ಬಾಳ ಬಂಡಿಯ ನೊಗಕೆ
ಹೆಗಲು ಕೊಟ್ಟವರ
ಬರಡಾದ ಎದೆಯಲ್ಲಿ
ಒಲವಧಾರೆ ಹರಿಸಿದವರ
ಚಿತೆಗಳು ಉರಿಯುತ್ತಿವೆ |
ನಾಡಜನರ ಹಸಿವು ನೀಗಲು
ಹಗಲಿರುಳು ದುಡಿವವರ
ಉಳ್ಳವರ ಒಣಿಗಳ ದಿನ
ಶುಚಿಗೊಳಿಸುವವರ
ಚಿತೆಗಳು ಉರಿಯುತ್ತಿವೆ |
ಬಡಾಯಿಗಳ ಮುಂದೆ
ಬಾಯಿಲ್ಲದೆ ಬದುಕುವವರ
ಕ್ರೌರ್ಯ ಅನಾಚಾರಗಳ
ಖಂಡಿಸಿ ಬಾಯ್ಬಿಟ್ಟವರ
ಚಿತೆಗಳು ಉರಿಯುತ್ತಿವೆ |
ಕಾಯಕ ಕಾಂಚಾಣವಿಲ್ಲದೆ
ಕೊರಗಿ ಕರಕರಿಸುವವರ
ಪ್ರಕೃತಿಯನು ವಿನಾಶ ಮಾಡಿ
ವಿಕೃತಿಯ ಮೆರೆಯುವವರ
ಚಿತೆಗಳು ಉರಿಯುತ್ತಿವೆ |
ಜಾತಿ ಮತ ಪಂಥಗಳ
ತಿಕ್ಕಾಟದಲ್ಲಿ ಸಿಕ್ಕವರ
ಅಧಿಕಾರ ಅಂತಸ್ತುಗಳ
ಹೊಡೆತಕ್ಕೆ ನಲುಗಿದವರ
ಚಿತೆಗಳು ಉರಿಯುತ್ತಿವೆ |
ಮಾನ ಮರ್ಯಾದೆಗೆ
ಅಂಜಿ ಅಳುಕುವವರ
ಸತ್ಯ ಪ್ರಾಮಾಣಿಕತೆಯಲ್ಲಿ
ನಿತ್ಯವೂ ನಡೆವವರ
ಚಿತೆಗಳು ಉರಿಯುತ್ತಿವೆ |
*-ಬಸುತನಯ*
(ಡಾ. ಶಿವಾನಂದ ಟವಳಿ)