ಗುಲಾಬಿ ಹೂವಿನ ಫ್ರಾಕು

    ತಗಡಿನಿಂದ ಮಾಡಿದ ತನ್ನ ಗುಡಿಸಲಿನ ಬಾಗಿಲನ್ನ ಎಳೆದು ಚಿಲಕ ಹಾಕಿ ಹತ್ತು ವರ್ಷದ ಮಗಳು ಹಸಿನಾಳ ಕೈಹಿಡ್ದು ಓಣಿಗುಂಟ ಚಾಚ್ಕೊಂಡಿದ್ದ  ದಾರ್ಯಾಗ ಸರಬರನೆ ಹೊಂಟಿದ್ದ  ಪರ್ವೀನ್‍ಳ ಮುಖದಲ್ಲಿ ದುಗುಡವಿತ್ತು.  ಭಾಳ ಹರಿದಿದ್ದ, ತೊಳೆದು ಎಷ್ಟೋ ದಿನಗಳಾಗಿದ್ದ, ಹಳೆಯದ್ದೊಂದು ಬುರ್ಖಾ ತೊಟ್ಟ ಆಕಿ ಮಕ ಖರೆವಂದ್ರನೋ ಅಥವಾ ಬುರ್ಖಾದ ಪ್ರತಿಫಲನವೋ ಸುಟ್ಟುಕೊಂಡಷ್ಟ ಕರ್ರಗಾಗಿತ್ತು. ಬತ್ತಿದ ಬಾವಿಯಂತಾಗಿದ್ದ ಕಣ್ಣಿನ  ರೆಪ್ಪಿ ಬಡಿದುಕೊಳ್ಳದೇ ಅವಳು ಹೋಗಾಕತ್ತಿದ್ದ ದಾರಿಯನ್ನೋ ಮನಸ್ನ್ಯಾಗ ಯೋಚಿಸಾಕತ್ತಿದ್ದ ದಾಟಿಯನ್ನೋ ಸೂಚಿಸುವವರಂಗ ನಿಶ್ಚಲವಾಗಿದ್ದವು. ಇಕ್ಕಟ್ಟಾಗಿದ್ದ ಎದುರು ಬದುರು ಮನೆ ಸಾಲುಗಳ ನಡುಕ ಹರಿಯುತ್ತಿದ್ದ ಸಣ್ಣ ಝರಿಯಂತಹ ಗಟಾರದ ನೀರಿನ ನಾತ ಘಮ್ಮಂತ ಮೂಗಿಗೆ ಬಡ್ದೂ ಬಡ್ದೂ ಹೋಗಕತ್ತಿದ್ರೂ, ಇವರನ್ನ ಹುಡುಕಿಕೊಂಡು ಬಂದವರಂಗ ಸೊಳ್ಳೆಗಳು ಕಚ್ಚಿ ಕಚ್ಚಿ ರಕ್ತ ಹೀರಕತ್ತಿದ್ರೂ ಅವುಗಳಿಂದ ತನಗೇನೂ ಫರಕ್ ಬೀಳಲ್ಲ ಅನ್ನೋರ್ಗತಿ ಹೊಂಟೆ ಇದ್ಲು, ಮೈ ಕಲ್ಲು ಮಾಡಿಕೊಂಡು. ಹಸೀನಾಗೆ ಮಾತ್ರ ತಾನು ಒಂದೊಂದೆ ಸೊಳ್ಳೆಗಳನ್ನು ಬಡಿದು ಸಾಯಿಸಿ ಸತ್ತ ಸೊಳ್ಳೆಗಳನ್ನು ಕೈಯಲ್ಲಿಡಿಯುವುದೆಂದರೆ ಏನೋ ಒಂಥರ ಖುಷಿ. 

        ಮನೆಯಿಂದ ಹೊರಡುವಾಗ ಪರ್ವೀನ್ ತನ್ನ ಸೀರಿ ಸೆರಗಿನ ಅಂಚಿನ್ಯಾಗ ಏನೋ ಕಟ್ಟಿಕೊಂಡಿದ್ದನ್ನ ಗಮನಿಸಿದ್ದ ಹಸೀನಾ “ಅಮ್ಮಿ, ಏನ್ ಕಟ್ಕೊಂಡಿ?”  ಅಂತ ಕೇಳಿದರೂ ಮಗಳ ಪ್ರಶ್ನೆಗೆ ಉತ್ತರಿಸುವ ಪುರುಸೊತ್ತು ಹಾಗೂ ತಾಳ್ಮೆ ಅವಳಿಗಿರಲಿಲ್ಲ. ತಾಯಿ ಉತ್ತರಿಸದಿದ್ದಕ್ಕ ಹಸೀನಾ ಮಕ ಸಪ್ಪಗ ಮಾಡಿಕೊಂಡ್ಲು. ಈ ಸಂಜಿ ಹೊತ್ನ್ಯಾಗ ತನಗ ಕರಕೊಂಡು ಎಲ್ಲಿ ಹೊಂಟಾಳ ಈಕಿ ಎನ್ನುವ ತರ್ಕ ಶುರುವಾತು. ಅಷ್ಟೊತ್ತಿಗೆ ನಾಳೆಯೇ ‘ಈದ್’ ಐತಿ ಅಂತ ಮಸೀದಿಯ ಖಾಜಿಸಾಬ ಮಾಡಕತ್ತಿದ್ದ ಬಯಾನ್ ಅನ್ನು ಮಸೀದಿಯ ಮೈಕು ಹಸೀನಾಳ ಕಿವಿಯಾಗನ ಒದರಿದಂಗಾಗಿ ಅವಳ ಮೈಯೆಲ್ಲ ರೋಮಾಂಚನ. ತಮಗ ಮೊದಲ ಗೊತೈತಿ ಅನ್ನುವಂಗ ಚಿಕ್ಕ ಹುಡುಗ್ರೂ ದೊಡ್ಡವ್ರೂ ಓಣಿ ತುಂಬಾ ಓಡಾಡ್ಕೆಂತ ನಾಳೆಯ ಈದ್‍ಗೆ ಸಾಮಾನುಗಳನ್ನ ಖರೀದಿಸಲಿಕ್ಕ, ಮುಂಚಿತವಾಗಿ ಈದ್ ಮುಬಾರಕ್ ಹೇಳಾಕ, ಕೆಲವೊಂದಿಷ್ಟು ಮಂದಿ ಹೊಸ ಬಟ್ಟೆಗಳನ್ನು ಖರೀದಿಸಿ, ಹಸೀನಾಳ ವಯಸ್ಸಿನ ಹುಡಿಗ್ಯಾರು ಮೆಹೆಂದಿಯ ಪೊಟ್ಟಣಗಳನ್ನು ಹಿಡ್ಕೊಂಡು ಮನೆಗೆ ಹಿಂತಿರುಗುತ್ತಿದ್ದನ್ನು ಹಸೀನಾ ತೆರದ ಬಾಯಿಯಲ್ಲಿಯೇ ಬಿಟ್ಟ ಕಣ್ಣು ಬಿಡದಂಗ ನೋಡಿದಳು. ರಂಜಾನ್ ಹಬ್ಬ ಅಂದ್ರ ಹೊಸ ಫ್ರಾಕು, ಎರಡೂ ಕೈತುಂಬಾ ಮಹೆಂದಿಯ ರಂಗು, ಘಮ್ಮೆನ್ನುವ ಇತ್ತರ್ರು, ಹಾಲು, ಶ್ಯಾವಿಗೆಯಿಂದ ಮಾಡಿದ ಸುರಕುಂಬಾ, ಕೋಳಿದೋ ಕುರಿದೋ ಬಿರಿಯಾನಿ ಇಂತಹವೆ ನೂರಾರು ಆಸೆಯ ನೀರ್ಗುಳ್ಳೆಗಳು ಅವಳ ಕಣ್ಣ ಮುಂದೆ ಕುಣಿದು ಹೋದ್ವು. “ಈ ಸರ್ತಿ ವ್ಯಾಪಾರ ಛಲೋ ಆತು ಅಂದ್ರ ಹೊಸ ಫ್ರಾಕು ಕೊಡಿಸ್ತೀನಿ ಬಿಡು” ಅಂತ ಮೊನ್ನೆ ಅಮ್ಮಿ ಹೇಳಿದ್ದು ನೆನಪಾಗಿ ‘ನಾಳೆಯ ಈದ್‍ಗೆ ಹೊಸ ಫ್ರಾಕು ಕೊಡಿಸಾಕ ಕರಕೊಂಡು ಹೊಂಟಿರಬಹುದು’ ಅಂತ ತನ್ನ ತರ್ಕಕ್ಕೊಂದು ಷರಾ ಊಹಿಸಿ ಇನ್ನಷ್ಟು ಹಿಗ್ಗಾದಂಗಾಗಿ ಮತ್ತ ಏನೇನು ಖರೀದಿಸಬಹುದೆಂದು ಲೆಕ್ಕ ಹಾಕುತ್ತ ತಾಯಿಯ ಹೆಜ್ಜೆಗಳಲ್ಲಿ ತನ್ನ ಪುಟ್ಟ ಹೆಜ್ಜೆ ಬೆರೆಸತೊಡಗಿದ್ದಳು.

         ಮಗರೀಬ್ ನಾಮಾಜು ಮುಗಿಸಿ ಈದ್‍ನ ತಯಾರಿಗಾಗಿ ಓಣಿ ತುಂಬಾ ಓಡಾಡುತ್ತಿದ್ದ ಜನರನ್ನು ದಾಟಿ ಬಂದ ಪರ್ವೀನ್ ಮಾರ್ಕೆಟ್ಟಿನ ಹಾದಿ ಹಿಡಿದಿದ್ದಳು. ಅದೀಗ ತಾನೆ ಮೂಡಿದ್ದ ದಾರದ ಎಳೆಯಂತಹ ಚಂದ್ರ ಹಸೀನಾಳ ತುಟಿಗಳಲ್ಲಿ ತಾನೆ ಬಂದು ಕುಳಿತಿರುವಂತೆ ನಗುವಿನ ರೇಖೆ ಮೂಡಿಸಿದ್ದ. ಆದರೆ ಪರ್ವೀನ್‍ಗೆ ಅವ ಮೂಡಿದ್ದು ಸಹನೀಯವಾಗಿರಲಿಲ್ಲವೇನೋ ಅದರ ಚೂಪಾದ ತುದಿ ಅವಳ ಹೊಟ್ಟೆಗೆ ಚುಚ್ಚಿದಂಗಾಗಿ ಅವಳ ಎದೆಯಲ್ಲ ಸಂಕಟ ತುಂಬಿಕೊಂಡಿತು. ಇವಳ ಸುಡುವಂತಹ ನೋಟ ಕಂಡು ಹೆದರಿಕೊಂಡವನಂತೆ ಚಂದ್ರ ಎತ್ತರಕ್ಕೆ ಎದ್ದು ನಿಂತಿದ್ದ ದೊಡ್ಡ ದೊಡ್ಡ ಕಟ್ಟಡಗಳ ಮರೆಯಲ್ಲಿ ನಿಧಾನಕ್ಕೆ ಮಾಯವಾದ. ಪರ್ವೀನ್‍ಳ ಪಾಲಿಗೆ ಇಂದಿನ ಚಂದ್ರ ಹೊಗೆಯಾಡುವ ಕೆಂಡದ ತುಂಡಿನಂತೆ ಕಂಡ. 

                                 *****

          ತಿಂಗಳ ಹಿಂದೆ ಇದೇ ಚಂದ್ರ ಮಗಳ ಕಣ್ಣಿನಷ್ಟೇ ತೆಳುವಾಗಿಯೂ ಚುರುಕಾಗಿಯೂ ಮೂಡಿದಾಗ, ತನ್ನ ಗುಡಿಸಲಿನ ಮುಂದೆ ಹರಡಿಕೊಂಡಿದ್ದ ಅಂಗಳದಲ್ಲಿ ಕೆಮ್ಮುತ್ತಲೇ ಮಲಗಿಕೊಂಡಿದ್ದ ಪರ್ವೀನ್‍ಗೆ ಬೆಳದಿಂಗಳು ಅಂಗಳದ ತುಂಬಾ ಸುರುವಿದಂಗಾಗಿ, ಅವಳ ಮುಖದ ತುಂಬಾ ಮೂಡಿದ್ದ ಚಿಂತೆಯ ಗೆರೆಗಳಲ್ಲಿ ಬೆಳಕು ಮಿನುಗತೊಡಗಿತ್ತು. ವರ್ಷಂಪೂರ್ತಿ ಇಂತಹ ಅದೆಷ್ಟೋ ಚಂದ್ರರು ಹುಟ್ಟಿ ಮರೆಯಾಗಿದ್ದರೂ ಅಂದು ಆಕಾಶ ಗರ್ಭದಲ್ಲಿ ಇಣುಕಿದ್ದ ಚಂದ್ರ ಅವಳ ಹೊಟ್ಟೆಯಲ್ಲಿಯೇ ಹುಟ್ಟಿದನೇನೋ ಎನ್ನುವಂತೆ ಸಂಭ್ರಮಗೊಂಡು ಎಲ್ಲೋ ಆಡಲು ಹೋಗಿ ಇನ್ನೂ ಬಾರದ ಮಗಳು ಹಸೀನಾಳನ್ನು ಕೂಗಿ ಕರೆದಳು.

     “ಹಸೀನಾ, ನೋಡು, ಚಂದಪ್ಪ ಮೂಡ್ಯಾನ. ಇವತ್ತಿನಿಂದ ರಂಜಾನ್ ತಿಂಗ್ಳು ಶುರು ಆಗ್ತೈತಿ. ನಾಳೆಯಿಂದ ನಮ್ ಮಂದಿ ರೋಜಾ ಇರ್ತಾರ. ಇನ್ ಮ್ಯಾಲ ದಿವ್ಸಾನೂ ರೋಜಾ ಬಿಡುವ ಸಮಯಕ್ಕ ಮಸೀದಿ ಹತ್ರ ಹೋಗಿ ಬಜಿ ಮಾರ್ಕೊಂಡು ಬರಬೇಕು ನೋಡು. ಈ ರಂಜಾನ್ ಮುಗಿಯೋವರೆಗೂ ಹಗಲೆಲ್ಲ ಬಸ್ಟ್ಯಾಂಡಿನ ಕಡಿಗೆ, ಸಂಜೆ ಆತು ಅಂದ್ರ ಮಸೀದಿ ಹತ್ರ ಹೋಗಿ ನಾಕ್ ರೊಕ್ಕ ಹೆಚ್ಗಿ ದುಡಿಯಾನ. ಆ ಹಲ್ಕಟ್ ಭಾಡ್ಯಾ ಖಾದರ್‍ನ ಕಾಟ ಈ ವರ್ಷನಾದ್ರೂ ಕೊನೆ ಆಗ್ಲಿ.” ಎಂದು ಪರ್ವೀನ್ ಮಗಳನ್ನು ತಬ್ಬಿಕೊಂಡು ಕಣ್ಣೊರೆಸಿಕೊಂಡಳು. ಖಾದರ್‍ನಿಗೆ ಹಲ್ಕಟ್ ಭಾಡ್ಯಾ ಅಂದಿದ್ಕ ಹಸೀನಾಳಿಗೆ ಖುಷಿಯಾಗಿ ಜೋರಾಗಿ ನಕ್ಕಳು.

       ನಾಳಿಗೆ ಬಜಿ ಮಾಡಾಕ ಎಣ್ಣಿ, ಕಡ್ಲಿಹಿಟ್ಟು, ಮೆಣಸಿನಕಾಯಿಗೆ ರೊಕ್ಕ ಸಾಲ್ತಾವೋ ಇಲ್ವೋ ಅಂತ, ದಿನವೂ ಡಬ್ಬಿಯಲ್ಲಿ ಕೂಡಿಟ್ಟಿದ್ದ ಚಿಲ್ಲರೆಗಳನ್ನೆಲ್ಲ ಪರ್ವೀನ್ ಎಣಿಸಿ ನೋಡಿ, ರೊಕ್ಕ ಕಡಿಮಿ ಬಿದ್ವು ಅಂದ್ರ ಸುಬಾನ ಚಾಚಾನ ಅಂಗಡ್ಯಾಗ ಉದ್ರಿ ಹೇಳಿ ತಂದ್ರಾತು ಅಂತ ತನ್ನಷ್ಟಕ್ಕ ತಾನಾ ಸಮಾಧಾನ ಮಾಡಿಕೊಂಡ್ಲು. ಇತ್ತ ಗುಡಿಸಲೂ ಅಲ್ಲದ ಅತ್ತ ಮನೆಯೂ ಅಲ್ಲದ ಮನೆಯಲ್ಲಿ ಮಗಳು ಹಸೀನಾಳನ್ನು ಬೆನ್ನಿಗಾಕಿಕೊಂಡು ಅವಳ ಮುಂದೆ ಬಕ್‍ಬಾರ್ಲು ಬಿದ್ದಿದ್ದ ಬದುಕನ್ನು ಸಣ್ಣಗೆ ಸುಡುತ್ತಾ, ಸುಟ್ಟ ಬೆಳಕಲ್ಲೊಂದಿಷ್ಟು ಭರವಸೆಯ ಕಿರಣ ಹುಡುಕಿ ಹೊರಟಿದ್ದವಳ ಮುಂದೆ ಬರೀ ಕತ್ತಲ ರಾಶಿ. ಮಗಳ ಕಣ್ಣುಗಳಲ್ಲಿ ಅರೆಚಿಗುರಿ ನಿಂತ ಕನಸುಗಳು ಬಾಡಿ ಹೋಗುವ ಭಯ. ಬಸ್ಟ್ಯಾಂಡಿನ ಹೊರ ಆವರಣದ ಮೂಲೆಯಲ್ಲಿ ಚಿಮಣಿಯೆಣ್ಣಿಯ ಸ್ಟೋ ಮೇಲೆ ಹಸೀನಾ ಬಜಿ ಮಾಡಿದರೆ ಮಗಳು ಗಿರಾಕಿಗಳನ್ನು ಕರೆದು ಕರೆದು ವ್ಯಾಪಾರ ಮಾಡುತ್ತಿದ್ದಳು. ದುಡಿದ್ದಿದ್ದು ಹೊಟ್ಟೆ ಬಟ್ಟೆಗೆ ಅಷ್ಟಕ್ಕಷ್ಟೆ. ಆದರೆ ಇತ್ತೀಚಿಗೆ ಬೇರೆಯವರೂ ಪುಟ್ಟ ಅಂಗಡಿ ಹಾಕಿ ಬಜಿ, ಮಿರ್ಚಿ ಮಾಡಿ ಮಾರುತ್ತಿದ್ದರಿಂದ ಇವರ ವ್ಯಾಪರಕ್ಕೆ ಹೊಡೆತ ಬಿದ್ದಿತ್ತು. ನಾಲ್ಕು ಗಿರಾಕಿಗಳು ಬರುವಲ್ಲಿ ಇಬ್ಬರು ಬಂದರು, ಇಬ್ಬರು ಬರುವಲ್ಲಿ ಒಬ್ಬರು. ಅವರ ಹೊಟ್ಟೆಗೆ ಹೊಡೆತ ಬಿದ್ದಂಗಾಗಿ ದಿನಕಳೆದಂತೆ ಪರ್ವೀನ್ ಚಿಂತಿತಳಾದಳು,  ಯಾವುದೋ ಕೆಮ್ಮು ಗಂಟುಬಿದ್ದಿತು. ಈ ಕೆಮ್ಮಿನಿಂದಾಗಿಯೇ ಪರ್ವೀನ್ ಹೊರಗಡೆ ಎಲ್ಲೂ ದುಡಿಯುವದಕ್ಕೂ ಹೋಗಲಾಗಲಿಲ್ಲ. ತನ್ನ ಅಸಹಾಯಕತೆ ನೆನೆಸಿಕೊಂಡು ಮತ್ತಷ್ಟು ಕೆಮ್ಮು ಬಂದಂಗಾಗಿ ಕೊಸ ಕೊಸ ಅಂತ ಕೆಮ್ಮಿ ಕೆಮ್ಮಿ ಎದೆ ನೋವು ಹೆಚ್ಚಾಗಿ ಕುಳಿತಲ್ಲಿಯೆ ನೆಲಕ್ಕೊರಗಿದ್ದಳು.

                                  ************

      ಮಾರ್ಕೆಟ್ಟಿನ ಇಕ್ಕೆಲಗಳಲ್ಲಿಯೂ ತಳ್ಳುವ ಬಂಡಿಗಳಲ್ಲಿ ಹಬ್ಬಕ್ಕೆ ಬೇಕಾಗುವ ಸಾಮಾನುಗಳನ್ನೂ ಹೊಸ ಹೊಸ ಬಟ್ಟೆಗಳನ್ನೂ ಇತ್ತರ್, ಟೋಪಿ, ಖಜೂರ ಮುಂತಾದವುಗಳನ್ನು ವ್ಯಾಪಾರಸ್ಥರು ಕೂಗಿ ಕೂಗಿ ಮಾರಾಟ ಮಾಡುತ್ತಿದ್ದರೆ ಕೊಳ್ಳುವವರಿಂದ ಮಾರ್ಕೆಟ್ಟು ಗಿಜಿ ಗಿಜಿ ಎನ್ನುತ್ತಿತ್ತು. ಎರಡೂ ಬದಿಯ ಅಂಗಡಿಗಳನ್ನು ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಸಿಂಗರಿಸಿದ್ದರಿಂದ ಬಟ್ಟೆಯ ಅಂಗಡಿಗಳು ಝಗಮಗಿಸುತ್ತಿದ್ದವು. ಅಲ್ಲಿಯ ಸಂಜೆ ತಿಳಿ ಹಗಲಾಗಿ ಮಾರ್ಪಟ್ಟಿತ್ತು.

      ತಾಯಿಯ ಕೈ ಹಿಡಿದು ಹೊರಟಿದ್ದ ಹಸೀನಾಳಿಗೆ ಅಮ್ಮಿ ಯಾವ ಅಂಗಡೀಲಿ ಫ್ರಾಕು ಕೊಡಿಸಬಹುದೆಂದು ಯೋಚಿಸುತ್ತಿರುವಾಗಲೇ ಅಂಗಡಿಗಳ ಮುಂದೆ ಇಳಿ ಬಿಟ್ಟಿದ್ದ ಅವಳದೇ ಸೈಜಿರುವ ಬೇರೆ ಬೇರೆ ಡಿಸೈನಿನ ರಂಗು ರಂಗಾಗಿದ್ದ ಕಾಮನಬಿಲ್ಲಿನಂತಹ ತರಹೇವಾರಿ ಫ್ರಾಕುಗಳು ಕಣ್ಣು ಕುಕ್ಕುತ್ತಿದ್ದವು. ಒಂದು ಅಂಗಡಿಯ ಮುಂದೆ ಗೊಂಬೆಯೊಂದಕ್ಕೆ ಉಡಿಸಿದ್ದ ಫ್ರಾಕು ಅಪ್ಪ ಕೊಡಿಸಿದ್ದ ಫ್ರಾಕಿನಂತೆಯೆ ಇದ್ದುದ್ದರಿಂದ ಅದನ್ನು ಮತ್ತೆ ಮತ್ತೆ ತಿರುಗಿ ನೋಡುತ್ತಾ ಹೋಗುತ್ತಿದ್ದವಳಿಗೆ ಮೊನ್ನೆಯ ಘಟನೆ ನೆನಪಾಯ್ತು. 

     ಅಂದು ಸಂಜೆ ಹಸೀನಾ, ಗೂಟಕ್ಕೆ ಸಿಗಿಸಿದ್ದ ಬಟ್ಟೆಯ ಗಂಟು ಕೆಳಗಿಳಿಸಿ, ಹುಡುಕಿ ಅವಳಿಷ್ಟದ ಅಲ್ಲಿಷ್ಟು ಇಲ್ಲಿಷ್ಟು ಹರಿದಿದ್ದ ಗುಲಾಬಿ ಹೂಗಳಿರುವ ಫ್ರಾಕು ಸಿಕ್ಕ ತಕ್ಷಣ ಅದನ್ನಿಡಿದು ತಾನು ಹೆಂಗ ಕಾಣ್ತಿರಬಹುದು ಅನ್ನೋ ಕುತೂಹಲಕ್ಕ ನೆರಿಕೆಯಲ್ಲಿ ಸಿಗಿಸಿದ್ದ ಒಡೆದ ಕನ್ನಡಿ ಚೂರಿನ್ಯಾಗ ತನ್ನ ಪ್ರತಿಬಿಂಬ ನೋಡಿ, ಅದರಲ್ಲಿ ತಾನು ಛಲೋ ಕಾಣ್ತಿರೋದಕ್ಕ ಹಿಗ್ಗಾದಂಗಾಗಿ ಮಕದ ಮ್ಯಾಲ ನಗು ತುಂಬಿಕೊಂಡ್ಲು. ಗುಡಿಸಲೆಲ್ಲ ಹರಡಿಕೊಂಡಿದ್ದ ಡಿಮ್ಮು ಲೈಟಿನ ಬೆಳಕು ಆಕಿ ಮಕದಾಗ ಬಂದು ಕುಂತಂಗಾತು.  ಹಸೀನಾ ರಂಜಾನ್ ಹಬ್ಬಕ್ಕ ಆ ಹರಿದ ಫ್ರಾಕೆ ಉಡಾಕ ಬಯಸ್ಯಾಳಂತ ಪರ್ವೀನ್‍ಗೆ ಅರ್ಥ ಆಗಿದ್ದರಿಂದ ಮನಸಿಗೆ ನೋವಾತು. ಅದೇ ಫ್ರಾಕಿನಲ್ಲಿ ಎರಡು ರಂಜಾನ್ ಕಳೆದವಳಿಗೆ ಈ ಸರ್ತಿನೂ ಅದೆ ಗತಿ ಅಂತ ಮಗಳಿಗೆ ಗೊತ್ತಾಯ್ತೋ ಏನೋ? “ಈ ಸಲ ವ್ಯಾಪಾರ ಛಲೋ ಆತು ಅಂದ್ರ ಹೊಸ ಫ್ರಾಕು ಕೊಡಿಸ್ತೀನಿ ಬಿಡು” ಅಂದಳು. ಅದು ಮಗಳ ಸಮಾಧಾನಕ್ಕೆ ಹೇಳಿದ್ದ ಮಾತೋ ಅಥವಾ ತಾನು ಈ ಸರ್ತಿ ದುಡಿತೀನಿ ಅನ್ನೋ ಧೈರ್ಯನೋ ಸ್ವತಃ ಅವಳಿಗೂ ಗೊತ್ತಾಗಲಿಲ್ಲ. ಆದರೆ ತಾಯಿಯ ಈ ಭರವಸೆ ನಿರೀಕ್ಷಿಸಿರದಿದ್ದ ಹಸೀನಾಳ ಕಣ್ಣಲ್ಲಿ ಮೂಡಿದ ಹೊಳಪು ಲೈಟಿನ ಬೆಳಕಿಗೆ ಸ್ಪರ್ಧೆ ಒಡ್ಡುವಂತಿತ್ತು.

       ಹಾಗೆ ಹಸೀನಾ ಬಟ್ಟೆ ತಡಕಾಡುವಾಗ ರಫೀಕನ ಫೋಟೊ ಕಣ್ಣಿಗೆ ಬಿದ್ದಿದ್ದರಿಂದ “ಅಮ್ಮಿ, ಇಲ್ನೋಡು, ಅಬ್ಬ” ಎಂದು ತಾಯಿಗೆ ತೋರಿಸಿ ಫೋಟೊಕ್ಕೊಂದು ಮುತ್ತು ಕೊಟ್ಟಳು. ಗಂಡ ರಫೀಕ್ ಇಲ್ಲದ ನೋವನ್ನು ಪರ್ವೀನ್ ಕಣ್ಣುಗಳಲ್ಲಿ ತೋರಿಸುತ್ತಿರಲಿಲ್ಲವಷ್ಟೆ. ಎದೆಯಲ್ಲಾ ಅವನದ್ದೆ ಕೊರಗು ಮೀಟಾಕತ್ತಿತ್ತು. ಮಗಳು ಫೋಟೊ ತೋರಿಸಿದಾಗ ಸುಮ್ಮನೆ ನಕ್ಕಳು. ಮರುಕ್ಷಣ ಲೈಟಿನ ಬಟನ್ನಿನ ಸದ್ದಾಗಿ ಕರೆಂಟು ಹೋದಂತಾಗಿ ಗುಡಿಸಲ್ಲೆಲ್ಲ ಕತ್ತಲಾವರಿಸಿತು. ಪರ್ವೀನ್ ಬಿಕ್ಕಿ ಬಿಕ್ಕಿ ಅಳುವ ಸದ್ದು ಕತ್ತಲಿನಷ್ಟೆ ಮೌನವಾಗಿತ್ತು. ಅತ್ತಾದ ಮೇಲೆ ಬಟನ್ನಿನ ಸದ್ದಿನೊಂದಿಗೆ ಮತ್ತೆ ಕರೆಂಟು ಬಂತು. ಹೀಗೆ ಮಗಳು ಅಪ್ಪನ ಫೋಟೊವನ್ನು ತಾಯಿಗೆ ತೋರಿಸಿದಾಗಲೆಲ್ಲ ಕರೆಂಟು ಹೋಗಿ ಬಂದು ಮಾಡುವುದು ಮಾಮೂಲು. ನಡುವೆ ಒಂದಿಷ್ಟು ಅಳುವ ಸದ್ದು ಹಸೀನಾಗಾದರೂ ಹೇಗೆ ಗೊತ್ತಾಗಬೇಕು? ಅಪ್ಪ ಕೊಡಿಸಿದ್ದ ಆ ಫ್ರಾಕು ಹಿಡಿದು ತುಂಬಾ ಹೊತ್ತು ಕನ್ನಡಿ ಮುಂದೆ ನಿಂತೆ ಇದ್ದಳು.

                                   ***

      “ಅಮ್ಮಿ, ಹೊಸ ಫ್ರಾಕು ಯಾವ ಅಂಗಡ್ಯಾಗ ಕೊಡಿಸ್ತಿ?” ಎಲ್ಲಾ ಬಟ್ಟೆ ಅಂಗಡಿಗಳನ್ನೂ ಪರ್ವೀನ್ ದಾಟಿ ದಾಟಿ ಮುಂದೆ ಹೋಗುತ್ತಿದ್ದರಿಂದ ಅನುಮಾನಗೊಂಡ ಹಸೀನಾ ಕೇಳಿದಳು. ತೋಯಿಸಿಕೊಂಡ ಕಣ್ಣುಗಳಿಂದ ಮಗಳ ಮುಖ ನೋಡಲಾಗದೇ ಎದೆ ಕಲ್ಲು ಮಾಡಿಕೊಂಡು ಪರ್ವೀನ್ ನಡೆಯುತ್ತಲೆ ಇದ್ದಳು. ತಾಯಿಯಿಂದ ಯಾವ ಪ್ರತಿಕ್ರಿಯೆಯೂ ಬರದೆ ಇದ್ದುದ್ದರಿಂದ, ಹಸೀನಾ ಒಮ್ಮೆ ತಾಯಿಯನ್ನು ಮತ್ತೊಮ್ಮೆ ತಮ್ಮಿಂದ ದೂರ ದೂರ ಸಾಗುತ್ತಿದ್ದ ಬಟ್ಟೆ ಅಂಗಡಿಗಳನ್ನೂ ಪದೆ ಪದೆ ತಿರುಗಿ ತಿರುಗಿ ನೋಡುವುದು ಬಿಟ್ಟು ಇನ್ನೇನೂ ಮಾಡಲು ಸಾಧ್ಯವಾಗಲಿಲ್ಲ. 

    ರಂಜಾನ್ ಶುರು ಆಗಿದ್ದರಿಂದ ಪರ್ವೀನ್, ದಿನವೂ ಬಜಿ ಮಾಡಿ ಪುಟ್ಟಿಯಲ್ಲಿ ತುಂಬಿ ಮಗಳನ್ನು ಒಂದು ಮಸೀದಿಗೆ ಕಳುಹಿಸಿದರೆ ತಾನೊಂದು ಮಸೀದಿಗೆ ಹೋಗಿ ವ್ಯಾಪಾರ ಮಾಡಿಕೊಂಡು ಬರುವುದು ನಡಿದಿತ್ತು. ಹಸೀನಾ ಬಜಿ ಮಾರಲು ಮಸೀದಿಯ ಹತ್ತಿರ ಹೋದಾಗಲೇ ಗೊತ್ತಾಗಿದ್ದು ಅಲ್ಲಿ ತನ್ನಂಗೆ ಸಾಕಷ್ಟು ಜನ  ಬಜಿ, ಪಕೋಡ, ಸಮೋಸ, ಇಡ್ಲಿ, ದೋಸೆ ಮಾಡ್ಕೊಂಡು ವ್ಯಾಪಾರಕ್ಕೆ ನಿಂತಿರುತ್ತಾರೆ ಎಂದು. ಅವರನ್ನು ನೋಡಿದಾಗ ಅವಳ ಕಣ್ಣುಗಳಲ್ಲಿಯ ಬೆಳಕಿಗೆ ಬೆಂಕಿ ಬಿದ್ದಂಗಾಗಿತ್ತು. ಗಿರಾಕಿ ಇವರೆಲ್ಲರನ್ನೂ ದಾಟಿ ತನ್ನ ಹತ್ರ ಬಂದು ಬಜಿ ತಗೋಳ್ತಾನ ಅನ್ನೊ ನಂಬಿಕಿ ಅವಳಿಗೇನು ಉಳಿಲಿಲ್ಲ. ತನ್ನ ಬಜಿಯ ಮೇಲೆ ಹಾರಾಡುತ್ತಿದ್ದ ನೊಣಗಳನ್ನು ಓಡಿಸುತ್ತಾ “ಬಜಿ ಬಜಿ ಹತ್ತು ರೂಪಾಯಿಗೆ ನಾಲ್ಕು ಬಜಿ” ಅಂತ ಕೂಗುತ್ತ ಮಸೀದಿಗೆ ಇಫ್ತಾರ್‍ಗೆ ಬರುತ್ತಿದ್ದವರ ಹತ್ತಿರ ಇತರ ಮಕ್ಕಳಂತೆ ತಾನೂ ಓಡಿ ಅವರು ಖರೀದಿಸುತ್ತಾರೋ ಏನೋ ಎಂದು ಬಜಿಯ ಪುಟ್ಟಿಯನ್ನು ಅವರ ಮುಂದಿಡುತ್ತಿದ್ದಳು. ಬೆರಳೆಣಿಕೆಯಷ್ಟು ಜನ ಖರೀದಿಸಿದರೆ ಬಹಳಷ್ಟು ಮಂದಿ ಬೇಡ ಅಂತ ಹೋದಾಗ ಅವಳ ಕಣ್ಣುಗಳಲ್ಲಿಯ ಅಸಹಾಯಕತೆ ಹನಿಗಟ್ಟುತ್ತಿತ್ತು. ಪರ್ವೀನ್‍ಳ ವ್ಯಾಪಾರವೂ ಇದಕ್ಕೆ ವಿರುದ್ಧವೇನೂ ಆಗಿರಲಿಲ್ಲ. 

        ಮೊನ್ನೆ ಹಸೀನಾ ಅಂಗಳದಾಗ ಕುಂತು ಮುಸುರಿ ತಿಕ್ಕುತ್ತಿರುವಾಗ ಯಾರೋ ಬಂದಂಗಾಯಿತು. ಬಂದಿದ್ದು ಯಾರಂತ ನೋಡಿ ಓಳಗೆ ಓಡಿ ಹೋಗಿ ಪರ್ವೀನ್‍ಳ ಕಿವಿಯಲ್ಲಿ “ಆ ಹಲ್ಕಟ್ ಭಾಡ್ಯಾ ಖಾದರ್ ಚಾಚಾ ಬಂದಾನ” ಎಂದು ಬಾಯಿಗೆ ಕೈಹಿಡಿದು ಕಿಸಕ್ಕನೆ ನಕ್ಕಳು. ಆದರೆ ಪರ್ವೀನ್‍ಳ ಮುಖ ಸಪ್ಪಗಾಯಿತು. ಗಂಡ ಬದುಕಿದ್ದಾಗ ಖಾದರ್‍ನ ಹತ್ರ ಮಾಡಿದ್ದ ಸಾಲ ಹಂಗ ಉಳಿದುಕೊಂಡಿತ್ತು ಮತ್ತು ರಫೀಕ್ ಸತ್ತ ಮ್ಯಾಲ ಅದನ್ನು ತೀರಿಸುವ ಜವಾಬ್ದಾರಿ ಪರ್ವೀನ್‍ಗೆ ಬಿದ್ದಿದ್ದರಿಂದ ಈ ಎರಡು ವರ್ಷದಲ್ಲಿ ಅದೆಷ್ಟು ಬಾರಿ ಬಂದು ಧಮ್ಕಿ ಹಾಕಿ ಹೋಗಿದ್ನೋ? ಈಗ ಮತ್ತೆ ಅವ ಬಂದಿದ್ದು ಕೇಳಿ ಸಣ್ಣಗೆ ನಡುಗತೊಡಗಿದಳು. ಮೊದಲೆಲ್ಲ “ಸಾಲ ತೀರಿಸು, ಇಲ್ಲಂದ್ರ…….”  ಅಂತ ವಿಚಿತ್ರವಾಗಿ ನಗುತ್ತ, ಎದೆ ಕೂದಲುಗಳ ಮೇಲೆ ಕೈಯಾಡಿಸುತ್ತ ಎಂತಹದ್ದೋ ಸನ್ನೆ ಮಾಡುತ್ತಿದ್ದನ್ನು ಕಂಡ ಪರ್ವೀನ್ ಅವನ ಆಸೆ ಅರ್ಥವಾಗಿ ಭಯಗೊಂಡು ಛಳಿ ಜ್ವರ ಬಂದಂಗಾಗಿ ನಾಲ್ಕು ದಿನ ಹಾಸಿಗೆ ಹಿಡಿದು ಮಲಗಿಬಿಡುತ್ತಿದ್ದಳು. ಅವನ ವಿಷಯ ಕಿರಾಣಿ ಅಂಗಡಿಯ ಸುಭಾನ್ ಚಾಚಾನಿಗೆ ಗೊತ್ತಾಗಿ ‘ಹೆಣ್ಣೆಂಗ್ಸನ್ನ ಹಿಂಗೆಲ್ಲ ಕಾಡಿಸಕತ್ತೀದಿ ಅಂದ್ರ ಪೋಲಿಸ್ ಕಂಪ್ಲೇಟ್ ಕೊಡಬೇಕಾಕೈತಿ, ಹಿಂಗ ಎದಿ ಮ್ಯಾಲ ಬಂದು ಸಾಲ ತೀರಿಸು ಅಂದ್ರ ಹೆಂಗ ತಿರಿಸ್ಯಾಳು? ಒಂದಿಷ್ಟು ಟೈಮ್ ಕೊಡು ಅಕಿಗೆ, ನಿನ್ನ ಸಾಲ ತೀರ್ಸೆ ತಿರಿಸ್ತಾಳ’ ಅಂತ ಖಾದರ್‍ಗೆ ಬಾಯಿ ತುಂಬ ಬೈದು ಕಳಿಸುತ್ತಿದ್ದ. ಹಿಂಗ ಸುಭಾನ್ ಚಾಚಾ ಅದಾನ ಅನ್ನೋ ಧೈರ್ಯದಿಂದ ಎರಡು ವರ್ಷ ತಳ್ಳಿದವಳಿಗೆ ಮೊನ್ನೆ ಹದಿನೈದು ದಿನದ ಹಿಂದ ಖಾದರ್ ಬಂದು ಕ್ಯಾಕರಿಸಿ ಉಗಿದು ಹೋಗಿದ್ದ. ಈಗ ಅವ ಮತ್ತ ಬಂದಿದ್ಕ ಕೈಕಾಲುಗಳು ತಣ್ಣಗಾದಂಗಾಗಿ ಪರ್ವೀನ್ ಭಯದಿಂದಲೇ ಹೊರ ಬಂದಳು.  ಕಣ್ಣು ಕೆಂಪಗಾಗಿಸಿಕೊಂಡು ಬಂದಿದ್ದ ಖಾದರ್‍ಗೆ ಯಾರ ಮಾತನ್ನೂ ಕೇಳುವ ತಾಳ್ಮೆ ಇರಲಿಲ್ಲ. “ಕ್ಯಾಗೆ ಛಿನಾಲ್ಕಿ, ನಾಳೆ ಕೊಡ್ತೀನಿ ನಾಡಿದ್ದು ಕೊಡ್ತೀನಿ ಅಂತ ಹೇಳಿ ಹೇಳಿ ಎರಡು ವರ್ಷ ಕಳಿದಿ, ಇನ್ನೆಷ್ಟು ವರ್ಷ ಹಿಂಗ ಸುಳ್ಳು ಹೇಳಕೆಂತ ಹೋಕ್ಕಿ? ರೊಕ್ಕ ಏನು ಬಿಟ್ಟಿಗೆ ಬಂದಾವಂತಾ ತಿಳ್ಕೊಂಡೇನಬೆ ಸುವ್ವರ್, ಅಸಲು ಬಡ್ಡಿ ಯಾವಾಗ ಕೊಡ್ತಿ ಹೇಳೆ ದಗಡಾಂಕಿ” ಅಂತ ಬಾಯಿಗೆ ಬಂದಂಗ ಒದರಾಕತ್ತಿದ. ಅವ ಹಿಂಗೆಲ್ಲ ಬಂದು ಬೈಯ್ಯೋದು ಮಾಮೂಲಾಗಿದ್ದರಿಂದ ಪರ್ವೀನ್ ಹೃದಯವನ್ನು ಕರಿಬಂಡೆ ಮಾಡಿಕೊಂಡು ಹಂಗೆ ನಿಂತೆ ಇದ್ದಳು. ಯಾವುದಕ್ಕಂತ ಅಳೋದು? ಕಣ್ಣು ಮತ್ತು ಹೃದಯಕ್ಕಿರುವ ಕೊಂಡಿ ಹೆಪ್ಪುಗಟ್ಟಿತ್ತು.  ಹೆದರಿಕೊಂಡಿದ್ದ ಹಸೀನಾ ತಾಯಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ದುರು ದುರು ಅಂತ ಅವನನ್ನೆ ದುರುಗುಟ್ಟಿಸಿಕೊಂಡು ನೋಡುತ್ತ ನಿಂತಿದ್ದಳು. ಬಾಯಿನೂ ಬಚ್ಚಲಾನೂ ಒಂದ್ ಮಾಡಿ ಮಾತಾಡುತ್ತಿದ್ದ ಖಾದರ್‍ನಿಗೆ ಏನಾದ್ರೂ ಒಂದ್ ಉತ್ರ ಕೊಡಲೇಬೇಕಿತ್ತು. “ತಾಯಿ ಮಗಳು ಹೆಂಗಾರ ಮಾಡಿ ಹಗಲು ರಾತ್ರಿ ದುಡಿದು ಈ ರಂಜಾನ್ ಮುಗಿಯೋದ್ರೊಳಗ ನಿನ್ನ ಋಣದ ಭಾರ ಕಡಿಮೆ ಮಾಡ್ಕೋತಿವಿ ಇದೊಂದ್ಸಾರಿ ಅವಕಾಶ ಕೊಡೊ ಖಾದರ್ ಭಯ್ಯಾ” ಅಂತ ಕೈಮುಗಿದು ನಿಂತಿದ್ದ ಪರ್ವೀನ್‍ಳ ಮೈಯಾಗ ಅದ್ಯಾವುದೋ ಭಂಡ ಧೈರ್ಯ ಮೈ ಹೊಕ್ಕಿತ್ತು. ಕೊನೆ ಅವಕಾಶಕ್ಕಾಗಿ ಕಾಲಿಗೆ ಬಿದ್ದು ಬೇಡಿಕೊಂಡಳು. ಖಾದರ್‍ನೂ ಈ ಸರ್ತಿ ತಾಳ್ಮೆ ಕಳ್ಕೊಂಡಿದ್ದ. ಅವಳು ತನಗೆ ಸಿಗಲಿಲ್ಲ ಅನ್ನೋ ಹತಾಶೆ, ಸಾಲವನ್ನು ಇನ್ನೂ ತೀರಿಸದೆ ಇದ್ದದ್ದಕ್ಕೆ ಕೋಪ ಎಲ್ಲವೂ ಸೇರಿ, “ಇದು ಕೊನೆ ಅವಕಾಶ ಕೊಡ್ತೀನಿ, ರಂಜಾನ್ ಮುಗಿಯೋದ್ರೊಳಗ ಸಾಲ ತೀರಿಸಲಿಲ್ಲ ಅಂದ್ರ ಈ ಗುಡಿಸಲು ಬಿಟ್ಟು ಹೊಂಡ್ರಿ” ಅಂತ ಉಗುದು ಹೋಗಿಬಿಟ್ಟ. ಪರ್ವೀನ್ ಕಲ್ಲುಬಂಡೆಯಂಗ ಗೋಡೆಗಾತ್ಕೊಂಡು ನಿಂತುಬಿಟ್ಲು. ಗಂಡ ಉಸಿರಾಡಿದ್ದ ಗುಡಿಸಲದು. ಈ ಗುಡಿಸಲಿನ ನೆರಿಕೆಯ ಸಂದಿ ಸಂದಿನಲ್ಲೂ ಅವ ಇನ್ನೂ ಇದ್ದಾನ.  ಬರಿ ಸಾಲ ತೀರಿಸಲಾಗದಿದ್ದಕ್ಕೆ ಇದನ್ನು ಬಿಟ್ಟು ಹೋಗೋದಾ? ಪರ್ವೀನ್ ಈಗ ಮೈಯೆಲ್ಲ ಬಸಿದು ಕಣ್ಣಾಗ ನೀರು ತಂದುಕೊಂಡಳು.

    “ನಿನ್ನಪ್ಪ  ಇರಬೇಕಾಗಿತ್ತು ಹಸೀನಾ. ಅವ ಇದ್ದಾಗ ಎಂದಾದ್ರೂ ಇಂತ ಸಂಕ್ಟ ಬಂದಿದ್ವೇನು? ನೋಡು, ನಿಮ್ಮಪ್ಪನ ಮ್ಯಾಲ ಅಲ್ಲಾನಿಗೆ ಪ್ರೀತಿ ಬಂದ್ಬಿಟ್ತು. ಕರ್ಕೊಂಡುಬಿಟ್ಟ. ಅವ ಹೋದಮ್ಯಾಲನ ಯಾರ್ಯಾರ ಕುಡಾನೋ ಹಿಂಗೆಲ್ಲ ಅನಿಸಿಕೊಳ್ಳಬೇಕಾಗಿದ್ದು, ಈ ಹಲ್ಕಟ್ ಭಾಡ್ಯಾನ ಕಾಟ ಶುರು ಆಗಿದ್ದು” ಎದೆ ಸಂಕಟವನ್ನು ಮಗಳ ಮುಂದೆ ಬಿಟ್ಟು ಮತ್ಯಾರ ಹತ್ರ ಹೇಳ್ಕೋತಾಳ? ಆದ್ರ ಎದಿಬ್ಯಾನಿಯಾದ್ರೂ ಹೆಂಗ ಕಮ್ಮಿ ಆಗ್ಬೇಕು? ತಾಯಿ ಖಾದರ್‍ನಿಗೆ ಹಲ್ಕಟ್ ಭಾಡ್ಯಾ ಅಂದಿದ್ಕ ಈ ಸರ್ತಿ ಹಸಿನಾಳಿಗೆ ನಗು ಬರಲಿಲ್ಲ. ಅಪ್ಪನ ಫೋಟೊ ನೋಡ್ಕೋತ ಕುಂತಿದ್ಲು.

     ಎರಡು ವರ್ಷಗಳ ಹಿಂದ ಇದೆ ರಂಜಾನ್ ತಿಂಗಳದಾಗ ಹಬ್ಬದ ಒಂದು ದಿನ ಮೊದಲು ಸುರ್ಕುಂಬಾ ಮಾಡಾಕ ಶಾವಿಗೆ ತರ್ತಿನಿ ಅಂತ ಹೋದಾವ ಮತ್ತ ವಾಪಾಸ ಹೆಣವಾಗಿ ಬರ್ತಾನಂತ ಯಾರಿಗೆ ಗೊತ್ತಿತ್ತು? ಅಡ್ಡಾದಿಡ್ಡಿಯಾಗಿ ಹರಿದು ಬಂದ ಕಾರಿನ ಬಾಯಿಗೆ ಇವ ತುತ್ತಾದನಷ್ಟೆ.  ಇರುವಷ್ಟು ದಿನ ಕೂಲಿ ನಾಲಿ ಮಾಡಿ ಹೆಂಡತಿ ಮಕ್ಕಳನ್ನು ಸಾಕಿಕೊಂಡಿದ್ದವನಿಗೆ ಭೂಮಿಯ ಋಣ ಬೇಗನೇ ತೀರಿ ಹೋಯ್ತು. ಅಪ್ಪನ ಹೋಲಿಕೆ ಇದ್ದ ಮಗಳ ಮುಖದಲ್ಲಿ ಗಂಡನನ್ನು ಕಾಣುತ್ತಾ  ಮಗಳ ಮುಖದಲ್ಲಿ ನಗು ಮೂಡಿದರೆ ಗಂಡನೇ ನಕ್ಕಂತಾಗಿ ಹಸೀನಾಳನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಳು ಪರ್ವೀನ್.

                                   ****

      ಪರ್ವೀನ್ ಈಗ ಮಾರ್ಕೆಟನ್ನು ದಾಟಿ ಸಂಪೂರ್ಣ ಮುಂದೆ ಬಂದು ಯಾವುದೋ ಓಣಿಯೊಂದರ ದಾರಿ ಹಿಡಿದು ನಡೆಯುತ್ತಲೇ ಇದ್ದಳು. ಅವಳು ಮಾತ್ರ ಹಾಕಿದ್ದ ಹರಿದ ಹವಾಯಿ ಚಪ್ಪಲಿ ಹಿಮ್ಮಡಿಗಳಿಗೆ ಬಡಿದು ಮಾಡುತ್ತಿದ್ದ ಚಟಚಟ ಸಪ್ಪಳ ಮಾತ್ರ ಅವರ ಮದ್ಯ ಕೇಳಿ ಬರುತ್ತಿತ್ತು. ಮುಂದೆ ಯಾವ ಬಟ್ಟೆ ಅಂಗಡಿಗಳೂ ಇಲ್ಲ ಎನ್ನುವುದು ಹಸೀನಾಗೆ ಗೊತ್ತಾಗಿ ಮುಖ ಸಣ್ಣಗೆ ಮಾಡಿ ತಾಯಿ ಕರೆದುಕೊಂಡು ಹೋಗುವಲ್ಲಿಗೆ ಮೌನವಾಗಿಯೇ ಹಿಂಬಾಲಿಸುತ್ತಿದ್ದಳು. ಈಗ ತಾಯಿಯನ್ನು ಫ್ರಾಕಿನ ಬಗ್ಗೆ ಕೇಳುವದನ್ನೆ ಬಿಟ್ಟಿದ್ದಳು. ಅವಳಿಗೆ ಗೊತ್ತಾಗಿತ್ತು ಅಮ್ಮಿ ತನಗೆ ಫ್ರಾಕು ಕೊಡಿಸಲಿಕ್ಕೆ ಕರೆದುಕೊಂಡು ಹೋಗುತ್ತಿಲ್ಲ ಎನ್ನುವುದು. ಪರ್ವೀನ್ ಆಗಾಗ ಕಣ್ಣೊರೆಸಿಕೊಳ್ಳುವುದು ಹಸೀನಾ ನೋಡಿದ್ದರೂ ಏಕೆಂದು ಕೇಳುವ ಗೋಜಿಗೆ ಹೋಗಲಿಲ್ಲ. ಅವಳು ಅಳುವ ಕಾರಣವನ್ನು ಯಾವತ್ತು ತನ್ನ ಮುಂದೆ ಹೇಳಿದ್ದಾಳೆ? ಮತ್ತು ಈಗ ಎಲ್ಲಿಗೋ ಹೊರಟಿರುವ ಉದ್ದೇಶವನ್ನೂ ಕೂಡ. ಮೊನ್ನೆ ರಾತ್ರಿ ನಡೆದ ಘಟನೆ ಪರ್ವೀನ್‍ಳ ಮನಸ್ಸಲ್ಲಿನ್ನು ಹಸಿಯಾಗೆ ಇತ್ತು.

      ಅಂದು ರಾತ್ರಿ ಹಸೀನಾ ಮಲಗಿದ್ದಳು. ಪರ್ವೀನ್ ಕೂಡ ಊಟ ಮಾಡಿ ಇನ್ನೇನು ಮಲಗಬೇಕೆನ್ನುವಷ್ಟರಲ್ಲಿ ಯಾರೋ ಕದ ಬಡಿದ ಸದ್ದು. ಹೋಗಿ ಕದ ತೆರೆದರೆ ಖಾದರ್ ನಿಂತಿದ್ದ. ಇಷ್ಟೋತ್ತಿನಲ್ಲಿ ಅವ ತನ್ನ ಮನೆಗೆ ಬಂದಿದನ್ನು ನೋಡಿ ಪರ್ವೀನ್ ವೀಪರೀತ ಹೆದರಿಕೊಂಡು ಯಾಕೆ ಬಂದಿದ್ದು ಎನ್ನುವಂತೆ ಅವನನ್ನು ನೋಡಿದಳು. ಅವನು ನಕ್ಕ. ಇವಳಿಗೆ ಅವನ ಉದ್ದೇಶ ಅರ್ಥವಾಗಿ ಕದ ಹಾಕಲು ಬಾಗಿಲನ್ನು ಮುಂದೆ ಮಾಡಿದಳು. ಅವನು ಬಾಗಿಲಿಗೆ ಕೈ ಅಡ್ಡ ಇಟ್ಟು, “ಬಲವಂತವೇನಿಲ್ಲ, ಈಗ್ಲೆ ಒಪ್ಕೋಬೇಕಂತೇನೂ ಇಲ್ಲ. ನೀ ಒಪ್ಕೊಂಡರೆ ನಿನ್ನ ಗಂಡನ ಸಾಲಾನೂ ಮನ್ನಾ ಆಕೈತಿ. ಈ ನಿನ್ನ ಗುಡಿಸಲೂ ಉಳಿತೈತಿ, ನಿಂಗೊಬ್ಳು ಮಗಳೂ ಅದಾಳ ಅನ್ನೋದು ಮರಿಬ್ಯಾಡ, ಆಕಿ ಭವಿಷ್ಯದ ಬಗ್ಗೆನೂ ವಿಚಾರ ಮಾಡು, ನಿನ್ನ ನಿರ್ಧಾರ ನಿಧಾನಕೀಲೆ ತಿಳಿಸು” ಅಂತ ಹೇಳಿ ಹೋಗಿದ್ದ. ಆ ರಾತ್ರಿಯ ಕತ್ತಲು ತನ್ನನ್ನು ನುಂಗುತ್ತಿರುವಂತೆ ಭಾಸವಾಗಿ ಬಾಗಿಲ ಬಳಿಯೇ ಕುಸಿದು ಕುಳಿತಳು. ಜಾರಕಿಬಂಡಿಯಲ್ಲಿ ಕುಳಿತು ಖುಷಿಯಿಂದ ಸುಂಯ್ ಅಂತ ಜಾರುತ್ತಿರುವ ಕನಸು ಕಂಡವರಂತೆ  ಹಸೀನಾ ಮಕ್ಕೊಂಡಲ್ಲೆ ತುಟಿಗಳಲ್ಲಿ ನಗು ತಂದುಕೊಂಡಿರುವದನ್ನು ನೋಡಿದ ಪರ್ವೀನ್‍ಳ ಸಂಕಟ ಹೆಚ್ಚಾತು.

     ನಾಲ್ಕೈದು ದಿನಗಳಾಗಿದ್ದರೂ ಇನ್ನೂ ಅದೇ ಗುಂಗಿನಲ್ಲಿದ್ದ ಪರ್ವೀನ್, ಅಸರ್ ನಮಾಜಿನ ಟೈಮಾಗಿದ್ರಿಂದ ವ್ಯಾಪಾರಕ್ಕೆ ಇನ್ನ ಹೊತ್ತಾತು ಅಂತ ಬಜಿ ಕರಿಲಿಕ್ಕೆ ಎಣ್ಣಿ ಕಾಯಾಕ ಇಟ್ಟಿದ್ಲು. ಎಣ್ಣಿ ನಿಧಾನಕ್ಕ ಕೊತ ಕೊತ ಅಂತ ಕುದಿಲಿಕ್ಕೆ ಶುರು ಮಾಡಿದಾಗ ಒಂದು ಮೆಣಸಿನಕಾಯಿಯನ್ನ ಮೊದಲೆ ನೀರಿನಲ್ಲಿ ಕಲಿಸಿಟ್ಟುಕೊಂಡಿದ್ದ ಕಡ್ಲಿ ಹಿಟ್ಟಿನೊಳಗ ಅದ್ದಿ ಕುದಿ ಎಣ್ಣೆಯೊಳಗ ಹಾಕಿದಳು. ಅದು ಚೊರ್ ಎನ್ನವ ಶಬ್ಧದೊಂದಿಗೆ ಎಣ್ಣಿಯೊಳಗೆ ಅತ್ತಿತ್ತ ಓಡಾಡತೊಡಗಿತು. ಖಾದರ್‍ನ ಆ ಮಾತುಗಳು ಎಣ್ಣೆಯಲ್ಲಿಯ ಬಜಿಯಂಗ ಎದಿಯೊಳಗ ಚೊರ್‍ಗುಟ್ಟತ್ತಲೇ ಇದ್ದವು. ಅವಳ ಮನಸ್ಸು ಗೊಂದಲದ ಎಣ್ಣೆಯೊಳಗ ಸುಡುತ್ತಲೇ ಇತ್ತು.

      ಎದೆಯುಸಿರು ಬಿಡುತ್ತ ಹೊರಗಡೆಯಿಂದ ಓಡೋಡಿ ಬಂದ ಮಗಳು ಹಸೀನಾ, “ಅಮ್ಮಿ, ಅಮ್ಮಿ, ಇವತ್ತು ಮತ್ತ ಚಂದಪ್ಪ ಮೂಡ್ತಾನಂತ ಮಸೀದಿಯೊಳಗ ಮಾತಾಡಕತ್ತಿದ್ರು. ಇವತ್ತಿಗೆ ರೋಜಾ ಮುಗುದ್ವು ಅಂತಲ್ಲಾ ಹೌದೇನು?” ಅಂತ ಹೇಳಿದಾಗ ಪರ್ವೀನ್‍ಗೆ ಆಶ್ಚರ್ಯದ ಜೊತಿಗೆ ದುಃಖನೂ ಆತು. ಚಂದ್ರ ಇನ್ನು ಮೊನ್ನೆ ತಾನೆ ಮೂಡಿದಂಗಿತ್ತು. ಇಷ್ಟು ಬೇಗ ಮತ್ತೆ ಹುಟ್ಟಿ ಬಂದ್ನಾ? ಆಗ್ಲೆ ಒಂದು ತಿಂಗಳು ಕಳೆದು ಹೋಗಿಬಿಡ್ತಾ ಎನ್ನುವ ಹತಾಶೆಯಲ್ಲಿ ಅವಳ ಕೈಕಾಲುಗಳೂ, ಮನಸ್ಸೂ ನಿಶ್ಚಲವಾದಂಗಾದ್ವು. ಅಷ್ಟೊತ್ತಿಗಾಗಲೇ ಇವತ್ತಿಗೆ ಎಲ್ಲಾ ರೋಜಾ ಮುಗಿತಾವು. ನಾಳೆ ಹಬ್ಬ ಐತಿ ಅಂತ ಮಸೀದಿಯ ಮೈಕಿನ್ಯಾಗ ಹೇಳಾದು ಅವಳ ಕಿವಿಗೆ ಬಿತ್ತು. ಅವಳಿಗೆ ಗೊತ್ತು, ಖಾದರ್‍ನ ಸಾಲ ತೀರಿಸುವಷ್ಟು ವ್ಯಾಪಾರ ಆಗಿಲ್ಲ ಅಂತ. ಆದ್ರ ಈ ರಂಜಾನ್ ಮುಗಿಯೋದ್ರೊಳಗ ಖಾದರ್‍ನ ಸಾಲ ತೀರಿಸ್ತೀನಿ ಅಂತ ಮಾತು ಕೊಟ್ಟಿದ್ದು, ಕೊಡ್ಲಿಲ್ಲ ಅಂದ್ರ ಗಂಡ ರಫೀಕ್ ಬದುಕಿದ್ದ ಈ ಗುಡಿಸಲು ಬಿಟ್ಟು ಹೋಗಬೇಕಾಗಿದ್ದು ಎಲ್ಲವೂ ನೆನಪಾಗಿ ಕಣ್ಣೀರು ಉದುರಾಕತ್ತಿದ್ವು.  ಚಂದ್ರ ಇನ್ನೊಂದಿಷ್ಟು ದಿನ ಅಲ್ಲೆ ಎಲ್ಲಾದ್ರೂ ಸತ್ತು ಹೋಗ್ಬಾಡದಿತ್ತಾ ಅನ್ನುವಷ್ಟು ಕೋಪ ಬಂತು.  ಮೊನ್ನೆ ರಾತ್ರಿ ಖಾದರ್ ಬಂದು ಆಡಿದ್ದ ಮಾತೂ ನೆನಪಿಗೆ ಬಂತು. ತುಂಬಾ ಹೊತ್ತು ಯೋಚಿಸಿದ ಪರ್ವೀನ್ ಒಳಗೆ ಹೋಗಿ ತನ್ನ ಸೆರಗಿನ ಅಂಚಿನ್ಯಾಗ ಏನೋ ಕಟ್ಕೊಂಡು ಗುಡಿಸಲಿನ ಬಾಗಿಲ ಹಾಕಿ ಮಗಳ ಕೈಹಿಡಿದು ಹೊರಟು ನಿಂತಿದ್ದಳು.

                                     ***

    ದಾರಿಯುದ್ದಕ್ಕೂ ಒಂದಿಷ್ಟು ಮೌನ, ಪರ್ವೀನ್ ಅಳುವ ಸದ್ದು, ಫ್ರಾಕಿಗಾಗಿ ಹಸೀನಾ ಲೊಚಗುಡುವ ಸಪ್ಪಳ, ನಿಧಾನಕ್ಕೆ ಹಬ್ಬತೊಡಗಿದ್ದ ರಾತ್ರಿ ಇವಿಷ್ಟೆ ತಾಯಿ ಮಗಳ ನಡುವೆ ಸಂವಹಿಸುತಿದ್ದವು. ಹಲವಾರು ಓಣಿಗಳನ್ನು, ದಾರಿಗಳನ್ನು ಹಿಂದೆ ಹಾಕಿ ಕೊನೆಗೆ ಒಂದು ಮನೆಯೊಂದರ ಮುಂದೆ ಬಂದು ನಿಂತರು. ದೊಡ್ಡದಾಗಿದ್ದ ಆ ಮನೆಯನ್ನು ಎಂದೂ ಇಂತಹ ಮನೆಯೇ ನೋಡಿಲ್ಲದವರಂತೆ ನೋಡುತ್ತಾ ಹಸೀನಾ ಮೈಮರೆತಿದ್ದಳು. “ಅಮ್ಮಿ, ಯಾರ್ದು ಇಷ್ಟ್ ದೊಡ್ಡ ಮನಿ?” ಮಗಳು ಕೇಳಿದಳು. “ಖಾದರ್‍ನದ್ದು” ತಾಯಿ ಉತ್ತರಿಸಿದಳು. ಇಲ್ಲಿಗ್ಯಾಕ ಕರ್ಕೊಂಡು ಬಂದಾಳ ಈಕಿ ಅಂತ ಹಸೀನಾಗೆ ಗೊಂದಲ. ಇವ ನಮ್ ಮನಿ ಹತ್ರನ ಬಂದ್ರ ಹೆದರಿಕೊಳ್ಳಾಕಿ, ಈಗ ಅವನ ಮನಿನೆ ಹುಡ್ಕೊಂಡು ಯಾಕ ಬಂದ್ಲು ಅನ್ನೋ ಅನುಮಾನ ಕಾಡಾಕತ್ತಿತು. ಅವನ ಮನೆಯ ಬಾಗಿಲ ಹತ್ರ ಹೋದ ಪರ್ವೀನ್, ‘ಭಯ್ಯಾ, ಭಯ್ಯಾ’ ಅಂತ ಕೂಗಿದಳು. ಸ್ವಲ್ಪ ಹೊತ್ತಿನ ನಂತರ ಖಾದರ್ ಹೊರ ಬಂದಾಗ ಅವನನ್ನು ನೋಡಿ ಹೆದರಿದ ಹಸೀನಾ ತಾಯಿಯನ್ನು ಇನ್ನಷ್ಟು ಗಟ್ಟಿಯಾಗಿ ಹಿಡಿದುಕೊಂಡು ನಿಂತ್ಲು. ಪರ್ವೀನ್ ಬಂದಿದ್ದು ನೋಡಿ ಖಾದರ್‍ಗೆ ಒಂಥರ ಆನಂದ ಆಗಿರ್ಬೇಕು, ನಕ್ಕ. ಎದಕ್ ಬಂದಿ ಎನ್ನುವಂತೆ ಅವಳೆಡೆಗೆ ದೃಷ್ಟಿ ಹಾಯಿಸಿದ. ಪರ್ವೀನ್ ಕಣ್ಣೊರೆಸಿಕೊಂಡು ತನ್ನ ಸೀರೆ ಸೆರಗಿನ ಅಂಚಿಗೆ ಕಟ್ಟಿಕೊಂಡಿದ್ದ ಗಂಟನ್ನು ಬಿಚ್ಚಿದಳು. ಅದರಲ್ಲಿ ಕೆಲವೊಂದಿಷ್ಟು ನೋಟು, ಚಿಲ್ರೆ ಹಣ ಇದ್ವು. ಜೊತೆಗೆ ಅವಳ ಕೊಳ್ಳಾಗಿನ ತಾಳಿ ಕೂಡ. ತಾಳಿ ನೋಡಿದ ತಕ್ಷಣ ಹಸೀನಾ ತಾಯಿಯ ಕುತ್ತಿಗೆ ನೋಡಿದ್ರ ಅಲ್ಲಿ ತಾಳಿ ಇರಲಿಲ್ಲ. ಅಪ್ಪ ಅಮ್ಮಿಗೋಸ್ಕರಂತ ಪ್ರೀತಿಯಿಂದ ಮಾಡಿಸಿಕೊಟ್ಟಿದ್ದು ಅದೊಂದೆ ಅಂತ ಅಮ್ಮಿ ಹೇಳಿದ್ದು ಅವಳಿಗೆ ನೆನಪಾತು.   

    ಪರ್ವೀನ್ ಅವೆಲ್ಲವನ್ನೂ ಖಾದರ್‍ನ ಕೈಗಿಡುತ್ತಾ, ‘ಭಯ್ಯಾ, ಒಂದು ತಿಂಗಳು ಅಷ್ಟೋ ಇಷ್ಟೋ ದುಡಿದ ರೊಕ್ಕ ಐತಿ.  ಎಷ್ಟು ಅದಾವಂತ ಎಣಿಸಿಲ್ಲ. ನನ್ನ ಗಂಡ ಮಾಡಿಸಿಕೊಟ್ಟಿದ್ದ ಈ ತಾಳಿನೂ ಕೊಡಾಕತ್ತೀನಿ. ಇವೆಲ್ಲದರಿಂದ ನಿನ್ನ ಸಾಲ ತೀರಬಹುದು ಅಂದ್ಕೊಳ್ತೀನಿ, ಒಂದ್ ವೇಳೆ ತೀರಲಿಲ್ಲ ಅಂದ್ರ ಹೇಳು, ಮತ್ತ ಇನ್ನೂ ದುಡೀತೀವಿ. ನಿನ್ನ ಎಲ್ಲಾ ಋಣ ತೀರಿಸ್ತೀವಿ. ಆದ್ರ ಸ್ವಲ್ಪ ಟೈಮ್ ಕೊಡು ಸಾಕು’ ಅಂತ ಕೈಮುಗಿದು ನಿಂತ್ಲು. ಏನು ಹೇಳ್ಬೇಕಂತ ಖಾದರ್‍ನಿಗೆ ಮಾತು ಬರ್ಲಿಲ್ಲ. ಹಸೀನಾಗೆ ಅವಾಗ್ಲೆ ಅರ್ಥವಾಗಿದ್ದು ಯಾಕ ತನಗ ಅಮ್ಮಿ ಇಷ್ಟೊತ್ನಾಗ ಕರಕೊಂಡು ಬಂದ್ಲು ಅಂತ. ಹೊಸ ಫ್ರಾಕು ಕನಸಾಗಿಯೇ ಉಳಿದಂಗಾತು. ಬಿರಿಯಾನಿ, ಸುರಕುಂಬಾ, ನಾಳೆ ಯಾರಾದ್ರೂ ಕೊಡ್ತಾರೇನೋ ಅಂತ ಕಾಯ್ಕೆಂತ ಕೂಡೋದು ಪಕ್ಕಾ ಆತು, ಪ್ರತಿ ವರ್ಷದಂಗ.

      ಇಬ್ರೂ ಮನಿಗೆ ಬಂದಾಗ ಹೊತ್ತು ಭಾಳ ಆಗಿ ಎಣ್ಯಾಗಿನ ಬಜಿ ಸುಟ್ಟು ಕರಿ ಇದ್ಲಿಯ ರೂಪಕ್ಕ ಬಂದು, ಸ್ಟೌ ತಣ್ಣಗಾಗಿತ್ತು. ಹಸೀನಾ ಒಳಗೆ ಬಂದು ಗೂಟಕ್ಕೆ ಸಿಗಿಸಿದ್ದ ಬಟ್ಟಿಗಂಟು ಬಿಚ್ಚಿ ತನ್ನಿಷ್ಟದ, ಅಪ್ಪ ಕೊಡಿಸಿದ್ದ ಗುಲಾಬಿ ಹೂವಿನ ಫ್ರಾಕು ತೆಗೆದು ತುಂಡು ಕನ್ನಡಿಯ ಮುಂದೆ ಹಿಡಿದು ಮತ್ತೆ ಮತ್ತೆ ನೋಡತೊಡಗಿದಳು. ಯಾಕೋ ಮೊದಲಿನಷ್ಟು ಸುಂದರವಾಗಿ ಕಾಣುತ್ತಿಲ್ಲವೆಂದು ಒಡೆದ ಕನ್ನಡಿ ನಕ್ಕಂಗಾತು. ಮಗಳಿಗೆ ಹಬ್ಬಕ್ಕ ಒಂದು ಫ್ರಾಕು ಕೊಡಿಸಾಕೂ ಆಗದ ತನ್ನ ಸ್ಥಿತಿ ನೆನದ ಪರ್ವೀನ್‍ಗೆ ದುಃಖ ಒತ್ತರಿಸಿ ಬಂತು. ಪಕ್ಕನೇ ಕರೆಂಟು ಯಾಕೆ ಹೋಯಿತು ಅಂತ ಹಸೀನಾಗೆ ಅರ್ಥ ಆಗ್ಲಿಲ್ಲ. ಮೈಕುಗಳಲ್ಲಿ ಕೇಳಿ ಬರುತ್ತಿದ್ದ ನಾಳೆಯ ಹಬ್ಬದ ಬಯಾನಿನ ಸದ್ದು ಗದ್ದಲದಾಗ ಪರ್ವೀನ್ ಅಳುವಿನ ಧ್ವನಿ ಹಸೀನಾಳ ಕಿವಿಗೆ ಬೀಳಲೇ ಇಲ್ಲ. ಚಂದ್ರ ಮುಗಿಲಿನ ಹೊಟ್ಯಾಗ ಅವಿತು ಕುಂತಿದ್ದ.  

–              ಇಸ್ಮಾಯಿಲ್ ತಳಕಲ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

4 thoughts on “ಗುಲಾಬಿ ಹೂವಿನ ಫ್ರಾಕು”

  1. ಮನಕಲಕುವ ಕಥೆ.
    ಕೋವಿಡ್ ತಂದಗೆ ಆಮ್ಲಜನಕ ಕೇಳಲು ಹೋದರೆ ಮಗಳನ್ನು ಲೈಂಗಿಕ ಸೇವೆ ನೀಡಲು ಕೇಳಿದಂತೆ ದುರುಳರು ಕೂಡ ಇದ್ದಾರೆ.
    ಬಾಡಿಗೆಯ ( ಸಾಲ) ದ ಬದಲಾಗಿ ಸೆಕ್ಸ್ ಫೇವರ್ ಕೇಳುವುದು ಎಲ್ಲ ದೇಶ, ಕಾಲದಲ್ಲಿ ನಡೆಯುತ್ತಿರುವ ದೌರ್ಜನ್ಯ. ಎಲ್ಲ ಸಮುದಾಯಗಳ ಕಥೆಯೂ ಹೌದು.
    ಈ ನಡುವೆ ಮುಗ್ಧ ಹುಡುಗಿಯ ಕನಸು ಕಮರುವುದು ಹೃದಯಕ್ಕೆ ತಟ್ಟುತ್ತದೆ.

  2. Dr K GOVINDA BHAT

    ಮಾರ್ಮಿಕ ಕತೆ. ಸತ್ವ ಪೂರ್ಣವಾಗಿದೆ ಅಭಿನಂದನೆಗಳು

  3. Prabhavati Desai

    ಸರ್ ಕಥೆ ಚನ್ನಾಗಿದೆ, ನಿರೂಪಣೆ ಸೊಗಸಾಗಿದೆ

  4. Rajendra B Shetty

    ಅಬ್ಬಾ, ಬಡತನವನ್ನು, ಆಕೆಯ ಅಸಾಹಯಕತೆಯನ್ನು ಕಣ್ಣಿಗೆ ಕಟ್ಟುವಂತೆ ಬರೆದಿದ್ದೀರಿ. ಮಗುವಿನ ಆಸೆ ಕನಸಾಗಿಯೇ ಉಳಿಯಿತು.
    ನಿಮ್ಮ ಕಥೆ ಓದುತ್ತಿದ್ದಂತೆ, ೮೦ರ ದಶಕದಲ್ಲಿನ ಘಟನೆ ನೆನಪಾಯಿತು. ಈದ್ನ ದಿನ ಮುಂಬಾಯಿಯ ಮಸೀದಿಯ ಬಳಿ, ಶುಭ್ರ ಬಟ್ಟೆ ಧರಿಸಿ ಎರಡು ಎಳೆಯ ಮಕ್ಕಳು ನಿಂತಿದ್ದರು. ಅಣ್ಣ ಮತ್ತು ತಂಗಿ. ಸಂಕೋಚದಿಂದ ಕೈ ಮುಂದೆ ಮಾಡುತ್ತಿದ್ದರು. ಅವರಿಗೆ ನಾನು ಯಾಕೆ ಯಾವ ಸಹಾಯವನ್ನು ಮಾಡಲಿಲ್ಲ ಎಂದು ನನಗೆ ಇನ್ನೂ ಅರ್ಥವಾಗುತ್ತಿಲ್ಲ.
    ಮನತಟ್ಟುವ ಕಥೆ ಓದಿದೆ.
    ಶುಭವಾಗಲಿ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter