ಅರಿಯದೇ ಎಸಗಿದ್ದು ಎಂಥ ತಪ್ಪು!
ಅರಿಯದೇ ಎಸಗಿದ್ದು ಎಂಥ ತಪ್ಪು!
ಪುಂಡು ಮಂದಿಯ ಕೂಡಿ ಹೂವಿನಾ ಮೊಗ್ಗನ್ನು
ಪುಂಡಾಟದಲಿ ಸೆಳೆದು ಕುಲಗೆಡಿಸಿದೆ
ಅವಳು ಮುಗಿಸಿದ ಬದುಕು ಮರಳಿಬಾರದ ದಾರಿ
ಅರಿಯದೇ ಎಸಗಿದ್ದು ಎಂಥ ತಪ್ಪು?
ಯವ್ವನದ ಅಮಲೇರಿ ಹುಟ್ಟಿಸಿದ ಹೆತ್ತವರ
ನಟ್ಟ ನಡುರಾತ್ರಿಯಲಿ ಹೊರಗಟ್ಟಿದೆ
ಭಂಡಬದುಕನು ಬಾಳಿ, ಪಾಳಿ ಮರೆತೇಹೋಗಿ
ಅರಿಯದೇ ಎಸಗಿದ್ದು ಎಂಥ ತಪ್ಪು?
ಒಡಹುಟ್ಟುಗಳನೆಲ್ಲ ಶತ್ರುಸಾಲಲಿ ಇರಿಸಿ
ಹೆಜ್ಜೆಹೆಜ್ಜೆಗು ಭೀತರಾಗುವಂತೆಸಗಿದೆ
ಪಾಪವನೆ ಪುಣ್ಯವೆಂಬಂತೆ ಜೀರ್ಣಿಸಿಕೊಂಡೆ
ಅರಿಯದೇ ಎಸಗಿದ್ದು ಎಂಥ ತಪ್ಪು?
ಗುರು ಹಿರಿಯರಾದಿಗಳು ಒರೆದ ಹಿತವಚನವನು
ಮುದಿ ಮೂಳೆಗಳದೆಂದು ಧಿಕ್ಕರಿಸಿದೆ
ತನ್ನ ಸತ್ಯದ ಮುಂದೆ ಅನ್ಯಮಿಥ್ಯಗಳೆಂದು
ಅರಿಯದೇ ಎಸಗಿದ್ದು ಎಂಥ ತಪ್ಪು?
ಇಂದು ನನ್ನದು ಎಂದು ಉಳಿದಿಲ್ಲ ಇನ್ನೊಂದು
ಕೊಂದು ಕೆಡಹೆಂದರೂ ಕಿವಿಕೊಡುವರಿಲ್ಲ
ಎಲ್ಲದಕು ಕಾರಣವು ಅರ್ಥವಿಲ್ಲದ ಸ್ವಾರ್ಥ
ಅರಿಯದೇ ಎಸಗಿದ್ದು ಎಂಥ ತಪ್ಪು?