ಕೃತಿ ವಿಮರ್ಶೆ -ಡಾ. ಬಿ. ಜನಾರ್ದನ ಭಟ್

ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ್ದ ಉಪನ್ಯಾಸದ ಸಾರ ಇಲ್ಲಿದೆ.

ಪ್ರಸ್ತಾವನೆ
————-
ಕೃತಿ ವಿಮರ್ಶೆ ಎನ್ನುವುದು ಸಾಹಿತ್ಯ ವಿಮರ್ಶೆಯ ಮೂರನೆಯ ಆಯಾಮ. ವಿಮರ್ಶೆಯನ್ನು ಒಂದು ಮರದ ರೂಪಕದಲ್ಲಿ ಹೇಳುವುದಾದರೆ ಇದು ಆ ಮರದ ಕೊಂಬೆರೆಂಬೆ ಹೂವು ಹಣ್ಣುಗಳು.

 ಆ ಮರದ ಮೂಲ ಅಥವಾ ಬೇರು ಅಂದರೆ ಸಾಹಿತ್ಯ ಮೀಮಾಂಸೆ. ಸಾಹಿತ್ಯ ತತ್ವಗಳ ಚಿಂತನೆ. Theoretical Criticism.

ಈ ಮರದ ಕಾಂಡ ಅಥವಾ ಎರಡನೆಯ ಆಯಾಮ ಅಂದರೆ ವಿವಿಧ ಸಾಹಿತ್ಯಿಕ ಸಿದ್ಧಾಂತಗಳು ಹಾಗೂ ಪರಿಕಲ್ಪನೆಗಳು. Literary Concepts.
ಈ ಮರದ ಗೆಲ್ಲು, ಹೂವು, ಹಣ್ಣುಗಳು ಕೃತಿ ವಿಮರ್ಶೆಗಳು.
ಎರಡನೆಯದಾದ ಕಾಂಡ ಭಾಗದಲ್ಲಿ ನೋಡಿದ ವಿವಿಧ ಪರಿಕಲ್ಪನೆಗಳು ಹಾಗೂ ಸಿದ್ಧಾಂತಗಳ ಬೆಂಬಲದಿಂದ ಸಾಹಿತ್ಯ ಕೃತಿಗಳನ್ನು  ವಿಮರ್ಶಿಸುವುದು ಪ್ರಾಯೋಗಿಕ ವಿಮರ್ಶೆ. Practical Criticism.

ನಾವು ಎರಡನೆಯ ಆಯಾಮವಾದ ವಿಮರ್ಶೆಯ ಸಿದ್ಧಾಂತಗಳು ಹಾಗೂ ಪರಿಕಲ್ಪನೆಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸಿಕೊಂಡು ಕೃತಿ ವಿಮರ್ಶೆಯನ್ನು ಪ್ರಾಯೋಗಿಕವಾಗಿ ಮಾಡಬಹುದು.

       ಭಾಗ:ಒಂದು
      ———————–

      ಕೃತಿ ನಿಷ್ಠ ವಿಮರ್ಶೆ
        ———————-

ಇಂಗ್ಲೆಂಡಿನಲ್ಲಿ
ಸಾಹಿತ್ಯದ ಅಧ್ಯಯನ ವಿಶ್ವವಿದ್ಯಾಲಯದಲ್ಲಿ ೧೯ ನೆಯ ಶತಮಾನದಲ್ಲಿ ಪ್ರಾರಂಭವಾಯಿತು.

ರಿಲಿಜನ್‌ನ ಬೋಧನೆಗಳಿಲ್ಲದೆಯೂ ಸಮಾಜದಲ್ಲಿ ಶಾಂತಿ ಸೌಹಾರ್ದತೆಗಳನ್ನು ಬೆಳೆಸಲು ಸಾಹಿತ್ಯವು ಸಹಕಾರಿ ಎಂದು ಕಂಡುಕೊಂಡ ಕಾರಣ ಇದರ ಶಿಕ್ಷಣಕ್ಕೆ ಮತ್ತು ಪ್ರಚಾರಕ್ಕೆ ಸರಕಾರ ಬೆಂಬಲ ನೀಡಿತು.
ಬಡಜನರು ಚರ್ಚಿಗೆ ಹೋಗುತ್ತಿರಲಿಲ್ಲ. ದೇಶದ ಆಗುಹೋಗುಗಳಲ್ಲಿ ತಮಗೂ ಒಂದು ಪಾಲಿದೆ ಎನ್ನುವ ಹೆಮ್ಮೆಯನ್ನು ಅವರಲ್ಲಿ ಹುಟ್ಟಿಸಲು ಸಾಹಿತ್ಯಕ್ಕೆ ಸಾಧ್ಯವಿದೆ ಎಂದು ಜವಾಬ್ದಾರಿಯ ಸ್ಥಾನದಲ್ಲಿದ್ದವರು ಚಿಂತಿಸಿದರು.
ಜನರಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ರಾಷ್ಟ್ರಭಕ್ತಿಯನ್ನು ಬೆಳೆಸುವ ಉದ್ದೇಶದಿಂದ ಅದರ ಅಧ್ಯಯನ ಮತ್ತು ಪ್ರಚಾರಕ್ಕೆ ಪ್ರೋತ್ಸಾಹ ಕೊಡಲಾಯಿತು.

ಸಾಹಿತ್ಯ ಪ್ರತಿಪಾದಿಸಬೇಕಾದ ಉದಾರ ಮಾನವತಾವಾದಿ ಮೌಲ್ಯಗಳು
—————-
ಆಗಿನ ಚಿಂತನೆಯ ಪ್ರಕಾರ ಸಾಹಿತ್ಯವು ಪ್ರತಿಪಾದಿಸಬೇಕಾದ ಮೌಲ್ಯಗಳನ್ನು ಈಗ ಉದಾರ ಮಾನವತಾವಾದ (ಲಿಬರಲ್ ಹ್ಯೂಮನಿಸಮ್) ಎಂದು ಕರೆಯಲಾಗುತ್ತದೆ.

ಅವುಗಳು ಹೀಗಿವೆ: ೧. ಸರ್ವ ಸಮಾನತೆಯ ಮೌಲ್ಯವನ್ನು ಉತ್ತಮ ಸಾಹಿತ್ಯ ತೋರಿಸಿಕೊಡುತ್ತದೆ. ಬಡವ ಬಲ್ಲಿದ, ಮೇಲ್ವರ್ಗ ಕೆಳವರ್ಗ, ಗಂಡು ಹೆಣ್ಣು ಎಲ್ಲರ ಆತ್ಮವೂ ದೇವರ ದೃಷ್ಟಿಯಲ್ಲಿ ಸಮಾನ. ಸಮಾಜದಲ್ಲಿ ಈ ನಂಬಿಕೆಯನ್ನು ಸಾಕಾರಗೊಳಿಸುವ  ನಿಟ್ಟಿನಲ್ಲಿ ಸಾಹಿತ್ಯ ಪ್ರಯತ್ನಿಸಬೇಕು. ಅಂದರೆ ಸಾಹಿತ್ಯ ಕೃತಿಗಳು ಆ ಮೌಲ್ಯಗಳನ್ನು ಪ್ರತಿಪಾದಿಸಬೇಕು.
೨. ಪ್ರಜಾಪ್ರಭುತ್ವದ ಮೌಲ್ಯ, ೩. ಸಾತ್ವಿಕತೆಯ ವಿಜಯ – ದುಷ್ಟರ ದಮನ, ೪. ಶಿಕ್ಷಣ ಮತ್ತು ಜ್ಞಾನ ವಿಜ್ಞಾನಗಳ ಮೂಲಕ ಅಭಿವೃದ್ಧಿ ಸಾಧಿಸುವ ಮುಕ್ತ ಅವಕಾಶ ಎಲ್ಲರಿಗೂ ಲಭ್ಯ ಎಂಬ ಆಶಾವಾದ – ಇತ್ಯಾದಿಗಳನ್ನು ಸಾಹಿತ್ಯ ಕೃತಿಗಳು ಪ್ರತಿಪಾದಿಸಬೇಕು.

  ಕೃತಿ ವಿಮರ್ಶೆ ಈ ಮೌಲ್ಯಗಳನ್ನು ಜನರಿಗೆ ಬಿಡಿಸಿ ತೋರಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕು. ಸಾಹಿತ್ಯದ ಅಧ್ಯಯನ ಅಂದರೆ ಒಂದು ರೀತಿಯಲ್ಲಿ ಸಾಹಿತ್ಯ ಕೃತಿಗಳನ್ನು ವಿಮರ್ಶೆ ಮಾಡುವುದೇ ಆಗಿರುತ್ತದೆ. ಸಾರ್ವಜನಿಕರಿಗೆ ಕೃತಿಗಳ ಮೌಲ್ಯವನ್ನು ತೋರಿಸಿಕೊಡುವ ಕೆಲಸವನ್ನು ವಿಮರ್ಶಕ ಮಾಡಬೇಕು. ಅಂದರೆ ಕೃತಿಗಳ ವಿಶ್ಲೇಷಣೆಯ ಮೂಲಕ ಅದರಲ್ಲಿ ಅಂತರ್ಗತವಾಗಿರುವ ಮೌಲ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆಂದು ಜನರಿಗೆ ತಿಳಿಸಬೇಕು. (ಸಾಹಿತ್ಯದ ಅಧ್ಯಾಪಕ ತರಗತಿಯಲ್ಲಿ ಇದನ್ನೆ ವಿದ್ಯಾರ್ಥಿಗಳಿಗೆ ಕಲಿಸುತ್ತಾನೆ).

    ಹೀಗೆ    ಜನಶಿಕ್ಷಣಕ್ಕೆ ಸಾಹಿತ್ಯವು ಪೂರಕ ಎಂದು ಉದಾರ ಮಾನವತಾವಾದ ತಿಳಿಯುತ್ತದೆ.

   ಒಳ್ಳೆಯ ಸಾಹಿತ್ಯ ಕೃತಿಗಳು ಕಾಲಾತೀತ ಮೌಲ್ಯಗಳನ್ನು ಹೊಂದಿರುತ್ತವೆ. ಅದನ್ನು ಗ್ರಹಿಸುವುದೇ ಕೃತಿ ವಿಮರ್ಶೆ ಎನ್ನುವುದು ಉದಾರ ಮಾನವತಾವಾದದ ನಿಲುವು.

ರೂಪನಿಷ್ಠ ವಿಮರ್ಶೆ
(ಫಾರ್ಮಲಿಸ್ಟಿಕ್ ಕ್ರಿಟಿಸಿಸಮ್.
——————
(Form ಅಂದರೆ ಸಾಹಿತ್ಯ ಕೃತಿಯ ರೂಪ. ಸಾಹಿತ್ಯ ಕೃತಿಯೇ ಮುಖ್ಯ ಎನ್ನುವುದೇ ಫಾರ್ಮಲಿಸ್ಟಿಕ್ ವಿಮರ್ಶೆ)
    ೧೯೩೦ ರಿಂದ ೧೯೬೦ ರವರೆಗೆ ಇದರ ಪರಿಷ್ಕರಣೆಯಾಗಿ ಕೃತಿ ಪರೀಕ್ಷೆಯನ್ನು ಶಿಸ್ತುಬದ್ಧವಾಗಿ ಮಾಡಲು ಕೆಲವು ಚಿಂತಕರು ‘ಕೃತಿನಿಷ್ಠ’ ವಿಮರ್ಶೆಯ ಪದ್ಧತಿಗಳನ್ನು ಪ್ರಚುರಪಡಿಸಿದರು.

    ಅವುಗಳಲ್ಲಿ ರೂಪನಿಷ್ಠ (Formalist criticism) ವಿಮರ್ಶೆ ಮೊದಲನೆಯದು. (ಇದರಲ್ಲಿ ಇಂಗ್ಲೆಂಡ್, ಅಮೇರಿಕಾ ಮತ್ತು ರಷ್ಯದ ಮಾದರಿಗಳು ಇವೆ).

     ಇಂಗ್ಲೆಂಡ್ ನಲ್ಲಿ ಐ. ಎ. ರಿಚರ್ಡ್ಸ್, ಎಫ್. ಆರ್. ಲೀವಿಸ್, ಟಿ.ಎಸ್. ಎಲಿಯಟ್ ಮುಂತಾದವರು ಇದನ್ನು ಬೆಳೆಸಿ ಕೃತಿ ವಿಮರ್ಶೆಗೆ ಕೆಲವು ಉಪಕರಣಗಳನ್ನು ಕೊಟ್ಟು ವಿಧಾನಗಳನ್ನು ರೂಪಿಸಿದರು. ರಿಚಾರ್ಡ್ಸ್ ‘ಪ್ರಾಕ್ಟಿಕಲ್ ಕ್ರಿಟಿಸಿಸಮ್’ (ಪ್ರಾಯೋಗಿಕ ವಿಮರ್ಶೆ) ಎನ್ನುವ ಕೃತಿಯ ಮೂಲಕ ವಿಮರ್ಶೆ ಮಾಡುವ ರೀತಿಯನ್ನು ತೋರಿಸಿಕೊಟ್ಟ.

   ಸಾಹಿತ್ಯ ಕೃತಿ ಎನ್ನುವುದು ಸ್ವಯಂಪೂರ್ಣ ಮತ್ತು ಸ್ವಾಯತ್ತ ಘಟಕ, ಅದರಾಚೆಗಿನ ಯಾವುದನ್ನೂ ಪರಿಗಣಿಸಬಾರದು ಎನ್ನುವುದು ರೂಪನಿಷ್ಠ ವಿಮರ್ಶಕರ ನಿಲುವು.

  ಅಮೇರಿಕದಲ್ಲಿ ಈ ವಿಧಾನವನ್ನು ‘ನ್ಯೂ ಕ್ರಿಟಿಸಿಸಮ್’ ಎಂದು ಕರೆಯುತ್ತಾರೆ. ಕ್ಲಿಯಾಂತ್ ಬ್ರೂಕ್ಸ್, ಜಾನ್ಸನ್ ಕ್ರೋವ್ ರಾನ್ಸಮ್, ವಿಮ್‌ಸ್ಯಾಟ್ ಮುಂತಾದವರು ಪಠ್ಯಗಳನ್ನು ಬಗೆಯುವ ವಿಧಾನಗಳನ್ನು ರೂಪಿಸಿದರು. ಕ್ಲಿಯಾಂತ್ ಬ್ರೂಕ್ಸ್ ಮತ್ತು ವಿಮ್‌ಸ್ಯಾಟ್‌ರ ‘ಅಂಡರ್‌ಸ್ಟ್ಯಾಂಡಿಂಗ್ ಪೋಯೆಟ್ರಿ’ ಮತ್ತು ‘ಅಂಡರ್ ಸ್ಟ್ಯಾಂಡಿಂಗ್ ಫಿಕ್ಷನ್’ ಗ್ರಂಥಗಳು ಕೃತಿನಿಷ್ಠ ವಿಮರ್ಶೆಯನ್ನು ಕಲಿಸುವ ಪುಸ್ತಕಗಳು.  ರಷ್ಯದಲ್ಲಿಯೂ ಈ ವಿಧಾನದ ಬೆಳವಣಿಗೆಗೆ ವ್ಲಾಡಿಮೀರ್ ಪ್ರಾಪ್ ಮುಂತಾದವರು ತಮ್ಮ ಕೊಡುಗೆಯನ್ನು ನೀಡಿದರು.

 ಕನ್ನಡದಲ್ಲಿ ನವ್ಯ ಸಾಹಿತ್ಯದ ಸಂದರ್ಭದಲ್ಲಿ ಈ ರೂಪನಿಷ್ಠ ವಿಮರ್ಶೆ ‘ನವ್ಯ ವಿಮರ್ಶೆ’ ಎಂಬ ಹೆಸರಿನಲ್ಲಿ ಚಾಲ್ತಿಗೆ ಬಂತು.

ರಾಚನಿಕ ವಿಮರ್ಶೆ (Structuralist criticism):
———————–
ಸ್ಟ್ರಕ್ಚರಲಿಸ್ಟ್ ಕ್ರಿಟಿಸಿಸಮ್.
ಫ್ರೆಂಚ್ ಭಾಷಾ ವಿಜ್ಞಾನಿ ಫರ್ಡಿನಾಂಡ್ ಸಸ್ಯೂರ್ ಮುಂತಾದ ಭಾಷಾ ವಿಜ್ಞಾನಿಗಳ ಪರಿಕಲ್ಪನೆಗಳಾದ ಡೀಪ್ ಸ್ಟ್ರಕ್ಚರ್ ಮತ್ತು ಸರ್ಫೇಸ್ ಸ್ಟ್ರಕ್ಚರ್ (ಭಾಷೆಯಲ್ಲಿ / ಸಮಾಜದಲ್ಲಿ ಆಳ ರಚನೆಗಳು ಇರುತ್ತವೆ. ಅವು ಅಭಿವ್ಯಕ್ತವಾಗುವಾಗ ಮೇಲೆ ಕಾಣುವುದು ಸರ್ಫೇಸ್ ಸ್ಟ್ರಕ್ಚರ್‌ಗಳು) ಎಂಬ ಪರಿಕಲ್ಪನೆಗಳ ಆಧಾರದಲ್ಲಿ ಕೃತಿಗಳ ಆಳದಲ್ಲಿರುವ ಸ್ಟ್ರಕ್ಚರ್ ಅಥವಾ ವಿನ್ಯಾಸಗಳನ್ನು ಗುರುತಿಸುವುದು ಇದರ ರೀತಿ. ನಾಯಕ ಮತ್ತಿತರ ಪಾತ್ರಗಳನ್ನು ಕೂಡ ವಿಧಗಳಾಗಿ ನೋಡಿ, ಅವರ ನಿಯೋಗಗಳನ್ನು (ಫಂಕ್ಷನ್) ಕೂಡ ಆಳದ – ಎಲ್ಲ ಕೃತಿಗಳಲ್ಲೂ ಮರುಕಳಿಸುವ ಮಾದರಿಗಳಾಗಿ ಗ್ರಹಿಸುವುದು ಈ ವಿಮರ್ಶೆಯ ಪದ್ಧತಿ. ರೂಪನಿಷ್ಠ ವಿಮರ್ಶೆ ಯ ಪಂಥಕ್ಕೆ ಸೇರಿದ್ದ ವ್ಲಾಡಿಮೀರ್ ಪ್ರಾಪ್ ಇದನ್ನು ಬೆಳೆಸಿದ ಒಬ್ಬ ಪ್ರಮುಖ.

ಪ್ರಕಾರ ವಿಮರ್ಶೆ: genre criticism.
————-
ಇದು ಕೂಡ ‌ಕೃತಿ ನಿಷ್ಠ ಪದ್ಧತಿಗಳಲ್ಲಿ ಒಂದು. ಮಹಾಕಾವ್ಯ, ನಾಟಕ ಇತ್ಯಾದಿ ಸಾಹಿತ್ಯ ಪ್ರಕಾರಗಳ ಪೂರ್ವನಿಶ್ಚಿತ ಮಾದರಿಗಳ ತಿಳಿವಳಿಕೆಯ ಆಧಾರದಲ್ಲಿ ಕೃತಿಗಳನ್ನು ಅಭ್ಯಸಿಸುವುದು‌ ಇದರ ಒಂದು ಕ್ರಮ. ಉದಾಹರಣೆಗೆ ಭಾರತದ ನಾಟಕಗಳಲ್ಲಿ ನಾಯಕ ಪ್ರಭೇದಗಳ ಆಧಾರದಲ್ಲಿ ಪಾತ್ರ ವಿಶ್ಲೇಷಣೆ ಮಾಡುವುದು.
ಇದರ ಕೆಲವು ಅಂಶಗಳು ರಾಚನಿಕ ವಿಮರ್ಶೆಯಲ್ಲಿ ಕಾಣಿಸುತ್ತದೆ.

ಮನೋವೈಜ್ಞಾನಿಕ ವಿಮರ್ಶೆ:
—————–
ಇದು ಕೂಡ ಕೃತಿ ನಿಷ್ಠ ಪದ್ಧತಿಗೆ ತನ್ನ ಕೊಡುಗೆಯನ್ನು ನೀಡಿದೆ‌. ಕೃತಿಕಾರನ ಮನೋಭೂಮಿಕೆ, ಪಾತ್ರಗಳ ವರ್ತನೆ, ಮನಸ್ಸು ಇತ್ಯಾದಿಗಳನ್ನು ಅರ್ಥೈಸಲು ಉಪಯೋಗವಾಗುತ್ತದೆ.

        ಭಾಗ: ಎರಡು

ಸಮಾಜನಿಷ್ಠ ವಿಮರ್ಶೆ:
——————–

ವಿವಿಧ ಆರ್ಥಿಕ, ಸಾಮಾಜಿಕ, ಭಾಷಾ ವೈಜ್ಞಾನಿಕ ಮತ್ತು ರಾಜಕೀಯ ಸಿದ್ಧಾಂತಗಳನ್ನು ಸಾಹಿತ್ಯ ಕೃತಿಗಳ ಅಧ್ಯಯನಕ್ಕೆ ಬಳಸಿದಾಗ ಸಮಾಜ ನಿಷ್ಠ ವಿಮರ್ಶೆಯ ಪಂಥಗಳು ಹುಟ್ಟಿಕೊಂಡವು.

ಸಾಹಿತ್ಯ ಕೃತಿಗಳು ಸಮಾಜದ ಚಿಂತನೆಯನ್ನು ರೂಪಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ. ಅವುಗಳ ಸಮಾಜದ ಯಜಮಾನಿಕೆ ಹೊಂದಿದ ಸಮುದಾಯಗಳ ಚಿಂತನೆಗಳನ್ನು ಗಟ್ಟಿಗೊಳಿಸುವ ಐಡಿಯಾಲಜಿಯ ವಾಹಕಗಳು. ಹಾಗಾಗಿ ಒಂದು ಕೃತಿಯ ಒಳಗೆ ಅಡಗಿರುವ ಇಂತಹ ಐಡಿಯಾಲಜಿಗಳು ಯಾವುವು, ಅವುಗಳ ಹುನ್ನಾರ ಯಾವುದು, ಸಮಾಜದಲ್ಲಿ ಅದರ ಪ್ರಸರಣದಿಂದ ಆಗುವ ಪರಿಣಾಮಗಳು ಯಾವುವು – ಇಂತಹ ವಿಚಾರಗಳನ್ನು ವಿಶ್ಲೇಷಿಸುವುದು ಕೃತಿ ವಿಮರ್ಶೆಯ ಕೆಲಸ ಎಂದು ಈ ಪಂಥಗಳು ತಿಳಿದವು.

   ಇವರ ಪ್ರಕಾರ ವಿಮರ್ಶೆಯ ಕೆಲಸ ಕೃತಿಗಳಲ್ಲಿ ಕಾಲಾತೀತ ಮೌಲ್ಯಗಳು ಇರುವುದಿಲ್ಲ. (ಉದಾರ ಮಾನವತಾವಾದದ ಪ್ರಕಾರ ಕೃತಿಗಳಿಗೆ ಕಾಲಾತೀತ ಮೌಲ್ಯಗಳು ಇವೆ. ಅವನ್ನು ತಿಳಿದು ಹೇಳುವುದೇ ವಿಮರ್ಶಕನ ಕೆಲಸ). ವಿಮರ್ಶಕನು ಕೃತಿಯೊಂದರಲ್ಲಿ ಅಂತರ್ಗತವಾಗಿರುವ ನಿರ್ದಿಷ್ಟ ಸಮಾಜದ ಐಡಿಯಾಲಜಿಗಳನ್ನು ತನಿಖೆ ಮಾಡಿ ತಿಳಿಸಬೇಕು.

ಈ ಐಡಿಯಾಲಜಿಗಳು ಪುರುಷ ಕೇಂದ್ರಿತವೋ, ಆಳುವವರ್ಗದ ಹಿತಾಸಕ್ತಿಯನ್ನು ಕಾಯುವಂಥದೋ ಆಗಿದ್ದರೆ ತೆರೆದಿಡಬೇಕು. ಅಥವಾ ಕೃತಿ ಜನಪರವಾಗಿ, ಸಮುದಾಯಪರವಾಗಿ ಇದ್ದರೆ ಅದನ್ನೂ ತೋರಿಸಿಕೊಡಬೇಕು.

ಈ ರೀತಿ ಸಮಾಜನಿಷ್ಟ ವಿಮರ್ಶೆಯ ಪದ್ಧತಿಗಳು ಎಂದರೆ (ಮುಖ್ಯವಾಗಿ)-

ಮಾರ್ಕ್ಸ್ವಾದಿ ವಿಮರ್ಶೆ
ಸ್ತ್ರೀ ನಿಷ್ಠ ವಿಮರ್ಶೆ
ಚಾರಿತ್ರಿಕ ವಿಮರ್ಶೆ
ನವಚಾರಿತ್ರಿಕ ವಿಮರ್ಶೆ
ವಸಾಹತೋತ್ತರ ವಿಮರ್ಶೆ….. ಇತ್ಯಾದಿ.

ಭಾಗ: ಮೂರು
ಪ್ರಾಯೋಗಿಕ ವಿಮರ್ಶೆ
———————

ಪಾರಿಭಾಷಿಕ ಪದಗಳು: ವಿಮರ್ಶೆ ಮಾಡಲು ಕೆಲವು ಪಾರಿಭಾಷಿಕ ಪದಗಳು ಮುಖ್ಯವಾಗಿವೆ. ಅವು:
ಅ) ಕತೆ – ಕಾದಂಬರಿಗಳಿಗೆ: ಕಥಾ ಸಂವಿಧಾನ (plot), ಶಿಲ್ಪ ಅಥವಾ ಸಂರಚನೆ (structure), ಕಥಾವಸ್ತು (theme), ಆಶಯ (motif), ಪಾತ್ರ ಚಿತ್ರಣ – ಇವು ಮುಖ್ಯವಾಗಿವೆ.

ಕಾವ್ಯ/ ಕವಿತೆಗಳಿಗೆ: ಕಾವ್ಯ ಭಾಷೆಯ ಅರಿವು. ಕಾವ್ಯ ಭಾಷೆ ಅಂದರೆ – ಸಂಕೇತ, ಅಲಂಕಾರಗಳು (ಉಪಮೆ, ರೂಪಕ ಮತ್ತು ವ್ಯಕ್ತೀಕರಣ ಇತ್ಯಾದಿ) ಮತ್ತು ಪ್ರತಿಮೆ.
ಕವಿತೆಯ ವಸ್ತು ಮತ್ತು ಅದರ ಬೆಳವಣಿಗೆ (ಗದ್ಯದಲ್ಲಿ ಕಥಾಸಂವಿಧಾನ ಮತ್ತು ಶಿಲ್ಪ ಇದ್ದಹಾಗೆ ಕವಿತೆಗೆ ವಸ್ತು ಮತ್ತು ಅದರ ಬೆಳವಣಿಗೆ).

ನಾಟಕ: ಪ್ರಕಾರ ವಿಮರ್ಶೆಯ ಪದಗಳು: ಉದಾಹರಣೆಗೆ – ಅಸಂಗತ ನಾಟಕ.
೨. ಅಂಕ, ದೃಶ್ಯ, ನಿಷ್ಕ್ರಮಣ, ಆಕಾಶಭಾಷಿತ, ಸ್ವಗತ, ಕ್ಲೈಮ್ಯಾಕ್ಸ್ ಇತ್ಯಾದಿ ತಾಂತ್ರಿಕ ಪದಗಳು.
೩. ಪಾತ್ರ ಚಿತ್ರಣ (ಪ್ರಕಾರ ವಿಮರ್ಶೆಯಲ್ಲಿಯೆ ಇದನ್ನೂ ಮಾಡಬಹುದು. ಉದಾಹರಣೆಗೆ, ಚಾರುದತ್ತ ಹೇಗೆ ಧೀರೋದಾತ್ತ ನಾಯಕ ಎಂದು ಚರ್ಚಿಸುವ ಮೂಲಕ).

ನಿರೂಪಣೆಯ ತಂತ್ರಗಳು: ಸರ್ವಸಾಕ್ಷಿ ಪ್ರಜ್ಞೆ, ಹಿನ್ನೋಟ (ಫ್ಲ್ಯಾಶ್‌‌‌ ಬ್ಯಾಕ್), ಪ್ರಜ್ಞಾಪ್ರವಾಹ, ನಾಟಕೀಯ ಭಾಷಣ (ಸ್ವಗತ ಭಾಷಣ), ಪ್ರಥಮ ಪುರುಷ ಅಥವಾ ಸೆಕೆಂಡ್ ಪರ್ಸನ್‌ ಅನ್ನು ಸಂಬೋಧಿಸಿದ ನಿರೂಪಣೆ ಇತ್ಯಾದಿ.

    ಇವುಗಳು ಕೃತಿ ವಿಮರ್ಶೆಗೆ ಉಪಯುಕ್ತವಾದ ಕೆಲವು ಪಾರಿಭಾಷಿಕ ಪದಗಳು.
***
    ಕೃತಿ ವಿಮರ್ಶೆಯನ್ನು –  ೧)ಕಾರಂತರ ‘ಅಳಿದ ಮೇಲೆ’ ಕಾದಂಬರಿಯ ರಾಚನಿಕ ವಿಶ್ಲೇಷಣೆ ೨) ‘ಮೃಚ್ಛಕಟಿಕ’ ನಾಟಕದ ಪ್ರಕಾರ ವಿಮರ್ಶೆ, (ಚಾರಿತ್ರಿಕ ಮತ್ತು ಸ್ತ್ರೀನಿಷ್ಠ ವಿಮರ್ಶೆಯ ಸಾಧ್ಯತೆಗಳ ಸೂಚನೆಯೊಂದಿಗೆ) ಮತ್ತು ೩) ಎ.ಕೆ.ರಾಮಾನುಜನ್ ಅವರ ‘ಮತ್ತು ಇತರ ಪದ್ಯಗಳು’ ಕವನ ಸಂಕಲನವನ್ನು ಹೇಗೆ ವಿಮರ್ಶಿಸಬಹುದು ಎನ್ನುವ ಸೂಚನೆಗಳ ಮೂಲಕ ಪರಿಚಯಿಸಿದೆ.



      




 




 


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter