ವಿಶ್ವರೂಪ

ವಿಶ್ವನನ್ನು ಗುರುತಿಸುವುದು ಸುಲಭ. ಯಾವುದೇ ಸಭೆ ಸಮಾರಂಭಗಳಲ್ಲಿ ಬಿಳೀ ಪ್ಯಾಂಟು (ದೇವರಾಣೆ ಅದು ಬಿಳಿ ಬಣ್ಣದ ಪ್ಯಾಂಟು, ನೋಡುಗರಿಗೆ ಮಾಸಲು  ಹಳದಿಯ ಹಾಗೆ ಕಾಣಿಸುತ್ತದೆ ಅಷ್ಟೇ) ಮತ್ತು ಬಂಗಾರ ಬಣ್ಣದ ಖದ್ದರಿನ ಜುಬ್ಬಾ ಧರಿಸಿ ಎದುರಿನ ಸೀಟಿನಲ್ಲಿ ಆಸೀನನಾಗಿರುತ್ತಾನೆ. (ಕುಳಿತುಕೊಳ್ಳುವುದು ಬೇರೆ, ಆಸೀನರಾಗುವುದು ಬೇರೆ. ಹೊಟ್ಟೆಯ ಮೇಲಿನ ದೇಹದ ಎಲ್ಲಾ ಭಾರವನ್ನೂ ಕುಂಡೆಯ ಮೇಲೆ ಹಾಕದೆ ಸಾಧ್ಯವಾದಷ್ಟೂ ಭಾರವನ್ನು ಬೆನ್ನಿಗೂ ವರ್ಗಾಯಿಸಿ ಕುಳಿತುಕೊಳ್ಳುವುದೇ ಆಸೀನರಾಗುವುದು)  ಸಭೆಗೆ ಮುನ್ನ ಮತ್ತು ಸಭೆ ಮುಗಿದ ಮೇಲೆ ಅತಿಥಿಗಳ ಹಿಂದೆ ಮುಂದೆ ಸುತ್ತಾಡುತ್ತಿರುತ್ತಾನೆ. ಹತ್ತು ಜನರ ನಡುವೆ ನಿಂತೇ ಮೊಬೈಲು ಸಂಭಾಷಣೆ ನಡೆಸುತ್ತಿರುತ್ತಾನೆ. ಗುಂಪಲ್ಲಿ ನಿಂತು ಮಾತನಾಡುತ್ತಿರುವವರಲ್ಲಿ ಒಬ್ಬರನ್ನು ಅಚಾನಕ್ ಬದಿಗೆ ಕರೆದುಕೊಂಡು ಆಪ್ತವಾಗಿ ಐದು ಹತ್ತು ನಿಮಿಷ ಮಾತನಾಡುತ್ತಾನೆ. ಪರಿಚಯವಿಲ್ಲದಿದ್ದರೂ ಎದುರು ಸಿಕ್ಕಿದರೆ ‘ದಿಲ್ದಾರಿ’ ನಗೆ ನಗುತ್ತಾನೆ. ಅವನೇ ವಿಶ್ವ!

ಪೂರ್ತಿ ಹೆಸರು ವಿಶ್ವನಾಥ ಅಂತಲೋ, ವಿಶ್ವೇಶ್ವರ ಅಂತಲೋ ಇದ್ದಿರಬೇಕು, ಚಿಕ್ಕದಾಗಿ ವಿಶ್ವ ಅಂತ ಬಂದಿರಬೇಕು. ಅಥವಾ ವಿಶ್ವಾಸ ಅಂತ ಇತ್ತೋ ಏನೋ, ಆದರೆ ವಿಶ್ವಾಸವಿಡಲು ನಾಲಾಯಕ್ಕು ಈತ ಎಂದು ಜನರೇ ವಿಶ್ವ ಎಂಬಲ್ಲಿಗೆ ಕಟ್ ಮಾಡಿದರೋ ಏನೋಹೇಗೇ ಇರಲಿ, ಎಲ್ಲರೂ ಹಾಗೆಯೇ ಕರೆಯುತ್ತಾರೆ. ಆತನಾದರೋ ತಾನೇ ವಿಶ್ವ ಎಂದುಕೊಂಡಿದ್ದಾನೆ

ನನಗೆ ವಿಶ್ವನ ಪರಿಚಯ ಹೇಗಾಯ್ತು ಎಂದು ಹೇಳ್ತೇನೆ ಕೇಳಿ.

ನಿಮಗೆ ಗೊತ್ತಲ್ಲ, ನನಗೆ ಸ್ವಲ್ಪ ಸಾಹಿತ್ಯದ ಗೀಳು. ಮೊದಮೊದಲು ಕತೆ ಕವನಗಳನ್ನು ಬರೆಯುತ್ತಿದ್ದೆ. ಅವೆಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗದೇ ಹಾಗೇ ಉಳಿದು ಗಂಟು ಹಾಕಿಟ್ಟ ಕಟ್ಟುಗಳು ದೊಡ್ಡದಾಗುತ್ತಾ ಸಾಗಿದರೂ ದೊಡ್ಡ ಸಾಹಿತಿಯಾಗುವ ಕನಸು ಭಗ್ನವಾಗಿ ಹೋಯಿತು. ನನ್ನ ಬರೆಹಗಳಿಗೆ ಮರ್ಯಾದೆ ಸಿಗುವುದಿಲ್ಲದಿದ್ದರೆ ನಾನು ಬರೆಯೋದೆ ಇಲ್ಲ, ನಷ್ಟ ಕನ್ನಡಿಗರಿಗೇ… ಎಂದು ನಾನು ಕೊನೆಗೊಮ್ಮೆ ಸುಮ್ಮನಾದರೂ ಬೆನ್ನು ಬೆನ್ನಿಗೆ ಲೇಖನಗಳು ಪ್ರಕಟವಾಗುವ ಲೇಖಕರನ್ನು ಕಂಡಾಗಲೆಲ್ಲ ಅಸೂಯೆ ಮೂಡುತ್ತಿತ್ತು. ಮೋಜಿಗಾಗಿ ಅಂತಹ ಸಾಹಿತಿಗಳನ್ನು ನಿಮ್ಮ ಬರೆಹಗಳು ಬಹಳ ಚೆನ್ನಾಗಿ ಮೂಡಿ ಬರುತ್ತಿವೆ ಎಂದು ಗಾಳಿ ಹಾಕಿ ಉಬ್ಬಿಸಿ ಚಂದ ನೋಡುವ ದುರ್ಬುದ್ಧಿಯೂ ಹುಟ್ಟಿಕೊಂಡಿತು. ನಾನು ಇತ್ತೀಚೆಗೆ ಓದಿದ ಕತೆಗಳಲ್ಲಿ ನಿಮ್ಮ ಈ ಕತೆ ಅತ್ಯಂತ ವಿಶಿಷ್ಟವಾಗಿತ್ತು ಅಂತಲೋ, ನಿಮ್ಮ ಕವನದ ಒಳಾರ್ಥ ತಿಳಿದುಕೊಳ್ಳಲು ಐದಾರು ಬಾರಿ ಓದಬೇಕಾಯಿತು ಅಂತಲೋ ಹೇಳಿ ಮೆಚ್ಚಿಸುತ್ತಿದ್ದೆ. ಒಮ್ಮೊಮ್ಮೆ ಅವರ ಕವನಗಳಿಗೆ ಅವರೇ ದಂಗಾಗುವಂಥಾ ಅರ್ಥ ಕಟ್ಟಿ ಹೇಳುತ್ತಿದ್ದೆ. ಆವಾಗೆಲ್ಲ ಅವರ ಮುಖದಲ್ಲಿ ಅರಳುವ ಮಂದಹಾಸ, ಆ ಮೇಲಿನ ಅವರ ಹಾವಭಾವ ನೋಡುವುದು ನನಗೀಗ ಸಾಹಿತ್ಯ ರಚನೆಗಿಂತಲೂ ಅಥವಾ ಸಾಹಿತ್ಯವನ್ನು ಓದುವುದಕ್ಕಿಂತಲೂ ಹೆಚ್ಚಿನ ಕಿಕ್ ನೀಡುತ್ತದೆ! ಯಾವುದೇ ಸಾಮಾನ್ಯ ಲೇಖನವನ್ನೂ ಓದುಗರ ಮೇಲೆ ಗಾಢ ಪರಿಣಾಮ ಬೀರಬಲ್ಲ ಉತ್ತಮ ಲೇಖನ ಎಂದೆಲ್ಲ ಬಿಂಬಿಸುವುದರಲ್ಲಿ ನಾನು ಈಗ ಸಿದ್ಧಹಸ್ತ. ನನ್ನ ಈ ನೈಪುಣ್ಯವನ್ನು ಆತ್ಮಾನಂದಕ್ಕಾಗಿ ಆಗಾಗ ಬಳಸಿಕೊಂಡೇ ಅದೆಷ್ಟೋ ಲೇಖಕರ ಅಚ್ಚುಮೆಚ್ಚಿನ ಅಭಿಮಾನಿ ಎನಿಸಿಕೊಂಡಿದ್ದೇನೆ. ಅವರ ಎಲ್ಲ ಕಾರ್ಯಕ್ರಮಗಳಿಗೂ ನನಗೆ ವಿಶೇಷ ಆಹ್ವಾನ ಇರುತ್ತದೆ. ಕೆಲವೊಮ್ಮೆ ಅವರದ್ದೇ ಕಾರಿನಲ್ಲಿ ಲಿಫ್ಟ್, ಹಿಂದಕ್ಕೆ ಡ್ರಾಪ್, ನಡುವೆ ಕಾಫಿ-ಟಿಫ಼ಿನ್, ಮತ್ತೆ ಇನ್ನೂ ಏನೇನೋ..! 

ಆಗಾಗ ಕೆಲವು ಲೇಖಕರು ಪರಿಶ್ರಮ ಪಟ್ಟು ಹೊರತಂದ ತಮ್ಮ ಪುಸ್ತಕ ತಂದುಕೊಟ್ಟು ಅಭಿಪ್ರಾಯ ತಿಳಿಸಿ ಎಂದದ್ದಿದೆ. ಓದುವವರೇ ಇಲ್ಲ ಎಂಬ ಸಂಕೋಚ ಇರುವ ಇಂತಹ ಲೇಖಕರ ಬೆನ್ನುತಟ್ಟಿ ಗಿಳಿಭವಿಷ್ಯದ ಕಾರ್ಡುಗಳ ಮಾದರಿಯಲ್ಲಿ ಸಿದ್ಧಮಾಡಿಟ್ಟ ನನ್ನ ‘ವಿಮರ್ಶೆ’ಯ ನಾಲ್ಕೇ ನಾಲ್ಕು ಸಾಲುಗಳನ್ನು  ಇದೂ ಕನ್ನಡ ಸೇವೆ ಎಂದುಕೊಂಡು ಶ್ರದ್ಧಾ ಭಕ್ತಿಯಿಂದ ಪುಸ್ತಕದ ಮುಖಪುಟ, ಅವರ ಮುಖ ನೋಡಿ ಬ್ಯಾಲೆನ್ಸ್ ಮಾಡಿ ಹೇಳಿದ್ದೇನೆ. ಅಷ್ಟಕ್ಕೇ ಮರುಳಾಗಿ ಅವರು ಧನ್ಯರಾಗಿ ಹೋಗಿದ್ದನ್ನು ಕಂಡಿದ್ದೇನೆ. ಇದೇನು ಕಡಿಮೆ ಸಾಧನೆಯೇ?

ಏನೋ ಹೇಳಲು ಹೋಗಿ ಎಲ್ಲಿಗೋ ತಲುಪಿದೆ.

ಅದು ಯಾವುದೋ ಒಂದು ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ. ಓ ಓ ಡಿ ಸೌಲಭ್ಯ ತೆಗೆದುಕೊಂಡಿದ್ದೆನಲ್ಲ, ಅಭ್ಯಾಸದಂತೆ ಆಫೀಸು ಸಮಯಕ್ಕೆ ಸರಿಯಾಗಿ ಅಲ್ಲಿ ಹಾಜರಾಗಿದ್ದೆ. ಕವನ ಓದಿ ಕೃತಾರ್ಥರಾಗಿ ವೇದಿಕೆಯಿಂದ ಇಳಿಯುವಾಗ ಕವಿಗಳು ತೋರಿಸುವ ಠೀವಿಯನ್ನು ನನ್ನ ಕಣ್ಣುಗಳಲ್ಲಿ ತುಂಬಿಸಿಕೊಂಡು ಸುಖಿಸುವುದಷ್ಟೇ ನನ್ನ ಎಜೆಂಡಾ.  ಗೋಷ್ಠಿಯ ಅಧ್ಯಕ್ಷರಾಗಿ ನಿಯೋಜಿತ ಕವಿ ಸುಬ್ಬಣ್ಣ ಗರಿಗರಿ ಇಸ್ತ್ರಿಯ ಬಟ್ಟೆ ಹಾಕಿ ಅರ್ಧಗಂಟೆಗೂ ಮೊದಲೇ ಹಾಜರಾಗಿದ್ದರು. ಪ್ರೇಕ್ಷಕರು ಬಿಡಿ, ಕವನ ಓದುವ ಕವಿಗಳೂ ಯಾರೂ ಬಂದಿರಲಿಲ್ಲ. ಮೊದಲ ಸಾಲಿನಲ್ಲಿ ಒಬ್ಬರೇ ಕುಳಿತಿದ್ದ ಸುಬ್ಬಣ್ಣರಿಗೆ ಕಂಪೆನಿ ಕೊಡೋಣ ಎಂದು ಅವರ ಜೊತೆಗೆ ಕುಳಿತು ಮಾತಿಗಿಳಿದೆ. 

“ನಿಮ್ಮ ಕವಿ ಮತ್ತು ಕಪಿ ಕವನ ಓದಿದ್ದೆ” ಎಂದು ನಾನು ಆರಂಭಿಸುವ ಹೊತ್ತಿಗೆ ಮತ್ತೊಬ್ಬ ವ್ಯಕ್ತಿ ಅಲ್ಲಿಗೆ ಬಂದು ನಮ್ಮ ಜೊತೆ ಇನ್ನೊಂದು ಕುರ್ಚಿಯಲ್ಲಿ ಕುಳಿತರು.

ಕವಿ ಸುಬ್ಬಣ್ಣ “ವಿಶ್ವ, ಈ ಅವಕಾಶ ಒದಗಿಸಿದ್ದಕ್ಕೆ ತುಂಬಾ ಥಾಂಕ್ಸ್” ಅಂತ ಬಂದವರಿಗೆ ಹೇಳಿ ನನ್ನೆಡೆಗೆ ತಿರುಗಿ, ಇವರು ವಿಶ್ವ ಅಂತ.. ನಮ್ಮ ಗೆಳೆಯ..” ಅನ್ನುತ್ತ ಲಗುಬಗೆಯಲ್ಲಿ ನನ್ನ ಹೆಸರನ್ನು ನನ್ನಲ್ಲೇ ಕೇಳಿ, ವಿಶ್ವನಿಗೆ ಪರಿಚಯ ಮಾಡಿಸಿ, ತಮ್ಮ ಕವನದ ಹೊಗಳಿಕೆ ಕೇಳುವ ಅದಮ್ಯ ಉತ್ಸಾಹದಲ್ಲಿ “ನೀವು ಕವಿ ಮತ್ತು ಕಪಿ ಬಗೆಗೆ ಏನೋ ಹೇಳುತ್ತಿದ್ದಿರಿ, ಮುಂದುವರೆಸಿ” ಅಂದರು.

ಕವಿ ಮತ್ತು ಕಪಿ, ಅಂತರ ಬಿಂದು ಮಾತ್ರ

ಮತಿಹೀನ ಮನುಜರ ಇಬ್ಬಗೆಯ ಪಾತ್ರ

”ಕವನ ಪ್ರಾಸ ಬದ್ಧವಾಗಿ ಹಾಡಲು ಯೋಗ್ಯವಾಗಿದೆ, ಯಾರಾದರೂ ಸಿನೆಮಾದವರನ್ನು ಸಂಪರ್ಕಿಸಬೇಕಿತ್ತು” ಅಂದೆ ನಾನು. ಕವಿಸುಬ್ಬಣ್ಣ ಖುಷಿಯಲ್ಲಿ ನೆಲಬಿಟ್ಟು ಆರಿಂಚು ಮೇಲೇರಿದರು. ನಾನೆಣಿಸಿದಂತೆ ಅವರ ಮುಖ ಅಷ್ಟಗಲವಾಯಿತು. ಒಡನೆಯೇ “ಸಾರ್ ಆ ಕವನ ನನ್ನ ಕೈಯಲ್ಲಿ ಕೊಡ್ತಿದ್ರೆ ಪ್ರಯತ್ನಿಸುತ್ತಿದ್ದೆ” ಎಂದ ವಿಶ್ವ. ಕವಿಸುಬ್ಬಣ್ಣ ಆ ಕವನಕ್ಕಾಗಿ ತಾವು ತಂದಿದ್ದ ಪುಸ್ತಕವನ್ನೊಮ್ಮೆ ಜಾಲಾಡಿಸಿದರು. ಕೊನೆಗೂ ಕವನ ಸಿಗಲಿಲ್ಲ. “ಸಂಜೆ ನೆನಪು ಮಾಡಯ್ಯ, ಕಳಿಸಿಕೊಡ್ತೇನೆ” ಅನ್ನುತ್ತ ಯಾರೋ ಇನ್ನೊಬ್ಬರನ್ನು ಹತ್ತಿರ ಸೇರಿಸಿದ್ದ ವಿಶ್ವನನ್ನು ಕರೆದು ಹೇಳಿ, ನನ್ನ ವಿಮರ್ಶೆಯಿಂದ ಸಂತೃಪ್ತರಾಗಿದ್ದ ಕವಿಸುಬ್ಬಣ್ಣ “ನಿಮ್ಮ ಹೆಸರು ಮರೆತೆ.. ಇವತ್ತು ಕವಿಗೋಷ್ಠಿಯಲ್ಲಿ ಭಾಗವಹಿಸುತ್ತಿದ್ದೀರಾ?” ಕೇಳಿದರು.

ನನ್ನ ಹೆಸರನ್ನು ಆಗಾಗ ಅವರಿಗೆ ಹೇಳುವುದು ನನಗೆ ಅಭ್ಯಾಸವಾಗಿ ಹೋಗಿತ್ತು. ಮತ್ತೊಮ್ಮೆ ನನ್ನ ಹೆಸರು ಹೇಳಿಕೊಂಡು “ಗೋಷ್ಠಿಯಲ್ಲಿ ನಾನಿಲ್ಲ, ನಮ್ಮಂಥವರಿಗೆಲ್ಲ ಅವಕಾಶ ಯಾರು ಕೊಡ್ತಾರೆ ಸರ್!”  ಎಂದೆ ನಾನು.

“ನೋಡಿ, ಈ ವಿಶ್ವರ ಸಂಪರ್ಕದಲ್ಲಿರಿ, ಅವಕಾಶಗಳೇ ಇವರ ಬಿಸಿನೆಸ್ಸು.. ತಂದು ನಿಮ್ಮ ಕಾಲುಬುಡದಲ್ಲಿ ಸುರೀತಾರೆ.” ಅಂದರು ಕವಿಸುಬ್ಬಣ್ಣ.

“ಸಾರ್, ಇವತ್ತು ಲಿಸ್ಟಿನಲ್ಲಿ ಹೆಸರಿರುವ ಕವಿ ಯಾರಾದ್ರೂ ಬರದೇ ಇದ್ದರೆ ಇವರಿಗೊಂದು ಅವಕಾಶ ಮಾಡಿಕೊಡಿ. ಇವತ್ತಿನಿಂದಲೇ ಶುರು ಮಾಡಿ ಇವರನ್ನು ಕವಿ, ಸಾಹಿತಿ, ವಿಮರ್ಶಕ ಅಂತೆಲ್ಲ ದೊಡ್ಡಜನ ಮಾಡಿಬಿಡೋಣ” ಅಂದ ವಿಶ್ವ.

“ಕೈಯಲ್ಲಿ ಕವನ ಇದೆಯಾ?” ಕೇಳಿದರು ಕವಿ ಸುಬ್ಬಣ್ಣ.

“ಇಲ್ಲ ಸಾರ್.. ಅವಕಾಶ ಇದ್ದರೆ ಹೆಸರು ಕರೀರಿ, ಸ್ಟೇಜಲ್ಲೇ ನಾಲ್ಕು ಮಂದಿ ಕವನ ಓದುವಷ್ಟರಲ್ಲಿ ಕವನ ಬರೆದು ಅಲ್ಲೇ ಓದ್ತೀನಿ” ಎಂದಿದ್ದೆ ನಾನು.

ಕವನ ಓದಲು ಲಿಸ್ಟಿನಲ್ಲಿ ಹೆಸರಿದ್ದ, ಇಲ್ಲದ ಕವಿಗಳ ಹಿಂಡೇ ಅಲ್ಲಿ ಮತ್ತೆ ಸುಬ್ಬಣ್ಣರನ್ನು ಮುತ್ತಿಗೆ ಹಾಕಿದ್ದ ಗಡಿಬಿಡಿಯಲ್ಲಿ ಅವರಿಗೆ ನನ್ನ ಹೆಸರು ಬಿಡಿ, ಅವರದೇ ಹೆಸರು ಮರೆತುಹೋಗಿತ್ತು! 

ಅವಕಾಶ ಸಿಗದ ನನ್ನ ಹತ್ತಿರ ಬಂದು ಸಂತೈಸಿದ ವಿಶ್ವ “ಸಾರ್, ನೀವು ತಲೆ ಕೆಡಿಸ್ಕೋಬೇಡಿ! ಭಾಷೆ ಚೆನ್ನಾಗಿದೆ, ಜ್ಞಾನ ಇದೆ, ಇಷ್ಟು ಸಮರ್ಥರಿದ್ದೀರಿ.. ಇಡೀ ಕರ್ನಾಟಕಕ್ಕೇ ಪರಿಚಯ ಮಾಡಿಸಿ ಕೊಡೋಣಾಂತೆ.. ನಾನಿದ್ದೇನೆ, ನಿಮ್ಮ ಸೆಲ್ ನಂಬ್ರ ಕೊಡಿ” ಅಂದ.

ನಂಬ್ರ ಕೊಟ್ಟಿದ್ದೆ, ಹಾಗೆಯೇ ಮರೆತೂ ಬಿಟ್ಟಿದ್ದೆ.

ಹದಿನೈದು ದಿನ ಕಳೆದಿರಬಹುದು. ಒಂದು ದಿನ ಬೆಳಗ್ಗೆ ವಿಶ್ವ ಫೋನ್ ಮಾಡಿದ್ದ. 

“ನಾನು ಆವತ್ತು ಕವಿಗೋಷ್ಠಿಯಲ್ಲಿ ಸಿಕ್ಕಿದ್ದ ವಿಶ್ವ.. ಪರಿಚಯ ಆಯ್ತಾ?.. ನಿಮ್ಮ ಇತ್ತೀಚಿನ ಪುಸ್ತಕದ ಹೆಸರು ಹೇಳಿ” ಅಂದ.

“ಯಾವ ಪುಸ್ತಕ?” ಕೇಳಿದೆ ನಾನು.

“ನೀವು ಇತ್ತೀಚೆಗೆ ಬರೆದು ಪ್ರಕಟಿಸಿರುವ ಯಾವುದಾದರೂ ಪುಸ್ತಕದ ಹೆಸರು ಹೇಳಿ, ಆ ಪುಸ್ತಕಕ್ಕೆ ನಿಮಗೊಂದು ಪ್ರಶಸ್ತಿ ಕೊಡಿಸ್ತಾ ಇದ್ದೇನೆ” ಅಂದ ವಿಶ್ವ.

“ನಾನೇನೂ ಪುಸ್ತಕ ಪ್ರಕಟಿಸಿಯೇ ಇಲ್ಲವಲ್ಲ ಸಾರ್” ಅಂದೆ ನಾನು.

“ಮತ್ತೆಂತಹ ಸಾಹಿತೀರಿ ನೀವು.. ಹೋಗ್ಲಿ ಬಿಡಿ, ನಿಮ್ಮ ಬರೆಹಗಳನ್ನು ಒಟ್ಟು ಮಾಡಿಡಿ, ಸಂಜೆ ಸಿಗುತ್ತೇನೆ, ಮೊದಲು ಪುಸ್ತಕ ಪ್ರಕಟಿಸೋಣ. ‘ಹಗಲೂ ರಾತ್ರಿ ಪುಸ್ತಕ ಪ್ರಕಾಶನ’ ಅಂತ ಒಬ್ಬ ಪ್ರಕಾಶಕ ಇದ್ದಾನೆ. ಏನು ಕೊಟ್ರೂ ಪ್ರಕಟಿಸುತ್ತಾನೆ. ಸರ್ಕಾರಕ್ಕೆ ಕೊಟ್ಟು ದುಡ್ಡು ಮಾಡಿಕೊಳ್ತಾನೆ. ಹದಿನೈದು ದಿನದಲ್ಲಿ ಪುಸ್ತಕ ರೆಡಿಯಾಗಿರುತ್ತೆ.. ಗ್ರಾಂಡಾಗಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಸೋಣ. ಹಾಗೆಯೇ ಪ್ರಶಸ್ತಿ ಸಮಿತಿಯವರಿಗೆ ಹೇಳಿರುತ್ತೇನೆ” ಅಂದನಾತ.

“ಬರೆದದ್ದೆಲ್ಲ ಎಲ್ಲೆಲ್ಲೋ ಇದೆ ಸಾರ್. ಒಂದು ಪುಸ್ತಕಕ್ಕಾಗುವಷ್ಟು ಕೈಯಲ್ಲಿ ಇದೆಯೋ ಎಂಬುದೂ ಅನುಮಾನ” ಅಂದೆ ನಾನು.

“ಬರೆದದ್ದು ಸಿಗದಿದ್ರೆ ಈಗ ಬರೀರಿ ಮತ್ತೆ. ಸ್ಟೇಜಿಗೆ ಕರೀರಿ, ಬರೆದು ಓದ್ತೀನಿ ಅಂದಿದ್ರಲ್ಲಾ ಆವತ್ತು ಕವಿ ಸಮ್ಮೇಳನದಲ್ಲಿ! ಈಗ ಬರೆದು ಕೊಡಿ.. ನನ್ನ ಮರ್ಯಾದೆ ತೆಗೀತೀರಿ.. ನಿಮ್ಮ ಮಾತು ಕೇಳಿ ಪ್ರಶಸ್ತಿಗೆ ನಿಮ್ಮ ಹೆಸರು ಕೊಟ್ಟಿದ್ದೇ ತಪ್ಪಾಯ್ತು. ಕಡಿಮೆಯೆಂದರೂ ನನ್ನ ಕೈಯಲ್ಲಿ ಹತ್ತು ಲೇಖಕರಿದ್ದಾರೆ.. ಯಾರಿಗೆ ಬೇಕಾದ್ರೂ ನಾನು ಈ ಪ್ರಶಸ್ತಿ ಕೊಡಿಸಬಹುದಿತ್ತು. ನಿಮ್ಮ ಹೆಸರು ಹೇಳಿ ಸಿಕ್ಕಿ ಹಾಕಿಕೊಂಡೆ. ಬರೆದದ್ದು ಎಷ್ಟಿದೆಯೋ ನೋಡಿ, ಒಂದು ಪುಸ್ತಕಕ್ಕೆ ಸಾಕಾಗದಿದ್ದರೆ ಒಂದು ವಾರ ಕೂತು ಬರೀರಿ.. ಪುಸ್ತಕದ ಹೆಸರು ಫೈನಲ್ ಮಾಡಿ ನಾಳೆನೇ ಕೊಡಿ, ಪುಸ್ತಕ ಮತ್ತೆ ಸಿಕ್ಕಿದರೂ ಪರವಾ ಇಲ್ಲ, ನನ್ನ ಮರ್ಯಾದೆ ಉಳಿಸಿ” ಎಂದು ಅವಲತ್ತುಕೊಂಡ ವಿಶ್ವ.

“ಸರ್.. ಆಫೀಸಿನಲ್ಲಿ ಬಹಳಷ್ಟು ಕೆಲಸ.. ಬರೆಯಲು ಸಮಯ ಸಿಗುವುದಿಲ್ಲ, ಮನೆಯಲ್ಲಿ ಪುನಃ ಬರೆಯಲು ಶುರು ಮಾಡಿದ್ರಾ ಅಂತ ಹೆಂಡತಿ ಗುರ್ರ್ ಅಂತಾಳೆ.. ಪುಸ್ತಕ ಅಂದ್ರೆ ನೂರು ಪೇಜಾದ್ರೂ ಬೇಡವೇ..” ನಾನು ಅಸಹಾಯಕತೆ ಪ್ರದರ್ಶಿಸಿದೆ.

“ಅದೇನು ಮಾಡ್ತೀರೋ ಮಾಡಿ, ಒಂದು ವಾರ ಟೈಮ್ ಕೊಡ್ತೀನಿ.. ನೀವೇನ್ ಬರೀತೀರೋ ಬರೀರಿ.. ಎಷ್ಟು ಬರೀತೀರೋ ಬರೀರಿ.. ಕವಿಸುಬ್ಬಣ್ಣ ಮುನ್ನುಡಿ ಬರೆದುಕೊಡ್ತಾರೆ.. ಮೂರುವಾರದೊಳಗೆ ಪುಸ್ತಕ ಬರಬೇಕು.. ಗ್ರ್ಯಾಂಡಾಗಿ ಪುಸ್ತಕ ಬಿಡುಗಡೆ ಇಟ್ಟುಕೊಳ್ಳೋಣ. ಕವಿಸುಬ್ಬಣ್ಣ ಬಂದೇ ಬರುತ್ತಾರೆ, ಮತ್ತೆ ಬಿಡುಗಡೆಗೆ ಇನ್ನೊಬ್ಬರಿದ್ದಾರೆ, ಎಮ್ಮೆಲ್ಲೆ ಇಲೆಕ್ಷನ್ನಿಗೆ ನಿಲ್ಲಬೇಕು ಅಂತ ಯೋಚಿಸುತ್ತಿದ್ದಾರೆ, ನಾಲಕ್ಕು ಸಭೆ ಸಮಾರಂಭಗಳಿಗೆ ಮುಖ್ಯ ಅತಿಥಿಯಾಗಿ ಕರೀತೇನೆ ಅಂತ ವಹಿಸಿಕೊಂಡಿದ್ದೇನೆ. ಅವರೂ ಬರ್ತಾರೆ, ಕಾರ್ಯಕ್ರಮದ ಖರ್ಚಲ್ಲಿ ಸ್ವಲ್ಪ ಅವರೂ ನೋಡಿಕೊಳ್ತಾರೆ.. ಉಳಿದದ್ದು ನೀವು ಹಾಕಿದರಾಯಿತು. ಪುಸ್ತಕ ಬಿಡುಗಡೆಯಾದ ಮೇಲೆ ಪ್ರಶಸ್ತಿ ಸಮಿತಿಗೆ ಕೊಟ್ಟುಬಿಡುತ್ತೇನೆ. ಪ್ರಶಸ್ತಿಪ್ರದಾನಕ್ಕೆ ಮಂತ್ರಿ ಬರ್ತಾರೆ. ಐದಾರು ತಿಂಗಳು ಟೈಮಿದೆ. ಅಷ್ಟರೊಳಗೆ ಇನ್ನೊಂದು ಪುಸ್ತಕ ರೆಡಿ ಮಾಡ್ಕೊಂಡಿರಿ.. ಮಂತ್ರಿಯವರಿಗೆ ಹೇಳಿ ಇನ್ನೊಂದು ಪ್ರಶಸ್ತಿ ಕೊಡಿಸಲು ಸಾಧ್ಯವಾ ನೋಡ್ತೇನೆ.” ವಿಶ್ವ ನನ್ನನ್ನು ಹುರಿದುಂಬಿಸಿದ.

” ನನಗೆ ಖರ್ಚು ಎಷ್ಟು ಬರುತ್ತೆ ಸರ್?” ಎಂದೆ ನಾನು ಚಿಂತೆಯಿಂದ.

“ಸಾರ್.. ನಿಮಗೆ ಎಷ್ಟು ಕೊಡಲು ಸಾಧ್ಯವೋ ಅಷ್ಟು ಕೊಡಿ. ನಿಮ್ಮನ್ನು ನಾನು ವಹಿಸಿಕೊಂಡ ಮೇಲೆ ಕೈ ಬಿಡಲಾಗುತ್ತದೆಯೇ? ಬಾಕಿ ಏನಾರ ಮಾಡ್ತೀನಿ” ಎಂದ ವಿಶ್ವ. 

ನನ್ನ ಕಣ್ಣುಗಳಲ್ಲಿ ಆನಂದ ಭಾಷ್ಪವೇ ಸುರಿಯಲಾರಂಭಿಸಿತು. ಎಷ್ಟು ವರ್ಷಗಳಿಂದ ಸಾಹಿತ್ಯದ ಬೆನ್ನು ಬಿದ್ದಿದ್ದೆ! ಎಷ್ಟು ಬರಹಗಾರರನ್ನು, ಸಾಹಿತಿಗಳನ್ನು, ಸಂಪಾದಕರನ್ನು ಭೇಟಿಯಾಗಿ ಓಲೈಸಿದ್ದೆ! ಎಷ್ಟು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದೆ!  ಯಾವುದೂ ಸಹಾಯಕ್ಕೆ ಬರದಿದ್ದಾಗ ಬರೆದದ್ದರಲ್ಲಿ ಹಲವನ್ನು ಹರಿದು ಬಿಸಾಕಿದ್ದೆ. ಕೆಲವನ್ನು ಮೂಟೆ ಕಟ್ಟಿ ಅಟ್ಟಕ್ಕೆಸೆದಿದ್ದೆ. ಈಗ ಕಾಲ ಕೂಡಿ ಬರುವಾಗ ಕೈಯಲ್ಲಿ ಬೇಕಾದಷ್ಟು ಲೇಖನಗಳೇ ಇಲ್ಲದಿದ್ದರೆ! ಇಲ್ಲದಿದ್ದರೆ ಬರೆಯಬೇಕು.. ಕೈಗೆ ಬಂದ ತುತ್ತು ಬಾಯಿಗಿಲ್ಲ ಅಂತಾಗಬಾರದು.

ಸಂತೋಷದಲ್ಲಿ ಮೈ ಮರೆತು ಕವಿಸುಬ್ಬಣ್ಣರಿಗೆ ಫೋನ್ ಮಾಡಿದೆ. (ನನ್ನ ಪರಿಚಯ ಮಾಡಿಕೊಡಲು ಇನ್ನೊಮ್ಮೆ ಕವಿ ಮತ್ತು ಕಪಿ ಪ್ರಸಂಗ ಹೇಳಬೇಕಾಯಿತು.) 

“ನಾನು ಹೇಳಲಿಲ್ಲವಾ? ಅವಕಾಶಗಳೇ ಆತನ ಬಿಸಿನೆಸ್ಸು. ಆ ಪ್ರಶಸ್ತಿ ಇಪ್ಪತ್ತೈದು ಸಾವಿರದ್ದು.. ಬಹುಶಃ ಐದೋ ಹತ್ತೋ ಸಾವಿರ ತಂದು ವಿಶ್ವ ನಿಮ್ಮ ಕೈಗೆ ಕೊಡುತ್ತಾನೆ. ತಪ್ಪಿಯೂ ಉಳಿದ ಹಣ ಎಲ್ಲಿ ಅಂತ ಕೇಳಬೇಡಿ.. ಸ್ವಲ್ಪ ಜಾಣತನ ತೋರಿಸಿ. ಬಹುಮಾನ, ಪ್ರಶಸ್ತಿ, ಅಧ್ಯಕ್ಷತೆ, ಸನ್ಮಾನ, ಆಯ್ಕೆಸಮಿತಿ ಸದಸ್ಯತನ.. ಹೀಗೆ ಎಲ್ಲ ಸೌಭಾಗ್ಯಗಳನ್ನೂ ಒಂದೊಂದಾಗಿ ನಿಮ್ಮ ಹೆಸರಿಗೇ ಬರೆಸಿ ತರುತ್ತಲೇ ಇರುತ್ತಾನೆ. ಇನ್ನುಮೇಲೆ  ಆಗಾಗ ಸುಡುಗಾಡು ಏನಾದ್ರೂ ಬರೆಯುತ್ತಾ ನೀವು ಚಲಾವಣೆಯಲ್ಲಿದ್ದುಬಿಟ್ಟರೆ ಸಾಕು ನೋಡಿ, ಹಾಯಾಗಿ ಯಶಸ್ಸಿನ ಮೆಟ್ಟಲುಗಳನ್ನು ಮೇಲೇರುತ್ತಲೇ ಇರುತ್ತೀರಿ.” ಎಂದರು ಕವಿಸುಬ್ಬಣ್ಣ. 

ಪ್ರಶಸ್ತಿ, ಬಹುಮಾನ, ಸನ್ಮಾನಗಳೆಲ್ಲ ಬಲೂನುಗಳಿಗೆ ಕಟ್ಟಿದ ಬಾಳೆಹಣ್ಣುಗಳ ರೂಪದಲ್ಲಿ ಕಣ್ಣೆದುರು ಕುಣಿದಂತೆ ಭಾಸವಾಗಿ ಕವಿಸುಬ್ಬಣ್ಣರ ಕವಿ ಮತ್ತು ಕಪಿ ಕವನಕ್ಕೆ ನನ್ನ ತಲೆಯಲ್ಲೊಂದು ಹೊಸ ಅರ್ಥ ಮೂಡಿ ಬಂದಿದೆ! ಅದನ್ನೂ ಬರೆದು ವಿಶ್ವನಿಗೆ ಕೊಡುವ ನನ್ನ ಪುಸ್ತಕವಿಶ್ವರೂಪದಲ್ಲಿ ಹಾಕ್ತೇನೆ, ಪುಸ್ತಕ ಬಿಡುಗಡೆಯಾದಾಗ ಕೊಂಡು ಓದಿ ಕನ್ನಡ ಸಾಹಿತ್ಯಕ್ಕೆ ನನ್ನ ಸೇವೆಯನ್ನು ಹೊಸದಾಗಿ ಅರ್ಪಿಸಿಕೊಂಡಿರುವ ನನ್ನನ್ನು ಪ್ರೋತ್ಸಾಹಿಸಿ


ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter