ಆ ಮಹಾನಗರದಲ್ಲಿ ಸದಾ ಜಿಗಿ ಜಿಗಿ ಅನ್ನುವ ಬಸವನ ಸರ್ಕಲ್ಲು, ಶತಮಾನಗಳ ಸೌಂದರ್ಯವನ್ನೇ ಕಳೆದುಕೊಂಡು ಪೆಚ್ಚು ಮೊರೆ ಹಾಕಿಕೊಂಡು ಮಲಗಿದಂತೆ ಕಾಣುತಿತ್ತು. ಹೂವು, ಹಣ್ಣು, ತಿಂಡಿ, ಪಂಡಿಯ ಅಂಗಡಿಗಳಿಗೆ ಹಾಕಿದ್ದ ಬೀಗದ ಮೇಲೆ ಜೇಡ ಕಟ್ಟಿತ್ತು. ಬೀಗದ ಕೈ ತೂರಿಸುವ ತೂತದೊಳಗೆ ಹೆಸರೇ ಗೊತ್ತಿಲ್ಲದ ಹುಳಗಳು ಹೊರಗೆ ಬರಲಾದರೆ ವಿಲ ವಿಲ ಮುಲುಗುಡುತ್ತಿದ್ದವು.ರಸ್ತೆಗಳಂತೂ ಹೆಜ್ಜೆಗಳ ಸದ್ದು ಕೇಳದೇ, ಮೆಟ್ಟಿನ ತುಳಿತಗಳಿಲ್ಲದೇ ನೆಮ್ಮದಿಯಾಗಿತ್ತು. ಅಲ್ಲೊಂದುಇಲ್ಲೊಂದು ಓಡಾಡುವ ವಾಹನಗಳು, ಇಲ್ಲೊಬ್ಬ ಅಲ್ಲೊಬ್ಬ ನಡೆದಾಡುವ ಮನುಷ್ಯನ ಚಿತ್ರಗಳನ್ನು ನೋಡಿದರೆ ಐವತ್ತು ವರ್ಷಗಳ ಹಿಂದೆ ಆ ನಗರ ಹೀಗಿತ್ತು, ಎಪ್ಪತ್ತೈದು ವರ್ಷಗಳ ಹಿಂದೆ ಹಾಗಿತ್ತು ಅನ್ನುವ ಹಳೆಯ ಬ್ಲಾಕ್ ಅಂಡ್ವ್ಹೈಟ್ ಪುರಾತನ ಫೋಟೋಗಳಂತೆ ಕಾಣುತಿತ್ತು. ಇದು ಮನುಷ್ಯ ಚಟುವಟಿಕೆಗಳಿಗೆ ಲಾಕ್ ಡೌನ್, ಜೀವ ಸಂಕುಲಕ್ಕೆ ಸಂಪೂರ್ಣ ಅನ್ ಲಾಕ್ ಕಾಲ. ವಯ ವಯ ಎನ್ನುವ ಆಂಬುಲೆನ್ಸ್ ಸದ್ದು ಕೇಳಿಸಿಕೊಂಡ ಹಕ್ಕಿಗಳು ಹಾರುತ್ತಿದ್ದವು.ಮನೆಯೊಳಗೇ ಕವುಚಿಕೊಂಡ ಮನುಷ್ಯ ಕುಲಕೋಟಿ ಹೆದರಿ ಹೇತುಕೊಂಡು ಅಂಬುಲೆನ್ಸ್ ಒಳಗಿರುವ ‘ರೋಗಿ ಯಾರಿರಬಹುದು, ವಯಸ್ಸು ಎಷ್ಟು ಇರಬಹುದು, ಬೇರೆ ಖಾಯಿಲೆಗಳು ಏನಾದರೂ ಇದ್ದಿರಬಹುದೇ? ಎಂದು ತಮ್ಮಷ್ಟಕ್ಕೆ ತಾವು ಕಲ್ಪಿಸಿಕೊಂಡು ಒಲೆ ಮೇಲೆ ಬಿಸಿನೀರು ಕಾಯಲು ಇಡುತ್ತಿದ್ದರು. ಹೊಸಿಲಿಗೆ ರಂಗೋಲೆ ಕಾಣದ ದೇವಾಲಯಗಳ ಬಾಗಿಲಿನಲ್ಲಿ ಹೂವು ಕೊಳೆತು ಗೊಬ್ಬರವಾಗುವ ರೀತಿ ಭಿಕ್ಷುಕರು ಬಿದ್ದುಕೊಂಡಿರುತ್ತಿದ್ದರು.
ಇದೇ ಬಸವನ ಸರ್ಕಲ್ಲಿನಲ್ಲೇ ರಾಮನ್ ಮನೆಯಿತ್ತು. ಈ ಮನೆಗೆ ಸುಮಾರು ನಾಲ್ಕು ತಲೆಮಾರುಗಳಷ್ಟು ಆಯಸ್ಸು. ಆಯ-ಪಾಯ ಎಲ್ಲ ಗಟ್ಟಿಯಿದ್ದ ಕಾರಣ ಅನೇಕರು ಈ ಮನೆಯಲ್ಲೇ ಉದ್ಧಾರವಾಗಿದ್ದಾರೆ ಅಂತ ರಾಮನ್ ಅವರ ತಾಯಿ ರುಕ್ಮಿಣಮ್ಮ ಯಾವಾಗಲೂ ಹೇಳುತಿದ್ದಳು. ಎರಡು ಮನೆ ಬಾಡಿಗೆಗೆ ಮತ್ತೊಂದು ವಾಸಕ್ಕೆ ಎಂದು ಮಾಡಿಕೊಂಡಿದ್ದ ದೊಡ್ಡ ಮನೆ ಇದಾಗಿತ್ತು. ರುಕ್ಮಿಣಮ್ಮನಿಗೆ ಒಟ್ಟು ಮೂರು ಜನ ಮಕ್ಕಳು. ಮೊದಲ ಇಬ್ಬರೂ ಹೆಣ್ಣು ಮಕ್ಕಳನ್ನು ಮದುವೆಮಾಡಿದ್ದಳು. ರುಕ್ಮಿಣಮ್ಮನ ಕೊನೆಯ ಮಗ ರಾಮನ್. ಪ್ರೀತಿಯ ಸೊಸೆ ಕೌಸಲ್ಯ. ತ್ರಿಪುರ ಮತ್ತು ತೇಜಸ್ ಇಬ್ಬರೂ ಮೊಮ್ಮಕ್ಕಳು. ಕೆಲ ತಿಂಗಳುಗಳಿಂದ ಮನೆಯಿಂದ ಹೊರಗೇ ಹೋಗದ ರಾಮನ್ ಕುಟುಂಬ ಸೂರ್ಯನನ್ನೇ ನೋಡದೇ ಬಿಳಿಚಿಕೊಂಡಿತ್ತು.ಅದರಲ್ಲೂ ರುಕ್ಮಿಣಮ್ಮ, ಮನೆಯನ್ನು ತುಂಬಾ ಪ್ರೀತಿಸುತ್ತಿದ್ದವಳು,ಈಗೀಗ ಮನೆಯೆಂದರೆ ಉದಾಸೀನ ಮಾಡ ತೊಡಗಿದ್ದಳು. ಮುಷ್ಯರೆಲ್ಲಾ ಧೀರ್ಘಕಾಲ ಮನೆ ಸೇರಿಕೊಂಡರೆ ಏನಾಗುತ್ತದೆಯೋ ಅದೆಲ್ಲಾ ರಾಮನ್ ಕುಟುಂಬದಲ್ಲೂ ಆಗಿತ್ತು.
ರಾಮನ್ ತನ್ನ ಮಗನಿಗೆ ಕೂದಲು ತುಂಬಾ ಬೆಳೆದಿತ್ತು ಎಂದು ಹೇರ್ ಟ್ರಿಮ್ಮರ್ ನಲ್ಲಿ ಕಟ್ಟಿಂಗ್ ಮಾಡುತಿದ್ದ. ಇದನ್ನು ಕಂಡಿದ್ದೇ ತಡ ರುಕ್ಮಿಣಮ್ಮನಿಗೆ ಎಲ್ಲಿಲ್ಲದ ಅಸಹನೆ ಮೂಡಿ ಮೂರು ದಿನ ಕೋಪಗೊಂಡು ಮುಖ ಉರಿ ಉರಿ ಉರಿಸುತ್ತಿದ್ದಳು.ಹೇರ್ ಟ್ರಿಮ್ಮರ್ ಸದ್ದು ಮಾಡಿಕೊಂಡು ಕೂದಲು ಕತ್ತರಿಸುವ ದೃಶ್ಯ ಸಹಿಸಿಕೊಳ್ಳಲಾಗದಷ್ಟು ಕೋಪ ಮತ್ತು ಹಿಂಸೆಗಳನ್ನು ರುಕ್ಮಿಣಮ್ಮ ಆ ಮೂರೂ ದಿನವೂ ಅನುಭವಿಸಿದ್ದಳು. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಲಾಗದೆ ಮೌನಗೃಹ ಹೊಕ್ಕಿದ್ದಳು. ಅತ್ತೆಯ ಕೋಪಕ್ಕೆ ಕಾರಣ ಕಂಡುಕೊಳ್ಳಲು ಸೊಸೆ ಕೌಸಲ್ಯ ಒತ್ತಾಯ ಮಾಡಿ ಕೇಳಿದ್ದಕ್ಕೆ’ಮಗನೇ ಮೊಮ್ಮಗನಿಗೆ, ಮನೆಯಲ್ಲಿ ಕ್ಷೌರ ಮಾಡುತ್ತಾರೆಯೇ? ಮುಟ್ಟುಸಟ್ಟು ಆಗೋದಿಲ್ವೇ?’ ಎಂದು ಮುಖ ಸಿಂಡರಿಸಿಕೊಂಡು ಹೇಳಿದ್ದಳು ರುಕ್ಮಿಣಮ್ಮ. ಇದಕ್ಕೆ ಯಾವ ಬಗೆಯಲ್ಲೂ ಉತ್ತರಿಸದ ಕೌಸಲ್ಯ ಸೀದಾ ಅಡುಗೆ ಮನೆಗೆ ಹೋಗಿ ದೊಡ್ಡ ಲೋಟದ ತುಂಬಾ ಫಿಲ್ಟರ್ ಕಾಫಿ ಮಾಡಿ ತಂದುಕೊಟ್ಟಳು. ದಿನಸಿಯ ಕೊರತೆಯ ಕಾಲದಲ್ಲೂ ಸೊಸೆಯ ಪ್ರೀತಿ ಮತ್ತು ಕಾಳಜಿಯನ್ನು ಅರ್ಥ ಮಾಡಿಕೊಂಡ ರುಕ್ಮಿಣಮ್ಮ ಬಿಸಿ ಬಿಸಿ ಕಾಫಿ ಕುಡಿದು ತೆಳ್ಳಗೆ ನಕ್ಕಿದ್ದರು. ಆ ಒಂದು ದೊಡ್ಡ ಲೋಟ ಫಿಲ್ಟರ್ ಕಾಫಿ ರುಕ್ಮಿಣಮ್ಮನನ್ನು ಎಲ್ಲ ಬಗೆಯಲ್ಲೂ ಸಂತೈಸಿತ್ತು.
ಆ ದಿನ ಬೆಳಗ್ಗೆ ಕೌಸಲ್ಯ ಹಾಲೀನ ಪಾಕೀಟನ್ನು ಸೋಪು ಹಾಕಿ ತೊಳೆದು, ಕಾಫಿಗೆ ಫಿಲ್ಟರ್ ಹಾಕಿ,ಬೆಳಗಿನ ಉಪಹಾರಕ್ಕೆ ಸಿದ್ಧತೆ ಮಾಡಿಕೊಳ್ಳತ್ತಿದ್ದಳು. ದೇವಸ್ಥಾನದ ಹತ್ತಿರ ಫುಡ್ ಕಿಟ್ ಗಳನ್ನು ನೀಡುತ್ತಿದ್ದಾರೆ ಎನ್ನುವ ಸುದ್ಧಿಯನ್ನು ಪಕ್ಕದ ಮನೆಯ ಕಮಲಾಕ್ಷಿ ಕೌಸಲ್ಯಳಿಗೆ ಹಿಂದಿನ ದಿನವೇ ಹೇಳಿದ್ದಳು. ಆ ಪ್ರಕಾರವಾಗಿ ಕೌಸಲ್ಯ, ಕಮಲಾಕ್ಷಿಯ ಜೊತೆಗೆ ಹೋಗಿ ಫುಡ್ ಕಿಟ್ ನೀಡುವ ಸರತಿ ಸಾಲಿನಲ್ಲಿ ನಿಂತಿದ್ದಳು. ಅದೇ ಸಾಲಿನಲ್ಲಿ ಕೌಸಲ್ಯಳ ಗೆಳತಿ ಯಶೋಧಾ ಕೂಡ ಬಂದು ನಿಂತಿದ್ದಳು. ಆದ್ರೆ, ಪರಸ್ಪರ ಇಬ್ಬರೂ ಮಾತಾಡಿಕೊಳ್ಳದಿದ್ದರೂ ಇಬ್ಬರ ಕಣ್ಣುಗಳಲ್ಲೂ ಹೇಳಿಕೊಳ್ಳಲಾಗದ ಸಂಕಟ ಮತ್ತು ಅವ್ಯಕ್ತವಾದ ಹಿಂಸೆ ಎದ್ದು ಕಾಣುತಿತ್ತು. ಸುಮಾರು ನಾಲ್ಕು ತಿಂಗಳಿಂದ ಮನೆ ಬಾಡಿಗೆ ಇಲ್ಲದೇ ನಲುಗಿ ಹೋಗಿದ್ದ ಕೌಸಲ್ಯ ‘ಯಾರಿಗಾದ್ರೂ ಮನೆ ಬಾಡಿಗೆಗೆ ಬೇಕಿದ್ದಲ್ಲಿ ಹೇಳಿ, ಮೊದಲಿಗಿಂತ ಎರಡು ಸಾವಿರ ಕಡಿಮೆಗೆ ಮನೆ ನೀಡುತ್ತೇವೆ’ ಎಂದು ಕಮಲಾಕ್ಷಿಗೆ ನಯವಾಗಿ ಹೇಳಿದ್ದಳು. ಫುಡ್ ಕಿಟ್ ಪಡೆದು ಮನೆಗೆ ವಾಪಸ್ ಬರುವ ತನಕ ಮನೆಬಾಡಿಗೆ ಮತ್ತು ದುಡ್ಡುಕಾಸಿಲ್ಲದ ಕಷ್ಟದ ಜೀವನದ ವಿಷಯ ಬಿಟ್ಟು ಕೌಸಲ್ಯ ಬೇರೆ ಸುದ್ದಿ ಮಾತಾಡಲೇ ಇಲ್ಲ. ಅಲ್ಲದೇ ಫುಡ್ ಕಿಟ್ ವಿತರಿಸುವವರು ಕೌಸಲ್ಯಳನ್ನು ನೋಡಿ ‘ಓ ನೀವಾ’ ಎಂದು ಹೇಳಿದ ಉದ್ಗಾರ ಕೌಸಲ್ಯಳ ಅಸಹಾಯಕತೆಯನ್ನು ಛೇಡಿಸುತ್ತಿತ್ತು.
ರುಕ್ಮಿಣಮ್ಮನ ಔಷಧದಿಂದ ಮೊದಲುಗೊಂಡು ಇಡೀ ಸಂಸಾರವನ್ನು ಮುನ್ನಡೆಸಿಕೊಂಡು ಹೋಗುವ ಮನೆಯ ಒಡೆಯನಂತೆ,ಮನೆ ಬಾಡಿಗೆಯ ಹಣ ಕೆಲಸ ಮಾಡುತಿತ್ತು. ಹೀಗಾಗಿ ರುಕ್ಮಿಣಮ್ಮ ಮನೆ ಬಾಡಿಗೆಯನ್ನು ಗಂಡನ ಸಂಬಳ ಎಂದೇ ನಂಬಿದ್ದಳು, ಹಾಗೂ ತನ್ನ ಗಂಡ ತನ್ನ ಜೊತೆಯಲ್ಲೇ ಇದ್ದಾನೆ ಎಂಬ ನಂಬುಗೆಯಿಂದ ಜೀವನ ನಡೆಸುತಿದ್ದಳು. ಕೌಸಲ್ಯ ಹಾಗೂ ಹೀಗೂ ಮನೆ ತಲುಪಿ ಫುಡ್ ಕಿಟ್ ತೆಗೆದು ಅದರಲ್ಲಿದ್ದ ಸಾಮಾನುಗಳನ್ನು ಮನೆಯ ಹೊರಗೆ ಇಟ್ಟಳು. ಅದರಲ್ಲಿ ಸೋನಾ ಮಸೂರಿ ಬ್ರಾಂಡಿನ ಹತ್ತು ಕೆ.ಜಿಯ ಒಂದು ಮೂಟೆ ಅಕ್ಕಿ, ಎರಡು ಕೆ.ಜಿ ಆಶೀರ್ವಾದ್ ಗೋಧಿಹಿಟ್ಟು, ಒಂದು ಕೆ,ಜಿ ಶಿವಲಿಂಗ್ ಬೇಳೆ, ಒಂದು ಲೀಟರ್ ರೀಫೈಂಡ್ ಎಣ್ಣೆಯಿತ್ತು. ಕೌಸಲ್ಯಹಿಗ್ಗಿ ಹೋಗಲು ಇಷ್ಟು ಸಾಕಾಗಿತ್ತು.
ಪ್ರತೀ ತಿಂಗಳ ಬಾಡಿಗೆ ಬಂದಾಗಲೆಲ್ಲಾ ತಂದೆಯ ಋಣವನ್ನು ನೆನೆದು ಹೆಮ್ಮೆಗಿಂತ ಕೀಳಿರಿಮೆಯೇ ರಾಮನ್ ಗೆ ಹೆಚ್ಚಾಗಿ ಕಾಡುತಿತ್ತು. ಒಂದಷ್ಟು ಓದಿಕೊಂದಿದ್ದ ರಾಮನ್ ರಂಗಭೂಮಿಯಲ್ಲಿ ತುಂಬಾ ಆಸಕ್ತಿ ಹೊಂದಿದ್ದ. ನಟನೆಯನ್ನು ಬಿಟ್ಟು ಬೇರೆ ಯಾವುದೇ ಕೆಲಸ ಮಾಡುವಲ್ಲಿ ಅವನಿಗೆ ಇಷ್ಟವಿರಲಿಲ್ಲ, ಮಾಡುತ್ತಲೂ ಇರಲಿಲ್ಲ ಅವನು. ನಾಟಕವೆಂದರೆ ಮಾತ್ರ ಎಲ್ಲಿಲ್ಲದ ಹಿಗ್ಗು. ಅದಕ್ಕಾಗಿ ಎಷ್ಟು ಬೇಕಾದರೂ ದುಡಿಯುವ ಮನಸ್ಸಿತ್ತು ಅವನಿಗೆ. ನಟನೆಯಿಂದ ಬರುತ್ತಿದ್ದ ಆರುಕಾಸು ಮೂರುಕಾಸು ಕೂಡಾ ನಿಂತು ಹೋಗಿತ್ತು. ‘ನಾಟ್ಕ ಪಾಟ್ಕ ಎಲ್ಲ ಜೀವನ ಕಟ್ಟಲ್ಲ, ಮೊದ್ಲು ಅನ್ನಕೊಂದು ದಾರಿ ಮಾಡ್ಕೋ, ಆಮೇಲೆ ಬಣ್ಣ ಹಚ್ಕೊಂಡು ಪಾರ್ಟ್ ಮಾಡು’ ಎಂದು ರುಕ್ಮಿಣಮ್ಮ ತನ್ನ ಮಗನಿಗೆ ಯಾವಾಗಲೂ ಹಂಗಿಸಿ ಬುದ್ಧಿಹೇಳುತ್ತಲೇ ಇದ್ದಳು. ಅಮ್ಮನ ಮಾತಿಗೆ ಯಾವ ಪ್ರತಿಕ್ರಿಯೆಯನ್ನು ನೀಡದೇ ಸಾಧಿಸಿ ತೋರಿಸುತ್ತೇನೆ ಎನ್ನುವ ಮುಖಭಾವ ಮಾತ್ರ ಕಾಣಿಸುತಿದ್ದ ರಾಮನ್. ಹೀಗಿದ್ದಾಗ ಹೆಂಡತಿ ಮಕ್ಕಳನ್ನು ಸಾಕುವುದಿರಲಿ, ತನ್ನ ಖರ್ಚಿಗಾಗಿ ತಿಂಗಳಲ್ಲಿ ಮೂರ್ನಾಲ್ಕು ಬಾರಿ ತನ್ನ ಹೆಂಡತಿಯ ಎದುರು ನಿಲ್ಲುವ ಉದಾಹರಣೆಗಳು ಸಾಕಷ್ಟು ರಾಮನ್ ವಿಚಾರದಲ್ಲಿ ಇದ್ದೇ ಇದ್ದವು.
ಜಗತ್ತೇ ನಿಶ್ಚಲವಾಗಿ ಎಲ್ಲರೂ ಅವರವರ ಮನೆಯಲ್ಲಿಯೇ ಇರಬೇಕು ಎನ್ನುವ ಸ್ಥಿತಿ ಬಂದಾಗ, ರಾಮನ್ ಏನೂ ಮಾಡಲಾಗದೆ ಕನ್ನಡಿಯ ಮುಂದೆ ನಿಂತು ಅತ್ತದ್ದೂ, ನಕ್ಕಿದ್ದು,ಮನೆಯ ಹೊರಗೆ ಬಂದು ಇಡೀ ಮನೆಯನ್ನು ನೋಡಿ ಭಾವುಕನಾಗಿ ನೋಡಿದ ಸನ್ನಿವೇಶಗಳು ಇದ್ದೇ ಇದ್ದವು. ಮೊದಲೇ ಮೌನಿಯಾಗಿದ್ದ ರಾಮನ್ ಬರು ಬರುತ್ತಾ ತನ್ನಪ್ರತೀ ಮಾತಿಗೂ ಮೌನವನ್ನೇ ಕಲಿಸುತಿದ್ದ. ಹೆಂಡತಿ ಕೌಸಲ್ಯ, ಗಂಡ ಏನಾದರೂ ಮಾತಾಡಲಿ ಎಂದು ಮಾಡುವ ಪ್ರಯತ್ನಗಳು ಎದುರಾದಗೆಲ್ಲಾ ‘ಮೌನದಲ್ಲಿ ಹೊಳೆದಷ್ಟು, ಮಾತಿನಲ್ಲಿ ಏನೂ ಬೆಳೆಯುವುದಿಲ್ಲ’ ಎಂದು ಒಂದೇ ಉತ್ತರವನ್ನು ಹೇಳಿ ಸುಮ್ಮನಾಗಿಬಿಡುತ್ತಿದ್ದ. ರಾಮನ್ ಮಾತೇ ಆಡದೇ ಇರುವುದನ್ನು ಕಂಡು ಮಕ್ಕಳು, ಹೆಂಡತಿ, ತಾಯಿ ಹಾಗೂ ಯೋಗಕ್ಷೇಮವನ್ನು ವಿಚಾರಿಸಲು ಫೋನ್ ಮಾಡುತ್ತಿದ್ದ ಅಕ್ಕಂದಿರು ತುಂಬಾ ನೊಂದು ಘಾಸಿಗೊಂಡಿದ್ದರು. ಆದರೆ, ಅದಾವುದು ರಾಮನ್ ಎದುರು ಪ್ರಕಟಗೊಳ್ಳುತ್ತಿರಲಿಲ್ಲ.
ಸ್ವಾಭಿಮಾನದ ಎದುರು ತೀರಾ ಇತ್ತೀಚಿಗೆ ರಾಮನ್ ಹಸಿವು ಕೂಡಾ ಏನೂ ಮಾತನಾಡದೆ ಕೈ ಕಟ್ಟಿ ಕುಳಿತು ಬಿಡುತಿತ್ತು. ಕಳೆದ ಒಂದೆರಡು ತಿಂಗಳಿಂದ ರಾಮನ್ ಎರಡು ಹೊತ್ತು ಊಟಕ್ಕೆ ಇಳಿದಿದ್ದ. ಮನೆಯ ಅಗತ್ಯಗಳು ಅವನನ್ನು ಕಾಡತೊಡಗಿದವು. ನಗರದ ಮಧ್ಯಭಾಗದಲ್ಲಿ ಮನೆಯಿದ್ದರೂ ದಿನ ನೂಕಲು ಮೂಲಭೂತವಾಗಿ ಬೇಕಿರುವ ಅಗತ್ಯಗಳಿಂದ ರುಕ್ಮಿಣಮ್ಮನ ಮನೆ ಸೊರಗ ತೊಡಗಿತ್ತು. ಹೀಗಿರುವಾಗ ಕೌಸಲ್ಯ ಮನೆ ತೂಗಿಸುವ ಬಹು ದೊಡ್ಡ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದಳು. ಕೌಸಲ್ಯ ತಂದಿಟ್ಟ ಫುಡ್ ಕಿಟ್ ನೋಡಿದ ರಾಮನ್ ಅವ್ಯಕ್ತ ಭಾವನೆಗಳಲ್ಲಿ ಮುಳುಗಿ ಹೋಗುತ್ತಿದ್ದ. ಎಂದೂ ಇಲ್ಲದ ಪಾಪಪ್ರಜ್ಞೆ ಅವವನ್ನು ಬಿಡದೇ ಕಾಡುತಿತ್ತು. ಫುಡ್ ಕಿಟ್ ನೆನೆದು ಖ್ನಿನ್ನನಾಗಿ ವಿಲ ವಿಲ ಒದ್ದಾಡುತಿದ್ದ. ಮನೆ ಬಾಡಿಗೆಯಿಂದ ಬರುತ್ತಿದ್ದ ಹಣದಲ್ಲಿ ಶೇಕಡಾ ಐದರಿಂದ ಹತ್ತು ಮಾತ್ರ ತನ್ನ ಹೆಂಡತಿಯ ಬಳಿ ಕೇಳಿ ಪಡೆಯುತ್ತಿದ್ದುದನ್ನು ಹೊರತುಪಡಿಸಿ ಮತ್ತೆ ಎಲ್ಲೂ ತನ್ನ ಸ್ವಾಭಿಮಾನವನ್ನು ರಾಮನ್ ಸೋಲಿಸಿರಲಿಲ್ಲ. ಇದೆಲ್ಲದರ ನಡುವೆ ಹೊರಗಿನಿಂದ ತಂದ ಯಾವುದೇ ವಸ್ತುಗಳನ್ನು ಒಂದಷ್ಟು ಹೊತ್ತು ಮನೆಯ ಹೊರಗೆ ಇಡಬೇಕಿದ್ದ ಸನ್ನಿವೇಶ ಇಡೀ ಜಗತ್ತಿನಲ್ಲೇ ನಿರ್ಮಾಣವಾಗಿತ್ತು.
ಮನೆ ಬಾಡಿಗೆಯೇ ರಾಮನ್ ಕುಟುಂಬದ ಜೀವನಾಧಾರ. ಆದ್ರೆ ಬಾಡಿಗೆಯಿಲ್ಲದೇ ಸುಮಾರು ನಾಲ್ಕು ತಿಂಗಳಿಂದ ನಲುಗಿ ಹೋಗಿದ್ದ ರಾಮನ್ ರಿಯಲ್ ಎಸ್ಟೇಟ್ ನವರಿಗೆ ದಿನನಿತ್ಯ ಹೋಗಿ ಮನೆ ಖಾಲಿಯಿರುವ ವಿಷಯ ಹೇಳಿ ಬರುತಿದ್ದ. ಅಷ್ಟೇ ಅಲ್ಲದೇ ಮನೆಯ ಮುಂದೆ ‘ಟುಲೆಟ್’ ಅಂತ ದೊಡ್ಡ ಬೋರ್ಡ್ ಕೂಡಾ ಹಾಕಿದ್ದ. ಜನರೇ ಓಡಾಡದ ರಸ್ತೆಯಲ್ಲಿ ಆ ಬೋರ್ಡ್ ರಾಮನ್ ಎಂಬ ಕಲಾವಿದನಿಗೆ ಅಣಕಿಸುತಿತ್ತು.ಬಾಯಿ ಪ್ರಚಾರ, ಬ್ರೋಕರೇಜ್, ಬೋರ್ಡು ಯಾವುದರಿಂದಲೂ ಬಾಡಿಗೆದಾರರು ಬಂದಿರಲಿಲ್ಲ. ಇದರಿಂದ ಮನೆ ಮಂದಿಗೆಲ್ಲಾ ಆತಂಕ ಶುರುವಾಗಿತ್ತು. ತಾನು ನಿತ್ಯ ನುಂಗುವ ಬಿ.ಪಿ, ಶುಗರ್ ಮಾತ್ರೆಗಳನ್ನು ಸುಮಾರು ಮೂರ್ನಾಲ್ಕು ತಿಂಗಳಿಗೆ ಆಗುವಷ್ಟು ಶೇಖರಿಸಿ ಇಟ್ಟುಕೊಳ್ಳುವುದು ರುಕ್ಮಿಣಮ್ಮನ ಅಭ್ಯಾಸವಾಗಿತ್ತು. ಸಂಗ್ರಹಿಸಿದ್ದ ರುಕ್ಮಿಣಮ್ಮನ ಔಷಧಿಗಳು ಮುಗಿಯಲು ಬಂದಿದ್ದವು. ಮಾತ್ರೆ ಡಬ್ಬ ಖಾಲಿಯಾದಂತೆ ರುಕ್ಮಿಣಮ್ಮ ಕೌಸಲ್ಯಳನ್ನು ತುಂಬಾ ಕಕ್ಕುಲಾತಿಯಿಂದ ನೋಡುತ್ತಿದ್ದಳು. ಕೌಸಲ್ಯ ಕೂಡ ಏನೂ ಮಾಡಲಾಗದ ವ್ಯಾಕುಲ ಸ್ಥಿತಿ ಎದುರಾದಾಗ ಟೆರೆಸ್ ಮೇಲೆ ಹೋಗಿ ಒಣಹಾಕಿದ್ದ ಬಟ್ಟೆಗಳನ್ನು ಮಡಿಸುತ್ತಾ ಒಣಬಟ್ಟೆಗಳನ್ನು ತನ್ನ ಕಣ್ಣೀರಿನಲ್ಲಿ ಒದ್ದೆ ಮಾಡುತ್ತಿದ್ದಳು.
ಟಿ.ವಿಯಲ್ಲಿ ಮತ್ತು ಸೋಶಿಯಲ್ ಮೀಡಿಯಾಗಳಲ್ಲಿ ಲಾಕ್ ಡೌನ್ ವೇಳೆಯಲ್ಲಿ ಬಹುತೇಕರು ದಿನ ನಿತ್ಯ ಬಗೆ ಬಗೆಯ ಅಡುಗೆಗಳನ್ನು ಮಾಡಿ ತೋರಿಸುತ್ತಿದ್ದರು. ವಾಟ್ಸಾಪ್ ಸ್ಟೇಟಸ್ ತುಂಬಾ ಅಡುಗೆಯ ರೆಸಿಪಿಗಳೇ ತುಂಬಿ ಹೋಗಿರುತ್ತಿದ್ದವು. ಸುಮಾರು ನಾಲ್ಕು ತಿಂಗಳು ಸುಮ್ಮನಿದ್ದ ಮಕ್ಕಳು, ತಾಯಿ ಕೌಸಲ್ಯಳ ಬಳಿ ಬಂದು ಹಾಲಿನ ಖೀರು ಮಾಡಿಕೊಡಲು ದುಂಬಾಲು ಬಿದ್ದಿದ್ದರು. ಕಾಫಿಗೆ ಲೆಖ್ಖಾಚಾರದಲ್ಲಿ ಸಕ್ಕರೆ ಬಳಸುತಿದ್ದ ಕೌಸಲ್ಯ ಮಕ್ಕಳ ಬೇಡಿಕೆಯಿಂದ ಒತ್ತಡ ಉಂಟಾಗಿ ಅವರ ಮೇಲೆ ಅರುಚಾಡಿದ್ದಳು. ಅಮ್ಮನ ಕೋಪವನ್ನು ಕಂಡ ಮಕ್ಕಳು ಮರು ಮಾತಾಡದೇ ರೂಮು ಸೇರಿಕೊಂಡರು. ಇದೆಲ್ಲದರಿಂದ ತುಂಬಾ ನಲುಗಿ ಹೋಗಿದ್ದ ರುಕ್ಮಿಣಮ್ಮ ಹಾಸಿಗೆಯ ಮೇಲೆ ಮುದುರಿ ಬಿದ್ದ ಹೊದಿಕೆಯಂತಾಗಿದ್ದಳು. ರಾಮನ್ ಇಡೀ ಮನೆಯವರೊಂದಿಗೆ ಮಾತು ನಿಲ್ಲಿಸಿದ್ದ. ಇಡೀ ಮನೆ ಸಾಗರದ ಮೌನದ ನಡುವೆ ಯಾನ ಮಾಡುತ್ತಿರುವ ಒಂಟಿ ನಾವೆಯಂತಾಗಿತ್ತು.
ರಾಮನ್ ಜೊತೆ ಎಂದೂ ಜಗಳವಾಡದ, ಜೋರಾಗಿ ಮಾತನಾಡದ ಕೌಸಲ್ಯ ಅಂದು ರಾಮನ್ ಜೊತೆಗೆ ಮಾತಿಗಿಳಿದ್ದಿದಳು.ಕೌಸಲ್ಯ ಮಾತಿಗೆ ಮಾತು ಕೊಡುತ್ತಿದ್ದಳು. ಅಪ್ಪ ಅಮ್ಮನ ಜಗಳವೆನ್ನೇ ನೋಡದ ಮಕ್ಕಳಿಬ್ಬರೂ ಹೆದರಿ ರುಕ್ಮಿಣಮ್ಮನ ಬಳಿ ಬಂದು ಕುಳಿತರು. ಮಗ ಸೊಸೆಯಏರು ಮಾತುಗಳನ್ನು ಕೇಳಿ ನಡುಮನೆಯಲ್ಲಿದ್ದ ರುಕ್ಮಿಣಮ್ಮನ ಕಣ್ಣುಗಳಲಿ ಹಲವು ವರ್ಷಗಳು ಪಾಲಿಸಿಕೊಂಡು ಬಂದ ನಿಯಮಗಳೆಲ್ಲಾ ಕಣ್ಣೀರಾಗಿ ಜಿನುಗಲು ಶುರುವಾಯಿತು. ‘ಆ ಒಂದು ಮೂಟೆ ಅಕ್ಕಿಯನ್ನು ಬಳಸಬೇಡ ಅಷ್ಟೇ,’ ಎಂದು ರೂಮಿನಿಂದ ಜೋರಾಗಿ ರಾಮನ್ ಕೂಗಿದ ಸದ್ದು ಕೇಳಿಬಂತು. ರಾಮನ್ ಅಷ್ಟು ಜೋರಾಗಿ ಮಾತಾಡಿದ್ದು ಮನೆಯಲ್ಲಿ ಎಂದೂ ಯಾರೂ ಕೇಳಿರಲಿಲ್ಲ. ಒಂದು ಕ್ಷಣ ಇಡೀ ಮನೆ ತಬ್ಬಿಬಾಗಿ ಹೋಯ್ತು. ತನಗಿರುವ ಸ್ವಾಭಿಮಾನ ಮತ್ತು ಸಮಾಜದಲ್ಲಿ ಹಸಿವಿನಿಂದ ನರಳುತ್ತಿರುವ ಬಗ್ಗೆ ತನ್ನ ಕಾಳಜಿಯಿರುವುದನ್ನು ಕೌಸಲ್ಯಳಿಗೆ ಅರ್ಥ ಮಾಡಿಸಲು ಪ್ರಯತ್ನಿಸುತ್ತಿರುವಂತೆ ರಾಮನ್ ಮಾತುಗಳು ಹೊರಗೆ ಕೇಳುತಿದ್ದವು. ಕೊನೆಯದಾಗಿ ‘ಆ ಫುಡ್ ಕಿಟ್ ನಮ್ಮದಲ್ಲ. ಹಸಿದವರ ಊಟವನ್ನು ಕಿತ್ತುಕೊಂಡು ಬಂದ್ದಿದ್ದೀಯ’ ಎಂದು ಮತ್ತೆ ಹತಾಶೆಯಿಂದ ರಾಮನ್ ಅರುಚಿದ. ಕೌಸಲ್ಯ ಮರುಮಾತಾಡದೇ ಕುಸಿದು ಹೋದಳು. ಇಡೀ ಅಡುಗೆಮನೆಯೇ ಕೌಸಲ್ಯಳ ಎದುರು ನಿರ್ಮಮಕಾರವಾಗಿ ಖಾಲಿ ಪಾತ್ರೆಗಳೆಂಬ ಮಕ್ಕಳು ನಿಂತಂತೆ ಅವಳಿಗೆ ಭಾಸವಾಯಿತು. ನಾಳಿನ ಬೆಳಗ್ಗೆಗೆ ಒಳ್ಳೇ ಅಕ್ಕಿ, ಸ್ವಲ್ಪ ಎಣ್ಣೆ ಜಾಸ್ತಿ ಹಾಕಿ ಪಲಾವ್ ಮಾಡಬೇಕೆಂಬ ಆಸೆ ಛಿದ್ರವಾಗಿ ಅವಳೆದುರು ಬಿದ್ದಿತ್ತು.
ಮಗನ ಮಾತುಗಳ ಎದುರು ಮರು ಮಾತಾಡಲು, ಗಂಡ ಹೆಂಡತಿಯರ ಜಗಳ ಬಿಡಿಸಲು ರುಕ್ಮಿಣಮ್ಮನಿಂದ ಸಾಧ್ಯವಾಗಲಿಲ್ಲ. ಏನೂ ಮಾತನಾಡದ ರುಕ್ಮಿಣಮ್ಮ ಮೊಮ್ಮಕ್ಕಳ ಸಹಾಯದಿಂದ ಮನೆಯ ಹೊರಗೆ ಹೋಗಿ ‘ ಟುಲೆಟ್ – ವೆಜ್ ಓನ್ಲೀ’ ಎಂದು ಹಾಕಿದ್ದ ಬೋರ್ಡ್ ಕಿತ್ತು ಹರಿದು ರಸ್ತೆಯ ಮೇಲೆ ಎಸೆದು ಬಂದಳು. ಈ ಹೊತ್ತಿನಲ್ಲಿ ರುಕ್ಮಿಣಮ್ಮ ಕಣ್ಣುಗಳು ಕೆಂಪಾಗಿದ್ದವು, ಹಸಿದ ಹೊಟ್ಟೆಯ ಕಾವು ಕೋಪದಿಂದ ಉದ್ವೇಗಗೊಂಡು ತತ್ತರಿಸಿಹೋಗಿತ್ತು ಎದೆ ಬಡಿತದ ತುಂಬೆಲ್ಲಾ ಅಭದ್ರತೆಯ ಚೂರುಗಳು ಚುಚ್ಚುವಂತೆ ಅವಳಿಗೆ ಅನ್ನಿಸುತಿತ್ತು. ಆ ದಿನ ಸರ್ಕಾರ್ ಅನ್ ಲಾಕ್ ಘೋಷಿಸಿತ್ತು. ಅವಳು ಹರಿದೆಸೆದ ಟುಲೆಟ್ ಬೋರ್ಡಿನ ಕಾಗದದ ಚೂರುಗಳ ಮೇಲೆ ವಾಹನಗಳು ಓಡಾಡತೊಡಗಿದವು.
ಈ ಘಟನೆ ನಡೆದ ಮರು ಕ್ಷಣವೇ ರುಕ್ಮಿಣಮ್ಮ ‘ಮನೆ ಖಾಲಿಯಿದೆ’ ಎನ್ನುವ ಹೊಸ ಬೋರ್ಡ್ ಮೊಮ್ಮಗನಿಂದ ಬರೆಸಿ ಹಾಕಿಸಿದಳು. ಆ ಬೋರ್ಡಿನಲ್ಲಿ ‘ವೆಜ್ ಓನ್ಲಿ’ ಮಾಯವಾಗಿತ್ತು.ಅದೇ ದಿನ ಸಂಜೆ ಹೊಸದಾಗಿ ಬೆಂಗಳೂರಿಗೆ ಬಂದಿದ್ದ ವೈರಾಣು ತಜ್ಞ ಕಲಾಂ ಸಾಬರು ಹತ್ತು ಸಾವಿರ ಟೋಕನ್ ಅಡ್ವಾನ್ಸ್ ಕೊಟ್ಟು, ಎರಡೂ ಮನೆಯೂ ಬಾಡಿಗೆಗೆ ಬೇಕು ಎಂದು ಹೇಳಿ ಹೋದರು. ಇದೂವರೆದೂ ಟೋಕನ್ ಅಡ್ವಾನ್ಸ್ ಕೇವಲ ಒಂದೋ ಎರಡೋ ಸಾವಿರ ಪಡೆದ ರುಕ್ಮಿಣಮ್ಮನ ಕುಟುಂಬಕ್ಕೆ ಹತ್ತು ಸಾವಿರ ನಿರುಮ್ಮಳ ಉಂಟು ಮಾಡಿತು.
ಮನೆಯ ಹೊರಗಿದ್ದ ಆ ಒಂದು ಮೂಟೆ ಅಕ್ಕಿಯನ್ನು ಒಳಗೊಂಡ ಆಹಾರದ ಕಿಟ್ಟನ್ನು,ಹತ್ತಿಯ ಹೂಬತ್ತಿ ಹೊಸೆದು ಜೀವನ ಸಾಗಿಸುತ್ತಿದ್ದ ಪಕ್ಕದ ಬೀದಿಯ ಜಾನಕಮ್ಮನಿಗೆ ಕೊಟ್ಟು ಮನೆಗೆ ಬರುವಾಗ ಕೌಸಲ್ಯ ಸಣ್ಣ ಶಾವಿಗೆ, ಹಾಲು, ಸಕ್ಕರೆ, ದ್ರಾಕ್ಷಿಗೋಡಂಬಿ ಸೇರಿದಂತೆ ಅಗತ್ಯವಾದ ದಿನಸಿ ಮತ್ತು ರುಕ್ಮಿಣಮ್ಮದ ಔಷಧಿಗಳನ್ನು ತಂದಳು. ಸರ್ಕಲ್ಲಿನ ಬಸವಣ್ಣ ಕೌಸಲ್ಯಳನ್ನು ಮಮಕಾರದಿಂದ ನೋಡುತ್ತಿದ್ದಾನೆ ಎನ್ನುವ ಭಾವನೆ ಅವಳಿಗೆ ಮೂಡುತ್ತಿತ್ತು.ಇಡೀ ಜಗತ್ತೇ ಖಾಯಿಲೆ ಮತ್ತು ಆತಂಕದಿಂದ ನರಳುವ ಹೊತ್ತಿನಲ್ಲಿ ಭರವಸೆ ಮೂಡಲು ರುಕ್ಮಿಣಮ್ಮನ ಕುಟುಂಬಕ್ಕೆ ಇಷ್ಟು ಸಾಕಾಗಿತ್ತು. ಹೊರಗೆ ಹೋದ ಕೌಸಲ್ಯ ಮನೆಗೆ ಬರುವ ಹೊತ್ತಿಗೆ ಅವಳ ಮುಖದಲ್ಲಿ ಕಣ್ಣೀರ ಚಿತ್ರದ ಮೇಲೆ ನಗುವೆಂಬ ಬಣ್ಣಗಳೆಂಬ ನಿರಾಳತೆ ಮನೆ ಮಾಡಿತ್ತು.
***
10 thoughts on “ಒಂದು ಮೂಟೆ ಅಕ್ಕಿ”
ಇಲ್ಲಿ ಕಲಿಯಬೇಕಾದ ವಿಷಯ ತುಂಬಾ ಇದೇ, ನಾವು ಅನಗತ್ಯವಾಗಿ ಯಾವುದನಾದರು ಹೆಚ್ಚಾಗಿ ಬಳಸಬಾರದು; ಊಟ, ದಿನಸಿ,ಹಣ ಮುಂತಾದವು , ಅಗತ್ಯ ಇರುವಷ್ಟು ಬಳಸಬೇಕು ಎಂದು ಕೇಳಿಕೊಳ್ಳುತ್ತೇನೆ
Superb story👏👌
ತುಂಬಾ ಚೆನ್ನಾಗಿದೆ ಸರ್ ಜೀವನ ಎಷ್ಟು ಕಷ್ಟ ಎಂದು ನಾನು ಇದರಲ್ಲಿ ಕಂಡೆ ಸಾರ್ ಒಂದು ಕ್ಷಣ ನನ್ನ ಕಣ್ಣುಗಳಲ್ಲಿ ನಿರುತುಂಬಿತು
ನನಗೆ ಕೌಸಲ್ಯ ತುಂಬ ಪಾಪ ಅನಿಸಿದ್ಲು ಸರ್..ಅಂತಾ ಕಷ್ಟದ ಸಂದರ್ಭದಲ್ಲಿ ಮನೆ ನಡೆಸೋ ದೊಡ್ಡ ಜವಾಬ್ದಾರಿ ಅವಳ ಮೇಲಿತ್ತು..ಹೀಗಿರುವಾಗ ಆ ಕಿಟ್ ಅವರಿಗೆ ಆಯ್ಕೆ ಆಗಿರಲಿಲ್ಲ, ಅನಿವಾರ್ಯ ಆಗಿತ್ತು..ಅವಳಾದ್ರೂ ಏನು ಮಾಡಿಯಾಳು..
ರಾಮನ್ ನ ಸ್ವಾಭಿಮಾನ..”ಹಸಿದವರ ಅನ್ನ ಕಿತ್ತುಕೊಳ್ಳುತ್ತಿದ್ದೇನೆ” ಎಂಬ ಪಾಪಪ್ರಜ್ಞೆ.. ಈ ಸಲುವಾಗಿ “ಅಕ್ಕಿಮೂಟೆಯನ್ನು ಬಳಸಬೇಡ” ಅಂತ ಪಾಪದ ಹೆಂಡತಿಯೊಂದಿಗೆ ಜಗಳ ಮಾಡಿದ್ದು ಎಲ್ಲ appreciable (sarcasm intended)😅.
ತಾವೇ ಸ್ವತಃ ಹಸಿದವರಾಗಿದ್ದುಕೊಂಡು ಮತ್ತೊಬ್ಬರ ಹಸಿವಿನ ಬಗ್ಗೆ ಅಷ್ಟು ಕಾಳಜಿ ತೋರಿ.. ಅದಕ್ಕಾಗಿ ತಮ್ಮ ಪಾಲಿನ ಅನ್ನವನ್ನು ತ್ಯಾಗ ಮಾಡಿದ್ದು ಕಣ್ಣಿಗೆ ಕಟ್ಟುವಂತಿದೆ.
ಕೊನೆಯಲ್ಲಿ ರಾಮನ್ ನ ಸ್ವಾಭಿಮಾನವೂ ಗೆದ್ದು..ಕೌಸಲ್ಯಳ ಪಡಿಪಾಟಲೂ ತೀರಿ..ಹೊಸ ಆಶಾಕಿರಣ ಮೂಡಿದ್ದು..ಎಲ್ಲ ಹ್ಯಾಪಿ ಎಂಡಿಂಗ್ ಸರ್ 😃
ಕಥೆಯನ್ನು ಬೆಳೆಸಿಕೊಂಡು ಹೋದ ಕ್ರಮ ಚೆನ್ನಾಗಿದೆ. ಸಾಮಾನ್ಯವಾದ ವಿಷಯವನ್ನು ಕಥೆಯಾಗಿಸಿದ್ದು ಕತೆಗಾರಿಕೆಯ ಕೌಶಲ್ಯ. ಸಕಾರಾತ್ಮಕ ಕಥೆ.
ಸ್ವಾಭಿಮಾನ ಸಹಣೆ ಅಸಹಾಯಕತೆ ಏರೆಡು ಪದದ ಬದಲಾವಣೆ ಮಾಡಿದ ಕರಾಮತ್ತು ಬಹಳ ದೊಡ್ದದು ಮತ್ತು ಜೀವನದಲ್ಲಿ ಸದಾ ಹೊಂದಿಕೊಂಡು ಹೋಗುವ ಅಭ್ಯಾಸ ಬಹಳ ದೊಡ್ದದು ಎಂದು ತಿಳಿಸಿದರು ಕಥೆ ಓಧಿ ಬಹಳ ಸಂತೋಷ ವಾಯಿತು ರುಕ್ಮಿಣೀ ಅಮ್ಮನ ಅಸಹಾಯಕತೆ ರಾಮನ್ ನ ಸ್ವಾಭಿಮಾನ ಕೌಸಲ್ಯಲ ಕಾಳಜಿ ಕಳಕಳಿ ಇದ್ಧೆಲ್ಲ ಮನಮುಟ್ಟುವಂತಿದೆ.
ಅದ್ಭುತವಾದ ವಿಷಯ ಹಾಗೂ ಇದಕ್ಕೂ ಮುನ್ನ ಹಲವು ಕವಿಗಳು ಲಾಕ್ ಡೌನ್ ಕುರಿತು ಒಂದಷ್ಟು ಕವಿತೆಗಳು ಲಾಕ್ಡೌನ್ ಸಮಯದಲ್ಲಿ ಜರುಗಿದ ಪ್ರಸ್ತುತ ಘಟನೆಗಳ ಬಗ್ಗೆ ಬರೆದಿದ್ದರು ಆದರೆ ಒಂದು ಮನೆಯ ಪರಿಸ್ಥಿತಿ ಅವರಲ್ಲಿನ ಆಗಿನ ಮನಸ್ಥಿತಿ ಬಗ್ಗೆ ಅದ್ಭುತವಾಗಿ ಬೇಲೂರು ರಘುನಂದನ್ ಸರ್ ಕಥೆಯನ್ನು ಚಿತ್ರಿಸಿದ್ದಾರೆ
Good Story on contemporary subject
ನನಗೆ ಇದೊಂದು ನಿಜವಾಗಿ ನಡೆದಿರುವ ಜೀವನದ ಕಥೆ ಎನಿಸಿತು…🙂
ಒಂದು ಅದ್ಬುತವಾದ ಕಥೆ ನನಗೆ ಬಹಳ ಇಷ್ಟವಾಯಿತು.
ಒಮ್ಮೊಮ್ಮೆ ಜೀವನದಲ್ಲಿ ಎಷ್ಟು ಕಷ್ಟಗಳನ್ನು ಎದುರಿಸುವ ಸಂದರ್ಭ ಬರುತ್ತದೆ. ಹಾಗೂ ಜೀವನ ಎಷ್ಟು ಕಷ್ಟ ಎಂದು ತಿಳಿಯಿತು.
ತುಂಬಾ ಚೆನ್ನಾಗಿದೆ ಸರ್ ಮೈ ಜುಮ್ಮೆನಿಸಿದರೂ ಕಣ್ಣು ನನಗರಿಯದೇ ಒದ್ದೆಯಾಗುತ್ತಿತ್ತು, ಕೆಲವೊಂದು ಮಾತುಗಳು ನನ್ನ ಜೀವನಕ್ಕನುಗುಣವಾಗಿ ಇದ್ದವೂ, ಜೀವನ ಅಂದ್ರೆ ಸುಮ್ಮನೆ ಅಲ್ಲ ಕಷ್ಟ ನಷ್ಟ ಸುಖ ದುಃಖಗಳೆಂಬ ಒತ್ತಡ✍✍🙌