ಕರಾವಳಿಯಲ್ಲಿ ಜಾತ್ರೆಗಳ ಕಾಲ ದೀಪಾವಳಿಯಿಂದ ಪತ್ತನಾಜೆಯವರೆಗೆ. ಮಳೆಗಾಲ ಮುಗಿದು, ದೀಪಾವಳಿಯೂ ಮುಗಿದು, ಶಿಶಿರ, ವಸಂತ ಋತುಗಳು ಅಡಿಯಿಡುವಾಗ ಜನರಿಗೆ ಸಂಭ್ರಮಿಸುವ ಮನಸ್ಸು. ಪ್ರತಿ ಊರಿನಲ್ಲಿ ಒಂದೋ ಎರಡೋ ದೊಡ್ಡ ಜಾತ್ರೆಗಳು ನಡೆಯುತ್ತವೆ. ಊರವರೆಲ್ಲ ವರ್ಷಪೂರ್ತಿ ಎದುರು ನೋಡುವ ಮಹತ್ವದ ಘಟನೆಗಳು ಅವು. ಆ ದಿನಗಳಲ್ಲಿ ಕೆಲವೆಲ್ಲ ಹೊಸತುಗಳನ್ನು ಹೊಂಚಿಕೊಳ್ಳಲಿಕ್ಕಿದೆ, ಹಳೆಯ ಗೆಳೆಯರನ್ನು ಭೇಟಿ ಮಾಡಲಿಕ್ಕಿದೆ, ದೂರದೂರಿನ ಗೆಳೆಯರನ್ನು ಊರಿಗೆ ಕರೆಯಲಿಕ್ಕಿದೆ, ಕೆಲದ ಮೇಲೆ ದೂರದೂರುಗಳಲ್ಲಿರುವ ಊರವರು ಮರಳಿ ಮನೆಗೆ ಬರಲಿಕ್ಕಿದೆ. ಯುವಕ ಯುವತಿಯರು ಈ ಜಾತ್ರೆಗಳನ್ನು ‘ವಿಶೇಷ’ ಆಸಕ್ತಿಯಿಂದ ಎದುರು ನೋಡುತ್ತಿರುತ್ತಾರೆ! ಹೀಗಾಗಿ ಹಲವು ನಿರೀಕ್ಷೆಗಳು ನಿಜವಾಗುವ ಕಾಲವೆಂದರೆ ಊರ ಜಾತ್ರೆಯೇ.
ಹಿಂದಿನ ಕಾಲದಲ್ಲಿ ದೇವಸ್ಥಾನಗಳೇ ಊರಿನ ಕೇಂದ್ರಗಳಾಗಿದ್ದವು. ಆಗ ಊರಿನವರನ್ನೆಲ್ಲ ಒಂದುಗೂಡಿಸುವ ಉತ್ಸವಗಳಾಗಿ ವರ್ಷಾವಧಿ ಜಾತ್ರೆಗಳು ಶುರುವಾಗಿರಬೇಕು. ಈಗಲೂ ಜಾತ್ರೆಗಳು ತಮ್ಮ ಆಕರ್ಷಣೆಯನ್ನಾಗಲೀ ಪ್ರಸ್ತುತತೆಯನ್ನಾಗಲಿ ಕಳೆದುಕೊಳ್ಳದೆ ಹಿಂದಿಗಿಂತಲೂ ಹೆಚ್ಚಿನ ವೈಭವದಲ್ಲಿ ಆಚರಿಸಲ್ಪಡುತ್ತಿರುವುದು ವಿಶೇಷ.
ದೇವಸ್ಥಾನಗಳ ಜಾತ್ರೆಗಳು ಈಗ ವಿದ್ಯುದ್ದೀಪಗಳಿಂದ ಹೆಚ್ಚು ಬೆಳಗುವಂಥವೂ, ಹಲವು ವಿಧದ ವಾದ್ಯ ಚರ್ಮ ವಾದ್ಯಗಳ ಶಬ್ದಗಳಿಂದ ಹೆಚ್ಚು ಮೊರೆಯುವಂಥವೂ ಆಗಿಬಿಟ್ಟಿವೆ. ಜನ ಇವನ್ನೆಲ್ಲ ಸಂಭ್ರಮದ ಒಂದು ಭಾಗವೆಂಬಂತೆ ಸ್ವೀಕರಿಸಿಬಿಟ್ಟಿದ್ದಾರೆ. ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚಾಗುವಂತೆ ಊರ ಮುಂದಾಳುಗಳು ಪ್ರಯತ್ನಿಸುತ್ತಾರೆ. ದೂರದ ಊರುಗಳಿಂದ ಮುಖವಾಡಧಾರಿಗಳ ಕುಣಿತದ ತಂಡ, ಕೀಲು ಕುದುರೆ, ಕರಗ, ಡೊಳ್ಳು ಕುಣಿತ, ವೇಷಗಳನ್ನು ಕರೆದು ತರುತ್ತಾರೆ.
ಹಿಂದಿನ ಕಾಲದ ಉತ್ಸವಗಳು ಹೇಗಿದ್ದಿರಬಹುದೆಂದು ಇವತ್ತು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಮುಖ್ಯವಾಗಿ ಎಣ್ಣೆ ದೀಪಗಳಿಂದ ಮತ್ತು ಹಿತಮಿತವಾದ ವಾದ್ಯಗಳಿಂದ ಜಾತ್ರೆಗಳು ಹೆಚ್ಚು ಹಿತವಾಗಿದ್ದಿರಲು ಸಾಕು.
ದೇವಸ್ಥಾನಗಳ ಜಾತ್ರೆಗಳ ಮುನ್ನಾ ದಿನ ಅಥವಾ ಕೆಲವು ದಿನಗಳ ಹಿಂದೆ ಧ್ವಜಾರೋಹಣ ಎಂಬ ಕಾರ್ಯಕ್ರಮವಿರುತ್ತದೆ. ತುಳುವಿನಲ್ಲಿ ಇದನ್ನು ‘ಕೊಡಿ’ ಏರಿಸುವುದು ಎಂದು ಹೇಳುತ್ತಾರೆ. ದೇವಸ್ಥಾನದ ಎದುರಿನ ಧ್ವಜಸ್ತಂಭಕ್ಕೆ ದೇವಸ್ಥಾನದ ಧ್ವಜವನ್ನು ಮಂಗಲ ವಸ್ತುಗಳೊಂದಿಗೆ ಏರಿಸುವುದರೊಂದಿಗೆ ಉತ್ಸವ ಪ್ರಾರಂಭವಾಗುತ್ತದೆ. ಇದಾದ ನಂತರ ಊರಿನವರು ಊರು ಬಿಟ್ಟು ಹೋಗುವಂತಿಲ್ಲ.
ಉತ್ಸವಗಳ ಬಗೆ : ಕರಾವಳಿಯ ದೇವಸ್ಥಾನಗಳಲಿ ಹಲವು ಬಗೆಯ ಉತ್ಸವ ನಡಾವಳಿಗಳು ಕಂಡು ಬರುತ್ತವೆ. ವಿಶೇಷವೇನೆಂದರೆ ಇಲ್ಲಿ ಮಧ್ವಾಚಾರ್ಯರ ಮಾಧ್ವ ಮತದ ಪ್ರಾಬಲ್ಯದಿಂದಾಗಿ ಎಲ್ಲ ದೇವಸ್ಥಾನಗಳಲ್ಲಿ ವೈಷ್ಣವ ಆರಾಧನೆಯ ಕ್ರಮ ಕಂಡುಬರುತ್ತದೆ. ಶಿವ ದೇವಸ್ಥಾನಗಳಲ್ಲಿ ಕೂಡ ಪ್ರಸಾದ ರೂಪವಾಗಿ ವಿಭೂತಿಯನ್ನು ಕೊಡದೆ ಗಂಧವನ್ನೇ ಕೊಡುವುದು ಒಂದು ಗಮನಾರ್ಹವಾದ ಅಂಶ.
ಹೀಗೆಯೇ ದೇವರು ಹೊರುವುದು, ಬಲಿ, ಉತ್ಸವಗಳು ಕೂಡ ಎಲ್ಲ ದೇವಸ್ಥಾನಗಳಲ್ಲಿ ಒಂದೇ ರೀತಿಯಲ್ಲಿ ನಡೆಯುತ್ತವೆ.
ಇಲ್ಲಿ ಕಂಡುಬರುವ ಉತ್ಸವಗಳಲಿ ನಾಲ್ಕು ಬಗೆಯನ್ನು ಕಾಣಬಹುದು. ಅವು ಯಾವುವೆಂದರೆ ರಥೋತ್ಸವಗಳು, ಅಯನೋತ್ಸವಗಳು, ದೀಪೋತ್ಸವಗಳು ಮತ್ತು ಇತರ ಆಚರಣೆಗಳು. ಇವುಗಳಲ್ಲಿ ಒಂದೆರಡು ಬಗೆಯ ಆಚರಣೆಗಳು ಕೆಲವು ಕಡೆ ಜತೆಯಾಗಿರುವುದೂ ಉಂಟು.
ರಥೋತ್ಸವಗಳು : ರಥೋತ್ಸವಗಳನ್ನು ಜಾತ್ರೆಗಳ ರಾಜ ಎಂದು ಕರೆಯಬಹುದು. ಜನಜಂಗುಳೀಯ ನಡುವೆ ಬೃಹದಾಕಾರದ ರಥದಲ್ಲಿ ದೇವರ ಮೂರ್ತಿಯನ್ನು ಕುಳ್ಳಿರಿಸಿ ಎಳೆದು ತರುವ ದೃಶ್ಯವು ರಮಣೀಯವಾದುದು. ದೇವರ ವೈಭವವನ್ನು ಸಾಮಾನ್ಯ ಮನುಷ್ಯನ ಮನಸ್ಸಿನಲ್ಲಿ ಈ ದೃಶ್ಯವು ಖಚಿತವಾಗಿ ನಿಲ್ಲಿಸುವುದು ಎಂದು ನಂಬಲಾಗಿದೆ.
ಆಧ್ಯಾತ್ಮ ಸಾಧನೆ ಮಾಡಿದವರು ಪಡೆಯುವ ದೈವಿಕ ಅನುಭೂತಿಯ ವಾಸ್ತವಿಕ ಪ್ರತಿರೂಪ ಇದು ಎಂದು ಒಬ್ಬರು ಸಾಧಕರು ಈ ಲೇಖಕರಿಗೆ ತಿಳಿಸಿದ್ದಾರೆ. ಮನಸ್ಸಿನೊಳಗೆ ತಾವು ದೈವದ ಅಸ್ತಿತ್ವವನ್ನು ಇದೇ ರೀತಿ ಅಂದರೆ ಜನ ಜಂಗುಳಿಯ ನಡುವೆ, ಅಲಂಕೃತ ತೇರು ತೇಲಿ ಬರುವಂತೆ ಹಲವು ಬಾರಿ ಅನುಭವಿಸಿದ್ದಿದೆ ಎಂದು ಅವರು ತಿಳಿಸಿದರು. (ರಥೋತ್ಸವಗಳನ್ನು ನೋಡಿದ ಅವರ ಅನುಭವವೇ ಅವರಿಗೆ ತಮ್ಮ ದರ್ಶನಗಳಲ್ಲಿ ಈ ರೀತಿ ಕಾಣಿಸಿರಬೇಕು. ಈ ರೀತಿಯ ಅನುಭವಗಳನ್ನು ಒರಗೆ ಹಚ್ಚಿ ನೋಡುವಂತಿಲ್ಲವಾದ್ದರಿಂದ ಹಾಗೂ ತಿಳಿಯಬಹುದು, ಹೀಗೂ ತಿಳಿಯಬಹುದು.)
ಒಂದಂತೂ ನಿಜ – ಜಾತ್ರೆಗಳನ್ನು ಕಲ್ಪಿಸಿರುವ ಹಿರಿಯರ ಉದ್ದೇಶ ಜನರು ಲೌಕಿಕತೆಯಿಂದ ಅಲೌಕಿಕತೆಯ ಕಡೆಗೆ, ಆಚರಣೆಯಿಂದ ಆಧ್ಯಾತ್ಮಿಕದ ಕಡೆಗೆ ಹೊರಳಲಿ ಎಂದೇ ಆಗಿತ್ತು.
ದೀಪೋತ್ಸವಗಳು : ದೀಪ ಅಥವಾ ಲಕ್ಷ ದೀಪ ಎಂದು ಕರೆಯಲ್ಪಡುವ ಉತ್ಸವಗಳು ನಮ್ಮ ಹಿಂದಿನವರ ಸೌಂದರ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ. ರಾತ್ರಿ ಹೊತ್ತಲ್ಲಿ ಇಕ್ಕೆಲಗಳಲ್ಲಿ ದೀಪಗಳ ಸಾಲು, ಅದರ ಒಂದು ತುದಿಯಲ್ಲಿ ದೇವರನ್ನಿರಿಸಿ ಪೂಜೆ ಮಾಡುವುದು ಅವಿಸ್ಮರಣೀಯ ದೃಶ್ಯ.
ಕೆಲವು ದೇವಸ್ಥಾನಗಳಲ್ಲಿ ಕೆರೆ ದೀಪ ಎಂಬ ಉತ್ಸವ ನಡೆಯುತ್ತದೆ. ಇದಂತೂ ಬಹಳ ಸುಂದರವಾದ ಉತ್ಸವ. ಕೆರೆಯ ಸುತ್ತ ಸೋಪಾನಗಳಿರುತ್ತವೆ. ಎಲ್ಲ ಸೋಪಾನಗಳಲ್ಲಿ ಸಾಲಾಗಿ ದೀಪಗಳನ್ನು ಇರಿಸುತ್ತಾರೆ. ನಡುವೆ ದೇವರನ್ನಿಟ್ಟು ಪೂಜೆ ನಡೆಯುತ್ತದೆ.
ತೆಪ್ಪೋತ್ಸವ ಎನ್ನುವ ಒಂದು ವಿಶೇಷ ಆಚರಣೆ ಇನ್ನು ಕೆಲವು ಕಡೆ ಇರುತ್ತದೆ. ಎರಡು ದೋಣಿಗಳನ್ನು ಸೇರಿಸಿ ತೆಪ್ಪದಂತೆ ಮಾಡಿ ಅದರ ಮೇಲೆ ದೇವರ ಮೂರ್ತಿಯನ್ನಿರಿಸಿ ನೌಲಾ ವಿಹಾರ ಮಾಡುವುದು ತೆಪ್ಪೋತ್ಸವ . ಇಲ್ಲಿಯೂ ಕೆರೆಯ ಸುತ್ತ ದೀಪಗಳಿರುತ್ತವೆ.
ತೆಪ್ಪೋತ್ಸವದ ಬಗ್ಗೆ ಹೇಳುವಾಗ ಶಯನೋತ್ಸವ, ಪಲ್ಲಕ್ಕಿ ಉತ್ಸವ, ದೇವರನ್ನು ಹೊತ್ತುಕೊಂಡು ಕುಣಿಯುವುದು, ಅವಭೃಥ (ಸ್ನಾನ), ಅಯನ (ತಿರುಗಾಟ) ಮುಂತಾದ ಆಚರಣೆಗಳ ಬಗ್ಗೆ ಉಲ್ಲೇಖಿಸಬೇಕಾಗುತ್ತದೆ. ದೇವರನ್ನು ಪೂಜಿಸಲು ಜನರು ತಮಗೆ ಖುಶಿಕೊಡುವ ಸಂಗತಿಗಳನ್ನು ಮಾಡುವುದನ್ನು ಗಮನಿಸಬಹುದು. ತಿರುಗಾಡುವುದು, ಸ್ನಾನ ಮಾಡುವುದು, ಮಲಗುವುದು, ವಾಹನ ಸಂಚಾರ ಮಾಡುವುದು ಎಲ್ಲರಿಗೂ ಖುಶಿ ಕೊಡುವ ವಿಚಾರಗಳು. ನಮಗೆ ಖುಶಿ ಕೊಡುವ ಸಂಗತಿಗಳು ನಮ್ಮ ದೇವರಿಗೆ ಕೂಡ ಖುಶಿ ಕೊಡಬೇಕೆಂದೇ ಲೆಕ್ಕ.
ತಿರುಗಾಟ ಮತ್ತು ಸ್ನಾನ : ‘ಆಯನ’ ಎಂದು ತಪ್ಪಾಗಿ ಕರೆಯಲ್ಪಡುವ ಉತ್ಸವವೂ ‘ಆರಟ’ ಎಂದು ತಪ್ಪಾಗಿ ಕರೆಯಲ್ಪಡುವ ಉತ್ಸವವೂ ಹೆಚ್ಚು ಕಡಿಮೆ ಒಂದೇ ರೀತಿಯವು.
ಆಯನ ಅಂದರೆ ‘ಅಯನ’ ಅಥವಾ ಪ್ರಯಾಣ. (ಪ್ರಯಾಣದಲ್ಲಿಯೂ ಅಯನವಿದೆ. ರಾಮಾಯಣದಲ್ಲಿಯೂ ಅಯನವಿದೆ. ವ್ಯಾಕರಣ ನಿಯಮದ ಪ್ರಕಾರ ಪೂರ್ವ ಪದದಲ್ಲಿ ‘ರ’ ಬಂದರೆ ಅಯನ ಅಯಣವಾಗುತ್ತದೆ. ‘ಸೀತಾಯಣ’ ಎನ್ನುವುದು ತಪ್ಪು ಪ್ರಯೋಗ. ಅದು ‘ಸೀತಾಯನ’ವಾಗಬೇಕು. ಉತ್ತರಾಯಣ-ದಕ್ಷಿಣಾಯನ ಪ್ರಯೋಗಗಳನ್ನು ಗಮನಿಸಿ).
ಹೆಚ್ಚಿನ ದೇವಸ್ಥಾನಗಳಲ್ಲಿ ಅಯನೋತ್ಸವವಿದೆ. ಅವು ರಥೋತ್ಸವಗಳ ಜತೆಯಲ್ಲಿ, ಹಿಂದಿನ ಎರಡು ಮೂರು ದಿನಗಳಲ್ಲಿ ನಡೆಯುತ್ತವೆ. ಅಂಥ ಸಂದರ್ಭಗಳಲ್ಲಿ ಅಯನವನ್ನು ‘ಸವಾರಿ’ ಎಂದು ಕರೆಯುತ್ತಾರೆ. ಪಡುವಣ ಸವಾರಿ, ಮೂಡಣ ಸವಾರಿ, ಪೇಟೆ ಸವಾರಿ ಹೀಗೆ, ಒಂದೊಂದು ದಿನ ಒಂದೊಂದು ದಿಕ್ಕಿಗೆ ದೇವರ ಮೆರವಣಿಗೆ ಹೋಗುತ್ತದೆ. ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುವ ಸಂಪ್ರದಾಯ ಕೆಲವು ಕಡೆಯಾದರೆ ತಲೆಯ ಮೇಲೆ ಹೊತ್ತುಕೊಂಡು ಹೋಗುವ ಸಂಪ್ರದಾಯ ಇನ್ನು ಕೆಲವೆಡೆ ಇದೆ.
ಪ್ರತಿ ಮನೆಯ ಎದುರು ಕಟ್ಟೆಯಲ್ಲಿ ದೇವರನ್ನಿಟ್ಟು ಪೂಜೆ ಮಾಡಿ ಮುಂದುವರಿಯುತ್ತಾರೆ. ಹಾಗಾಗಿ ಇದಕ್ಕೆ ಕಟ್ಟೆಪೂಜೆ ಎಂಬ ಇನ್ನೊಂದು ಹೆಸರೂ ಬಂದಿದೆ.
ಸವಾರಿಯ ಜತೆಗೆ ಸೇರಿಕೊಂಡಿರುವಂಥದ್ದು ‘ಆರಟ’. ಇದು ‘ಅವಭೃಥ (ಅಂದರೆ ‘ಸ್ನಾನ’)ದ ಅಪಭ್ರಂಶ. ಜಳಕ ಎಂದು ಕೂಡ ಕೆಲವು ಕಡೆ ಕರೆಯುತ್ತಾರೆ. ಉತ್ಸವ ಮೂರ್ತಿಯನ್ನು ಸ್ನಾನ ಮಾಡಿಸುವುದು ಈ ಆಚರಣೆಯ ಪ್ರಧಾನ ಅಂಶ. ಉತ್ಸವ ಮೂರ್ತಿಯ ಸುತ್ತ ಅರ್ಧ ದೀರ್ಘವೃತ್ತಾಕಾರದ (1 ಆಕಾರದ) ಪ್ರಭಾವಳಿ ಸತ್ತಿಗೆ ಇರುತ್ತವೆ. (ಚಿತ್ರವನ್ನು ಗಮನಿಸಿ) ಇವುಗಳನ್ನೆಲ್ಲ ಬಿಚ್ಚಿಟ್ಟು ಮೂರ್ತಿಯನ್ನು ಹೊತ್ತುಕೊಂಡು ಮುಳುಗುತ್ತಾರೆ. ಭಕ್ತಾದಿಗಳು ಕೂಡ ಈ ಸಂದರ್ಭದಲ್ಲಿ ಕೆರೆಯನ್ನು ಮುಳುಗಿ ಪುನೀತರಾಗುತ್ತಾರೆ.
ಸಂಸ್ಕತಿ ಸಂಗಮ : ಜಾನಪದ ಸಂಸ್ಕøತಿಗಳಲ್ಲಿ ಆಸ್ಕತಿ ಇರುವವರು ಜಾತ್ರೆಗಳಲ್ಲಿ ವಿಶೇಷವಾಗಿ ಅರ್ಥವುಳ್ಳದ್ದೆಂದು ಕಾಣುವ ಕೆಲವು ನಡಾವಳಿಗಳನ್ನು ಗಮನಿಸಬಹುದು.
ಇವುಗಳಲ್ಲಿ ಮುಖ್ಯವಾಗಿ ಕಾಣುವಂಥದ್ದು ಎರಡು ಆಚರಣೆಗಳು. ಒಂದು, ದೇವಸ್ಥಾನಗಳ ಜಾತ್ರೆಗಳ ಸಂದರ್ಭದಲ್ಲಿ ದೇವರನ್ನು ಹೊತ್ತು ಕೊಂಡಿರುವವರ ಎದುರಿಗೆ ದೈವ-ಭೂತಗಳ ಪಾತ್ರಿಗಳ ನರ್ತನ. ದೈವದ ಭೇಟಿ ಎಂದು ಇದಕ್ಕೆ ಹೆಸರು. ಇದೊಂದು ಅದ್ಭುತವಾದ ದೃಶ್ಯ. ಎಲ್ಲರೂ ಈ ಸನ್ನಿವೇಶವನ್ನು ನೋಡಲು ಹಾತೊರೆಯುತ್ತಾರೆ. ಜಾತ್ರೆಯ ನಂತರ ದೈವಗಳ ನೇಮ ಪ್ರತ್ಯೇಕವಾಗಿ ಇರುತ್ತದೆ.
ಇನ್ನೊಂದು, ವರ್ಷಾವಧಿ ಜಾತ್ರೆಗಳ ಸಂದರ್ಭದಲ್ಲಿ ಸಿರಿ ಆವೇಶ ಮುಂತಾದ ಆವೇಶಗಳು.
ಈ ಎರಡೂ ಅಂಶಗಳಲ್ಲಿ ಎರಡು ಸಂಸ್ಕತಿಗಳ ಸಂಗಮವನ್ನು – ಅಥವಾ ಮುಖಾಮುಖಿಯನ್ನು ಕಾಣಬಹುದು. ದೈವ ಮತ್ತು ಭೂತಗಳ ಆರಾಧನೆಯು ಕರಾವಳಿಯ (ತುಳುನಾಡಿನ) ಪ್ರಾಚೀನ ಆರಾಧನೆಯಾಗಿದೆ. ವೈದಿಕ ಸಂಸ್ಕತಿಯ ದೇವತಾರಾಧನೆ ನಂತರ ಇಲ್ಲಿ ನೆಲೆಯೂರಿತು. ಈ ಎರಡೂ ಆರಾಧನಾ ಕ್ರಮಗಳು ಜತೆ ಜತೆಯಾಗಿ, ಒಂದಕ್ಕೊಂದು ವಿರೋಧವಿಲ್ಲದೆ ನಡೆದುಕೊಂಡು ಬಂದಿವೆ.
ಈ ಪ್ರಕ್ರಿಯೆಯಲ್ಲಿ ಆರಾಧ್ಯ ದೈವಗಳ ಶ್ರೇಣೀಕರಣ ಆಗಿರುವುದು ಗಮನಾರ್ಹ. ಈ ಶ್ರೇಣೀಕರಣ ಹೀಗಿದೆ: ಶಿವ, ಶಕ್ತಿ (ದುರ್ಗೆ), ಗಣಪತಿ, ವಿಷ್ಣು, ಕೃಷ್ಣ ಮುಂತಾದ ದೇವರುಗಳು ಉನ್ನತ ಶ್ರೇಣಿಯಲ್ಲಿ, ಪಂಜುರ್ಳಿ, ಜಾರಂದಾಯ, ಕೊಡಮಂತಾಯ ಮುಂತಾದ ದೈವಗಳು ನಂತರದ ಶ್ರೇಣಿಯಲ್ಲಿ ಹಾಗೂ ಭೂತಗಳು (ಮನುಷ್ಯರು ಸತ್ತು ದೈವತ್ವಕ್ಕೇರಿದಾಗ ‘ಭೂತಗಳು’ ಎನಿಸಿಕೊಳ್ಳುತ್ತಾರೆ) ಅವುಗಳ ಕೆಳಗಿನ ಸ್ಥಾನದಲ್ಲಿ ಪೂಜೆಗೊಳ್ಳುತ್ತವೆ.
ದೇವಸ್ಥಾನಗಳಿಗೆ ಹೊಂದಿಕೊಂಡು ದೈವಗಳಿದ್ದಾಗ ವರ್ಷಾವಧಿ ಜಾತ್ರೆಯಲ್ಲಿ ದೇವರು-ದೈವದ ಮುಖಾಮುಖಿ ಭೇಟಿಯನ್ನು ಆಚರಣೆಯ ಒಂದಂಶವಾಗಿ ಮಾಡಲಾಗಿದೆ.ಕಾರ್ಕಳ ತಾಲೂಕಿನ ಬೆಳ್ಮಣ್ಣಿನಲ್ಲಿ ಮಂಡಲ ಪೂಜೆ ಎನ್ನುವ ಉತ್ಸವ ನಡೆಯುತ್ತದೆ. 48 ದಿನಗಳಲ್ಲಿ (ಅಂದರೆ ಒಂದು ಮಂಡಲ) ಕಲಶವನ್ನು ಪೂಜಿಸಿ 48ನೆಯ ದಿನ ವಿಜೃಂಭಣೆಯ ಉತ್ಸವ ನಡೆಯುತ್ತದೆ. ಕಾಸರಗೋಡು ತಾಲೂಕಿನ ಕೋಳ್ಯೂರು ಎಂಬಲ್ಲಿಯೂ ಮಂಡಲ ಪೂಜೆ ಉತ್ಸವವಿದೆ. ಗಮನಕ್ಕೆ ಬಂದಿಲ್ಲ.
ಆದರೆ ದೈವಸ್ಥಾನಗಳಲ್ಲಿ ನಡೆಯುವ ಕೋಲಗಳು ಊರಿನ ಜಾತ್ರೆಯಾಗಿ ಮಾತ್ರವಲ್ಲ, ಪರವೂರಿನ ಭಕ್ತರನ್ನು ಕೂಡ ಆಕರ್ಷಿಸುವ ಉದಾರಣೆಗಳಿವೆ. ಶಿಬರೂರು, ಬೋಳ ಮುಂತಾದ ಊರುಗಳ ಕೋಲಗಳು ಬಹಳ ಪ್ರಸಿದ್ಧವಾಗಿವೆ.
ನಾಗಾರಾಧನೆ, ಕೋಲ : ಕರಾವಳಿ ಜಿಲ್ಲೆಗಳಿಗೆ ನಾಗಾರಾಧನೆಯು ವಿಶಿಷ್ಟವಾಗಿದೆ. ಪರಶುರಾಮನು ಕೊಡಲಿಯನ್ನೆಸೆದು ಸಮುದ್ರ ರಾಜನಿಂದ ಪಡೆದ ಭೂಭಾಗವಾದ ಈ ಕರಾವಳಿ ನಾಗಗಳಿಗೆ ಸೇರಿದ ಸ್ಥಳವೆಂದು ಹೇಳುತ್ತಾರೆ. ಅದರಿಂದಾಗಿಯೇ ಇಲ್ಲಿ ನಾಗಾರಾಧನೆಗೆ ಹೆಚ್ಚಿನ ಪ್ರಾಶಸ್ತ್ಯ.
ನಾಗಾರಾಧನೆಯ ಒಂದು ವಿಧವಾದ ಢಕ್ಕೆಬಲಿ ಕೂಡ ಪ್ರಧಾನ ಉತ್ಸವವಾಗಿರುವುದು ಉಡುಪಿ ತಾಲೂಕಿನ ಪಡುಬಿದ್ರಿಯಲ್ಲಿ ಕಾಣಬಹುದು. ನಾಗಮಂಡಲಗಳು ಈಗ ಅಲ್ಲಲ್ಲಿ ಭಾರೀ ವೈಭವದಿಂದ ನಡೆಯುತ್ತಿದ್ದು, ಊರ ಜಾತ್ರೆಗಳಂತೆ ಆಗಿವೆ. ಆದರೆ ನಾಗಮಂಡಲ ವರ್ಷಾವಧಿ ಜಾತ್ರೆಯಾಗಿರುವುದು ಈ ಲೇಖಕರ ಕೆಲವು ಊರುಗಳಲ್ಲಿ ಜಾತ್ರೆಯ ಜತೆಗೆ ‘ಚೆಂಡು’ (ಜಿooಣbಚಿಟಟ) ಎಂಬ ಕ್ರೀಡಾ ಕಾರ್ಯಕ್ರಮವಿರುತ್ತದೆ. ಕೆಲವು ಊರುಗಳಲ್ಲಿ ಒಂದು ದಿನದ ಚೆಂಡಾಟ ಇದ್ದರೆ ಬೆಳ್ಮಣ್ಣಿನಲ್ಲಿ ಮೂರು ದಿನಗಳ ಕಾಲ – ಎರಡು ಊರುಗಳ ನಡುವೆ ಫುಟ್ಬಾಲ್ ಸ್ಪರ್ಧೆ ನಡೆಯುತ್ತದೆ.
ಇನ್ನು ಕೆಲವು ಕಡೆ ಊರಿನ ಜಾತ್ರೆಯ ಜತೆಗೆ (ಜಾತ್ರೆಯ ನಂತರ) ಕೋಳಿ ಅಂಕ ನಡೆಯುವುದು ವಿಶೇಷವೆನಿಸುತ್ತದೆ.
ಹೆಚ್ಚುತ್ತಿರುವ ಶ್ರದ್ಧೆ : ಈಗಿನ ಕಾಲದಲ್ಲಿ ಜಾತ್ರೆಗಳಿಗೆ ಹೆಚ್ಚಿನ ಜನ ಬೆಂಬಲ, ದನ ಬೆಂಬಲ ಕಂಡುಬರುತ್ತಿರುವುದು ವಿಶೇಷ. ಪ್ರತಿ ಊರಿನ ಜನರು ತಮ್ಮ ಊರಿನ ಜಾತ್ರೆ ವಿಶೇಷ ವಿಜೃಂಭಣೆಯಿಂದ ನಡೆಯಬೇಕೆಂದು ಪ್ರಯತ್ನಿಸುತ್ತಾರೆ.
ನಮ್ಮ ಜಿಲ್ಲೆಗಳ ಜನರು ಪರವೂರಿಗೆ ಹೋದಾಗ ಅಲ್ಲಿಯೂ ದೇವಸ್ಥಾನಗಳನ್ನು ನಿರ್ಮಿಸಿ ಊರಿನಲ್ಲಿರುವಂತೆಯೇ ಉತ್ಸವಾದಿಗಳನ್ನು ಏರ್ಪಡಿಸುತ್ತಿರುವುದು ಗಮನಾರ್ಹ.
ಮುಂಬಯಿಯಲ್ಲಿ ನೆಲೆಸಿರುವ ಜಿಲ್ಲೆಯ ಉದ್ಯಮಿಗಳು ಊರಿನ ದೇವಸ್ಥಾನಗಳಿಗೆ ಧಾರಾಳವಾಗಿ ಧನ ಸಹಾಯ ಮಾಡುವುದು ಮಾತ್ರವಲ್ಲ, ಮುಂಬಯಿಯಲ್ಲಿಯೂ ಉತ್ಸವ, ಕೋಲಗಳನ್ನು ಏರ್ಪಡಿಸುತ್ತಿರುವುದನ್ನು ಉಲ್ಲೇಖಿಸಬಹುದು.
ಊರಿನ ಜಾತ್ರೆಗಳಿಗೆ ಇಷ್ಟು ಮಹತ್ವವಿರುವಾಗ ಇವುಗಳನ್ನು ಸಾಂಸ್ಕತಿಕ-ಸಾಮಾಜಿಕ ಉನ್ನತಿಗಾಗಿ ಬಳಸಿಕೊಳ್ಳಬಹುದು. ಉತ್ಸವಗಳನ್ನು ಕ್ರೈಸ್ತ ಮಿಶನರಿಗಳು ಬಳಸಿಕೊಂಡ ರೀತಿಯು ಈಗಿನವರಿಗೆ ಮಾರ್ಗದರ್ಶಿಯಾಗಬೇಕು. ಕ್ರೈಸ್ತ ಮಿಶನರಿಗಳು ಎಲ್ಲ ಊರುಗಳ ಜಾತ್ರೆಗಳಿಗೆ ಹೋಗಿ ಅಲ್ಲಿ ಭಾಷಣ ಮಾಡುವ ಮೂಲಕ ತಮ್ಮ ಧರ್ಮ ಪ್ರಚಾರ ಕಾರ್ಯ ಮಾಡುತ್ತಿದ್ದರು.
ಈಗ ಕೆಲವು ಊರುಗಳಲ್ಲಿ ಜಾತ್ರೆಗಳ ಸಂದರ್ಭದಲ್ಲಿ ಸಾಂಸ್ಕತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಇವುಗಳಲ್ಲಿ ಸ್ಥಳೀಯ ಹವ್ಯಾಸಿಗಳಿಂದ ನಾಟಕ, ಸಂಗೀತ ಕಚೇರಿಗಳು, ನೃತ್ಯ, ಯಕ್ಷಗಾನ ಮುಂತಾದವುಗಳು ಸೇರಿರುತ್ತವೆ. ಮನರಂಜನೆ ಎಂಬ ನೆಲೆಯಲ್ಲಿ ಮಾತ್ರ ಇವು ನಡೆಯುತ್ತವೆ ಹೊರತು ಹೆಚ್ಚಿನ ಉದ್ದೇಶವೇನೂ ಇದ್ದಂತಿಲ್ಲ.
ಜಾತ್ರೆಗಳ ಮಹತ್ವವನ್ನು ನಮ್ಮ ಜನ ತಮ್ಮ ಅರಿವಿಲ್ಲದೆಯೂ ತಿಳಿದುಕೊಂಡಿದ್ದಾರೆ. ಅವುಗಳನ್ನು ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಆಯಾಯ ಊರಿನ ಮುಂದಾಳುಗಳೇ ಚಿಂತಿಸಿದರೆ ಒಳ್ಳೆಯದು.