ಹೊತ್ತು ಹೊರಡುವುದಕ್ಕೂ ಮುಂಚೆಯೇ ಹೊಲದಲ್ಲಿದ್ದ ಬಸಣ್ಣ ಅಲ್ಲಿ ಬೆಳೆದಿದ್ದ ಸೌತೆಕಾಯಿ, ಟೊಮೆಟೋಗಳನ್ನು ಹರಿದು ಬುಟ್ಟಿಗೆ ತುಂಬಿದ. ಮನೆಗೆ ಬುಟ್ಟಿ ಹೊತ್ತು ತರುವುದರಲ್ಲಿಯೇ ಇಬ್ಬನಿ ಹಾಗೂ ತನ್ನ ಮೈಬೆವರಿನಿಂದ ತೋಯ್ದು ತೊಪ್ಪೆಯಾಗಿದ್ದ. ಕೈಕಾಲುಮುಖ ತೊಳೆದು ಒಳಬಂದು ಬಟ್ಟೆ ಬದಲಾಯಿಸಬೇಕು ಎನ್ನುತ್ತಿದ್ದ ಬಸಣ್ಣನಿಗೆ ‘ರೀ ನೀರ್ ಕಾದಾವು ಜಳಕ ಮಾಡ್ರೀ, ಅಷ್ಟರಾಗ ಯಾಡ ರೊಟ್ಟಿ ಮಾಡಿಕೊಡ್ತಿನಿ’ ಅಡುಗೆಮನೆಯಿಂದ ಹೆಂಡತಿ ಪಾರವ್ವನ ಧ್ವನಿ ಬಂದಿತು. ‘ಜಳಕಕ ಟೈಮಿಲ್ಲ. ಧಾರ್ವಾಡ ಪ್ಯಾಟಿಗೆ ಹೋಗ್ಬೇಕ’ ಎನ್ನುತ್ತ ಅವಸರದಲ್ಲಿ ಮೇಲಂಗಿ ಹಾಕಿಕೊಂಡು ಹೊರಗೆ ಬಂದ ಬಸಣ್ಣ. ‘ಜಳಕಾ ಬ್ಯಾಡ. ಆದ್ರ ರೊಟ್ಟಿನಾದ್ರೂ ತಿಂದ್ ಹೋಗ್ರೀ’ ಎಂದು ಮತ್ತೆ ಕೂಗಿದಳು ಪಾರವ್ವ. `ತಿಂತಾ ಕುಂತಗೊಂಡ್ರ ಬಸ್ಸ್ ಸಿಗಲ್ಲ. ಬಾಳೇವು ಹಾಳಾಕ್ಕತೈತಿ ಸೌತೆಕಾಯಿ, ಟೊಮೇಟೋ ಬಾಗವಾನರೀಗೆ ಗುತ್ತಿಗಿ ಕೊಟ್ಟ ಲಗೂನ್ ಬರ್ತೀನಿ’ ಎನ್ನುತ್ತ ವಿಭೂತಿ ಹಚ್ಚಿಕೊಳ್ಳುತ್ತಿದ್ದ.
ಅಪ್ಪ ಪ್ಯಾಟಿಗೆ ಹೋಗುವ ವಿಚಾರ ತಿಳಿಯುತ್ತಲೇ ಹರಿದ ಪಾಟಿಚೀಲ ಹೊಲಿಯುವುದನ್ನು ಬಿಟ್ಟು ಓಡಿಬಂದ ಮಗ ಚಂದ್ರು ‘ಅಪ್ಪಾ ಈ ಸಲನಾದ್ರೂ ನಂಗೊಂದ ಹೊಸಾ ಪಾಟಿಚೀಲ ತಂದ್ಕೊಡ. ಹಳೇದು ಹೊಲದು ಹೊಲದು ಸಾಕಾತು. ಎಷ್ಟ ಹರದೈತಿ ನೀನ ನೋಡ’ ಅಂದು ಪಾಟಿಚೀಲ ತೋರಿಸಿದ. ಹೋಲಿಗೆ ಹಾಕಲು ಜಾಗವಿಲ್ಲದೆ ಮತ್ತೆ ಹರಿದಿದ್ದ ಮಗನ ಪಾಡಿಚೀಲ ಕಂಡು ಕರಳು ಚುರಕೆಂದು ಸ್ತಬ್ದನಾದ ಬಸಣ್ಣ. ಗಂಡನ ಪರಿಸ್ಥಿತಿ ಕಂಡು ಪಾರವ್ವ ‘ಅಯ್ಯ ಬಿಡ ನಮ್ಮಪ್ಪ ಪ್ಯಾಟಿಗೀನ ಪಾಟಿಚೀಲ ತಂದ ಎರಡ ದಿನದಾಗ ಹರಿತಾವ. ಅದ್ಕ ಗೌಡ್ರ ಹೊಲಕ್ಕ ಹೋದಾಗ ಖಾಲಿ ಗೊಬ್ರ ಚೀಲ ತಂದೀನಿ. ಅದ್ನ ಹೊಲದ ಕೊಡ್ತಿನಿ. ಗಟ್ಟಿಮುಟ್ಟಾಗೀರ್ತದ. ಅದು ಹರಿಯೋದ ಇಲ್ಲ ಗೊತ್ತಾ’ ಎಂದು ರಮಿಸಿದಳು. ಸುಮ್ಮನಾಗದ ಚಂದ್ರು ‘ನಮ್ ಸಾಲ್ಯಾಗ ಎಲ್ಲಾರೂ ಪ್ಯಾಟಿಗೀನ ಪಾಟಿಚೀಲಾನ ತರ್ತಾರ ನಂಗೂ ಅಂತಾದ್ದ ಬೇಕ’ ಎಂದು ಕಣ್ಣೀರು ತಂದು ಹಟಮಾಡಿದ ಮಗನಿಗೆ `ಆಯ್ತು, ಬಿಡಪಾ ಇವತ್ತ ತಂದು ಕೊಡ್ತಿನಿ. ಆದ್ರ ಸಾಲಿ ಮಾತ್ರ ತಪ್ಪಿಸಬಾರ್ದ’ ಎಂದು ಮಗನ ತಲೆಸವರಿ ಬುಟ್ಟಿ ಹೊತ್ತು ಹೊರಟ ಬಸಣ್ಣನಿಗೆ ‘ಧಾರ್ವಾಡಾದಾಗ ಸ್ವಲ್ಪ ಹೊಟ್ಟಗೇನಾರ ತಿನ್ನ್ರಿ ಬರೂತನ ಉಪಾಸ ಇರಬ್ಯಾಡ್ರೀ’ ಎಂಬ ಪಾರವ್ವಳ ಮಾತು ಕಿವಿಗೆ ಬೀಳುವ ಮೊದಲೇ ಬುಟ್ಟಿ ಹೊತ್ತ ಬಸಣ್ಣ ಅಂಗಳ ದಾಟಿದ್ದ.
ಸ್ಟಾಂಡಿಗೆ ಬರುತ್ತಲೇ ಬಸ್ಸ್ ಬಂತು. ಬುಟ್ಟಿ ಹೇರಿದ ಬಸಣ್ಣ ಕಿಟಕಿಯ ಪಕ್ಕನೇ ಕುಳಿತ. ಪೂರ್ವದಲ್ಲಿ ರಂಗು ತುಂಬಿಕೊಂಡ ರವಿಯು ಆಗಸವೇರುತ್ತಿದ್ದ. ಸೂರ್ಯನನ್ನ ನೋಡುತ್ತಲೇ `ಹೆಸ್ರು ಚಂದ್ರುವಾದರೂ ಸೂರ್ಯನಷ್ಟೆ ಪ್ರಖರ. ಚುರುಕು ಬುದ್ಧಿ ಹುಡ್ಗ. ಸಾಲಿ ಮಾತ್ರ ಬಿಡಸಬ್ಯಾಡ್ರೀ’ ಎಂದು ಅಪ್ಪಣ್ಣ ಮಾಸ್ತರ ಹೇಳಿದ ಮಾತು ನೆನಪಿಗೆ ಬಂತು. ತಾನಂತೂ ಸಾಲಿ ಕಲಿಯಲಿಲ್ಲ ಎಂಬ ನೋವು ಮಗನನ್ನು ಕಲಿಸಬೇಕೆಂಬ ಕನಸಿನ ಮುಂದೆ ಇಲ್ಲವಾಗುತ್ತಿತ್ತು. ಯಾರಾದರೂ ಚಂದ್ರುವಿನ ಕುರಿತು ಮಾತಾಡಿದಾಗ ಬಸಣ್ಣನ ಕನಸು ಇನ್ನಷ್ಟು ಅರಳುತ್ತಿತ್ತು. ಧಾರ್ವಾಡದಿಂದ ಬರುವಾಗ ಪಾಟಿಚೀಲದ ಜೊತೆಗೆ ಪೇಡೆನೂ ತರಲು ಮನಸ್ಸಿನಲ್ಲಿಯೇ ನಿರ್ಧರಿಸಿದ.
* * *
ಬಸಣ್ಣಗೆ ತನ್ನ ಅವ್ವ ಶಂಕ್ರವ್ವ, ಹೆಂಡತಿ ಪಾರವ್ವ ಹಾಗೂ ಮಗ ಚಂದ್ರುವಿನ ಎಲ್ಲಿಲ್ಲದ ಕಾಳಜಿ. ಅವರೇ ಅವನ ಪ್ರಪಂಚ. ಶಂಕ್ರವ್ವ ಮಗನ ಜೊತೆಯಲ್ಲಿಯೇ ಸಾಕಷ್ಟು ವರ್ಷ ಹೊಲದಲ್ಲಿ ದುಡಿದಿದ್ದಾಳ. ಆದರೀಗ ಹೊಲದ ಕೆಲಸ ನಿಗದು. ಮಗ-ಸೊಸೆಯು ಬೇಡವೆಂದರೂ ‘ಸುಮ್ನ ಕೂತ್ರ ಉಂಡಿದ್ದ ಕರಗಂಗಿಲ್ಲ ಬಿಡಪಾ’ ಎಂದು ಮನೆಯಲ್ಲಿಯೇ ಕೌದಿ ಹೊಲಿಯುತ್ತ ನೆರವಾಗುತ್ತಿದ್ದಾಳೆ. ಮೊಮ್ಮಗನ ನಗುವಿನಲ್ಲಿ ಅವಳಿಗೆ ವಯಸ್ಸಿನ ಕಾಯಿಲೆಯೇ ಮರೆತು ಹೋಗಿತ್ತು. ಪಾರವ್ವನಿಗೆ ಅತ್ತೆಯ ಮೇಲೆ ಬಹಳ ಪ್ರೀತಿ. ಈ ಅತ್ತೆ-ಸೊಸೆಯರ ಪ್ರೀತಿ ಕಂಡು ಕರುಬಿದವರುಂಟು. `ಅತ್ತೀಯ ಮನಿಯಾಗ ಮುತ್ತಾಗಿ ಇರಬೇಕ | ಹೊತ್ತ ನೀಡಿದರ ಉಣಬೇಕ | ತವರವರ | ಉತ್ತಮರ ಹೆಸರ ತರಬೇಕ |’ ಎಂಬ ಸ್ವಭಾವ ಪಾರವ್ವನಾದರೆ ‘ತನ್ನಂಗ ನೋಡಿದರ ಭಿನ್ನಿಲ್ಲ ಭೇದಿಲ್ಲ | ತನ್ನಂಗ ತನ್ನ ಮಗಳಂಗ | ನೋಡಿದರ | ಕಣ್ಣ ಮುಂದಾದ ಕೈಲಾಸ |’ ಎಂಬ ಗುಣ ಶಂಕ್ರವ್ವಳದು. ಜನಪದರ ಆದರ್ಶಗಳ ಪ್ರತಿರೂಪವಾದ ಯಾರನ್ನು ನೋಯಿಸದ, ಯಾರಿಗೂ ಕೊಂಕು ಮಾತನಾಡದ ಬಸಣ್ಣನ ಕುಟುಂಬವನ್ನು ಊರೇ ಮೆಚ್ಚಿಕೊಂಡಿತ್ತು.
ಬಸಣ್ಣನಿಗೆ ಪಿತ್ರಾರ್ಜಿತವಾದ ಆಸ್ತಿಯೆಂದರೆ ಎರಡು ಎಕರೆ ಹೊಲ ಮಾತ್ರ. ಅದು `ಉಳುವವನೇ ಒಡೆಯ’ ಎಂಬ ಕಾಯಿದೆಯಡಿ ಬಂದಿತ್ತು. ಆತನ ಕುಟುಂಬದ ನಿರ್ವಹಣೆಗೆ ಬೆಳೆದ ಬೆಳೆಯು ಸಾಕಾಗುತ್ತಿರಲಿಲ್ಲ. ಆದ್ದರಿಂದ ಈವರೆಗೂ ಸರ್ಕಾರಕ್ಕೆ ಪಟ್ಟನ್ನು ತುಂಬಿರಲಿಲ್ಲ. ಸರ್ಕಾರವು ಯಾವಾಗ ಭೂಮಿಯನ್ನು ವಶಪಡಿಸಿಕೊಳ್ಳುವುದೋ ಎಂಬ ಭಯದಲ್ಲಿದ್ದ ಬಸಣ್ಣ ಹಗಲು-ರಾತ್ರಿಯೆನ್ನದೆ ದುಡಿದ. ಕೆಲವು ತಿಂಗಳುಗಳ ಹಿಂದೆ ಸರ್ಕಾರಕ್ಕೆ ಪಟ್ಟು ತುಂಬಿ ಹೊಲವನ್ನು ತನ್ನ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದ. ಉಳಲು ಸ್ವಂತ ಎತ್ತುಗಳಿಲ್ಲದಿದ್ದರೂ ಇರುವ ಭೂಮಿಯನ್ನೇ ಉತ್ತಿ, ಬಿತ್ತಿ, ಬೆಳೆದು ಸೋಮಾಪುರದ ಜನತೆ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದ. ಸಾಧು ಸ್ವಭಾವದ ಮಾದರಿ ಕೃಷಿಕನಾದ ಬಸಣ್ಣನು ಊರರವರ ಪ್ರೀತಿಗೆ ಪಾತ್ರನಾಗಿದ್ದ.
ಬಸಣ್ಣನ ತಂದೆ ಈರಪ್ಪನು ಹೊಲದಲ್ಲಿ ರಂಟೆ ಹೊಡೆಯುತ್ತಿರುವಾಗ ಏಕಾಏಕಿ ಬಂದ ಅಡಮಳೆಯ ಸಿಡಿಲಿಗೆ ಬಲಿಯಾಗಿದ್ದ. ಮನೆಗೆ ಆಸರೆಯಾಗಿದ್ದ ಈರಪ್ಪ ಹಾಗೂ ಜೋಡೆತ್ತುಗಳನ್ನು ಕಳೆದುಕೊಂಡಾಗ ಬಸಣ್ಣನಿಗೆ ಹತ್ತು ವರ್ಷವಿರಬಹುದು. ದಿಕ್ಕಿಲ್ಲದ ಶಂಕ್ರಮ್ಮಳಿಗೆ ತವರುಮನೆಯವರು ಹಾಗೂ ಊರವರು ನೆರವು ನೀಡಿದ್ದರಿಂದ ಸ್ವಂತ ದುಡಿಮೆಯಿಂದ ಮಗನನ್ನು ಸಾಕಿ ಬೆಳೆಸಿದ್ದಳು. ಆದರೆ ಅವಳ ದುಡಿಮೆಯು ಹೊಟ್ಟೆಬಟ್ಟೆಗೆ ಸರಿಯಾಗುತ್ತಿತ್ತೆ ವಿನಃ ಬಸಣ್ಣನನ್ನು ಓದಿಸಲು ಆಗಲಿಲ್ಲ. ಹದಿನೈದರ ಪ್ರಾಯದಲ್ಲಿಯೇ ತಾಯಿಯ ಕಷ್ಟವನ್ನು ತಿಳಿದು ಬಸಣ್ಣನು ಕೂಲಿ-ನಾಲಿ ಮಾಡುತ್ತ ಮನೆಯ ಜವಾಬ್ದಾರಿಯನ್ನು ಹೊತ್ತುಕೊಂಡನು.
ತಂದೆಯು ಬದುಕಿದ್ದಾಗ ಮಾಡಿದ 20 ಸಾವಿರ ಸಾಲಕ್ಕೆ ಹೊಲವನ್ನು ಬಡ್ಡಿಗೆ ಹಾಕಲಾಗಿತ್ತು. 3-4 ವರ್ಷದಲ್ಲಿಯೇ ಬಿಡುವಿಲ್ಲದ ದುಡಿಮೆಯ ಮಾಡಿ ಹೊಲವನ್ನು ಬಿಡಿಸಿಕೊಂಡ ಬಸಣ್ಣ ಸ್ವತಂತ್ರ ರೈತನಾದ. ಆಗ ತಾಯಿ-ಮಗನಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಮೊದಮೊದಲು ಬಾಡಿಗೆ ಎತ್ತುಗಳಿಂದ ಉಳುಮೆ ಮಾಡುತ್ತಿದ್ದ ಬಸಣ್ಣ ಎರಡೆತ್ತುಗಳನ್ನು ಕೊಂಡುಕೊಂಡನು. ಕೊಳ್ಳುವಾಗ ಬಡಕಲಾಗಿದ್ದ ಎತ್ತುಗಳಿಗೆ ಹೊಟ್ಟು ಮೇವು-ಹಿಂಡಿಯ ಚಾಕರಿ ಮಾಡಿ ಮೊಗದಸ್ತಾಗಿ ಬೆಳೆಸಿದ. ಬಸಣ್ಣನಿಗೆ ಎತ್ತುಗಳೆಂದರೆ ಎಲ್ಲಿಲ್ಲದ ಪ್ರೀತಿ. ವಾರಕ್ಕೆರಡು ಬಾರಿ ಮೈತೊಳೆದು, ದಿನಕ್ಕೆರಡು ಬಾರಿ ಮೈಕೈಯಾಡಿಸಿ ಪ್ರತಿದಿನ ಸಂಜೆಗೆ ಹುರುಳಿ ರುಬ್ಬಿ ಇಡುತ್ತಿದ್ದನು. ಸೋಮವಾರಕ್ಕೊಮ್ಮೆ ಹಳ್ಳಿಗರು ಗುಡಿಕಟ್ಟೆ, ಸಿನಿಮಾ-ಹೋಟೇಲೆಂದು ಸಮಯಗಳೆದರೆ ಆ ದಿನವೂ ಬಸಣ್ಣ ಹೊಲದಲ್ಲಿರುತ್ತಿದ್ದ.
ಈಗಲೂ ಹೊಲಕ್ಕೆ ಬರುತ್ತಿದ್ದ ಶಂಕ್ರವ್ವನಿಗೆ ‘ದೇವ್ರು ಈಗೆಲ್ಲ ಕೊಟ್ಟಾನು. ಸುಮ್ನ ಮನ್ಯಾಗ ಆರಾಮ್ ಇರಬಾರ್ದ್ ನಮ್ಮವ್ವ’ ಎಂದು ಬಸಣ್ಣ ಎಷ್ಟೇ ಹೇಳಿದರೂ ಅವಳದು ಒಂದೇ ಹಟ. `ಯಪ್ಪಾ ಮನಾಗಿದ್ದು ಎನ್ ಮಾಡ್ಲಿ ನನಗ್ ಹೊತ್ತ ಹೋಗುದಿಲ್ಲ. ಹೊಲಕ್ಕ ಬಂದ್ರ ಟೈಮು ಹೊಕ್ಕೇತಿ, ಹಸರ್ ನೋಡ್ತಿದ್ರ ಉಸಿರ ಹೆಚ್ಚಕ್ಕೈತಿ ಬಿಡಪ್ಪಾ’ ಎಂದು ಬಿಸಿಲೇರುವ ಮುನ್ನವೆ ಬಸಣ್ಣನಿಗೆ ಬುತ್ತಿ ಕೊಟ್ಟಿಕೊಂಡು ಹೋಗುತ್ತಿದ್ದಳು. ಈಗ ಶಂಕ್ರವ್ವಳ ಕನಸೊಂದೆ. ಮಗನಿಗೆ ಚೆಂದುಳ್ಳಿ ಚೆಲುವಿ ಹುಡುಕಿ ಮದುವೆ ಮಾಡಿಸಿ ಮೊಮ್ಮಗನನ್ನು ಆಡಿಸೋದು. ಮದುವೆ ಮಾತು ಬರುತ್ತಲೇ ಸಾಲ, ಬಡ್ಡಿ, ಎತ್ತು, ಮನೆಯ ನೆಪ ಹೇಳಿ ಮುಂದೂಡುತ್ತಿದ್ದ ಬಸಣ್ಣನಿಗೆ ಈ ಸಲ `ಹ್ಞೂಂ’ ಅನ್ನದೆ ಬೇರೆ ದಾರಿಯೇ ಇರಲಿಲ್ಲ.
ಸೋಮಾಪುರಕ್ಕೆ ನಾಲ್ಕೈದು ಮೈಲುಗಳ ದೂರವಿದ್ದ ಗೆಜ್ಜೆಹಳ್ಳಿಯಲ್ಲಿ ಮಗನಿಗಾಗಿ ಹುಡುಗಿ ನೋಡಿ ಬಂದ ಶಂಕ್ರವ್ವ. ತನ್ನ ಶಕ್ತಿಮೀರಿ ಬಂಧು-ಬಳಗದವರನ್ನು ಕರಸಿ ಬಸಣ್ಣ-ಪಾರವ್ವಳ ಮದುವೆಯನ್ನು ಮಾಡಿದಳು. ಪಾರವ್ವಳು ಬಡಕುಟುಂಬದಿಂದ ಬಂದ ಹೆಣ್ಣುಮಗಳು. ಅವಳು ಬಹುಬೇಗನೆ ಅತ್ತೆ ಮನೆಗೆ ಹೊಂದಿಕೊಂಡಳು. ಸ್ತುತಿನಿಂದೆಗಳಿಗೆ ತಲೆಕೊಡದ ಇರ್ವರೂ ಬಸಣ್ಣನ ದುಡಿಮೆಯಲ್ಲಿ ಹೆಗಲುಕೊಟ್ಟು ದುಡಿಯುತ್ತಿದ್ದರು. ಎಲ್ಲ ಕೂತು ಉಣ್ಣುತ್ತಿದ್ದರು. ಹೊಲಮನೆಯ ಕೆಲಸಗಳಲ್ಲಿ ಒಬ್ಬರಿಗೊಬ್ಬರು ನೆರವಾಗುತ್ತಿದ್ದರು. ಮರುವರ್ಷದಲ್ಲಿಯೇ ಮೊಮ್ಮಗನನ್ನು ಮಡಿಲಲ್ಲಿಟ್ಟುಕೊಂಡ ಶಂಕ್ರವ್ವಳಿಗೆ ಸ್ವರ್ಗಕ್ಕೆ ಮೂರೇ ಗೇಣು. `ಭಗವಂತಾ ಭಾಗ್ಯದ ಬಾಗ್ಲ ತೆಗೆದಾ’ ಎಂದು ಮನೆ ದೇವರಿಗೆ ಹರಕೆ ತೀರಿಸಿದಳು. ಹಿರಿಹಿರಿ ಹಿಗ್ಗಿ ಊರಿಗೆಲ್ಲ ಸಿಹಿಹಂಚಿ ಸಂತಸಪಟ್ಟಳು. `ಯವ್ವಾ ಬಾಣಂತಿ ಹೆಣಮಗಳ ತಂಪನ್ಯಾಗ ಅಡ್ಡ್ಯಾಡಬ್ಯಾಡ’ ಅಂದು ಪಾರವ್ವಳನ್ನು ಕೆಲಸಕ್ಕೂ ಬಿಡದೇ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ಜ್ವಾಪಾನ ಮಾಡುತ್ತಿದ್ದಳು. `ಇರ್ಲಿ ಬಿಡ್ರೀ ಅತ್ತಿ ಅಷ್ಟಕ್ಕ ಏನಾಗುದಿಲ್ಲ. ನೀವು ಮೊಮ್ಮಗನ್ನ ಜೊತಿ ಆಡ್ರೀ’ ಎಂದು ಅತ್ತೆಯ ಕೆಲಸದಲ್ಲಿ ನೆರವಾಗುತ್ತಿದ್ದಳು. ಇರ್ವರ ಕಕ್ಕುಲಾತಿ ಕಂಡ ಬಸಣ್ಣನು `ಅತ್ತಿ ಸೊಸಿ ಮ್ಯಾಲ ಯಾರದೂ ಕೆಟ್ಟ ಕಣ್ಣ ಬೀಳದಿರಲಿ ಪಾ’ ಎಂದು ಅವರ ಆನಂದದಲ್ಲಿ ಪರಮಾನಂದ ಹೊಂದುತ್ತಿದ್ದ.
* * *
ಬಸಣ್ಣ ಧಾರವಾಡಕ್ಕೆ ಬಂದು ಇಳಿದಾಗ ಗಂಟೆ ಬಂಭತ್ತಾಗಿತ್ತು. ಇನ್ನೇನು ಗುತ್ತಿಗೆ ಮಾರುಕಟ್ಟೆ ಬಂದ್ ಆಗುವುದೇನೋ ಎಂದು ಅವಸರವಾಗಿ ಬುಟ್ಟಿ ಹೊತ್ತು ನಡೆದ. ಆಗಲೇ ಹಲವಾರು ರೈತರು ತಾವು ತಂದಿದ್ದ ಕಾಯಿಪಲ್ಲೆ ಬುಟ್ಟಿಗಳನ್ನು ಲಿಲಾವಿಗೆ ಇಟ್ಟಿದ್ದರು. ಇಷ್ಟೊತ್ತಿಗಾಗಲೇ ಲಿಲಾವು ಮುಗಿಯಬೇಕಿತ್ತು. ಆದರೆ ಸಂತೆಯ ಕಾರಣದಿಂದ ತಡವಾದದ್ದು ಬಸಣ್ಣನಿಗೆ ವರವಾಯಿತು. ಮನಸ್ಸಿನಲ್ಲಿಯೇ ಮನೆದೇವರÀನ್ನು ಸ್ಮರಿಸಿದ. ಮಾರುಕಟ್ಟೆಯಲ್ಲಿ ಮೆಣಸಿನಕಾಯಿ, ಟೊಮೆಟೊ, ಸೌತೆಕಾಯಿ ಬೇರೆ ಬೇರೆ ತರಕಾರಿಗಳ ಲಿಲಾವು ನಡೆಯುತ್ತಿತ್ತು. ಎಂದಿನಂತೆ ಗದ್ದಲ. ‘ಬುಟ್ಟಿಗೆ ನೂರ….. ನೂರಾಹತ್ತು…..ನೂರಿಪ್ಪತ್ತು….’ ಎಂದು ಒದರುತ್ತಿದ್ದರು. ಬುಟ್ಟಿ ಟೊಮೆಟೊಗೆ ನೂರು ಇಪ್ಪತ್ತು. ಸೌತೆಕಾಯಿ ಎರಡು ನೂರಕ್ಕೆ ಲಿಲಾವು ಆಯಿತು. ಮಾರುಕಟ್ಟೆಗೆ ತಕ್ಕ ಬೆಲೆ ಅಲ್ಲವಾದರೂ ವಿಧಿಯಿಲ್ಲದೇ ಕೊಟ್ಟು ನಿಟ್ಟುಸಿರುಬಿಟ್ಟ ಬಸಣ್ಣ ತಲೆವಸ್ತ್ರದಿಂದ ಮುಖವರೆಸಿಕೊಂಡ.
ಬೇಗನೆ ಮರಳಬೇಕೆಂದು ಅವಸರದಿಂದ ಮಗನಿಗಾಗಿ ಬ್ರೆಡ್ಡು, ಬಿಸ್ಕಿಟು, ಪಾಟಿಚೀಲ ಖರೀದಿಸಿದ. ಅಂಗಡಿಯಿಂದ ಹೊರಬರುವಷ್ಟರಲ್ಲಿಯೇ ಗಲಾಟೆ, ಕೂಗು, ಚೀರಾಟ ಶುರುವಾಯಿತು. `ಏನೇ ಬರಲಿ ಒಗ್ಗಟ್ಟಿರಲಿ’ ‘ಸರ್ಕಾರಕ್ಕೆ ಧಿಕ್ಕಾರವಿರಲಿ, ರೈತರಿಗೆ ಜಯವಾಗಲಿ’ – ಎಂಬ ಘೋಷಣೆಗಳೊಂದಿಗೆ ಗುಂಪೊಂದು ಮಾರುಕಟ್ಟೆಯನ್ನು ಪ್ರವೇಶಿಸಿತು. ಬಂದವರು ಅಲ್ಲಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತೆ ಸೂಚಿಸುತ್ತಿದ್ದರು. ಯಾಕೆ? ಎಂದು ಪ್ರಶ್ನಿಸಿದವರ ಅಂಗಡಿಗಳಿಗೆ ನುಗ್ಗಿ ದಾಂಧಲೆ ಮಾಡುತ್ತಿದ್ದರು. ಇಲ್ಲಿ ಎನು ನಡೆಯತ್ತಿದೆ? ಎಂಬ ಪರಿವೆ ಇಲ್ಲದ ಜನರು ತಮ್ಮ ತಮ್ಮೊಳಗೆ ಏನೇನೋ ಮಾತಾಡುತ್ತಿದ್ದರು. ಕೆಲವರು ಗಲಾಟೆಯ ಗೊಡವೆಯೇ ಬೇಡವೆಂದು ಅಲ್ಲಿಂದ ಕಾಲ್ಕಿತ್ತರು.
ಬುಟ್ಟಿಗಳನ್ನು ಲೆಕ್ಕಹಾಕಿ ಹಣ ನೀಡುತ್ತಿದ್ದ ವ್ಯಾಪಾರಿಗಳು ವಿಚಲಿತರಾಗಿ ಅಂಗಡಿ ಮುಚ್ಚಿದರು. ಅಲ್ಲಿದ್ದ ರೈತರು ಪ್ರತಿಭಟನಾಕಾರರನ್ನು ಬೇಡಿಕೊಂಡರು. ಕೇಳದ ಪ್ರತಿಭಟನಾಕಾರರು ಅಲ್ಲಿದ್ದ ತರಕಾರಿ ಬುಟ್ಟಿಗಳನ್ನು ರಸ್ತೆಗೆ ಎತ್ತಿ ಒಗೆಯತೊಡಗಿದರು. ಹಿರಿಯನಾದ ಚನ್ನಪ್ಪಜ್ಜನು `ಯಪ್ಪಾ ಬೆವರು ಸುರ್ಸಿ ಬೆಳೆದ ಬೆಳೀ ಹಿಂಗ ಚೆಲ್ಲಿ ಹೊಟ್ಟೀ ಮ್ಯಾಲ ಹೊಡೀಬ್ಯಾಡ್ರೀ….. ಮಾರೇವಿ ರೊಕ್ಕ ಇಸಗೊಂಡ ಹೋಗಿಬಿಡ್ತೇವಿ’ ಎಂದು ಅಂಗಲಾಚಿದ. ಪ್ರಯೋಜನವಾಗಲಿಲ್ಲ. ಆಗ ಬಸಣ್ಣನು ಜೊತೆಗೂಡಿ ಅನೇಕ ರೈತರು ‘ಅಪ್ಪಾ ನಾವು ರೈತರ ಅದೀವಿ, ನಿಮಗೂ ರೈತರ ಸಂಕಟ ಎನ ಅನ್ನೋದ ಗೊತ್ತದ. ಹಿಂಗ ಬೆಳೆದ ಬೆಳೀನಿ ರಸ್ತೆಗೆ ಚೆಲ್ಲಬ್ಯಾಡ್ರೀ’ ಎಂದು ಅಂಗಲಾಚಿದರು. ಕೆಲವರು ಕಾಲಿಗೂ ಬಿದ್ದು ಬೇಡಿದರು. ಕನಿಷ್ಠ ಕನಿಕರವಿಲ್ಲದ ಪ್ರತಿಭಟನಾಕಾರರು ತಮ್ಮ ಹುಚ್ಚಾಟ ಮುಂದುವರೆಸಿ ವಿಕೃತಾನಂದ ಪಡೆಯುತ್ತಿದ್ದರು.
‘ನೋಡ ಬಸಣ್ಣ ನಾವ್ ಕಷ್ಟಪಟ್ಟು ಬೆಳ್ದ ಬೆಳಿ ರಸ್ತೀ ಪಾಲಾತು’ ಅಂದ ಓಬ್ಬ. ‘ಇಂತವರಿಗೇನೂ ಗೊತ್ತು ರೈತರ ಕಷ್ಟಾ. ಬ್ಯಾರೆಯವ್ರ ಉರಿವೊಳ್ಗ ಬೆಂಕಿ ಕಾಸ್ಗೊಳು ಮಂದಿ ಇವ್ರು’ ಮತ್ತೊಬ್ಬ. ರಸ್ತೆಗೆ ಬಿದ್ದ ತರಕಾರಿ ಕಂಡ ರೈತರು ‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂದು ಕಣ್ಣೀರು ತಂದರು. ಮಗದೊಬ್ಬ ‘ಮೊದ್ಲ ಇಲ್ಲಿಂದ ಊರ ಸೇರ್ಕೋಳು ದಾರಿ ನೋಡ್ರೀ. ಹೋದದ್ದು ಹೋತು. ಯಾಕಂದ್ರ ಸಿಟಿಯೊಳಗ ದಾಂಧಲೆ ನಡೆದದ’ ಎಂದು ಎಚ್ಚರಿಸಿದ. ಬಸಣ್ಣ, ಚನ್ನಪ್ಪಜ್ಜ ಹೀಗೆ ಅಲ್ಲಿ ಬೆಳೆಯನ್ನು ಮಾರಲು ಬಂದಿದ್ದ ರೈತರಿಗೆ ದಿಕ್ಕೆ ತೋಚದಂತಾಯಿತು. ಅಲ್ಲಿ ನೆರೆದಿದ್ದ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಆದರೆ ಯಾರೊ ಕಿಡಿಗೇಡಿಗಳು ಪೋಲಿಸರತ್ತ ಕಲ್ಲು ತೂರಿದರು. ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗದೆ ಪ್ರತಿಭಟನಾಕಾರರನ್ನು ಚದುರಿಸಲು ಕೊನೆಗೆ ಲಾಠಿಚಾರ್ಜ್ ಶುರುವಾಯಿತು.
‘ಅಯ್ಯೋ ದೇವರ ಲಗೂನ ತಪ್ಪಿಸ್ಕೊಂಡ ನಡೀರಿ ಲಾಠಿ ಏಟು ಸುರುವಾದ್ವು. ಕನಿಕರಯಿಲ್ದ ಸಿಕ್ಕಸಿಕ್ಕಲ್ಲೆ ಹೊಡಿತಾರ ತಪ್ಪಿಸ್ಕೊಳ್ರಿ ತಪ್ಪಿಸ್ಕೊಳ್ರೀ’ ಅನ್ನುತ್ತಾ ಚನ್ನಪ್ಪಜ್ಜ ಗುಂಪಿಗೆ ಎಚ್ಚರಿಸಿದನು. ತೋಚಿದ ಕಡೆಗೆ ಗುಂಪು ಚದುರಿತು. ಕಲ್ಲಿನೇಟು ತಿಂದು ಗಾಯಗೊಂಡ ಪೋಲಿಸರು ಪ್ರತಿಭಟನಾಕಾರರ ಮೇಲೆ ಮುಗಿಬಿದ್ದರು. ಸಿಕ್ಕಸಿಕ್ಕವರ ಮೇಲೆ ಲಾಠಿ ಬೀಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ ಪುಡಿ ರಾಜಕಾರಣಿಗಳೆಲ್ಲ ಕಾಲ್ಕಿತ್ತರು. ಹಣಕೊಟ್ಟು ಪ್ರತಿಭಟನೆಗೆ ಕರೆತಂದ ಹಳ್ಳಿಜನ ಹಾಗೂ ಮಾರುಕಟ್ಟೆಯಲ್ಲಿ ನೆರೆದಿದ್ದ ರೈತರ ಮೇಲೆ ಲಾಠಿ ಏಟುಗಳು ಬಿದ್ದವು. ಕೆಲವರು ಹೊಡೆತಗಳನ್ನು ತಾಳಲಾರದೆ ‘ಯಪ್ಪಾ, ಯವ್ವಾ ಹೊಡಿಬ್ಯಾಡ್ರೀ ನಿಮ ಕೈ ಮುಗಿತೀನಿ’ ಅಂದ್ರು ಪೋಲಿಸರು ಬಿಡಲಿಲ್ಲ. ‘ನಾವಲ್ರೀ ಸಾಹೇಬ್ರ ನಾವಲ್ರೀ’ ಅಂದ್ರೂ ಬೆತ್ತದ ರುಚಿ ನೋಡಬೇಕಾಯಿತು.
ಬಸಣ್ಣ ಹಾಗೂ ಚನ್ನಪ್ಪಜ್ಜನೂ ಮೇಲೆಯೂ ಲಾಠಿಯೂ ತನ್ನ ಆಟವನ್ನು ಆಡಿತು. ಚನ್ನಪ್ಪಜ್ಜ ಪರಿಪರಿಯಾಗಿ ಬೇಡಿದರೂ ಬಿಡದ ಆರಕ್ಷಕರು ಎರಡೇಟು ಜೋರಾಗಿ ಕೊಟ್ಟರು. ಲಾಠಿಯೇಟಿಗೆ ಕುಸಿದ ಚನ್ನಪ್ಪಜ್ಜನನ್ನು ನೋಡಿ, `ಅಯ್ಯೋ ಸಾಹೇಬ್ರ ಬಿಡ್ರೀ ಮುದುಕ ಮನುಷ್ಯಾಗ ಹೋಡಿಬ್ಯಾಡ್ರೀ’ ಎಂದು ತನಗೆ ಬೀಳುತ್ತಿದ್ದ ಏಟುಗಳನ್ನು ಸಹಿಸಿಕೊಂಡು ಬಸಣ್ಣನ ಚನ್ನಪ್ಪಜ್ಜನನ್ನು ಸುತ್ತುವರಿದ. ‘ನಮಗ ಅಡ್ಡ ಬರ್ತಿ’ ಅಂದು ಪೋಲಿಸರು ಬಸಣ್ಣನಿಗೆ ಹಿಗ್ಗಾಮುಗ್ಗಾ ಬಡಿದರು. `ಅಯ್ಯೋ ಯವ್ವಾ, ಯಪ್ಪಾ, ಸಾಹೇಬ್ರ ನಾನ್ ಹೋರಾಟಕ್ಕ ಬಂದಿಲ್ರೀ, ಬಿಡ್ರೀ, ಹೊಡಿಬ್ಯಾಡ್ರೀ’ ಅನ್ನುತ್ತಲೇ ಹೊಡೆತಗಳನ್ನು ತಾಳಲಾರದೆ ನೆಲಕ್ಕೆ ಕುಸಿದ ಬಸಣ್ಣ ಮೇಲಕ್ಕೇಳಲೇ ಇಲ್ಲ. ಬಸಣ್ಣನಿಗೆ ದಾರಿ ಕಾಯುತ್ತಲೇ ಶಂಕ್ರವ್ವ ಸಂಜಗೆ ಕಸಗುಡಿಸಿ ಅಂಗಳಕ್ಕೆ ನೀರು ಚಿಮುಕಿಸಿದಳು. ಪಾರವ್ವ ಚಹಾ ಒಲೆ ಮೇಲೆ ಇಟ್ಟು ಮನೆದೀಪ ಹಚ್ಚಿದಳು. “ಕತ್ಲಾತು ಬಾ ಚಂದ್ರು ಒಳಗ” ಎಂದು ಎಷ್ಟೇ ಕರೆದರೂ ಹೋಗದ ಚಂದ್ರು ಕಟ್ಟೆಯ ಮೇಲೆ ಕುಳಿತು ಹೊಸ ಪಾಟಿಚೀಲದ ಕನವರಿಕೆಯಲ್ಲಿದ್ದಾನೆ. ಆದರೆ ಬ್ರೆಡ್ ಕಬಳಿಸಲು ಕಚ್ಚಾಡಿದ ಬೀದಿನಾಯಿಗಳ ಕಚ್ಚಾಟದಲ್ಲಿ ಹರಿದ ಪಾಟಿಚೀಲವು ರಕ್ತದ ಕಲೆಗಳೊಂದಿಗೆ ರಸ್ತೆಯಲ್ಲಿಯೇ ಬಿದ್ದಿದೆ.
****
5 thoughts on “ಪಾಟಿಚೀಲ”
very good story with unexpected end.
ಹೃದಯ ಸ್ಪರ್ಶಿ ಕಥೆ, ತುಂಬಾ ಚನ್ನಾಗಿ ಮೂಡಿ ಬಂದಿದೆ. ಅಭಿನಂದನೆಗಳು ಶಿವಾನಂದ ಸರ್.
ಮನ ಕಲಕುವಂತಹ ಸನ್ನಿವೇಶ ಅದ್ಭುತವಾಗಿ ಮೂಡಿಬಂದಿದೆ ಅಣ್ಣಾ…. “ಪಾಟಿ ಚೀಲ ” ಅದ್ಭುತವಾದ ಕಥೆ 👌👌👌💐💐👍
ಕಣ್ಣ ಮುಂದೆ ಬಂದು ಹೋಯಿತು ಕತೆಯ ಸಾರಾಂಶ.. ಅದ್ಭುತವಾಗಿದೆ.. 🙏🙏
ತುಂಬಾ ಚೆನ್ನಾಗಿ ಬರೆದಿದ್ದೀರ Sir.