ನ್ಯೂ ಇಯರ್ ರೆಸಲೂಷನ್

ನೋಡು ನೋಡುತ್ತಿದ್ದಂತೆ ನಮ್ಮ ಲೇ ಔಟಿನ ಹೆಂಗಸರು ಸಣ್ಣಗಾಗತೊಡಗಿದರು. ಮೊದಲು ಗುಡಾಣದಂತಹ ಹೊಟ್ಟೆಯ ಇಬ್ಬರು ಹೆಂಗಸರು ಸಣ್ಣಗಾದರು, ನಂತರ ದಿನಾ ಸಾಯಂಕಾಲ ಎದುರಿಸು ಬಿಡುತ್ತಾ ಪಾರ್ಕಿನಲ್ಲಿ ಗರಗರ ತಿರುಗುತ್ತಿದ್ದ ನಾಲ್ಕು ಜನ ಹೆಂಗಸರು ಸಣ್ಣಗಾದರು. ಗಣೇಶನ ಹಬ್ಬಕ್ಕೆ ಕುಂಕುಮಕ್ಕೆ ಕರೆದಾಗ ಲೇ ಔಟಿನ ಸುಮಾರು ಎಂಟು, ಹತ್ತು ಹೆಂಗಸರಾದರೂ ಸಣ್ಣಗಾಗಿದ್ದರು. ಹೆಂಗಸರು ಸಣ್ಣಗಾಗುತ್ತಿದ್ದಂತೆ ಪಾರ್ಕಿನಲ್ಲಿ ವಾಕಿಂಗ್ ಬರುವುದು ಕಡಿಮೆಯಾಯಿತು. ಯಾವುದೋ ಅಂಟು ರೋಗ ಬಂದಿದೆಯೇ ಇವರಿಗೆ? ನೋಡಲು ಖಾಯಿಲೆ ಬಂದ ಹಾಗಿರಲಿಲ್ಲ, ಸಂತೋಷವಾಗೇ ಇದ್ದರು, ಕುಣಿದು ಕುಪ್ಪಳಿಸುವಂತಿದ್ದರು.  ”ಏನು ವಿಶೇಷ ಎಲ್ಲರೂ ಒಮ್ಮೆಲೆ ಸಣ್ಣಗಾಗಿದ್ದೀರಲ್ಲ, ಭಾರಿ ಡಯಟ್ಟಾ?” ಒಬ್ಬರು ಮತ್ತೊಬ್ಬರ ಮುಖ ನೋಡಿಕೊಂಡು, ಏನಿಲ್ಲ ಆಂಟಿಎಂದರು. ‘ಆಂಟಿಶಬ್ಧ ಕೇಳಿ ಮೆಟ್ಟಿ ಬಿದ್ದೆ, ಇವರು ನಿನ್ನೆ ಮೊನ್ನೆಯವರೆಗೆ ಹೆಸರು ಹೇಳಿ ಕರೆಯುತ್ತಿದ್ದರು ಇಲ್ಲವೆ ‘ಗೀತಕ್ಕ’ ಎನ್ನುತ್ತಿದ್ದರು. ಇವರುಗಳು ಏಳೆಂಟು ಕೇಜಿ ಸಣ್ಣಗಾಗಿದ್ದು ಹೌದು ಆದರೆ ಅವರ ವಯಸ್ಸು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿತ್ತೇ ಹೊರತು ಕಡಿಮೆಯಲ್ಲ, ನನ್ನದೂ ಅಷ್ಟೇ ಅನ್ನಿ, ಆದರೆ ಇವರುಗಳು ಸಣ್ಣಗಾಗಿ ನನ್ನನ್ನು ಆಂಟಿಯ ಸ್ಥಾನಕ್ಕೇರಿಸಿದ್ದಾದರೂ ಏಕೆ? ಬೇಸರವಾಯಿತು. 

ಮೊನ್ನೆ ನಮ್ಮ ಲೇ ಔಟಿನ ಉದ್ದದ ದಾರಿಯಲ್ಲಿ ನಡೆದುಕೊಂಡು ದೇವಸ್ಥಾನಕ್ಕೆ ಹೊರಟಿದ್ದೆ. ಸ್ವಲ್ಪ ದೂರ ನಡೆದಿದ್ದೇನೋ ಇಲ್ಲವೋ ಸಂಜೆಯ ಹೊತ್ತಿನಲ್ಲೂ ಕಣ್ಣಿಗೆ ತಂಪು ಕನ್ನಡಕ, ಕೆಂಪು ಲಿಪ್ಸಟಿಕ್, ಜೀನ್ಸ್ ಇಲ್ಲವೆ ಸ್ಕರ್ಟ ಧರಿಸಿದ ಐದಾರು ಹೆಣ್ಣುಮಕ್ಕಳು ಎದುರಾದರು. ಇದ್ಯಾರಪ್ಪ ಅನ್ನಿಸಿತು. ನಮ್ಮ ಲೇ ಔಟಿನ ಹೆಚ್ಚಿನ ಹೆಣ್ಣುಮಕ್ಕಳ ಗುರುತು ಪರಿಚಯವಿತ್ತು, ಅವರ್‍ಯಾರೂ ಅಲ್ಲ. ಹೆಣ್ಣುಮಕ್ಕಳು ಹತ್ತಿರ ಬರುತ್ತಿದ್ದಂತೆ ಜೋತು ಬಿದ್ದ ಕೆನ್ನೆ, ಗುಳಿ ಬಿದ್ದ ಕಣ್ಣುಗಳನ್ನು ನೋಡಿ ಇವರು ಹುಡುಗಿಯರಂತೆ ವೇಷ ಧರಿಸಿದ ಹೆಂಗಸರೆಂದು ತೋರಿತು, ಮತ್ತೂ ಹತ್ತಿರಕ್ಕೆ ಬಂದಾಗ ಇವರನ್ನು ಎಲ್ಲಿಯೋ ನೋಡಿದ್ದೇನೆ ಅನ್ನಿಸಿತು. ”ಹಾಯ್ ಆಂಟಿ ಎಲ್ಲಿಗೆ ಹೊರಟಿದ್ದೀರಿ?” ಎಂದಾಗ ಸ್ವರದ ಪರಿಚಯವಾಯಿತು, ಇವರುಗಳು ಮತ್ಯಾರೂ ಅಲ್ಲ ನಮ್ಮ ಲೇ ಔಟಿನ ಹೆಂಗಸರೇ, ಎಲ್ಲರೂ ಒಮ್ಮೆಗೆ ಸಣ್ಣಗಾಗಿದ್ದು ಮಾತ್ರ ಅಲ್ಲ ಕಾಲೇಜು ಹುಡುಗಿಯರ ತರಹ ಡ್ರೆಸ್ಸುಗಳನ್ನೂ ಹಾಕತೊಡಗಿದ್ದರು. ”ಯಾರೂ ಪಾರ್ಕಿನಲ್ಲಿ ಕಾಣಿಸುತ್ತಿಲ್ಲ, ವಾಕಿಂಗ್ ಮಾಡುವುದನ್ನು ಬಿಟ್ಟು ಮನೆಯಲ್ಲೇ ಎಕ್ಸಸೈಸ್ ಮಾಡುತ್ತಿದ್ದೀರಾ ಹೇಗೆ?”, ಒಬ್ಬರ ಮುಖ ಮತ್ತೊಬ್ಬರು ನೋಡಿಕೊಂಡು ಕಿಸಿಕಿಸಿ ನಕ್ಕರು. ಅದರಲ್ಲೊಬ್ಬಳು ವಯ್ಯಾರದಿಂದ, ”ಎಕ್ಸಸೈಸ್, ಯೋಗ ಒಂದೂ ಇಲ್ಲ, ಹೀಗೆ ಜಾಲಿಯಾಗಿದ್ದೀವಿ” ಎಂದಳು. ಉಳಿದವರು ನನ್ನನ್ನು ಒಂದೂ ಅರಿಯದ ಗೂಬೆಯನ್ನು ನೋಡುವಂತೆ ನೋಡಿದರು, ಇಲ್ಲ ನನಗೆ ಹಾಗೆ ಅನ್ನಿಸಿತೋ

ನನಗೆ ತಲೆಬಿಸಿ ಶುರುವಾಯಿತು, ತಲೆಬಿಸಿಯಿಂದ ಮತ್ತೆರಡು ಕೇಜಿ ದಪ್ಪಗಾದೆ. ನಾನೇನು ಅಷ್ಟು ದಪ್ಪಗಿಲ್ಲ, ಹಾಗೆಂದುಕೊಂಡು ನನಗೆ ನಾನು ಸಮಾಧಾನ ಪಟ್ಟುಕೊಳ್ಳುತ್ತಿದ್ದೇನೆ. ನಾನು ಅಷ್ಟೊಂದು ದಪ್ಪಗಿಲ್ಲ ಅನ್ನುವ ಮಟ್ಟದಲ್ಲಿರಲು ದಿನಕ್ಕೆ 4-5 ಕೀಮಿ ನಡೆಯುತ್ತೇನೆ, ಅರ್ಧ- ಮುಕ್ಕಾಲು ಗಂಟೆ ಯೋಗ ಮಾಡುತ್ತೇನೆ. ಊಟ, ತಿಂಡಿಯಲ್ಲಿ ಕಂಜೂಸಿ ಮಾಡಿಲ್ಲವಾದರೂ ತುಪ್ಪವನ್ನು ದೂರವೇ ಇಟ್ಟಿದ್ದೇನೆ, ಸಿಹಿ ತಿಂಡಿಗಳು ಇಷ್ಟವಾದರೂ ಸ್ವಲ್ಪ, ಸ್ವಲ್ಪ ತಿನ್ನುತ್ತೇನೆ. 

ನಮ್ಮ ಹಿಂದಿ ಸಿನೆಮಾ ನಟಿಯರನ್ನು ಗಮನಿಸಿದ್ದೀರಾ? ಅವರು ತಿನ್ನುವುದನ್ನು ಮರೆತು ಯುಗಗಳೇ ಆಗಿರಬೇಕು, ತಿಂಡಿ ತೀರ್ಥಗಳನ್ನು ನೋಡಿಯೇ ಹೊಟ್ಟೆ ತುಂಬಿಸಿಕೊಳ್ಳುತ್ತಿರಬೇಕು. ಇನ್ನು ಹಿಂದಿ ಟಿವಿ ಸಿರಿಯಲ್ಲಿನ ನಟಿಯರೂ ಅಷ್ಟೆ ಕಳೆದವಾರ ಗುಂಡಗಿದ್ದು ಕಣ್ಣು ತುಂಬುತ್ತಿದ್ದವಳು ಈ ವಾರ ವಾಷಿಂಗ್ ಮೆಷಿನ್ನಿನಲ್ಲಿ ಎರಡು ಸುತ್ತು ತಿರುಗಿ ಬಂದವಳಂತೆ, ಹಿಂಡಿದ ಬಟ್ಟೆಯಂತೆ, ಗಾಳಿ ತೆಗೆದ ಬೆಲೂನಿನಂತೆ ತುಂಬಾ ಸಣ್ಣಗಾಗಿದ್ದಳು. ಮತ್ತೆರಡು ಚಾನಲ್ ತಿರುಗಿಸಿದರೆ ಅಲ್ಲೂ ಅಷ್ಟೇ ನಟಿಮಣಿಯರು, ಗಾಳಿ ಅವರ ಮೈಯ ಕೊಬ್ಬು ಹೀರಿದವರಂತೆ ಸಣ್ಣಗಾಗಿದ್ದರು. ದಿನದಿಂದ ದಿನಕ್ಕೆ ಸಣ್ಣಗಾಗುವುದಲ್ಲ, ಏಕದಂ 15-20 ಕೇಜಿ ಮೈಯ ತೂಕವನ್ನು ಇಳಿಸಿಕೊಳ್ಳುವುದು. ಇವರ – ಇದರ ಗುಟ್ಟು ಆ ಬ್ರಹ್ಮನಿಗಾದರೂ ಗೊತ್ತಿರಬಹುದೇ? ಅಷ್ಟೇ ಅಲ್ಲ ಕಪ್ಪು ಬಣ್ಣದ ಚರ್ಮ ಯಾವ ಕ್ರೀಮಿನ ಹಂಗಿಲ್ಲದೆ ಬಿಳಿ ಬಣ್ಣವಾಗುತ್ತದೆ, ಮೊಂಡು ಮೂಗುಗಳು ರಾತ್ರಿ ಬೆಳಗಾಗುವುದರಲ್ಲಿ ಉದ್ದ ಬೆಳೆದಿರುತ್ತದೆ, ತೆಳು ತುಟಿ ಏಕದಂ ಜೇನು ನೊಣ ಕಚ್ಚಿದ ಹಾಗೆ ಊದಿರುತ್ತದೆ, ಇನ್ನು ಕೆಲವರ ಬಾಯಿಯ ಆಕಾರವೇ ಬದಲಾಗಿರುತ್ತಿದೆ, ಅವರ ಕಣ್ಣೋ, ಕಿವಿಯನ್ನೋ ನೋಡಿ ಗುರುತು ಹಿಡಿಯಬೇಕು. ಬ್ರಹ್ಮನಿಗೆ ಮಾತ್ರ ಸೃಷ್ಟಿಯ ಗುಟ್ಟು ಗೊತ್ತಿದೆಯೆಂದು ಎಣಿಸಿದ್ದೆ, ಆದರೀಗ ಬ್ರಹ್ಮನಿಗೇ ಸವಾಲೊಡ್ಡುವಂತಹ, ಅವನ ಸೃಷ್ಟಿಯನ್ನೇ ಬದಲಾಯಿಸುವ ನಿಪುಣರು ಹುಟ್ಟಿಕೊಂಡಿದ್ದಾರೆ. ಈಗ ಯಾರು ಬೇಕಾದರೂ ಬೇಕಾದ ಆಕಾರದಲ್ಲಿ, ಬೇಕಾದ ಬಣ್ಣದಲ್ಲಿ ಇರಬಹುದು, ನಿಜಕ್ಕೂ ಇದು ಸೌಂದರ್ಯ ಪ್ರಿಯರ ಸುವರ್ಣ ಯುಗ, ಕೇವಲ ದುಡ್ಡೊಂದು ಇದ್ದರೆ ಸಾಕು. ಹೆಂಗಸರ ಸೌಂದರ್ಯ ವರ್ಧಿಸಲು ದೊಡ್ಡ ದೊಡ್ಡ ಆವಿಷ್ಕಾರಗಳಾಗಿವೆ. 



ಸಾಕಾಯಿತು, ಇನ್ನು ಸಹಿಸಲು ಸಾಧ್ಯವಿಲ್ಲ, ಹೊಸ ವರ್ಷ ಬಂದೇ ಬಿಟ್ಟಿದೆ., ‘ಕಾಯಾ, ವಾಚಾ, ಮನಸಾ ಸಕಲ ಪ್ರಯತ್ನಗಳನ್ನೂ ಮಾಡುತ್ತೇನೆ 2021 ಜನವರಿ 1 ರಿಂದ…’, ಭೀಷ್ಮ ಪ್ರತಿಜ್ಞೆ ಕೈಗೊಂಡೆ, ಗಂಡನ ಹತ್ತಿರವೂ ಇದನ್ನೇ ಹೇಳಿದೆ. ”ಇದು ಯಾವುದರ ಬಗ್ಗೆ ತೆಗೆದುಕೊಂಡ ನಿರ್ಧಾರ? ಕೊರೋನಾ ಓಡಿಸುವ ನಿರ್ಧಾರವೇ? ಶಾಪಿಂಗ್ ಹೋಗದಿರಲು ನಿರ್ಧಾರವೇ?” ಎಂದರು. ”ಅಲ್ಲಾರೀ… ಇದು ನಾನು ಸಣ್ಣಗಾಗಲು ತೆಗೆದುಕೊಂಡ ನಿರ್ಧಾರ, ಬಳ್ಳಿಯಂತೆ ಬಳಕುವ ಶರೀರ ಹೊಂದಲು ಮಾಡಿದ ಪ್ರತಿಜ್ಞೆ, ಇದಕ್ಕಾಗಿ ಊಟ, ತಿಂಡಿ ಬಿಟ್ಟರೂ ಸರಿಯೇ, ಎಷ್ಟು ಖರ್ಚಾದರೂ ಸರಿ” ಸ್ವಲ್ಪ ಹೆಚ್ಚೆನಿಸುವ ರೋಷಾವೇಶದಿಂದ ಎಂದೆ, ಮನೆ ರಣರಂಗವಾಗುವುದನ್ನು ತಪ್ಪಿಸಲೆಂಬಂತೆ ಅಲ್ಲಿಂದ ಎದ್ದು ಹೋದರು ನನ್ನವರು. 

ಇದಾದ ಕೆಲವು ದಿನಗಳ ನಂತರ ನಮ್ಮ ಲೇ ಔಟಿನ ಒಬ್ಬರು ಎರಡು ತಿಂಗಳ ಹಿಂದೆಯೇ ಆಗಿ ಹೋದ ಅವರ ಮದುವೆ ಸಿಲ್ವರ್ ಜ್ಯೂಬಲಿಯನ್ನು ಆಚರಿಸಲು ಹೊರಟರು, ಅದಕ್ಕಾಗಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದು ಪರಿಚಯದವರನ್ನೆಲ್ಲಾ ಕರೆದಿದ್ದರು. ತಮ್ಮ ಮೈಯಲ್ಲಿ ಕೊಬ್ಬಿನಂಶ ಇಲ್ಲವೆಂದು ತೋರುವಂತೆ ಸೀರೆಯನ್ನುಟ್ಟು ಅಲ್ಲಿ ಇಲ್ಲಿ ಪ್ರದರ್ಶನ ಮಾಡುತ್ತಾ ತೆಳ್ಳಗಾದ ಅದೇ ನೀರೆಯರು ಬಂದರು, ಮುಖದಲ್ಲಿ ಅರ್ಧ ಇಂಚಿನ ಮೇಕಅಪ್ ಇತ್ತು. ಏನೋ ಒಂದು ತರಹದ ಗತ್ತು, ಬಳುಕುವ ಸೊಂಟವನ್ನು ಮತ್ತಷ್ಟು ಬಳುಕಿಸಿದರು, ಬಾಗಿದರು ಸುಂದರಿಯರು. ಸಹಜವಾಗಿ ನನಗೆ ಹೊಟ್ಟೆ ಉರಿಯಿತು

ಊಟದ ಸಮಯದಲ್ಲಿ ನನ್ನ ಪಕ್ಕದಲ್ಲೇ ಕೂತಿದ್ದರು ಅದೇ ಬಳಕುವ ಬಳ್ಳಿಯ ನೀರೆಯರು. ಪಕ್ಕದಲ್ಲಿ ಏನು ಬಂದರೂ ”ಬೇಡ” ಎನ್ನುವ ಸ್ವರ ಕೇಳಿ ತಲೆಯೆತ್ತಿದರೆ ನನ್ನ ಗೆಳತಿಯರ ಎಲೆಯಲ್ಲಿ ಕುಸುಂಬರಿ, ಪಲ್ಯ ಮಾತ್ರ ಇತ್ತು, ಬೇರೆನನ್ನೂ ಹಾಕಿಸಿಕೊಂಡಿರಲಿಲ್ಲ. ಒಂದು ಚಮಚ ಸತ್ಯನಾರಯಣ ಪ್ರಸಾದವನ್ನೂ ಏಳೆಂಟು ಜನ ಹಂಚಿಕೊಂಡು ತಿಂದರು. ”ಕುಸುಂಬರಿ, ಪಲ್ಯದಲ್ಲೇ ಹೊಟ್ಟೆ ತುಂಬಿಸಿಕೊಳ್ಳುವುದಾ ಹೇಗೆ?, ಊಟಕ್ಕೆ ಬಂದು ಏನು ಪ್ರಯೋಜನ?” ಎಂದೆ. ”ಹಾಗಲ್ಲ ಆಂಟಿ, ನಾವೆಲ್ಲಾ ಪ್ರಕೃತಿ ಚಿಕಿತ್ಸೆಯಲ್ಲಿದ್ದೇವೆ, ನಮ್ಮದು ಊಟ ಕಡಿಮೆ” ಎಂದಳು ಒಬ್ಬಳು ಕೊರಳು ಕೊಂಕಿಸುತ್ತಾ. ”ಪ್ರಕೃತಿ ಚಿಕಿತ್ಸೆ ಎಂದರೆ ಊಟ ಬಿಡುವುದಾ?, ಇದು ಎಷ್ಟು ದಿನ ನಡೆಯುತ್ತದೆ, ಮನೆಯಲ್ಲಿ ಕೆಲಸ ಮಾಡುವುದಾದರೂ ಹೇಗೆ?” ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದೆ. ”ಹಾಗಲ್ಲ ಆಂಟಿ, ಅದೂ ನಾವೆಲ್ಲಾ ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ ಪ್ರೊಟೀನ್ ಶೇಕ್ ಕುಡಿಯುತ್ತಿದ್ದೇವೆ, ಆಗ ಊಟ ಬೇಡ, ಎಂಟೇ ದಿನದಲ್ಲಿ ಸಣ್ಣ ಆಗುವುದು ಗ್ಯಾರಂಟಿ, ಸ್ವಲ್ಪ ವೀಕನೆಸ್ ಇರುತ್ತದೆ, ಆದರೆ ಮನೆಯಲ್ಲಿ ಕೆಲಸ ಮಾಡಲು ಕೆಲಸದವರಿದ್ದಾರೆ, ಗಂಡ ಇದ್ದಾರೆ!” ”ಆಂಟೀ ನೀವು ಸೇರಿ ಪ್ರಕೃತಿ ಚಿಕಿತ್ಸೆಗೆ, ಹತ್ತೇ ದಿನಗಳಲ್ಲಿ ನೀವೂ ನಮ್ಮಂತೆ…” ಎಂದರು. ಒಮ್ಮೆಗೆ ನನಗೆ ಖುಷಿಯಾಯಿತು, ಅಡಿಗೆ ಮಾಡುವ, ತಿನ್ನುವ ರಗಳೆ ಇಲ್ಲ, ಸಣ್ಣ ಆಗಬೇಕೆಂದು ಕಸರತ್ತು ಮಾಡುವುದೂ ಬೇಡ, ಹಗಲೂ ರಾತ್ರಿ ಪ್ರೋಟಿನ್ ಶೇಕ್ ಕುಡಿದರೆ ಸಾಕು. ಆದರೂ ಅನುಮಾನದಿಂದ ಕೇಳಿದೆ, ”ಖರ್ಚು ಎಷ್ಟಾಗುತ್ತದೆ?”. ”ಹೆಚ್ಚಿಲ್ಲ ಆಂಟಿ, ತಿಂಗಳಿಗೆ ಹದಿನೈದರಿಂದ ಇಪ್ಪತ್ತು ಸಾವಿರದ ಬಿಲ್ಲಾಗುತ್ತದೆ!!!”. ನನ್ನ ಹೃದಯ ಎರಡು ಸೆಕೆಂಡಿನ ಮಟ್ಟಿಗೆ ಕೆಲಸ ಮಾಡುವುದನ್ನು ನಿಲ್ಲಿಸಿತು. 

ನನಗನ್ನಿಸಿತು ಊಟ, ತಿಂಡಿ ಬಿಟ್ಟರೆ ತಾನಾಗಿಯೇ ಸಣ್ಣಗಾಗುತ್ತೇವೆ, ಇದಕ್ಕಾಗಿ ಪ್ರೊಟೀನ್ ಶೇಕ್ ಏಕೆ ಕುಡಿಯಬೇಕು? ಅದೂ ಹದಿನೈದು, ಇಪ್ಪತ್ತು ಸಾವಿರ ಕೊಟ್ಟು? ಮನೆ ಕೆಲಸದವರ ಸಂಬಳ ಬೇರೆ. ಎಷ್ಟು ಸಣ್ಣಗಾದರೂ ಮುಖದ ಮೇಲಿನ ಸುಕ್ಕುಗಳು ಮತ್ತು ನೆರೆಗೆಗಳು ವಯಸ್ಸು ಹೇಳುತ್ತವೆ ಅನ್ನಿಸಿತು, ಸಣ್ಣಗಾಗಲು ನನ್ನದೇ ತಂತ್ರ ಅಂದರೆ ಅದೇ ವಾಕಿಂಗ್, ಯೋಗ ಸಾಕು, ಹಾಗೆ ಸ್ವಲ್ಪ ದಪ್ಪಗಿದ್ದರೆ ಇರಲಿ, ಹೆಲ್ತಿ ಲುಕ್ ಎನಿಸಿ ಎಲೆಯಲ್ಲಿ ಇದ್ದದ್ದನ್ನೆಲ್ಲಾ ಖಾಲಿ ಮಾಡಿದೆ.  

2021 ಜನವರಿ ಬಂತು, ವಾರ ಕಳೆದರೂ ಸಣ್ಣಗಾಗುವ ಬಗ್ಗೆ ಮಾತಾಗಲಿ, ಯಾವೊಂದೂ ಬದಲಾವಣೆಯಾಗಲಿ ಕಾಣದೆ ನನ್ನವರು ಮೆತ್ತಗಿನ ಸ್ವರದಲ್ಲಿ,  ”ಸಣ್ಣಗಾಗಾಲು ಏನೇನೋ ಮಾಡುತ್ತಿ, ಹೊಸ ವರ್ಷದಲ್ಲಿ ಕೊರೋನಾ ಮಾತ್ರ ಅಲ್ಲ ನನ್ನ ಫ್ಯಾಟ್ ಕೂಡ ಇಲ್ಲವಾಗುತ್ತೆ ಎನ್ನುತ್ತಿದ್ದಿ…” ಎಂದರು. ಕೊರೋನಾದೊಂದಿಗೆ ಬದುಕುತ್ತಿಲ್ಲವೇ ನಾವೀಗ ಹಾಗೆಯೇ ನನ್ನ ದೇಹದ ಫ್ಯಾಟ್ ಕೂಡ, ಅಸಲಿಗೆ ನನ್ನ ನ್ಯೂ ಇಯರ್ ರೆಸಲೂಷನ್ 2020ರಲ್ಲೇ ಕ್ಯಾನ್ಸಲ್ ಮಾಡಿದ್ದೆ ಎಂದೆ. ಗಂಡ ಮಾತಿಲ್ಲದೆ ಕೊರೋನಾ ನ್ಯೂಸ್ ನೋಡುವುದನ್ನು ಮುಂದುವರಿಸಿದರು.  


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter