಡ್ಡದ ಭೂತಕ್ಕೆ ಶರಣಾಗಿ, ಅದನ್ನು ಬಿಯರ್ಡ್ ಫ್ಯಾಶನ್ ಎನ್ನುವ ಮೂಲಕ ಗಡ್ಡ ಈಸ್ ಗುಡ್ ಎನ್ನುವ ಘೋಷಣೆ ಓದುಗರನ್ನು ಸೋಮಾರಿತನವೋ, ಕಿಲಾಡಿತನವೋ ಎನ್ನುವ ಗೊಂದಲಕ್ಕೆ ದೂಡುತ್ತದೆ. ಅಂತೂ ಮಗನ ಗಡ್ಡ ಪುರಾಣ ಗುಡ್ಡದಂತಾಗುವ ಮೊದಲೇ ಲೇಖನವನ್ನು ಟ್ರಿಮ್ ಮಾಡಿದ ಲೇಖಕಿಯ ಜಾಣತನವನ್ನು ಮೆಚ್ಚಲೇಬೇಕು..
ನಾವೆಲ್ಲರೂ ಕೈಯಿಂದ ಕುಟ್ಟುವ, ಅರೆಯುವ ನಾನ್-ಎಲೆಕ್ಟ್ರಾನಿಕ್ ಯಂತ್ರಗಳನ್ನು ಬಿಟ್ಟು, ಸ್ವಿಚ್ ಒತ್ತಿದರೆ ಗಿರ್ ಎನ್ನುತ್ತಾ ತಿರುಗಿ, ಕ್ಷಣಾರ್ಧದಲ್ಲಿ ಕೆಲಸ ಮುಗಿಸಿಕೊಡುವ ಎಲೆಕ್ಟ್ರಾನಿಕ್ ಯಂತ್ರಗಳ ಮಾಯೆಗೆ ಸಿಲುಕಿ ದಶಕಗಳೇ ಕಳೆದಿವೆ..ಇವುಗಳು ಇಂದು ಜೀವನಾವಶ್ಯಕ ವಸ್ತುಗಳಲ್ಲಿ ಒಂದಾಗಿದೆ.. ಒಂದು ದಿನ , ಅದರಲ್ಲೂ ಸ್ಕೂಲ್ ಕಾಲೇಜು ಎನ್ನುವ ಬೆಳಗಿನ ಗಡಿಬಿಡಿಯಲ್ಲಿ ಈ ಮಷೀನ್ ಗಳು ಕೈಕೊಟ್ಟರೆ ಹೇಗಿರಬಹುದು ಎನ್ನುವ ಅನುಭವವೇ ‘ರಿಪೇರಿ ಅಭಿಯಾನ’.. ವರುಷಗಟ್ಟಲೆ ಅಹರ್ನಿಶಿ ದುಡಿದ ಯಂತ್ರಗಳು ಒಟ್ಟಿಗೆ ಬ್ರೇಕ್ ತೆಗೆದುಕೊಂಡು ಮುಷ್ಕರ ಹೂಡಿ ಲೇಖಕಿಯನ್ನು ಸಂಕಷ್ಟಕ್ಕೆ ಸಿಲುಕಿಸಿ ನಾ ಮುಂದು ತಾ ಮುಂದು ಎನ್ನುತ್ತಾ ತಮ್ಮ ಯಜಮಾನಿಯ ವಿರುದ್ಧವೇ ಪಿತೂರಿ ನಡೆಸುತ್ತಿವೆಯೋ ಏನೋ ಎನ್ನುವ ಅನುಮಾನ ಹುಟ್ಟುತ್ತದೆ.. ಕಷ್ಟ ಗಳು ಬಂದರೆ ಒಟ್ಟಿಗೇ ಬರುತ್ತವೆಯಂತೆ.. ಹೀಗೆ ಒಂದೇ ವಾರದಲ್ಲಿ ವಿವಿಧ ರೀತಿಯಲ್ಲಿ ಕಾಡುವ ಯಂತ್ರ ಮುಷ್ಕರ, ರಾತ್ರಿ ನಿದ್ದೆಯಲ್ಲೂ ಅತೃಪ್ತ ಆತ್ಮದಂತೆ ಕಾಡಿ , ಅದು ಬರಿಯ ಕಾಕತಾಳೀಯವೋ ಅಥವಾ ಭೂತ ಚೇಷ್ಟೆಯೋ ಎನ್ನುವ ಸಣ್ಣ ಭಯವನ್ನು ಹುಟ್ಟು ಹಾಕುತ್ತದೆ..ನಮ್ಮ ಮನೆಯಲ್ಲೂ ನಡೆದಿರಬಹುದಾದ ಇಂತಹ ಪರರಿಗೆ ಮೋಜಿನ ಆದರೆ ನಮಗೆ ಪೇಚಿನ ಪ್ರಸಂಗಗಳು ನೆನಪಿಗೆ ಬಂದು ನಗು, ಅಚ್ಚರಿಯನ್ನು ಮೂಡಿಸುತ್ತವೆ..
ಕೊರೋನಾ ಸೋಂಕಿನ ಭೀತಿಯಿಂದ ರಾಷ್ಟ್ರಾದ್ಯಂತ ಲಾಕ್ ಡೌನ್ ಜಾರಿಯಾಗಿ, ಎಲ್ಲಾ ಗುಡಿ-ಗುಂಡಾರ, ದೇವಾಲಯ, ಧಾರ್ಮಿಕ ಕ್ಷೇತ್ರಗಳು ಸಾರ್ವಜನಿಕರಿಗೆ ಮುಚ್ಚಿ, ಕೇವಲ ಪೂಜೆಗೆ ಮಾತ್ರ ಸೀಮಿತವಾಗಿತ್ತು.. ಇಂತಹ ಪರಿಸ್ಥಿತಿ ಯಲ್ಲಿ, ಅರೆ ಘಳಿಗೆ ವಿಶ್ರಾಂತಿ ಇಲ್ಲದೆ ನಮ್ಮೆಲ್ಲರ ದೂರು ದುಮ್ಮಾನಗಳನ್ನು ಆಲಿಸುತ್ತಿದ್ದ ದೇವಾನುದೇವತೆಗಳು ಏನು ಮಾಡುತ್ತಿರಬಹುದು, ಎನ್ನುವ ಕಾಲ್ಪನಿಕ ಲೇಖನವೇ ದೇವತೆಗಳ ಜೂಮ್ ಮೀಟಿಂಗ್. ಕಾಲ್ಪನಿಕ ಆದರೂ ಅದ್ಭುತವಾಗಿ ಮನರಂಜನೆಯನ್ನು ಉಣಬಡಿಸುತ್ತದೆ..
ನಾವೆಲ್ಲರೂ ಎಷ್ಟೇ ಶಿಸ್ತಿನ ದಿನಚರಿ ಇಟ್ಟುಕೊಂಡರೂ, ಮುಖ್ಯ ವಸ್ತುಗಳು ಅಗತ್ಯ ಇರುವಾಗ ಕೈಗೆ ಸಿಗದೆ ಪರದಾಡುವಂತಾಗಿ, ನಮ್ಮ ನೆನಪಿನ ಶಕ್ತಿಯನ್ನು ಯಥಾ ಶಕ್ತಿ ಬೈದುಕೊಳ್ಳುತ್ತಾ ಮನೆಯ ಮೂಲೆ ಮೂಲೆಯನ್ನು ಶೋಧಿಸುವ ಆಪರೇಷನ್ ಹುಡುಕಾಟ, ಹಾಸ್ಯದ ಜೊತೆ ಜೊತೆಗೇ ನಮ್ಮ ದೈನಂದಿನ ಬದುಕನ್ನೇ ಪ್ರತಿನಿಧಿಸುತ್ತದೆ..
ಜಗಳವಾಡಿ ಸಿಟ್ಟಿನಿಂದ ಉಪವಾಸ ಕಾಲೇಜಿಗೆ ಹೋದ ಮಗಳು ಲಂಚ್ ಬ್ರೇಕ್ ನಲ್ಲಿ ಹಸಿವಿನಿಂದ ಕಂಗೆಟ್ಟಾಗ, ಟಿಫಿನ್ ಕ್ಯಾರಿಯರ್ ಹಿಡಿದು ಬಂದ ಅಮ್ಮ, ಹೃದಯಕ್ಕೆ ಆಪ್ತವಾಗುತ್ತದೆ..ತಾಯಿಯ ಸೀಮಾತೀತ ಮಮತೆಗೆ, ಅಮ್ಮನಂತೆ ಮಕ್ಕಳನ್ನು ಅರಿತವರು ಯಾರೂ ಇಲ್ಲ ಎನ್ನುವುದಕ್ಕೆ ಅಮ್ಮನ ಅಕ್ಷಯ ಪಾತ್ರೆ ಲೇಖನ ಸಾಕ್ಷಿ ಯಾಗುತ್ತದೆ.. ಅಮ್ಮ ತನ್ನ ಕಣ್ಣೀರಃ ಮುಚ್ಚಿಟ್ಟು ಮಕ್ಕಳಿಗೆ ಸಿಹಿ ಉಣಿಸುತ್ತಾಳೆ ಎನ್ನುವ ಮಾತು ಕಣ್ಣಲ್ಲಿ ನೀರು ಜಿನುಗಿಸುತ್ತದೆ.
ಕೊರೋನಾ ಕಾಲದಲ್ಲಿ ಹೊಸ ರೀತಿ ನೀತಿಯನ್ನು ಅಳವಡಿಸಿಕೊಂಡು ರೂಪಾಂತರವಾದ ಮದುವೆಗಳು, ಅವುಗಳ ಎಡವಟ್ಟುಗಳನ್ನು ಲೇಖಕಿ ಎಳೆ ಎಳೆಯಾಗಿ ಬಿಚ್ಚಿಡುತ್ತಾರೆ.. ಮದುವೆ ಮನೆಯ ಬಾಗಿಲಲ್ಲಿ ಪನ್ನೀರು ಹಿಡಿದ ಚದುರೆಯರ ಬದಲು ಪಿಪಿಇ ಕಿಟ್ಟು ಧರಿಸಿ, ಕೈಯಲ್ಲಿ ಉಷ್ಣತೆ ಅಳೆಯುವ ಸಾಧನ ಹಿಡಿದು ಪ್ರತ್ಯಕ್ಷರಾಗುವ ಗನ್ ಮ್ಯಾನ್ ಗಳು, ಪನ್ನೀರಿನ ಬದಲು ಸ್ಯಾನಿಟೈಸರ್ ಹಾಕಿ ‘ಕೈ ತೊಳೆದು ಒಳಗೆ ಬಾ ಆಮಂತ್ರಿತನೇ’ ಎನ್ನುವ ಸಾಲುಗಳು , ಹಾರಗಳ ಬದಲು ಮಾಸ್ಕ್ ತೊಡಿಸುವಿಕೆ ಕೊರೋನಾ ಕಾಲದ ವಿವಾಹವನ್ನು ವಿವರಿಸಿದ್ದಾರೆ..
ಹೆಸರಿನಲ್ಲೇನಿದೆ ಮಹಾ ಎನ್ನುವ ಉಕ್ತಿಯಂತೆ, ‘ದುಬೈ ನಾಮಪಲಕಗಳ ಹಾಸ್ಯಯಣ ‘ .. ಬೇರೆ ಭಾಷೆಯ ಹೆಸರುಗಳನ್ನು ಯಥಾವತ್ತಾಗಿ ನಮ್ಮ ಭಾಷೆಗೆ ಅನುವಾದ ಮಾಡಿದರೆ ಅಗುವ ಎಡವಟ್ಟುಗಳನ್ನು ಸೊಗಸಾಗಿ ವಿವರಿಸುವ ಮೂಲಕ ನಗೆಯ ಕಚಗುಳಿ ಇಡುತ್ತವೆ..’ಅಲ್ ಸಮಾಧಿ ಸ್ವೀಟ್ಸ್’, ‘ನೋ ಬಾರ್ಕಿಂಗ್’, ‘ಅಲ್ ಬೋಗಸ್ ಲಾಂಡ್ರೀ’ .. ಇಂತಹ ಬೋರ್ಡ್ ಗಳಿಗೆ ಕಾರಣವನ್ನೂ ಲೇಖನದಲ್ಲಿ ವಿವರಿಸುತ್ತಾರೆ…ಹೀಗೆ ದುಬೈ ಭಾಷೆಯಲ್ಲಿ ಅರ್ಥವತ್ತಾಗಿದ್ದರೂ ಕನ್ನಡದಲ್ಲಿ ಅನರ್ಥಗಳಂತೆಯೇ ಕಾಣುವ ಬೋರ್ಡ್ ಗಳ ಲೇಖನ ನಗೆ ಕಾರಂಜಿಯನ್ನೇ ಚಿಮ್ಮಿಸುತ್ತವೆ..
ನಿಂಬೆಯ ಮಹಾತ್ಮೆ ಯಲ್ಲಿ ಸೀದಾ ಸಾದ ನಿಂಬೆ ಅತ್ತ ತರಕಾರಿಯ ಕೆಟಗರಿಯಲ್ಲೂ ಬಾರದೆ, ಇತ್ತ ಹಣ್ಣುಗಳ ಕೆಟಗರಿಗೂ ಸೇರಲಾಗದೆ ಅಕ್ಷರಶಃ ಚಡಪಡಿಸುವುದನ್ನು ಹಾಸ್ಯಮಯವಾಗಿ ವಿವರಿಸಿದ್ದಾರೆ… ಕುಂಕುಮ ಹಚ್ಚಿದ ನಿಂಬೆಗೆ ಭಯಪಡುವ ಪರಿ, ಅದೇ ಹೊತ್ತಿಗೆ ಕೆಟ್ಟ ದೃಷ್ಟಿಯಿಂದ ಪಾರಾಗಲು ನಿಂಬೆಯ ಉಪಯೋಗ ಒಂದೇ ವಸ್ತುವಿನಲ್ಲಿ ಒಳ್ಳೆಯದ್ದೂ ಕೆಟ್ಟದ್ದೂ ಎರಡೂ ಒಟ್ಟಿಗೆ ಮಿಳಿತವಾಗಿರುತ್ತದೆ. ನಾವು ನೋಡುವ ದೃಷ್ಟಿಕೋನದ ಮೇಲೆ ನಮ್ಮ ಯೋಚನೆಗಳು ನಿರ್ಭರ ಎನ್ನುವ ಚಿಂತನೆಗೆ ದೂಡುತ್ತದೆ…
ವಠಾರ ಮೀಮಾಂಸೆ ನಮ್ಮೆಲ್ಲರ ಅನುಭವಗಳ ಒಟ್ಟು ಮೊತ್ತ ಎನ್ನಬಹುದು.. ಇಲ್ಲಿ ಲೇಖಕಿ ತನ್ನ ಬಾಲ್ಯದ ಅನುಭವಗಳ ಪೆಟ್ಟಿಗೆಯನ್ನೇ ನಮ್ಮ ಮುಂದೆ ಹರಡಿದ್ದಾರೆ.. ವಠಾರ ಎಂದರೇನು, ವಠಾರದಲ್ಲಿ ಎಂತಹ ಜನರಿರುತ್ತಾರೆ.. ಅವರ ಗುಣ-ಅವಗುಣಗಳ ವಿಶೇಷತೆಗಳನ್ನು ಯಥಾವತ್ತಾಗಿ ಚಿತ್ರಿಸಿದ್ದಾರೆ.. ಕಳ್ಳ ಮಾಮಿಯ ಕದಿಯುವ ಚಟ, ಎಲ್ಲರಿಗೂ ಗೊತ್ತಿದ್ದೂ ಸಾಕ್ಷಿ ಸಹಿತ ಹಿಡಿಯಲಾಗದ ಅಸಹಾಯಕತೆ, ಕದ್ದ ವಸ್ತುಗಳನ್ನು ಮಾಮಿ ಬಡವರಿಗೆ ಹಂಚುವ ಪರಿ ಆಧುನಿಕ ರಾಬಿನ್ ಹುಡ್ ನನ್ನು ನೆನಪಿಗೆ ತರುತ್ತದೆ.. ಲೇಖಕಿಯ ಸ್ವಂತ ಅನುಭವಗಳು ಹಾಸ್ಯದ ಹೊದಿಕೆಯ ಒಳಗಿನಿಂದ ಇಣುಕಿ ನೋಡುತ್ತಾ ಓದುಗರನ್ನು ರಂಜಿಸುತ್ತವೆ..
ಇಂದು ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಗಾಢವಾಗಿ ಕಳೆದು ಹೋಗಿದ್ದೇವೆ ಎಂದರೆ ಅರ್ಧ ದಿನವೂ ಇವುಗಳನ್ನು ಬಿಟ್ಟು ಇರುವುದು ಕಷ್ಟ ಎನ್ನುವ ಪರಿಸ್ಥಿತಿ.. ಕಣ್ಣು ಬಿಡುತ್ತಲೇ ಹಲ್ಲು ಉಜ್ಜುವ ಮೊದಲೇ , ಮೊಬೈಲ್ ಸ್ಕ್ರೀನ್ ಉಜ್ಜುವ ಮೂಲಕ ಬೆಳಗನ್ನು ಸ್ವಾಗತಿಸುವ ನಮ್ಮ ಪರಿ ಚಟವಾಗಿ ಮಾರ್ಪಟ್ಟಿರುವ ಕಾಲ.. ಹೀಗಿರುವಾಗ ಫೇಸ್ಬುಕ್, ವಾಟ್ಸಾಪ್ ಲಾಕ್ ಡೌನ್ ಆದರೆ ಹೇಗಿರಬಹುದು ಎನ್ನುವ ಮೂಲಕ ನಾವು ಎತ್ತ ಸಾಗುತ್ತಿದ್ದೇವೆ ಎನ್ನುವುದನ್ನು ಲೇಖಕಿ ಸೂಕ್ಷ್ಮವಾಗಿ ವಿವರಿಸುತ್ತಾ ಸಾಗುತ್ತಾರೆ..
ಇಲ್ಲಿರುವ ಎಲ್ಲಾ ಲೇಖನಗಳೂ ತಿಳಿ ಹಾಸ್ಯದ ಮೂಲಕ ಜೀವನ ಸತ್ಯವನ್ನು ನವಿರಾಗಿ ಹರಡುತ್ತಾ ಸಾಗುವ ಪರಿ ಅದ್ಬುತ ಎನಿಸುತ್ತದೆ.. ಒಮ್ಮೆ ಓದಲು ಕೈಗೆತ್ತಿಕೊಂಡರೆ , ಕೆಳಗಿಡದೇ ಓದಿಸಿಕೊಂಡು ಹೋಗುವ ಮೂಲಕ ಮಾಸದ ನಗೆಯನ್ನು ಮುಖದ ಮೇಲೆ ನೆಲೆಸುವಂತೆ ಮಾಡುತ್ತವೆ..
ಆರತಿ ಘಟಿಕಾರ್ ಅವರ ಈ ಲಲಿತ ಪ್ರಬಂಧಗಳ ಸಂಕಲನ ಈ ಕೊರೋನಾ ದುರಿತ ಕಾಲದಲ್ಲಿ ಓದುಗರ ಮನಸ್ಸಿನ ದುಗುಡವನ್ನು ಕಡಿಮೆ ಮಾಡುವುದರಲ್ಲಿ ಸಂಶಯವಿಲ್ಲ.. ಇಂತಹ ಸುಂದರ ಕೃತಿಯನ್ನು ಓದಲು ಒದಗಿಸಿದ ಲೇಖಕಿಗೆ ಧನ್ಯವಾದಗಳು.
– ಶ್ರೀಲಕ್ಷ್ಮಿ ಆಡ್ಯಪಾಡಿ
1 thought on “ಆರತಿ ಘಟಿಕಾರ್ ಅವರ ‘ವಠಾರ ಮೀಮಾಂಸೆ’ – ಪುಸ್ತಕ ಪರಿಚಯ”
ಪುಸ್ತಕ ವಿಮರ್ಶೆ ಬಹಳ ಚೆನ್ನಾಗಿ ಮೂಡಿಬಂದಿದೆ.
ಲಲಿತ ಪ್ರಬಂಧಗಳು