ನನಗೆ ಅತಿಯಾಗಿ ಹೆದರಿಕೆ ಹುಟ್ಟಿಸುವ ಸಂಗತಿಯೆಂದರೆ ಭೂತ ಪ್ರೇತಗಳೂ ಅಲ್ಲ, ಹಾವು ಹರಣೆಗಳೂ ಅಲ್ಲ, ಕಳ್ಳ ಕಾಕರೂ ಅಲ್ಲ, ಅದೇ ಆ ‘ಬೈ ಒನ್ ಗೆಟ್ ಒನ್ ಫ್ರೀ‘ ಬೋರ್ಡು ನೋಡಿದಾಗ ಹೆದರುತ್ತೇನೆ, ಹಲವು ಭಾವನೆಗಳು ನನ್ನನ್ನು ಬೆನ್ನಟ್ಟುತ್ತವೆ, ಮರೆಯಬೇಕೆಂದರೂ ಮರೆಯಲಾಗದ ಕೆಲವು ಸಂಗತಿಗಳಿವೆ. ಒಂದಾನೊಂದು ಕಾಲದಲ್ಲಿ ನಾನೂ ಆ ಬೋರ್ಡಿನ ಆಮೀಷಕ್ಕೆ ಬಲಿಯಾಗಿ ಮತ್ತೀಗ ಎಚ್ಚೆತ್ತುಕೊಂಡಿದ್ದೇನೆ. ಎಚ್ಚೆತ್ತುಕೊಂಡಿದ್ದೇನೆ ಎಂದು ಬರೆಯುತ್ತಿದ್ದರೂ ಎಚ್ಚರಗೊಳ್ಳುವಷ್ಟರಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ. ಮತ್ತೆ ಮತ್ತೆ ‘ಬೈ ಒನ್ ಗೆಟ್ ಒನ್ ಫ್ರೀ’ ಬೋರ್ಡಿಗೆ ಬಲಿಯಾಗುವ ಸಾಧ್ಯತೆಗಳೂ ಇವೆ.
‘ಆ ಮೊದಲು’ ಹೇಗೆ ಮರೆಯಲಿ ನಾನು, ನೆನಪು ಇನ್ನೂ ಹಸಿರಾಗಿದೆ, ಅದೇ ನಾನು ಮೊದಲ ಬಾರಿಗೆ ‘ಬೈ ಒನ್ ಗೆಟ್ ಒನ್ ಫ್ರೀ’ ಆಮೀಷಕ್ಕೆ ಒಳಗಾಗಿದ್ದು. ಅದೇ ಆ ಬೋರ್ಡು ಮೊದಲ ಬಾರಿಗೆ ನಾನು ನೋಡಿದ್ದು, ಬಟ್ಟೆ ಅಂಗಡಿಯಲ್ಲಿ ಸುಮಾರು 7 ವರ್ಷ 6 ತಿಂಗಳ ಹಿಂದೆ, ಸಾಲು ಸಾಲು ಬಣ್ಣ ಬಣ್ಣದ ನೈಟಿಗಳು ಮೇಲೆ ‘ಬೈ ಟೂ, ಗೆಟ್ ಒನ್ ಫ್ರೀ’ ಎಂಬ ಬೋರ್ಡು. ಬಟ್ಟೆಗಳೇ ನನ್ನ ವೀಕ್ ಪಾಯಿಂಟ್. ಅಂಗಡಿಗೆ ಕಾಲಿಟ್ಟಿದ್ದು ಕರ್ಚೀಪ್ ಕೊಳ್ಳಲು, ಮನೆಯಲ್ಲಿ ನೈಟಿಗಳ ರಾಶಿಯೇ ಬಿದ್ದಿದ್ದರೂ ಅಂಗಡಿಯಲ್ಲಿ ಫ್ರೀಯಾಗಿ ಕೊಡುವ ನೈಟಿಯನ್ನು ಬಿಡಲು ನಾನು ಮೂರ್ಖಳಲ್ಲ, ಸರಿ ಎರಡು ನೈಟಿಯನ್ನು 550 ರುಪಾಯಿ ಕೊಟ್ಟು ಕೊಂಡೆ, ಅದರೊಂದಿಗೆ ಮೂರನೆಯ ನೈಟಿಯೂ ಕೈಗೆ ಬಂತು, ಮನದಲ್ಲಿ ಏನೋ ಸಾಧಿಸಿದ ಹೆಮ್ಮೆ, ಸಾರ್ಥಕತೆ ಎಲ್ಲವೂ ಮೂಡಿತು. ಮರುದಿನ ನನ್ನ ದಿಗ್ವಿಜಯವನ್ನು ಪಕ್ಕದವಳಲ್ಲಿ ಹೇಳಿಕೊಂಡೆ, ಅವಳೋ ”ಅಲ್ಲಾ ಕಣೇ ಒಂದು ನೈಟಿಯ ಬೇಲೆ ಸಾಧಾರಣವಾಗಿ 200 ರುಪಾಯಿ, 550 ರುಪಾಯಿಗೆ 3 ನೈಟಿ ಬಂದಂತಾಯಿತು, ಇಲ್ಲಿ ಲಾಭ ಹೆಚ್ಚೆಂದರೆ 50 ರುಪಾಯಿ”. ಹೌದಲ್ಲವೇ? ನನಗೇಕೆ ಹೊಳೆಯಲಿಲ್ಲ, ಅದೂ ಮನೆಯಲ್ಲಿ ನೈಟಿಗಳಿರುವಾಗ ಒಮ್ಮೆಗೆ 3 ನೈಟಿ ಬೇಕಿತ್ತೇ? ಇರಲಿ ಮುಂದಿನ ಬಾರಿ ಜಾಗ್ರತೆಯಿಂದ ಇರಬೇಕು, ‘ನಾನೆಂದಿಗೂ ಬಲಿಪಶು ಆಗಲಾರೆ‘ ಎಂಬ ಪ್ರತಿಜ್ಞೆ ಕೈಗೊಂಡೆ.
ವರಮಹಾಲಕ್ಷ್ಮೀ ಹಬ್ಬದ ಸಮಯ, ಹೊಸ ಸೀರೆ ಇಲ್ಲದಿದ್ದರೆ ಹೇಗೆ? ಪ್ರತೀ ಅಂಗಡಿಯವರೂ ಅತ್ಯಂತ ಚೆಂದದ ಸೀರೆಗಳನ್ನು ತೂಗು ಹಾಕಿದ್ದರು. ಅದರೊಂದಿಗೆ ‘ಬೈ ಒನ್ ಗೆಟ್ ಒನ್ ಬೋರ್ಡು ಫ್ರೀ’ ಬೋರ್ಡು ಬೇರೆ, ಆ ಕಡೆ ಸುಳಿದರೆ ಸಾಕು, ”ಬನ್ನಿ ಬನ್ನಿ” ಎಂದು ಬಾಯಿ ತುಂಬಾ ಕರೆಯುವ ಅಂಗಡಿಯವ. ಅಂಗಡಿಯವನ ಉಪಚಾರ ನೋಡಿ ತವರಿನ ನೆನಪಾಗಿ ಕಣ್ಣು ಹನಿಗೂಡಿತು. ”ಈ ಆಫರ್ ಕೇವಲ ಎರಡೇ ದಿನ ಮೇಡಂ, ಉತ್ತರದಲ್ಲಿ ನೆರೆ ಬಂದು ನಮಗೆ ಸ್ಟಾಕುಗಳು ಕಡಿಮೆ ದರದಲ್ಲಿ ಸಿಕ್ಕಿ, ಒಂದು ಕೊಂಡರೆ ಮತ್ತೊಂದು ಆಫರ್ ಇಟ್ಟಿದ್ದೇವೆ” ಅಂದ. ನನಗೆ ಅವನು ಹೇಳಿದ್ದು ಒಂದೂ ಸರಿಯಾಗಿ ಕೇಳಿಸಲಿಲ್ಲ, ಸೀರೆಯ ಮೋಹವೇ ಅಂತಹದ್ದು. ”ನನಗೆ ಒಂದು ಸೀರೆ ಸಾಕು” ಎಂದೆ. ”ಮೇಡಂ, ನೀವು ಒಂದೇ ಸೀರೆಗೆ ದುಡ್ಡು ಕೊಟ್ಟರೆ ಸಾಕು, ಆದರೆ ನೀವು ಎರಡು ಸೀರೆಯನ್ನು ಸೆಲಕ್ಟ್ ಮಾಡಿ, ನಿಮಗೆ ಇಷ್ಟ ಬಂದದ್ದು” ಎಂದ ಅಂಗಡಿಯವ ಅಣ್ಣನ ಪ್ರೀತಿಯನ್ನು ತೋರಿಸುತ್ತಾ. ದೂರದಿಂದ ಜಗಮಗಿಸಿದ ಸೀರೆಗಳು ಮುಟ್ಟಿ ನೋಡಿದಾಗ ‘ಗುಣಮಟ್ಟ ಸರಿ ಇಲ್ಲ’ ನನ್ನ ಒಳ ಮನಸ್ಸು ಬುದ್ದಿ ಹೇಳಿತು. ಆದರೆ ನನ್ನ ಒಳ ಮನಸ್ಸು ಹೇಳಿದ್ದನ್ನು ಕೇಳಲು ನನ್ನ ಹೃದಯ ಮತ್ತು ಉಳಿದ ಅಂಗಾಂಗಳು ಮುಷ್ಕರ ಹೂಡಿದವು. ಎರಡು ಸೀರೆ ಆರಿಸಿದೆ, ಒಂದರ ದುಡ್ಡು ಕೊಟ್ಟು ಹೊರ ಬಂದೆ, ಹೊರಬಂದವಳು ಮತ್ತೆ ಏನೋ ನೆನಪಾದಂತೆ ಅಂಗಡಿಯೊಳಗೆ ಓಡಿ ಮತ್ತೆರಡು ಸೀರೆ ಆರಿಸಿ ಒಂದರ ದುಡ್ಡು ಕೊಟ್ಟೆ. ಅಂತೂ ವರಮಹಾಲಕ್ಷ್ಮೀ ನನ್ನನ್ನು ನೋಡಿ ಮುಗುಳ್ನಕ್ಕು ಅನುಗ್ರಿಹಿಸಿದಂತೆ ಕಂಡಿತು.
ಹಬ್ಬದ ದಿನ ಹೊಸತಾಗಿ ತಂದ ಜಗಮಗಿಸುವ ಕೆಂಪು ಸೀರೆ ಉಟ್ಟು ಅಕ್ಕಪಕ್ಕದ ಮನೆಗೆ ಕುಂಕುಮಕ್ಕೆ ಹೊರಟೆ. ಎರಡು ಮನೆ ದಾಟಿರಲಿಲ್ಲ, ಕುಸುಮ ನನ್ನನ್ನೇ ದೃಷ್ಟಿಸಿ ನೋಡಿದವಳು, ”ಏನೇ ಇದು ಮೈ ಎಲ್ಲಾ ಕೆಂಪು, ಕೆಂಪು”. ಆಗಲೇ ನಾನು ನೋಡಿಕೊಂಡಿದ್ದು ಸೀರೆಯ ಬಣ್ಣ ಎಲ್ಲಾ ಮೈಗೆ ಅಂಟಿಕೊಂಡಿತ್ತು. ಮತ್ತೆ ಮೂರ್ಖಳಾದೆ, ಯಾರೂ ನನ್ನನ್ನು ಮೂರ್ಖರನ್ನಾಗಿ ಮಾಡಿದ್ದಲ್ಲ, ನನ್ನ ಬುದ್ದಿಯೇ ನನ್ನನ್ನು ಮೂರ್ಖಳನ್ನಾಗಿ ಮಾಡಿತ್ತು.
ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ನಾನೀಗ ಎಚ್ಚೆತ್ತುಕೊಂಡಿದ್ದೇನೆ. ಎಲ್ಲಾದರೂ ಬೈ ಒನ್ ಗೆಟ್ ಒನ್ ಫ್ರೀ ಕಂಡೆನೋ ಅತ್ತ ಕಡೆಯಂತೂ ತಿರುಗಿ ನೋಡುವುದಿಲ್ಲ. ಆದರೆ ನಾನೀಗ ಹೆದರಿ ನಡುಗುತ್ತಿರುವುದು ನನ್ನ ಗಂಡನಿಗೆ, ಅವರೀಗ ಬೈ ಒನ್ ಗೆಟ್ ಒನ್ ಫ್ರೀ ಹಿಂದೆ ಓಡುತ್ತಿದ್ದಾರೆ. ಕಳೆದ ವಾರ 20ಕೇಜಿ ಸುಪಿರಿಯರ್ ಕ್ವಾಲಿಟಿ ‘ಬಾಸುಮತಿ ರೈಸ್’ ಮನೆಗೆ ಬಂತು. ಇಬ್ಬರೇ ಇರುವ ನಮ್ಮ ಮನೆಗೆ ವಾರಕ್ಕೊಮ್ಮೆ ಪಲಾವ್/ಬಿರಿಯಾನಿ ಮಾಡಿದರೂ 20ಕೇಜಿ 1.1/2 ವರ್ಷಗಳಿಗೆ ಸಾಕು, ಅಷ್ಟು ದಿನ ಅಕ್ಕಿಯನ್ನು ಹಾಗೇ ಇಟ್ಟರೆ ಹುಳ ಬರುವುದು ಗ್ಯಾರೆಂಟಿ. ”ರೀ ನಾನಂತೂ ಹೇಳಿದ್ದು ತೊಗರಿ ಬೇಳೆ ತರಲು, ಅಕ್ಕಿಯೇಕೆ ತಂದಿದ್ದೀರಿ? ಅದೂ 20ಕೇಜಿ?” ಎಂದರೆ ”10ಕೇಜಿ ಅಕ್ಕಿ ಕೊಂಡರೆ 10ಕೇಜಿ ಫ್ರೀ ಕಣೇ, 800 ರುಪಾಯಿಗೆ 20 ಕೇಜಿ ಅಕ್ಕಿ ಲಾಭ ಅಲ್ಲದೆ ಮತ್ತೇನು? ಹೆಚ್ಚೆನಿಸಿದರೆ ಫ್ರಿಡ್ಜಿನಲ್ಲಿ ಇಟ್ಟುಬಿಡು” ಎನ್ನುವ ಉಪಾಯ ಬೇರೆ ಹೇಳಿ ಕೊಡುತ್ತಿದ್ದಾರೆ. ತರಕಾರಿ, ಹಣ್ಣು, ಹಾಲು, ಉಳಿದ ಅಡಿಗೆಗಳಲ್ಲದೆ ಕಳೆದ ವಾರ ಇವರೇ ಬೈ ಒನ್, ಗೆಟ್ ಒನ್ ಎಂದು ತಂದ 4 ಲೀಟರ್ ಜೀರಾ ಪಾನೀಯ ಫ್ರಿಡ್ಜಿನ ಇಂಚಿಂಚೂ ತುಂಬಿಕೊಂಡಿರುವಾಗ ಅಕ್ಕಿಯನ್ನೆಲ್ಲಿ ಇಡುವುದು?
ಅಡಿಗೆ ಮನೆಯ ಶೆಲ್ಫಿನ ತುಂಬಾ ಪಾರ್ಲೆ ಬಿಸ್ಕತ್ತುಗಳು, ಚಾಕಲೇಟುಗಳು, ಪೆಪ್ಪರಮಿಂಟುಗಳು, ಕ್ರೀಮ್ ಬಿಸ್ಕತ್ತುಗಳು, ನೂಡಲ್ಸುಗಳು, ಚಿಪ್ಸುಗಳು ತುಂಬಿವೆ. ಚೆಂದವಾಗಿ ಜೋಡಿಸಿಟ್ಟಿದ್ದೇನೆ. ಹೋದ ತಿಂಗಳು ಮಗ ಬಂದವನು ”ಮನೆ ನೋಡಿದರೆ ಸೂಪರ್ ಮಾರ್ಕೆಟಿನಂತಿದೆ, ಚಿಪ್ಸು, ಕ್ರೀಮ್ ಬಿಸ್ಕತ್ತನ್ನಂತೂ ನೀವು ಹಿಂದೆ ತಿಂದದ್ದನ್ನು ನೋಡಿಲ್ಲ”. ಅಲ್ಲೇ ಸುಳಿದಾಡುತ್ತಿದ್ದ ನನ್ನವರು ”ಲಾಭಕ್ಕೆ ಸಿಕ್ಕಿದ್ದನ್ನು ಏಕೆ ಬಿಡಬೇಕು? ಚಿಪ್ಸು, ಎಲ್ಲ ತರಹದ ಬಿಸ್ಕತ್ತುಗಳನ್ನು ತಿನ್ನುವುದನ್ನು ಅಭ್ಯಾಸ ಮಾಡಿಕೊಳ್ಳತ್ತಿದ್ದೇವೆ ಕಣೋ” ಎಂದರು. ಒಂದು ಗುಟ್ಟು ಹೇಳಲೇ, ತಂದದ್ದು ಎಷ್ಟೋ, ಅದರಲ್ಲಿ ಅರ್ಧಕರ್ಧ ಕೆಲಸದವಳಿಗೆ ದಾನ ಮಾಡಿಯಾಯಿತು. ಇದರಿಂದಾಗಿ ಇರಬೇಕು ‘ಕೆಲಸಕ್ಕೆ ಬರಬೇಡ’ ಎಂದು 6 ತಿಂಗಳ ಹಿಂದೆಯೇ ಹೇಳಿದ್ದರೂ ಇನ್ನೂ ಬರುತ್ತಿದ್ದಾಳೆ. ಅವಳು ಮಾಡಿದ ಕೆಲಸ ಸರಿ ಇಲ್ಲದಿದ್ದರೂ ಕೆಲಸಕ್ಕೆ ಸಂಬಳ ಕೊಡುತ್ತಿದ್ದೇನೆ.
ಮೊದಲು ಬಟ್ಟೆ ಅಂಗಡಿಯಲ್ಲಿ ಶುರುವಾದ ಈ ಸಾಂಕ್ರಾಮಿಕ ರೋಗ ಎಲ್ಲಾ ಕಡೆ ಹರಡಿದೆ. ಸೋಪು, ಶಾಂಪು, ಅಕ್ಕಿ, ಬೇಳೆಕಾಳುಗಳು, ಸಿಹಿ ತಿಂಡಿಗಳು, ಖಾರ ತಿಂಡಿಗಳು, ಒಣ ಹಣ್ಣುಗಳು ಎಲ್ಲಾ ಕಡೆ ನುಸುಳಿದೆ. ಸೂಕ್ಷ್ಮವಾಗಿ ಗಮನಿಸಿದರೆ ಹೆಚ್ಚಿನ ವಸ್ತುಗಳ ಎಕ್ಸಪಾಯರಿ ಡೇಟ್ ಕೂಡ ಅತೀ ಹತ್ತಿರದಲ್ಲಿರುತ್ತವೆ. ಇನ್ನು ಕೆಲವು ಕಡೆ ಬೇಕಾದ ವಸ್ತುಗಳೊಂದಿಗೆ ಬೇಡದ ವಸ್ತುಗಳ ಆಮೀಷವೂ ಇರುತ್ತದೆ, ಟೀವಿಯೊಂದಿಗೆ ಮಿಕ್ಸಿ ಫ್ರೀ, ಫ್ರಿಡ್ಜಿನೊಂದಿಗೆ ಓವಾನ್ ಫ್ರೀ ಹೀಗೆ ಎಲ್ಲಾ ಕಡೆ ಫ್ರೀ, ಫ್ರೀ.
ಮೊನ್ನೆಯಂತೂ ಇವರು ತಂದ ವಸ್ತು ನೋಡಿ ತಲೆ ತಿರುಗಿ ಬಿದ್ದೆ, ಕೆಂಪು, ಹಳದಿ ಬಣ್ಣದ ಪಟ್ಟೆ ಪಟ್ಟೆಯ ಮೂರು ಕೊಡೆಗಳು. ನೋಡಿ ತಲೆ ತಿರುಗಿ ಬಿದ್ದವಳು ಎದ್ದು ”ಅಲ್ಲಾ ರೀ ಕಳೆದ ವರ್ಷ ತಂದ ಕೊಡೆಯೇ ಮೂಲೆಯಲ್ಲಿ ಕೂತಿದೆ, ನೀವು ಕೊಡೆ ತಂದ ಮುಹೂರ್ತಕ್ಕೆ ಬೆಂಗಳೂರಿನಲ್ಲಿ ಮಳೆ ಅರ್ಧಕರ್ಧವಾಗಿದೆ”. ”ಟೆನ್ಶನ್ ಮಾಡ್ಕೊಬೇಡ ಕಣೇ ಹಾರ್ಟ್ ಅಟಾಕ್ ಆಗುತ್ತೆ, ಆ ಸೂಪರ್ ಮಾರ್ಕೆಟಿನಲ್ಲಿ ಇನ್ನೆಂದೂ ಇಲ್ಲದ ಆಫರ್ ಇಟ್ಟಿದ್ದ ಕಣೇ. ಒಂದು ಕೊಡೆ ಕೊಂಡರೆ, ಎರಡು ಉಚಿತ, ಅಂದರೆ 180 ರುಪಾಯಿಯ ಕೊಡೆ 60 ರುಪಾಯಿಗೇ ಸಿಕ್ಕಿದಂತೆ. ಇಂತಹ ಲೆಕ್ಕಾಚಾರವೆಲ್ಲಾ ನಿನ್ನಂತಹ ದಪ್ಪ ಮಂಡೆಯವರಿಗೆ ಗೊತ್ತಾಗುವುದಿಲ್ಲ ಬಿಡು”. ಏನೆನ್ನಲಿ ಇವರ ಬುದ್ಧಿವಂತಿಕೆಗೆ? ಮನೆಯಲ್ಲಿ ಕೊಡೆಯಿದೆ, ಈಗ ಮತ್ತೆ ಮೂರು ಕೊಡೆಗಳು. ಅದೂ ಕೆಂಪು, ಹಳದಿಯ ಪಟ್ಟೆ ಪಟ್ಟೆಯ ಕೊಡೆ, ಹಿಡಿದುಕೊಂಡು ಹೊರಗೆ ಹೇಗೆ ಹೋಗಲಿ? ಕೊಡೆಗಳನ್ನು ನನ್ನವರಿಗೆ ಗೊತ್ತಾಗದ ಹಾಗೆ ಪಕ್ಕದ ಕಟ್ಟಡದ ಕೆಲಸಗಾರರಿಗೆ ದಾನ ಮಾಡಿ ಕೃತಾರ್ಥಳಾಗಲು ಪ್ರಯತ್ನಿಸಿದೆ. ”ಮೇಡಂ ಬೈ ಒನ್, ಗೆಟ್ ಟೂ ಕೊಡೆಗಳು, ಕ್ವಾಲಿಟಿ ಚೆನ್ನಾಗಿರೋದಿಲ್ಲ” ನನಗೆ ಬುದ್ದಿವಾದ ಹೇಳಿ ಉಪಕಾರ ಮಾಡುವಂತೆ ತೆಗೆದುಕೊಂಡರು.
ಮೊನ್ನೆ ಗೆಳತಿಯ ಮನೆಯಲ್ಲಿ ಸತ್ಯನಾರಾಯಣ ಪೂಜೆ ಇಟ್ಟುಕೊಂಡಿದ್ದಳು, ಬಂದವರಿಗೆ ಕುಂಕುಮದೊಂದಿಗೆ ಬ್ಲೌಸ್ ಪೀಸ್, ತೆಂಗಿನಕಾಯಿ ಕೊಡುವುದು ವಾಡಿಕೆ. ಇವಳೋ ಕುಂಕುಮದೊಂದಿಗೆ ದೊಡ್ಡ ದೊಡ್ಡ ಪ್ಯಾಕೆಟ್ ಕೊಡುತ್ತಾ ”ನೋಡ್ರೇ ಈ ಸಲ ಬ್ಲೌಸ್ ಪೀಸ್ ಬದಲಿಗೆ ಏನೋ ವಿಶೇಷವಾದದ್ದು ನಿಮಗೆಲ್ಲಾ ಉಪಯೋಗ ಬರುವಂತಹದ್ದು ಕೊಡುತ್ತಿದ್ದೇನೆ, ಉಪಯೋಗಿಸುವಾಗ ನನ್ನನ್ನು ನೆನಪು ಮಾಡಿಕೊಳ್ರೇ” ಎಂದಳು. ತೆಗೆದು ನೋಡಿದರೆ ಎಲ್ಲರ ಕೈಯಲ್ಲೂ ಬಣ್ಣ ಬಣ್ಣದ ಕೊಡೆಗಳು. ನನಗೆ ಬಂದದ್ದಂತೂ ಕೆಂಪು, ಹಳದಿ ಬಣ್ಣದ ಪಟ್ಟೆ ಪಟ್ಟೆ ಕೊಡೆ!!! ‘ಹೋದೆಯ ಪಿಶಾಚಿ ಎಂದರೆ ಬಂದೆನು ಗವಾಕ್ಷೀಲಿ’ ಎಂಬಂತೆ, ‘ಬಿಟ್ಟೆ ಎಂದರೂ ಬಿಡದೀ ಮಾಯೇ’ ಎಂಬಂತೆ ಬೈ ಒನ್, ಗೆಟ್ ಒನ್ ಫ್ರೀ ಬೇತಾಳನಂತೆ ನನ್ನ ಬೆನ್ನು ಹಿಡಿದಿದೆ. ಹಿಡಿದ ಬೇತಾಳನನ್ನು ಓಡಿಸಲು ಶಾಂತಿ ಮಾಡಿಸಿದರೆ ಸರಿಯಾದಿತೇ? ಒಂದು ಶಾಂತಿ ಮಾಡಿಸಿದರೆ ಮತ್ತೊಂದು ಶಾಂತಿ ಫ್ರೀಯಾಗಿ ಸಿಗುವ ಸಾಧ್ಯತೆ ಇದೆಯಾ?