ನಾವಿಬ್ಬರೂ ಏಕವಚನದ ಗೆಳೆಯರು. ನಮ್ಮ ಗೆಳೆತನಕ್ಕೆ ಏನಿಲ್ಲವೆಂದರೂ ಅಜಮಾಸು ಮೂರು ದಶಕಗಳಿಗೂ ಮಿಗಿಲಾದ ಆಯಸ್ಸು.
ಧಾರವಾಡಕ್ಕೊ, ಬೆಳಗಾವಿಗೋ, ಇಲ್ಲವೆ ಕಾರವಾರದ ಕಡೆಗೆ ಹೋಗುವಾಗ, ಕೆಲವೊಮ್ಮೆ ಮುದ್ದಾಂ ದಾವಣಗೆರೆಗೆ ಬಂದಾಗ ರವಿ ಬೆಳಗೆರೆ ನಮ್ಮನೆಗೆ ಬಂದೇ ಬರುತ್ತಿದ್ದ. ನಿವಾಂತ ಕುಂತು ಸೊಗಸಾಗಿ ಊಟ ಮಾಡಿಯೇ ಹೋಗುತ್ತಿದ್ದ. ಹೋಗುವಾಗ ಮರೆಯದೇ ನನ್ನ ತಾಯಿಯ ಪಾದಮುಟ್ಟಿ ನಮಸ್ಕರಿಸುತ್ತಿದ್ದ. ನಮ್ಮಿಬ್ಬರದು ರಾತ್ರಿ ಒಂದೆರಡು ಗಂಟೆತನಕ ಅಪಸಾತು ಮಾತು ಮಾತು. ಅವನ ಭೆಟ್ಟಿಗಾಗಿ ನಮ್ಮನೆ ಮುಂದೆ ಜನಜಾತ್ರೆ. ಹೊರಗೆ ಬಂದು ಅಭಿಮಾನಿಗಳೊಂದಿಗೂ ಮತ್ತೆ ತಾಸೊಪ್ಪತ್ತು ಖಾಸ್ ಬಾತ್ ತರಹದೇ ಮಾತುಕತೆಗಳು.
ಆಗಿನ್ನೂ ಎಂಟನೇ ಈಯತ್ತೆಯಲ್ಲಿ ಓದುತ್ತಿದ್ದ ನನ್ನ ಮಗಳು ಮಂಜುಶ್ರೀ ರವಿಯ ಮಿದುಳಿಗೇ ಕೈ ಹಾಕಿ ಮಾತಾಡುತ್ತಿದ್ದಳು. ಊಟದ ನಡುವೆ ” ನೀನು ಚಿಕನ್ ತಿನ್ನುವವಳಾಗಿದ್ರೇ ಚೆಂದಿತ್ತು, ಆಗಲಾದ್ರೂ ನನ್ನ ತಲೆ ತಿನ್ನುವುದು ಇರ್ತಿರಲಿಲ್ಲ ” ಅನ್ಸುತ್ತೆ. ಇದು ಮಗಳಿಗೆ ರವಿ ಹೇಳುತ್ತಿದ್ದುದು.
ಬೆಳಗೆರೆಯ ಸಮಗ್ರ ಸಾಹಿತ್ಯ ಕುರಿತು ದಾವಣಗೆರೆಯಲ್ಲಿ ನಾನು ವಿಚಾರ ಸಂಕಿರಣ ಏರ್ಪಡಿಸಿದಾಗ ರವಿ ಜತೆ ಸೀತಾನದಿ ಸುರೇಂದ್ರ, ಇನ್ನೊಂದಿಬ್ಬರು ಗೆಳೆಯರು ಬಂದಿದ್ದರು. ಗೆಳೆಯರಾದ ಅಗಸನಕಟ್ಟೆ, ರಾಘವೇಂದ್ರ ಪಾಟೀಲ, ಚಂದ್ರಶೇಖರ ತಾಳ್ಯ ಈ ಮೂವರು ಬೆಳಗೆರೆಯ ಕೃತಿಗಳ ಕುರಿತು ಪ್ರಬಂಧ ಮಂಡಿಸಿದರು. ಆಗ ಭರ್ಜರಿಯಾಗಿ ದಡಸೋಸಿ ಹರಿಯುವ ಹೊಳೆಯಂತೆ ಹಾಯ್… ಬರವಣಿಗೆಯ ಉಕ್ಕಿ ಹರಿಯುವ ಹರೆಯ ಮತ್ತು ಹವಾ. ರವಿಯನ್ನು ಕಣ್ಣಾರೆ ಕಾಣಲೆಂದೇ ಕಿಕ್ಕಿರಿದ ಜನಸಂದಣಿ. ಅಂದು ಅಭಿಮಾನಿಗಳ ಒತ್ತಾಯಕ್ಕೆ ಮಣಿದು ಸಮಾರಂಭದ ಕಡೆಯಲ್ಲಿ ರವಿ ಮಾತಾಡಿದ್ದೇ ಖರೇವಂದ್ರ ಹೆಚ್ಚು ಹಿಟ್ ಆಗಿತ್ತು. ಕಿವಿಗಡಚಿಕ್ಕುವ ಕರತಾಡನಗಳು.
ಕಪ್ಪುಸುಂದರಿ ಹಾಯ್ ಬೆಂಗಳೂರೆಂಬ ಪತ್ರಿಕೆಯಲ್ಲಿ ದಾವಣಗೆರೆ ಅಂದ್ರೆ ತಮಾಷೇನಾ? ಫುಲ್ ಸೆಂಟರ್ ಪೇಜ್ ಲೇಖನ ರವಿ ನನ್ನಿಂದ ಬರೆಸಿದ್ದ. ಲೇಖನ ಬಂದಾಗ ಮೂರು ಬಾರಿ ಸಹಸ್ರಾರು ಪತ್ರಿಕೆ ತರಿಸಿ ಏಜೆಂಟರು ಮಾರಾಟ ಮಾಡಿದ ನೆನಪಿದೆ. ಅದು ದಾವಣಗೆರೆಯ ಜನಜನಿತ ಸಭ್ಯ ಭಾಷೆ, ತೇಜೀ ಮಂದಿ ಬದುಕು, ಪ್ರೀತಿ… ಇತ್ಯಾದಿಗಳ ಕುರಿತಾದ ಜವಾರಿ ಬರಹ. ಅಂತಹದ್ದನ್ನೇ ಧಾರವಾಡ ಕುರಿತು ಬರಿಯೋ ಅಂದಿದ್ದ.
ಹಾಯ್ ಬೆಂಗಳೂರ್ ಆರಂಭದ ಐದಾರು ವರ್ಷಗಳ ಕಾಲ ವಿವಿಧ ಬಗೆಯ ಲೇಖನಗಳನ್ನು ಅವನ ಪ್ರೀತಿಯ ಕರೆಯ ಮೇರೆಗೆ ಬರೆಯುತ್ತಿದ್ದೆ. ಲೇಖನಗಳಿಗೆ ನನ್ನ ನಿರೀಕ್ಷೆ ಮೀರಿ ಸಂಭಾವನೆ ಕಳಿಸುತ್ತಿದ್ದ. ನಾವು ಮನೆಮಂದಿಯೆಲ್ಲಾ ಚಿಕನ್ ಗುನ್ಯಾದಿಂದ ಆಸ್ಪತ್ರೆ ಸೇರಿದಾಗ ಹತ್ತು ಸಾವಿರ ಚಿಕಿತ್ಸೆಗೆಂದು ಕಳಿಸಿದ್ದ. ಬೆಂಗಳೂರಿಗೆ ಹೋದಾಗೆಲ್ಲ ಅವನ ಭೆಟ್ಟಿ ಆಗಲೇ ಬೇಕಿತ್ತು ಹಾಂಗಂತ ಪ್ರೀತಿಯ ಫರ್ಮಾನು ಹೊರಡಿಸುತ್ತಿದ್ದ.
ದಾವಣಗೆರೆ ಕುರಿತು ಬರೆದಂತೆ ಎಲ್ಲಿ ಹುಡುಕಲಿ ಜೀವದುಸಿರಿನ ನನ್ನೂರು ಎಂಬ ನನ್ನ ಹುಟ್ಟೂರು ಕಡಕೋಳ ಕುರಿತು ನನ್ನಿಂದ ಬರೆಸಿದ್ದ. ತುಂಬಾ ಸೂಕ್ಷ್ಮ ಮನಸಿನ ಅವನು ಮನುಷ್ಯ ಸಂಬಂಧಗಳ ಕುರಿತು ಭಾರೀ ಭಾವುಕನಾಗಿದ್ದ. ಸೀತಾನದಿ ಸುರೇಂದ್ರ ತೀರಿಕೊಂಡಾಗ ಒಡಹುಟ್ಟಿದ ತಮ್ಮ ಸತ್ತಾಗ ಅಳುವಂತೆ ಬಿಕ್ಕಿಬಿಕ್ಕಿ ಅತ್ತಿದ್ದ. ಅವನ ಸಂವೇದನೆಗಳನ್ನು ಕೆಲವರು ಢೋಂಗಿ ಅಂತ ತಿಳಿಯುತ್ತಿದ್ದರು.
ಬೆಳಗೆರೆಯೊಳಗೊಬ್ಬ ಮಹಾನ್ ಕತೆಗಾರನಿದ್ದ. ಅವನು ಪತ್ರಿಕೋದ್ಯಮಿಯಾದಾಗ ಕತೆಗಾರ ರವಿ ನೇಪಥ್ಯಕ್ಕೆ ಸರಿದನೆಂಬ ಹಳಹಳಿ ನನ್ನದು. ಒಂದು ಸರ್ಕಾರವನ್ನೇ ಬದಲಿಸಬಲ್ಲೆನೆಂಬ ಅಮಲಿನಲ್ಲಿದ್ದ ಒಂದೂವರೆ ದಶಕದ ಟ್ಯಾಬ್ಲಾಯ್ಡ್ ಪತ್ರಿಕೆಯೊಂದು ಸೊರಗುತ್ತಿರುವ ಸಮಯದಲ್ಲಿ ಬೆಳಗೆರೆಯ ಹಾಯ್ ಬೆಂಗಳೂರ್ ಕಪ್ಪುಮಣ್ಣಿನ ಸುಂದರಿ ಹುಟ್ಟಿಕೊಂಡಳು.
ಆರಂಭಕ್ಕೆ ಬೆಂಗಳೂರು ಶಹರದ ಮಟ್ಟಿಗೆ ಮಿತಿ ಇರಿಸಿಕೊಂಡವರು ತಮ್ಮ ಮುದ್ದಾದ ಅಕ್ಷರಗಳ ಸೀತಾನದಿ ಮತ್ತು ಬೆಳಗೆರೆ ಗೆಳೆಯರು. ಅವರಿಬ್ಬರ ನಿರೀಕ್ಷೆ ಮೀರಿ ಕಪ್ಪುಸುಂದರಿ ಬೆಳೆದುದು ಕನ್ನಡ ಪತ್ರಿಕೋದ್ಯಮದ ಪವಾಡ ಸದೃಶ ದಾಖಲೆಯೇ ಸರಿ. ಪ್ರತಿಯೊಂದು ವರದಿಯ ಹಿಂದೆ ರವಿಯ ಛಾಪು ಇರುತ್ತಿತ್ತು. ಅದಕ್ಕಾಗಿ ರವಿಯ ಅವಿರತ ಪರಿಶ್ರಮವಿತ್ತು. ಓದುಗಪ್ರಭುವಿನ ಕೈ ಹಿಡಿದು ಓದಿನೆದೆಯ ಜಗದೊಳಗೆ ಕರಕೊಂಡು ಹೋಗುವ ಲೋಕ ಮೀಮಾಂಸೆಯ ಮಿಡಿತ ಬೆಳಗೆರೆಗೆ ಸಿದ್ಧಿಸಿತ್ತು. ಇದನ್ನೆಲ್ಲ ಬಲ್ಲ ಅನೇಕರು ಹಾಯ್…. ತರಹದ್ದೇ ಶೀರ್ಷಿಕೆ, ಬರವಣಿಗೆ ಶೈಲಿ ಅನುಕರಿಸಿದರು.
ಆದರೆ ಜಯಗಳಿಸಿದ್ದು ಬೆಳಗೆರೆ ಮಾತ್ರ. ಯಾರೋ ತರಕಲಾಂಡಿಯೊಬ್ಬ ಫೋನಾಯಿಸಿ ರವಿಗೆ ಕೊಲೆ ಬೆದರಿಕೆಯೊಡ್ಡುತ್ತಿದ್ದರೇ ” ಎಷ್ಟು ಗಂಟೆಗೆ ಕೊಲೆ ಮಾಡ್ತಿಯಾ? ಸಂಜೆ ಆರುಗಂಟೆಗಾ.? ಇನ್ನು ನಾಲ್ಕು ತಾಸು ಟೈಮಿದೆ. ಬಾಟಮ್ ಐಟಮ್ ಬರ್ದು ಮುಗಿಸ್ತೇನೆ. ನೀನೇ ಬರ್ತಿಯಾ ಇಲ್ಲ ನಾನೇ ಬರಬೇಕಾ ” ಅಂತ ಚೇಷ್ಟೆಗಿಳಿದು ಮಾತಾಡುವ ಯಥೇಚ್ಛ ಯಡವಟ್ಟುತನಗಳು ಅವನಲ್ಲಿದ್ದವು. ಹುಲಿ ದಣಿದು ಮಲಗಿದಾಗಲಾದರೂ ಮಾತಾಡಲಿಲ್ಲ. ಹುಲಿ ಮರಣಹೊಂದಿ ಮಣ್ಣು ಸೇರಿದಮೇಲೆ ಕೆಲವು ಅಕ್ಷರ ಪಿಶಾಚಿ ಸೊಂಡಿಲು ಇಲಿಗಳು ಮೀಸೆ ತಿರುವುತ್ತಿರುವುದು ಕನಿಕರದ ಸಂಗತಿ.
ಒಂದು ಅಮವಾಸ್ಯೆ ದಿನ ಕಾರಲ್ಲಿ ಬೆಂಗಳೂರಿಂದ ತಾನೇ ಡ್ರೈವ್ ಮಾಡಿಕೊಂಡು ಮೂರೇ ತಾಸಲ್ಲಿ ದಿಢೀರಂತ ದಾವಣಗೆರೆಯ ನಮ್ಮನೆ ಮುಂದೆ ಬಂದು ಹಾರ್ನ್ ಮಾಡಿ “ಏಯ್ ಬಾರೋ ಉಕ್ಕಡಗಾತ್ರಿ ದೆವ್ವಗಳ ದರ್ಶನಾ ತಗೊಂಬರೋಣ ಬಾ” ಅಂದ.
ನಿಂತ ಪೆಟ್ಟಿನಲ್ಲೇ ನಾನೂ ಹೊರಟು ನಿಂತೆ. ನಮ್ಮ ರವೀಂದ್ರ ಹಂದಿಗನೂರ ಕಾಕಾನ ಗಝಲ್ ಕ್ಯಾಸೆಟ್ ಕೇಳಿ ಪಡೆದ. ಕಾಕಾನ ಎಂತು ವಿರತಿಯೋ ಸಂತಿ ಸೂಳೆಮಗನೇ ನಿನ್ನಂತರಂಗದ ಅನುವನರಿಯೋ ಮಗನೊಂದು ಹಡದೆನಲ್ಲಮದುವೆಗಂಡ ಮನಿಯಾಗಿಲ್ಲ.ಜಾಣೆ ನಾ ಸುಳ್ಳು ಹೇಳೋದಿಲ್ಲ. ಎಂಬ ಕಡಕೋಳ ಮಡಿವಾಳಪ್ಪನವರ ತತ್ವಪದಗಳನ್ನು ನಮ್ಮ ರವಿಕಾಕಾನ ಸಿರಿಕಂಠದಲ್ಲಿ ಮತ್ತೆ ಮತ್ತೆ ಕೇಳುವುದೇ ಬೆಳಗೆರೆ ರವಿಗೆ ಬಲುಖುಷಿ. ಉಕ್ಕಡಗಾತ್ರಿ ಮುಟ್ಟುವ ತನಕ ಅದೇ ಕ್ಯಾಸೆಟ್ ಮತ್ತೆ, ಮತ್ತೆ ತಿರು ತಿರುಗಿಸಿ ಆಲಿಸುತ್ತಿದ್ದ.
ಬೆಂಗಳೂರಿಗೆ ಹೋಗುವಾಗ ಕ್ಯಾಸೆಟ್ ತಗೊಂಡು ಹೋದ. ಎಷ್ಟೋ ಬಾರಿ ನಟ್ಟ ನಡುರಾತ್ರಿ ಮತ್ತವನ ಮಿತಿ ಮೀರಿದ ಮದ್ಯರಾತ್ರಿಗಳ ನಡುವೆ ರವೀಂದ್ರ ಕಾಕಾನ ಗಝಲ್ ಕೆಸೆಟ್ ಹಾಕಿ ಫೋನಲ್ಲಿ ನನಗೆ ಕೇಳಿಸುತ್ತಿದ್ದ. ಗಝಲ್ ಅಂದ್ರೆ ಆತನಿಗೆ ಪಂಚಪ್ರಾಣ. ಒಂದು ಬಾರಿ ರವೀಂದ್ರ ಕಾಕಾ ಬೆಳಗೆರೆಯ ಕಚೇರಿಗೆ ಹೋಗಿ ಮೂರುತಾಸು ಗಝಲ್ ಹಾಡಿಬಂದ.
ಕೈಮುಚ್ಚಿ ಕಾಕಾನ ಕಿಸೆಯಲ್ಲಿ ಬೆಳಗೆರೆ ಇಪ್ಪತ್ತು ಸಾವಿರ ರುಪಾಯಿ ತುರುಕಿದ್ದ. ಇಪ್ಪತ್ತೆರಡು ವರ್ಷಗಳ ಹಿಂದೆ ಇಪ್ಪತ್ತು ಸಾವಿರ ದೊಡ್ಡಮೊತ್ತವೇ ಆಗಿತ್ತು. ಅದರ ಮುಂದಿನವಾರ ಕಾಕಾನ ಫೋಟೋ ಹಾಕಿ ಖಾಸ್ ಬಾತ್ ತುಂಬೆಲ್ಲಾ ತುಂಬಿ ತುಳುಕಾಡುವ ಅವನ ಅಂಕಣ ಬರಹ. ಹೀಗೆ ಬೆಳಗೆರೆಯದು ನನ್ನೊಂದಿಗೆ ಅನನ್ಯತೆಯ ಸಾಂಸ್ಕೃತಿಕ ಒಡನಾಟ. ಅಂತಹ ಅನ್ಯೋನ್ಯತೆಯ ಅನರ್ಘ್ಯ ಕೊಂಡಿಯೊಂದು ಕಳಚಿ ಬಿತ್ತು.
ಕಳಚಿಬಿದ್ದ ಅನನ್ಯತೆಯ ಕೊಂಡಿ
ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಿ
ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ
ಫೇಸ್‌ಬುಕ್ ಲಾಗಿನ್ ಬಳಸಿ ಕಮೆಂಟ್ ಮಾಡಿ
ಮಲ್ಲಿಕಾರ್ಜುನ ಕಡಕೋಳ
ಇವರ ಹುಟ್ಟೂರು ಕಲಬುರ್ಗಿ ಜಿಲ್ಲೆಯ ಕಡಕೋಳ. ಆರೋಗ್ಯ ಇಲಾಖೆಯಲ್ಲಿ, ಬೋಧಕರಾಗಿ, ನಲವತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಪ್ರಕಟಿಸಿದ ಸಾಹಿತ್ಯ ಕೃತಿಗಳು :
ಫಲ್ಗುಣಿಯಲಿ ಕೇಳಿಬಂದ ರುದ್ರವೀಣೆ (ವೈಚಾರಿಕ ಲೇಖನಗಳು)
ಅವಳ ಸನ್ನಿಧಿಯಲಿ...(ಅಂಕಣ ಬರಹ)
ರಂಗ ಸುನೇರಿ ( ವಿಮರ್ಶಾ ಸಂಕಲನ)
ದ್ರುಪದ (ಶಾಸ್ತ್ರೀಯ ಸಂಗೀತ ಕೃತಿ )
ಕಡಕೋಳ ಮಡಿವಾಳಪ್ಪನವರ ತತ್ವಜ್ಞಾನ ಪದಗಳು - ಎರಡು ಆವೃತ್ತಿಗಳು (ಸಂಪಾದಿತ ಕೃತಿಗಳು)
ಜೀವನ್ಮುಖಿ (ಸಂ : ಅಭಿನಂದನ ಗ್ರಂಥ)
ರಂಗ ವಿಹಂಗಮ (ಕ. ನಾ. ಅಕಾಡೆಮಿ ಪ್ರಕಟಣೆ)
ದಾವಣಗೆರೆ ಜಿಲ್ಲೆ ರಂಗಭೂಮಿ (ಕ. ನಾ. ಅಕಾಡೆಮಿ ಪ್ರಕಟಣೆ)
ಕಂಚಿಕೇರಿ ಶಿವಣ್ಣ (ಜೀವನ ಚರಿತ್ರೆ - ಕ. ನಾ. ಅಕಾಡೆಮಿ ಪ್ರಕಟಣೆ)
ರಂಗ ಬಾಸಿಂಗ (ಡಾ. ರಾಜಕುಮಾರ ಬಿಡುಗಡೆ ಮಾಡಿದ ಕೃತಿ)
ರಂಗ ಕಂಕಣ (ಸಂಪಾದಿತ ಕೃತಿ)
ರಂಗ ಮಲ್ಲಿಗೆ (ಕ. ನಾ. ಅಕಾಡೆಮಿ ಪ್ರಕಟಣೆ)
ಲಾಸ್ಟ್ ಬೆಲ್ (ಮಾನವಿಕ ಕೃತಿ)
ತೆನೆ ತೇರು (ದಾವಣಗೆರೆ ಜಿಲ್ಲಾಡಳಿತ ಪ್ರಕಟಣೆ)
ಕಾಯಕ (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ನೌಕರ ಬಂಧು (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ಸಂವೇದನೆ (ಸರ್ಕಾರಿ ನೌಕರರ ಸ್ಮರಣ ಸಂಚಿಕೆ, ಸಂ.)
ಯಡ್ರಾಮಿ ಸೀಮೆ ಕಥನಗಳು (ಜಿಂದಾ ಮಿಸಾಲ್ ಕಹಾನಿ)
ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಗಳು ಏರ್ಪಡಿಸಿದ ರಾಜ್ಯ ಹಾಗೂ ಹೊರ ರಾಜ್ಯದ ಅನೇಕ ಕಡೆಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿ ಮೆಚ್ಚುಗೆ. ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಮುಖ್ಯ ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ. ಪ್ರಬಂಧ ಮಂಡನೆ.
ಪ್ರಜಾವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಜಯ ಕರ್ನಾಟಕ, ಸುಧಾ, ತರಂಗ, ತುಷಾರ, ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರ್, ಕರ್ಮವೀರ, ಅನ್ವೇಷಣೆ, ಸಂಕ್ರಮಣ... ಮೊದಲಾದ ಪತ್ರಿಕೆಗಳಲ್ಲಿ ಕತೆ, ಕವನ, ಸಂದರ್ಶನ, ಲೇಖನಗಳು ಪ್ರಕಟ. ಕನ್ನಡಪ್ರಭ, ತುಷಾರಗಳಿಗೆ ಆಮಂತ್ರಿತ ಕತೆ, ಲೇಖನಗಳ ಪ್ರಕಟಣೆ. ತುಷಾರದಲ್ಲಿ ಈಗ್ಗೆ 35 ವರ್ಷಗಳಷ್ಟು ಹಿಂದೆ ಪ್ರಕಟವಾದ ನನ್ನ ಕತೆಯೊಂದರ ಕುರಿತು ಐದು ತಿಂಗಳ ಕಾಲ ಚರ್ಚೆಯಾಗಿ ಹೆಸರಾಂತ ಕತೆಗಾರ ಡಾ. ಶಾಂತಿನಾಥ ದೇಸಾಯಿ ಅವರು ಚರ್ಚೆಯಲ್ಲಿ ಪಾಲ್ಗೊಂಡು ಅಪಾರ ಮೆಚ್ಚುಗೆ ತೋರಿದ್ದರು.
ಕೆಂಡ ಸಂಪಿಗೆ ಬ್ಲಾಗ್ ಹಾಗೂ ಜನತಾವಾಣಿ, ಪತ್ರಿಕೆಗಳಿಗೆ ನಾಲ್ಕೂವರೆ ವರ್ಷಕಾಲ ಅಂಕಣ ಬರಹಗಳ ಪ್ರಕಟನೆ.
ಪ್ರಶಸ್ತಿ, ಪುರಸ್ಕಾರ ಗಳು :
ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ
ದಾವಣಗೆರೆ ಮಹಾನಗರಪಾಲಿಕೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಕೈವಾರ ನಾರಾಯಣ ತಾತ ಪ್ರಶಸ್ತಿ
ಮೈಸೂರಲ್ಲಿ ಜರುಗಿದ 83 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನ. ...ಇನ್ನೂ ಅನೇಕ ಪ್ರಶಸ್ತಿಗಳು.
ಯಡ್ರಾಮಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ - 2019
ಎರಡು ಅವಧಿಗೆ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯನಾಗಿ "ಬಾ ಅತಿಥಿ" ಯಂತಹ ಅಪರೂಪದ ಕಾರ್ಯಕ್ರಮ ನಡೆಸುವ ಮೂಲಕ ರಂಗ ಸಂಸ್ಕೃತಿಗೆ ಹೊಸ ಆಯಾಮ ದಕ್ಕಿಸಿದ್ದಾರೆ. ಕರ್ನಾಟಕ ರಂಗ ಸಮಾಜ ನಿಕಟಪೂರ್ವ ಸದಸ್ಯ.
ಇವರ ಬದುಕು ಮತ್ತು ಸಾಧನೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದೂರದರ್ಶನ ಸಾಕ್ಷ್ಯಚಿತ್ರ ತಯಾರಿಸಿವೆ. ಕುವೆಂಪು ವಿ.ವಿ.ಯ ಶಶಿಕುಮಾರ್ ಎಂಬುವರು ಇವರ ಸಾಧನೆಗಳ ಕುರಿತು ಎಂ.ಫಿಲ್. ಮಾಡಿದ್ದಾರೆ.
All Posts