ಇವರು ಪಾಂಚಾಲಿಕೆಯರಲ್ಲ!
ಯಾವ ಅರಮನೆಯ ಅಂಗಳದಲ್ಲಿ
ಸಿಡಿದ ಬರಸಿಡಿಲು ನಾನು
ಪಂಚ ಪಾಂಡವರ ವಲ್ಲಭೆಯಾದರೂ
ಬದುಕಿನುದ್ದಕ್ಕೂ ಕಾಡುವ ಒಂಟಿತನ
ಅಂದು ವೇದಿಕೆಯಲ್ಲಿ ನನ್ನ ಮೇಲೆ ಬಿದ್ದಾಗ ಪ್ರಕಾಶಪುಂಜ
ಸುತ್ತೆಲ್ಲ ಕುಳಿತವರು ಹೊದ್ದುಕೊಂಡಿದ್ದರೇಕೆ
ಮೈ ಮೇಲೆ ಕತ್ತಲೆಯ ಕಂಬಳಿಯ, ಅಥವಾ…
ಮುದುಡಿಕೊಂಡಿದ್ದರೆ ಮಡುಗಟ್ಟಿದ ಚಳಿಗೆ?…
ದುಶ್ಶಾಸನ ದರದರನೆ ಎಳೆತಂದಾಗ
ದುರ್ಯೋಧನ ತೊಡೆತಟ್ಟಿ ಏರೆಂದಾಗ
ದುರ್ವಿಧಿಯ ದುಹಿತೃಳಾಗಿದ್ದೆನೆ ನಾನು…
ಹೀಗೂ ಕಾಡಬಹುದೆ ಅಭಿಶಾಪ ಹೆಣ್ಣಾಗಿ?…
ಧರ್ಮ, ಬಲ, ಪರಾಕ್ರಮ, ವಿವೇಕ, ಪಾಂಡಿತ್ಯಗಳೆಂಬ
ಪಂಚಾಗ್ನಿಯ ನಡುವೆಯೂ ಏಕಾಂಗಿ ಈ ಪಾಂಚಾಲಿ
ಸದ್ದಡಗಿದ್ದು ಅಲ್ಲಿ ಕೇವಲ ನಾ ತೊಟ್ಟ ಬಳೆಗಳದ್ದಷ್ಟೆ, ಅಥವಾ…
ಸುತ್ತೆಲ್ಲ ಕುಳಿತವರೂ ತೊಟ್ಟಿದ್ದರೆ ಕಿಂಕಿಣ ಸದಕಂಕಣವ?…
ಕೃಪಾಳು ಕೃಷ್ಣ! ಸರಳವಾದೊಂದು ಪ್ರಶ್ನೆ ಈ ಕೃಷ್ಣೆಯದು
ಮಾನಧನೆಯರ ಮಾತು ಮಾರ್ದನಿಸದೆ ಲೋಕದಲಿ
ಮಾನಿನಿಯರ ಮಾನಕ್ಕೆ ಮಾನವ ಕುಲವೇಕೆ ಮೌನ…
ಅಷ್ಟೊಂದು ಸುಲಭಾತಿಸುಲಭರೆ ಈ ಮುಗುದೆಯರು?…
ಕಾಲಚಕ್ರದ ಗತಿಯಲ್ಲಿ ಪ್ರತಿಕಿರಣದಲ್ಲೂ ಪಸರಿಸುವ ಬೆಳಕು
ಕಣಕಣದಲ್ಲೂ ತೊಳೆದೀತು ಕತ್ತಲೆಯ ಕೊಳಕು
ತೋರಿಸಿಕೊಟ್ಟೀತು ಇವರು ಪಾಂಚಾಲಿಕೆಯರಲ್ಲ, ಪಳಕು
ಸೆಳೆವ ದುಶ್ಶಾಸನರ ಕರಗಳಿಗೂ ತಟ್ಟೀತು ಸೆಳಕು!