ಜಾತ್ಯತೀತ ಸಮಾಜದ ನಿರ್ಮಾಣ ಹೇಗೆ ಮತ್ತು ಏಕೆ?

ಭಾರತ ಒಂದು ವಿಶಿಷ್ಟ ದೇಶ. ಹಲವು ಧರ್ಮ ಹಾಗೂ ಶ್ರೀಮಂತ ಸಂಸ್ಕೃತಿಯ ಬೀಡು. ಭಾರತದಂತಹ ಇನ್ನೊಂದು ದೇಶ ಖಂಡಿತ ಈ ಭೂಮಂಡಲದಲ್ಲಿ ಇರಲಿಕ್ಕಿಲ್ಲ. ಅನೇಕತೆಯಲ್ಲಿ ಏಕತೆ ಈ ದೇಶದ ಬೀಜ ಮಂತ್ರ. ಭಾರತ ದೇಶದ ಮೇಲೆ ಮೇಲಿಂದ ಮೇಲೆ, ಶತ ಶತ ಮಾನಗಳಿಂದ ದಾಳಿಯ ಮೇಲೆ ದಾಳಿಗಳು ನಡೆದರೂ ಭಾರತ ತನ್ನ ಅನನ್ಯ ಸಂಸ್ಕೃತಿಯನ್ನು ಬಿಟ್ಟು ಕೊಟ್ಟದ್ದಿಲ್ಲ. ತನ್ನ ಮೂಲ ಸಂಸ್ಕೃತಿಯ ಜೊತೆ ಜೊತೆಗೆ ತನ್ನ ಸಂಪರ್ಕಕ್ಕೆ ಬಂದ ಒಳ್ಳೊಳ್ಳೆಯ ವಿಷಯಗಳನ್ನು ತನ್ನೊಡಲಿನಲ್ಲಿ ಸಮೀಕರಿಸಿ, ಬೆಳೆದುಕೊಂಡು ಬಂದಿರುವುದು ನಮ್ಮ ಭಾರತೀಯ ಸಂಸ್ಕೃತಿಯ ವಿಶೇಷ. ಆದರೆ ಇಂದಿನ ಜನಾಂಗ ತಮ್ಮ ಅಮೂಲ್ಯ ಸಂಸ್ಕೃತಿಯನ್ನು ಮರೆತು, ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಚ್ಚಿಕೊಳ್ಳುತ್ತಿರುವುದು ವಿಪರ್ಯಾಸವೆನಿಸುತ್ತದೆ.

ನಾವು ಭಾರತದಲ್ಲಿ ಬೇರೆ ಬೇರೆ ಧರ್ಮ ಅನುಸರಿಸುತ್ತ ಬಂದಿದ್ದರೂ, ಆದಿ ಕವಿ ಪಂಪ ಹೇಳಿರುವಂತೆ, ‘ಮನುಷ್ಯ ಜಾತಿ ತಾನೊಂದೆ ವಲಂಎಂದು ನಂಬಿಕೊಂಡು ಬಂದವರು. ಮಾನವರು ಧರ್ಮವನ್ನು ಹಲವಾರು ಕಾರಣಗಳಿಂದ ನಂಬುತ್ತಾರೆ. ಧರ್ಮ ಮತ್ತು ಸಂಸ್ಕೃತಿ ಬೇರೆ ಬೇರೆಯಾದರೂ ಧರ್ಮ ನಮ್ಮ ಸಂಸ್ಕೃತಿಯನ್ನು ಪೀಳಿಗೆಯಿಂದ ಪೀಳಿಗೆಗೆ ಕೊಂಡೊಯ್ಯುವ ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತದೆ. ಕೆಲವರಿಗೆ ಅದು ಧರ್ಮ ರಕ್ಷಕನಾಗಿ ಗೋಚರಿಸಿದರೆ ಇನ್ನು ಕೆಲವರಿಗೆ ಕೈವಲ್ಯಕ್ಕೆ ಸಾಧನ, ಕೆಲವರಿಗೆ ಅದು ನೆಮ್ಮದಿ ಕೊಡುವ ಅಂಶವಾಗಿರುತ್ತದೆ.

ಭಾರತದಲ್ಲಿ ಹಲವು ಜಾತಿಗಳಿದ್ದರೂ ಇಲ್ಲಿ ಪ್ರತಿಯೊಂದು ಜಾತಿಯ ಜನರಿಗೂ ಸಮಾನವಾದ ಮಹತ್ವವಿದೆ. ಮನುಷ್ಯ ಮಗುವಾಗಿ ಜನ್ಮ ತಾಳುವಾಗ ಅವನ ಸಂಸ್ಕೃತಿ ಅವನ ಜೊತೆಗೆ ಜನ್ಮ ತಾಳುವುದಿಲ್ಲ. ಅವನು ಬೆಳೆದಂತೆಲ್ಲ ಆ ಸಮಾಜದ ಸಂಸ್ಕೃತಿಯನ್ನು ಕಲಿಯ ತೊಡಗುತ್ತಾನೆ. ಸಮಾಜದಲ್ಲಿ ಬದುಕುತ್ತ ಅದನ್ನು ನೋಡುತ್ತ ಅವನು ಆ ಸಮಾಜದ ಒಂದು ಭಾಗವಾಗಿ ಬಿಡುತ್ತಾನೆ. 

ಜಾತ್ಯತೀತ ಶಬ್ಧಕ್ಕೆ ತನ್ನದೇ ಆದ ವ್ಯಾಪ್ತಿ ಇದೆ. ಬಹಳಷ್ಟು ಸಲ ಅದನ್ನು ಸಂಕುಚಿತ ಅರ್ಥದಿಂದ ಬಳಸಲಾಗುತ್ತಿದೆ. ಜಾತ್ಯತೀತ ಅಂದರೆ ಬೇರೆ ಬೇರೆ ಜಾತಿಗಳ ಜನರು ಜಾತಿ ಭೇದ ಮರೆತು ಒಂದೇ ಜಾತಿಯವರಂತೆ ಬದುಕುವುದು. ಇಂದು ನಮ್ಮ ಎಳೆಯರು ಗೊಂದಲದಲ್ಲಿದ್ದಾರೆ. ಹಿಂದಿನ ಮೌಲ್ಯಗಳನ್ನು ಅವರಿಗೆ ತಿಳಿ ಹೇಳುವುದರಲ್ಲಿ ನಾವೆಲ್ಲೋ ವಿಫಲರಾಗಿದ್ದೇವೆ. ಹೊಸತಿನಲ್ಲಿ ಹುರುಳಿಲ್ಲವಾಗಿದೆ. ಹೀಗಾಗಿ ಭದ್ರ ಬುನಾದಿಯಿಲ್ಲದ ಕಟ್ಟಡದಂತಹ ಬದುಕು ಅವರದಾಗಿದೆ. ಹಳೆಯ ಆಚರಣೆ ಗಳಲ್ಲಿರುವ ಜೊಳ್ಳುಗಳನ್ನು ಜರಡಿ ಹಿಡಿದು ಗಟ್ಟಿ ಕಾಳನ್ನು ಅವರ ಮುಂದಿಡುವ ಪ್ರಯತ್ನದ ಅಗತ್ಯ ಇಂದು ತುಂಬಾನೇ ಇದೆ. 

ಎಲ್ಲಾ ಧರ್ಮಗಳ ಮೂಲ ಗುರಿ ಒಂದೇ ಆಗಿದೆ. ಅಸ್ತಿತ್ವಕ್ಕೆ ಬರುವಾಗ ಎಲ್ಲಾ ಧರ್ಮಗಳು ಸರ್ವರ ಅಭ್ಯುದಯವನ್ನೇ ಬಯಸಿದರೆ ಮುಂದೆ ಅದಕ್ಕೆ ಹೊಸ ರೆಕ್ಕೆ ಪುಕ್ಕಗಳು ಹುಟ್ಟಿಕೊಂಡು ಸೇರ್ಪಡೆಗೊಂಡು ಅದರ ಮೂಲ ಸ್ವರೂಪವನ್ನೇ ಕೆಲವೊಮ್ಮೆ ಅಡಿಮೇಲು ಮಾಡುತ್ತವೆ. ಸರ್ವ ಧರ್ಮಗಳ ಸಹ ಬಾಳ್ವೆಗೆ ನಾವು ಹೆಚ್ಚಿನದ್ದೇನೂ ಮಾಡಬೇಕೆಂದಿಲ್ಲ. ನಾವು ಪಾಲಿಸಿಕೊಂಡು ಬಂದಿರುವ ಧರ್ಮದ ಮೂಲವನ್ನು ಸರಿಯಾಗಿ ಅಧ್ಯಯನ ಮಾಡಿ ಅವುಗಳನ್ನು ಪಾಲಿಸಿಕೊಂಡು ಬಂದರೆ ಜಾತ್ಯತೀತ ಸಮಾಜದ ನಿರ್ಮಾಣ ಮಾಡಬಹುದು. ನಾವೆಲ್ಲರೂ ಸಹೋದರರಂತೆ ಬದುಕು ಕಟ್ಟಬಹುದು. ಎಲ್ಲಾ ಧರ್ಮಗ್ರಂಥಗಳು, ಧರ್ಮಗಳು – ಮಾನವೀಯತೆಯಿಂದ ಎಲ್ಲರೂ ಹೊಂದಿಕೊಂಡು ಪ್ರೀತಿ ವಿಶ್ವಾಸದಿಂದ ಬದುಕುವ ಸಂದೇಶವನ್ನು ನೀಡುತ್ತವೆಯೇ ಹೊರತು ದ್ವೇಷ, ಅಸೂಯೆ, ವಿರೋಧಗಳನಲ್ಲ. ಆದರೆ ಹೆಚ್ಚಿನವರು ತಮ್ಮ ಧರ್ಮದ ಸಂದೇಶಗಳನ್ನು ಸರಿಯಾಗಿ ತಿಳಿದು ಕೊಳ್ಳದೆ, ಜಾತ್ಯತೀತದ ಅರ್ಥಸರಿಯಾಗಿ ತಿಳಿದುಕೊಳ್ಳದೆ ಯಾರೋ ಏನೋ ಹೇಳಿದ್ದನ್ನು ತಪ್ಪು ತಿಳಿದುಕೊಂಡು ಇತರರಿಗೆ ತೊಂದರೆಯನ್ನುಂಟು ಮಾಡುತ್ತಾರೆ.

ಕ್ರೈಸ್ತ, ಇಸ್ಲಾಂ, ಸಿಖ್ ಅಥವಾ ಹಿಂದೂ ಧರ್ಮವೇ ಆಗಿರಲಿ ಪ್ರೀತಿ, ಸಹಬಾಳ್ವೆ, ವಿಶ್ವಾಸಕ್ಕೆ ಒತ್ತು ನೀಡುತ್ತದೆಯೇ ಹೊರತು ಹಿಂಸೆಗಲ್ಲ. ಸಹಬಾಳ್ವೆ ಎಲ್ಲಾ ಧರ್ಮಗಳ ಬೀಜ ಮಂತ್ರವಾಗಿದೆ. ಇದೆ ಜಾತ್ಯತೀತ ಸಮಾಜಕ್ಕೆ ಅಡಿಗಲ್ಲೂ ಆಗಿದೆ. ಧರ್ಮದ ತಿರುಳನ್ನು ಸರಿಯಾಗಿ ತಿಳಿದು ಕೊಂಡವರು ಮಾತ್ರ ತಮ್ಮ ಧರ್ಮದಂತೆ ಇತರ ಧರ್ಮಕ್ಕೂ ಗೌರವ ನೀಡುತ್ತಾರೆ. ಇದು ಜಾತ್ಯತೀತ ಸಮಾಜದ ಪಂಚಾಂಗವಾಗಿದೆ.

ಧರ್ಮ ಮತ್ತು ಸಂಸ್ಕೃತಿ ಗಳು ಮಾನವನ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದು ಇವುಗಳ ಸರಿಯಾದ ಅರಿವು ಜಾತ್ಯತೀತ ಸಮಾಜ ಕಟ್ಟಲು ಪ್ರೇರಕ ಶಕ್ತಿಯಾಗಿದ್ದು ಮಾನವ ಮಾನವನಾಗಿ ಬದುಕಲು ಅನುವು ಮಾಡಿ ಕೊಡಬಹುದಾಗಿದೆ. ಹೀಗೆ ಧರ್ಮ, ಸಂಸ್ಕೃತಿ ಇವು ಎರಡನ್ನೂ ಸರಿಯಾಗಿ ತಿಳಿದುಕೊಂಡಲ್ಲಿ ನಮ್ಮ ಭಾರತದಂತಹ ಬಹು ಧರ್ಮಿಯ ದೇಶದಲ್ಲೂ ಜಾತ್ಯತೀತ ಸಮಾಜವನ್ನು ಉಳಿಸಿಕೊಳ್ಳಬಹುದು. ಅನೇಕ ಎಡರು ತೊಡರುಗಳ ನಡುವೆಯೂ ನಮ್ಮ ದೇಶ ಜಾತ್ಯತೀತ ನೆಲೆಯಲ್ಲೇ ಮುಂದುವರಿಯುತ್ತಿದೆ, ಮುಂದುವರಿಯಲಿದೆ.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter