ಬದುಕು ಕೆಲವೊಮ್ಮೆ ಹಾಗೆ, ಮೊದಲ ನೋಟಕ್ಕೆ ಸುಂದರವೆನಿಸುತ್ತದೆ !!

ಆಗ ತಾನೇ ಅಮೇರಿಕಾ ತಲುಪಿ ಬೆರಗು ಕಣ್ಣಿನಿಂದ ವಿದೇಶಿಯರ ಜೀವನ ನೋಡುತ್ತಿದ್ದೆ, ವಯಸ್ಸಾದ ಹಿರಿಯರ ಜೀವನ ಭಾರತಕ್ಕಿಂತಾ ಅಮೇರಿಕಾದಲ್ಲಿ ಬಹಳ ವಿಭಿನ್ನ ಎನ್ನಿಸುತ್ತಿತ್ತು. ಮುಖದ ಸುಕ್ಕು ಕಾಣಬಾರದೆಂದು ಬಿಳಿಯ ಚರ್ಮದ ಮೇಲೆ ಹಚ್ಚಿರುವ ಮೇಕ್ಅಪ್, ಕಡುಗೆಂಪು ಬಣ್ಣದ ಲಿಪ್ ಸ್ಟಿಕ್, ಕೈಯಲ್ಲಿನ ಹತ್ತು ಉಗುರಿಗೆ ಹತ್ತು ಬಣ್ಣದ ಅಲಂಕಾರ. ಇಸ್ತ್ರಿ ಮಾಡಿದ ಕೂದಲು, ವಯಸ್ಸಿನವರನ್ನೂ ನಾಚಿಸುವಂತೆ ಹಾಕಿರುವ ಕಿರುಬಟ್ಟೆ, ಅರ್ಧ ಇಂಚು ಉದ್ದದ ಚಪ್ಪಲಿ ಹಾಕಿಕೊಂಡು 75 ವಯಸ್ಸಿನ ಹಿರಿಯ ಚೆಲುವೆ ತನ್ನ ದೊಡ್ಡ ಕಾರಿನಲ್ಲಿ ಹೊರಟಿದ್ದರು.

ಇನ್ನೊಂದೆಡೆ ಹೋಟೆಲ್ ಒಂದರಲ್ಲಿ ಹುಡುಗಿಯರನ್ನು ಮೇಲಿನಿಂದ ಕೆಳಗಿನವರೆಗೆ ನೋಡುತ್ತಾ, ಏನನ್ನೋ ಕುಡಿಯುತ್ತಾ, ಯಾವುದೋ ಹಾಡನ್ನು ಗುನುಗುನಿಸುತ್ತಿದ್ದ 80 ವಯಸ್ಸಿನ ಹಿರಿ ಯುವಕ.  ಈ ಅಮೇರಿಕಾ ದೇಶದಲ್ಲಿ 80 ವಯಸ್ಸಿನವರು ಹೊಸ ಹೊಸ ಕಲೆಯನ್ನು ಕಲಿಯಲು ಶುರುಮಾಡುತ್ತಾರೆ. ವಯಸ್ಸು 80 ಆದರೂ ಬೇರೆ ಬೇರೆ ತರಗತಿಗಳಿಗೆ ಸೇರುವುದು ಇಲ್ಲಿ ಬಹಳ ಸಹಜ. 70 ವಯಸ್ಸಿನವರು ಸ್ಕೇಟಿಂಗ್ ಮಾಡುತ್ತಾರೆ, 75 ವಯಸ್ಸಿನವರು ಜಿಮ್‌ನಲ್ಲಿ ಕಸರತ್ತು ಮಾಡುತ್ತಿರುತ್ತಾರೆ, ಶಾಪಿಂಗ್ ಮಾಲ್‌ಗಳಲ್ಲಿ ಕೆಲಸಮಾಡುತ್ತಾರೆ, ಯುವಕರಿಗಿಂತಾ ಚೆನ್ನಾಗಿ  ಪಾರ್ಟಿ ಮಾಡುತ್ತಾ ಕಾಲ ಕಳೆಯುತ್ತಾರೆ . 

ಮೊದಲ ಬಾರಿಗೆ ನೋಡಿದಾಗ ವಾಹ್ಎಂತಹ ಸ್ವಾತಂತ್ರ್ಯ, ಎಂತಹ ಜೀವನ, ಮಕ್ಕಳು ಮರಿಮಕ್ಕಳು ಎನ್ನುವ ಹಿಡಿತವಿಲ್ಲ, ಯಾರಿಗೂ ಅವಲಂಬಿತರಾಗುವ ಅವಶ್ಯಕತೆ ಇಲ್ಲ, ಸಂಸಾರ ಸಾಗರದ ಒತ್ತಡವಿಲ್ಲಇವರ ಜೀವನ ಎಷ್ಟು ಸುಂದರ ಎನ್ನಿಸಿತ್ತು. ಬದುಕು ಕೆಲವೊಮ್ಮೆ ಹಾಗೆ, ಮೊದಲ ನೋಟಕ್ಕೆ ಸುಂದರವೆನಿಸುತ್ತದೆ!! 

ಆ 75 ವಯಸ್ಸಿನ ಹಿರಿಯ ಚೆಲುವೆಯನ್ನು ಆಗಾಗ ನೋಡುತ್ತಿದ್ದೆ, ಗಮನಿಸ ತೊಡಗಿದೆ. ಪ್ರತಿದಿನ ತಯಾರಾಗಿ ಕೆಲಸಕ್ಕೆ ಹೋಗುತ್ತಿದ್ದರು. ಆಭರಣ ಮಳಿಗೆಯಲ್ಲಿ ಈಕೆ ಸಹಾಯಕಿ. ಇಲ್ಲಿ ದುಡಿಮೆಗೆ ವಯಸ್ಸಿನ ಮಿತಿ ಇಲ್ಲ, ಇದು ದುಬಾರಿ ದೇಶ.

ಒಂದೆರಡು ತಿಂಗಳ ನಂತರ ಒಮ್ಮೆ ಪೊಲೀಸ್ ಗಾಡಿಯೊಂದು ಅವರ ಮನೆಯ ಮುಂದೆ ನಿಂತಿತ್ತು. ಏನು ವಿಷಯ ಎಂದು ವಿಚಾರಿಸಿದಾಗ ತಿಳಿಯಿತು, ಆಕೆಗೆ ಅರೆಸ್ಟ್ ವಾರೆಂಟ್(ಬಂಧನದ ವಾರೆಂಟ್) ಬಂದಿತ್ತು. ಕಾರಣ ಏನೆಂದರೆ, ಆಕೆಯ ಮನೆಯ ಮುಂದೆ 18-20 ಇಂಚು ಹುಲ್ಲು ಬೆಳೆದಿತ್ತು, ಅದಕ್ಕಾಗಿ ಕೋರ್ಟ್ ನೋಟೀಸ್ ಬಂದಿತ್ತು. ವಯೋಸಹಜ ಮರೆವು ನೋಟೀಸ್ ಬಗ್ಗೆ ಮರೆತಿದ್ದರು. ಅಕ್ಕ-ಪಕ್ಕದವರಿಗೂ ಇಂತಹ ಒಂದು ಕಾನೂನು ಇದೆ ಎಂದು ತಿಳಿದಿರಲಿಲ್ಲ. ಹಾಗಾಗಿ ಆ ಪ್ರಕರಣ ಬಂಧನದ ವಾರಂಟ್ ವರೆಗೂ ಬಂದಿತ್ತು . 

ಕಾನೂನಿನ ಪ್ರಕಾರ ಮನೆಯ ಮುಂದೆ 18 ಇಂಚು ಅಥವಾ ಅದಕ್ಕಿಂತಾ ಹೆಚ್ಚಾಗಿ ಹುಲ್ಲು ಬೆಳೆದಿದ್ದರೆ ಅದು ಅಪರಾಧವಂತೆ. ಆಕೆ ಹೆದರಿ ಹೋಗಿದ್ದರು. ತನ್ನ ಮನೆಯ ಮುಂದೆ ಕಾಡಿನಂತೆ ಬೆಳೆದಿರುವ ಹುಲ್ಲನ್ನು ತಾನೇ ಸ್ವಚ್ಛ ಮಾಡುವಷ್ಟು ದೈಹಿಕ ಶಕ್ತಿ ಇರಲಿಲ್ಲ, ಬೇರೆಯವರ ಹತ್ತಿರ ಕೆಲಸ ಮಾಡಿಸಲು ಸಾಕಷ್ಟು ಹಣ ಬೇಕಿತ್ತು ಅದೂ  ಇರಲಿಲ್ಲ. ಸಹಾಯಕ್ಕೆ ಕರೆಯಲು ಯಾರೂ ಆತ್ಮೀಯರೂ ಇರಲಿಲ್ಲ. ಅಲ್ಪ ಸ್ವಲ್ಪ ಕೂಡಿಟ್ಟ ಹಣ ಈಗ ಕೋರ್ಟಿಗೆ ಕಟ್ಟಬೇಕೆಂಬ ಭಯ ಒಂದೆಡೆ, ಕಟ್ಟದಿದ್ದರೆ ಬಂಧನದ ಭೀತಿ ಒಂದೆಡೆ , ಈ ಎಲ್ಲ ಅಸಹಾಯಕತೆಯನ್ನು ಪೊಲೀಸರಿಗೆ ವಿವರಿಸುತ್ತಿದ್ದರು. ಚಂದನೆಯ ಉಗುರಿನ ಬಣ್ಣ ಹಚ್ಚಿದ ಕೈಗಳು ಇಂದು ನಡುಗುತ್ತಿದ್ದವು. ಪೊಲೀಸ್ ವಾಹನವೇರಿ ಸ್ಟೇಷನ್ ಕಡೆಗೆ ಹೊರಟರು .

ಇನ್ನು ಆ ರೆಸ್ಟೋರೆಂಟ್‌ನಲ್ಲಿನ ಹಿರಿ ಯುವಕನ ಕಥೆ ಹೇಳಬೇಕೆಂದರೆ, ಅಂದು ಹುಡುಗಿಯರನ್ನು ಮೇಲಿನಿಂದ ಕೆಳಗಿನವರೆಗೂ ನೋಡುತ್ತಾ ಕುಳಿತಿದ್ದ ಆತ  ಸ್ವಲ್ಪ ಹೊತ್ತಿನ ನಂತರ ತನ್ನ ಬಿಲ್ ಕೊಟ್ಟು ಹೊರ ನಡೆದರು . ಹತ್ತು ನಿಮಿಷದಲ್ಲೇ ಮತ್ತೆ ಬಂದರು, ಏನನ್ನೋ ಕಳೆದುಕೊಂಡವರಂತೆ ದಾರಿ ಉದ್ದಕ್ಕೂ ಏನನ್ನೋ ಹುಡುಕುತ್ತಾ ಬಂದರು. ಹೋಟೆಲ್‌ನ ಸಿಬ್ಬಂದಿಯ ಬಳಿ ಹೋಗಿ ಕೇಳಿದರು, ನನ್ನ ಹಿಯರಿಂಗ್ ಏಡ್ (ಕಿವಿ ಕೇಳಿಸಿಕೊಳ್ಳುವ ಯಂತ್ರ) ಎಲ್ಲೋ ಬಿದ್ದುಹೋಗಿದೆ ಎಂದು. ಹೋಟೆಲ್ ಜನಜಂಗುಳಿಯಿಂದ ತುಂಬಿದ್ದರಿಂದ ಸಹಾಯ ಮಾಡಲು ಹೋಟೆಲ್‌ನವರು ನಿರಾಕರಿಸಿದರು. ತಾನು ಕುಳಿತ ಟೇಬಲ್ ಹತ್ತಿರ, ಚೇರ್ ಮೇಲೆ, ರೆಸ್ಟ್  ರೂಮ್‌ನಲ್ಲಿ,  ದಾರಿಯಲ್ಲಿ ಎಲ್ಲ ಕಡೆ ಹುಡುಕಿ ನಿರಾಶರಾಗಿ ಅಸಹಾಯಕತೆಯಿಂದ ಹಿಂತಿರುಗಿದರು. 

ಕೆಲವೊಮ್ಮೆ ಸ್ವಾತಂತ್ರ್ಯ, ಏಕಾಂತ ಒಳ್ಳೆಯದು ಎನ್ನಿಸುತ್ತದೆ. ಆದರೆ ಇಂತಹ ದೃಶ್ಯಗಳು ನೋಡಿದಾಗ, ಜಗಳವಾಡಿಕೊಂಡು ಆದರೂ ಸರಿ ಪ್ರೀತಿ ಮಾಡಿ ಕೊಂಡು ಆದರೂ ಸರಿ ಸಮಾಜದ ಜೊತೆಗೆ ಜನರ ಮಧ್ಯೆ, ಸ್ನೇಹಿತರ ನಡುವೆ, ಕೊಂಕು ಮಾತನಾಡುವ ನೆರೆ ಹೊರೆಯವರೊಂದಿಗೆ, ಕಾಳಜಿ ತೋರಿಸುವ ಸಂಭಂದಿಗಳೊಂದಿಗೆ, ಏನಾದರೂ ನಾವಿದ್ದೇವೆ ಎನ್ನುವ ಸ್ನೇಹಿತರೊಂದಿಗೆ, ಅಕ್ಕರೆಯ ಧಾರೆ ಎರೆಯುವ ಕುಟುಂಬದೊಂದಿಗೆ, ಜೀವಕ್ಕೆ ಜೀವ ಕೊಡುವ ಪ್ರೀತಿಯ ಸಂಗಾತಿಯೊಂದಿಗೆ ಕೊನೆಯವರೆಗೂ ಬದುಕಬೇಕು ಎನ್ನಿಸುತ್ತದೆ !!


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Recent Posts

Sign up for our Newsletter