ನಾನು ಹುಟ್ಟಿ ಬೆಳೆದ ಊರಿನಲ್ಲಿ ಸುಮಾರು ಮುನ್ನೂರು ಮುಸ್ಲಿಮ್ ಮನೆಗಳಿದ್ದವು. ಅದರಲ್ಲಿ ಶ್ರೀಮಂತರು ಅನ್ನುವುದು ಬೆರಳಣಿಕೆಯಷ್ಟು ಮಾತ್ರ. ಈಗಿನಂತೆ ಆಗ ಮದುವೆಗಾಗಿ ಕಲ್ಯಾಣ ಮಂಟಪವಾಗಲಿ, ಸಭಾಂಗಣವಾಗಲಿ ಅಥವಾ ಮಸೀದಿಯ ಹಾಲ್‌ಗಳಾಗಲಿ ಲಭ್ಯವಿರಲಿಲ್ಲ. ಮನೆಯಲ್ಲಿ ವಿಶಾಲ ಅಂಗಳವಿದ್ದರೆ, ಅದಕ್ಕೇ ದೊಡ್ಡ ಚಪ್ಪರ. ಅಕ್ಕ ಪಕ್ಕದಲ್ಲಿ ಹೊಲಗದ್ದೆಗಳಿದ್ದರೆ, ಅದಕ್ಕೇ ಶಾಮಿಯಾನ. ಇಲ್ಲದಿದ್ದರೆ ಒಳ ರಸ್ತೆಯಲ್ಲಿಯೇ ಹತ್ತಾರು ಕುರ್ಚಿಗಳನ್ನಿಟ್ಟು ಅಲ್ಲೇ ಸಭಾಂಗಣ. ಹೆಚ್ಚಾಗಿ ಲಗ್ನಗಳು ಬೇಸಿಗೆಯ ಕಾಲದಲ್ಲಿಯೇ ಜರುಗುತ್ತಿದ್ದವು. ಮಕ್ಕಳ ಶಾಲಾವಾರ್ಷಿಕ ಪರೀಕ್ಷೆಗಳು ಮುಗಿದಂತೆ, ಸಾಲು ಸಾಲು ಮದುವೆಗಳು ಓಡೋಡಿ ಬರುತ್ತಿದ್ದವು. ಕೆಲವೊಮ್ಮೆ ಈ ಮದುವೆಗಳು ರಾತ್ರಿಯ ವೇಳೆಯಲ್ಲೂ ಜರುಗುತ್ತಿದ್ದವು. ಅವು ಒಂದಿಷ್ಟು ರಗಳೆ ಅನಿಸಿದರೂ, ಒಳ್ಳೆಯ ಮನೋರಂಜನೆಯನ್ನೂ ನೀಡುತ್ತಿದ್ದವು. ದಿಬ್ಬಣದ ಮೆರವಣಿಗೆ ಬಂದು, ನಿಖಾವಾಗಿ, ಊಟ ಮುಗಿಸಿದಾಗ ಮಧ್ಯ ರಾತ್ರಿಯೇ ದಾಟಿ ಹೋಗುತ್ತಿತ್ತು. ನಮ್ಮಂತಹ ಮಕ್ಕಳಿಗೆ ಆಗ ಮೇಜು, ಕುರ್ಚಿ, ಬೆಂಚು, ಸೋಫಾ ಸಿಕ್ಕಿದರೆ ಸಾಕು. ಅಲ್ಲೇ ಸೊಂಪಾದ ನಿದ್ದೆ! ನಂತರ ನಮ್ಮನ್ನು ಯಾರು ಎತ್ತಿಕೊಂಡರು, ಎಲ್ಲಿ ಮಲಗಿಸಿದರು, ಯಾವಾಗ ಮನೆಗೆ ಕರಕೊಂಡು ಬಂದರು… ಅನ್ನುವುದು ಗೊತ್ತೇ ಇರುತ್ತಿರಲಿಲ್ಲ. ಬಿಸಿಯಾದ ಗೀ ರೈಸ್ (ಪಲಾವ್) ಮತ್ತು ಮಾಂಸದ ಸಾರು ಹೊಟ್ಟೆಗೆ ಸೇರಿದರೆ ಸಾಕು, ಅಲ್ಲೇ ನಿದ್ರೆಯ ಅಮಲು ಏರಿಕೊಳ್ಳುತ್ತಿತ್ತು. ಆಗ ಕಣ್ಣು ಮುಚ್ಚಿದರೆ, ಮತ್ತೆ ತೆರೆಯುವುದು ಮುಂಜಾನೆ ಮಾತ್ರ!
ಅಂದು, ರಾತ್ರಿ ದಿಬ್ಬಣದ ಜೊತೆಗೆ ನಡೆಯುವಾಗ ಗ್ಯಾಸ್ ಲೈಟುಗಳು ಇರುತ್ತಿದ್ದವು. ಅದನ್ನು ಬಾಡಿಗೆಗೆ ಕೊಡುವ ಅಂಗಡಿಗಳೂ ಇದ್ದವು. ಆದರೆ ಅವುಗಳಿಗೆ ಮುಂಚಿತವಾಗಿ ಬುಕ್ಕಿಂಗ್ ಮಾಡಬೇಕಾಗಿತ್ತು. ಇಲ್ಲದಿದ್ದರೆ ಅವು ಊರಿನಲ್ಲಿ ಜರುಗುವ ಇತರ ಭೂತದ ಕೋಲ, ಯಕ್ಷಗಾನ, ಉರೂಸ್, ನಾಗಮಂಡಲ, ಅಷ್ಟಮಂಗಲ ಇತ್ಯಾದಿ ಕಾರ್ಯಕ್ರಮಗಳಿಗೆ ಹೋಗಿ ಬಿಡುತ್ತಿದ್ದವು.
ಈಗಿನ ಮದುವೆಗಳಲ್ಲಿ ಸ್ವಯಂ ಸೇವಕರು (volunteers) ಇರುವಂತೆ, ಆಗ ಈ ಗ್ಯಾಸ್ ಲೈಟುಗಳನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯಲು ತರುಣರ ಪಂಗಡ ಇರುತ್ತಿತ್ತು. ಅವರಿಗೆ ಬಿಳಿ ಬೆಳಕು ಸೂಸುವ ಈ ಲೈಟುಗಳನ್ನು ಹಿಡಿದುಕೊಂಡು ಸಾಗುವುದೇ ಒಂದು ಹೆಮ್ಮೆ, ಸಂತೋಷ. ಮದುಮಗನ ಅಕ್ಕ ಪಕ್ಕದಲ್ಲಿ ಎರಡು ಗ್ಯಾಸ್ ಲೈಟುಗಳನ್ನು ಹಿಡಿದ ತರುಣರಿದ್ದರೆ, ನಡುವೆ ಹಾಗೂ ಕೊನೆಯಲ್ಲಿ ಉಳಿದ ಹುಡುಗರು ಇರುತ್ತಿದ್ದರು. ”ಯಾ ನಬೀ ಸಲಾಂ ಅಲೈಕುಮ್, ಯಾ ರಸೂಲ್, ಸಲಾಂ ಅಲೈಕುಮ್” ಎಂದು ರಾಗಬದ್ಧವಾಗಿ ಹಾಡುವ ಈ ‘ಸಾಲತ್’ (ಒಂದು ರೀತಿಯ ಕಾವ್ಯ)ಗೆ ಉಳಿದ ಹಿರಿಯರು ಸಾಥ್ ನೀಡುತ್ತಿದ್ದರು.
ಕನ್ಯೆಯ ಮನೆಯು ಹತ್ತಿರವಾದಂತೆ, ಈ ಸಾಲತ್‌ಗೆ ಅಂತ್ಯ ಬೀಳುತ್ತಿತ್ತು. ಕನ್ಯೆಯ ಸಹೋದರನೋ, ಮಾವನೋ ವರನ ಕೈಗೆ ಹೂಗುಚ್ಛ ನೀಡಿ, ಕೊರಳಿಗೆ ಹೂವಿನ ಮಾಲೆ ಹಾಕಿ ಸ್ವಾಗತ ನೀಡುತ್ತಿದ್ದ. ಆಗಮಿಸಿದ ಅತಿಥಿಗಳು ಮದುವೆ ಮನೆಯಲ್ಲಿ ಆಸೀನರಾಗುತ್ತಿದ್ದರು. ಆಗ ಅವರ ಮೇಲೆ ಗುಲಾಬಿಯ ನೀರನ್ನು ಸಿಂಪಡಿಸುತ್ತಿದ್ದರು. ಅಷ್ಟರಲ್ಲಿ ತರುಣರು ತಮ್ಮ ಭುಜದಿಂದ ಗ್ಯಾಸ್ ಲೈಟುಗಳನ್ನು ಇಳಿಸಿ ಅದಕ್ಕೊಂದು ಜಾಗ ಮಾಡಿಕೊಡುತ್ತಿದ್ದರು. ಅಲ್ಲದೆ ಒಂದಿಷ್ಟು ಮಂದವಾಗಿರುತ್ತಿದ್ದ ಆ ಗ್ಯಾಸ್ ಲೈಟುಗಳಿಗೆ ಗಾಳಿಯ ದಮ್ಮು ನೀಡಿ ಅವು ಇನ್ನಷ್ಟು ಪ್ರಕಾಶಮಾನವಾಗಿ ಬೆಳಗಲು ಸಹಾಯ ಮಾಡುತ್ತಿದ್ದರು.
ಇಷ್ಟರಲ್ಲಿ ಖಾಜಿಗಳು (ಧರ್ಮಗುರು), ನಿಖಾ (ವಿವಾಹ ಒಪ್ಪಂದ) ಓದಿಸಲು ಸಿದ್ಧತೆ ಮಾಡುತ್ತಿದ್ದರು. ಅದು ಮುಗಿದಂತೆ, ಎಲ್ಲರಿಗೂ ಖರ್ಜೂರ ಮತ್ತು ಕಲ್ಲು ಸಕ್ಕರೆಯನ್ನು ವಿತರಣೆ ಮಾಡುತ್ತಿದ್ದರು. ಅದನ್ನೂ ನಮ್ಮ ಪರಿಚಿತರೇ ಹಂಚಿದರೆ, ನಮಗೆ ಒಂದೆರಡು ಕಲ್ಲು ಸಕ್ಕರೆಗಳು ಹೆಚ್ಚುವರಿಯಾಗಿ ಸಿಗುತ್ತಿದ್ದವು. ಅದನ್ನು ನಾವು ಕಿಸೆಯಲ್ಲಿಟ್ಟು ಮನೆಗೆ ಕೊಂಡು ಹೋಗುತ್ತಿದ್ದೆವು. ತಮ್ಮನಿಗೂ, ತಂಗಿಗೂ ಅಕ್ಕರೆಯಿಂದ ನೀಡುತ್ತಿದ್ದೆವು. ಒಣ ಖರ್ಜೂರಕ್ಕೆ ಒಂದಿಷ್ಟು ಹೆಚ್ಚು ಬೆಲೆಯಾದ ಕಾರಣ ಅದು ಅಷ್ಟು ಸುಲಭವಾಗಿ ದೊರೆಯುತ್ತಿರಲಿಲ್ಲ.
ನಿಖಾ ಮುಗಿದ ಬಳಿಕ ಊಟದ ಸಮಯ. ಮೊದಲಾಗಿ ಪರವೂರಿನಿಂದ ಬಂದ ಅತಿಥಿಗಳಿಗೆ ಊಟಕ್ಕೆ ಕುಳಿತುಕೊಳ್ಳಲು ಮೊದಲ ಆದ್ಯತೆ. ಕನ್ಯೆಯ ಕಡೆಯವರು ಒಂದು ಬಕೇಟನ್ನು ಹಿಡಿದು, ಅದರಲ್ಲಿ ಅವರ ಕೈ ತೊಳೆಸಿಯೇ ಊಟಕ್ಕೆ ಆಹ್ವಾನ ನೀಡುತ್ತಿದ್ದರು. ಇದೊಂದು ಬಹಳ ಕಾಲದಿಂದ ಜಾರಿಯಲ್ಲಿದ್ದ ಸಂಪ್ರದಾಯ. ಇದು ಬಿಟ್ಟು ಕೈ ತೊಳೆಯದೆ ನಾವಾಗಿಯೇ ಎದ್ದು ಹೋದರೆ, ಅಲ್ಲಿ ಗೌರವ ಮನ್ನಣೆಯೇ ಸಿಗುತ್ತಿರಲಿಲ್ಲ – ಅದು ಅಸಂಸ್ಕೃತಿ ಅನಿಸುತ್ತಿತ್ತು.
ಇನ್ನು ಊಟದ ವಿಭಾಗಕ್ಕೆ ಹೋದರೆ ಅಲ್ಲಿ ಸಾಲಾಗಿ ಜೋಡಿಸಿರುವ ಕಬ್ಬಿಣದ ಮೇಜುಗಳು. ಅದರಲ್ಲಿ ಅಲ್ಯುಮಿನಿಯಂನ ಬಟ್ಟಲುಗಳು ಹಾಗೂ ಸಾರು ಹಾಕುವ ತಟ್ಟೆಗಳು. ಅಲ್ಲಿಯ ಚಮಚವನ್ನು ಸರಿಸಿ ನೋಡಿದರೆ, ಅದರಲ್ಲಿ ಎರಡು ಕುರಿ ಮಾಂಸದ ತುಂಡುಗಳು ಹಾಗೂ ಒಂದು ಬಟಾಟೆಯ ತುಂಡು ಕಾಣಿಸುತ್ತಿತ್ತು. ಈ ತುಪ್ಪದ ಅನ್ನಕ್ಕೆ(ಪಲಾವ್), ಈ ಸಾರು ಬೆರೆಸಿ ತಿಂದರೆ ಅದರ ರುಚಿಯೇ ಸ್ವಾದಿಷ್ಟ. ಮಾಂಸದ ಸಾರು ಮುಗಿದಂತೆ, ನಂತರ ತೊಗರಿ ಬೇಳೆಯ ಸಾರು ಹಾಜರು ಆಗುತ್ತಿತ್ತು. ಎರಡು ಮೂರು ಸ್ವಯಂ ಸೇವಕ ಹುಡುಗರು ಅದನ್ನು ನೇರವಾಗಿ ಬಟ್ಟಲಿಗೆ ಸುರಿಯುತ್ತಿದ್ದರು. ಚಿಕ್ಕ ಅಲ್ಯುಮಿನಿಯಂ ಬಾಲ್ಡಿಯಲ್ಲಿ ಅದನ್ನು ತುಂಬಿಸಿಕೊಂಡು, ‘ದಾಲ್ ದಾಲ್’ ಅನ್ನುತ್ತ ಮೇಜಿನ ಸುತ್ತ ಪ್ರದಕ್ಷಿಣೆ ಬರುತ್ತಿದ್ದರು. ಕೆಲವೊಮ್ಮೆ ಅನುಭವವಿಲ್ಲದ ಹುಡುಗರು, ಈ ಬಿಸಿಬಿಸಿ ದಾಲ್‌ನ್ನು ಚಿಕ್ಕಮಕ್ಕಳ, ಹೆಂಗಸರ ಮೈ ಮೇಲೆ ಸುರಿದ್ದದ್ದೂ ಉಂಟು. ಹೆಚ್ಚಾಗಿ ಈ ತೊಗರಿ ಬೇಳೆ (ದಾಲ್)ಯ ಸಾರಿಗೆ ಉಡುಪಿಯ ಗುಳ್ಳೆ ಬದನೆ ಅಥವಾ ಸೌತೆಕಾಯಿ ಬೆರೆಸುತ್ತಿದ್ದರು. ಅದರ ರುಚಿಯಂತೂ ಅದ್ಭುತ.
ಸಾಮಾನ್ಯವಾಗಿ ಮದುವೆ ಊಟದ ವಿಭಾಗದಲ್ಲಿ ಹಿರಿಯರಿಗೆ ಮತ್ತು ಕಿರಿಯರಿಗೆ ಪ್ರತ್ಯೇಕ ವ್ಯವಸ್ಥೆ ಇರುತ್ತಿತ್ತು. ಮಕ್ಕಳಿಗೆ ಚಾಪೆಯನ್ನು ಹಾಕಿ, ನೆಲದ ಮೇಲೆಯೇ ಕೂರಿಸಿ ಊಟ ಬಡಿಸುತ್ತಿದ್ದರು. ಅವರ ಸಾರಿನ ತಟ್ಟೆಯಲ್ಲಿ ಚಿಕ್ಕದಾದ ಒಂದೇ ಒಂದು ಮಾಂಸದ ತುಂಡು ಮತ್ತು ಬಟಾಟೆಯ ತುಂಡು ಇರುತ್ತಿತ್ತು. ಸಾರನ್ನು ಹೀರಲು ಚಮಚೆಯಂತೂ ನೀಡುತ್ತಲೇ ಇರಲಿಲ್ಲ. ಅಲ್ಲದೆ ಅನ್ನದ ಬಟ್ಟಲು ಕೂಡ ಅಂಕು ಡೊಂಕು. ನೆಲದಲ್ಲಿ ಇಟ್ಟರೆ ತಟಸ್ಥವಾಗಿ ನಿಲ್ಲುವುದೇ ಇಲ್ಲ. ನಾವೇ ಅದನ್ನು ತಟ್ಟಿ, ಗುದ್ದಿ ನೆಟ್ಟಗೆ ಮಾಡಿಕೊಳ್ಳಬೇಕು. ರಹಸ್ಯ ಎಂದರೆ ಈ ಅನ್ನದ ಬಟ್ಟಲುಗಳು ಸುಮಾರು 700 – 800 ಮದುವೆಗಳ ಸೇವೆ ಮಾಡಿಕೊಂಡಿರುತ್ತಿದ್ದವು. ಟೆಂಪೋದವನು ಸುರಿಯುವ ರಭಸಕ್ಕೆ, ಪಾತ್ರೆ ತೊಳೆಯುವವರ ಕೋಪಕ್ಕೆ ಅವು ತಮ್ಮ ಸ್ವರೂಪವನ್ನೇ ಬಿಗಾಡಾಯಿಸಿಕೊಂಡಿರುತ್ತವೆ. ಮುಂದೆ ಅದನ್ನು ಪ್ರತ್ಯೇಕ ಮಾಡಿ, ಅದರ ಹಿಂಬದಿಯಲ್ಲಿ ಗುರುತಿಗಾಗಿ ಯಾವುದಾದರೂ ಬಣ್ಣದ ಚಿಹ್ನೆ (ಮಾರ್ಕ್) ಹಾಕುತ್ತಾರೆ. ಅದನ್ನು ಮುಂದೆ ಬರೇ ಮಕ್ಕಳಿಗಾಗಿ ಮೀಸಲು ಇಡುತ್ತಾರೆ. ನಮ್ಮಂತಹ ಮಕ್ಕಳಂತೂ ಹಸಿವೆಯ ಬೇಗೆಗೆ, ಊಟದ ರುಚಿಗೆ ರೊಚ್ಚಿಗೇಳುತ್ತಿರಲಿಲ್ಲ. ನಮಗೆ ‘ಪಲಾವ್ – ಗೋಶ್’ ಸಿಕ್ಕರೆ ಸಾಕು, ತೆಪ್ಪಗೆ ಊಟ ಮಾಡಿ ಕೈ ತೊಳೆದು ಕೊಳ್ಳುತ್ತಿದ್ದೆವು.
ಕೆಲವು ಮನೆಗಳಲ್ಲಿ ಮದುವೆಗಳು ದಿಢೀರ್ ಆಗಿ ಜರುಗಿ ಬಿಡುತ್ತಿದ್ದವು. ”ಝಟ್ ಮಂಗ್‌ನೀ, ಪಟ್ ಶಾದಿ” (ಅನಿರೀಕ್ಷಿತ ನಿಶ್ಚಯ, ದಿಢೀರ್ ಲಗ್ನ) ಗಾದೆಯಂತೆ! ಅಂತಹ ಮನೆಗಳಲ್ಲಿ ತರಾತುರಿಯಲ್ಲಿ ಸುಣ್ಣ – ಬಣ್ಣ ಬಳಿದು ಗೋಡೆಗಳನ್ನು ಚೆಂದ ಕಾಣಿಸುತ್ತಿದ್ದರು. ಮಣ್ಣಿನ ಗೋಡೆಯ ಕೆಳಹಂತದಲ್ಲಿ ಗೇರು ಸಿಪ್ಪೆಯ ಮಡ್ಡಿ ಟಾರು ಹಚ್ಚುತ್ತಿದ್ದರು. ಇರುವೆ ಗೆದ್ದಲಿನಿಂದ ರಕ್ಷಿಸಲು ಈ ಉಪಾಯವಾದರೂ, ಅದರ ದಟ್ಟ ಘಾಟುವಾಸನೆಯಂತೂ ಎಲ್ಲೆಡೆ ಪಸರಿಸಿ ಬಿಡುತ್ತಿತ್ತು. ಆಗಿನ ಕಾಲದಲ್ಲಿ ದೂರದ ಸಂಬಂಧಿಗಳು ಎರಡು ಮೂರು ದಿನಗಳ ಮುಂಚಿತವಾಗಿಯೇ ಮದುವೆ ಮನೆಗೆ ಆಗಮಿಸುತ್ತಿದ್ದರು. ಹಿರಿಯರು ಆದರೆ, ಅಡಿಕೆ ಎಲೆ ಮೆಲ್ಲುತ್ತಲೋ, ನಶ್ಯ ಮೂಗಿಗೆ ಏರಿಸುತ್ತಲೋ, ಚಾ-ಕಾಫಿ ಸೇವಿಸುತ್ತಲೋ ಈ ಗೋಡೆಗಳಿಗೆ ಮೆಲ್ಲನೆ ಒರಗಿಕೊಳ್ಳುತ್ತಿದ್ದರು. ಒಂದಿಷ್ಟು ಸಮಯದ ಬಳಿಕ ಏಳಲು ಪ್ರಯತ್ನಿಸಿದಾಗ ಅವರಿಗೆ ಯಾವುದೋ ಅಗೋಚರ ಶಕ್ತಿಯು ಹಿಂದಕ್ಕೆ ಎಳೆದಿಟ್ಟ ಹಾಗೆ ಅನುಭವವಾಗುತ್ತಿತ್ತು. ಇನ್ನಷ್ಟು ಪ್ರಯತ್ನ ಮಾಡಿ, ಏಳಲು ಯತ್ನಿಸಿದಾಗ, ಅಂಗಿ ಅಥವಾ ಬನಿಯಾನಿನ ಜೊತೆಗೆ ಈ ಮಡ್ಡಿ ಟಾರು ಕೂಡ ಅಂಟಿಕೊಂಡೇ ಬರುತ್ತಿತ್ತು. ಆದರೆ ಮದುವೆ ಮನೆ ಮಂದಿಗೆ ಬೈಯುವಂತಿಲ್ಲ, ಬಿಡುವಂತಿಲ್ಲ. ಒಂದು ರೀತಿಯ ಧರ್ಮ ಸಂಕಟ! ಅಂದ ಹಾಗೆ ಈ ಜಿಡ್ಡು ಸುಲಭವಾಗಿ ಕಳೆದು ಹೋಗುವ ಅಸಾಮಿಯೂ ಅಲ್ಲ. ಸೀಮೆ ಎಣ್ಣೆ, ಪೆಟ್ರೋಲ್ ಹಾಕಿ ಶುಭ್ರಗೊಳಿಸಿದರೂ ಕಲೆ ಬೇಗ ಮಾಸದು. ಅಲ್ಲಿ ಓಡಾಡುವ ಮಕ್ಕಳ ಚಡ್ಡಿ – ಬನಿಯಾನ್‌ಗಳು ನೋಡಿದರೆ ಈ ಸಾಕ್ಷ್ಯ ಸಿಗುತ್ತಿತ್ತು. ಅವರ ಅಂಗಿಗಳಂತೂ ಗೋಡೆಗೆ ಬಡಿದ ಸುಣ್ಣದ ವಾಸನೆ ಅದರಲ್ಲೇ ಅಂಟಿಕೊಂಡು ಇರುತ್ತಿತ್ತು. ಆದರೆ ಮದುವೆಯ ಗಲಾಟೆಯಲ್ಲಿ ಅದನ್ನು ಗಮನಿಸಲು ಯಾರಿಗೂ ವ್ಯವಧಾನವೇ ಇರುತ್ತಿರಲಿಲ್ಲ.
ಇನ್ನು ಮದುವೆಯ ಕೊನೆಯ ಹಂತ, ಕನ್ಯೆಯ ಬೀಳ್ಕೊಡುಗೆ, ಅದನ್ನು ‘ಬಿದಾಯಿ‘ ಎನ್ನುತ್ತಾರೆ. ಅಲ್ಲಿಯವರೆಗೆ ಹ್ಯಾಪ್ಪಿ ಮೂಡ್ನಲ್ಲಿದ್ದ ವಾತಾವರಣವು ‘ಟ್ರೆಜೆಡಿ‘ ಸೀನ್ಗೆ ಬದಲಾಗಿ ಬಿಡುತ್ತಿತ್ತು. ತಮ್ಮ ಮನೆಯ ಅಂಗಳದಲ್ಲಿ ಬೆಳೆದ ಮುದ್ದಿನ ಮಗಳು ಈಗ ತವರಿನ ಬೇರನ್ನು ಕಿತ್ತು ಹೊರಟು ಹೋಗುವಾಗ ಸಹಜವಾಗಿ ಎಲ್ಲರಿಗೂ ದುಃಖವಾಗುತ್ತಿತ್ತು. ಆ ಹೆಣ್ಣು ಮಗಳಿಗೂ ಅಷ್ಟೆ. ಸಹಿಸಲಾರದ ನೋವು, ಸಂಕಟ. ತನ್ನ ಮುಂದಿನ ಬದುಕು, ಭವಿಷ್ಯ ಹೊಸ ಮನೆಯಲ್ಲಿ ಹೇಗೆ ಇರುತ್ತದೆ ಅನ್ನುವ ಗೊಂದಲ, ತಳಮಳ. ಕೈ ಹಿಡಿಯುವ ಪತಿಯು, ಭಾಗ್ಯಶಾಲಿಯೋ, ದುಷ್ಟನೋ ಅನ್ನುವ ಭಯ, ಆತಂಕ! ಬೀಳ್ಕುಡುವ ಈ ಸಂದರ್ಭದಲ್ಲಿ ಆಕೆಯನ್ನು ಒಬ್ಬೊಬ್ಬರೇ ತಬ್ಬಿಕೊಂಡಾಗ, ಅವಳ ಕಣ್ಣುಗಳಲ್ಲಿ ನಿಲ್ಲಲಾರದೆ ಅಶ್ರುಧಾರೆ. ಸಹೋದರ, ಸಹೋದರಿಯರು ಆಲಂಗಿಸಿಕೊಂಡಾಗ ಇನ್ನಷ್ಟು ದುಃಖ ಉಮ್ಮಳಿಸಿ ಬರುತ್ತದೆ. ಇದೇ ಘಳಿಗೆಯನ್ನು ಕಾದು ಕುಳಿತಿರುವ ಮೈಕ್ಸೈಟಿನವರು, ‘ಬಾಬುಲ್ ಕೆ ದುವಾಯೇ ಲೇತೇ ಜಾ, ಜಾ ತುಜೆ ಸುಖಿ ಸಂಸಾರ್ ಮಿಲೆ‘ ಎಂಬ ವೇದನೆಯ ಹಾಡನ್ನು ಗಾಳಿಯಲ್ಲಿ ತೇಲಿಸಿ ಬಿಡುತ್ತಿದ್ದ. ಗಾಯಕ ಮಹಮ್ಮದ್ ರಫಿ ಅವರ ಆ ನೋವಿನ ಆಲಾಪಕ್ಕೆ ಅಲ್ಲಿದ್ದ ಉಳಿದವರೂ ಕಣ್ಣೀರು ಹಾಕುತ್ತಿದ್ದರು. ಇದೇ ಸಂದರ್ಭದಲ್ಲಿ ಹೆತ್ತವರು ತಮ್ಮ ಮಗಳ ಕೈಗಳನ್ನು ಮದುಮಗನ ಕೈಗೆ ನೀಡುತ್ತಿದ್ದರು. ಆಗ ದುಃಖದ ಕಟ್ಟೆಯೇ ಒಡೆಯುತ್ತಿತ್ತು. ಹಿರಿಯವರಿಂದ ಕಿರಿಯರವರೆಗೂ ಎಲ್ಲೆಡೆ ಅಳುವ ದೃಶ್ಯವೇ ಕಾಣಿಸುತ್ತಿತ್ತು. ಕೊನೆಗೆ ಮದುಮಗಳು ಬಸ್ಸೋ, ಕಾರೋ ಹತ್ತಿ ಹೊರಟಾಗ ಎಲ್ಲೆಡೆ ಮೌನ. ಎಲ್ಲರೂ ಆಕೆ ಹೊರಟ ದಾರಿಯನ್ನೇ ನೋಡುತ್ತಿದ್ದರು.
ಏನೇ ಇರಲಿ, ಅಂದಿನ ಮದುವೆಗಳ ಸ್ವಾರಸ್ಯ, ಸಂಭ್ರಮ, ಉತ್ಸಾಹ ಇಂದಿನ ಮದುವೆಗಳಲ್ಲಿ ಕಾಣ ಸಿಗುತ್ತಿಲ್ಲ. ಅದನ್ನು ಅದೆಷ್ಟು ಖರ್ಚು ಮಾಡಿ, ಅದ್ದೂರಿಯಾಗಿ ಮಾಡಿದರೂ, ಅಂದಿನ ಖುಷಿ ನೀಡುವುದಿಲ್ಲ. ಆ ಊಟದ ರುಚಿಯಾಗಲೀ, ಸಂಬಂಧಗಳ ಆತ್ಮೀಯತೆ, ಪ್ರೀತಿಯಾಗಲೀ ಈಗ ಇಲ್ಲವೇ ಇಲ್ಲ. ಏನಿದ್ದರೂ ಈಗ ಬರೇ ಮುಖವಾಡ. ಆ ಮದುವೆಯ ದಿನಗಳು ಖಂಡಿತ ಮತ್ತೆ ಮರಳಿ ಬರಲಾರವು. ಅವು ಬರೇ ನೆನಪುಗಳು ಮಾತ್ರ!