ಜಗತ್ತನ್ನು ಕೊವಿಡ್ ಎಂಬ ದುರಿತಕಾಲ ಆವರಿಸಿಕೊಂಡಿದೆ. ನಿತ್ಯವೂ ಸಾವುಗಳ ಸಂತೆಯಲ್ಲೇ ಸುತ್ತುತ್ತಿರುವ ಆತಂಕ ನಮ್ಮೆಲ್ಲರದು. ದೇಶಾದ್ಯಂತ ನೂರಾರು ಮಂದಿ ವೈದ್ಯರು ಸೇರಿದಂತೆ ಲಕ್ಷಾಂತರ ಜನರನ್ನು ಬಲಿ ಪಡೆದ ಕೊರೊನಾ ಎಂಬ ಕರಾಳ ಕಾಯಿಲೆಗೆ ಔಷಧಿಯೇ ಇಲ್ಲದಿರುವಾಗ ಈ ಪಿಡುಗಿಗಿರುವ ಏಕೈಕ ಪರಿಹಾರ ಎಂದರೆ ಸುಸ್ಥಿರ ಮನೋಸ್ವಾಸ್ಥ್ಯ. ಬಹುಪಾಲು ಕೊವಿಡ್ ಸಾವುಗಳಿಗೆ ಹೆದರಿಕೆ, ಆತಂಕ ಮತ್ತು ಅಜಾಗರೂಕತೆಗಳೇ ಹೆಚ್ಚು ಕಾರಣ.
ನಮ್ಮ ಇಂದಿನ ಸಂದರ್ಭದಲ್ಲಿ ಸುಸ್ಥಿರ ಮನೋಸ್ವಾಸ್ಥ್ಯ ಮತ್ತು ಸ್ಥೈರ್ಯ ಎಂದರೆ ಅಕ್ಷರಶಃ ಡಾ. ಸಿ.ಆರ್. ಚಂದ್ರಶೇಖರ ಅವರು. ಡಾ. ಸಿ.ಆರ್.ಸಿ. ಅನ್ನುವುದು ನಮ್ಮ ನಡುವೆ ಇರುವ ಓರ್ವ ವ್ಯಕ್ತಿಮಾತ್ರವಲ್ಲ. ಅದೊಂದು ವೈದ್ಯಕೀಯ ಲೋಕದ ಪವಾಡ ಸದೃಶ ಶಕ್ತಿಯೇ ಹೌದು. ನಿಮ್ಹಾನ್ಸ್ ಎಂದೊಡನೆ, ಮತ್ತು ಮಾನಸಿಕ ಆರೋಗ್ಯ ಎಂದೊಡನೆ ಥಟ್ಟನೆ ನೆನಪಾಗುವ ಹೆಸರೇ ಸಿ.ಆರ್.ಸಿ..
ಅವರು ಸಮಾಧಾನ ಹೆಸರಿನ ಸ್ವಾಸ್ಥ್ಯ ಕನಸುಗಳ ಆರೋಗ್ಯ ಸಂಸ್ಥೆ ಕಟ್ಟಿದ್ದಾರೆ. ತಮ್ಮ ಪತ್ನಿಯ ನೆನಪಿಗಾಗಿ ಸಮಾಧಾನದ ಸಮಗ್ರ ಅಭಿವೃದ್ಧಿಗೆ ಒಂದು ಕೋಟಿ ರುಪಾಯಿ ದಾನ ಕೊಟ್ಟಿದ್ದಾರೆ. ಈ ಕಾರಣಕ್ಕಾಗಿ ಅವರದು ಪವಾಡ ಸದೃಶ ವ್ಯಕ್ತಿತ್ವ ಎಂದಾಗಲಿ, ಇನ್ನೂರೈವತ್ತಕ್ಕೂ ಹೆಚ್ಚು ಮನೋರೋಗ, ಮನೋಸ್ವಾಸ್ಥ್ಯ ಕುರಿತಾದ ಪುಸ್ತಕ ಬರೆದ ಕಾರಣಕ್ಕಾಗಿ ಎಂದು ಮಾತ್ರವಲ್ಲ.
ಆದರೆ ಅದನ್ನೆಲ್ಲ ಮೀರಿದ ಅಪ್ಪಟ ಜೀವಪರ, ಜನಪರ ಪ್ರೀತಿ, ಕಳಕಳಿಗಳ ಕಾರಣಕ್ಕಾಗಿ ಹೇಳಬೇಕಾಯಿತು. ನಮ್ಮ ಕನ್ನಡನಾಡಿನಲ್ಲಿ ಇಂತಹ ಸರಳ, ಸಜ್ಜನಿಕೆಯ ಅಪ್ಪಟ ಕನ್ನಡಿಗ ವೈದ್ಯರೊಬ್ಬರು ನಮ್ಮೊಂದಿಗೆ ಇದ್ದಾರಲ್ಲ ಎಂಬುದೇ ಮತ್ತೊಂದು ಪವಾಡ ಸದೃಶ ಸಂಗತಿ. ಸಮಾಜದಲ್ಲಿ ಹೆಸರು ಮತ್ತು ಕೀರ್ತಿ ಕಾಮನೆಯ ಮುದ್ದಾಂ ದಾನಿಗಳನೇಕರು ಇದ್ದಾರೆ. ಆದರೆ ಅವರು ಡಾ. ಸಿ.ಆರ್.ಸಿ. ಅಲ್ಲ. ಅಂತೆಯೇ ಇವರನ್ನು ಮುದ್ದಾಂ ದಾನಿಗಳ ಸಾಲಲ್ಲಿ ಸೇರಿಸುವುದು ಸಲ್ಲ.
ಸಣ್ಣಪುಟ್ಟ ಸಂಗತಿಗಳನ್ನು ದೊಡ್ಡದು ಮಾಡಿ ದಿನಗಟ್ಟಲೇ ಕಿರುಚಾಟ, ಅರಚಾಟ, ಆರ್ಭಟಗಳಂತೆ ತೋರಿಸುವ ವಿದ್ಯುನ್ಮಾನ ಮಾಧ್ಯಮಗಳ ಕಣ್ಣಿಗೆ ಸಿ.ಆರ್.ಸಿ. ಸಮಾಧಾನಕ್ಕೆ ನೀಡಿರುವ ಒಂದು ಕೋಟಿ ಹಣವಾಗಲಿ ಅವರು ಮಾಡಿದ ಜನಪರ ಕೆಲಸಗಳಾಗಲಿ ಕಾಣಿಸುವುದೇ ಇಲ್ಲ. ಆದರೆ ಇತ್ತೀಚೆಗೆ ಕಲಬುರ್ಗಿಯ ಎಸ್.ಎಸ್. ಹಿರೇಮಠ ಮತ್ತು ಗೆಳೆಯರು ಸಾಮಾಜಿಕ ಜಾಲತಾಣದಲ್ಲಿ ಮೂರು ದಿನಗಳ ಕಾಲ ತಾಸೆರಡು ಹೊತ್ತು ನುಡಿಗೌರವ ಹಮ್ಮಿಕೊಂಡದ್ದು ಶ್ಲಾಘನೀಯ.
ವೈದ್ಯಕೀಯ ವ್ಯಾಸಂಗ ಮತ್ತು ವೃತ್ತಿ ಪಕ್ಕಾ ಕಮರ್ಷಿಯಲ್ ಆಗಿದೆ. ಬಹುಪಾಲು ವೈದ್ಯರು ನಿರ್ದಯೆ, ಅಮಾನುಷವೂ ಆಗುತ್ತಿದ್ದು ಮತ್ತು ಆಸ್ಪತ್ರೆಗಳು ಹಣ ಗಳಿಕೆಯ ಕೇಂದ್ರಗಳೇ ಆಗಿವೆ. ಶ್ರೀಮಂತರು ಮಾತ್ರ ಹಣದಿಂದ ಆರೋಗ್ಯ ಖರೀದಿ ಮಾಡಬಹುದೆಂಬ ಹತ್ತು ಹಲವು ತಲ್ಲಣಗಳ ನಡುವೆ ಜೀವ ಕೈಯಲ್ಲೇ ಹಿಡಕೊಂಡು ಬದುಕುತ್ತಿದ್ದೇವೆ. ಅಂತಹ ಆತಂಕಗಳ ನಡುವೆ ಬಡವರೂ ಆರೋಗ್ಯವಂತರಾಗಿ ಬದುಕ ಬಹುದೆಂಬುದನ್ನು ಬರೆದು ಮತ್ತು ಬದುಕಿ ತೋರಿಸಿದವರು ಡಾ. ಸಿ.ಆರ್.ಸಿ.
ಅಂತೆಯೇ ಅವರು ಮರುಭೂಮಿಯಲ್ಲಿ ಪವಾಡದಂತೆ ದೊರಕಿದ ಶ್ರೀಗಂಧದ ಮರ. ಮರುಭೂಮಿಯಲ್ಲಿ ಸಣ್ಣದೊಂದು ಕರಿ ಜಾಲಿಗಿಡವೂ ಸಿಗಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಂತೆ ವೈದ್ಯಕೀಯ ಸೇವಾ ವ್ಯವಸ್ಥೆ ಘೋರ ನರಕ ತಲುಪಿರುವ ಕಾಲಘಟ್ಟದಲ್ಲಿದ್ದೇವೆ.
ಆದರೆ ಸಿ.ಆರ್.ಸಿ. ಅಂಥವರು ಪವಾಡ, ಮೂಢನಂಬಿಕೆಗಳನ್ನು ಕಿತ್ತೆಸೆದು ವೈಜ್ಞಾನಿಕ ಮತ್ತು ವೈಚಾರಿಕ ಹಕೀಕತ್ತುಗಳ ಮೂಲಕ ಸತ್ಯದ ದರ್ಶನ ಮಾಡಿಸಿದ ಸಾಧಕ. ಹೌದು ಅಂತಹ ಮರಳು ಗಾಡಿನಲ್ಲಿ ಜನ ಸಾಮಾನ್ಯರಿಗೆ ಶ್ರೀಗಂಧದ ಮರವಾಗಿ ಕಂಡಿದ್ದಾರೆ. ಆತ್ಮಹತ್ಯೆಗೆ ಕೈ ಹಾಕಿದ ಅದೆಷ್ಟೋ ಖಿನ್ನತೆಯ ಜೀವಗಳು ಇವರಿಂದಾಗಿ ಬದುಕುಳಿದಿವೆಯೆಂಬುದು ನಾವ್ಯಾರೂ ಮರೆಯಬಾರದು.
ಇನ್ನೇನು ಮುರಿದೇ ಹೋಗಿ ಬಿಟ್ಟಿತೆಂಬ ನೂರಾರು ದಾಂಪತ್ಯ ಬದುಕುಗಳಿಗೆ ಪುನರುಜ್ಜೀವನ, ಪುನಶ್ಚೇತನದ ಶಕ್ತಿ ನೀಡಿದವರು ಅವರು. ಸಹಸ್ರಾರು ಕುಟುಂಬಗಳಲ್ಲಿ ಮಾನಸಿಕವಾಗಿ ಹೊಸ ಬೆಳಕಿನ ಬದುಕನ್ನೇ ಕಟ್ಟಿಕೊಟ್ಟ ಪುಣ್ಯಾತ್ಮರು.
ದಾರ್ಶನಿಕನ ಫೋಜು ಕೊಟ್ಟು, ಸಹಸ್ರ, ಸಹಸ್ರ ಜನರನ್ನು ಕೂರಿಸಿಕೊಂಡು ಸಾಸಿವೆ ಕಾಳರ್ಧದಷ್ಟು ಪರಿಹಾರ ದೊರಕಿಸಲಾಗದ ಒಣ ಆಶೀರ್ವಾದ ಕುಟ್ಟುವ ಕಪಟಿಯಂತು ಅಲ್ಲವೇ ಅಲ್ಲ. ಅದು ಹೋಗಲಿ ಹಲವು ಪ್ರಕಾಂಡ ಪಂಡಿತರಂತೆ ಆಕರ್ಷಕವಾಗಿ ಮಾತಾಡುವ ಕ್ಷಣಭಂಗುರದ ವೃತ್ತಿಪರ ಭಾಷಣಕಾರರೂ ಅಲ್ಲ. ಖರೇ ಖರೇ ಹೇಳಬೇಕೆಂದರೆ ಅವರ ಒಂದೊಂದು ನುಡಿಯಲ್ಲೂ ಸಹಜ ಸದೃಢ ಚಿಕಿತ್ಸೆಯೇ ತುಂಬಿರುತ್ತದೆ. ಅಂತೆಯೇ ಅವರು ನುಡಿ ಚಿಕಿತ್ಸಕರು. ಬರೆದು ಬದುಕಿಸುವ ಬರಹಗಾರ.
ಡಾ. ಸಿ. ಆರ್. ಸಿ. ಎಂಬುದು ಹಚ್ಚಿಟ್ಟ ಕರ್ಪೂರ. ಅಲ್ಲಿ ಇದ್ದಿಲು ಸಿಗಲು ಸಾಧ್ಯವಿಲ್ಲ. ಯಾರೂ ಹುಡುಕಲೂ ಬಾರದು. ಅಬಾಲ ವೃದ್ದರಾದಿಯಾಗಿ ನಮ್ಮೆಲ್ಲರ ಖಿನ್ನತೆ, ಒತ್ತಡದ ಬದುಕಿಗೆ ಅವರು ಸಮಾಧಾನದ, ನೆಮ್ಮದಿಯ ಮಹಾ ಮಂತ್ರಶಕ್ತಿ. ಮನೋಜಗತ್ತಿನ ಮಾಂತ್ರಿಕ ಡಾ. ಸಿ. ಆರ್. ಚಂದ್ರಶೇಖರ ನೂರ್ಕಾಲ ನಮ್ಮ ನಡುವೆ ಇರಲಿ ನಮಗೆಲ್ಲ ಸುಸ್ಥಿರ ಮಾನಸಿಕ ಶಕ್ತಿ ನೀಡಲೆಂದು ಹಾರೈಸುವೆ.