ನಡೆವ ಹಾದಿಯಲಿ
ಕಂದಕಗಳ ಸರಮಾಲೆ
ನಡುನಡುವೆ
ಸೆರೆಯ ಸರಳುಗಳು
ಅಂಜಿ ಅಳುಕದೆ ದಾಟಿ
ಜಿಗಿದು ಪಾರಾಗಿಬಿಡು
ಮುಳ್ಳು ತಾಕಿದರೇನಂತೆ
ಇಣುಕಿ ನೋಡಲೆಣಿಸದಿರು
ಮಾಸದ ಹೆಜ್ಜೆ ಗುರುತುಗಳು
ರಾಚಿಬಿಟ್ಟಾವು ಒಮ್ಮೆಲೆ!
ಇದು ಬದುಕಲ್ಲವೇ
ಸಂತೆಯ ಜಗುಲಿಯಲ್ಲ
ಇಟ್ಟ ಹೆಜ್ಜೆಗಳೆಲ್ಲ
ನಮ್ಮದೇನಲ್ಲ
ಎಲ್ಲಿಯೋ ಇದ್ದವರು
ಎಲ್ಲಿಂದಲೋ ಬಂದವರು
ಎತ್ತಲೋ ಹೊರಟವರು;
ಪಾದ ನಮ್ಮದು ಹೆಜ್ಜೆಯಲ್ಲ
ಅಡಿಗಡಿಗೆ ಎಡತಾಕಿದ
ಮೈಲಿಗಲ್ಲುಗಳಲಡಗಿವೆ
ಪಯಣದುಸಿರಿನ ನಿಟ್ಟುಸಿರು
ಅಂತರಾಳದ ಬಿಸಿಯುಸಿರು!
ಒಮ್ಮೆ ಎದುರಾದೀತು
ಬಟ್ಟ ಬಯಲು
ಬಯಲಿನಾಚೆಯ ಬೇಲಿ
ಜೋಲಿಯಾದೀತೇ;
ನೆನಪಿನ
ಚಿಲುಮೆಗಳು ಬತ್ತಿ
ಬಿಸಿಬುಗ್ಗೆಗಳುಕ್ಕಿದಾಗ
ಮಾಸದ ಗಾಯಗಳಲಿ
ಕಂಡೀತು ಕಳೆದ ಆ
ಕ್ಷಣಗಳು ಮರೆತ
ವಿಷ ಘಳಿಗೆಗಳು!
ಬದುಕು
ಮರುಭೂಮಿಯಾದರೂ
ನಂಟು ಓಯಸಿಸ್ ಅಲ್ಲ
ಬಿಸಿಮರಳ ಕಣಗಳಲೂ
ಜೀವಂತಿಕೆಯುಂಟು
ನಾಡಿಯೊಳಗಿನ ನೆತ್ತರಿಗೆ
ಸಂಬಂಧದ ಹಂಗಿಲ್ಲ;
ದಡದಂಚಿನ
ನಾವೆಗೆ ಜಲದಾಳದ ಚಿಂತೆ
ಹರಿಗೋಲಿನದಲ್ಲ
ಜಲದೊಳಗಿನ
ಶಶಿಗೆ ಸ್ವಂತಿಕೆಯ ಸೋಗಿಲ್ಲ!
ದಿಗಂತದಡದಲಿ ನಿಂತು
ಹಿಂದಿರುಗಿ ನೋಡದಿರು
ಅಲೆಗಳೋ
ತರಗೆಲೆಗಳೋ ಪತನದ
ನೆಲೆಗಳನು
ತೇಲಿಸಿಬಿಡುತ್ತವೆ
ಮರೆಮಾಚಿಬಿಡುತ್ತವೆ;
ಸವೆದ ಹಾದಿಯ ಸುತ್ತ
ನೆರಳುಗಳೋ
ನಿಂತ ನೆಲೆಯ
ಪಳೆಯುಳಿಕೆಗಳೋ
ಮನದರ್ಪಣದೊಳೊಮ್ಮೆ
ಇಣುಕಿದರೆ ಸಾಕು