ಇವತ್ತು ವರನಟ ಡಾ. ರಾಜಕುಮಾರ ಜನುಮದಿನ (೨೪.೦೪.೧೯೨೯). ಅಕ್ಷರಶಃ ಅವರು ಕನ್ನಡ ರಂಗಭೂಮಿಯ ಪ್ರಾತಃಸ್ಮರಣೀಯರು. ಅದರಲ್ಲೂ ಕನ್ನಡ
ವೃತ್ತಿರಂಗಭೂಮಿಯ ಅನನ್ಯ ಕಾಣ್ಕೆ. ಕನ್ನಡ ಹೇಗೆ ಮಾತಾಡಬೇಕು, ಪದ – ಅಕ್ಷರ ಹೇಗೆ ಉಚ್ಛರಿಸಬೇಕು, ಮಾತೆಂಬುದು ಜೋತಿರ್ಲಿಂಗ, ನುಡಿಯೆಂಬುದು
ಮುತ್ತಿನಹಾರ, ಎಂಬ ಕಸ್ತೂರಿ ಕನ್ನಡ ಬಾಳಿದವರು. ಅಷ್ಟುಮಾತ್ರವಲ್ಲ ಅಭಿನಯವೆಂದರೆ, ನಟನಾಗುವುದೆಂದರೆ *ವಿನಯಶೀಲ*
ನಾಗುವುದೆಂಬುದನ್ನು ಬದುಕಿ ತೋರಿದವರು. ತೋರಿಕೆಯ ಬದುಕಲ್ಲ. ಓದಿದ್ದು ನಾಲ್ಕನೇ ಈಯತ್ತೆ. ರಂಗಬದುಕಿನ ಓದು ಸಾಗರೋಪಾದಿ.
ಬಾಲ್ಯದಲ್ಲಿ ಉಂಡುಡಲು ಅವರಿಗೆ ಯಥೇಚ್ಛವಾಗಿದ್ದುದು ಬಡತನ. ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಅವರಿಂದ ಬಳುವಳಿಯಾಗಿ ಬಂದುದು ಅಭಿಜಾತ
ಅಭಿನಯ. ಗುಬ್ಬಿ ಕಂಪನಿಯಲ್ಲಿ ತಂದೆಯ ಪಾತ್ರಾಭಿನಯ ಕಂಡು, ಕಲಿತು *ಕೃಷ್ಣಲೀಲೆ* ನಾಟಕದ ಬಾಲಪಾತ್ರದೊಂದಿಗೆ ರಂಗಭೂಮಿ ಪ್ರವೇಶ. ಗುಬ್ಬಿಕಂಪನಿ,
ಸುಬ್ಬಯ್ಯನಾಯ್ಡು ಕಂಪನಿಯ ಪೌರಾಣಿಕ, ಐತಿಹಾಸಿಕ ನಾಟಕಗಳ ಮೂಲಕ ರಂಗಾಭಿನಯ ತಿಳಿನೀರು ಕುಡಿದಂತೆ ಒಲಿದು ಬಂದುದು. ಮೇರುನಟನಾಗಿ
ಬದುಕಿನುದ್ದಕ್ಕೂ ಡಾ. ರಾಜ್ ಬಾಳಿದ್ದು ವಿನಯವಂತಿಕೆ. ಅದು ಕನ್ನಡದ ವಿನಯ ಮತ್ತು ಅನನ್ಯತೆಯ ಅನುಸಂಧಾನ. ಅಂತೆಯೇ ಅವರನ್ನು ಮಹಾಮೇಧಾವಿಗಳು,
ಪಂಡಿತ – ಪಾಮರರು ಮೆಚ್ಚಿಕೊಂಡರು.
ಸಿನೆಮಾದಲ್ಲಿ ಯಥೇಚ್ಛ ಅವಕಾಶಗಳಿದ್ದಾಗಲೂ ವೃತ್ತಿ ಕಂಪನಿ ನಾಟಕಗಳನ್ನು ರಾಜಕುಮಾರ ಮರೆಯಲಿಲ್ಲ. ಬನಶಂಕರಿ ಜಾತ್ರೆಯಲ್ಲಿ ಅವರ ತಂಡದಿಂದ
ಸಾಹುಕಾರ, ಬೇಡರ ಕಣ್ಣಪ್ಪ ನಾಟಕಗಳ ಪ್ರದರ್ಶನ. ಬನಶಂಕರಿಯಲ್ಲಿ ರಾಜಕುಮಾರ ಜತೆಗೆ ಚಿತ್ರಬ್ರಹ್ಮ ನಾಮಾಂಕಿತ ಜಿ. ವಿ. ಅಯ್ಯರ್, ಹಾಸ್ಯರಸಋಷಿ
ನರಸಿಂಹರಾಜು, ಬಾಲಕೃಷ್ಣ, ಅಶ್ವಥ್, ಆದವಾನಿ ಲಕ್ಷ್ಮಿದೇವಿ, ಪಂಡರೀಬಾಯಿ, ಮೈನಾವತಿ, ಹೀಗೆ ಅನೇಕ ರಂಗದಿಗ್ಗಜರು ಸೇರಿ *ಮದ್ರಾಸ ಚಲನಚಿತ್ರ
ಕಲಾವಿದರ ಸಂಘದಿಂದ* ನಾಟಕಗಳ ಪ್ರದರ್ಶನ. ಆ ಕಾಲದಲ್ಲಿ ರಾಮಸಾಗರದ ಹನುಮಂತಪ್ಪ, ಡಾವಣಗೇರಿಯ ಆರ್. ಜಿ. ಶಿವಕುಮಾರ್ ಬನಶಂಕರಿ
ಜಾತ್ರೆಯಲ್ಲಿ ಗುತ್ತಿಗೆ ಮೇಲೆ ಕ್ಯಾಂಪ್ ಮಾಡಿಸುತ್ತಿದ್ದರು. ನೆನಪಿರಲಿ ಈಗಿನ ಗುತ್ತಿಗೆದಾರರ *ಕಲ್ಚರಲ್ ಮಾಫಿಯಾ* ಅವರದಾಗಿರಲಿಲ್ಲ.
ಅಭಿಮಾನಿಗಳನ್ನು ದೇವರೆಂದು ಕರೆದ ಕನ್ನಡದರತ್ನ ಡಾ. ರಾಜಕುಮಾರ ಅವರಂತಹ ಮಹಾನ್ ರಂಗಚೇತನ ಕನ್ನಡ ವೃತ್ತಿರಂಗಭೂಮಿಯಿಂದ ಬಂದವರೆಂಬ
ಹೆಮ್ಮೆನಮ್ಮದು. ನಟಸಾರ್ವಭೌಮ ರಾಜಕುಮಾರ ಅಭಿನಯಿಸಿದ, ಅವರು ಬದುಕಿ ತೋರಿದ ಮಹಾಯಾನದಂತಹ ಕಂಪನಿ ಶೈಲಿಯ ನಾಟಕಗಳನ್ನು ನಾವು
ಅಕ್ಷರಶಃ ಪಾವಿತ್ರ್ಯದ ಪ್ರೀತಿಯಿಂದ ಪಾಲಿಸಿ, ಬದುಕ ಬೇಕಿದೆ. ಇಲ್ಲವಾದಲ್ಲಿ ಅವರು ಮತ್ತು ಅಂಥವರಿಗೆ ಅಪಚಾರವಾದೀತು. ಅಂತೆಯೇ ಅಂಥವರು ಬದುಕಿದ ರಂಗಭೂಮಿಯ ಆತ್ಮಗೌರವ ಕಟ್ಟುನಿಟ್ಟಾಗಿ ಕಾಪಾಡೋಣ ಎಂಬ ರಂಗಸಂಕಲ್ಪ ಅವರ ಜನ್ಮದಿನದಂದು ಮಾಡೋಣ. ನಮಸ್ಕಾರ.