ಪ್ರಪಂಚವನ್ನು ಪಾದಯಾತ್ರೆ ಮಾಡಿರುವ ಗಾಂಧಿವಾದಿ ಇ.ಪಿ. ಮೆನನ್

ಪ್ರಪಂಚ ಪ್ರದಕ್ಷಿಣೆ, ಅದರಲ್ಲೂ ಕಾಲ್ನಡಿಗೆಯಲ್ಲಿ, ಜೇಬಲ್ಲಿ ಒಂದು ಪೈಸೆ ಕೂಡಾ ಇರದೆ ಐತಿಹಾಸಿಕ ಯಾತ್ರೆ ಮಾಡಿ ಬಂದಿರುವವರು .ಪಿ. ಮೆನನ್. ಅಪ್ಪಟ ಗಾಂಧಿವಾದಿಗಳಾದ ಇವರು ಪರಮಾಣು ನಿಶ್ಯಸ್ತ್ರೀಕರಣ ಮತ್ತು ವಿಶ್ವ ಶಾಂತಿಯಲ್ಲಿ ನಂಬಿಕೆಯಿಟ್ಟವರು. 1962 ರಲ್ಲಿ ಮೆನನ್ ತನ್ನ ಸ್ನೇಹಿತ ಸತೀಶ್ ಕುಮಾರ್ ಸಂಗಡ ವಿಶ್ವ ನಾಯಕರನ್ನು ಭೇಟಿ ಮಾಡಿ ಪರಮಾಣು ನಿಶ್ಯಸ್ತ್ರೀಕರಣವನ್ನು ಪ್ರಚುರಪಡಿಸಲು ಜಗತ್ತಿನಾದ್ಯಂತ 8000 ಮೈಲುಗಳಷ್ಟು ನಡೆದರು. ಎಂಬತ್ತೈದು ವರ್ಷದ . ಪ್ರಭಾಕರ ಮೆನನ್ ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದು, ವಿನೋಬಾ ಭಾವೆ ಅವರ ಕಾರ್ಯಗಳು ಮತ್ತು ದರ್ಶನಗಳನ್ನು ಅನುಸರಿಸುತ್ತಿದ್ದಾರೆ.

ಇ.ಪಿ.ಮೆನನ್, ತಮ್ಮ ಪ್ರಪಂಚ ಪರ್ಯಟನೆ, ವಿಶ್ವ ಶಾಂತಿ ಮತ್ತು ಸಾಮರಸ್ಯ, ಶಾಂತಿ, ಪರಮಾಣು ನಿಶ್ಶಸ್ತ್ರೀಕರಣ, ಸಾಮಾಜಿಕ ನ್ಯಾಯ, ನಿರ್ಭೀತ, ಸಮೃದ್ಧ ಜಗತ್ತಿನ ನಿರ್ಮಾಣದ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದು ಹೀಗೆ :

”ನನಗೆ ಆಗ 18 ವರ್ಷ ವಯಸ್ಸು, ವಿನೋಭಾ ಭಾವೆಯವರ ಅನುಯಾಯಿಯಾಗಿ ಭೂದಾನ ಪಾದಯಾತ್ರೆಯಲ್ಲಿ ಜೊತೆಗೂಡಿ, 1954 ರಲ್ಲಿ ಪ್ರಾರಂಭಗೊಂಡು ಮೂರು ವರ್ಷಗಳ ಕಾಲ ಪಶ್ಚಿಮ ಬಂಗಾಳ, ಒರಿಸ್ಸಾ, ಆಂಧ್ರ, ತಮಿಳುಮಾಡು, ಕೇರಳ ಮೂಲಕ ಬೆಂಗಳೂರಿಗೆ ಬಂದೆವು. ವಿನೋಭಾ ಭಾವೆಯವರು ಸಮಾಜ ಸೇವೆಗಾಗಿ ಬೆಂಗಳೂರಿನಲ್ಲಿ ವಿಶ್ವನೀಡಂ ಸ್ಥಾಪಿಸುವ ಜವಾಬ್ದಾರಿ ನನಗೆ ವಹಿಸಿ ಹೊರಟರು. 

1961 ರಲ್ಲಿ ಖ್ಯಾತ ಚಿಂತಕ ಬರ್ಟ್ರಾಂಡ್ ರಸಲ್ ಅವರನ್ನು ಪರಮಾಣು ವಿರೋಧಿಸಿದ್ದಕ್ಕೆ ಇಂಗ್ಲೆಂಡಿನಲ್ಲಿ ಕಾರಾಗೃಹಕ್ಕೆ ಕಳಿಸಿದ ವಿಷಯ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅಲ್ಲಿಂದಲೇ ಅವರು ಯುವಕರಿಗೆ ಪರಮಾಣು ನಿಶ್ಯಸ್ತ್ರೀಕರಣದ ಬಗ್ಗೆ ವಿಶ್ವವನ್ನು ಎಚ್ಚರಿಸಲು ನೀಡಿದ್ದ ಸಂದೇಶದ ಮಾತು ನನ್ನನ್ನು ಪ್ರಚೋದಿಸಿತು. ಪರಮಾಣು ಶಕ್ತಿ ಹೊಂದಿದ್ದ ರಷ್ಯಾದ ಪ್ರಧಾನಿ ಕ್ರುಶ್ಚೇವ್, ಫ್ರಾನ್ಸ್ ಅಧ್ಯಕ್ಷ ಡಿಗಾಲೆ, ಬ್ರಿಟನ್ ಪ್ರಧಾನಿ ಮ್ಯಾಕ್ ಮಿಲನ್ ಮತ್ತು ಅಮೆರಿಕಾ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರನ್ನು ಕಾಲ್ನಡಿಗೆಯಲ್ಲಿಯೇ ಹೋಗಿ ಭೇಟಿ ಮಾಡಿ ಶಾಂತಿ ಸಂದೇಶ ಪ್ರಚಾರ ಮಾಡಲು ನನ್ನ ಸ್ನೇಹಿತ ಸತೀಶ್ ಜೊತೆ ಹೊರಟೆ. 

ರಾಜ್ ಘಾಟ್‌ನ ಗಾಂಧೀಜಿ ಸಮಾಧಿಗೆ ಮಣಿದು ಜೂನ್ 1, 1962 ರಂದು ಹೊರಟೆವು. ನಮ್ಮ ಜೇಬಿನಲ್ಲಿ ಒಂದು ಪೈಸೆಯೂ ಇಲ್ಲದೆ, ವಿಶ್ವದಾದ್ಯಂತ 8000 ಮೈಲಿಗಳು, ಮಾನವೀಯತೆಯ ಮೇಲೆ ಅಚಲ ನಂಬಿಕೆಯೊಂದಿಗೆ ಪ್ರಯಾಣಿಸಿದೆವು. ನವದೆಹಲಿಯಿಂದ ಪಾಕಿಸ್ತಾನದ ಮೂಲಕ ಕಾಬೂಲ್, ಟೆಹ್ರಾನ್, ಮಾಸ್ಕೋ, ವಾರ್ಸಾ, ಬಾನ್, ಬರ್ಲಿನ್, ಬ್ರಸೆಲ್ಸ್, ಪ್ಯಾರಿಸ್, ಲಂಡನ್, ವಾಷಿಂಗ್ಟನ್ ಡಿಸಿ, ಕ್ಯಾಲಿಫೋರ್ನಿಯಾ, ಟೋಕಿಯೊ, ಹಾಂಗ್ ಕಾಂಗ್, ಸೈಗಾನ್, ಸಿಂಗಾಪುರ್, ಕೊಲಂಬೊ, ಬಾಂಬೆ ಮತ್ತು ವಾಪಸ್ ನವದೆಹಲಿಗೆ ಗಾಂಧಿ ಜಯಂತಿಯಂದು ಅಂದರೆ ಅಕ್ಟೋಬರ್ 2, 1964 ರಂದು ಹಿಂದಿರುಗಿದೆವು. 

ವಿಶ್ವನಾಯಕರನ್ನು ಭೇಟಿ ಮಾಡಿದೆವು. ವಿಶ್ವ ನಾಯಕರನ್ನು ಪರಮಾಣು ಶಸ್ತ್ರಾಸ್ತ್ರಗಳಿಗಾಗಿ ತಮ್ಮ ಹುಚ್ಚು ಓಟದ ಬಗ್ಗೆ ಮರುಚಿಂತನೆ ಮಾಡಲು, ಚಿಂತಿಸುವಂತೆ ಮಾಡುವಲ್ಲಿ, ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾದೆವು. ಆಗಿನ ಪ್ರಧಾನಿ ನೆಹರು, ಉಪ ರಾಷ್ಟ್ರಪತಿ ಡಾ. ರಾಧಾಕೃಷ್ಣನ್ಸೇರಿದಂತೆ ವಿಶ್ವ ನಾಯಕರು, ಶಾಂತಿ ಪ್ರಿಯರು ನಮಗೆ ಪತ್ರ ಬರೆದು ಬೆಂಬಲಿಸಿದ್ದರು.

ಹಣವಿಲ್ಲದೇ ಮಾನವತ್ವವನ್ನು ನಂಬಿ ವಿಶ್ವಯಾತ್ರೆ ಮಾಡಿ ಬಂದಿರುವ ನಾನು ಈಗಲೂ ಅದೇ ಸಿದ್ಧಾಂತವನ್ನೇ ನಂಬಿದ್ದೇನೆ. ಇಂದಿಗೂ, ವಿನೋಬಾ ಭಾವೆ ಅವರ ಆದರ್ಶದಂತೆಯೇ ಬದುಕಿದ್ದೇನೆ. ‘ಹಣವಿಲ್ಲದೆ ಹೋದರೂ, ಜನರು ನಿಮ್ಮ ಧ್ಯೇಯವನ್ನು ಬೆಂಬಲಿಸುತ್ತಾರೆ’ ಎಂಬುದು ನಾನು ಕಂಡುಕೊಂಡ ಸತ್ಯ. ನಾನು ಯಾವುದೇ ಗಡಿಗಳನ್ನು ನಂಬದವನು, ವಿಶ್ವಮಾನವತ್ವ, ವಿಶ್ವಭ್ರಾತೃತ್ವವೇ ಹಿರಿದಾದದ್ದು.

ಇಂಡಿಯಾ ಡೆವಲಪ್ ಮೆಂಟ್ ಫೌಂಡೇಷನ್ ಮೂಲಕ 21 ವರ್ಷ ಸಮಾಜಸೇವೆ ಮಾಡಿದೆ. ದಾನಿಗಳ ಸಹಾಯ ಪಡೆದು, ಸಾಮಾಜಿಕ ಕಳಕಳಿಯುಳ್ಳ 105 ಮಂದಿಯನ್ನು ಗುರುತಿಸಿ ತಲಾ ‘ದೇಶಸ್ನೇಹಿ’ ಪ್ರಶಸ್ತಿ ಮತ್ತು 25 ಸಾವಿರ ರೂಪಾಯಿ ಬಹುಮಾನ ನೀಡುತ್ತಿದ್ದೆವು. ಅಮೆರಿಕಾ ಚುನಾವಣೆಯಲ್ಲಿ ಮಹಿಳೆಯೊಬ್ಬರು ಅಧ್ಯಕ್ಷರಾಗಲಿ ಎಂಬ ಉದ್ದೇಶದಿಂದ ಹಿಂದಿನ ಸಲ ಹಿಲರಿ ಕ್ಲಿಂಟನ್ ಪರವಾಗಿ ಮೂರು ತಿಂಗಳು ಪ್ರಚಾರ ನಡೆಸಿದ್ದೆ. ಟ್ರಂಪ್ ನನಗೆ ಮೆಕ್ಸಿಕೋಕೆ ಅಟ್ಟುವುದಾಗಿ ಹೆದರಿಸಿ ಪತ್ರ ಬರೆದಿದ್ದರು. 

ಈಗಿನ ಯುವಕರು ವಿಶ್ವದೃಷ್ಟಿಯ ಮೂಲಕ ಪ್ರಪಂಚವನ್ನು ಸುಂದರಗೊಳಿಸಲು, ಮಾನವೀಯಗೊಳಿಸಲು ವಿಭಿನ್ನವಾಗಿ ಚಿಂತಿಸಬೇಕು. ರೈತರ ಬದುಕು ಹಸನುಗೊಳ್ಳಬೇಕು. ಪರೋಪಕಾರಿಗಳಾಗಬೇಕು. ಕ್ಯೂಬಾದ ಮಾಜಿ ಅಧ್ಯಕ್ಷ, ಕಮ್ಯುನಿಸ್ಟ್ ಕ್ರಾಂತಿಯ ನಾಯಕ ಫಿಡಲ್ ಕ್ಯಾಸ್ಟ್ರೋ ಜೊತೆ ಒಂದು ತಿಂಗಳಿದ್ದಂತಹ ಏಕೈಕ ಭಾರತೀಯ ನಾನು. ಕ್ಯೂಬಾ ತೊಂದರೆಯಲ್ಲಿದೆಯೆಂದು ಚೀನಾ ಕಳಿಸಿದ್ದ ಆಹಾರವನ್ನು ತಮಗಿಂತ ಹೀನಸ್ಥಿತಿಯಲ್ಲಿದ್ದ ವಿಯಟ್ನಾಮ್ ಜನರಿಗೆ ಕಳುಹಿಸಿದ್ದನ್ನು ಕಣ್ಣಾರೆ ಕಂಡೆ. ಈ ಪರೋಪಕಾರಿ ಗುಣ ವಿಶ್ವವ್ಯಾಪಿಯಾಗಬೇಕು” ಎಂದು ವಿಶ್ವಶಾಂತಿಯ ಹರಿಕಾರ ಇ.ಪಿ.ಮೆನನ್ ತಿಳಿಸಿದರು.


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter