ಜೀವನ್ಮರಣ ಸಂತೆಯಲ್ಲೊಂದು ದಿನ

“ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್” – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ

ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ಮೋಹಕ ಮುಗುಳುನಗೆಯಲ್ಲಿ ಪ್ರಶ್ನಿಸುತ್ತಿದ್ದ ಅದೇ ಎಮಿಲಿ ಇಂದು ಅದೇ ರಾಗದಲ್ಲೇ ಒಳಬರಲು ಅನುಮತಿ ಕೇಳಿದಳು. ಅಚ್ಚ್ ಕೆಂಪು ಬಣ್ಣದ ತುಟಿರಂಗು, ಬಾಬ್ ಮಾಡಿದ ಕೂದಲು, ಜೀನ್ಸ ಪ್ಯಾಂಟ್ ಟೀ ಶರ್ಟತೊಟ್ಟು ಬರುವ ಎಮಿಲಿ ಆಗಷ್ಟೇ ಇಪ್ಪತೈದು ಇಪ್ಪತ್ತಾರರ ತರುಣಿ. ಆಫೀಸಿನ ಎಲ್ಲರ ಬಾಯಲ್ಲಿ ಅತಿ ಹೆಚ್ಚು ಓಡಾಡುವ ಹೆಸರು.. ಯಾರೊಂದಿಗೂ ಮುನಿಸು ಮಾಡಿಕೊಳ್ಳದ, ಮುನಿದರೆ ತಾನಾಗಿಯೇ ಮಾತನಾಡಿಸಿ ಹಿಂದಿನದನ್ನೆಲ್ಲಾ ಮರೆತುಬಿಡುವವಳು. ಎಮಿಲಿ ಹಾಗೇ ಬಾಗಿಲಲಿ ನಿಂತು ಕೇಳಿದಾಗಲೆಲ್ಲ ಪ್ರಣೀತ ಮೀಸೆಯಡಿಯಲ್ಲಿಯೇ ನಕ್ಕು ಆಕೆಗೆ ಕಣ್ಸನ್ನೆಯಲ್ಲಿಯೇ ಒಳಗೆ ಆಹ್ವಾನಿಸುತ್ತಿದ್ದ.

ಆದರೆ ಇವತ್ತು ಆತನಿಗೆ ಆಫೀಸಿಗೆ ಬಂದರೂ, ಅದೇಕೋ ಸಮಾಧಾನವಿಲ್ಲ. ಎಮಿಲಿಯ ಕರೆಗೆ ಸ್ಪಂದಿಸುವಲ್ಲೂ ಆಸಕ್ತಿಯಿಲ್ಲ. ಹೂಂ. ಎಂದಷ್ಟೇ ಹೇಳಿ ತಲೆ ಹಿಡಿದು ಕೂತ. ಎಂ.ಡಿ ಗೆ ಇವತ್ತು ಯಾಕೋ ಮೈ ಹುಷಾರಿಲ್ಲವಿರಬೇಕೆಂದು ಬಗೆದ ಆಕೆ ಕೂಡಾ ಹೆಚ್ಚು ಮಾತಾಡಲಿಲ್ಲ. ಫೈಲುಗಳ ಕಟ್ಟು ಇಟ್ಟು ಹೊರ ಹೋದಳು. ಸಿಡಿಯುತ್ತಿದ್ದ ತಲೆಯನ್ನು ಒತ್ತಿ ಹಿಡಿದು ಫೈಲುಗಳಲ್ಲಿ ಕಣ್ಣಾಡಿಸುವ ಪ್ರಯತ್ನ ಮಾಡತೊಡಗಿದ ಪ್ರಣೀತ. ಆದರೆ ಆಗುತ್ತಿಲ್ಲ. ಕೈಕಾಲುಗಳಲ್ಲಿ ಶಕ್ತಿಗುಂದಿದಂತೆ, ನರನರಗಳಲ್ಲೆಲ್ಲಾ ನೋವಿನ ಅಲೆಸುಳಿದಾಡಿದಂತೆ ಭಾಸವಾಗತೊಡಗಿತು. ತಲೆಯಲ್ಲಿ ಗುಂಗಿ  ಹುಳು ಕೊರೆಯತೊಡಗಿತು.

ಹೌದು ಇದು ಅದೇ ಇರಬಹುದೇ? ತಾನು ಕೆನಡಾದಿಂದ ಮರಳಿ ಬಂದು ಹದಿನೈದು ದಿನಗಳಾಯ್ತು. ಕಂಪನಿಯ ಮ್ಯಾನೇಜಮೆಂಟ್ ಸ್ಟಡಿ ಪ್ರಾಜೆಕ್ಟವೊಂದಕ್ಕೆ ಜೊತೆಯಾಗಿ ಅಸಿಸ್ಟಂಟ್ ಮ್ಯಾನೇಜರ್ ಜ್ಯಾಕೋಬ್ ಇದ್ದರು.ತಮ್ಮಿಬ್ಬರಲ್ಲಿ ಸ್ನೇಹ ಗಾಢವಾಗಿತ್ತು. ಕೈತುಂಬಾ ಕೆಲಸಗಳಿದ್ದರೂ, ಸುತ್ತಾಡಲೂ ಸಮಯ ಸಾಕಷ್ಟಿತ್ತು. ಹೊರ ದೇಶದಲ್ಲಿ ಯಾವ ಕೌಟಂಬಿಕ ಜವಾಬ್ದಾರಿಗಳಿಲ್ಲದ ಕಾರಣ ಇಬ್ಬರೂ ಸಾಕಷ್ಟು ಖುಷಿ ಪಟ್ಟಿದ್ದರು. ಆಗಷ್ಟೇ ಅಲ್ಲಿ ಮುಂಜಾಗ್ರತೆಯ ಹಲವು ವಿಧಾನಗಳನ್ನು ಅನುಸರಿಸುತ್ತಿದ್ದರೂ ಅಂತಹ ಕಟ್ಟುನಿಟ್ಟಿನ ನಿಯಮಗಳೇನೂ ಇರಲಿಲ್ಲ. ಆದರೆ ಇಲ್ಲಿಗೆ ಬಂದು ವಾರವಾಗುತ್ತಲೇ ಈ ಭಯಂಕರ ಖಾಯಿಲೆ ಅದರ ವಿಕಾರಗಳು.. ಅಬ್ಬಾ. ನೆನಸಿದರೆ ಭಯ ಚಳಕ್ಕೆಂದಿತು.

ಮರಳಿ ಬರುವಾಗ ಫ್ಲೈಟ್‍ನಲ್ಲಿ ಪಕ್ಕದ ಸೀಟಿನ ವ್ಯಕ್ತಿಯೊಬ್ಬ ಆಗಾಗ ಕೆಮ್ಮುತ್ತಿದ್ದ. ಏರ್ ಹೋಸ್ಟೆಸ್ ಸರ್ವ ಮಾಡಿದ ತಿಂಡಿಕೊಳ್ಳುವಾಗ ಅಲ್ಲೇ ಕಂಪ್ಯೂಟರ ಆನ್ ಮಾಡಿ ಕೂತ ತಾನು ಒಂದೇ ಕೈಯಲ್ಲಿ ತಿಂಡಿ ಮತ್ತು ಜ್ಯೂಸ್ ಗ್ಲಾಸ್ ಹಿಡಿಯಲಾಗದ್ದಕ್ಕೆ,ತಾನು ಕಷ್ಟಪಡುತ್ತಿರುವಾಗ, “ಮೇ ಐ ಹೆಲ್ಪ ಯು”ಎನ್ನುತ್ತಾ ಸಹಾಯ ಮಾಡಿದ್ದ. ಆತನ ಕೈಯಲ್ಲಿ ಹಿಡಿದ ತಿಂಡಿ  ಪ್ಯಾಕ್‍ನ್ನು ತಾನು ತೆಗೆದುಕೊಂಡಿದ್ದೆ. ಓ ದೇವರೇ!! ಕೋವಿಡ್ 19. ಆನಸಾಮಾನ್ಯರ ಜೀವನ ಮಾತ್ರವಲ್ಲದೇ ಸರಕಾರದ ಬುಡವನ್ನೆ ಅಲ್ಲಾಡಿಸತೊಡಗಿದ್ದು, ನಿಯಂತ್ರಣ ಮಾಡಲಾಗದಂತೆ ದಿನದಿಂದ ದಿನಕ್ಕೆ ಹರಡುತ್ತಿದ್ದ ರೀತಿ, ಪತ್ರಿಕೆಗಳು, ನ್ಯೂಸ್‍ಚಾನೆಲ್‍ಗಳ ತುಂಬೆಲ್ಲಾ ಅದೇ ಸುದ್ದಿ ಬಿತ್ತರವಾಗುತ್ತಿದ್ದರೆ, ತಾನು ಕೆನಡಾಕ್ಕೆ ಹೋಗಿ ತಪ್ಪು ಮಾಡಿದೆನೋ ಎಂದೆನ್ನಿಸುತ್ತಿದೆ. ತನ್ನಂತಹ ಅದೆಷ್ಟು ಜನ ಹೊರದೇಶಗಳಿಂದ ಬಳುವಳಿಯಾಗಿ ಇದನ್ನು ತಂದು ಇಲ್ಲಿ ಹಂಚಿದರೋ, ದೇವರೇ ಬಲ್ಲ!! ಈಗಂತೂ ತಮ್ಮ “ಓಪನ್ಓಯಾಸಿಸ್” ಎನ್ನುವ ಶ್ರೀಮಂತರೇ ಇರುವ ಎಕ್ಸಟೆನ್ಷನ್‍ನಲ್ಲಿ ಓಣಿಗೊಬ್ಬರಂತೆ ಕೋರೋನಾ ಪಾಸಿಟಿವ್ ಬರತೊಡಗಿದೆ. ವಿಚಾರ ಮಾಡಿ ಮಾಡಿ ತಲೆ ಇನ್ನಷ್ಟು ನೋಯತೊಡಗಿತು. ಮನೆಗೆ ಹೋಗಬೇಕೆಂದು ಸಿದ್ಧನಾಗತೊಡಗಿದ.

ಸರಿ ಹೊತ್ತಿಗೆ ಒಳಬಂದಳು ಎಮಿಲಿ. ಉದ್ವೇಗಗೊಂಡಿದ್ದಳು. ಒಳಗೆ ಬರಲೋ ಬೇಡವೋ ಎಂದೂ ಕೇಳಲಿಲ್ಲ. ಒಳಬಂದವಳೇ, “ಸರ್! ಹೊರಗೆ ಅಸಿಸ್ಟಂಟ್ ಮ್ಯಾನೇಜರ್ ಜ್ಯಾಕೋಬ್ ಸರ್ ಯಾಕೋ ವಿಪರೀತ ಎದುಸಿರು ಬಿಡುತ್ತಿದ್ದಾರೆ. ಹಿ ಕಾಂಟ್ ಬೀದ್ ಪ್ರಾಪರ್ಲಿ, ಇಟ್ ಲುಕ್ಸ ಲೈಕ್ ಹಿ ಇಸ ಸಫರಿಂಗ್ ಅಲಾಟ್, ಇಟ್ ಇಸ ಬೆಟರ್‍ಟು ಹೊಸ್ಪಿಟಲೈಸ್ ಹಿಮ್” ಎಂದು ಒಂದೇ ಉಸಿರಿಗೆಹೇಳಿದ್ದು ಕೇಳಿ ಪ್ರಣೀತ ಕಂಗಾಲಾದ. ಓ ದೇವರೇ! ಇದೇನು? ಹೊರಗೆ ಬಂದರೆ ಅದಾಗಲೇ ಉಳಿದೆಲ್ಲ ಸ್ಟಾಫ್ ಮೆಂಬರುಗಳು ಆತನ ಸುತ್ತ ನೆರೆದಿದ್ದರು. ಒಂದಿಬ್ಬರು ಮುಖಕ್ಕೆ ವಸ್ತ್ರ ಹಿಡಿದುಕೊಂಡಿದ್ದರೆ ಉಳಿದವರೆಲ್ಲ ಹತ್ತಿರ ಬರಲೂ ಹೆದರಿ ದೂರ ನಿಂತಿದ್ದಾರೆ. ಪ್ರಣೀತ ತಕ್ಷಣ ಮೊಬೈಲ್  ಎತ್ತಿ ಕಾಲ್ ಮಾಡಿದ. ಉಹೂಂ. ರೀಸೀವ್ ಮಾಡ್ತಿಲ್ಲ! ರಿಂಗಾಗುತ್ತಿರುವ ಆ ಕಡೆಯ ಲೈನು ಕಟ್ಟಾಗುತ್ತಲೇ ಇನ್ನೊಮ್ಮೆ ಡೈಯಲ್ ಮಾಡಿದರೆ ಎಂಗೇಜ ಬರತೊಡಗಿತು.

ಭಯದಲ್ಲಿಯೇ ಹೈರಾಣಾಗುವ ಸ್ಥಿತಿ ಹೇಗಿರುತ್ತೇ ಎನ್ನುವುದು ಮತ್ತೊಂದು ಬಾರಿ ತೀವ್ರ ಅನುಭವಕ್ಕೆ ಬಂತು. ಜ್ಯಾಕೋಬ್ ವಿಪರೀತಎದೆಯುಸಿರು ಬಿಡುತ್ತಿದ್ದ. ನಾಲ್ಕಾರು ದಿನಗಳ ಹಿಂದೆ ಅವನಿಗೆ ಜ್ವರ ಕಾಣಿಸಕೊಂಡಿತ್ತು. ರಜೆ ಹಾಕಿ ಮನೆಯಲ್ಲಿಯೇ ಇದ್ದವನು ಮರಳಿ ನಿನ್ನೆಯಷ್ಟೇ ಬಂದಿದ್ದ “ಸೆಲ್ಪ ಮೇಡಿಕೇಷನ್ ಮಗಾ, ನೋಡು ಹೇಗೆ ಹುಷಾರಾದೆ” ಎಂದು ಹೇಳಿದವನಿಗೆ ಇವತ್ತು ನೋಡಿದರೆ ಆಘಾತ ಉಂಟುಮಾಡುವ ರೀತಿಯಲ್ಲಿ ವಿಪರೀತ ಜ್ವರ ಮತ್ತು ಉಸಿರಾಟದ ತೊಂದರೆ ಶುರುವಾಗಿತ್ತು. ಅದೂ ಡ್ಯೂಟಿಗೆ ಬಂದ ಏಸಿ ಕೋಣೆಯಲ್ಲಿ ಕುಳಿತು ಒಂದೆರಡು ಗಂಟೆ ಕೆಲಸ ಮಾಡುತ್ತಲೇ ಶುರುವಾದದ್ದು. ಅಷ್ಟೊಂದು ಕಷ್ಟ ಪಡುತ್ತಿರುವ ಜ್ಯಾಕೋಬ್‍ನನ್ನು ಸಮಾಧಾನಿಸಲು ಯಾರೊಬ್ಬರೂ ಮುಂದಾಗುತ್ತಿಲ್ಲ.

ಈಗ ತಡೆಯಲಾಗದೇ ಪ್ರಣೀತ ಕೂಗಿ ಬಿಟ್ಟ. “ಗಾಯ್ಸ, ವ್ಹಾಟ್ ಇಸ್ ದಿಸ್?. ವ್ಹಿ ಆರ್ ಹ್ಯೂಮನ್ಸ್. ಆಟ್ಲಿಸ್ಟ್ ಮಸ್ಟ ಹ್ಯಾವ್ ದಿ ಕರ್ಟಸಿ ಟು ಶಿಪ್ಟ ಹಿಮ್ ಟು ದ ಹಾಸ್ಪಿಟಲ್. ಪ್ಲೀಸ್ , ಹೆಲ್ಪ ಮೀ.” ಎನ್ನುತ್ತಲೇ ಆಗಷ್ಟೇ ಆಡಿಟಿಂಗ್ ಆಫೀಸರ್ ಆಗಿ ಟ್ರೈನಿಂಗ್ ಪೀರಿಯಡ್‍ನಲ್ಲಿರೋ ವಿರಾಜ್ ಮುಂದೆ ಬಂದ. “ಯಸ್ ಸರ್, ಲೆಟ್ ಅಸ್ ಟೇಕ್ ಹಿಮ್ ಟು ದಿ ಹಾಸ್ಪಿಟಲ್. ಆಮ್ ವಿತ್ ಯು.” ಅಂದ. ಹಾಗೋ ಹೀಗೋ ಒಂದಿಬ್ಬರು ತೋಳಿಗೆ ಕೈಹಾಕಿ ಹಿಡಿದುಕೊಂಡು ಕಾರಿನೊಳಗೆ ತಂದು ಕೂರಿಸಿದರು. ಸೀದಾ ಡ್ರೈವರ್ ಸೀಟನಲ್ಲಿ ಹೋಗಿ ಕುಳಿತ ಪ್ರಣೀತ ಕಾರು ಚಲಾಯಿಸುತ್ತಲೇ ತನ್ನ ಪಕ್ಕ ಕೂತರೂ ಕಾರಿನ ಬಾಗಿಲೆಡೆಗೆ ಒರಗಿ ಕೂತ ವಿರಾಜ್‍ನ ನೋಡಿದಾಗ ತಾನೂ ತಾಸಿನ ಹಿಂದೆ ಹೀಗೆ ಚಿಂತಿಸುತ್ತಿದ್ದುದ್ದರ ನೆನಪಾಯಿತು. ಜೀವವೆಂದರೆ ಎಲ್ಲರಿಗೂ ಎಷ್ಟು ಅಮೂಲ್ಯ. ಪ್ರೀತಿ ಪ್ರೇಮದ ಹತಾಶೆಯ ಕ್ಷಣಗಳಲ್ಲಿ ಮನುಷ್ಯ ಹೇಗೆ ವರ್ತಿಸುತ್ತಾನೆ? ಅದೇ ಸಾವು ಮುಂದಿದೆ ಎನ್ನುವಾಗ ಎಷ್ಟು ನಿಸ್ಸಹಾಯಕನಂತೆ !!!

ತುಟಿಯಂಚಿನಲ್ಲಿ ಮೂಡಿದ ಅಸಹಾಯಕ ನಗು ತನ್ನನ್ನೇ ಅಣುಕಿಸುತಿದೆ. ಹಿಂದಿನ ಸೀಟಿನಲ್ಲಿ ಸರಾಗ ಉಸಿರಾಡಲಾಗದ ಜ್ಯಾಕೋಬ್ ಕಣ್ಣುಗಳಲ್ಲಿ ಸಾವಿನ ಭಯ. ಕಣ್ಣುಗಳ ಮುಚ್ಚಿ ತೆಗೆಯುತ್ತಾ, ಕೈಗಳ ಎತ್ತಿ ಎದೆಮೇಲಿಟ್ಟು ಕೊಳ್ಳುತ್ತಾ, ಆಗಾಗ ಹಾ! ಹೂ! ಎನ್ನುತ್ತ ಪರದಾಡುವ ಅವನ ನೋಡುತ್ತ ಎದೆಯೊಳಗೆ ಚಳ್ ಗುಟ್ಟಿದಂತಾಯ್ತು. ಲಕಲಕ ಹೊಳೆಯುವ ಬೂಟು ಶೂಗಳ ತೊಟ್ಟ ಜ್ಯಾಕೋಬ್ಆಫೀಸಿನಲ್ಲಿ ಎಲ್ಲರ ಮನಸೆಳೆಯುವಂತಹ ನಡೆನುಡಿಯ ಹುಡುಗ. ದಿನಕ್ಕೊಂದು ಬಟ್ಟೆ, ಶೂಗಳ ತೊಟ್ಟು ಕೈಯಲ್ಲಿ ಕಾರಿನ ಕೀ ಚೈನ್ ಹಿಡಿದು ತಿರುಗಿಸುತ್ತಾ ಕ್ರಿಕೆಟ್ ಪ್ಲೇಯರ್  ದೋನಿಯಂತೆ ಲಾಂಗ್ ಹೇರ್‍ನ್ನು ಹಿಂದೆ ಆಗಾಗ ತಳ್ಳುತ್ತಾಮಾತನಾಡುತ್ತಿದ್ದರೆ, ಆಫೀಸಿನ ಹೆಣ್ಣುಮಕ್ಕಳು ಅವನತ್ತಲೇ ಕಣ್ಣು ಕೀಳದಂತೆ ನೋಡುತ್ತಿದ್ದರು. ಅಪರೂಪಕ್ಕೆ ಹೊರಗಡೆ ಆಫೀಸಿನ ಸಿಬ್ಬಂದಿಗಳೆಲ್ಲ ಪಿಕ್ನಿಕ್, ವನ್‍ಡೇ ಔಟ್ ಹೋದಾಗೆಲ್ಲ ಅವ ತೆಗೆಯುವ ಸೆಲ್ಫಿಗಳು, ಅವುಗಳನ್ನು ಸ್ಟೇಟಸ್‍ಗೆ ಅಪಲೋಡ ಮಾಡುತ್ತಿದ್ದದ್ದು, ವಿಡಿಯೋ ರೆಕಾರ್ಡ ಮಾಡಿ ವ್ಲಾಗ್‍ಗಳಲ್ಲಿ ಹರಿಬಿಟ್ಟು ಖುಷಿಪಡುತ್ತಿದ್ದದ್ದು, ನೋಡುವಾಗ ತನಗೆ ಒಂದಿಷ್ಟು ಅಸೂಯೆ ಆಗುತ್ತಿತ್ತು.

ಆಗೆಲ್ಲ ತಾನು “ ವನ್ಸ್ ರಿಯಲ್ ಲೈಫ್ ಇಸ್ ಸೋ ಆಫನ್ ದಿ ಲೈಫ್ ವನ್ ಡಸಂಟ್ ಲೀಡ್” ಎಂದು ಆಸ್ಕರ ಹೇಳಿದ್ದರಲ್ಲಿ ತಥ್ಯವಿಲ್ಲಎನಿಸುತಿತ್ತು.ಜ್ಯಾಕೋಬ ಎಷ್ಟು ತೀವ್ರವಾಗಿ ಬದುಕುತ್ತಾನೆ ಎಂದೆನ್ನಿಸುತ್ತಿತ್ತು. ಆದರೆ ಇಂದು ಅದೇ ಜ್ಯಾಕೋಬನಿಗೆ ನಿಲ್ಲಲೂ ಆಗುತ್ತಿಲ್ಲ. ಒಂದು ನೀರ್ಜೀವ ಕಣವೊಂದರ ವಿದ್ವಂಸಕ ರೂಪ ಹೀಗೆ ಇರುವುದೇ? ಏನಿದು, ಹೀಗಾಗುತ್ತಿರುವುದಾದರೂ ಏಕೆ? ಮನದ ನೆರಳಿನಲ್ಲಿ ಜೀವನ್ಮರಣದ ಕೂಗು. ಕಾರು ಚಲಾಯಿಸುತ್ತಿದ್ದವನಿಗೆ ದಾರಿಯಲ್ಲಿ ಕಾಣುವ ಮಾಸ್ಕ ಧರಿಸಿದಮುಖಗಳು ಮುಖಗಳೇ ಅಲ್ಲವೆಂಬ ಭ್ರಮೆ. ಮನುಷ್ಯರೇ  ಅಲ್ಲ. ಯಾವುದೋ ಅನ್ಯ ಗ್ರಹದ ಚಿತ್ರಣದಂತೆ. ಮಾಸ್ಕ್ ಧರಿಸಿದ ಮುಖಗಳು, ಅಂಗಡಿಗಳ ಮುಂದೆ, ಮಾಲ್‍ಗಳಲ್ಲಿ ಹಿಂದೆಲ್ಲ  ಬಾಗಿಲನ್ನು ತೆರೆದು ಗ್ರಾಹಕರ ಸ್ವಾಗತಿಸುತ್ತಿದ್ದ ಪೇಜ್ ಬಾಯ್ಸಗಳು ಈಗ ಸ್ಯಾನಿಟ್ಯಸರ್ ಹಿಡಿದು ನಿಂತಿರುವುದು, ಸ್ಕ್ಯಾನರಗಳ ಮೂಲಕ ಟೆಂಪರೇಚರ್ ನೋಡುವುದು, ನಾಲ್ಕೈದು ತಿಂಗಳಲ್ಲಿ ಆದ ಬದಲಾವಣೆ. ಅಂಗಡಿ ಮುಂಗಟ್ಟುಗಳಲ್ಲಿ ಅಂತರ ಬಿಟ್ಟು ನಿಲ್ಲಲು ಹಾಕಿದ ಗೆರೆಗಳಲ್ಲಿಯೇ ಖರೀದಿಗೆ ನಿಲ್ಲುವುದು, ಕೈ, ಬಾಯಿ,ಮೂಗುಗಳ ಕಟ್ಟಿಕೊಂಡ ಬದುಕು. ಕಣ್ಣು ಮಂಜಾಯಿತು.

ಕರವಸ್ತ್ರ ತೆಗೆದು ಒರೆಸಿಕೊಳ್ಳಲೂ ಭಯ. ಇನ್ನೊಮ್ಮೆ ಹಿಂದಕ್ಕೆ ತಿರುಗಿ ಜ್ಯಾಕೋಬನ ನೋಡತೊಡಗಿದ. ಜ್ಯಾಕೋಬ ಇಲ್ಲ. ಅದು ತಾನೇ ಆಗಿ,ಛೇ!! ಯಲಹಂಕದಲ್ಲಿಯ ಕೋರೋನಾ ಆಸ್ಪತ್ರೆ ತಲುಪುತ್ತಲೇ “ರೀಲೈಪ್” ಹೆಸರು ನೋಡಿಯೇ ಅಂಜಿದ.ಕೌಂಟರ್ನಲ್ಲಿ ವಿಚಾರಿಸಲಾಗಿ ಬೆಡ್ ಇಲ್ಲವೆಂಬ ಉತ್ತರ. ಕಣ್ಣುಗಳು ಉರಿಯುತ್ತಿದ್ದವು. ವಿಪರೀತ ಬಳಲಿಕೆಯಲ್ಲಿಯೇ ಮೊಬೈಲ್  ತೆಗೆದು ಗೆಳೆಯನೊಬ್ಬನಿಗೆ ಫೋನಾಯಿಸಿದ. “ನಿಮಗೆ ಉಸಿರಾಟದ ತೊಂದರೆಯೇ? ಜ್ವರ, ಕೆಮ್ಮು,ನೆಗಡಿಯಂತಹ ಲಕ್ಷಣಗಳು ಕಂಡುಬಂದಲ್ಲಿ ಆಪ್ತಮಿತ್ರ ಸಹಾಯವಾಣಿ 14410 ಗೆ ಕರೆಮಾಡಿ.ಕೋರೋನಾ ವೈರಸ್ ಸೋಂಕು ಹರಡುವುದನ್ನು ತಪ್ಪಿಸಬಹುದು. ಹೊರಗೆ ಹೋಗುವಾಗ ಮನೆಯಲ್ಲೇ ತಯಾರಿಸಿದ ಫೇಸ್ ಮಾಸ್ಕ ಬಳಸಿ, ಇತರರಿಂದ ಕನಿಷ್ಟ ಎರಡು ಮೀಟರ್ ಅಂತರವನ್ನು ಕಾಪಾಡಿಕೊಳ್ಳಿ, ಆಗಾಗ ಸೋಪಿನಿಂದ ನಿಮ್ಮ ಕೈಗಳನ್ನು ತೊಳೆಯಿರಿ. ಭಾರತ ಸರಕಾರದ ಆರೋಗ್ಯ ಮತ್ತುಜನಹಿತಕ್ಕಾಗಿ ಜಾರಿ” ನುಡಿಯುತ್ತಿದ್ದ ಕಂಪ್ಯೂಟರ ದ್ವನಿಗೆ ಕೆರಳುವಂತಾಯ್ತು. ಯಾವ ಸಹಾಯವಾಣಿಯೂ ಆಪತ್ತಿಗಿಲ್ಲದ ವಾಣಿಗಳಾಗಿ ಕಾಣುತ್ತಿರುವಾಗ ಕಷ್ಟಕ್ಕೊದಗುವವನ ಮಾತಿಗಾಗಿ ಕಾಯುವಾಗ ಈ ಸಲಹೆಗಳೆಲ್ಲ ಎಷ್ಟು ಕಿರಿಕಿರಿ ಅನಿಸಿತವನಿಗೆ.

ಮನಸ್ಸು ವಿಕ್ಷೀಪ್ತವಾಗತೊಡಗಿತು. ಎರಡನೇ ಡೈಯಲ್ಲಿಗೆ ಫೋನ ಎತ್ತಿದ ಸಿದ್ರಾಮ. ಪ್ರಣೀತ ಸಹಾಯಕ್ಕಾಗಿ ಅಂಗಲಾಚಿದ. ಆತತನ್ನ ಕಾಲೇಜು ಗೆಳೆಯ. ಓದಲ್ಲಿ ಹಿಂದೆ ಇದ್ದ ಆತ ಈಗ ಕಾರ್ಪೋರೆಟ್ ಮೆಂಬರ್. ತನ್ನ ನೋಟ್ಸ್‍ಗಳ ಕಾಪಿ ಮಾಡಿ ಓದುತ್ತಿದ್ದ. ಆತನ ಮನೆಯಲ್ಲೂ ಅಷ್ಟಕಷ್ಟೇ ಇದ್ದ ದಿನಗಳಲ್ಲಿ ತಾನು ಮಾಡಿದ ಸಹಾಯ ಮರೆತಿರಲಿಲ್ಲ ಆತ. ಎಂತಹ ಗಡಿಬಿಡಿಯಲ್ಲೂ ಪ್ರತಿಕ್ರಿಯಿಸುತ್ತಿದ್ದ. ಈಗಲೂ ಇಲ್ಲವೆನ್ನಲಿಲ್ಲ. ಆದರೂ ಇಪ್ಪತ್ತು ನಿಮಿಷಗಳು ಕಳೆದು ಹೋದವು. ಜ್ಯಾಕೋಬ್ ಉಸಿರಾಡಲು ಸಾಧ್ಯವಾಗದೇ ಇನ್ನೇನು ಮರುಕ್ಷಣದಲ್ಲೇ ಇಲ್ಲೇ ಏನಾದರೂ! ಓಹ್ ದೇವರೇ! ಹೊಟ್ಟೆಯಲ್ಲಿ ತಿರುಗಿಸಿದಂತಾಗುತ್ತಿತ್ತು. ನಿಂತಲ್ಲಿಯೇಚಡಪಡಿಕೆ. ಮನಸ್ಸಿನ ತುಂಬಾ ಗೋಳವೊಂದು ಹಾಗೇ ಸುತ್ತಿ ಕಣ್ಣಿನೊಳಗೆ ಬಂದು ನಿಂತಂತೆ. ಆ ಗೋಳದ ತುದಿಯಲ್ಲಿತಾನು ಇಂಬ್ಯಾಲನ್ಸ ಆಗಿ ಹಿಂದಕ್ಕೆ ಮತ್ತೂ ಹಿಂದಕ್ಕೆ ವಾಲಿದಂತೆ, ಒಮ್ಮೇಗೆ ದಡಕ್ಕನೇ ತನ್ನ ಯಾರೋ ಮುಂದಕ್ಕೆತಳ್ಳಿದಂತೆ. ಕೊನೆಗೂ ಬೆಡ್ ದೊರಕಿತ್ತು. ಐಸಿಯುಗೆ ಶಿಪ್ಟ ಕೂಡಾ ಮಾಡಲಾಯಿತು. ಮನೆಗೆ ಹೋಗಬೇಕೆಂದು ಸಿದ್ಧನಾಗಿದ್ದ ತನಗೆ ಮತ್ತು ವಿರಾಜ್‍ಗೆ ಹೀಗೆ ಇಲ್ಲಿಂದಲೇ ಕ್ವಾರಂಟೈನ್ ಸೆಲ್‍ಗೆ ಕಳಿಸಲಾಗುತ್ತೆ ಎಂದು ಗೊತ್ತಾದ ಕೂಡಲೇಪ್ರಣೀತ ಕೊಂಚ ವಿಚಲಿತನಾದ.

ಸೆಲ್‍ನ ಒಳ ಬಂದವನಿಗೆ ಬೆಡ್ ನೀಡಲಾಯಿತು. ತಿರುಗಿ ನೋಡಿದರೆ ವಿರಾಜ್ ಹಿಂದಿರಲಿಲ್ಲ. ಬಹುಶಃ ಬೇರೆ ಸೆಲ್‍ಗೆ ಹಾಕಿರಬಹುದು. ಹಾಸಿಗೆ ಮೇಲೆ ಮಲಗಿದ. ಹಳೆಯ ನೆನಪುಗಳು ಒಮ್ಮೇಲೆ ಉಕ್ಕಳಿಸಿ ಬಂದವು. ಆಗಾಗ ಬರುವ ಈ ನೆನೆಪುಗಳು ಎಷ್ಟು ಯಾತನೆಯನೀಡುತ್ತವೆ. ಅಚವೆಯ ಆ ಹುಲ್ಲು ಗುಡಿಸಲ ಮನೆಯಲ್ಲಿ ತಾನು ಬೆಳೆದದ್ದು.ಕಾಡಿನ ಹಾಡಿನಲ್ಲಿ ಕಳೆದ ಬಾಲ್ಯ. ಆ ನೇರಳೆಮರ. ಗೀಜುಗನ ಗೂಡು ಕಟ್ಟಿದ ತೆಂಗಿನ ಗರಿಯ ಓಲಾಟಕ್ಕೆ ಆ ಗೂಡು ಹೇಗೆ ಹೊಯ್ದಾಡುತ್ತಿತ್ತು. ಅದನ್ನೆ ನೋಡುತ್ತಾಸಂಜೆಗಣ್ಣಲ್ಲಿ ಕನಸಿನ ಮಾಲೆ ಕಟ್ಟುತ್ತಿದ್ದ ತಾನು ಆಕಸ್ಮಿಕವಾಗಿ ಅಲ್ಲಿಂದಲೂ ಗಂಟು ಮೂಟೆ ಕಟ್ಟಿದ್ದು ನೆನಪಾಯಿತು.ಆ ದಿನವೂ ಹಾಗೇ ಅಜ್ಜಿ ತುಳಸಿ ಕಟ್ಟೆಯ ಮೆಟ್ಟಿಲ ಮೇಲೆ ಕೂತು ಬಕುಲದ ಹೂ ಕಟ್ಟುತ್ತಿದ್ದರು. ಕಾಡಿನ ನಡುವೆ ಧೂಳೆಬ್ಬಿಸುವ ಮಣ್ಣಿನ ರಸ್ತೆಯ ಉದ್ದಕ್ಕೂ ಕೈಲೊಂದು ಕೋಲು ಹಿಡಿದು ಸೈಕಲ್ಲ ಟೈರರನ್ನು ಓಡಿಸುತ್ತಿದ್ದ. ಆಗಲೇ ತಟ್ಟನೇ ಅಮ್ಮ ಚಿಟಾರನೇ ಚೀರಿದಳು.ಮನೆ ವಠಾರದಲ್ಲಿ ಅಡಿಕೆ ಸೋಗೆ ಆರಿಸಲು ಹೋದ ಅಮ್ಮ ಮಂಗವೊಂದು ಸತ್ತು ಬಿದ್ದಿದ್ದ ಕಂಡು ನೋಡಿ ಭಯಗೊಂಡಳು.

ಅಜ್ಜಿ ಅದನ್ನು ಎತ್ತೊಯ್ದು ಸಣ್ಣ ಗುಂಡಿ ತೋಡಿ ಹೂಳಿದ್ದರು. ಅಜ್ಜಿಯ ಕೈಯಲ್ಲಿ ಗುದ್ದಲಿ ನೋಡಿ ಪ್ರಣೀತ ಭಯಗೊಂಡ. ಆದರೆ ಐದನೇ ದಿನಕ್ಕೆ ಜ್ವರ ಬಂದು ಮಲಗಿದವಳು ಮತ್ತೆ ಎದ್ದಿರಲಿಲ್ಲ. ಮಂಗನ ಕಾಯಿಲೆ  ಸಾಂಕ್ರಾಮಿಕ, ಸಾಂಸರ್ಗಿಕ ಹೀಗೆ ಜನ  ಆಡುಕೊಳ್ಳುತ್ತಿದ್ದರು. ಶವದ ಹತ್ತಿರವೂ ಕೆಲವರು ಬರಲಿಲ್ಲ. ಅಮ್ಮ ಅದೆಷ್ಟು ಭೀತಳಾಗಿದ್ದಳು. ಅಪ್ಪ ಬಿಟ್ಟ ಮೇಲೆ ತಾವು ಅಜ್ಜಿಯಮನೆಯಲ್ಲಿಯೇ ಇದ್ದದ್ದು, ಅವರು ಅಮ್ಮನ ಚಿಕ್ಕಮ್ಮ. ಆಕೆ ಚಿಕ್ಕಂದಿನಲ್ಲೇ ಗಂಡನ ಕಳೆದುಕೊಂಡಾಕೆ. ಆದರೆ ತನಗೆಪ್ರೀತಿ ತೋರಿಸುತ್ತಿದ್ದ ಜೀವ ಇನ್ನು ಬರುವುದಿಲ್ಲ ಎಂಬ ಸತ್ಯ. ಅಜ್ಜಿಯ ಮೈ ನೆರಿಗೆಗಳೊಂದಿಗೆ ಆಟವಾಡುತ್ತಿದ್ದ ನೆನಪು. “ಮಳ್ಳ ಕೂಸೆ, ಅದೇನ ಮಾಡುದು ನೀನು” ಎಂದು ಗದರಿಸುತ್ತಿದ್ದರೆ, “ಅಜ್ಜಿ, ನಿನ್ನ ಮೈ ಇಟ್ಟಲ್ಲಾ ಮೆತ್ತಗೆ!! ಮಿದು ಮಿದು !! ಎಂದು ಆ ತೋಳಿನ ಚರ್ಮ ಹಿಡಿದು ಅಲ್ಲಾಡಿಸುತ್ತ ಕೂತಿರುತ್ತಿದ್ದ. ಅಜ್ಜಿಯ ಚಿತೆಗೆ ಬೆಂಕಿ ಇಡಲು ಹಿರಿಯರು ಹೇಳಿದಾಗ ನಡುಗುತ್ತಲೇ ದೊಡ್ಡವರು ಹೇಳಿದಂತೆ ಮಾಡಿ ಮುಗಿಸಿದ. ಕಂಡುಕೊಳ್ಳಲಾಗದ ವಯಸ್ಸಿನಲ್ಲಿ ಅವನಿಗೆ ಕಳೆದುಕೊಳ್ಳುವುದು ಹೇಗಿರುತ್ತದೆ ಎಂಬುದು ಮೊದಲ ಬಾರಿ ಅರಿವಾದಂತೆ ಮನೆಗೆ ಬಂದವನೇ ಕಾಡೊಳು ನಡೆದುಮುಳ್ಳಪೊದೆಯೊಳಗೆ ಹೋಗಿ ಅಡಗಿ ಕೂತ.

ಅಲ್ಲಿಯ ಮುಳ್ಳುಗಳು ಚುಚ್ಚುತ್ತಿದ್ದರೂ ಮನಸ್ಸಿಗೆ ಸಮಾಧಾನವಾಗತೊಡಗಿತು. ಕತ್ತಲಾಗುತ್ತಿದ್ದಂತೆ ಸೂತಕದ ಮನೆಯಿಂದ ಎದ್ದು ನಡೆದ ಜನರ ಹಿಂದೆ ಅಮ್ಮ  ಇವನ ಹುಡುಕಿ ಬಂದಿದ್ದಳು. ಸೂತಕ ಕಳೆದ ಮರುದಿನ ಅವರು ಆ ಊರನ್ನು ತೊರೆದು ಪಟ್ಟಣ ಸೇರಿದ್ದು. ಹಾಸ್ಟೆಲಿನಲ್ಲಿ ಕಲಿತು ದೊಡ್ಡವನಾಗಿದ್ದು, ಅಲ್ಲಿಯೇ ಸಿದ್ರಾಮ ಗೆಳೆಯನಾಗಿದ್ದು, ತನ್ನ ನೌಕರಿ ಕನಸು ಕಾಣುತ್ತಿದ್ದ ಅಮ್ಮಒಮ್ಮೇಲೆ ಹೊರಟು ಹೋಗಿದ್ದಳು. ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನೆ ಪಡೆಯುತ್ತಿದ್ದ ತಾನು ಎಂದೂ ವಿದ್ಯೆಯ ವಿಚಾರದಲ್ಲಿ ಹಿಂದೆ ಬಿದ್ದಿರಲಿಲ್ಲ. ಆನಂತರ ತಾನು ಉನ್ನತ ಅಧಿಕಾರಿಯಾಗಿ ಕೆಲಸಕ್ಕೆ ಸೇರಿದ್ದೆ. ಈಗ ಸುತ್ತಲೂ ನೋಡಿದ. ಹಾಸಿಗೆಯ ಮೇಲೆ ಬಿದ್ದುಕೊಂಡು  ಸೂರು ನೋಡುತ್ತಿದ್ದ ಹತ್ತಾರು ಜನರನ್ನು ಕಂಡು ತಾನ್ಯಾವುದೋ ಪ್ರಯೋಗಾಲಯದ ಸ್ಪೆಸಿಮನ್ ಅನಿಸತೊಡಗಿತು. ಅವರೆಲ್ಲರ ಮುಖದಲ್ಲಿ ಗೆರೆಗಳು, ಕೈಬಾಯಿ, ಮೂಗುಗಳು ಮಾಸ್ಕ, ಫೇಸ್ ಮಾಸ್ಕ,ಗ್ಲೌಸ್‍ಗಳಲ್ಲಿ ಮುಚ್ಚಿದ್ದವು.

ಪ್ರಣೀತನಿಗೆ ಜೊಂಪು ಹತ್ತಿತು. ಕೋಣೆಯ ಮೂಲೆ ಮೂಲೆಗೆ ಬಿಳಿ ರೆಕ್ಕೆಗಳ ತೊಟ್ಟ ಮೇಣದ ಬತ್ತಿ ಹಿಡಿದ ಶಾಂತಿಧೂತೆಯರು ಎದ್ದು ಬರತೊಡಗಿದರು. ಬಿಳಿಬಿಳಿಯಾಗಿ ಎಲ್ಲವೂ ಕಾಣತೊಡಗಿದವು. ಕೂಗಬೇಕೆಂದು ಕೊಂಡ. ತನ್ನ ಬಾಯಿಗೆ ಒತ್ತಾಯದಿಂದ ಮಾಸ್ಕನ್ನು ತೊಡಿಸುತ್ತಿದ್ದಾರೆ, ಕೈಗಳಿಗೆ  ಗ್ಲೌಸ್, ಈಗ ದೇಹವನ್ನೂ ಪಾಲಿಥೀನ್ ಚೀಲವೊಂದಕ್ಕೆ ತುರುಕುತಿದ್ದಾರೆ. ಬಿಳಿ ಬಿಳಿ ಪಿಪಿಟಿ ಕಿಟ್ ಧರಿಸಿದ ದೂತರು. ಕಣ್ಣು  ಮುಚ್ಚಿದ. ಆ ದೃಷ್ಟಿಯಲ್ಲಿ ಅಚವೆಯ ಆ ನೇರಳೆ ಮರ.  ಗೀಜುಗನ ಗೂಡು ಕಟ್ಟಿದ ತೆಂಗಿನ ಗರಿಯ ಓಲಾಟ ಕಣ್ಣಲ್ಲಿ  ಮೂಡತೊಡಗಿತು. ಗಾಳಿ ಎಷ್ಟು ರಭಸವಾಗಿದೆ. ಗೂಡು ಇನ್ನೇನು ಹರಿದು ಬೀಳುವಂತೆ ಬೀಸತೊಡಗಿದೆ. ಹಾಗಾಗದಿರಲಿ,,,

ಅರೇ!! ಅರೇ!! ಓ ದೇವರೇ! ಗೂಡು ಕುಸಿದು ಬಿದ್ದೇ

ಹೋಯಿತು… … …

                                                                                                          *ನಾಗರೇಖಾ ಗಾಂವಕರ,

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter