ಬದಲಾದಾಗ ಸೂರ್ಯ ಪಥ ಚಲನ
ಬರುವವು ಉತ್ತರ-ದಕ್ಷಿಣ ಆಯನ
ಚೈತ್ರ – ವೈಶಾಖ ಮಾಸಗಳು
ವಸಂತ ಋತು- ಗುಂಗಿನಲ್ಲಿ ಕವಿಗಳು
ಚೈತ್ರದ ಮೊದಲ ದಿನ
ಯುಗಾದಿಯ ತೋರಣ
ಸಂಭ್ರಮದ ವಸಂತಾಗಮನ
ಆಗಸ ಶುಭ್ರ ಸೂರ್ಯಚಂದ್ರರ ಸಮ ಪಾಳಿ
ಹೂಗಿಡಗಳು ಕಾಣುವುವು ಅರಳಿ
ಜೀವರಾಶಿಗಳಲ್ಲಿ ವಿಶೇಷ ಆಸಕ್ತಿ
ತುಂಬಿ ಮೆರೆಯುತ್ತವೆ ತಮ್ಮ ಶಕ್ತಿ
ಹೂಗಳು ಮಕರಂದವ ಕುಡಿದು
ದುಂಬಿ ಹೂಗಳ ಮತ್ತೆ ಮತ್ತೆ ಮುತ್ತುವುದು
ಬೀಸುವುದು ಮಂದ ಮಂದ ಗಾಳಿ
ನವಿರು ಚಿಗುರ ಜೊತೆ ಸರಸ- ಕೇಳಿ
ಎಲ್ಲಾ ಗಿಡಮರಬಳ್ಳಿಗಳ ಮೇಲು
ಹಳದಿ ಕೆಂಪು ಬಿಳಿ ನೀಲಿ ಹೂವು
ಕೋಗಿಲೆಗೆ ಹಾಡುವ ಆತುರ
ತಿಂದು ತಿಂದು ಎಳೆಯ ಚಿಗುರ
ರೈತರಿಗೆ ನೆಮ್ಮದಿಯು ಸಹಜ
ಧಾನ್ಯ- ಕಾಳು ತುಂಬಿದರೆ ಕಣಜ
ನಾಟಕ -ಜಾತ್ರೆ, ಹಾಡು- ಕುಣಿತ
ಬಂದು ಸೇರಿದ ನೆಂಟರಿಷ್ಟರ ಸಹಿತ
ಸ್ವಾಗತಿಸೋಣ ವಸಂತ ಋತುವ
ಆಸ್ವಾದಿಸೋಣ ನಿಸರ್ಗ ಕೊಡುವ ಖುಷಿಯ
* ಡಾ ಕೊಳ್ಚಪ್ಪೆ ಗೋವಿಂದ ಭಟ್ , ಮುಂಬೈ