ಕನ್ನಡ ಸಾಹಿತ್ಯ ಲೋಕದ ಓರ್ವ ಮಹತ್ವದ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿಯವರು. ಇವರು ವಿಶ್ವಕವಿ ಶ್ರೀ ಕುವೆಂಪುರವರ ಪುತ್ರ. ಸಾಹಿತ್ಯಲೋಕಕ್ಕೆ ತೀರಾ ಭಿನ್ನವಾದ ಕಥೆಗಳನ್ನು, ಕಾದಂಬರಿಗಳನ್ನು ನೀಡಿರುವ ಶ್ರೀ ತೇಜಸ್ವಿಯವರ ಪ್ರಸಿದ್ಧ ಕಾದಂಬರಿಗಳು – ಚಿದಂಬರ ರಹಸ್ಯ, ಜುಗಾರಿ ಕ್ರಾಸ್, ಮಹಾ ಪಲಾಯನ ಇತ್ಯಾದಿ. ಇವರ ಕಥಾ ಸಂಕಲನಗಳು ಹಲವಾರು. ಪರಿಸರದ ಕತೆಗಳು, ಅಬಚೂರಿನ ಪೋಸ್ಟಾಫೀಸು, ಕಿರಗೂರಿನ ಗಯ್ಯಾಳಿಗಳು, ಮಿಸ್ಸಿಂಗ್ ಲಿಂಕ್, ಫ್ಲೈಯಿಂಗ್ ಸಾಸರ್‍ಸ್ ಮತ್ತು ಅಲೆಮಾರಿಯ ಅಂಡಮಾನ್…. ಹೀಗೆ ಕನ್ನಡದಲ್ಲಿ ನಡೆದಿರದ ಅಪರೂಪದ ಸಾಹಿತ್ಯ ಕೃತಿಗಳನ್ನು ನೀಡಿದ್ದಾರೆ.
ಕೆ.ಪಿ. ಪೂರ್ಣಚಂದ್ರ ತೇಜಸ್ವಿ
ಪ್ರಸ್ತುತ ಕಥಾ ಸಂಕಲನದಲ್ಲಿ 17 ಕಥೆಗಳಿವೆ. ಇಲ್ಲಿ ತೇಜಸ್ವಿ ಹೇಳಿಕೊಂಡ ಮಾತುಗಳು ಗಮನಾರ್ಹ. ”ನಾನು ವಿಜ್ಞಾನ ಪದವೀಧರನಲ್ಲ. ವಿಜ್ಞಾನಿಯೂ ಅಲ್ಲ. ನಾನು ಉಚ್ಛ ಶಿಕ್ಷಣ ಪಡೆದದ್ದು ಸಾಹಿತ್ಯದಲ್ಲಿ. ಸಾಹಿತ್ಯವೇ ನನ್ನ ಸ್ವಧರ್ಮ. ಹಾಗಾಗಿ ನಾನು ಏನನ್ನೂ ಬರೆದರೂ ಅದು ಸಾಹಿತ್ಯದ ಪರಿವೇಷ, ಕಥೆ, ಕಾದಂಬರಿಗಳ ಛಾಯೆ ಇದ್ದೇ ಇರುತ್ತದೆ. ಸಾಹಿತಿ ತನ್ನ ಅನುಭವಗಳನ್ನು ಸಮರ್ಥವಾಗಿ ಹೇಳಲು ಅನೇಕ ವೇಳೆ ತತ್ವಶಾಸ್ತ್ರ, ಪುರಾಣ, ಮನಶಾಸ್ತ್ರ ಉಪಯೋಗಿಸುವಂತೆ ಈ ಕಥೆಗಳಲ್ಲಿ ನಾನು ಕೀಟಶಾಸ್ತ್ರ, ಪಕ್ಷಿಶಾಸ್ತ್ರ ಮತ್ತು ಪ್ರಾಣಿಶಾಸ್ತ್ರಗಳನ್ನು ಬಳಸಿದ್ದೇನೆ.”
ತೇಜಸ್ವಿಯವರ ಈ ಸಂಕಲನದ ಆಯ್ದ ಕಥೆಗಳ ಸಮೀಕ್ಷೆಯ ಪ್ರಯತ್ನ ನನ್ನ ಈ ಲೇಖನ. ಈ ಕಥೆಗಳಲ್ಲಿ ತೇಜಸ್ವಿಯವರು ಪ್ರಾಣಿಗಳ, ಕೀಟಗಳ ನಿಗೂಢ ಬದುಕಿನ ವಿಸ್ಮಯವನ್ನು ಸ್ವಾರಸ್ಯಕರವಾಗಿ ಅನಾವರಣಗೊಳಿಸಿದ್ದಾರೆ. ಇಲ್ಲಿಯ ಹಲವಾರು ಮಾಹಿತಿಗಳ ಬಗ್ಗೆ ನಮಗೆ ನಿಜವಾಗಿಯೂ ಅರಿವಿಲ್ಲ. ಅಂತಹ ಮಾಹಿತಿಯನ್ನು ಗ್ರಹಿಸಲು, ಪರೀಕ್ಷಿಸಲು ಅಗಾಧವಾದ, ಘನವಾದ ತಾಳ್ಮೆ ಅಗತ್ಯ ಮತ್ತು ಕಾಡು ಬೆಟ್ಟಗಳ ನಡುವೆ ಬದುಕುವ ಅಗತ್ಯವೂ ಇದೆ. ತೇಜಸ್ವಿಯವರದ್ದು ಸೂಕ್ಷ್ಮವಾದ ಗ್ರಹಿಕೆ ಮತ್ತು ಸಂಶೋಧನಾತ್ಮಕವಾದ ವಿಶ್ಲೇಷಣೆ. ಒಂದು ವಿಷಯವನ್ನು ಹಿಡಿದ ಮೇಲೆ, ಪಟ್ಟು ಬಿಡದೆ ಧೃಡ ನಿಶ್ಚಯವಾಗಿ ಅಧ್ಯಯನ ಮಾಡಿ ಅದರ ಮೇಲಿನ ತೀರ್ಪು ನೀಡುವ ಅಪರೂಪದ ಗುಣ ಕಥೆಗಾರರದ್ದು.
ಒಂಟೆ ಹುಳು :
ಬಿಸಿಲಿನ ಧಗೆ ತಾಳಲಾರದೆ ಒಂದು ದಿನ ಕಥೆಗಾರರು ಮರದಡಿ ಕುಳಿತಾಗ, ಅವರನ್ನು ಅಚ್ಚರಿಗೊಳಿಸಿದ್ದು ಮರದ ತರಗೆಲೆಯ ಮಧ್ಯೆ ಸುರುಳಿ ಸುತ್ತಿ ಬಿದ್ದಿದ ಎಲೆಗಳು. ಬೀಡದ ಹಾಗೆ ಜೋಪಾನವಾಗಿ ಸುರುಳಿ ಬಿದ್ದ ಎಲೆಗಳ ಹುಡುಕಾಟವನ್ನು ಮರಹತ್ತಿ ನೋಡಿದರೂ ಕಾಣಿಸುವುದಿಲ್ಲ. ಮತ್ತೆ ಮತ್ತೆ ಬೀಡಗಳನ್ನು ಪರೀಕ್ಷಿಸಿದಾಗ ಕೂದಲಿನಷ್ಟು ಸಣ್ಣ ಹುಳು ಕಂಡು ಬರುತ್ತದೆ. ಬೀಡದ ಒಳಗೆ ಈ ಹುಳುಗಳ ಮೊಟ್ಟೆಯು ಇತ್ತು. ಕಥೆಗಾರ ತನ್ನ ಗೆಳೆಯ ಮತ್ತು ಪತ್ನಿಯ ನೆರವಿನಿಂದ ಶೋಧಿಸಿದಾಗ ಕೆಲದಿನಗಳ ನಂತರ ಈ ಬೀಡಗಳ ಒಳಗಿನ ಮೊಟ್ಟೆಯಿಂದ ಕೆಂಪು ರೆಕ್ಕೆಯ ವಿಚಿತ್ರ ಕುತ್ತಿಗೆಯ ಒಂಟೆಯಾಕಾರದ ಮಿಡತೆಗಳು ಕಂಡು ಬಂದವು. ಈ ಹುಳುಗಳು ಎಲೆಯನ್ನು ಕತ್ತರಿಸಿ ಸುರುಳಿ ಮಾಡುವ ಕಲೆಯನ್ನು ನೋಡಿದ ಕಥೆಗಾರ ಮತ್ತು ಅವರ ಗೆಳೆಯರು ದಿಗ್ಮೂಢರಾಗುತ್ತಾರೆ.
ಏರೋಪ್ಲೇನ್ ಚಿಟ್ಟೆ :
ಏರೋಪ್ಲೇನ್ ಚಿಟ್ಟೆಗಳು ಸಾಧಾರಣ ಚಿಟ್ಟೆಯಂತೆ ಎಲೆಗಳ ಮೇಲೆ ಮೊಟ್ಟೆಯಿಡುವುದಿಲ್ಲ. ಕಥೆಗಾರ ತೇಜಸ್ವಿ ಬಹಿರಂಗಪಡಿಸಿದ ಮತ್ತೊಂದು ಅಚ್ಚರಿಯೆಂದರೆ ಈ ಏರೋಪ್ಲೇನ್ ಚಿಟ್ಟೆಗಳು ಮಾಂಸಹಾರಿ. ಇವುಗಳ ಆಹಾರ ಅತ್ತಿ ಹಣ್ಣಿನ ಹುಳುಗಳು, ಮಳೆ ಹುಳುಗಳು ಮತ್ತು ಗೆದ್ದಲು ಹುಳುಗಳು. ಏರೋಪ್ಲೇನ್ ಚಿಟ್ಟೆ ಮೊಟ್ಟೆಯಿಡುವುದು ನೀರಿನಲ್ಲಿ. ಇದರ ಮರಿಗಳು ಮೀನಿನಂತೆ ನೀರ ಕೆಳಗಿನ ಕ್ರಿಮಿ ಕೀಟಗಳನ್ನು ತಿನ್ನುತ್ತದೆ. ಸುಮಾರು 4 ವರ್ಷಗಳು ನೀರಿನಲ್ಲೇ ಜೀವಿಸಿ, ಮತ್ತೆ ಒಂದು ದಿನ ಮೇಲೆ ಬಂದು ತಮ್ಮ ಬೆನ್ನಿನ ಭಾಗದಿಂದ ಪೂರ್ಣ ಪ್ರಮಾಣದ ಏರೋಪ್ಲೇನ್ ಚಿಟ್ಟೆಯಾಗಿ ಹಾರಿ ಹೋಗುತ್ತದೆ. ಈ ಚಿಟ್ಟೆಗಳ ಆಯಸ್ಸು ಒಂದೆರಡು ತಿಂಗಳು ಮಾತ್ರ. ಇದರ ಜೀವನ ಕ್ರಮ ವಿಸ್ಮಯಕರವಾದದ್ದು. ಕಥೆಗಾರರ ತಾಳ್ಮೆ, ಗ್ರಹಿಕೆ, ಶೋಧನೆ ಮತ್ತು ಧೃಡತೆ ಪ್ರಶಂಸನೀಯವಾದದ್ದು.
ಬಾವಲಿ – ಬಾವಲಿಗಳ ಅತೀಂದ್ರಿಯ ಶಕ್ತಿ – ಸೂಪರ್ ಕಂಪ್ಯೂಟರ್ ಬಾವಲಿ :
ಇಲ್ಲಿ ಮೂರು ಕಥೆಗಳು ಬಾವಲಿಯ ಮೇಲಿನ ಸಂಶೋಧನೆಯ ಫಲಿತಾಂಶ. ಕಥೆಗಾರ ತೇಜಸ್ವಿ ಇಲ್ಲಿ ಬಾವಲಿಗಳ ಬಗೆಗಿನ ಸ್ವಾರಸ್ಯಕರ ಮಾಹಿತಿಯನ್ನು ನೀಡುತ್ತಾರೆ. ಬಾವಲಿಯು ಹಾರುವುದಿಲ್ಲ, ಇದು ತೇಲುವ ಸಸ್ತನಿ. ಬಾವಲಿಯ ರೆಕ್ಕೆಗಳು ಸ್ವತಂತ್ರವಾಗಿಲ್ಲ. ರೆಕ್ಕೆಗಳ ಮುಂಭಾಗದಲ್ಲಿ ಎರಡು ಕಾಲುಗಳು ಮತ್ತು ಹಿಂಭಾಗದಲ್ಲಿ ಎರಡು ಕಾಲುಗಳಿವೆ. ದಕ್ಷಿಣ ಅಮೇರಿಕಾದ ಬಾವಲಿಗಳು ಮನುಷ್ಯ ಮತ್ತು ಪ್ರಾಣಿಗಳ ರಕ್ತ ಹೀರುತ್ತವೆ. ಕಥೆಗಾರರು ಮತ್ತೊಂದು ಅಚ್ಚರಿಯನ್ನು ದಾಖಲಿಸುವುದು – ಬಾವಲಿಗಳು ಕಣ್ಣು ಕಟ್ಟಿದರೂ ತೇಲಬಲ್ಲದು. ಆದರೆ ಕಿವಿ ಮುಚ್ಚಿದರೆ ಅಥವಾ ಬಾಯಿ ಮುಚ್ಚಿದರೆ ತೇಲುವುದಿಲ್ಲ, ಬದಲಾಗಿ ಬೀಳುತ್ತವೆ. ಇದಕ್ಕೆ ಕಾರಣ ಬಹಳ ಕುತೂಹಲಕರವಾಗಿದೆ. ಬಾವಲಿ ತನ್ನ ಬಾಯಿಂದ ಶಬ್ಧತರಂಗಗಳನ್ನು ಹೊರ ಹಾಕಿ, ಈ ಶಬ್ಧ ತರಂಗಗಳು ಮುಂದಿರುವ ವಸ್ತುವಿನಿಂದ ಪ್ರತಿಫಲನಗೊಂಡು, ಅದನ್ನು ಕಿವಿಯಿಂದ ಸ್ವೀಕರಿಸಿ ಮುಂದೆ ತೇಲುತ್ತದೆ. ಈ ಕ್ರಿಯೆ ಕ್ಷಣ ಮಾತ್ರದಲ್ಲಿ ನಡೆಯುತ್ತದೆ. ಬಾವಲಿಯ ಬಾಯಿಂದ ಬರುವ ಶಬ್ಧ ನಮ್ಮ ಇಂದ್ರಿಯಾತೀತ. ಮನುಷ್ಯರಿಗೆ ಕೇಳಿಸುವುದಿಲ್ಲ. ಅವು ಬಾಯಿಂದ ಹೊರಡಿಸುವ ಶಬ್ಧ ಬಹಳ ವೇಗವಾಗಿ, ತೀವ್ರವಾಗಿ ಗಡಿಯಾರದ ಟಿಕ್ ಟಿಕ್ ಶಬ್ಧಗಳಂತಿದೆ. ಕೆಲವು ಕ್ರಿಮಿ ಕೀಟಗಳು ಬಾವಲಿಯ ಆಕ್ರಮಣದಿಂದ ಸುರಕ್ಷಿತವಾಗಿರುತ್ತದೆ. ಮಕಮಲ್ಲನಂಥ ರೋಮವಿರುವ ಕೀಟಗಳು ಬಾವಲಿಯ ಶಬ್ಧ ತರಂಗಗಳಿಗೆ ಪ್ರತಿಕ್ರಯಿಸುವುದಿಲ್ಲ. ಇನ್ನೂ ಕೆಲವು ಕೀಟಗಳು ಬಾವಲಿಯ ಶಬ್ಧ ಗ್ರಹಿಸಿ ನೆಲದ ಮೇಲೆ ಬೀಳುತ್ತವೆ. ಬಾವಲಿಗೆ ನೆಲದ ಮೇಲೆ ತಕ್ಷಣ ಬರಲು ಅಸಾಧ್ಯ. ಬಾವಲಿಯ ಮೆದುಳಿನ ಕಂಪ್ಯೂಟರನ್ನು ಸೋನಾರ್ ಡಿಟೆಕ್ಶ್ಯನ್ ಅನ್ನುತ್ತಾರೆ. ಬಾವಲಿಗಳ ಶ್ರವಣಾತೀತ ತರಂಗಗಳನ್ನು ಸಂಶೋಧಿಸಿದ ನಂತರ ಇದನ್ನು ರಕ್ಷಣಾ ರಂಗದಲ್ಲಿ ಬಳಸಲಾಗಿದೆ. ನೀರಿನಲ್ಲಿ ಮುಳುಗಿ ಚಲಿಸುವ ಸಬ್ ಮೇರಿನ್‌ಗಳಿಗೆ ಈ ವಿಧಾನ ಅತ್ಯಂತ ಉಪಯುಕ್ತವಾಗಿದೆ. ಸಮುದ್ರದ ತಿಮಿಂಗಿಲ, ಡಾಲ್ಫಿನ್ ಮೊದಲಾದ ಜೀವಿಗಳು ಸ್ವಾಭಾವಿಕವಾಗಿ ಸೋನಾರ್ ನಾವಿಗೇಶನ್ ಅವಲಂಬಿಸಿವೆ.
ಕೀಟ ಶಿಲ್ಪಿಗಳು :
ಕ್ರಿಮಿ ಕೀಟಗಳಿಗೂ ಅವುಗಳಿಗೆ ಅಗತ್ಯವಾದ ಗೂಡು, ಮನೆ ರಚಿಸುವ ವಾಸ್ತುಶಿಲ್ಪದ ಜ್ಞಾನ ಇದೆ. ಅವುಗಳಿಗೆ ಯೋಚನಾ ಸಾಮರ್ಥ್ಯ ಇದೆ. ಚಿಕ್ಕ ಹುಳು ಮುಳ್ಳುಗಿಡದಲ್ಲಿ ಮುಳ್ಳಿನಂತೆ ಟೋಪಿ ಹಾಕಿಕೊಂಡು ಮುಳ್ಳಿನಂತೆ ನಟಿಸಬಲ್ಲದು. ಈ ಹುಳುವಿಗೆ ಯಾವ ಗಿಡದಲ್ಲಿ ಮುಳ್ಳು ಇದೆ ಅನ್ನುವ ಅರಿವು ಇದೆ. ಇಲ್ಲಿ ಕಥೆಗಾರರು ರೇಶ್ಮೆಹುಳಗಳನ್ನು ಸಾಕಿ ಬೇಸ್ತು ಬಿದ್ದ ಘಟನೆಯನ್ನೂ ವಿನೋದಮಯವಾಗಿ ವಿವರಿಸುತ್ತಾರೆ. ಕಥೆಗಾರರು ಹೇಳುವ ಇನ್ನೊಂದು ಉದಾಹರಣೆ ಹುಳುಕಡ್ಡಿಯದ್ದು. ಈ ಹುಳುಗಳು ಜೇಡರ ಬಲೆಯಂತೆ ನೂಲಿನಿಂದ ಚೀಲವನ್ನು ನಿರ್ಮಿಸಿ ಚೀಲದ ಸುತ್ತ ತನ್ನ ಪರಿಸರದಲ್ಲಿ ದೊರೆಯುವ ಒಣಗಿದ ಕಡ್ಡಿಗಳನ್ನು ಬಲವಾಗಿ ಅಂಟಿಸುತ್ತವೆ. ಈ ಕಡ್ಡಿಗಳ ಒಳಗಿನ ಹುಳಗಳನ್ನು ಹೊರಗೆಳೆದು ತಿನ್ನಲು ಯಾವ ಜೀವಿಗಳಿಗೂ ಸಾಧ್ಯವಿಲ್ಲ. ಇವು ನೀರಿನಲ್ಲಿ ಮೊಟ್ಟೆಯಿಡುತ್ತವೆ. ಇವುಗಳ ಲಾರ್ವ ಮರಿಗಳು ನೀರಿನಲ್ಲೇ ಬದುಕಿ ಕೊನೆಗೆ ಚಿಟ್ಟೆಯಾಗಿ ಹೊರಬರುತ್ತವೆ.
ನುಂಗಲಾರದ ತುತ್ತು :
ಬಹಳ ಸುಂದರವಾದ, ವಿನೋದಮಯ ನಿರೂಪಣೆಯಿಂದ ಒಂದು ಸಣ್ಣ ಘಟನೆಯನ್ನು ಕಥೆಗಾರರು ಬಹಳ ತಾಳ್ಮೆಯಿಂದ ವೀಕ್ಷಿಸಿ, ವಿವರಗಳನ್ನು ನೀಡಿದ್ದಾರೆ. ಒಂದು ಸಣ್ಣ ಹಾವು ದೊಡ್ಡ ಕಪ್ಪೆಯೊಂದನ್ನು ನುಂಗಿ ಚಲಿಸಲಾರದೆ ಬೀಳುತ್ತದೆ. ಅಲ್ಲಿಗೆ ಬಂದ ಕೆಂಬೂತಗಳು ಜೀವಂತ ಹಾವಿನ ಬಾಲವನ್ನು ಸ್ವಲ್ಪ ಸ್ವಲ್ಪವೇ ಕತ್ತರಿಸಿ ತಿಂದು ಹೋಗುತ್ತದೆ. ಹಾವು ಅಸಹಾಯಕತೆಯಿಂದ, ನೋವಿನಿಂದ ತಾನು ನುಂಗಿದ ಕಪ್ಪೆಯನ್ನು ಬಾಯಿಯಿಂದ ಹೊರಹಾಕಿ ಹರಿದು ಹೋಗುತ್ತದೆ.
ಸರ್ಪ ದೃಷ್ಟಿ :
ಹಾವಿನ ಬಗೆಗಿರುವ ಮಾಹಿತಿ ನಮಗೆಲ್ಲ ಅಚ್ಚರಿ ತರುವಂಥದ್ದು. ಕಥೆಗಾರರು ಇಲ್ಲಿನ ಸೂಕ್ಷ್ಮ ವಿವರಗಳನ್ನು ಬಹಿರಂಗ ಪಡಿಸುತ್ತಾರೆ. ಹಾವಿಗೆ ಬಾಯಿ, ಮೂಗು, ಕಣ್ಣು ಇದೆ, ಆದರೆ ಕಿವಿ ಇಲ್ಲ. ಮೂಗಿನ ಕೆಳಗೆ ಹಾವಿಗೆ ಎರಡು ರಂಧ್ರಗಳಿವೆ. ಇದರ ಕಾರ್ಯ ಇಲ್ಲಿ ವಿವರಿಸಲಾಗಿದೆ. ವಿಜ್ಞಾನಿಗಳ ಬಹಳ ಸಂಶೋಧನೆಗಳ ಬಳಿಕ ತಿಳಿದು ಬಂದದ್ದು – ಹಾವಿನ ಒಂದು ರಂಧ್ರ ವಾತಾವರಣದ ಉಷ್ಣತೆಯನ್ನು ದಾಖಲಿಸುತ್ತದೆ. ಇನ್ನೊಂದು ವಾತಾವರಣಕ್ಕಿಂತ ಹೆಚ್ಚು ಅಥವಾ ಕಡಿಮೆ ಇರುವಂಥ ವಸ್ತುಗಳಿಂದ ಪ್ರತಿಫಲಿಸಿದ ಶಾಖದ ಕಿರಣಗಳನ್ನು ಪ್ರತ್ಯೇಕಿಸಿ ದಾಖಲು ಮಾಡುವುದು. ಈ ಎರಡರ ಸಂಯೋಜಿತ ಪ್ರತಿಕ್ರಿಯೆಯಿಂದ ಹಾವುಗಳು ಕತ್ತಲಲ್ಲೂ ಸಹ ಸುಖವಾಗಿ ತಮ್ಮ ಬೇಟೆಯನ್ನು ನೋಡಬಲ್ಲ ಸಾಮರ್ಥ್ಯ ಹೊಂದಿವೆ.
ಹಾವು ಮೀನಿನ ಪ್ರಚಂಡಯಾನ :
ಈ ಕಥೆಯಲ್ಲಿ ಹಾವು ಮೀನಿನ ಬಗ್ಗೆ ವಿಜ್ಞಾನಿಗಳು ಮಾಡಿದ ಸಂಶೋಧನೆ ಮತ್ತು ಕಷ್ಟಗಳ ವಿವರಣೆಯಿದೆ. ವಿಜ್ಞಾನಿ ಅರಿಸ್ಟಾಟಲ್ ಮೊದಲು ಹೇಳಿದ್ದು – ಹಾವು ಮೀನಿನಲ್ಲಿ ಹೆಣ್ಣು ಗಂಡು ಜಾತಿವಿಲ್ಲ. ಅವು ಮೊಟ್ಟೆಯಿಡುವುದಿಲ್ಲ. ನಂತರ ಇಟೆಲಿಯ ವಿಜ್ಞಾನಿ ‘ಮೊಂಡಿನಿ’, ಹಾವು ಮೀನುಗಳ ಶರೀರ ರಚನೆಯ ಮೇಲೆ ಆಳವಾದ ಅಭ್ಯಾಸ ಮಾಡಿ, ಇತರ ಮೀನಿನಂತೆ ಇದಕ್ಕೂ ಅಂಡಕೋಶವಿದೆ ಎಂದು ಸಾರಿದ. ಅವು ಮೊಟ್ಟೆಯಿಡುವ ರಹಸ್ಯ ಯಾರಿಗೂ ತಿಳಿಯಲಿಲ್ಲ. ಕೊನೆಗೂ ಹಾವು ಮೀನುಗಳು ಸಾವಿರಾರು ಮೈಲು ದೂರದ ಸಮುದ್ರದಲ್ಲಿ ಮೊಟ್ಟೆಯಿಡುವುದನ್ನು ಡ್ಯಾನಿಶ್ ಜೀವಶಾಸ್ತಜ್ಞ ಕಂಡುಹಿಡಿದ. ಆದರೆ ಹಾವು ಮೀನುಗಳ ಮರಿಗಳು ಗಾಜಿನ ಪಟ್ಟೆಗಳಂತೆ ಚಪ್ಪಟೆಯಾಗಿ ಸಂಪೂರ್ಣ ಪಾರದರ್ಶಕವಾಗಿರುತ್ತದೆ. ಇವು ಕೆಲಕಾಲದ ನಂತರ ಸಣ್ಣದಾಗುತ್ತಾ ಬಂದು ಕೊಳವೆ ಆಕಾರ ಪಡೆಯುತ್ತದೆ. ಹಾವು ಮೀನಿನ ಆಕಾರ ಕ್ರಮೇಣ ಪಡೆಯುತ್ತವೆ.
ಹಲ್ಲಿಯ ಪ್ರಾಣ ಬಾಲದಲ್ಲಿ :
ಕಥೆಗಾರರು ಇಲ್ಲಿ ತುಂಡರಿಸಿದ ಶರೀರದ ಅಂಗಾಂಗಗಳು ಎಲ್ಲಿಯವರೆಗೆ ಸಜೀವವಾಗಿರುತ್ತದೆ ಮತ್ತು ಹಲ್ಲಿ ಮತ್ತು ಏಡಿಯ ಶರೀರದ ರಚನಾಕ್ರಮವನ್ನು ವಿವರಿಸಿದ್ದಾರೆ. ಹಲ್ಲಿಯ ಪ್ರಾಣ ಬಾಲದಲ್ಲಿಲ್ಲ. ಹಲ್ಲಿಯನ್ನು ಹೊಡೆಯಲು ಹೋದರೆ ಅದರ ಬಾಲ ತುಂಡಾಗಿ ಬೀಳುತ್ತದೆ. ಅದು ಹಲ್ಲಿ ಸ್ವಇಚ್ಛೆಯಿಂದ ಪ್ರಾಣರಕ್ಷಣೆಗಾಗಿ ಮಾಡುವ ತಂತ್ರ. ಹಾಗೆ ಎರೆಹುಳು ಹಿಡಿದಾಗ ಅದರ ಬಾಲ ಕೈಯಲ್ಲಿ ಬರುತ್ತದೆ. ಹಾಗೆಯೇ ಏಡಿಗಳು ಕೈ ಕಾಲು ಮತ್ತು ಕೊಂಬನ್ನು ಕಳಚುತ್ತವೆ. ಆದರೆ ಇವು ಯಾವುದೂ ಸಾಯುವುದಿಲ್ಲ. ಹಲ್ಲಿ, ಏಡಿಗೆ ಮತ್ತೆ ಬಾಲ, ಕೈ ಕಾಲುಗಳು ಬೆಳೆಯುತ್ತವೆ. ಏಡಿಗಳ ಕೊಂಬು ಶರೀರದಿಂದ ಬೇರ್ಪಡಿಸಿದ ಕೆಲವು ಗಂಟೆಗಳ ನಂತರವೂ ಜೀವ ಇರುತ್ತದೆ. ಆಮೆಯ ತಲೆ ತುಂಡರಿಸಿದ ಬಹಳ ಗಂಟೆಗಳ ಬಳಿಕವೂ ಆಮೆ ಜೀವಂತವಾಗಿರುತ್ತದೆ. ಕಥೆಗಾರರು ಈ ಎಲ್ಲಾ ತೀರ್ಪುಗಳನ್ನು ಕೆಲವು ಘಟನೆಗಳ ವಿವರಗಳ ಮೂಲಕ ಸಾದರ ಪಡಿಸುತ್ತಾರೆ.
ಒಡಲ ನೂಲಿನಿಂದ :
ಜೇಡ ತನ್ನ ಹೊಟ್ಟೆಯಿಂದ ಸೃವಿಸುವ ದ್ರವದಿಂದ ಬಲೆಯನ್ನು ನೇಯುತ್ತದೆ. ಆದರೆ ಜೇಡದ ದೃಷ್ಟಿ ಮಂದ. ಜೇಡ ತನ್ನ ಬಲೆಗೆ ಬಿದ್ದ ಕ್ರಿಮಿ ಕೀಟಗಳನ್ನು ತಿನ್ನುತ್ತದೆ. ಜೇಡ ಬೇರೆ ಬೇರೆ ಉದ್ದೇಶಕ್ಕೆ ಬೇರೆ ಬೇರೆ ಬಲೆ ಹೆಣೆಯುತ್ತದೆ. ಒಂದು ಬೇಟೆಗಾಗಿ, ಒಂದು ವಿಶ್ರಾಂತಿಗಾಗಿ… ಇತ್ಯಾದಿ. ಜೇಡರ ಮರಿಗಳು ಇತರ ಜೇಡಗಳಿಂದ ರಕ್ಷಿಸಿಕೊಳ್ಳಬೇಕು, ಇಲ್ಲದಿದ್ದಲ್ಲಿ ಇವು ಇತರ ಜೇಡಗಳಿಗೆ ಆಹಾರವಾಗುತ್ತದೆ. ಲೇಖಕರು ಇಲ್ಲಿ ಹೇಳುವ ಮಾತು ಅರ್ಥಪೂರ್ಣ – ‘ಜೇಡ ಇಲ್ಲದಿದ್ದಲ್ಲಿ ಜಗತ್ತು ಅಸಂಖ್ಯಾತ ಕ್ರಿಮಿಗಳಿಂದ, ಕೀಟಗಳಿಂದ ತುಂಬಿ ನರಳುತ್ತಿತ್ತು.’ ಮಲೆನಾಡಿನಲ್ಲಿ ಚಿಕ್ಕ ಪುಟ್ಟ ಕಪ್ಪೆಗಳನ್ನು ಹಿಡಿದು ಹಾಕಿ ಬಿಡುವಷ್ಟು ದೊಡ್ಡ ಗಾತ್ರದ ಜೇಡಗಳಿವೆ. ಅವು ತಮ್ಮ ಬಾಯಿಂದ ವಿಶಿಷ್ಟ ವಿಷವನ್ನು ಚುಚ್ಚುತ್ತವೆ. ಕೂಡಲೇ ಆ ಕ್ರಿಮಿಗಳು ದ್ರವವಾಗತೊಡಗುತ್ತವೆ. ಅನಂತರ ಜೇಡ ಈ ದ್ರವವನ್ನು ಹೀರುತ್ತದೆ. ಜೇಡರಲ್ಲಿ 40,000 ಜಾತಿಗಳಿವೆ. ತಮ್ಮ ಹೊಟ್ಟೆಯಿಂದಲೇ ತಾವು ಓಡಾಡುವ ಹಗ್ಗದ ಏಣಿಯನ್ನು ಪ್ರಚಂಡ ವೇಗದಲ್ಲಿ ನಿರ್ಮಿಸಿ ತಿರುಗುವ ಜೇಡ ನಿಜಕ್ಕೂ ಕೀಟ ಜಗತ್ತಿನ ಕೌತುಕ.
ಹಕ್ಕಿಗಳ ಹೆಜ್ಜೆ ಮೂಡದ ಹಾದಿ :
ಈ ಲೇಖನದಲ್ಲಿ ತೇಜಸ್ವಿಯವರು ಹಕ್ಕಿಗಳ ಸುದೀರ್ಘವಾದ ಹಾಗೂ ಅಸಾಮಾನ್ಯ, ಅಸಾಧಾರಣ ಆಕಾಶ ಪಯಣದ ಬಗ್ಗೆ ವಿವರಿಸಿದ್ದಾರೆ. ಹಲವಾರು ವಿಜ್ಞಾನಿಗಳು ಸಂಶೋಧನೆಗಳನ್ನು ಸೂಚಿಸಿದ್ದಾರೆ. ಯುರೋಪಿನಿಂದ ಸಹಸ್ರಾರು ಮೈಲು ಹಾರಿಕೊಂಡು ಹಕ್ಕಿಗಳು ಭಾರತಕ್ಕೆ ಬರುತ್ತವೆ. ವರ್ಷದ ನಿರ್ದಿಷ್ಟ ಕಾಲದಲ್ಲಿ ಇವು ಪಯಣಿಸುತ್ತವೆ. ಹಕ್ಕಿಗಳು ರಾತ್ರಿ ವೇಳೆ ಹೆಚ್ಚಾಗಿ ಪ್ರಯಾಣ ಮಾಡುತ್ತವೆ. ಇದರ ಮಾರ್ಗಸೂಚಿ ಜಟಿಲವಾದದ್ದು ಮತ್ತು ಸಂಕೀರ್ಣವಾದದ್ದು. ವಿಜ್ಞಾನಿಗಳು ಬಹಳ ಪರಿಶ್ರಮ ಪಟ್ಟು ಕಂಡು ಹಿಡಿದದ್ದು – ಹಕ್ಕಿಗಳು ಹಗಲಿನಲ್ಲಿ ಸೂರ್ಯನನ್ನು ಮತ್ತು ರಾತ್ರಿಯಲ್ಲಿ ನಕ್ಷತ್ರಗಳ ನೆರವಿನಿಂದ ತಾವು ಪಯಣಿಸುವ ದಿಕ್ಕು ನಿರ್ಧರಿಸುತ್ತವೆ.
ಕಥೆಗಾರ ತೇಜಸ್ವಿಯವರು ಈ ಸಂಕಲನದ ಕಥೆಗಳಲ್ಲಿ ಅಥವಾ ಲೇಖನಗಳಲ್ಲಿ ನಿಸರ್ಗದ ನಿಗೂಢತೆಯನ್ನು ಸ್ವಾರಸ್ಯಕರವಾಗಿ ತೆರೆದಿಟ್ಟಿದ್ದಾರೆ. ನಮ್ಮ ಸುತ್ತಮುತ್ತಲಿನ, ನಾವು ಗಮನಿಸದೇ ಇರದ ಪ್ರಾಣಿ, ಪಕ್ಷಿ, ಕೀಟಗಳ ಪ್ರಪಂಚ ಬೆರಗುಗೊಳಿಸುವಂಥದ್ದು. ಭಗವಂತ ಎಲ್ಲಾ ಜೀವಿಗಳ ಸೃಷ್ಟಿಯಲ್ಲಿ ಯಾವ ಕೊರತೆಯನ್ನೂ ಕಾಣಿಸದೆ, ಅವುಗಳ ಜೀವನ ಕ್ರಮ, ಸಂತಾನೋತ್ಪತ್ತಿ, ಆಹಾರ, ಮೈಥುನ ಮತ್ತು ರಕ್ಷಣೆಗಾಗಿ ಸಕಲ ವ್ಯವಸ್ಥೆಗಳನ್ನು ಮಾಡಿರುವುದು ಇಲ್ಲಿ ವ್ಯಕ್ತವಾಗುತ್ತದೆ.