ಕೊಳ್ಳುವವರು ಕಡಿಮೆಗೂ
ಮಾರುವವರು ಜಾಸ್ತಿಗೂ
ಹಗ್ಗಜಗ್ಗಾಟ ಮಾಡುತ್ತಿರಬೇಕಾದರೆ
ಕೊಳ್ಳುವಾತ ಕಡಿಮೆಗೆ ಕೇಳಿದ್ದಕ್ಕೆ ಕಾರಣವನ್ನೂ
ಮಾರುವಾತ ತನ್ನ ಮಾಲಿನ ಗುಣಗಾನವನ್ನೂ
ಮಾಡುತ್ತಾರೆ. ಕಡಿಮೆಗೆ ಕೊಡಿಸುವ
ಜವಾಬ್ದಾರಿ ಹೊತ್ತ ಏಜೆಂಟ್
ತನ್ನ ಕಮಿಷನಿಗೆ ಚ್ಯುತಿ ಬಾರದಂತೆ
ಹಗ್ಗದ ಸರ್ಕಸ್ ಮಾಡುತ್ತಾ ಆಗಾಗ
ಇಕ್ಕಡೆಗೂ ಹಲ್ಲು ಗಿಂಜುತ್ತಾನೆ.
‘ಇಷ್ಟಕ್ಕೆ ಕೊಳ್ಳಬಂದದ್ದೇ ಹೆಚ್ಚೆ’೦ದು ಇವನೆಂದರೆ
‘ಈ ರೇಟಿಗೆ ಕೇಳಿ ಬಂದವರೆಷ್ಟು ಗೊತ್ತಾ?’
ಎಂದು ಮಾರುವಾತ ಮಾತುಗುಡುತ್ತಾನೆ.
ಮಾರ ಹೊರಟವನನ್ನು ಪಕ್ಕಕ್ಕೆ ಕರೆದೊಮ್ಮೆ ಏಜೆಂಟ
ಜಗಿದದ್ದನ್ನೇ ಜಗಿದಾಗ, ಕೊಳ್ಳಹೊರಟವ
‘ಇದು ಆಗುಹೋಗುವ ಬಾಬತ್ತಲ್ಲ’ ಎಂದು
ನಿಂತಲ್ಲೇ ಗಿರಕಿ ಹೊಡೆಯುತ್ತಾನೆ.
ವರುಣಾಸ್ತ್ರ ಸಿಕ್ಕಿತೆಂಬ ಹೆಮ್ಮೆಯಿಂದ ಏಜೆಂಟ
ಇಬ್ಬರ ನಡುವೆ ಜಗ್ಗಿ ಮುನ್ನುಗ್ಗಿದರೆ ಇವರು
ಆಗ್ನೇಯಾಸ್ತ್ರದಿಂದವನ ಮಾನ ಕಳೆಯುತ್ತಾರೆ.
ಛಲಬಿಡದ ಅವನೆಂಥ ಚಾಲೂವೆಂದರೆ ಏಜೆಂಟ,
ಇಬ್ಬರ ಮುಖವನ್ನೂ ಬರಬರ ಓದತೊಡಗುತ್ತಾನೆ.
ಹೋಗಿ ಬಂದು ಹೋಗಿ ಬಂದು ಏಜೆಂಟ
ಒಂದು ಮುಖದಲ್ಲಿ ಮಾರುವ ಲಕ್ಷಣವನ್ನೂ
ಇನ್ನೊಂದರಲ್ಲಿ ಕೊಳ್ಳುವ ರೇಖೆಯನ್ನೂ
ಖಚಿತಪಡಿಸಬೇಕಿದ್ದರೆ,
ಅದಾಗಲೇ ದೂರದ ಸಮುದ್ರದಲ್ಲಿ
ಬೆವತ ಸಂಜೆಯ ಸೂರ್ಯ
ಉಗುರುಬೆಚ್ಚ ನೀರಿನಲ್ಲಿ
ಸ್ನಾನಕ್ಕಿಳಿಯುತ್ತಾನೆ.