ಶಿಲ್ಪಕಲೆಗೆ ಪ್ರಸಿದ್ಧವಾದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಯ ಭೋಗನಂದೀಶ್ವರ ದೇವಾಲಯವನ್ನು ಬಾಣರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರು ಕಾಲಕಾಲದಲ್ಲಿ ಅಭಿವೃದ್ಧಿಪಡಿಸಿದ್ದಾರೆ. ಕನ್ನಡ ನಾಡನ್ನು ಆಳಿದ ವಿವಿಧ ರಾಜಮನೆತನದವರು ತಮ್ಮ ಕಾಲದಲ್ಲಿ ದೇವಾಲಯವನ್ನು ಸ್ವಲ್ಪ ಸ್ವಲ್ಪ ಕಟ್ಟಿದ್ದರಿಂದ ವಿವಿಧ ಶೈಲಿಯ ಶಿಲ್ಪಗಳು ಇಲ್ಲಿ ಮೈದಾಳಿವೆ. ಇವರೊಂದಿಗೆ ಬೆಂಗಳೂರಿನ ನಿರ್ಮಾತೃಗಳಾದ ಯಲಹಂಕ ನಾಡಪ್ರಭುಗಳು ಸಹ ತಮ್ಮ ಕೊಡುಗೆಯನ್ನು ನೀಡಿದ್ದಾರೆ.
ಭೋಗನಂದೀಶ್ವರ ದೇವಾಲಯದ ಪ್ರಾಕಾರದ ಹಿಂಬದಿಯಲ್ಲಿರುವ ಅಪೀತ ಕುಚಾಂಭ ದೇವಾಲಯದ ಗೋಡೆಯ ಮೇಲೆ ಈಶ್ವರನ ಮದುವೆಯ ಫೋಟೋ ಆಲ್ಬಂ ರೀತಿ ಕಾಣುವಂತೆ ಮೂರು ಗೋಡೆಗಳ ಮೇಲೆ ಗಿರಿಜಾ ಕಲ್ಯಾಣವನ್ನು ಮನೋಜ್ಞವಾಗಿ ಕೆತ್ತಲಾಗಿದೆ.
”ಯಲಹಂಕ ನಾಡಪ್ರಭುಗಳ ದೇವಾಲಯಗಳ ಬಹುಮುಖ್ಯ ಕಲಾ ಕೊಡುಗೆಯೆಂದರೆ ಹೊರಭಿತ್ತಿಗಳಲ್ಲಿ ಸಾಲಾಗಿ ಕಥನ ರೂಪದಲ್ಲಿ ಪುರಾಣ ಕಥೆಗಳಾದ ಗಿರಿಜಾ ಕಲ್ಯಾಣ ಕಥೆಯನ್ನು ಸಾಲು ಶಿಲ್ಪಗಳ ಮೂಲಕ ನಿರೂಪಿಸುವ ಸಂಪ್ರದಾಯ ಕಾಣುತ್ತೇವೆ. ಬೆಂಗಳೂರಿನ ಹಲಸೂರು ಸೋಮೇಶ್ವರ ದೇವಾಲಯದ ಆವರಣದಲ್ಲಿಯ ಕಾಮಾಕ್ಷಿ ಅಮ್ಮನ ದೇವಾಲಯ, ಕೋಟೆ ವೆಂಕಟರಮಣ ದೇವಾಲಯ, ಶಿವಗಂಗೆಯ ದೇವಾಲಯದ ಮುಖಮಂಟಪದ ಗೋಡೆಯ ಮೇಲೆ ಮತ್ತು ನಂದಿಯ ಭೋಗನಂದೀಶ್ವರ ದೇವಾಲಯದಲ್ಲಿರುವ ಅಮ್ಮನವರ ಗುಡಿಯ ಹೊರಭಿತ್ತಿಯಲ್ಲಿ ಒಂದೇ ರೀತಿಯಲ್ಲಿ ಗಿರಿಜಾ ಕಲ್ಯಾಣದ ಕಥನ ಶಿಲ್ಪಗಳ ಸಾಲುಗಳನ್ನು ಕಾಣುತ್ತೇವೆ. ಈ ಗಿರಿಜಾ ಕಲ್ಯಾಣದ ಶಿಲ್ಪಗಳು ವಿಜಯನಗರದ ದೇವಾಲಯಗಳಲ್ಲಿ ಕಾಣುವುದಿಲ್ಲ. ಆದರೆ ವಿಶೇಷವಾಗಿ ನಾಡಪ್ರಭುಗಳ ದೇವಾಲಯಗಳಲ್ಲಿ ಕಂಡುಬರುತ್ತವೆ. ಕನ್ನಡದ ಪ್ರಾಚೀನ ಕವಿ ಹರಿಹರನ ಕಾವ್ಯವಾದ ಗಿರಿಜಾ ಕಲ್ಯಾಣವನ್ನು ಆಧರಿಸಿ ಈ ಕಥನ ಶಿಲ್ಪಗಳನ್ನು ರಚಿಸಲಾಗಿದೆ” ಎನ್ನುತ್ತಾರೆ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತು (ಐ.ಸಿ.ಎಚ್.ಆರ್) ಉಪನಿರ್ದೇಶಕ ಎಸ್.ಕೆ.ಅರುಣಿ.
ವಿಷ್ಣು ಮತ್ತು ಬ್ರಹ್ಮರ ಜೊತೆ ಕುಳಿತಿರುವ ಶಿವನನ್ನು ಮದುವೆಗೆ ಋಷಿ ಮುನಿಗಳು ಆಹ್ವಾನಿಸುತ್ತಿರುವ ದೃಶ್ಯ ಒಂದೆಡೆ ಇದ್ದರೆ, ಗರುಡನ ಮೇಲೆ ಕುಳಿತ ವಿಷ್ಣು, ನಂದಿಯ ಮೇಲೆ ಕುಳಿತ ಶಿವ, ಹಂಸದ ಮೇಲೆ ಕುಳಿತ ಬ್ರಹ್ಮ, ತಮ್ಮ ವಾಹನಗಳ ಮೇಲೆ ಕುಳಿತು ಮದುವೆಗೆ ದಿಬ್ಬಣದ ರೀತಿ ಹೋಗುತ್ತಿರುವ ದೃಶ್ಯ ಮತ್ತೊಂದೆಡೆ ಕಣ್ಣಿಗೆ ಕಟ್ಟುವಂತೆ ಕೆತ್ತಲಾಗಿದೆ. ಮದುವೆಯ ದೃಶ್ಯದಲ್ಲಂತೂ ಶಿಲ್ಪಿ ತನ್ನ ಚಾತುರ್ಯವನ್ನೇ ಮೆರೆದಿದ್ದಾನೆ. ಧಾರೆ ಎರೆಯುತ್ತಿರುವ ವಧುವಿನ ತಂದೆ ಪರ್ವತರಾಜನೆಂದು ತಿಳಿಸಲು ಕಿರೀಟವನ್ನು ಪರ್ವತದ ಆಕಾರದಲ್ಲಿ ಕೆತ್ತಲಾಗಿದೆ. ಶಿವ ಮತ್ತು ಗಿರಿಜೆಯ ಹಣೆಯಲ್ಲಿನ ಬಾಸಿಂಗ, ಧಾರೆಯೆರೆದ ಕ್ಷೀರವನ್ನು ಹೆಣ್ಣು ಮತ್ತು ಗಂಡಿನ ಕೈಯಲ್ಲಿನ ಕಳಶದಿಂದ ಕೆಳಕ್ಕೆ ಬೀಳುವಾಗ ಬಸವ ಸೇವಿಸುವ ಪರಿ ಅದ್ಭುತವಾಗಿದೆ. ಒಂದು ಕಡೆ ವಿಷ್ಣು ಮತ್ತು ಬ್ರಹ್ಮ ಆಶೀರ್ವದಿಸುತ್ತಿದ್ದರೆ, ಇನ್ನೊಂದು ಕಡೆ ಸರಸ್ವತಿ ಮತ್ತು ಲಕ್ಷ್ಮಿಯರು ಹರಸುತ್ತಿದ್ದಾರೆ. ಮಂತ್ರ ಹೇಳುವ ವಿಪ್ರನ ಜುಟ್ಟು, ಜನಿವಾರವನ್ನೂ ಶಿಲ್ಪಿ ವಿವರವಾಗಿ ಕೆತ್ತಿದ್ದಾನೆ.
”ಗಿರಿಜಾ ಕಲ್ಯಾಣ ಶಿಲ್ಪಗಳ ರಚನೆಯ ಮೂಲಕ ನಾಡಪ್ರಭುಗಳು ರವಾನಿಸಿರುವ ಸಂದೇಶದ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಪ್ರಬಲವಾದ ವಿಜಯನಗರ ಸಾಮ್ರಾಜ್ಯದ ಸಮಾನಾಂತರವಾಗಿ ಗುರುತರ ಸಾಮರ್ಥ್ಯ ವಹಿಸಿದ ನಾಡಪ್ರಭುಗಳು ತಮ್ಮ ಪರಿಶ್ರಮದಿಂದ ರಾಜ್ಯವನ್ನು ಪಡೆಯುತ್ತಿರುವ ಸೂಚಕವಾಗಿ ಗಿರಿಜಾ ಕಲ್ಯಾಣವೆಂಬ ಕಥೆಯ ಮೂಲಕ ಹೇಳಲು ಬಯಸಿರಬಹುದೆಂದು ಊಹಿಸಬಹುದು. ಪರ್ವತರಾಜನೆಂಬ ವಿಜಯನಗರ ಸಾಮ್ರಾಜ್ಯವು ತನ್ನ ಅಧೀನದ ರಾಜ್ಯವನ್ನು ಸ್ವಸಾಮರ್ಥ್ಯದಿಂದ ಮೇಲೆ ಬಂದ ಶಿವನ ರೂಪದ ನಾಡಪ್ರಭುವಿಗೆ ಧಾರೆಯೆರೆದು ನೀಡುವ ಸೂಚಕವಾಗಿ ಈ ಕಥನವನ್ನು ಅರ್ಥೈಸಬಹುದು” ಎಂದು ಇತಿಹಾಸತಜ್ಞ ಎಸ್.ಕೆ.ಅರುಣಿ ಹೇಳುತ್ತಾರೆ.
ಗಿರಿಜಾ ಕಲ್ಯಾಣ :
ತಾರಕಸುರ ಎಂಬ ರಾಕ್ಷಸ ಹಲವು ವರ್ಷ ತಪಸ್ಸನ್ನು ಆಚರಿಸಿ ಶಿವ ಪುತ್ರನಿಂದ ಮಾತ್ರ ನನ್ನ ಮರಣವಾಗಲಿ ಎಂದು ಬ್ರಹ್ಮನಿಂದ ವರ ಪಡೆದ. ತನ್ನ ಪತ್ನಿ ದಾಕ್ಷಾಯಣಿಯ ಮರಣದ ನಂತರ ಶಿವ ದೀರ್ಘತಪಸ್ಸಿನಲ್ಲಿ ಮುಳುಗಿದ್ದ. ತಾರಕ ಮೂರು ಲೋಕವನ್ನು ಆಕ್ರಮಿಸಿದ.
ಇತ್ತ ದಕ್ಷಯಾಗದಲ್ಲಿ ದೇಹತ್ಯಾಗ ಮಾಡಿದ ದಾಕ್ಷಾಯಿಣಿ, ಪರ್ವತರಾಜನಿಗೆ ಮಗಳಾಗಿ ಹುಟ್ಟಿ, ಬೆಳೆದು ಗಿರಿಜೆಯಾಗಿದ್ದಳು. ಶಿವ ಗಿರಿಜೆಯರನ್ನು ಸೇರಿಸಲು ಲೋಕಸಂಚಾರಿ ನಾರದರ ರಾಯಭಾರವಾಯಿತು. ನಾರದರ ಉಪದೇಶದಂತೆ ಗಿರಿಜೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸನ್ನು ಮಾಡಿದಳು.
ಮನ್ಮಥನು ತನ್ನ ಪತ್ನಿ ರತಿಯೊಡನೆ ಬಂದು ಶರಬಾಣವನ್ನು ಹೂಡಿದ. ಇದ್ದಕಿದ್ದಂತೆ ತನ್ನಲ್ಲಾದ ಬದಲಾವಣೆಯಿಂದ ಶಿವ ಎಚ್ಚೆತ್ತ. ತನ್ನ ತಪಸ್ಸಿಗೆ ಭಂಗ ಬಂದುದ್ದಕ್ಕೆ ಆತ ಕ್ರೋಧಗೊಂಡಿದ್ದ. ಹೊತ್ತಿ ಉರಿಯಿತು ಅವನ ಹಣೆಗಣ್ಣು, ನಿಂತಲ್ಲಿಯೆ ಭಸ್ಮವಾಗಿ ಹೋದ ಮನ್ಮಥ. ಶಿವನ ಎದುರು ನಿಂತ ಗಿರಿಜೆ ಪ್ರಾರ್ಥಿಸಿದಳು ಶಾಂತನಾಗಬೇಕೆಂದು. ಶಿವನಿಗೆ ತನ್ನ ಎಚ್ಚರಕ್ಕಾಗಿ ಸೃಷ್ಟಿಯೆ ಕಾದು ಕುಳಿತಿರುವುದು ತಿಳಿಯಿತು. ಎಲ್ಲ ಸುಖಾಂತವಾಯಿತು. ಗಿರಿಜಾ ಕಲ್ಯಾಣವಾಯಿತು.