ಕನ್ನಡ ಸಾರಸ್ವತ ಲೋಕಕ್ಕೆ ‘ಚಾಮುಂಡೇಶ್ವರಿ ಭವನ’, ‘ಉಸಿರು’ ಕಾದಂಬರಿ ಮತ್ತು ‘ಕುಂಕುಮ’, ‘ದೂಜ ಮಾಸ್ತರರ ಮಗಳು ಬಸಿರಾದದ್ದು’ ಕಥಾ ಸಂಕಲನದಂತಹ ಯಶಸ್ವೀ ಸಾಹಿತ್ಯ ಕೃತಿಗಳನ್ನು ನೀಡಿದ್ದ ಡಾ. ವ್ಯಾಸರಾವ್ ನಿಂಜೂರರ ಪ್ರಸ್ತುತ ಕಥಾ ಸಂಕಲನ ‘ಮಂಚ’, 7 ಕಥೆಗಳ ಒಂದು ಸುಂದರ ಗುಚ್ಛ. ನಿಂಜೂರರು ತಮ್ಮ ಅದ್ಭುತವಾದ ಪಾತ್ರ ಚಿತ್ರಣಕ್ಕೆ ಹೆಸರಾದವರು. ನಿಂಜೂರರ ಕಥೆಗಳಲ್ಲಿ ಗಣಿತದ ಸಿದ್ಧಸೂತ್ರವಿಲ್ಲ. ತಮ್ಮ ಕಥೆಗಳಲ್ಲಿ ನಿಂಜೂರರು ವ್ಯಕ್ತಿಗಳನ್ನು ಸುದೀರ್ಘವಾಗಿ ಪರಿಚಯಿಸುವ ಹಾಗೆ ಹಳ್ಳಿ, ಪಟ್ಟಣ, ನಗರ ಮತ್ತು ನಾಯಿಯ ಸ್ವಭಾವ ಚಿತ್ರಣವನ್ನು ನಮ್ಮ ಮನ ಕರಗಿಸುವ ಹಾಗೆ ವರ್ಣಿಸಬಲ್ಲರು. ನಿಂಜೂರರಲ್ಲಿ ಅಪೂರ್ವವಾದ ಶಬ್ಧ ಭಂಡಾರವಿದೆ, ಕಚಗುಳಿಯಿಡುವ ಭಾಷೆಯಿದೆ, ನಿರೂಪಣೆಯ ವೈಭವವಿದೆ. ವಿನೋದಪ್ರಿಯವಾಗಿ ಕಥೆ ಹೇಳುವ ನಿಂಜೂರರಲ್ಲಿ ತೀರ್ಪು, ತೀರ್ಮಾನಗಳಿಲ್ಲ! ‘ಮಂಚ’ ಕಥಾ ಸಂಕಲನದ ಕಥೆಗಳ ಕಥಾವಸ್ತು ಕಡಲತೀರದ ಪಡಮುನ್ನೂರು ಮತ್ತು ಮುಂಬಯಿ ಸುತ್ತಮುತ್ತ ತಿರುಗುತ್ತದೆ.
‘ಮಂಚ‘ ಸಂಕಲನದ ಯಶಸ್ವಿನ ಕಥೆಗಳು ಸಲಾಂ ಬಾಂಬೆ, ಗರಡಿಮಜಲಿನ ಗಾಂಧಿ, ನಿರಾಕರಣೆ, ಸಣ್ಣಮ್ಮ ಮತ್ತು ಮಂಚ.
‘ಮಂಚ‘ :
ಗುತ್ತುವಿನ ಮನೆಯ ಮೆಣ್ಕ ಹೆಗ್ಡೆಯ ಪತ್ನಿ ಅಕ್ಕಣ್ಣಿ ಶೆಡ್ತಿ ಎಲೆ ಅಡಿಕೆ ಹಾಕುತ್ತಾ ತನ್ನ ಕಾಲಗಂಟಿನ ನೋವಿನ ಬಗ್ಗೆ ಕೆಲಸದವಳಾದ ತುಕ್ರಿಯಲ್ಲಿ ಹೇಳುತ್ತಾ, ತನ್ನ ದೈವ ಪಂಜುರ್ಲಿ ತನ್ನನ್ನು ಯಾಕೆ ಇನ್ನೂ ಕೊಂಡೊಯ್ಯುದಿಲ್ಲ ಎಂದೂ, ತನ್ನ ಅಳಿಯ ದಾಸಪ್ಪ ವಾತದ ಬಿರ್ತಿ ಎಣ್ಣೆ ತಾರದೆ ಇದ್ದುದನ್ನು ಹಳಿಯುತ್ತಾಳೆ. ಇಲ್ಲಿಂದ ಆರಂಭವಾದ ಕಥೆ ಪಂಜುರ್ಲಿಯ ಬೇಡಿಕೆ, ”ಓ ಹೆಗ್ಗಡ್ತಿಯೆ ನನಗೆ ಸ್ಥಾನ ಕೊಡಿಸು. ಮಾಯಗಾರನಾದ ನನಗೆ ನರ್ತನ ಸೇವೆ ಮಾಡಿಸು. ಮಂಚದ ಪೀಠದಲ್ಲಿ ಮಣಿ, ಚೌರಿಚಾಮರ ಖಡುಗವಿರಿಸಿ ದಿನಾ ಹೊನ್ನೆಣ್ಣೆಯಿಂದ ದೀಪ ಹೊತ್ತಿಸು” ಎಂಬ ಮಾತುಗಳು ಅಕ್ಕಣಿ ಶೆಡ್ತಿಯ ಭಯಭಕ್ತಿಯ ಮೇಲೆ ಬೆಳಕು ಚೆಲ್ಲುತ್ತದೆ. ಅಕ್ಕಣಿ ಶೆಡ್ತಿಯ ಕಾಲವಾದ ಗಂಡ ಮೆಣ್ಕ ಹೆಗ್ಡೆಯವರ ಪಾತ್ರ ಚಿತ್ರಣ ಅದ್ಭುತವಾಗಿ ಮೂಡಿ ಬಂದಿದೆ. ಗುತ್ತುವಿನ ಮನೆಯನ್ನು ಕೋಟೆಯ ಹಾಗೆ ನೋಡಿಕೊಂಡ ಮೆಣ್ಕ ಹೆಗ್ಡೆ ಜೋಡೆತ್ತುಗಳ ಕಮಾನು ಗಾಡಿ, ಪ್ರತಿಷ್ಠೆಗಾಗಿ ಎರಡು ಜೊತೆ ಕಂಬಳದ ಕೋಣ, ಅಂಕದ ಕೋಳಿ…. ಹೀಗೆ ಮನೆಯ ಭರಾಮಿಗೆ ತಕ್ಕಂತೆ ಬದುಕಿದವರು. ಪತ್ನಿ ಅಕ್ಕಣಿ, ಸಂಕ್ರಾಂತಿ, ಹುಣ್ಣಿಮೆ, ಏಕಾದಶಿಯ ಮಡಿವಂತಿಕೆ ತೋರಿದ ಕಾರಣ ಮೆಣ್ಕ ಹೆಗ್ಡೆಯವರು ಉಡುಪಿಯ ಬಂಡಾರ ಓಣಿಯ ಅಪ್ಪಿಬಾಯಿಯಲ್ಲಿ ಸದಾ ಸುಖ ಕಂಡವರು. ಮೆಣ್ಕ ಹೆಗ್ಡೆಯವರು ಸಾಯುವ ಹೊತ್ತಿಗೆ ಮನೆಯಲ್ಲಿದ್ದ ನಗ, ನಾಣ್ಯ, ಸಂಪತ್ತು ಖಾಲಿಯಾಗಿತ್ತು. ಗುತ್ತಿನ ಮನೆ ಬಾವಲಿ, ಇಲಿ, ಹೆಗ್ಗಣ, ಹುತ್ತದ ಬೀಡಾಗಿರುತ್ತದೆ. ದೇವಕಿಯಂತಹ ಮುಗ್ಧ ಪತ್ನಿಯನ್ನು ಪಡೆದ ಮೆಣ್ಕ ಹೆಗ್ಡೆಯವರ ಅಳಿಯ, ತನ್ನ ಮಾವ ಸತ್ತನಂತರ ಅವರದೇ ವಿಲಾಸಮಯ ಜೀವನ ಮುಂದುವರೆಸುತ್ತಾನೆ. ಮನೆಯ ಪಾತ್ರೆ ಪರಡೆ, ಧವಸ ಧಾನ್ಯ ಮಾರಿ, ಖಡಕ್ ಇಸ್ತ್ರಿಯ ಬಟ್ಟೆ, ಕೊರಳಲ್ಲಿ ಚಿನ್ನದ ಸರ ಸಾಕಿ ಗುತ್ತಿನ ಮನೆಯ ಭರಾಮ ಅನ್ನೂ ಮುಂದುವರೆಸುತ್ತಾನೆ. ಆಗಾಗ ಹೆಂಗಸರ ಬೇಟೆಯಾಡುತ್ತಾನೆ.
ಡಾ. ವ್ಯಾಸರಾವ್ ನಿಂಜೂರ
ಕುಕ್ರುಪ್ಪಾಡಿ ಬಿರ್ಮಣ್ಣ ಶೆಟ್ಟರ ವರ್ಷಾವಧಿ ಜುಮಾದಿಯ ಕೋಲದ ದಿನ ಲಂಪಟ ದಾಸಪ್ಪ ಹೆಗ್ಡೆಯ ಬದುಕಿನ ಅವಿಸ್ಮರಣೀಯ ದಿನವಾಗುತ್ತದೆ. ಜುಮಾದಿಯ ದರ್ಶನ ಚೀಂಕ್ರ ಪೂಜಾರಿಯದ್ದು. ಕೋಲಕ್ಕೆ ಬಂದಿದ್ದ ಹೊಸದಾಗಿ ಮದುವೆಯಾದ ಚೀಂಕ್ರ ಪೂಜಾರಿಯ ಪತ್ನಿ ಯಶೋಧೆ ಯನ್ನು ದಾಸಪ್ಪ ಹೆಗ್ಡೆ ಕೆಡಿಸುತ್ತಾನೆ. ಮರುದಿನ ಚೀಂಕ್ರ ಪೂಜಾರಿಯಿಂದ ಹೊಡೆತ ತಿಂದ ದಾಸಪ್ಪ ಹೆಗ್ಡೆ ಮುಂಬಯಿಗೆ ಓಡುತ್ತಾನೆ. ಕಥೆಯ ಮುಂದಿನ ಭಾಗದಲ್ಲಿ ಮುಂಬಯಿಯಲ್ಲಿ ದಾಸಪ್ಪ ಹೆಗ್ಡೆ ಹೋಟೆಲ್ ಮಾಲೀಕನಾಗಿ, ಭೂಗತ ಸಾಮ್ರಾಜ್ಯದ ದೊರೆ ದಾಸಪ್ಪ ಶೇಟ್ ಆಗುವ ವಿವರಗಳಿವೆ. ಸುಪಾರಿ, ಬ್ರೌನ್‌ಶುಗರ್, ಕಳ್ಳ ದಂಧೆಯಲ್ಲಿ ವ್ಯಸ್ತನಾಗಿದ್ದ ದಾಸಪ್ಪ ಹೆಗ್ಡೆಗೆ ಸೂಳೆಗಾರಿಕೆಯ ದಂಧೆಯ ಲಾಭದ ಬಗ್ಗೆ ಕಾಂಗ್ರೆಸ್ ಹೌಸ್‌ನ ಜಾನಕಿ ಸಲಹೆ ನೀಡುತ್ತಾಳೆ. ಊರಿನಿಂದ ಹುಡುಗಿಯರನ್ನು ತಂದು ಮುಂಬೈಗೆ ಸಪ್ಲೈ ಮಾಡುವ ದಂಧೆಗೆ ಇಳಿದ ದಾಸಪ್ಪ ಹೆಗ್ಡೆಗೆ ತಾನು ಚೀಂಕ್ರನ ಪೆಟ್ಟು ತಿನ್ನುವ ಸಮಯದಲ್ಲಿ ಮಾಡಿದ ಪ್ರತಿಜ್ಞೆ, ‘ನಿನ್ನ ಯಶೋಧೆಯನ್ನು ಕಂಡಕಂಡವರಿಗೆ ಕಣ್ಣು ಮಿಟುಕಿಸುವ ಲೌಡಿಯಾಗಿ ನಾನು ಮಾಡದಿದ್ದರೆ ನಾನು ಅಪ್ಪನಿಗೆ ಹುಟ್ಟಿದವನೇ ಅಲ್ಲ’ ನೆನಪಾಗುತ್ತದೆ.
ದಾಸಪ್ಪ ಹೆಗ್ಡೆಯ ಏಜಂಟ್ ಪಸ್ಕು ನಾಯ್ಕ ಚೀಂಕ್ರ ಮತ್ತು ಯಶೋಧೆಯನ್ನು ಮೋಸದಿಂದ ಮುಂಬಯಿಗೆ ಕರೆತಂದು, ಯಶೋಧೆಯನ್ನೂ ವೇಶ್ಯೆಗೃಹಕ್ಕೆ ತಳ್ಳುತ್ತಾನೆ. ಚೀಂಕ್ರ ಪೂಜಾರಿ ಮುಂಬಯಿಯ ಗುಡಿಯೊಂದರಲ್ಲಿ ಅರ್ಚಕನಾಗಿ, ಕ್ರಮೇಣ ಕಲ್ಯಾಣದ ದೇವಿ ಮಂದಿರದಲ್ಲಿ ಚೇತಾನಾನಂದ ಗುರು ಆಗುತ್ತಾನೆ. ಯಶೋಧೆ ಡ್ಯಾನ್ಸ್ ಬಾರ್ ಒಂದರಲ್ಲಿ ನಗ್ನ ನರ್ತಕಿಯಾಗುತ್ತಾಳೆ. ಕಥೆಯ ಕೊನೆಯಲ್ಲಿ ದಾಸಪ್ಪ ಹೆಗ್ಡೆ ಪಂಜುರ್ಲಿಗೆ ಮಂಚ ಮಾಡಿಸಲು, ಬ್ರಹ್ಮಸ್ಥಾನ ಕಾಲಿ ಮಾಡಿಸಲು ಊರಿಗೆ ಬರುತ್ತಾನೆ. ಪೋಲಿಸರ ಗುಂಡಿನಿಂದ ಯಶೋಧೆಯ ಸಾವು, ಚೇತಾನಾನಂದ ಗುರುಗಳ ಆತ್ಮಹತ್ಯೆ ಮತ್ತು ದಾಸಪ್ಪ ಹೆಗ್ಡೆಗಾಗಿ ಪೋಲಿಸರ ಹುಡುಕಾಟದ ಸುದ್ಧಿ ಕೇಳಿ ದಾಸಪ್ಪ ಹೆಗ್ಡೆ ಕುಸಿದು ಬೀಳುತ್ತಾನೆ.
‘ಮಂಚ’ ಶೀರ್ಷಿಕೆ ಅರ್ಥಪೂರ್ಣವಾಗಿದೆ. ಕಥೆಯಲ್ಲಿ ಮೌಲ್ಯಗಳ ಪರಿವರ್ತನೆಯಿದೆ. ಗುತ್ತಿನ ಜನಗಳ ಸಂಸ್ಕೃತಿ, ಕ್ರಮೇಣ ಮುಂಬಯಿಯ ಹೋಟೆಲ್‌ಗಳ ಉದ್ಯಮದ ಸುತ್ತಮುತ್ತದ ವಿದ್ಯಮಾನಗಳತ್ತ ಬೆಳೆಯುವುದನ್ನು ನಾವು ಕಾಣಬಹುದು. ಕಥೆಯಲ್ಲಿ ದಟ್ಟವಾದ ವಿಡಂಬನೆಯಿದೆ. ಅಟ್ಟಹಾಸದ ಕ್ರೌರ್ಯವಿದೆ. ‘ಬ್ರಹ್ಮಸ್ಥಾನದ ಕಾಡನ್ನು ದಾಸಪ್ಪ ಹೆಗ್ಡೆ ಕೆಡಿಸಿ ಕಾಂಕ್ರೀಟು ಗೋಡೆಗಳಲ್ಲಿ ಮರಬಳ್ಳಿಗಳ ಉಬ್ಬು ಚಿತ್ರ ಬಿಡಿಸಿದ. ಗುತ್ತು ಮನೆಯ ಕೆಡವಿ ಅಲ್ಲಿ ಜಂತಿ ದಾರಂದ ಮೋಹಕ ಶಿಲ್ಪದ ಕಂಭ ಮಾಡಿದ….’ ಇವು ಕಥೆಯಲ್ಲಿನ ಕಠೋರ ವಿಡಂಬನೆ. ಕಥೆಯಲ್ಲಿ ಬರುವ ಇತರ ವಿವರಗಳು ಕಥೆಯ ಒಟ್ಟು ಪರಿಣಾಮಕ್ಕೆ ಪೂರಕವಾಗಿ ದುಡಿಯುತ್ತಾ ಓದುಗರಿಗೆ ಅನನ್ಯ ಅನುಭವ ನೀಡುತ್ತದೆ. ಒಟ್ಟಿನಲ್ಲಿ ಬಹುಕಾಲ ನಮ್ಮನ್ನು ಕಾಡುವ ಯಶಸ್ವೀ ಕಥೆ.
ಸಲಾಂ ಬಾಂಬೆ :
ಕಥಾ ನಾಯಕ ಕಲೀಮುಲ್ಲ ಮುಸಲ್ಮಾನನಾಗಿಯೂ ಹಿಂದೂ ಸಂಸ್ಕೃತಿಗೆ, ಧರ್ಮದ ಆಚರಣೆಗೆ ಮಾರು ಹೋದವನು ಹಾಗೂ ಮಾನವೀಯ ಮೌಲ್ಯಕ್ಕಾಗಿ ಜೀವನ ಪೂರ್ತಿ ಸೆಣಸಾಡಿದವನು. ಊರಿನಲ್ಲಿ ಓದು ಮುಗಿಸಿ, ಮುಂಬಯಿಯಲ್ಲಿ ಸಣ್ಣ ಉದ್ಯಮ ಮಾಡಿ ಅಲ್ಲಿಂದ ಮಸ್ಕತ್‌ಗೆ ಹಾರುತ್ತಾನೆ. ಕಥೆಯ ನಿರೂಪಕನ ಆತ್ಮೀಯ ಸ್ನೇಹಿತ ಕಲೀಮುಲ್ಲ ಮತ್ತು ಅವನ ಪತ್ನಿ ಮುಂಬಯಿಯ ಕೋಮುಗಲಭೆಯಲ್ಲಿ ಸಾವನ್ನಪ್ಪುತ್ತಾರೆ. ನಿಂಜೂರರು ಕಲೀಮುಲ್ಲನ ಪಾತ್ರವನ್ನು ಬಹಳ ಸುಂದರವಾಗಿ, ಆತ್ಮೀಯವಾಗಿ ಚಿತ್ರಿಸಿದ್ದಾರೆ. ನಿಂಜೂರರು ಮುಂಬಯಿಯನ್ನು ಚಿತ್ರಿಸಿರುವ ಪರಿ ಅದ್ಭುತವಾದದ್ದು. ‘ಕಂಡಕಂಡಲ್ಲಿ ಸಲಹೆ ನೀಡುವ ಪಾತ್ರಗಳು, ಪೋಸ್ಟರುಗಳು, ಪುಟಿಯುವ ಜೀವಂತಿಕೆ, ಉಲ್ಲಾಸ ಚಿಮ್ಮುತ್ತ ಏರುತ್ತಿರುವ ಜನಸಂಖ್ಯೆ, ಹದಗೆಡುವ ಸಾರ್ವಜನಿಕ ಸವಲತ್ತು, ಕಾಂಕ್ರೀಟು ಕಾಡಿನ ನಡುವೆ ಎದ್ದ ಜೋಪಡಿಗಳು, ಭೂಗತ ಚಟುವಟಿಕೆಗಳು, ಭಯೋತ್ಪಾದನೆಯಲ್ಲೆ ಬದುಕುವ ದಾದಾಗಳು, ಹೊಟ್ಟೆಪಾಡಿಗಾಗಿ ಹಾದರ ಮಾಡುವ ಪ್ಲಾಸ್ಟಿಕ್ ಶೀಟಿನ ಮನೆಯ ಹೆಂಗಸರು, ಇಲ್ಲದ ಮನೆಯನ್ನು ಮಾರುವ ವಂಚಕರು, ವೇಶ್ಯೆಯರು, ತಮ್ಮ ಜೇಬು ಭದ್ರಪಡಿಸುವ ಸಮಾಜ ಕಾರ್ಯಕರ್ತರು ಮತ್ತು ಕೇವಲ ಕಿಕ್‌ಗಾಗಿ ಕೊಲೆ ಮಾಡುವ ಕಾಲೇಜು ವಿದ್ಯಾರ್ಥಿಗಳು.’
ಗರಡಿ ಮಜಲಿನ ಗಾಂಧಿ :
ಕಥೆಗಾರ ನಿಂಜೂರರು ನೀಡುವ ವಿನೋದಪೂರ್ವಕ ಕಥಾ ನಿರೂಪಣೆ, ತುಳು ಪದಗಳ ಸಕಾಲಿಕ ಬಳಕೆ, ಪಾತ್ರಗಳ ಮೂಲಕ ಕಟ್ಟಿಕೊಡುವ ಜೀವನದರ್ಶನ ಪ್ರಶಂಸನೀಯವಾದುದು. ಸ್ವಾತಂತ್ರ್ಯ ಹೋರಾಟಗಾರ ಶಿವರಾಮಯ್ಯನೇ ‘ಗರಡಿ ಮಜಲಿನ ಗಾಂಧಿ’ ಯ ಕಥಾನಾಯಕ. ಗಾಂಧಿ ತತ್ವಗಳನ್ನು ಮೈಗೂಡಿಸಿಕೊಂಡ ಶಿವರಾಮಯ್ಯ ಪತ್ನಿಯನ್ನು ಕಳೆದುಕೊಳ್ಳುತ್ತಾನೆ. ತನ್ನ ಮಗಳೇ ಈತನನ್ನು ಹುಚ್ಚನೆನ್ನುತ್ತಾಳೆ. ಊರಿಗೆ ಉಪಕಾರವಾಗುವ ಹಲವಾರು ಕಾರ್ಯಗಳಿಗೆ ಊರವರು ತಣ್ಣಗಿನ ಪ್ರತಿಕ್ರಿಯೆ ನೀಡುತ್ತಾರೆ. ಆದರೆ ಶಿವರಾಮಯ್ಯ ಸತ್ತ ನಂತರ, ಶಿವರಾಮಯ್ಯ ಹೆಸರಿನಲ್ಲಿ ಶಾಲೆ-ರಸ್ತೆ-ಭವನ ಮಾಡಲು ಊರವರು ಮುಂದಾಗುತ್ತಾರೆ. ಇದು ಕಥೆಯ ಕಠೋರ ವಿಡಂಬನೆ. ಇಲ್ಲಿ ಚಿತ್ರಣಗೊಂಡ ‘ಗಣಪತಿ ವಿಲಾಸ’ದ ಮರ್ತಪ್ಪ ಪ್ರಭುಗಳ ಪಾತ್ರ ಸುಂದರವಾಗಿದೆ, ವಿನೋದ ಪ್ರಿಯವಾಗಿದೆ. ನಿರೂಪಕ ಕೊನೆಯಲ್ಲಿ ಸ್ಮರಿಸುವ ಶಿವರಾಮಯ್ಯನ ಮಾತು ಚಿಂತನೆಗೆ ಹಚ್ಚುವಂಥದ್ದು. ‘ಬ್ರಿಟಿಷರ ಬ್ಯುರೆಕ್ರಸಿ ಚೆನ್ನಾಗಿತ್ತು. ಅವರು ಚೆನ್ನಾಗಿರಲಿಲ್ಲ. ಸ್ವಾತಂತ್ರ್ಯದ ಬಳಿಕ ಡೆಮಾಕ್ರಸಿ, ಬ್ಯೂರೊಕ್ರಸಿ ಎರಡೂ ಕುಲಗೆಡುತ್ತಾ ಬರುತ್ತಿದೆಯಲ್ಲ, ಅಪ್ಪೂ….’
ನಿರಾಕರಣೆ :
ಸುಂದರವಾದ ಕಥೆ. ದಟ್ಟವಾದ ವಿಡಂಬನೆಯಿಂದ ಓದುಗರಿಗೆ ಸುಖ ನೀಡುತ್ತದೆ. ತನ್ನ ಕುಲಕಸುಬು ಪೌರೋಹಿತ್ಯ ಬೇಡ ಎಂದು ಬ್ರಾಹ್ಮಣ ಸಂಸ್ಕೃತಿ ವಿರುದ್ಧ ಬಂಡಾಯ ತೋರಿದ ಕಥಾನಾಯಕ ಕೇಶವ ಮುಂಬಯಿಗೆ ಓಡಿಬಂದು, ಕೊನೆಗೂ ಬದುಕಿನಲ್ಲಿ ಯಶಸ್ವಿಯಾಗದೇ ಅಸಹಾಕನಾಗಿ ಮತ್ತು ಅನಿವಾರ್ಯವಾಗಿ ಮತ್ತೆ ಪೌರೋಹಿತ್ಯಕ್ಕೆ ಮರಳುವುದು ಇಲ್ಲಿನ ಕಥಾವಸ್ತು. ಕಥೆಗಾರ ನಿಂಜೂರರು ನೀಡುವ ಕೇಶವನ ಆರಂಭದ ಮುಂಬಯಿ ಪುಟ್‌ಪಾತಿನ ಬದುಕಿನ ಚಿತ್ರಣ ಅಚ್ಚರಿ ನೀಡುವಂಥದ್ದು. ಇಲ್ಲಿ ಬರುವ ಮೂರುನಾಯಿಯ ದಾತೆ ಮುದುಕಿ ಚಿತ್ರಣ ಚೆನ್ನಾಗಿದೆ. ರದ್ದಿ ಸಂಗ್ರಹಿಸುವ ಮುದುಕಿ ತನ್ನ ಕಾರ್ಯದಿಂದಲೇ ಮಗಳಿಗೆ ಮದುವೆ ಮಾಡಿಸಿದ್ದು, ಅಳಿಯನಿಗೆ ಅಂಗಡಿ ಹಾಕಿ ಕೊಟ್ಟದ್ದು, ಖೋಲಿಯನ್ನು ಬಾಡಿಗೆಗೆ ಕೊಟ್ಟದ್ದು …. ಇತ್ಯಾದಿ ಮುಂಬಯಿನಲ್ಲಿ ಜನ ಹೇಗೆ ಬದುಕನ್ನು ಕಟ್ಟುತ್ತಾರೆ ಎನ್ನುವುದಕ್ಕೆ ಒಳ್ಳೆಯ ನಿದರ್ಶನ. ಕಥೆಯ ಆರಂಭದಲ್ಲಿ ಕಥೆಗಾರರು ನೀಡುವ ಮುಂಬಯಿಯ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ಊರಿನ ಬ್ರಾಹ್ಮಣ ಕುಟುಂಬದ ಆಚಾರ ವಿಚಾರಗಳು ಮತ್ತು ವೇದಮೂರ್ತಿ ಮಕ್ಕಿತ್ತಾಯ ಮತ್ತವರ ನಾಲ್ಕು ಹುಡುಗಿಯರ ಚಿತ್ರಣ ಮತ್ತು ಕೇಶವನ ಮುಂಬಯಿಯ ಸಂಗಾತಿ ಅಂಗಾರನ ಅಪ್ಪ ತುಕ್ರನ ವ್ಯಕ್ತಿ ಚಿತ್ರಣ ಕಥೆಗೆ ಸಾಕಷ್ಟು ರೋಚಕತೆಯನ್ನು ನೀಡುತ್ತದೆ. ಕಥೆಯ ಕೊನೆಯಲ್ಲಿ ಕೇಶವ, ಶ್ರೀ ಶ್ರೀ ಕೇಶವಾನಂದನಾಗುವುದು ಮತ್ತು ಅಂಗಾರ, ಶ್ರೀ ಶ್ರೀ ಅಂಗಾರಕ ಸ್ವಾಮಿಯಾಗುವುದು ಮತ್ತು ಅವರಿಗೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಸಿಗುವುದು ಕಥೆಯ ಒಟ್ಟು ವಿಡಂಬನೆ.
ಸಣ್ಣಮ್ಮ :
ಸಂಕಲನದ ಕೊನೆಯ ಕತೆ ‘ಸಣ್ಣಮ್ಮ’ ಒಂದು ವಿಶಿಷ್ಟ ಅನುಭವ ನೀಡುವ ಕಥೆ. ಇದು ನಿರೂಪಕ, ಸಣ್ಣಮ್ಮ, ಮಂಡೆತ್ತಾಯ ಮತ್ತು ಕೇಕುಡ ಹೀಗೆ ನಾಲ್ಕು ಬ್ರಾಹ್ಮಣ ಕುಟುಂಬಗಳ ಕಥೆ. ಇಲ್ಲಿನ ಮುಖ್ಯ ಪಾತ್ರ ಸಣ್ಣಮ್ಮ ಮತ್ತು ದಬ್ಬೆಟ್ಟು ದಾಮೋದರ. ಕಥೆಯ ಈ ಎರಡೂ ಪಾತ್ರಗಳ ವ್ಯಕ್ತಿಚಿತ್ರಣ ಅಪೂರ್ವವಾಗಿದೆ. ಕಥಾ ನಿರೂಪಣೆಯಲ್ಲಿ ಕಥೆಗಾಗರು ಸಣ್ಣ ಪುಟ್ಟ ವಿವರಗಳನ್ನೂ ಬಿಡುವುದಿಲ್ಲ. ಮಡಚುಬಾಲದ ನಾಯಿ ಮತ್ತು ಪಡಮುನ್ನೂರು ವಿವರಣೆ ಓದುಗರನ್ನು ತಟ್ಟುವಲ್ಲಿ ಎರಡು ಮಾತಿಲ್ಲ. ಕಥೆಯ ವಿಶೇಷತೆ ಏನಂದರೆ ಇಲ್ಲಿನ ಎಲ್ಲಾ ಪಾತ್ರಗಳು ಒಂದಕ್ಕೊಂದು ಬೆಸೆದು ಇಡೀ ಕಥೆಯ ಹೊರಣ ಸೃಷ್ಟಿಸುತ್ತಾರೆ. ಕಥೆಯಲ್ಲಿ ಸಣ್ಣಮ್ಮ ಮತ್ತು ದಬ್ಬೆಟ್ಟು ದಾಮೋದರನ ಸಂಬಂಧ ವಾಚ್ಯವಾಗಿ ತಿಳಿಸದಿದ್ದರೂ, ಸೂಚ್ಯವಾಗಿ ತಿಳಿಸಲಾಗಿದೆ. ತಾಯಿಯ ವಾತ್ಸಲ್ಯ ತೋರುವ ಸಣ್ಣಮ್ಮ ದಾಮೋದರನಿಗೆ ಮದುವೆ ಮಾಡಿಸುತ್ತಾಳೆ. ಅಲ್ಲಲ್ಲಿ ಉಂಡು, ಯಾವುದೇ ಹೊಣೆಗಾರಿಕೆಯಿಲ್ಲದ, ಪಾಪದ ದಾಮೋದರನಿಗೆ ಮಡದಿಯಾಗಿ ಬಂದ ಉಬ್ಬುಹಲ್ಲಿನ ಉಮೆ, ಬೀಡಿಕಟ್ಟುವ ಉದ್ಯಮ ಸ್ಥಾಪಿಸುವುದು ಮತ್ತು ತಾನು ಬೀಡಿ ಸರಬರಾಜು ಮಾಡುತ್ತಿದ್ದ ಉಸ್ಮಾನನೊಂದಿಗೆ ಓಡಿ ಹೋಗುತ್ತಾಳೆ. ಮನೆಯಲ್ಲಿದ್ದ ಸಣ್ಣಮ್ಮನ ನಗ ನಾಣ್ಯಗಳನ್ನು ಉಮೆ ದೋಚಿದ್ದನ್ನು ತಾಳಲಾರದೆ ಕೆಲದಿನಗಳ ನಂತರ ಸಣ್ಣಮ್ಮ ಸಾವನ್ನಪ್ಪುತ್ತಾಳೆ. ಮಡಚುಬಾಲದ ನಾಯಿ ಪುಟ್ಟ ಕೇಕುಡರ ಮಡಿಯನ್ನೂ ಕೆಡಿಸುವ ವಿವರ ವಿನೋದಮಯವಾಗಿದೆ. ಕೇಕುಡರ ಮಗ ಗೋಪಾಲ, ಹೇಳದೆ ಕೇಳದೆ ಒಂದು ದಿನ ಘಟ್ಟದತ್ತ ಓಡಿದ್ದು ಮತ್ತು ಕೆಲವರ್ಷಗಳ ಬಳಿಕ ಶ್ರೀಮಂತನಾಗಿ ಮರಳಿದ್ದು, ಮದುವೆಯಾದದ್ದು,ಪೌರೋಹಿತ್ಯನಾಗಲು ಅಥವಾ ಬಾಣಸಿಗನಾಗಲು ಸದಾ ಸಿದ್ಧವಾಗಿರುವ ದಾಮೋದರ, ನಿರೂಪಕನ ಮತ್ತು ಸಣ್ಣಮ್ಮನ ಸಂವಾದ, ಸಣ್ಣಮ್ಮನ ಬೈಗಳು… ಈ ಎಲ್ಲಾ ವಿವರಗಳು ಕಥೆಯ ಯಶಸ್ಸಿಗೆ ದುಡಿಯುವ ಅಂಶಗಳು.
ಒಟ್ಟಿನಲ್ಲಿ ‘ಮಂಚ‘ ಕಥಾ ಸಂಕಲನ ವಿಶಿಷ್ಟ ಅನುಭವ ನೀಡುವ, ಅಪರೂಪದ ಸಾಹಿತ್ಯ ಕೃತಿ. ಕಥಾ ರಸಿಕರು ಓದಲೇ ಬೇಕಾದ ಅನನ್ಯ ಕೃತಿ.