ಹಸಿದ ಕಾಗೆಗಳ ಹಿಂಡು
ಚದುರಿ ಟೊಂಗೆಯ ಮೇಲೊಂದು
ದೀಪದ ಕಂಬದಲೊಂದು
ಪ್ರಾಂಗಣದಲಿ ಹಲವು
ಗೋಪುರದಲಿ ಶೃಂಗಸಭೆ
ಕಾ…ಕಾ…ಸದ್ದಿನ ನಡುವೆ
ಒಂದೆರಡು ತರ್ಪಣ
ಅಸ್ಥಿ ದರ್ಭೆಗಳ ಜಲಪಯಣ
ಮರಳ ಕಣಗಳ ನಡುವೆ
ಒಡಲ ವೇದನೆಯ ತಾಣ
ಕಂಬನಿಯ ಸಾಲಿನಲಿ
ತಬ್ಬಲಿಗಳ ಮೌನ!
ಅಟ್ಟದ ಮೇಲಿಟ್ಟ ಪಿಂಡ
ಯಾವ ಕಾಗೆಯ ಪಾಲು ?
ಚಟ್ಟವೇರಿದ ಕಾಯ
ಚಿತೆಯಲುರಿದ ಹೃದಯ
ಹಸಿದಂತೆ ಕಾಣುವುದು
ಹಸಿವರಿಯದವರಿಗಲ್ಲವೇ ;
ನೆಲದ ಗುಣವರಿಯದಿರೆ
ನೆಲೆಯನರಿಯುವುದೆಂತು
ಕಸದ ರಾಶಿಯ ನಡುವಿನ
ಸಿಹಿ ಹೂರಣದ ತುಣುಕು
ಚಿತೆಯೇರುವ ಜೀವಕೆ
ಮರೀಚಿಕೆಯಹುದೇ
ಮರದ ಮೇಲಿನ ಹಕ್ಕಿ
ಅರಸುವುದೇನನ್ನು !
ಒಂದೆರಡು ಮಂತ್ರ ನೂರೆಂಟು
ತಂತ್ರ ಜೀವ ಬೆಸೆಯುವ
ತಂತುಗಳ ನಡುವೆ ಹರಿವ
ಕಂಬನಿಯ ತೊರೆ ; ಅಗಲಿದ
ತನು ಹೂತಿಟ್ಟ ಧನ
ಮರುಗಿದ ಮನ ನಡುವೆ
ನಾ.. ನೀ.. ನೀ.. ನಾ,,,
ಅವನಿವನೆಂಬ ಚದುರಂಗ ;
ತೆರೆದ ಕಂಗಳ ಜೀವ ಕೈ
ಚಾಚುವಾಗ ರೇಖೆಗಳ
ನಡುವೆಯೇ ಅನ್ನದ ಚಿತ್ತಾರ
ಬಿರಿದ ಮುಷ್ಟಿಯಲಿ
ಹಸಿದೊಡಲ ಬಿಂಬ !