ಕೊನೆಯ ಮಳೆ

ಬಳ್ಳಾರಿಯ ಬೊಮ್ಮನಹಳ್ಳಿ ಎಂಬ ಬಯಲುಸೀಮೆಯ ಸೋನಿಯಾ ನಗರ ಬಡಾವಣೆಯಲ್ಲಿ ‘ಉಶ್… ಉಶ್’ ಎಂದು ಸೀರೆಯ ಸೆರಗನ್ನೇ ಬೀಸಣಿಗೆ ಮಾಡಿ ಗಾಳಿ ಬೀಸಿಕೊಳ್ಳುವ ಹೆಂಗಸರೂ, ಉಂಡು ತಮ್ಮ ಅಂಗಿ ಜೇಬಿನಿಂದ ಎಲೆ ಅಡಿಕೆ ಹೊರತೆಗೆದು ಪಂಚೆಗೆ ತಿಕ್ಕಿ ಸುಣ್ಣ ಹಚ್ಚಿ ಮೆಲ್ಲುತ್ತಿದ್ದ ಗಂಡಸರೂ ಬಿರುಬೇಸಿಗೆಗಾಲದ  ಆ ಒಂದು ಗಾಳಿ ಮಿಸುಕದ ರಾತ್ರಿಯನ್ನು  ತಮ್ಮ ತಮ್ಮ ಅಂಗಳದಲ್ಲಿ  ಶಪಿಸುತ್ತಾ ಕುಳಿತಿರುವಾಗ,  ತಮ್ಮ ಅನೌಪಚಾರಿಕ ಹರಟೆಯ ಮಧ್ಯೆ ಸಿದ್ಧಣ್ಣನ ಬಗ್ಗೆ ತಮಗೆ ಗೊತ್ತಿದ್ದಷ್ಟೂ  ಮತ್ತು ಗೊತ್ತಿಲ್ಲದ್ದಕ್ಕೆ ಒಂದಿಷ್ಟು ಸೇರಿಸಿಯೂ ಗುಲ್ಲಾಡಿಕೊಳ್ಳುತ್ತಿದ್ದಳು. ವಗ್ಗರಣೆ ಹಾಕದ ಸಾರಿಗೆ ರುಚಿಯಾದರೂ ಎಲ್ಲಿಂದ ಬಂದೀತು?! ಅಷ್ಟು ಹೊತ್ತಿಗೇ  ಬಡಾವಣೆಯ ಸಾಲು ಮನೆಗಳ ಮುಂದಿನ ರೈಲ್ವೆ ಹಳಿಯ ಬದಿಗಿರುವ ಜಾಲಿಮರಗಳ ಪೊದೆಯಿಂದ ಚಮತಾಂದು ಮುಗಿಸಿ  ಹಳಿ ದಾಟಿ ತನ್ನ ಮನೆಯೆಡೆಗೆ ನಡೆಯುತ್ತಿದ್ದ ಸಿದ್ಧಣ್ಣನನ್ನ ಮೊಮ್ಮಗಳನ್ನ ಆಡಿಸುತ್ತಾ ಕೂತಿದ್ದ ತಾಯಕ್ಕ ನೋಡಿದವಳೆ 

”ಹೆಂಗದಳಪ ನಿನ್ನ ಹೆಣ್ತಿ? ಸ್ವಲ್ಪ ಆರಾಮಾಗ್ಯಾಳೋ ಇಲ್ಲೋ? ಗುಳಿಗಿ-ಪಳಿಗಿ ಭೇಷಿ ಕೊಡಪ!” ಎಂದಳು.

”ಬೆಳಿಗ್ಗೆ ಡಾಕ್ಟ್ರು ಬಂದು ನೋಡಿ ಹೋಗ್ಯಾರಬೆ. ಇನ್ನ ಭಾಳ ದಿನ ಉಳಿಯಂಗಿಲ್ಲ. ಇರಾವಷ್ಟು ದಿನ ಚೆಂದಾಗಿ ನೋಡಿಕ್ಯಾಮದಷ್ಟ…”  ಎಂದವನೆ ಬರಬರನೆ ಹೊರಟ. ಅಷ್ಟರಲ್ಲಿ  ಅಲ್ಲಿಯೇ ಅಂಗಳದಲ್ಲಿ ಮುಸುರೆ ತಿಕ್ಕುತ್ತಿದ್ದ ತಾಯಕ್ಕನ ಸೊಸೆ ರೇಖಿ, ಸಿದ್ದಣ್ಣ ಮಾರುದೂರ ಹೋಗುವುದನ್ನೂ ಕಾಯದೆ ”ಬಂಗಾರದಂತಹ ಮೊದಲ್ನೇ ಹೆಣ್ತಿ ಬಿಟ್ಟು, ಅಕಿಗನ್ಯಾಯ ಮಾಡಿ, ಅಂಬಳಿಯಿಂದ ಈ ಚೆಂದಾತಿ ಚೆಲುವಿ ಕರಿ ಕರಿ ಕೆಂಚಿ ಅಂಬಾಕಿನ್ನ ಓಡಿಸಿಗ್ಯಾಂಡು ಬಂದು ಮದುವಿ ಆಗ್ಯನಲ್ಲ ಈ ದೊಡ್ಡ ಮನ್ಶ… ಎಲ್ಲ ಆ ಮೊದಲ್ನೇ ಹೆಣ್ತಿ ಶಾಪ… ಅನುಭವಿಸಲಿ” ಎಂದು ಕೊಂಚ ಸಿಟ್ಟಿನಿಂದಲೇ ಅಲ್ಲೇ ಕೆಳಗಿದ್ದ ಉಸುಕು ತೆಗೆದುಕೊಂಡು ಪಾತ್ರೆಯುಜ್ಜತೊಡಗಿದಳು. ಸಿದ್ದಣ್ಣ ಇವೆಲ್ಲವನ್ನ ಕೇಳಿಸಿಯೂ ಕೇಳಿಸದ ಹಾಗೆ ಹೋಗಿದ್ದು ರೇಖಿಯು ಮೊದಲನೇ ಹೆಂಡತಿ ಭಾಗ್ಯಳ ಖಾಸಾ ಗೆಳತಿ ಎಂಬ ಅರಿವು ಅವನನ್ನ ಸುಮ್ಮನೆ ಹೋಗುವಂತೆ ಮಾಡಿತ್ತು.

 ಸಿದ್ದಣ್ಣ ಮನೆ ಮುಟ್ಟಿದವನೆ ಪಾಟುಣಿಗೆ ಮೇಲಿದ್ದ  ಹಂಡೆಯೊಳಗಿನಿಂದ ನೀರು ತೆಗೆದು ಉಸುಕು ಹಚ್ಚಿ ಕೈ ತೊಳೆದು, ಹಿಮ್ಮಡ ತೋಯಿಸಿ ಚೊಂಬು ಅಲ್ಲೇ ಎಸೆದು ಒಳನಡೆದ. ನೋವಿನಿಂದ ಮುಲುಕುತ್ತಿದ್ದ ಕೆಂಚಿಯನ್ನು ಕಂಡು ಕರುಳೇ ಕಿತ್ತು ಬಂದಂತಾಯಿತು. ಹೆಂಡತಿ ಪಕ್ಕ ಕೂತವನೇ ಅವಳ ಹಣೆ ಸವರಿ ಗದ್ದಕ್ಕೆ ಕೂತಿದ್ದ ನೊಣವನ್ನು ತನ್ನ ಟವಲಿನಿಂದ ಬೀಸಿ ಓಡಿಸಿದನು.

ಕೆಂಚಿಯ ಮುಖ ಅನಾರೋಗ್ಯದಿಂದ ಕಳೆಗುಂದಿದೆ.  ”ಭಾಗ್ಯಮ್ಮಳೇ ಚೆಂದ. ಈ ಕೆಂಚಿ ಬಣ್ಣದಲ್ಲಿ ಸುಮಾರು.  ಬಣ್ಣ ಹೋಗ್ಲಿ.  ಮುಖದಾಗ ಲಕ್ಷಣರೆ ಇರದು? ಹಿಂಗಿದ್ರ ಹಿಂಗದಳಾಕಿ! ಬೆಂಡೋಲಿಯರೆ ಏನು? ಬುಗುಡಿಯಾರೇ ಏನು? ಅಕಿ ಮೇಕಪ್ಪರ ನೋಡ್ಬಕು ನೀನು. ಒಂದೊಂದು ಮಾರು ಹೂವು ಮುಡ್ಕಂತಳಬೆ ದಿನಾ! ಸಿದ್ದಣ್ಣ ಬಾಳೆಹಣ್ಣು ಮಾರಿದ ದುಡ್ಡು ಇಕಿ ಮೇಕಪ್ಪಿಗೆ ಅಕೇತಿ ಬರಿ” ಎಂದು ಕೆಂಚಿಯ ಬಗ್ಗೆ ರೇಖಿ ಉರಿದುಬೀಳುತ್ತಾಳಾದರೂ ಭಾಗ್ಯಮ್ಮಳನ್ನು ನೋಡಿರದ ಬಡಾವಣೆಯ ಜನ ಇವಳು ಹೇಳಿದ್ದನ್ನು ಪೂರ್ತಿಯಾಗಿ ಒಪ್ಪಿಲ್ಲ.

ಸಿದ್ದಣ್ಣ ಕೆಂಚಿಯನ್ನು ಮೆಚ್ಚಿ ಮದುವೆಯಾದದ್ದರ ಹಿಂದೆ ಓದು ದೊಡ್ಡ ಕಥೆಯೇ ಇದೆಯೆನ್ನಬೇಕು. ಈ ಸಿದ್ದಣ್ಣ ತನ್ನೂರು ಕೊನೆಗುಪ್ಪಿಯಲ್ಲಿ ನಾಯಿಗೆರಿ ಸಿದ್ದಣ್ಣ ಎಂದೇ ಹೆಸರು ಮಾಡಿದ್ದವನು.  ಅಲ್ಲಿ ಇಲ್ಲಿ ಸುತ್ತುತ್ತಿದ್ದ ಇವನನ್ನು ಹೇಗಾದರೂ ಮಾಡಿ ದಾರಿಗೆ ಹಚ್ಚಬೇಕೆಂದು  ಪಣ ತೊಟ್ಟಿದ್ದ ಇವನ ತಂದೆ ಅದೇ ಊರಿನ ಅವರದ್ದೇ ಜಾತಿಯ ಭಾಗ್ಯಮ್ಮಳನ್ನ ಮದುವೆ  ಮಾಡಿಸಿ ಬಾಳೆಹಣ್ಣು ಮಾರೋ ದಂಧೆ ಹಾಕಿಸಿಕೊಟ್ಟು ಕಣ್ಣುಮುಚ್ಚಿದ್ದ.

ಒಬ್ಬನೇ ಮಗ! ತಾಯಿಲ್ಲದ ತಬ್ಬಲಿ ಎಂದು ಸಿದ್ದಣ್ಣ ಮಾಡಿದ್ದೆ ಸರಿ ಎಂದು ಬೆಳೆಸಿದ್ದ ಅವನ ತಂದೆ ಅವನಷ್ಟೇ ಮೋಜುಗಾರನಾಗಿದ್ದ.   ತಂದೆಯಂತೆ ವಿದ್ಯೆ ಹತ್ತದ ಸಿದ್ದಣ್ಣ ಅವನ ವಾರಗೆಯ ಹಳ್ಳಿಯ ಗೆಳೆಯರಂತೆ ವಿಮಲ್, ಗುಟ್ಕಾ ಅಗೆಯುವ, ಬೀಡಿ ಸೇದುವ  ಚಟವನ್ನೂ ಅಂಟಿಸಿಕೊಂಡಿದ್ದ. ಒಮ್ಮೆ ಅವನ ತಂದೆ ದುಡಿಯಲು ಹೋಗು ಎಂದದ್ದಕ್ಕೆ ”ಆ ಅಂಬಳಿಯಾಗೆ ನೀನಿಟ್ಕಂಡಿರೋ ಸೂಳಿಗೆ ಕೊಡೊ ರೊಕ್ಕ ಕಡಿಮಿ ಮಾಡಿ ಒಂದು ಅಂಗಡಿ ಏನಾರ ಹಾಕೊಡದರ ಬಗ್ಗೆ ಯೋಚಿನಿ ಮಾಡು” ಎಂದವನೇ ಸಿಟ್ಟಿನಿಂದ ಎದ್ದು ಹೋಗಿದ್ದ. ಇದಾದ ಮೇಲೆಯೇ ಇವನಪ್ಪ ಇವನಿಗೆ ಒಂದು ಮದುವೆ ಅಂತ ಮಾಡಿದ್ದು. ಹಣ್ಣಿನ ವ್ಯಾಪಾರ ಮಾಡಲು ಹಣ ಕೊಟ್ಟದ್ದು.

 ”ಅವಾ ಸೂಳಿ ಮನ್ಯಾಗ ಸತ್ತ. ಅಂಥಾದ್ದೇನಿತ್ತೋ ಅಲ್ಲಿ? ಅವ್ನು ಅಪ್ಪನೇ ಅಲ್ಲ” ಎಂದು ಅಪ್ಪನ ಸಾವಿನ ದಿನ ಮುಖ ನೋಡಲಷ್ಟೇ ಹೋದವನು ನಂತರ ಯಾವ ಕಾರ್ಯವನ್ನೂ ಮಾಡಿರಲಿಲ್ಲ.  ಇದಾದ ಒಂದು ತಿಂಗಳಿಗೆ ಅಂಬಳಿಯಿಂದ ಅಪ್ಪನ ಯಜಮಾಂತಿ  ಬಂದು ಒಂದಿಷ್ಟು ಹಣವನ್ನು ಕೊಟ್ಟು ”ಇದನ್ನ ನಿಮ್ಮಪ್ಪ ನಿನ್ನ ಕೈಗೆ ಕೊಡು ಅಂತೇಳಿ ಪ್ರಾಣ ಬಿಟ್ಟಾನೆ. ಬ್ಯಾಂಕಿಗಾಕಿಬಿಡಪ. ಮುಂದೆ ಬಡ್ಡಿ ಅಂತ ಸೇರ್ಕೋತಾ ನಿನಗೆ ಹುಟ್ಟೋ ಮಕ್ಕಳಿಗೇ ಬರ್ತಾವು” ಅಂತ ಹೇಳಿ ಭಾಗ್ಯ ಕೊಟ್ಟ ಚಹಾ ಕುಡಿದು ‘ಚೆನ್ನಾಗಿರ್ರಿ’ ಎಂದು ಹರಸಿ ಹೊರಟು ಹೋಗಿದ್ದಳು. ಭಾಗ್ಯ  ಓಣಿಯ ದಾರಿಯ ತಿರುವಿನಲ್ಲಿ ಮರೆಯಾಗುವವರೆಗೂ ನೋಡಿದ್ದಳು. ಕೊರಳಸೆರೆ ಉಬ್ಬಿ ಕಣ್ಣು ನೀರಾಡಿದ್ದವು. ಸಿದ್ದಣ್ಣ ಈ ಕ್ಷಣಕ್ಕೆ ಘಟಿಸಿದ್ದು ಯಾವುದೋ ಮಾಯಕದಲ್ಲಿ ಎಂಬಂತೆ ಮೂಕನಾಗಿ ಕುಳಿತಿದ್ದನು.  ಅಂದಿನಿಂದ ಸಂಸಾರದ ನೊಗ ಹೊರುವ ಜವಾಬುದಾರಿಯನ್ನು ಸರಿಯಾಗಿಯೇ ನಿಭಾಯಿಸಹತ್ತಿದ. ತನ್ನ ನಾಲ್ಕು ಗಾಲಿಯ ತಳ್ಳುವ ಬಂಡಿಯಲ್ಲಿ ಬಾಳೆಹಣ್ಣು ತುಂಬಿಸಿಕೊಂಡು ಮನೆ ಬಿಟ್ಟವನು ಸಂಜೆಯೇ ವಾಪಸಾಗುತ್ತಿದ್ದ. ಒಂದಿಷ್ಟು ವರ್ಷ ಭಾಳ ಭೇಷಿ  ಅನ್ನೋ ರೀತಿಯಲ್ಲೇ ಸಂಸಾರ ನಡೆಸಿಕೊಂಡು ಹೋದ ಎನ್ನಬೇಕು. ಇದೇ ಸಮಯದಲ್ಲೇ ಅವನಿಗೆ ಮಗ ಹುಟ್ಟಿದ. ತಂದೆಯಾದ ಖುಷಿಗೆ ಹಿರಿ ಹಿರಿ ಹಿಗ್ಗಿ ಅವನಿಗೆ ‘ಬಸವರಾಜ’ ಎಂದು ಹೆಸರಿಟ್ಟು ತೊಟ್ಟಿಲ ಕಾರ್ಯವನ್ನು ಅದ್ಧೂರಿಯಾಗಿ ಮಾಡಿ ಇಡೀ ಓಣಿಗೆ  ಊಟ ಹಾಕಿದ್ದ.

ಒಂದು ದಿನ ಸಿದ್ದಣ್ಣನಿಗೆ ಬಜಾರದಲ್ಲಿ ಅಷ್ಟೇನೂ ವ್ಯಾಪಾರವಾಗದಿದ್ದಾಗ ಅವನು ಬಂಡಿ ತಳ್ಳುತ್ತಾ ಪಕ್ಕದ ಊರಾದ ಅಂಬಳಿಗೆ ಹೊರಟ. ಅಲ್ಲಿಯೂ ಸಾಧಾರಣ ವ್ಯಾಪಾರವಾದಾಗ ಹೇಗೂ ಇಲ್ಲಿವರೆಗೂ ಬಂದಿದ್ದೇನೆ, ಅಪ್ಪನ ಯಜಮಾಂತಿಯನ್ನೊಮ್ಮೆ  ಮಾತನಾಡಿಸಿಕೊಂಡು ಹೋಗಿಬಿಡೋಣ. ಎಷ್ಟಾದರೂ ತಂದೆ ಕೊಟ್ಟ ಹಣವನ್ನು ಜತನದಿಂದ ತನಗೆ ತಲುಪಿಸಿದವಳು ಎಂದು ಯೋಚಿಸಿ ಅವಳಿದ್ದ ಮನೆಗೆ ಹೊರಟ. ಅವಳಿದ್ದ ಓಣಿಗೆ ಸೂಳೆಕೆರಿಯೆಂದೇ ಹೆಸರಾಗಿತ್ತು. ಅದು ಸಿದ್ದಣ್ಣನಿಗೂ ತಿಳಿಯಲಾರದ ವಿಚಾರವೇನು ಅಲ್ಲ. ಅವನ ಮನಸ್ಸಿನಲ್ಲಿ  ಆಗ ತಾಯಿಹೃದಯದ ಒಬ್ಬ ಹೆಣ್ಣುಮಗಳನ್ನೊಮ್ಮೆ ಮಾತನಾಡಿಸಿ ಅವಳ ಯೋಗಕ್ಷೇಮ ವಿಚಾರಿಸಿ ಒಂದು ಡಜನ್ ಬಾಳೆ ಹಣ್ಣು ಕೊಟ್ಟು ಬರುವುದು ಎಂಬುದಷ್ಟೇ ತಲೆಯಲ್ಲಿತ್ತು. ಅಸ್ಪಷ್ಟವಾಗಿ ನೆನಪಿನಲ್ಲಿದ್ದ ಅವಳ ಮನೆಯ ಬಾಗಿಲನ್ನು ಚೂರು ಅಳುಕಿನಿಂದಲೇ ಬಡಿದಾಗ ಅವನ ಹಣೆಯಲ್ಲಿ ಬೆವರಿನ ಹನಿಗಳು ಸಾಲುಗಟ್ಟಿದ್ದವು. ಬಾಗಿಲು ತೆರೆದುಕೊಂಡಾಗ ಕೃಷ್ಣ ಬಣ್ಣದ, ತುಂಬು ಯೌವನದ, ವೈಯಾರದ ಸುಂದರಿಯೊಬ್ಬಳು ಕಂಡಳು. ಗ್ರಾಹಕನೇನೋ ಎಂದು ಒಳಗೆ ಕರೆದಳು. ಆಗ ತಿಳಿದದ್ದು ತನ್ನ ತಂದೆಯ ಯಜಮಾಂತಿ ಕೆಲವೇ ದಿನಗಳ ಹಿಂದೆ ಊರು ಬಿಟ್ಟು ಹೋಗಿದ್ದಳೆಂಬುದು ತಿಳಿಯಿತು. ಕೂಡಲೇ ವಾಪಸ್ಸು ಹೊರಟುಬರಬೇಕೆಂದುಕೊಂಡರೂ ಅವಳ ಸೌಂದರ್ಯ ತಡೆದು ನಿಲ್ಲಿಸಿತು. ಕೊನೆಗೆ ಅವಳಲ್ಲಿನ ಭೇಟಿ ಹೆಚ್ಚಾಗುತ್ತಲೇ ಹೋಯಿತು. ಕೇವಲ ಕಾಮ ಎಂದುಕೊಂಡವನು ಪ್ರೇಮದಲ್ಲಿ ಬಿದ್ದು ಅವಳನ್ನು ಕೊನೆಗುಪ್ಪಿಯಿಂದ ಹತ್ತೂರು ದೂರದ  ಬೊಮ್ಮನಹಳ್ಳಿಯ ಗಾಳೆಮ್ಮನ ಗುಡಿಯಲ್ಲಿ ಅರಿಶಿನ ಕೊಂಬು ಬಿಗಿದು ಸೀದಾತಿಸೀದಾ ಸೋನಿಯನಗರ ಬಡಾವಣೆಯಲ್ಲಿ ಒಂದು ಬಾಡಿಗೆ ಮನೆಯಲ್ಲಿ  ವಾಸವಾಗಿರಲು ಶುರು ಮಾಡಿದನೆಂದರೆ ಕೆಂಚಿ ಅವನನ್ನು ಅಷ್ಟು ಆವರಿಸಿದ್ದಳೆಂದೇ ಅರ್ಥ. ಆದರೆ ಸಿದ್ದಣ್ಣ ಊರು ಬಿಟ್ಟಾಗ ಭಾಗ್ಯ ಗರ್ಭಿಣಿ. ತನ್ನ ಹೆಂಡತಿಯ ಆ ಸ್ಥಿತಿಯಲ್ಲಿ ಬಿಟ್ಟು ಬಂದಿದ್ದಕ್ಕೆ ಅವನಿಗೆ ಪಶ್ಚಾತಾಪವಿದೆ. ತಂದೆಯಾದರೂ ತಾಯಿ ಸತ್ತ ಮೇಲೆ ಬೇರೆ ಹೆಣ್ಣಿನ ಸಹವಾಸ ಮಾಡಿದವನು, ಆದರೆ ತಾನು ತನ್ನ ಹೆಂಡತಿ  ಗರ್ಭಿಣಿಯಿರುವಾಗಲೇ ಪ್ರೀತಿಯ ಪ್ರವಾಹದಲ್ಲಿ ಕೊಚ್ಚಿ ಬೇರೆ ದಡ ಸೇರಿಕೊಂಡವನು. ತಂದೆ ಬದುಕಿದ್ದಾಗ ವಿಪರೀತ ಬೈಯುತ್ತಿದ್ದ ಸಿದ್ಧನಿಗೆ ತಂದೆಯ ಮನೋಸ್ಥಿತಿ ತನಗೆ ಈಗ ಅರ್ಥವಾಗುತ್ತಿದೆ ಎಂದುಕೊಳ್ಳುತ್ತಾನೆ. ಪ್ರೀತಿ ಎಂಬ ಅಜಾನುಬಾಹುವಿಗೆ ಎಂಥವನನ್ನೂ ಅಲುಗಾಡಿಸುವ ಶಕ್ತಿಯಿರುವುದ ನೆನೆದು ತಲ್ಲಣಗೊಳ್ಳುತ್ತಾನೆ. ಪ್ರೀತಿಯ ವಿಷಯದಲ್ಲಿ ತಾನು ತೀರಾ ಅಸಹಾಯಕ ಅನಿಸುತ್ತದೆ ಅವನಿಗೆ. ತಾನು ಮನಸಾರೆ ಬಯಸಿದ ಮೊದಲನೆಯದು ಕೆಂಚಿಯೇ ಎನಿಸುತ್ತದೆ. ಅಲ್ಲಿಯವರೆಗೆ ದಕ್ಕಿದ ಉಳಿದೆಲ್ಲವೂ ಕೂಡ ಬಯಸದೆ ಬಂದ ಭಾಗ್ಯದಂತೆಯೇ ಇವೆ. ಆ ಪಟ್ಟಿಯಲ್ಲಿ ಭಾಗ್ಯೆ ಎಂಬ ನತದೃಷ್ಠೆಯೂ ಒಬ್ಬಳು ಎಂದು ಅನುಕಂಪಿಸಿ ತನ್ನನ್ನು ತಾನು ಸಮರ್ಥಿಸಿಕೊಳ್ಳುತ್ತಾನೆ. ಆದರೂ ತನ್ನೂರಾದ ಕೊನೆಗುಪ್ಪಿಯಲ್ಲಿ ತನ್ನನ್ನೀಗ ಎಲ್ಲರೂ ಬೈಯುತ್ತಿರಬಹುದು ಮತ್ತು ಆ ಕಾರಣದಿಂದ ಊರಿನ ಋಣ ಹರಿದು ಹೋಯಿತು ಎಂದು ಆಳದಲ್ಲಿ ಬೇಸರಿಸಿಕೊಳ್ಳುತ್ತಾನೆ.

ಇವನೆಲ್ಲ  ತುಮುಲಗಳನ್ನು ಕೆಂಚಿ ಅರ್ಥ ಮಾಡಿಕೊಳ್ಳದ ದಡ್ಡಿಯೇನಾಗಿರಲಿಲ್ಲ. ಅವನ ಎಲ್ಲಾ ನಿರಾಸೆ, ತಲ್ಲಣ, ಬೇಸರ, ಪಾಪಪ್ರಜ್ಞೆಗಳೆಲ್ಲವನ್ನೂ ತನ್ನ ಪ್ರೀತಿಯ ಪಟ್ಟುಗಳಿಂದಲೇ ಮರೆಸಿದಳು. ತನ್ನಾಳದಲ್ಲಿದ್ದ ತಾನು ಕಪ್ಪು ಎಂಬ ಕೀಳಿರಿಮೆಯನ್ನೂ  ಮರೆತಳು. ಬಣ್ಣದ ಮೇರೆ ಮೀರಿ ಪ್ರೀತಿಸಿದ್ದು  ಮತ್ತೆಲ್ಲಾ ಪೋಲಿ ಕಾರಣಗಳಿಗಿಂತ ಅವಳಿಗೆ ಮುಖ್ಯವೆನಿಸುತ್ತದೆ.  ಇಬ್ಬರು ಅನುಭವಿಗಳು ತಮ್ಮ ಹೊಸ ಯಾನದಲ್ಲಿ ಬಾಳ ಸುಖವನ್ನು ಇನ್ನಿಲ್ಲದಂತೆ ಬತ್ತದ ಅಕ್ಷಯಪಾತ್ರೆಯೇನೆಂಬಂತೆ ಮೊಗೆ ಮೊಗೆದು ಉಂಡರು.

ಮದುವೆಯಾದ ಮೇಲೆ ಅವಳ ಬಾಳಲ್ಲಿ ಮೂಡಿದ ಆತ್ಮವಿಶ್ವಾಸ ಮತ್ತೆ ಕುಂದಿದ್ದು ಅವಳಿಗೆ ಗರ್ಭ ನಿಲ್ಲುತ್ತಿಲ್ಲವೆಂದು ತಿಳಿದಾಗ. ರೇಖಿಯನ್ನೊಳಗೊಂಡು  ಓಣಿಯ ಎಲ್ಲರ ಬಾಯಲ್ಲೂ ಗುಲ್ಲಾದ ಈ ವಿಷಯ ನಿಜಕ್ಕೂ ಅಮುಖ್ಯವೆಂದು ತೋರಗೊಡುತ್ತಾ ಇದ್ದುಬಿಟ್ಟಿದ್ದ. ಹೀಗೆ ಒಲವೇ ಜೀವನ ಸಾಕ್ಷಾತ್ಕಾರದಂತೆ  ಹಲವು ವರುಷಗಳ ಸುಖಸಂಸಾರ ಸಾಗಿಸಿದ ಸಿದ್ದಣ್ಣ ನಿಜಕ್ಕೂ ದಿಗಿಲುಗೊಂಡದ್ದು ಡಾಕ್ಟರರು ಕೆಂಚಿಗೆ, ಸಿದ್ಧನಿಗೆ ಅರ್ಥವಾಗದ ಅದೆಂಥದೋ ಕಾಯಿಲೆ ಎಂದುಬಿಟ್ಟಾಗ! ಒಂದು ವೇಳೆ ಕೆಂಚಿ ತನ್ನನ್ನಗಲಿ ಹೊರಟು  ಬಿಟ್ಟರೆ ತನ್ನ ಬಾಳು ಶೂನ್ಯವಾಗಿಬಿಡುವುದು ಎಂದು ಚಿಂತೆಗೀಡಾಗಿದ್ದಾನೆ. ಇಷ್ಟು ವರ್ಷಗಳ  ಸಂಸಾರ ಕೇವಲ ಕನಸೋ ಎಂಬಂತೆ ಮುಗಿದು ಹೋಗುತ್ತದೆಯೇ ಎಂಬುದು ಇವನನ್ನು ಕಾಡಿದೆ. ಅವಳನ್ನು ಅವಳ ರೋಗಕ್ಕಿಂತಲೂ ಸೊರಗಿಸಿದೆ. ಅಂದು ಖಾಯಿಲೆ ಬಿದ್ದವಳು ಹಾಸಿಗೆ ಹಿಡಿದಳು. ತಾಯಕ್ಕ ಒಮ್ಮೆ ಸೊಸೆಯೆದುರು ‘ಭಪ್ಪರೇ ಗಂಡು ನೋಡು ಈ ಸಿದ್ದಣ್ಣ. ಖಾಯಿಲಿ ಬಿದ್ದ ಹೆಂತಿನ ಎಷ್ಟು ಜ್ವಾಪಾನ ಮಾಡ್ತಾನ.  ಭಾಳ ಅನ್ಯಾಯ ಆಯ್ತು ನೋಡು ಕೆಂಚವ್ವಗೆ’ ಎಂದು ಮರುಗಿದಾಗ ”ಮೊದಲ್ನೇ ಹೆಣ್ತಿ ಅನ್ಯಾಯ ಮಾಡಿದ್ನಲ್ಲ! ಅದೇ ಶಾಪ. ಒಬ್ರನ್ನ ಉಸ್ಸ್ ಅನ್ಸಿದ್ರೆ ಹಿಂಗೇ ಆಗದು” ಎಂದು ಭಾಗ್ಯಳ ಗೆಳತಿ ರೇಖಿ ಅತ್ತೆಯ ಬಾಯಿ ಮುಚ್ಚಿಸಿದ್ದಿದೆ.

ನೋವಿನಿಂದ ಮುಲುಕುತ್ತಿದ್ದ ಕೆಂಚಿಯ ಕಂಡು ಕರುಳೇ ಕಿತ್ತು ಬಂದಂತಾಗಿ ಹೆಂಡತಿ ಪಕ್ಕ ಕೂತವನೇ ಪ್ರೀತಿಯಿಂದ ಅವಳ ಹಣೆ ಸವರಿ ಗದ್ದಕ್ಕೆ ಕೂತಿದ್ದ ನೊಣವನ್ನು ತನ್ನ ಟವಲಿನಿಂದ ಬೀಸಿ ಓಡಿಸಿದನು. ಇದ್ದಕ್ಕಿದ್ದಂತೆ ತೆರೆದಿಟ್ಟ ಬಾಗಿಲಿನಿಂದ ಬಂದ ಮಿಂಚು ತನ್ನ  ಬೆಳ್ಳಿ ಬೆಳಕಿನೊಂದಿಗೆ ಅವನ ಖಾಲಿ ಮನೆಯನ್ನು ಗುಡುಗಿನ ಸಮೇತ ಬೆಳಗಿದ್ದಕ್ಕೆ ಒಮ್ಮೆ ಹೌಹಾರಿದನು. ಮಳೆಯ ಹನಿಗಳು ರಪರಪನೆ ಬೀಳತೊಡಗಿದವು. ಬಡಾವಣೆಯ ಎಲ್ಲರೂ  ತಮ್ಮತಮ್ಮ ಮನೆಗಳಿಗೆ ಸೇರಿಕೊಂಡು ಚಿಲಕ ಹಾಕಿಕೊಂಡರು. ಸಿದ್ದಣ್ಣ ಮಾತ್ರ ಬಾಗಿಲು ಮುಚ್ಚಲಿಲ್ಲ! ಅವನಿಗೆ ಏನು ಮಾಡಬೇಕೆಂಬುದೇ ತೋಚಲಿಲ್ಲ. ಮಳೆ ಇದ್ದಕ್ಕಿದ್ದಂತೆ ರಭಸವಾಗತೊಡಗಿತು. ತನ್ನ ಮನೆಯ ಸೋರುವ ಜಾಗಗಳಲ್ಲಿ ಪಾತ್ರಯಿಡಬೇಕೆಂದು ಅಲ್ಲಿಂದ ಎದ್ದು  ಅಡಿಗೆ ಮನೆ, ಬಚ್ಚಲು,  ಬಾಗಿಲ ಪಕ್ಕದಲ್ಲಿದ್ದ ಮಂಚದ ಪಕ್ಕಕ್ಕೆ  ಮತ್ತು ಅವಳಿದ್ದ ನಡುಮನೆಯ ಮೂಲೆಗಳಲ್ಲಿ ಪಾತ್ರೆಗಳನ್ನಿಟ್ಟು ಬಂದು ಕೂರುವಲ್ಲಿಗೆ ಜೋರಾಗಿ ಒಮ್ಮೆ ಗುಡುಗಿತು. ಕೆಂಚಿ ನಿಶ್ಶಕ್ತ ಕೈಗಳಿಂದ ತಾನು ಮೇಲೆ ಹೋಗುತ್ತಿರುವುದಾಗಿ ಸಂಜ್ಞೆ ಮಾಡಿ ಕೊನೆಯದಾಗಿ ಎಂಬಂತೆ ಉಸಿರೆಳೆದುಕೊಂಡಳು. ಕಣ್ಣೀರು  ಕಪಾಳದಗುಂಟ ಜಾರಿತು…

ಸಿದ್ಧಣ್ಣನ ರೋದನೆ ಸುರಿವ ರಭಸದ ಮಿಂಚು ಗುಡುಗಿನ ಮಳೆಯ ನಡುವೆಯೂ ಇಡಿಯ ಬಡಾವಣೆಗೆ ಕೇಳಿಸುವಂತಿತ್ತು. ಓಣಿಯ ಎಲ್ಲ ಹಿರಿಯರೂ ಛತ್ರಿ ಹೊರತೆಗೆದು ಸಿದ್ಧಣ್ಣನ ಮನೆಯತ್ತ ಧಾವಿಸಿದರು. ಹೋಗಲಾರದವಳೆಂದರೆ ರೇಖಿ ಮಾತ್ರ.  ರೇಖಿ ತನ್ನ ಮಾವನ ಹಳೆಯ ಮೊಬೈಲಿನಿಂದ ತನ್ನ ಹಳೆಯ ರೊಕ್ಕದ ಡಬ್ಬಿಯಲ್ಲಿ ಒಂದು ಚೀಟಿಯಲ್ಲಿ ಬರೆದಿಟ್ಟಿದ್ದ ಭಾಗ್ಯೆಯ ನಂಬರ್ ತೆಗೆದು ಫೋನು ಮಾಡಿದವಳೇ;

”ಭಾಗ್ಯಕ್ಕ,… ನಾನು ಬೊಮ್ನಳ್ಳಿಯಿಂದ ರೇಖಿ. ಇಲ್ಲಿ ಜೋರು ಮಳಿ. ಅಲ್ಲಿ?”

”ಹೂ ಇಲ್ಲೂ  ಮಳಿಯೇ ರೇಖಿ. ಅಕಾಲದಾಗ ಮಳಿ. ನೀ ಹೆಂಗಾದಿಯೇ?”

”ಭಾಗಿ… ಕೆಂಚಿ ಸತ್ತು ಹೋಗ್ಯಾಳೆ…”

ಉತ್ತರವಿಲ್ಲ!!!

*********

ರೇಖಿಗೆ ಇವತ್ತಿಗೂ ಅರ್ಥವಾಗದ ಒಂದು ಸಂಗತಿಯೆಂದರೆ ಕೆಂಚಿಯ ಮಣ್ಣಿಗೆ ಭಾಗ್ಯ ಮಕ್ಕಳ ಸಮೇತ ಬಂದಿದ್ದುದು! ಸಿದ್ದಣ್ಣನಿಗೂ ಈ ವಿಷಯ ಆಶ್ಚರ್ಯ ತರಿಸಿದೆ. ಮಣ್ಣು ಮಾಡಿದಮೇಲೆ ಹೋಗಬೇಕೆಂದುಕೊಂಡವಳು ತಿಥಿಕಾರ್ಯದವರೆಗೂ ಇದ್ದುಬಿಟ್ಟಳು. ಮರುದಿನ ಬ್ಯಾಗಿಗೆ ಬಟ್ಟೆ ಹಾಕಿಕೊಳ್ಳುತ್ತಿದ್ದಾಗ, ಸಿದ್ಧ ”ಏ… ಇಕೆ… ಇಲ್ಲೇ ಬಂದು ಇದ್ದುಬಿಡ್ರಿ!!!” ಎಂದ. ಹೀಗಂದದ್ದಕ್ಕಾಗಿಯೇ ಮನಕರಗಿ ಉಳಿದುಕೊಂಡಿದ್ದೀನಿ ಎಂದು ಭಾಗ್ಯಳೆ ರೇಖಿಯ ಬಳಿ ಹೇಳಿದ್ದಿದೆಯಾದರೂ ನಿಜಕ್ಕೂ ಭಾಗ್ಯಳೆ ಇದ್ದುಬಿಟ್ಟಳೋ ಅಥವಾ ಅವಳೇ ಹೇಳಿದಂತೆ ಸಿದ್ದಣ್ಣನೇ ಇರು ಎಂದನೊ? ಎಂಬ ಬಗ್ಗೆ ಅವಳಲ್ಲಿ ಗೊಂದಲವಿದೆ.

ಭಾಗ್ಯ ವಯೋಸಹಜವಾಗಿ ಸ್ವಲ್ಪ ಸುಕ್ಕುಗಟ್ಟಿದ್ದಾಳೆ.  ಜೀವದ  ಗೆಳತಿಯರೆ ಆದರೂ  ರೇಖಿ ಮೊದಲಿನಿಂದಲೂ  ಭಾಗ್ಯಳನ್ನು ತನ್ನ ಆದರ್ಶವೆಂದೇ  ಭಾವಿಸಿದ್ದಾಳೆ. ಸಹಜ ಸೌಂದರ್ಯದ, ಮುಗ್ಧಳಂತೆ ತೋರಿದರೂ ಒಳಗೆ ಗಟ್ಟಿಗಿತ್ತಿಯಾದ ಭಾಗ್ಯಳನ್ನು ನೆನೆದರೆ ಇಂದಿಗೂ ಇವಳಿಗೆ ಗೌರವ ಉಕ್ಕುತ್ತದೆ. ಭಾಗ್ಯೆ ನಿಜಕ್ಕೂ ಗಟ್ಟಿಗಿತ್ತಿ. ತಮ್ಮ ಮನೆಯಲ್ಲಿಯೇ ಇದ್ದುಬಿಡು ಎಂದು ಅತ್ತಿಗೆ ಸಮೇತವಾಗಿ  ಅಣ್ಣ ಗೋಗರೆದರೂ ಯಾರ ಹಂಗಿಗೂ ಬೀಳಲಿಚ್ಛಿಸದ ಭಾಗ್ಯೆ ಎಷ್ಟೇ ಕಷ್ಟವಾದರೂ ಇಲ್ಲಿಯೇ ಬದುಕಿ ಸೈ ಎಂದು ಹಠ ಬಿಡದೆ ಬದುಕಿದ್ದಾಳೆ. ಹುಟ್ಟಿದ ಮಗಳಿಗೆ ಓಣಿಯವರೆಲ್ಲ ಧಾರವಾಹಿ ನಾಯಕಿಯರ ಹೆಸರನ್ನ ಇಡಲು ಸೂಚಿಸಿದರೂ ಲೆಕ್ಕಿಸದೆ ನಾಮಕರಣದ ದಿನ ಕಣ್ತುಂಬಿಕೊಂಡು ‘ಕಾಳಮ್ಮ’ ‘ಕಾಳಮ್ಮ’ ‘ಕಾಳಮ್ಮ’ ಎಂದು ಮೂರು ಸಾರಿ ಹೆಸರು ಉಸುರಿದ್ದಳು. ಆ ಹೆಸರಿನ ಹಿಂದೆ ಅವಳೆದೆಯಲ್ಲಿದ್ದ  ಜ್ವಾಲಾಮುಖಿಯೇ  ಹೊರಬಂದಂತಿತ್ತು.  ಅವರಿವರ ಕಾಲಿಡಿದು ಸಂಜೆ ಮುಂಜಾವಿಗೆ ಕಸ ಮುಸುರೆ ತಿಕ್ಕಿ ಮಕ್ಕಳ ಬೆಳೆಸಿದ್ದಾಳೆ. ಇಬ್ಬರನ್ನೂ ಊರಿನ ಸರ್ಕಾರಿ ಶಾಲೆಯಲ್ಲಿಯೇ ಹಾಕಿದ್ದರೂ ವಿದ್ಯೆ ಹತ್ತದ ಮಗನನ್ನು ಶಾಲೆ ಬಿಡಿಸಿ ಜವಾಬುದಾರಿ ಕಲಿಸಲು,  ತಾನು ಕೆಲಸ ಮಾಡುತ್ತಿದ್ದ ಮನೆಯವರಲ್ಲಿ ಬೇಡಿ ಹಿಟ್ಟಿನ ಗಿರಾಣಿಯಲ್ಲೇ ಕೆಲಸ ಕೊಡಿಸಿದ್ದಾಳೆ. ಮಗಳು ಹತ್ತನೇ ತರಗತಿಯವರೆಗೂ ಓದುತ್ತಿದ್ದಳೆಂದಾಗ ಹೆಮ್ಮೆಯಿಂದ ತಲೆಯೆತ್ತಿ ತಿರುಗಾಡುತ್ತಿದ್ದವಳಿಗೆ, ಕಾಳಿಯು  ಅವಳ ಶಾಲೆ ಗುಮಾಸ್ತ ಕುಂಟ ಹುಡುಗನಿಗೆ ಬಸುರಾದಾಗ ”ಎಲ್ಲರೆದುರು ಮಾನ ತೆಗ್ದಲ್ಲೇ ಬೋಸುಡಿ” ಎಂದು ದನಕ್ಕೆ ಬಡಿದ ಹಾಗೆ ಬಡಿದರೂ ಮೆಚ್ಚಿದವನಿಗೇ ಮದುವೆ ಮಾಡಿಕೊಟ್ಟು ತನ್ನ ಸಂಸಾರಕ್ಕೇ ಅಂಟಿಸಿಕೊಂಡಿದ್ದಾಳೆ. ಮಗನಿಗೂ ಏನಾದರೊಂದು ದಾರಿ ಮಾಡಿಕೊಡಬೇಕೆಂದುಕೊಂಡಿದ್ದರೂ  ಮದುವೆಯೇ ಅದಕ್ಕೆ ಪರಿಹಾರವಲ್ಲ ಎಂದು ಸಮಯೋಚಿತವಾಗಿ ಯೋಚಿಸಿದ್ದಾಳೆ ಕೂಡ.

ಸಿದ್ಧ, ಕೆಂಚಿ ಸತ್ತ ಮೇಲಿನ ತಿಂಗಳಾದರೂ ಮನೆ ಬಿಟ್ಟು ಹೊರಬಂದಿರಲಿಲ್ಲ. ಭಾಗ್ಯೆಯೂ ಯಾವುದನ್ನೂ ಕೆದಕಿರಲಿಲ್ಲ. ಅಡುಗೆ ಬೇಯಿಸಿ ಹಾಕುವುದು. ಕಸ ಮುಸುರೆ ಮಾಡುವುದು ಅಷ್ಟೇ ಅವಳ ಪ್ರಪಂಚವಾಗಿತ್ತು. ಮನೆಯಲ್ಲಿ ಬರೀ ಸ್ಮಶಾನ ಮೌನವೇ ಆವರಿಸಿತ್ತು. ಮಗ ಮಂಚದ ಮೇಲೂ, ಭಾಗ್ಯ ಅಡುಗೆ ಮನೆಯಲ್ಲೂ ಮಲಗುತ್ತಿದ್ದರೆ ಸಿದ್ದಣ್ಣ ಮಾತ್ರ ಕೆಂಚಿ ಪ್ರಾಣ ಬಿಟ್ಟ ನಡುಮನೆಯಲ್ಲಿ ಮಲಗುತ್ತಿದ್ದ. ರಾತ್ರೋರಾತ್ರಿ ಇದ್ದಕ್ಕಿದ್ದಂತೆ ಎದ್ದು ಕೂತು ಲೈಟು ಹಾಕಿ  ಟ್ರಂಕಿನೊಳಗಿಂದ ಕೆಂಚಿಯ ಸೀರೆ, ಬಳೆ, ಬೆಂಡೋಲೆ, ಬುಗುಡಿ, ಒಡವೆಗಳನ್ನೆಲ್ಲಾ ಸ್ಪರ್ಶಿಸಿ ದುಃಖಿಸುತ್ತಿದ್ದ. ಟ್ರಂಕಿನೊಳಗಿದ್ದ ಪುಟ್ಟ ಕನ್ನಡಿಯ ಮೇಲೆ ಅಂಟಿಸಿದ್ದ ಟಿಕ್ಲಿಯನ್ನೂ ಸವರಿ ಅದರಲ್ಲಿ ಮುಖ ನೋಡಿಕೊಂಡು ಅದರ ಜೊತೆ ಮಾತನಾಡುತ್ತಿದ್ದ. ಹೀಗಿವನು ಮುಸಿಮುಸಿ ಆಳುತ್ತಿದ್ದಾಗ ಭಾಗ್ಯಳಿಗೆ    ಸಹಜವಾಗಿ ಅವಳ ಹೊಟ್ಟೆಯಲ್ಲಿ ಬೆಂಕಿ ಬಿದ್ದಂತಾಗಿ ವಿಚಿತ್ರ ಸಂಕಟವನ್ನು ಅನುಭವಿಸುತ್ತಿದ್ದಳು. ಎಂತಹ  ಕಷ್ಟವನ್ನಾದರೂ ಧೈರ್ಯದಿಂದ ಎದುರಿಸಿದ್ದವಳು ಈಗ ಇಲ್ಲಿಗೆ ಬಂದು ಒಳಗೊಳಗೇ ಕುಸಿಯುತ್ತಿರುವುದನ್ನು ರೇಖಿಯೂ ಒಮ್ಮೆ ಗಮನಿಸಿದ್ದಳು. ಗಟ್ಟಿಗಿತ್ತಿ ಭಾಗ್ಯ ತನ್ನ ಈ ವಯಸ್ಸಿನಲ್ಲಿ ತನ್ನ ಸ್ವಾಭಿಮಾನದ ಬದುಕಿನೊಂದಿಗೆ ಈ ರೀತಿ  ರಾಜಿಯಾಗುವುದಕ್ಕೆ ಕಾರಣವೇನಾದರೂ ಇರಬಹುದು ಎಂಬುದು ರೇಖಿಗೆ ಬಿಡಿಸದ ಗಂಟಾಗಿತ್ತು.  ಮಗ ಬಸವರಾಜ  ತನ್ನ ತಂಗಿಯನ್ನು ಕಾಣಲು ಕೊನೆಗುಪ್ಪಿಗೆ ಹೋಗಿದ್ದ. ಭಾಗ್ಯ ನೋಡುವಷ್ಟರವರೆಗೂ ನೋಡಿ ಒಮ್ಮೆ ತಡೆಯಲಾರದೆ ”ಸತ್ತೋರು ಮತ್ತೆ ಗುಣೆಗಿಂದ ಎದ್ದು ಬರ್ತಾರ? ನೀನಿಂಗ ಮಾಡಿದ್ರ ನಾನು ಮಗನ್ನ ಕರ್ಕಂಡು ಎಲ್ಲರ ಕಿತ್ತರ್ಕಂಡು ಹೊಕ್ಕಿನಿ. ನೀನಿಲ್ಲೇ ಸಾಯಿ. ನಮಗಿಲ್ದಾಗ ಯಾರು ನೋಡಿರದು ಅಷ್ಟರಾಗ ಐತಿ” ಎಂದು ಮತ್ತೆ  ಅಡುಗೆ ಕೋಣೆಗೆ ಹೋಗಿ ”ನನ್ನ ಜೀವಂದಾಗ ಸುಖಾ ಅನ್ನೋದ ಬರಲಿಲ್ಲ….ಬರಿ ಬಡಿದಾಡಿದ್ದಾ ಆಯ್ತೋ…” ಎಂದು ಬಿಕ್ಕಿ ಬಿಕ್ಕಿ ಅಳಲಾರಂಭಿಸಿದಳು. ಅವಳನ್ನು ಸಂತೈಸುವ ಯಾವ ಶಕ್ತಿಯೂ ಸಿದ್ಧನಲ್ಲಿರಲಿಲ್ಲ. ಆ ಯೋಗ್ಯತೆಯೂ ಅವನಲ್ಲಿಲ್ಲ ಎಂದು ಅವನಿಗನ್ನಿಸಿ ಟ್ರಂಕು ಮುಚ್ಚಿ ಕೂತುಕೊಂಡ. ಅವಳ ಅಳು ಬೆಳಗಿನ ನಸುಕಿನವರೆಗೂ ಮುಂದುವರೆದು ಯಾವಾಗ ನಿದ್ದೆ ಹತ್ತಿತೋ ತಿಳಿಯಲಿಲ್ಲ.  ಮರುದಿನದಿಂದ ಒಲ್ಲದ ಮನಸ್ಸಿನಲ್ಲಿ ಮತ್ತೆ ವ್ಯಾಪಾರಕ್ಕೆ ಹೊರಡಲು ಸಿದ್ಧನಾದ. ಮಗನನ್ನು ಅವನ ಹಿಂದೆ ಕಳುಹಿಸಲು ಪ್ರಯತ್ನಿಸಿ ಸೋತಳು ಭಾಗ್ಯ.

ತಾನು ಬಯಸದೆ ಇದ್ದರೂ ಮತ್ತೆ ಭಾಗ್ಯೆ ತನಗೆ ಅಂಟಿಕೊಂಡಿದ್ದಾದರೂ ಏಕೆ? ಎಂದು ಹಣ್ಣು ಮಾರುವಾಗಲೆಲ್ಲ ಯೋಚಿಸುತ್ತಿರುತ್ತಿದ್ದ.  ಕಳೆದು ಹೋದ ಬದುಕನ್ನ ಮತ್ತೆ ಪಡೆಯುವ ಆಸೆಯೇ? ಅಥವಾ ತಾನು ಅಷ್ಟು ಇಷ್ಟು ಕೂಡಿಟ್ಟ ಹಣ ಬೇರೆಯವರ ಪಾಲಾದರೂ ಯಾಕಾಗಬೇಕು? ಆದರೆ ತನ್ನ ಮಕ್ಕಳಿಗೇ ಆಗಲಿ ಎಂಬ ಯೋಚನೆಯೇ? ಭಾಗ್ಯೆಯನ್ನು ನೋಡಿದಾಗಲೆಲ್ಲ ಆಕೆಗೆ ಮಾಡಿದ ದ್ರೋಹ ನೆನಪಾಗುತ್ತದೆ ಅವನಿಗೆ. ಇವಳೇನಾದರೂ ಇಷ್ಟು ದಿನ ತನಗಾದ ತೊಂದರೆಯನ್ನು ಬಡ್ಡಿ ಸಮೇತವಾಗಿ ತನಗೆ ಹಿಂದಿರುಗಿಸಲು ಹೊಂಚು ಹಾಕಿಯೇ ಬಂದಿದ್ದಾಳೆಯೇ?  ಮನೆ ಬಿಟ್ಟು ಹೋಗು ಎಂದುಬಿಡುವುದು ಸುಲಭ, ಆದರೆ ಅವರು ಹೋಗಿಯಾದ ಮೇಲೆ ತಾನು ಕೆಂಚಿಯ ನೆನಪುಗಳಲ್ಲಿಯೇ ಸತ್ತು ಹೋಗಿಬಿಡುತ್ತೇನೆಯೆ? ಬದುಕುವ ಆಸೆ ಅಷ್ಟು ಸುಲಭಕ್ಕೆ ಹೋಗುವುದಲ್ಲವಾ?  ಸತ್ತಾಗ ಅಳಲು, ಚಿತೆಗೆ ಬೆಂಕಿಯಿಡಲಾದರೂ ಒಂದಿಷ್ಟು ಜನ ಬೇಕಲ್ಲವಾ? ಅದು ತನ್ನ ಮಗ ಬಸವರಾಜನೇ ಯಾಕಾಗಬಾರದು ಎಂದೂ ಯೋಚಿಸುತ್ತಾನೆ. ಬದುಕು ಈ ರೀತಿ ಕೇವಲ ಅವಶ್ಯಕತೆಗಳನ್ನಷ್ಟೇ ಪೂರೈಸಿಕೊಳ್ಳುವಷ್ಟು ವ್ಯಾವಹಾರಿಕ ಮಟ್ಟಕ್ಕೆ ಇಳಿದುದಕ್ಕೆ ಮುಖ್ಯ ಕಾರಣ ಭಾಗ್ಯೆ ಮರಳಿ ಬಂದುದೇ ಎಂಬ ನಂಬಿಕೆ ಸಿದ್ಧಣ್ಣನಲ್ಲಿ  ಬಲವಾಗುತ್ತಿದೆ. ಭಾಗ್ಯಳೊಂದಿಗೆ ಇತ್ತೀಚಿಗೆ ಕ್ಷುಲ್ಲಕ ಕಾರಣಗಳಿಗಾಗಿ ಸಿಡಿಮಿಡಿಗೊಳ್ಳುತ್ತಾನೆ. ಆದರೆ  ಒಳಗಿನಿಂದ  ದಿನೇ ದಿನೇ ಸಾಯಲಾಗುತ್ತಿದ್ದಾನೆ.

ಅಷ್ಟು ಇಷ್ಟು ಕೂಡಿಟ್ಟಿದ್ದ ಹಣವನ್ನು ಬ್ಯಾಂಕಿನಿಂದ ಬಿಡಿಸಿಕೊಂಡು ಬಂದು ಮಗನ ಕೈಗಿತ್ತು ”ನಿಂಗೆ ಬಾಳೆಹಣ್ಣಿನ ಯಾಪರದಾಗೆ ಏಟೇಟು ಆಸಕ್ತಿಯಿಲ್ಲ ಅಂತ ಗೊತ್ತು. ತಕ… ಈ ರೊಕ್ಕದಿಂದ ಒಂದು ಸಣ್ಣ ಕಿರಾಣಿ ಗೂಡಂಗಡಿ ಇಟ್ಕ” ಎಂದು ಮೊದಲನೇ ಬಾರಿ ಅಂದದ್ದನ್ನ ಕೇಳಿ ಭಾಗ್ಯೆ ಕಣ್ಣೀರಾಗಿದ್ದಳಾದರೂ ತೋರಗೊಟ್ಟಿರಲಿಲ್ಲ. ಮಗನಿಗೆ ಅಂಗಡಿ ಅಂತಾದ ಮೇಲೆ ಭಾಗ್ಯ ಕೊಂಚ ನಿರಾಳಳಾಗಿದ್ದಾಳೆ. ಹೀಗೆ ಹಗುರವಾದ ಒಂದು ಮಧ್ಯಾಹ್ನದ ವೇಳೆ ಅವಳ ಸತ್ತ ಸವತಿಯ ಟ್ರಂಕನ್ನು ಮೊದಲನೇ ಬಾರಿ ತೆಗೆದು ನೋಡಿದ್ದಾಳೆ.  ಬಗೆಬಗೆಯ ಸೀರೆಗಳು… ನುಣುಪು ನುಣುಪು ಮೈಸೂರ್ ಸಿಲ್ಕ್ ಸೀರೆ, ತನ್ನ ಮಗಳಿಗೆ ಅಳಿಯ ತಂದು ಕೊಟ್ಟಿದ್ದ ‘ಕುಚ್ ಕುಚ್ ಹೋತಾ ಹಾಯ್’ ಸೀರೆಯಂತದ್ದೇ ಒಂದು ಸೀರೆ ಇದ್ದುದನ್ನು ನೋಡಿ ಮನಸ್ಸಿನಲ್ಲಿಯೇ ಕೆಂಚಿಯನ್ನು ‘ಭೋಸುಡಿ’ ಎಂದು ಬೈದುಕೊಂಡಳು. ಪೆಟ್ಟಿಗೆಯಲ್ಲಿಯೇ ಇದ್ದ ಬಂಗಾರದ ಒಡವೆಗಳನ್ನು ಧರಿಸಿಕೊಂಡು, ಪುಟ್ಟಕನ್ನಡಿಯ ತುದಿಗೆ ಅಂಟಿಕೊಂಡಿದ್ದ ಟಿಕ್ಲಿಯನ್ನು ತನ್ನ ಹಣೆಗಿಟ್ಟುಕೊಂಡಳು. ಕಣ್ಣೀರು ಬಳಬಳನೆ ಕಪಾಳಕ್ಕಿಳಿದುವು…  ಎಷ್ಟೋ ಹೊತ್ತು ಮಂಕಾಗಿ ಕುಳಿತಿದ್ದ ಅವಳು ಕೂಡಲೇ ಸೀರೆ ಮತ್ತು ಒಡವೆಗಳನ್ನೆಲ್ಲ ಬಿಚ್ಚಿ ಗಂಟುಕಟ್ಟಿಟ್ಟು, ಮಗನಿಗೆ ಫೋನು ಮಾಡಿ ಕರೆಸಿಕೊಂಡು,  ಕೊನೆಗುಪ್ಪಿಗೆ ಹೋಗಿ ಮಗಳಿಗೆ ಕೊಟ್ಟು ಬರುವುದಾಗಿ ಹೇಳಿದ್ದಳು.

 ಕೆಂಚಿಯ ನೆನಪಿನಲ್ಲಿ  ಕ್ಷೀಣಿಸುತ್ತಿರುವ ಸಿದ್ದಣ್ಣ,  ಒಂದು  ರಾತ್ರಿ ಟ್ರಂಕು ತೆಗೆದವನೇ ಅಲ್ಲಿ ಯಾವ ಒಡವೆಗಳೂ ಮತ್ತು ಸೀರೆಗಳೂ ಇಲ್ಲದ್ದನ್ನು ನೋಡಿ ಅಡುಗೆ ಮನೆಗೆ ನುಗ್ಗಿ  ಭಾಗ್ಯೆಗೆ ನಾಲ್ಕು ಬಾರಿ ಕಾಲಿನಿಂದ ‘ಧಕುಂ ಧಕುಂ’ ಒದ್ದನು.

”ಒಡವಿಯೆಲ್ಲ ಎಲ್ಲೋದವೆಲೆ ತುಡುಗಿ…” ಎಂದು ಕ್ರೋಧಗೊಂಡು ಮತ್ತೂ ಹೊಡೆಯಲು ಮುಂದುವರೆಸಿದ. ”ತಿಂತಿಂದು ಬಾತ್ಕಂಡಿಯಲಲೆ ಭೋಸುಡಿ; ಎಷ್ಟ್ ಧೈರ್ಯ ನಿನಿಗೆ? ಮಗಳ ಮನಿಗೆ ಕೊಟ್ಟಿಯೂ? ಯಾವನಿಗರ  ಕೊಟ್ಟಿಯೊ ಬೊಗಳು  ಹಾದರಗಿತ್ತಿ”  ಎಂದು ಅಲ್ಲೇ ಪಾತ್ರೆಯೆತ್ತಿಕೊಂಡು ಹೊಡೆಯಲು ಹೋದವನಿಗೆ ಭಾಗ್ಯೆ ಮೊದಲನೇ ಬಾರಿ ಸಿಟ್ಟಿಗೆದ್ದು  ”ಲೋ ಭಾಡ್ಯಾ… ಹೆಣ್ತಿ ಬಿಟ್ಟು ಸೂಳಿ ಹಿಂದೆ ಓಡಿ ಹೋದೋನು ನೀನು! ತುಡುಗು ಭಾಡ್ಯಾ! ಊರು ತುಡುಗು ಭಾಡ್ಯಾ! ನಾವೆಷ್ಟ ಮಾಡಿದ್ರು ಮತ್ತೂ ಹೊರಗಿನ್ಯಾರಂಗ ನೋಡ್ತಿಯಲಲೊ ಊರು ಹಾಟ್ಗಳ್ಳ” ಎಂದು ವಾಚಾಮಗೋಚರವಾಗಿ ಬೈಯುತ್ತಾ ಅವನನ್ನು ನೂಕಿ ಅವನ ಕೈಯಲ್ಲಿದ್ದ ಪಾತ್ರೆಯನ್ನು ಕಸಿದು ಬಾರಿಸಲಾರಂಭಿಸಿದಳು. ನೈತಿಕವಾಗಿ ಎದುರಿಸಲಾರದ ಅವನು ತಪ್ಪಿಸಿಕೊಳ್ಳಲು  ನಡುಮನೆಯವರೆಗೂ ಹೋಗಿ ಎಡವಿ ಬಿದ್ದನು. ಭಾಗ್ಯಳ ಈ ರೌದ್ರಾವತಾರವನ್ನು ಅವನು ಎಂದೂ  ನೋಡಿರಲಿಲ್ಲ. ಸನ್ನಿ ಹಿಡಿದವರಂತೆ ಕೂತುಬಿಟ್ಟ. ಇವಳ ದನಿ ಓಣಿಗೆಲ್ಲಾ ಕೇಳಿ,  ಜನರೆಲ್ಲಾ ಅವನ ಮನೆಯ ಮುಂದೆ ನೆರೆದು ನೋಡುತ್ತಿದ್ದರೂ ಯಾರೂ ಬಿಡಿಸಲು ಧೈರ್ಯ ಮಾಡುತ್ತಿಲ್ಲದಾಗ ರೇಖಿಯೇ ಬಂದು ಭಾಗ್ಯಳನ್ನು ತಡೆದು ”ಏ… ಭಾಗ್ಯಕ್ಕ… ನಿನಗೇನಾಗೇತೆ ಇವತ್ತು? ಅವ್ರವ್ರು ಮಾಡಿದ್ದು ಅವ್ರವ್ರು ಅನುಭವಿಸ್ತಾರೆ. ನೀ ಅಂದ್ಯಾಕೆ ಕೆಟ್ಟಾಕ್ಯಕಿ ಬಾ ಇಕಡೆ” ಎಂದು ತನ್ನ ಮನೆಗೆ  ಕರೆದುಕೊಂಡು ಹೋಗಿ ಕೂಡಿಸಿದಳು.

ಅಂದು ನೆಲಕ್ಕತ್ತಿದ ಸಿದ್ದಣ್ಣ ಕ್ಷಯಿಸುತ್ತಲೇ ಹೋದ. ಬಾಯಿ ಬಂದಾಗಿದೆ. ಏಳಲು ತ್ರಾಣವಿಲ್ಲ. ಇತ್ತೀಚೆಗಂತೂ ಹೇಲು-ಉಚ್ಚೆ ಎರಡೂ ಹಾಸಿಗೆಯಲ್ಲಿಯೇ. ಇಷ್ಟಾದರೂ ಭಾಗ್ಯ ತುಟುಕ್-ಪಿಟುಕ್ ಅನ್ನದೇ ಅವನನ್ನು ನೋಡಿಕೊಳ್ಳುತ್ತಿದ್ದಾಳೆ. ಹಾಸಿಗೆ ಹಿಡಿದ ಇವಳನ್ನು ನೋಡಿ ಸಿದ್ಧ ಕಣ್ಣೀರು ಹಾಕುತ್ತಾನೆ. ಅದಕ್ಕೆ ಯಾವ ಅರ್ಥವನ್ನೂ ಭಾಗ್ಯೆ ಹಾಕಿಕೊಳ್ಳುವುದಿಲ್ಲ. ಆ ಕಣ್ಣೀರಿಗೆ ಅವಳನ್ನು ಕರಗಿಸುವ ಶಕ್ತಿಯೂ ಇಲ್ಲವಾಗಿವೆ. ಈಗೀಗ ಅವಳು ಮನಸು ಬಿಚ್ಚಿ ಮಾತನಾಡುವುದು  ಗೆಳತಿ ರೇಖಿಯ ಬಳಿ ಮಾತ್ರ. ಕಷ್ಟವೋ ಸುಖವೊ ಹೇಗೋ ತನ್ನ ಮಗನಿಗೆ ಒಂದು ದಾರಿಯಾಯ್ತು. ಕೊನೆಗುಪ್ಪಿಯ ಮನೆ ಮಗಳಿಗಾಯ್ತು. ಅವಶ್ಯಕತೆಗೆಂದೇ ಪರಸ್ಪರರು  ಅಂಟಿಕೊಂಡರೂ ಮನುಷ್ಯ ದ್ವೇಷಿಸಲಿಲ್ಲ. ಎಲ್ಲೋ ಆಳದಲ್ಲಿ ಮೊದಲಿನಂತೆ ಸಂಸಾರ ಮಾಡುವ ಹಾಗಾಗುತ್ತಾನೆ ಎಂಬ ನಂಬಿಕೆ ಹುಸಿಯಾಗಿ ಮೊದಲ ಹೆಂಡತಿಯ  ನೆನಪುಗಳಲ್ಲಿಯೇ ನೆಲಹತ್ತಿದ್ದವನ ಕಂಡು ಒಮ್ಮೊಮ್ಮೆ ಮರುಕ ಹುಟ್ಟುತ್ತದೆ ಭಾಗ್ಯೆಗೆ. ಪ್ರೀತಿಯನ್ನಷ್ಟೇ ದಕ್ಕಿಸಿಕೊಂಡ ತನ್ನ ಸವತಿಗೆ ಬದುಕು ಪೂರ್ತಿಯಾಗಿ ದಕ್ಕಲಿಲ್ಲ. ಮಕ್ಕಳು- ಮರಿ- ಜವಾಬ್ದಾರಿ- ಕಾದಾಟ- ಹೋರಾಟ ಇವ್ಯಾವುಗಳನ್ನೂ ಅವಳು ಹಾಯಲೇ ಇಲ್ಲ. ಅಷ್ಟರ ಮಟ್ಟಿಗೆ ಅವಳದು ರಸಹೀನ ಬದುಕು ಎಂದು ತನ್ನನ್ನ ತಾನು ಸಮಾಧಾನ ಪಡಿಸಿಕೊಂಡರೂ, ಅವಳು ಮದುವೆಯಾಗುವವರೆಗೂ ಅನುಭವಿಸಿದ್ದಿರಬಹುದಾದ ನರಕವನ್ನೊಮ್ಮೆ ನೆನೆದು ಅವಳ ಮೇಲೆ ಮರುಕ ಹುಟ್ಟುತ್ತದಾದರೂ  ಬದುಕನ್ನ ಕಟ್ಟಿಕೊಂಡ ಕೆಂಚಿಯ  ಜಾಣ್ಮೆಗೆ ಮೆಚ್ಚುಗೆ ಇದೆ. 

ಅವಳು ಕೊನೆಗಾಲದಲ್ಲಿ ಮಲಗಿದ್ದ ಅದೇ ನಡುವಿನಮನೆಯಲ್ಲೆ ಇವನೂ ಮಲಗಿದ್ದಾನೆ. ಇವನೊಂದಿಗೆ ಕಳೆದ ಸುಖದ ಕ್ಷಣಗಳು ಒಂದೊಂದಾಗಿ ನೆನಪಿಗೆ ಬರುತ್ತವೆ. ಬಸವರಾಜ ಹೊಟ್ಟೆಯಲ್ಲಿದ್ದಾಗ ಇವನು ತೋರಿಸಿದ ಸಿನಿಮಾ, ಎಲೆ ಅಡಿಕೆ  ಬಾಯಲ್ಲಿ ಅಗೆದು ನುರಿಸಿ ತನ್ನ ಬಾಯಿಗಿಡುತ್ತಿದ್ದುದು, ದಿನವೂ ಹಿಡಿದುಕೊಂಡು ಬರುತ್ತಿದ್ದ ಮಲ್ಲಿಗೆ, ಕನಕಾಂಬರದ ಹೂವು… ಹೀಗೆ ಎಲ್ಲವೂ ನೆನಪಾಗುತ್ತವೆ. ಬದುಕಿನ ಕೊನೆಯೆಂಬಂತೆ ಮಲಗಿರುವ ಇವನು ಕೇವಲ ಮಗುವಂತೆ ಕಾಣುತ್ತಿದ್ದಾನೆ. ಇವೆಲ್ಲಾ  ನೆನೆಸಿಕೊಂಡು ಮನೆಯ ಮುಂದಿನ ಅಂಗಳದಲ್ಲಿ ಆಕಾಶದ ಕರಿಮೋಡಗಳನ್ನೇ ದಿಟ್ಟಿಸುವ ಹಾಗೆ ಕುಳಿತಿದ್ದವಳನ್ನು   ರೇಖಿ  ಮಾತನಾಡಿಸಲು ಬಂದವಳೇ ”ಮುಂದಕ್ಕೆ  ಚಳಿಗಾಲ ಶುರುವಾಗಿ ಬಿಡ್ತತಿ. ಬಹುಶಃ  ಇದೇ ಕೊನೆ ಮಳೆ ಇರ್ಬದೇನೋ? ಇಗೋ ಬಜಾರಕ್ಕೋಗಿದ್ವಿ. ತವರಿಗೆ ಬಂದ ಮಗಳು ಸ್ವೇಟರ್ ಬೇಕು ಅಂದ್ಲು . ಸೋವಿ ಇತ್ತು ತಗಂಬಂದೀನಿ” ಎಂದು ಮಗಳಿಗಾಗಿ  ತಂದ ಹೊಸ ಕೆಂಪು ಬಣ್ಣದ  ಸ್ವೆಟರನ್ನೊಮ್ಮೆ  ತೋರಿಸಿ, ಸಿದ್ಧಣ್ಣನ ಯೋಗಕ್ಷೇಮ ವಿಚಾರಿಸಿ  ಹೋದಳು.  ರೇಖಿಯ ಕೈಯಲ್ಲಿದ್ದ  ಕೆಂಪು ಸ್ವೆಟರ್, ಅದರ ತುದಿಗೆ ಹೆಣೆದ  ಬಣ್ಣದ ಹೂವನ್ನೇ  ರೇಖಿ ಮನೆ ಸೇರುವವರೆಗೂ  ನಿಂತು ನೋಡಿದಳು ಭಾಗ್ಯ. ಹೊರಗೆ ಮಳೆಗಾಳಿ ಬೀಸುವುದು ಜೋರಾಯಿತು. ಆಕಾಶದಲ್ಲಿ ಕರಿ ಮೋಡಗಳು ದಟ್ಟೈಸಿದವು. ಒಳಗೆ ನಡುಮನೆಯಲ್ಲಿ ಇವನ ನೋವಿನ ಮುಲುಕುಗಳು ಜಾಸ್ತಿಯಾಗತೊಡಗಿದವು. ಒಳಗೆ ಬರುತ್ತಲೇ ಕರೆಂಟು ಹೋಯಿತು.  ಇನ್ನೇನು ಮಳೆ ಬರಬಹುದೆಂದು ಮನೆಯ ಸೋರುವ ಅಡಿಗೆ ಮನೆ, ಬಚ್ಚಲು,  ಬಾಗಿಲು ಬಳಿಯಿದ್ದ  ಮಂಚದ ಪಕ್ಕ  ಮತ್ತು ಸಿದ್ದಣ್ಣನಿದ್ದ ನಡುಮನೆಯ ಮೂಲೆಗಳಲ್ಲಿ ಪಾತ್ರೆಗಳನ್ನಿಟ್ಟು, ಮುಂಬತ್ತಿ ಹಚ್ಚಿಕೊಂಡು ಬಂದು ಸಿದ್ಧಣ್ಣನ ಬಳಿ  ಕೂತಳು. ಗಾಳಿಗೆ ಮುಂಬಾಗಿಲು ಮುಚ್ಚಿ ತೆರೆಯುತ್ತಿತ್ತು. ಮುಂಬತ್ತಿಯ ಬೆಳಕಿನ ನೆರಳು ಗಾಳಿಗೆ ಅಲ್ಲಾಡಿ ಮನೆಯಲ್ಲಿದ್ದ ಸ್ಮಶಾನ  ಮೌನವನ್ನು ಕದಲಿಸುತ್ತಿತ್ತು . ಅವನ ಗದ್ದಕ್ಕೆ ಅಂಟಿದ್ದ ಜೊಲ್ಲಿಗೆ ಮುತ್ತಿಕೊಳ್ಳುತ್ತಿದ್ದ ನೊಣಗಳನ್ನು ತನ್ನ ಸೆರಗಿನಿಂದ ಮೆಲ್ಲಗೆ  ಗಾಳಿ ಬೀಸಿ, ದೀಪವಾರಿ ಹೋಗದಂತೆ  ಓಡಿಸಿದಳು. ಸುರಿಯುತ್ತಿರುವ ಈ  ಮಳೆ ನಿಜಕ್ಕೂ ಕೊನೆಯದ್ದಾ?  ಬರುವ ನಾಳೆಗಳ ಬಗೆಗಿನ ಭಯದಲ್ಲಿ, ಯೋಚಿಸುತ್ತಾ ಕೊನೆಯ ಮಳೆಯ ನಿರೀಕ್ಷೆಯಲ್ಲಿ ಗೋಡೆಗೊರಗಿ ಕುಳಿತಳು. 

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter