ಅನಂತಮೂರ್ತಿ ಮತ್ತು ‘ರುಜುವಾತು’ ಎಂಬ ಸಾಹಿತ್ಯ ಪತ್ರಿಕೆ – ಕೆಲವು ನೆನಪುಗಳು

ಕನ್ನಡ ಸಾಹಿತ್ಯಕ್ಕೆ 1994 ರಲ್ಲಿ ಆರನೆಯ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ (ಯು. ಆರ್. ಅನಂತಮೂರ್ತಿ) ಅವರ  ಜನ್ಮದಿನ ಡಿಸೆಂಬರ್ 21( 1932). ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಜನಿಸಿದವರು.

ಕಳೆದ ಡಿ. 21 ರಂದು ಅನಂತಮೂರ್ತಿಯವರ ಕೆಲವು ಕೃತಿಗಳನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳಲು ಮುಂದಾದೆ. ಆವಾಗ ಹಳೆಯ ರುಜುವಾತು ಸಂಚಿಕೆಗಳೂ ಸಿಕ್ಕಿದವು.

ಅನಂತಮೂರ್ತಿ ಎಂದ ಕೂಡಲೆ ನನಗೆ ನೆನಪಾಗುವುದು ಮೊದಲಿಗೆ ಅವರಸಂಸ್ಕಾರಕಾದಂಬರಿ. ಅನಂತರಭಾರತೀಪುರ‘, ‘ಸೂರ್ಯನ ಕುದುರೆ‘, ‘ಪ್ರಜ್ಞೆ ಮತ್ತು ಪರಿಸರ‘, ‘ಆಕಾಶ ಮತ್ತು ಬೆಕ್ಕು‘, ‘ಭವ‘…. ಹೀಗೆ. ಅದಕ್ಕಿಂತ ಹೆಚ್ಚು ನಾನು ಆಜೀವ ಚಂದಾದಾರ ಆಗಿದ್ದರುಜುವಾತುತ್ರೈಮಾಸಿಕ ಸಾಹಿತ್ಯ ಪತ್ರಿಕೆ. ಅವರು ‘ಭವ’ ಕಾದಂಬರಿಯನ್ನು ಹನ್ನೆರಡು ದಿನಗಳಲ್ಲಿ ಬರೆದದ್ದು.

‘ನವ್ಯ ಪಂಥ’ದ ಪ್ರಮುಖ ಲೇಖಕರು ಅನಂತಮೂರ್ತಿಯವರು. ಕ್ರಮೇಣ ಅವರು ವಿಚಾರವಾದಿಗಳ ಒಲವನ್ನು ಪಡೆಯುವಲ್ಲಿ ಯಶಸ್ವಿಯಾದರು. ಆ ಘಟನೆ ಎಲ್ಲರಿಗೂ ಗೊತ್ತೇ ಇದೆ. ಅವರ ಸಾವಿನ ನಂತರ ಅಂತ್ಯ ಸಂಸ್ಕಾರ ವಿಷಯದಲ್ಲಿ ಅತ್ತ ಪ್ರಗತಿಪರರು ಟೀಕಿಸಿ ಮತ್ತೆ ಅನಂತಮೂರ್ತಿಯವರನ್ನು ಪ್ರಾಣೇಶಾಚಾರ್ಯರ ಬದುಕಿಗೆ ಹೋಲಿಸಿ ಪ್ರತಿಕ್ರಿಯಿಸಿದರೆ, ಇತ್ತ ಮೋದಿಯವರನ್ನು ಟೀಕಿಸಿ ಮುಖಭಂಗಕ್ಕೊಳಗಾದ ಅನಂತಮೂರ್ತಿಯವರು, ಸಾವಿನ ನಂತರ ಬಲಪಂಥೀಯರು ಎನ್ನಲಾಗುವ ಜನ ಪಟಾಕಿ ಸಿಡಿಸಿ ಅವರ ಸಾವಿಗೆ ಸಂಭ್ರಮಿಸಿದ್ದು ಮತ್ತೊಂದು ಘಟನೆ.

ಅಂತೂ ಸಾವಿನನಂತರವೂ ಅವರು ಚರ್ಚೆ ಎಬ್ಬಿಸಿದ ಸಾಹಿತಿ.

ಅನಂತಮೂರ್ತಿ ಎಂದಾಗ ನನಗೆ ನೆನಪಾಗುವುದು ಅವರ ಕೈಯಿಂದ ಬಹುಮಾನ ಸ್ವೀಕರಿಸುವ ಅವಕಾಶವೊಂದು ತಪ್ಪಿಹೋದ ದುಃಖದ ಒಂದು ಪ್ರಸಂಗ. ಅದು 1988ರ ಜನವರಿ16 ಮತ್ತು 17ರ ಆ ದಿನಗಳು. ಮೂಡಬಿದ್ರೆಯ ಮಹಾವೀರ ಕಾಲೇಜ್‌ನಲ್ಲಿ ನಾಲ್ಕನೆಯ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು. ಶಿವರಾಮ ಕಾರಂತರು ಸಮ್ಮೇಳನದ ಅಧ್ಯಕ್ಷರು, ಯು.ಆರ್. ಅನಂತಮೂರ್ತಿಯವರು ಉದ್ಘಾಟಕರು. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಕಥೆ ಮತ್ತು ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ನಾನು ಮುಂಬೈಯಿಂದ ಆ ಸ್ಪರ್ಧೆಯಲ್ಲಿ ಭಾಗವಹಿಸಿದ್ದು ನನಗೆ ಕಥೆ ಮತ್ತು ಕವಿತೆ ಎರಡರಲ್ಲೂ ಪ್ರಥಮ ಬಹುಮಾನ ಬಂದಿತ್ತು. ಆವಾಗ ಫೋನ್ ವ್ಯವಸ್ಥೆ ಇರಲಿಲ್ಲ. ನನಗೆ ಬಹುಮಾನ ಬಂದಿದೆ ಎಂಬ ಪತ್ರ ದೊರೆತದ್ದು ಎರಡು ದಿನ ಮೊದಲಷ್ಟೇ. ಅಂದರೆ ಜನವರಿ 14ಕ್ಕೆ. ಅದೇ ದಿನ ಸಂಜೆಗೆ ಊರಿಗೆ  ಹೊರಡಲಾಗಲಿಲ್ಲ. ಮರುದಿನ ಬೆಳಿಗ್ಗೆ ನಾನು  ಹೊರಡಲೇ ಬೇಕಿತ್ತು. ಯಾಕಂದ್ರೆ ಸಮ್ಮೇಳನದ ದಿನ ಬೆಳಿಗ್ಗೆ ನಾನು ಮೂಡಬಿದ್ರೆಗೆ ತಲುಪಲೇಬೇಕಿತ್ತು. ಆವಾಗ ಮುಂಬೈಯಿಂದ ಸುಮಾರು 24 ಗಂಟೆಯ ದಾರಿ ಮಂಗಳೂರಿಗೆ. ಖಂಡಾಲಾ ಘಾಟ್ ಆಗಿಯೇ ಹೋಗಬೇಕಿತ್ತು. ಕೊಂಕಣ ರೈಲ್ವೆ ಆರಂಭವಾಗಿರಲಿಲ್ಲ. 

ನನ್ನ ಗ್ರಹಚಾರವೋ ಎಂಬಂತೆ ನಮ್ಮ ಬಸ್ಸು ರಾತ್ರಿಗೆ ಬೆಳಗಾವಿಯಲ್ಲಿ ಹಾಳಾಯಿತು. ಅದೂ ಎಲ್ಲೋ ಒಂದು ನಿರ್ಜನ ರಸ್ತೆಯಲ್ಲಿ. ಏನೂ ಮಾಡಲಾಗಲಿಲ್ಲ. ಡ್ರೈವರ್ ಮತ್ತೊಂದು ವಾಹನದಲ್ಲಿ ಪೇಟೆಗೆ ಹೋಗಿ ಮೆಕ್ಯಾನಿಕ್ ನನ್ನು ಕರೆತಂದು ರಿಪೇರಿ ಮಾಡುವಾಗ ಬೆಳಗಾಗಿತ್ತು. ಮತ್ತೆ ಸಂಜೆಗೆ ಬಸ್ಸು ಮಂಗಳೂರು ತಲುಪಿತ್ತು. ಹಾಗಾಗಿ ನಾನು ಸಂಜೆ ಮೂಡಬಿದ್ರೆ ತಲುಪುವಂತಾಯಿತು. ಒಂದು ವೇಳೆ ಬೆಳಿಗ್ಗೆ ಮೂಡಬಿದ್ರೆಗೆ ಬಂದಿದ್ದರೆ ಅನಂತಮೂರ್ತಿ ಅವರ ಕೈಯಿಂದ ನನ್ನ ಎರಡೂ ಬಹುಮಾನಗಳನ್ನು ಪಡೆಯಬಹುದಿತ್ತು. ಆ ಭಾಗ್ಯ ತಪ್ಪಿ ಹೋದದ್ದು ನನಗೆ ಸಾಹಿತ್ಯ ಅಕಾಡೆಮಿ ಪುಸ್ತಕ  ಪ್ರಶಸ್ತಿ ಸಿಕ್ಕಿದರೂ ಮರೆಯಲು ಸಾಧ್ಯವಾಗುತ್ತಿಲ್ಲ! ನಂತರ ಸಮಿತಿಯ ಕಾರ್ಯದರ್ಶಿ ಡಾ. ಜಯಪ್ರಕಾಶ ಮಾವಿನಕುಳಿ ಅವರು ಮಹಾವೀರ ಕಾಲೇಜಿನ ಪ್ರಾಂಶುಪಾಲರಿಂದ ನನಗೆ ಬಹುಮಾನವನ್ನು ಕೊಡಿಸಿದರು. ಅನಂತಮೂರ್ತಿಯವರು ನೆನಪಾದಾಗಲೆಲ್ಲ ಈ ಘಟನೆ  ಕಣ್ಣ ಮುಂದೆ ಬರುವುದು.



  ನನ್ನ ಸಾಹಿತ್ಯದ ಆರಂಭದ ದಿನಗಳಲ್ಲಿ 80ರ ದಶಕದ ಆರಂಭದಲ್ಲಿ ಮುಂಬಯಿಯ ಖ್ಯಾತ  ಕತೆಗಾರ ಯಶವಂತ ಚಿತ್ತಾಲರ ಮನೆಯಲ್ಲಿ ರುಜುವಾತು ನನಗೆ ನೋಡಲು  ದೊರೆಯುತ್ತಿತ್ತು. ಆ ನಂತರ ನಾನು ಕೂಡಾ  ರುಜುವಾತುಗೆ ಚಂದಾದಾರನಾದೆ. ಆಗ ವಾರ್ಷಿಕ ಚಂದಾ ಇದ್ದುದ್ದು 20 ರೂಪಾಯಿ. ಆರು ವರ್ಷದ ಚಂದಾ ನೂರು ರೂಪಾಯಿ. ಆಜೀವ ಚಂದಾ 250 ರೂಪಾಯಿ. ನಾನು 1983 ರಲ್ಲಿ ಆಜೀವ ಚಂದಾದಾರನಾದೆ.

(80- 90ರ ದಶಕದಲ್ಲಿ ರುಜುವಾತು, ಸಂಕ್ರಮಣ, ಶೂದ್ರ, ಅನ್ವೇಷಣೆ ಮೊದಲಾದ ಸಾಹಿತ್ಯ ಪತ್ರಿಕೆಗಳ ಚಂದಾದಾರ ಆಗಿದ್ದು ತಪ್ಪದೆ ನಾನು ಓದುತ್ತಿದ್ದೆ. ಶೂದ್ರ, ಸಂಕ್ರಮಣದಲ್ಲಿ ಬಂದ ನನ್ನ ಕವನಗಳು ಆವಾಗ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಸಂಕಲನಗಳಲ್ಲಿ ಪ್ರಕಟವೂ ಆಗಿದ್ದವು).

ನನಗೆ ರುಜುವಾತುನಲ್ಲಿ ಬರುತ್ತಿದ್ದ ಪದ್ಯ ಬಗೆವ ಬಗೆ ಮತ್ತು ಸಂಪಾದಕನ ಟಿಪ್ಪಣಿಗಳು ಇಷ್ಟವಾಗುತ್ತಿತ್ತು. ರುಜುವಾತು ಕೆಲವೊಮ್ಮೆ ತಡವಾಗಿ ಬರುತ್ತಿತ್ತು. ಅದು ತ್ರೈಮಾಸಿಕ. ನಾನು ಸಂಪಾದಕರಿಗೆ ಪತ್ರ ಬರೆದಾಗಲೆಲ್ಲ  ರುಜುವಾತು ಸಹಾಯಕರಾಗಿದ್ದ ಮೀನಾ ಮೈಸೂರು ಅವರೇ ಉತ್ತರ ಬರೆಯುತ್ತಿದ್ದರು. 

ಒಂದು ಸಲ ಡಾ. ರಾಜಕುಮಾರ್ ಅಭಿಮಾನಿಗಳು ಅನಂತಮೂರ್ತಿಯವರ ಜೊತೆ ವಿವಾದ ಎಬ್ಬಿಸಿ ಅವರ ಭಾಷಣಕ್ಕೆ ಅಡ್ಡಿ ಪಡಿಸಿದ್ದ ಘಟನೆ ನಾನು ಓದಿದ್ದೆ. ಆ ಕುರಿತು ನಾನು ಅವರಿಗೆ ಬರೆದ ಪತ್ರಕ್ಕೆ ಅನಂತಮೂರ್ತಿಯವರೇ ಉತ್ತರ ಬರೆದಿದ್ದರು. ಅದು ಫೆಬ್ರವರಿ 1984.

ಆ ಪತ್ರವನ್ನು ಇಂದಿಗೂ ತೆಗೆದಿರಿಸಿದ್ದೇನೆ. ಅನಂತಮೂರ್ತಿಯವರು ಬರೆದ ಪತ್ರ ಹೀಗಿತ್ತು:

ಮೈಸೂರು, 

ದಿನಾಂಕ 8 -2 -1984.

ಪ್ರಿಯ ಶ್ರೀನಿವಾಸರಾವ್ ಪಿ ಜೋಕಟ್ಟೆ, ನಿಮ್ಮ ತುಂಬು ಅಭಿಮಾನದ ಪತ್ರಕ್ಕೂ, ಆಜೀವ ಚಂದಾದಾರರಾದುದಕ್ಕೂ ಕೃತಜ್ಞ. ವೇಳೆಗೆ ಸರಿಯಾಗಿ ಪತ್ರಿಕೆ ತರಬೇಕು, ಜೊತೆಯಲ್ಲಿ ಗುಣಮಟ್ಟ ಕಾಯಬೇಕು ಎಂಬ ಪ್ರಯತ್ನದಲ್ಲಿ, ಎರಡನೆಯದನ್ನು ಎಂದೂ ಕೈ ಬಿಡಬಾರದೆಂಬ ಶಪಥ ನನ್ನದು. ಹಾಗಾಗಿ ವೇಳೆಗೆ ಸರಿಯಾಗಿ ತರಲಾಗದೆ ಹೋದಂತಿದೆ. ನೀವು ಪ್ರೀತಿಯಿಂದ ಇದನ್ನು ಮನ್ನಿಸಬೇಕು.

ಡಾ. ರಾಜಕುಮಾರ್ ಬಗ್ಗೆ ನಾನು ಯೋಚಿಸುವ ರೀತಿ ಭಿನ್ನವಾದದ್ದು. ಅವರ ಅಭಿಮಾನಿಗಳ ಸಂಘದವರು ಕನ್ನಡ ಸಿನಿಮಾದ ಬೆಳವಣಿಗೆಗೆ ಕಂಠಕ ಪ್ರಾಯರಾಗಿದ್ದಾರೆ. ಇದು ಕ್ರಮೇಣ ಎಲ್ಲರಿಗೂ ತಿಳಿಯುತ್ತದೆ. ಈಗ ಜನ ಭಯದಿಂದ ಮಾತನಾಡುತ್ತಿಲ್ಲ. ನಾನು ಮಾತನಾಡುವ ಅಪ್ರಿಯ ಕೆಲಸಕ್ಕೆ ಮುಂದಾಗಿದ್ದೇನೆ.

ನಿಮ್ಮ, 

ಅನಂತಮೂರ್ತಿ.

ಇದೊಂದು ಅವರು ನನಗೆ ಬರೆದ ಪತ್ರ ಜೋಪಾನವಾಗಿದೆ. (ನಾನು ಆಜೀವ ಚಂದಾದಾರ ಆಗಿದ್ದಕ್ಕೂ ಈ ಪತ್ರವು ಸಾಕ್ಷಿ!)

ಈ ಹೊತ್ತು ನನ್ನ ಎದುರಿಗಿದೆ ಎರಡು ರುಜುವಾತು ಸಂಚಿಕೆಗಳು. ಒಂದು, ಜನವರಿ-ಮಾರ್ಚ್ 1985ರ ಸಂಚಿಕೆ. ಅದರ ಸಂಪಾದಕರ ಟಿಪ್ಪಣಿಯಲ್ಲಿದ್ದ ಒಂದು ಮಾತು ನನಗೆ ಹೇಳಬೇಕೆನಿಸಿದೆ –

“ರೈತ ಸಂಘವೂ, ದಲಿತ ಸಂಘರ್ಷ ಸಮಿತಿಯೂ ಪರಸ್ಪರ ವಿರೋಧಿಗಳಾಗಿಯೇ ಉಳಿಯಬೇಕಿಲ್ಲ. ಅಧಿಕಾರಶಾಹಿಯ ಭ್ರಷ್ಟಾಚಾರ, ಪರಿಸರ ಸಂರಕ್ಷಣೆ, ಕಂಪ್ಯೂಟರ್ ಮೋಹದ ಆಧುನಿಕತೆ…. ಇವುಗಳ ವಿರುದ್ಧ ಈ ಎರಡು ಸಂಘಟನೆಗಳೂ ಒಟ್ಟಾಗಿ ಕೆಲಸ ಮಾಡಬಹುದು. ಪ್ರಜಾತಂತ್ರದಲ್ಲಿ ಯಾವ ಪಕ್ಷ ಅಧಿಕಾರಕ್ಕೇ ಬರಲಿ ಈ ಸಂಘಟನೆಗಳು ಬೆಳೆಸುವ ಜಾಗೃತಿ ಆಳುವವರನ್ನು ಎಚ್ಚರವಾಗಿ ಇಡಬಲ್ಲವು.”

ಇಲ್ಲಿನ ಒಂದು ಮಾತು – ಕಂಪ್ಯೂಟರ್ ಮೋಹದ ಆಧುನಿಕತೆ…..ನನ್ನ ಗಮನ ಸೆಳೆಯಿತು. ಆ ದಿನಗಳಲ್ಲಿ ಕಂಪ್ಯೂಟರಿಗೆ ವಿರೋಧಗಳು ಕಾಣಿಸತೊಡಗಿದ್ದ ದಿನಗಳು. ಕಂಪ್ಯೂಟರ್ ಕಾರಣ  ನೌಕರರ ಸಂಖ್ಯೆ ಕ್ಷೀಣಿಸುವುದು ಎಂಬ ಭಯ ಚರ್ಚೆ ಆಗುತ್ತಿದ್ದುದು ನೆನಪಾಗುತ್ತದೆ.

ಇದು ಎಂಭತ್ತರ ದಶಕದ ಸಂಗತಿ. ತೊಂಭತ್ತರ ದಶಕ ಬಂದಾಗ ಸುಮಾರು ನಾಲ್ಕು ವರ್ಷಗಳ ಕಾಲ ರುಜುವಾತು ಬರಲಿಲ್ಲ.

ಒಂದು ದಿನ (20-01-1994ರ ಪ್ರಸನ್ನ ಅವರ ಪತ್ರ ಮತ್ತು) ರುಜುವಾತು ಸಂಚಿಕೆ ಕೈಸೇರಿತು. ರುಜುವಾತು ತಂದದ್ದು ಹೆಗ್ಗೋಡಿನ‌ ಕವಿಕಾವ್ಯ ಟ್ರಸ್ಟ್. ಈವಾಗ ರುಜುವಾತು ತನ್ನ ಆಕಾರ ಬದಲಿಸಿ ಡೆಮಿ 1/ 8 ಸೈಜ್ ನಲ್ಲಿತ್ತು.

ಈಗ ಮೈಸೂರು ವಿಳಾಸವೂ ಇರಲಿಲ್ಲ. ಹೆಗ್ಗೋಡು ವಿಳಾಸ ಅದರಲ್ಲಿತ್ತು. ಅದು ಸಂಚಿಕೆ 34. ಸಂಪಾದಕೀಯ ಬಳಗದಲ್ಲೂ ಬೇರೆ ಹೆಸರುಗಳು. ವ್ಯವಸ್ಥಾಪಕ ಸಂಪಾದಕರಾಗಿ ಪ್ರಸನ್ನ ಅವರಿದ್ದರು.

ಅದರ ಸಂಪಾದಕೀಯ ಟಿಪ್ಪಣಿಯಲ್ಲಿ ಅನಂತಮೂರ್ತಿ ಬರೆದಿದ್ದರು – “ರುಜುವಾತು ಪತ್ರಿಕೆ ಮತ್ತೆ ಶುರುವಾಗುತ್ತಿದೆ. ಕೇರಳದಲ್ಲಿ ನಾನು ನಾಲ್ಕು ವರ್ಷಗಳ ಕಾಲ ಇರಬೇಕಾಗಿ ಬಂದದ್ದು ಈ ಪತ್ರಿಕೆ ನಿಲ್ಲುವುದಕ್ಕೆ ಇರುವ ಹಲವು ಕಾರಣಗಳಲ್ಲಿ ಒಂದು. ಎಲ್ಲ ಓದುಗರ ಕ್ಷಮೆಯನ್ನು ನಾನು ಕೇಳುತ್ತಿದ್ದೇನೆ. ಈ ನಾಲ್ಕೈದು ವರ್ಷಗಳಲ್ಲಿ ಪ್ರಾಜ್ಞರಿಂದ ಲೇಖನಗಳನ್ನು ಬರೆಸಿ ಒಂದು ಘನವಾದ ಉದ್ದೇಶವನ್ನು ಸಾಧಿಸಲು ನನಗೆ ವ್ಯವಧಾನ ಇಲ್ಲದೆ ಹೋಯ್ತು. ಹೆಗ್ಗೋಡಿನ ಕವಿ-ಕಾವ್ಯ ಟ್ರಸ್ಟ್ ಪ್ರಾರಂಭವಾದ್ದರಿಂದ ಮತ್ತೆ ನನ್ನ ಹಿಂದಿನ ಉತ್ಸಾಹ ಚಿಗುರಲು ಸಾಧ್ಯವಾಗಿದೆ. ಇನ್ನು ಮುಂದೆ ವರ್ಷಕ್ಕೆ ನಾಲ್ಕು ಸಂಚಿಕೆಗಳನ್ನು ತರುವ ಭರವಸೆ ಇಟ್ಟುಕೊಂಡು ಈ ಸಂಚಿಕೆಯು ಹೊರ ಬರುತ್ತಿದೆ. ಇನ್ನು ಮುಂದಿನ ಕೆಲವು ಸಂಚಿಕೆಗಳಿಗೆ ನನ್ನ ಕೆಲವು ಗೆಳೆಯರನ್ನು ಅತಿಥಿ ಸಂಪಾದಕರಾಗುವಂತೆ ನಾನು ಕೇಳಿದ್ದೇನೆ. ಅಂದರೆ ಯಾವುದಾದರೂ ಒಂದು ಘನವಾದ ವಿಷಯವನ್ನು ಕುರಿತಂತೆ ಇನ್ನು ಮುಂದಿನ ಸಂಚಿಕೆಗಳು ಮೈ ಪಡೆಯುತ್ತವೆ….. ಗಂಭೀರವಾದ ವಾಗ್ವಾದದಿಂದ ಮಾತ್ರ ಒಂದು ಸಂಸ್ಕೃತಿ ಜೀವಂತವಾಗಿ ಉಳಿಯುತ್ತದೆ ಎಂಬ ಆಶಯಕ್ಕೆ ರುಜುವಾತು ಸಂಚಿಕೆಗಳು ಬದ್ಧವಾಗಿ ಕೆಲಸ ಮಾಡುತ್ತವೆ” ಎಂದಿದ್ದರು.

ಇದನ್ನು ಗಮನಿಸಿದರೆ ಅನಂತ ಮೂರ್ತಿಯವರಿಗೆ ರುಜುವಾತು ತರಲು ಕಷ್ಟವಾಗುತ್ತಿರುವ ಸೂಚನೆಯೊಂದು  ನಮಗೆ ಅರಿವಾಗುವುದು. 

ಇದೇ ಸಮಯ ಪ್ರಸನ್ನರ ಒಂದು ಪತ್ರವೂ ನನಗೆ ಬಂದಿತ್ತು ರುಜುವಾತು ನಿಲ್ಲಿಸುವ ಕುರಿತಂತೆ. ಅದರ ಮೊದಲು ಪ್ರಸನ್ನರ ಒಂದು ಪತ್ರ ರುಜುವಾತು ಒಳಗಡೆ ಇರಿಸಿದ್ದರು .

20-01-1994 ರಪತ್ರ ಹೀಗಿತ್ತು:

ಹಲವು ತಿಂಗಳು ತಡವಾಗಿ ಪತ್ರಿಕೆ ಕೈಸೇರುತ್ತಿದೆ. ರುಜುವಾತು ಹಳೆಯ ಪತ್ರಿಕೆ. ಆದರೆ ನಮಗೆ ಪತ್ರಿಕೆ ನಡೆಸುವ ಅನುಭವ ಹೊಸದು. ಪತ್ರಿಕೆ ತಡವಾದದ್ದು ಕವಿ ಕಾವ್ಯದ ಅನನುಭವದಿಂದಾಗಿ. ಡಿಟಿಪಿ ವ್ಯವಸ್ಥೆ ಅರ್ಥಮಾಡಿಕೊಳ್ಳುವುದಕ್ಕೆ ತಡವಾಯಿತು……..

ಆಜೀವ ಚಂದಾ ಸಂಗ್ರಹಿಸುವ ಪದ್ಧತಿ ಕೈಬಿಡುವುದೇ ಉತ್ತಮ….. ದಾಖಲೆಯಲ್ಲಿರುವ ಎಲ್ಲಾ ಆಜೀವ ಚಂದಾದಾರರಿಗೆ ಹಳೆಯ ಸಂಚಿಕೆಗಳನ್ನು ಕಳುಹಿಸಲಾಗುವುದು. ಹಣ ಹಿಂದಿರುಗಿಸಬೇಕು ಎಂದು ಯಾರಾದರೂ ಅಪೇಕ್ಷೆ ಪಟ್ಟರೆ ಹಿಂದಿರುಗಿಸುತ್ತೇವೆ…..” 

– ಪ್ರಸನ್ನ.

ಹೆಚ್ಚಿನ ಸಾಹಿತ್ಯ ಪತ್ರಿಕೆಗಳು ಗುಣಮಟ್ಟ ಕಾಪಾಡಲು ಹೋಗಿ ಒಂದು ದಿನ ನಿಂತುಬಿಡುವುದು, ಚಂದಾದಾರರ ಕೊರತೆಯನ್ನು ಅನುಭವಿಸುವುದು… ‌ಇದೆಲ್ಲ ಮತ್ತೆ ಮತ್ತೆ ಪುನರಾವರ್ತನೆ ಆಗುತ್ತಲೇ ಬಂದಿದೆ. ಈ ಕುರಿತು ಬೇರೆನೆ ಲೇಖನ ಬರೆಯಬಹುದೇನೋ.

(1988 ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಬಳ್ಳಾರಿಯಲ್ಲಿ ಒಂದು ವಾರ ಕಾಲದ ಕಥಾ ಕಮ್ಮಟ ಏರ್ಪಡಿಸಲಾಗಿತ್ತು. ಆಗ ಕಮ್ಮಟದ ನಿರ್ದೇಶಕರಾಗಿದ್ದ ಡಾ. ಕೆ ವಿ ನಾರಾಯಣ ಅವರು ನಮ್ಮ ಜೊತೆ ತಮಾಷೆಯ ಮಾತಾಡುತ್ತ “ನಾವೂ ಒಂದು ಪತ್ರಿಕೆ ತರೋಣ. ಹೆಸರು ‘ಬಂದಷ್ಟು ದಿನ”’ ಎಂದದ್ದಿದೆ.)

ಅನಂತಮೂರ್ತಿಯವರಿಗೆ ಜ್ಞಾನಪೀಠ ಪ್ರಶಸ್ತಿ ದೊರೆತಾಗ ಅವರಿಗೆ 62ರ ವಯಸ್ಸು. ಕವಿ ಗೋಪಾಲಕೃಷ್ಣ ಅಡಿಗರು ಆವಾಗ ನಮ್ಮ ಜೊತೆಗೆ ಇಲ್ಲದ್ದರಿಂದ ಜ್ಞಾನಪೀಠ ಪ್ರಶಸ್ತಿಗೆ ಸದ್ಯ ಯಾರು ಇಲ್ಲದ ಕಾರಣ( ಭೈರಪ್ಪ ಇದ್ದರು!) ಅನಂತಮೂರ್ತಿಯವರಿಗೆ ನೀಡಲಾಯಿತೆ? ಎನ್ನುವ ಚರ್ಚೆಗಳನ್ನು ಕೂಡಾ ಕೇಳಿದ್ದಿದೆ.

ಅನಂತಮೂರ್ತಿಯವರು ಮಠದ ಹಿನ್ನೆಲೆಯಿಂದ ಬಂದವರು. ಬಾಲ್ಯವನ್ನು ಕಳೆದದ್ದು ಬ್ರಾಹ್ಮಣರ ಅಗ್ರಹಾರದಲ್ಲಿ. 1965 ರಲ್ಲಿ ಅವರ ಮೊದಲ ಕಾದಂಬರಿ ಸಂಸ್ಕಾರ ಬಂದಾಗ ಬಹುದೊಡ್ಡ ಕ್ರಾಂತಿ.

ಒಂದ್ಸಲ ಅನಂತಮೂರ್ತಿಯವರೇ ಹೇಳಿದ್ದಿದೆ – “ನಾನು ಬರೀಬೇಕು ಅಂತ ಅನ್ನಿಸಿದ್ದಕ್ಕೆ ಇನ್ನೊಂದು ಮುಖ್ಯ ಕಾರಣ (ಪ್ರಾಣೇಶಾಚಾರ್ಯ ಪಾತ್ರ) ಮಡಿವಂತ ರಿಂದ ನಾನು ಭಿನ್ನ ಅಂತ ತೋರಿಸಿಕೊಳ್ಳೋದು” ಎಂದದ್ದಿದೆ.

ಸಂಸ್ಕಾರ ಕಾದಂಬರಿ ಅನಂತಮೂರ್ತಿಯವರ ತಂದೆಗೆ ಇಷ್ಟವಾಗಿರಲಿಲ್ಲ ಎಂಬ ಮಾತಿತ್ತು. ಅನಂತಮೂರ್ತಿಯವರು ಅದಕ್ಕೆ “ಸಂಸ್ಕಾರ ಕಾದಂಬರಿ  ನನ್ನ ತಂದೆಗೆ ಇಷ್ಟವಾಗಿತ್ತು. ಆದರೆ ನನ್ನ ಮದುವೆಯನ್ನು( ಪತ್ನಿ ಎಸ್ತರ್) ಮಾತ್ರ ಅವರು ಒಪ್ಪಿರಲಿಲ್ಲ. ಆದರೆ ನನ್ನ ಮಗ ಹುಟ್ಟಿದ ಮೇಲೆ ಒಪ್ಪಿಕೊಂಡರು”ಎಂದು ಉಡುಪಿಯ ವಿಮರ್ಶಕರಾದ ಜಿ. ರಾಜಶೇಖರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದರು.

ಅನಂತಮೂರ್ತಿ ಜೆ.ಎಚ್. ಪಟೇಲರ ಸಮೀಪವರ್ತಿ. ಶಾಂತವೇರಿ ಗೋಪಾಲಗೌಡರು, ಲೋಹಿಯಾ ಪ್ರಭಾವಕ್ಕೆ ಒಳಗಾದವರು. ಅನಂತಮೂರ್ತಿ ಅವರು ಶಾಂತವೇರಿ ಗೋಪಾಲ ಗೌಡರ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದವರು.

ಅನಂತಮೂರ್ತಿಯವರ ಸಂಸ್ಕಾರ, ಘಟಶ್ರಾದ್ಧ, ಅವಸ್ಥೆ, ಬರ…. ಮೊದಲಾದುವುಗಳು ಚಲನಚಿತ್ರಗಳಾಗಿವೆ. ಅವರು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿದ್ದರು.

ಅನಂತಮೂರ್ತಿಯವರು ಬದುಕಿನ ಕೊನೆಯ ವರ್ಷಗಳಲ್ಲಿ ಇನ್ನಷ್ಟು ವಿವಾದಕ್ಕೆ ಸಿಲುಕಿಕೊಂಡರು. ನರೇಂದ್ರ ಮೋದಿ ಅವರು ಪ್ರಧಾನಿಯಾದರೆ ತಾನು ದೇಶವನ್ನೇ ತೊರೆಯುವ ಬಗ್ಗೆ ಅವರು ಮಾತನಾಡಿ ಫಜೀತಿಗೆ ಬಿದ್ದರು.

ಆ ದಿನಗಳಲ್ಲಿ ಪ್ರಗತಿಪರರಿಗೆ ಒಂದು ಭ್ರಮೆ ಇತ್ತು. ಗೋದ್ರಾ ಗೋದ್ರಾ ಎಂದು ಬೊಬ್ಬೆ ಹಾಕಿದ್ದರಿಂದ ನರೇಂದ್ರಮೋದಿಯವರು ಗೆದ್ದು ಬರಲಾರರು ಎಂದು. ಹಾಗಾಗಿ ಅನಂತಮೂರ್ತಿ  ಧೈರ್ಯದಿಂದ ಘೋಷಣೆ ಮಾಡಿಯೇಬಿಟ್ಟರು. ಆದರೆ ನರೇಂದ್ರ ಮೋದಿಯವರು ಗೆದ್ದನಂತರ ಅನಂತಮೂರ್ತಿ ಅವರಿಗೆ ಅನೇಕ ಜನರು ಪಾಕಿಸ್ತಾನ ಮತ್ತು ಇನ್ಯಾವುದೋ ದೇಶಗಳಿಗೆ ಹೋಗುವುದಾದರೆ ಟಿಕೆಟ್ ರೆಡಿ ಮಾಡಿಕೊಡಲು ಸಿದ್ಧರಿದ್ದೇವೆ ಎಂದದ್ದೂ ಇದೆ.

22-8-2014 ರಂದು ತಮ್ಮ 82 ನೇ ವಯಸ್ಸಿನಲ್ಲಿ ಎರಡೂ ಕಿಡ್ನಿ ವೈಫಲ್ಯದಿಂದ ಅನಂತಮೂರ್ತಿಯವರು ಕೊನೆಯುಸಿರೆಳೆದರು. ಆದರೆ ಅವರ ನಿಧನದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು “ಕನ್ನಡ ಸಾಹಿತ್ಯಲೋಕಕ್ಕೆ ಯು ಆರ್ ಅನಂತಮೂರ್ತಿ ಅವರ ನಿಧನದಿಂದ ನಷ್ಟ ಉಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ದುಃಖ ಸೂಚಕ ಸಂದೇಶದಲ್ಲಿ ಹೇಳಿದ್ದಿದೆ.

ಅವರ ಅಂತ್ಯಸಂಸ್ಕಾರ ಮಾಧ್ವ ಸಂಪ್ರದಾಯದಂತೆ ನಡೆದಾಗ ಹಲವು ಸಾಹಿತಿಗಳು ಟೀಕಿಸಿದ್ದೂ ಇದೆ. ಪ್ರಗತಿಪರ ಸಾಹಿತಿಯೊಬ್ಬರನ್ನು ಈ ರೀತಿ ಮಾಧ್ವ ಸಾಂಪ್ರದಾಯಿಕ ರೀತಿಯಲ್ಲಿ  ದಹನ ಮಾಡಿರುವುದು ಪ್ರಗತಿಪರರೆನಿಸಿಕೊಂಡ ಹಲವರಿಗೆ ನುಂಗಲಾರದ ತುತ್ತಾಯಿತು. ಅವರೊಬ್ಬ ವಿಚಾರವಾದಿ. ಜಾತಿವ್ಯವಸ್ಥೆಯನ್ನು ಧಿಕ್ಕರಿಸಿದವರು. ಆದರೆ ಅವರ ಅಂತ್ಯಸಂಸ್ಕಾರವನ್ನು ಮಾಧ್ವ ಬ್ರಾಹ್ಮಣ ಪದ್ಧತಿಗನುಗುಣವಾಗಿ ನೆರವೇರಿಸಿದಾಗ ಬೆಂಗಳೂರಿನ ಪ್ರಮುಖ ಪತ್ರಿಕೆಯೊಂದರಲ್ಲಿ ಸಂವಾದ ನಡೆದಿತ್ತು. ಈ ರೀತಿ ಅಂತ್ಯಸಂಸ್ಕಾರ ಕುರಿತ ಅಂತಿಮ ನಿರ್ಧಾರ ಯಾರು ಮಾಡಿದ್ದು? ಅನಂತಮೂರ್ತಿಯವರೇ ಈ ನಿರ್ಧಾರ ತಳೆದಿದ್ದರಾ? ಅಥವಾ ಕುಟುಂಬದವರೇ? ಎಂದೆಲ್ಲ ಚರ್ಚೆಯಾಗಿ ಕೊನೆಗೆ ಕುಟುಂಬದವರಿಗೆ ಟೀಕಿಸಲಾಯಿತು.

“ಅನಂತಮೂರ್ತಿಯವರು ಮನೆಯವರಿಗೆ ವೈಚಾರಿಕ ಶಿಕ್ಷಣ ಕೊಟ್ಟಿಲ್ಲವೇ” ಎಂದು ಕೆಲವರು ಬಹಿರಂಗ ಬೊಬ್ಬಿಟ್ಟದ್ದೂ ಇದೆ.

ತಮ್ಮ ಬರಹಗಳಲ್ಲಿ ಅನಂತಮೂರ್ತಿ ಅವರು ಜಾತ್ಯತೀತ ಮನೋಧರ್ಮವನ್ನೇ ಪ್ರತಿಪಾದಿಸುತ್ತಾ ಬಂದವರು. ಅವರ ಮಾನವೀಯ ಕಾಳಜಿಯ ಗುಣಗಳು ಅವರ ಕೃತಿಗಳನ್ನು ಎತ್ತಿಹಿಡಿದಿದೆ. ಅವರು ಕೇವಲ ಬರೆಯುತ್ತ ತನ್ನ ಪಾಡಿಗೆ ತಾನು ಇದ್ದವರಲ್ಲ. ಲೇಖಕನಿಗೂ ಸಾಮಾಜಿಕ ಜವಾಬ್ದಾರಿಗಳಿವೆ ಎಂದು ನಂಬಿ ಬದುಕಿದವರು. ದೇಶದ ಪ್ರಮುಖ ಪತ್ರಿಕೆಗಳೆಲ್ಲಾ ಅವರನ್ನು ಶ್ಲಾಘಿಸಿವೆ.

ವಿಚಾರವಾದದ ಹೆಸರಲ್ಲಿ “ಭೈರಪ್ಪ ಕಾದಂಬರಿಕಾರರೇ ಅಲ್ಲ” ಎನ್ನುವಷ್ಟರ ಮಟ್ಟಿಗೆ ಅನಂತಮೂರ್ತಿ ಅವರು ಹೇಳಿದ್ದರು. ಆ ಮಾತು ಮತ್ತೊಂದು ಚರ್ಚೆ.

ಅನಂತಮೂರ್ತಿಯವರ ಕೃತಿಗಳ ಬಗ್ಗೆ ಭಾರತೀಯ ಸಾಹಿತ್ಯವೇ ಹೆಮ್ಮೆಪಡುತ್ತದೆ. ಭಾರತ ಸರ್ಕಾರವು ಇವರಿಗೆ 1998 ರಲ್ಲಿ ಪದ್ಮಭೂಷಣ ಪ್ರಾದಾನಿಸಿದೆ. ವೈಜ್ಞಾನಿಕ ದೃಷ್ಟಿಕೋನ ಮತ್ತು ಮಾನವೀಯ ಸಮಾನತೆಯ ಸಶಕ್ತ ಸಮಾಜದ ಕನಸು ಕಂಡವರು.

ಅವರ ನಿಧನದ ನಂತರ ಕನ್ನಡ ರಕ್ಷಣಾ ವೇದಿಕೆ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಪ್ರೊಫೆಸರ್ ಚಂದ್ರಶೇಖರ ಪಾಟೀಲ ಅವರಂತೂ “ಸಂಸ್ಕಾರ ಕಾದಂಬರಿಯ ಪ್ರಾಣೇಶಾಚಾರ್ಯ ಕೊನೆಗೂ ಪ್ರಾಣೇಶಾಚಾರ್ಯನಾಗಿಯೇ ಉಳಿದ. ಅವರಂತಹ ವೈಚಾರಿಕ ಪ್ರಜ್ಞೆಯ ಸಾಹಿತಿಗೂ ಬ್ರಾಹ್ಮಣ್ಯವನ್ನು ದಾಟಲು ಸಾಧ್ಯವಾಗಲಿಲ್ಲ” ಎಂದೇ ಬಿಟ್ಟರು.

ಜಿಎಸ್ ಆಮೂರರು ಗುರುತಿಸುವಂತೆ ಅನಂತಮೂರ್ತಿ ಅಸಾಮಾನ್ಯ ವ್ಯಕ್ತಿಗಳನ್ನೇ ತನ್ನ ಕಾದಂಬರಿಗಳ ನಾಯಕರನ್ನಾಗಿ ಆರಿಸುತ್ತಿದ್ದರು.

ಎಂಬತ್ತರ ದಶಕದಲ್ಲಿ ರುಜುವಾತು ವೇದಿಕೆ ಮೂಲಕ ಅನೇಕ ಸಾಹಿತ್ಯಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು. ರುಜುವಾತು ವೇದಿಕೆಯ ಕಾರ್ಯದರ್ಶಿಯಾಗಿದ್ದವರು ಎ. ಆರ್. ನಾಗಭೂಷಣ.

ಡಾ.ಯು.ಆರ್.ಅನಂತಮೂರ್ತಿಯವರ “ಸಾಹಿತ್ಯ ದರ್ಶನ” ಎನ್ನುವ ಕೃತಿಯನ್ನು 2012ರಲ್ಲಿ ಸುಂದರ ಪ್ರಕಾಶನದವರು ಪ್ರಕಟಿಸಿದ್ದರು. 

ಅದೇ ರೀತಿ ಅನಂತಮೂರ್ತಿ ಅವರ ನಿಧನದ ನಂತರ ‘ಅಶಾಂತ ಸಂತ ಅನಂತ’ ಎನ್ನುವ ಕೃತಿಯನ್ನು ಡಾ. ಜಯಪ್ರಕಾಶ ಮಾವಿನಕುಳಿ ಅವರ ಸಂಪಾದಕತ್ವದಲ್ಲಿ 2017ರಲ್ಲಿ ಪ್ರಕಟಿಸಲಾಗಿದೆ. ಈ ಎರಡೂ ಕೃತಿಗಳಲ್ಲಿ ನನ್ನದೂ ಒಂದೊಂದು ಪುಟ್ಟ  ಬರಹಗಳಿವೆ. ಆ ಮೂಲಕ ಅನಂತಮೂರ್ತಿ ಅವರನ್ನು ನೆನಪಿಸಲು ಒಂದು ಅವಕಾಶವೂ ಸಿಕ್ಕಿತ್ತು.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter