”ಥೋಂ ಥೋಂ ದಿನ್ನಾಗಿಡತಕ; ತದ್ದಿನಕ ದಿಕುತಕ
ಥೋಂ ಥೋಂ ದಿನ್ನಾಗಿಡತಕ, ತದ್ದಿನಕ ದಿಕುತಕ”
ತಾಳಕ್ಕೆ ಸರಿಯಾಗಿ ವಿವಿಧ ಬಗೆಯ ಹಾವ-ಭಾವಗಳೊಂದಿಗೆ ರಂಗಸ್ಥಳದ ಉದ್ದಗಲಕ್ಕೂ ಲಯಬದ್ಧವಾಗಿ ಜತಿ-ಗತಿಗಳೊಂದಿಗೆ ಸುಧನ್ವನ ಗಂಭೀರವನ್ನು ಸಭಿಕರ ಮುಂದೆ ತೆರೆದಿಡುತ್ತಲೇ ಇದ್ದೆ.
ಒಂದೇ ಒಂದು ಕ್ಷಣ! ನನ್ನ ಸುತ್ತಲಿನ ಟ್ಯೂಬ್‌ಲೈಟ್‌ಗಳು ನನ್ನ ಸುತ್ತಾ ತರೆಗೆಲೆಯಂತೆ ಸುತ್ತುತ್ತಿವೆ. ಭಾಗವರತರ ಹಾಡು ಕಿವಿಗೆ ಬಿಟ್ಟು ಬಿಟ್ಟು ಕೇಳುತ್ತಿದೆ. ಚಂಡೆಯ ಹೊಡೆತ ಎದೆಯನ್ನು ಕುಟ್ಟುತ್ತಿದೆ. ಮೈಯಿಂದ ಝರ್‍ರೆಂದು ನೀರಿಳಿದು ರಂಗಸ್ಥಳವನ್ನು ತೋಯಿಸುತ್ತಿದೆ. ಇನ್ನು ನಿಲ್ಲಲಾರೆ ಎಂಬಂತಾಗಿ ಎದೆ ಹಿಡಿದು ಧೊಪ್ಪೆಂದು ರಂಗಸ್ಥಳದಲ್ಲಿಯೇ ಬಿದ್ದೆ. ಎಲ್ಲೋ ದೂರದಲ್ಲಿ ಯಾರ್‍ಯಾರೋ ಕೂಗುತ್ತಿದ್ದರು… ‘ಅಯ್ಯೋಯ್ಯೋ… ಅಯ್ಯೋಯ್ಯೋ… ಚಂದೂ ಶೆಟ್ರು ಬಿದ್ರಲ್ಲಪ್ಪಾ…. ಯಾರಾದರೂ ಡಾಕ್ಟರ್ ಇದ್ರೆ ಬನ್ನಿಯಪ್ಪಾ…’ ಯಾರೋ ಬಂದರು.. ”ಜಾಗಬಿಡಿ… ಗಾಳಿ ಆಡೂಕೆ ಜಾಗ ಬಿಡಿ…” ಎಂದವರೆ ನನ್ನನ್ನು ಆಂಗಾತ ಮಲಗಿಸಿ ಎದೆಗೆ ಮುಷ್ಠಿಮಾಡಿ ಹತ್ತಾರು ಬಾರಿ ಗುದ್ದಿದರು. ಹಿಡಿದಿದ್ದ ಉಸಿರು ಸ್ವಲ್ಪ ಹಗುರವಾದಂತಾಯ್ತು.
ಇನ್ಯಾರೋ, ”ಒಂಚೂರು ಕೈ ಕೊಡಿನಿ…. ಇವ್ರಿಗೆ ಹಾರ್ಟ್ ಅಟ್ಯಾಕ್ ಆದಂತಿತ್. ಮಣಿಪಾಲ್ ಆಸ್ಪತ್ರ್‌ಗ್ ತಕಂಡ್ ಹ್ವಾಪಾ…”, ಮತ್ಯಾರೋ, ”ಹ್ವಾಯ್… ಇಲ್ಲಿ ಇಲ್ಲಿ… ಈ ಕಾರಂಗೆ ಹಾಕಿ…” ಎನ್ನುತಿದ್ದದ್ದು ನನಗೆ ಸ್ವಲ್ಪ ಸ್ವಲ್ಪ ಅರಿವಾಗುತ್ತಿತ್ತು. ಗಡಿಬಿಡಿಯಿಂದ ನನ್ನನ್ನು ಆಸ್ಪತ್ರೆಗೆ ತುರ್ತುಚಿಕಿತ್ಸೆಗೆ ಕೊಂಡೊಯ್ಯುತ್ತಿದ್ದಾರೆ. ಕಣ್ಣು ಮಂಪರಾಗುತ್ತಿದ್ದಂತೆ ನನ್ನ ಮನಸ್ಸು ನನ್ನನ್ನು ಬಾಲ್ಯಕ್ಕೆ ಕೊಂಡೊಯ್ದಿತು.
——————————————-
”ಚಂದೂ…. ಚಂದೂ” ಜಿಂಕೆಯಂತೆ ಓಡುತ್ತಾ ಬಂದ ಸುಶೀಲಳನ್ನ ತಡೆದು, ”ಎಂತಾ ಮರಾತೆ… ನಾಯಿ ಬೆರ್‍ಸ್‌ಕಂಡ್ ಬಂದ್‌ಹಾಂಗೆ ಓಡ್ತಾ ಬಂದ್ಯಲ್ಲ ಎಂತಾಯ್ತೇ?” ಎಂದೆ.
”ಚಂದೂ ನಿಂಗೊತ್ತ? ದೇವಸ್ಥಾನದ ಬಯಲಂಗೆ ಬಯಲಾಟ ಇತ್ತಂಬ್ರು… ನಂಗ್ ಕಾಣ್ಕಂತ ತುಂಬಾ ಆಸಿ ಆತಿತ್, ಹ್ವಾಪುವನಾ?” ಎಂದಳು.
”ಹ್ವಾಪ… ಅದ್ಕೆಂತಾ?” ಎಂದೆ ನಾನು.
ಹೋಗುವ ಅಂದದ್ದೇ ತಡ ಸುಶೀಲಳ ಕಣ್ಣಲ್ಲಿ ಮಿಂಚಿನ ಬೆಳಕು ಕಾಣಿಸಿತು. ನಾನು ಸುಶೀಲ ಇಂತಹ ಹಲವಾರು ಯಕ್ಷಗಾನ, ಬಯಲಾಟ ಎಲ್ಲಾ ಒಟ್ಟಿಗೆ ಕುಳಿತು ನೋಡುತ್ತಿದ್ದೆವು. ಯಕ್ಷಗಾನದ ಪಾತ್ರದೊಂದಿಗೆ ತಾನೊಂದು ಪಾತ್ರವಾಗಿ ಬದಲಾಗುತ್ತಿದ್ದಳು ಸುಶೀಲ. ಬಟ್ಟಲು ಕಣ್ಣುಗಳನ್ನು ಅರಳಿಸಿ ಅವಳು ನೋಡುತ್ತಿದ್ದ ಭಂಗಿ ನನ್ನನ್ನು ಯಕ್ಷಗಾನ ರಂಗದತ್ತ ಒಲವು ಬೆಳೆಸುವಂತಾಯ್ತು. ರಕ್ಕಸ ವೇಷ ಬಂದರೆ ನನ್ನ ಬದಿಗೆ ಒತ್ತಿ ಕೂರುತ್ತಿದ್ದಳು. ನಾನೂ ಸುಶೀಲ ಬಾಲ್ಯದಲ್ಲಿ ಆಡದ ಆಟವಿಲ್ಲ. ಊರ ಪಕ್ಕದಲ್ಲಿ ಹರಿಯುತ್ತಿದ್ದ ಸೀತಾನದಿಯಲ್ಲಿ ಈಜೋದು… ಮೀನು ಹಿಡಿಯೋದು…. ಮರಕೋತಿಯಾಡೋದು… ಯಕ್ಷಗಾನ, ಬಯಲಾಟ ಮುಗಿದ ಮಾರನೇ ದಿನ ನಾವೂ ಪಾತ್ರಗಳಾಗೋದು… ತೆಂಗಿನಗರಿಗಳನ್ನೇ ಉಡಿಗೆ ತೊಡಿಗೆ ಮಾಡಿಕೊಳ್ಳುತ್ತಿದ್ದೆವು. ಭಾಗವತಿಕೆ – ಚಂಡೆ – ಮದ್ದಳೆ ಎಲ್ಲವೂ ನಾವೇ ಆಗಿರುತ್ತಿದ್ದೆವು. ”ರಂಬಾಟ, ರಂಬಾಟ, ರಂಬಾಟ” ಎಂದು ದಿಗ್ಗಣ ಕುಣಿಯುತ್ತಿದ್ದೆವು. ಆಗೆಲ್ಲಾ ಸುಶೀಲಳ ಕಣ್ಣಲ್ಲಿ ನನ್ನ ಬಗೆ ಮೂಡುವ ಅಭಿಮಾನ ನನ್ನ ಹೃದಯದ ಮೂಲೆಯಲ್ಲಿ ಹೇಳಲಾರದ ಸಾರ್ಥಕಭಾವ ಹೊಸರಾಗದ ಅಲೆಯನ್ನು ಎಬ್ಬಿಸಿತ್ತೇನೊ. ದಿನಕಳೆದಂತೆ ಬಾಲ್ಯದಿಂದ ಪ್ರೌಢಾವಸ್ಥೆಗೆ ಬಂದಾಗಲೂ ಸಮ ಅಭಿರುಚಿಯ ನಮ್ಮನ್ನು ಯಕ್ಷಗಾನ ಹತ್ತಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ನಾವಿಬ್ಬರು ಮಾತಿಗೆ ಕುಳಿತೆವೆಂದರೆ, ಯಕ್ಷಗಾನದ ಪಾತ್ರಗಳಾದ ಭೀಮ, ಅರ್ಜುನ, ಕೃಷ್ಣ–ರುಕ್ಮಿಣಿ, ದೇವಿ ಮಹಾತ್ಮೆಯ ಚಂಡ–ಮುಂಡರು, ಅಭಿಮನ್ಯು, ಏಕಲವ್ಯ, ಅಂಬೆ… ಎಲ್ಲವೂ ನಮ್ಮ ಮಾತಿನಲ್ಲಿ ಜೀವಂತ ಪಾತ್ರಗಳಾಗಿ ನರ್ತಿಸುತ್ತಿದ್ದವು. ಅದರಲ್ಲಿ ಸುಧನ್ವನ ಪಾತ್ರ ಮಾತ್ರ ಸುಶೀಲಳ ಹೃದಯಕ್ಕೆ ತುಂಬಾ ಹತ್ತಿರವಾಗಿತ್ತು.
ಹತ್ತನೇ ತರಗತಿ ಮುಗಿಯುತ್ತಿದ್ದಂತೆ ಅಪ್ಪಯ್ಯ, ”ಸಾಕು ಮಗ, ಇನ್ನೆಂತ ಓದು-ಬರ…? ಇರೋ ಎಯ್ದ್ ಎಕ್ರಿ ಸಾಗೋಳಿ ಮಾಡ್ಕಂಡ್ ಮನ್ಯಂಗೆ ಇಪ್ಪುದು ಒಳ್ಳೆದು… ಕಾಲೇಜಿಗೆಲ್ಲಾ ನಂಗೆ ಹಣ ಹೊಂದ್ಸುಕಾತಿಲ್ಲೆ…” ಎಂದರು. ಅದೇ ಸಮಯದಲ್ಲಿ ಧರ್ಮಸ್ಥಳ ಮೇಳದ ಯಕ್ಷಗಾನ ನಮ್ಮೂರಲ್ಲಿ ನಡೆಯಿತು. ನಾನು ಸೀದಾ ಪಾತ್ರಧಾರಿಗಳು ಬಣ್ಣಹಚ್ಚುವ ಸ್ಥಳಕ್ಕೆ ಹೋಗಿ, ಏನು ಎಂತ ಎಂದು ವಿಚಾರಿಸಿದೆ. ”ಎಂತ ಇಲ್ಲ ಮಾರಾಯ… ಧರ್ಮಸ್ಥಳ ಮ್ಯಾಳದಂಗೆ ಎಲ್ಲಾ ಫ್ರೀ… ಒಳ್ಳೆ ಕಲಿಲಿಕ್ಕು ಸಿಗತ್ತ್, ಕಲೆಯೂ ಮುಂದುವರಿತ್ತ್…” ಎಂದರು. ನನ್ನ ಮನಸ್ಸಿನಲ್ಲಿ ಕಟ್ಟಿದ್ದ ಕನಸಿಗೆ ಗರಿ ಮೂಡಿದಂತಾಯ್ತು. ಸುಶೀಲಳ ಕಣ್ಣಲ್ಲಿ ರಂಗೇರಿಸುವ ಕಲೆಯ ಬೆನ್ನು ಹತ್ತಿ ರಾತ್ರೋರಾತ್ರಿ ಧರ್ಮಸ್ಥಳ ಮೇಳ ಸೇರಲು ಹೋದೆ. ಹೋದವನು ಮತ್ತೆ ಐದಾರು ವರುಷ ಊರಿಗೇ ಬರಲಿಲ್ಲ. ಮಧ್ಯದಲ್ಲಿ ಎಲ್ಲಾದರೂ ಬಂದರೆ ಅಪ್ಪಯ್ಯ ನನ್ನನ್ನು ಮರಳಿ ಮೇಳಕ್ಕೆ ಹೋಗಲು ಬಿಡುವುದಿಲ್ಲ ಎಂದು ಗಟ್ಟಿ ಮನಸು ಮಾಡಿ ಕುಳಿತೆ. ಮೂರು ನಾಲ್ಕು ಬಾರಿ ಅಪ್ಪಯ್ಯ ಬಂದು ಏನೇನೋ ಸಬೂಬು ಹೇಳಿ ವಾಪಾಸಾಗಲು ಹೇಳಿದರು. ಆದರೆ ನಾನು ಮನಸು ಬದಲಾಯಿಸಲೇ ಇಲ್ಲ.
ಅಪ್ಪಯ್ಯ ಹೀಗೊಮ್ಮೆ ಬಂದಾಗ ಸುಶೀಲಳ ಬಗ್ಗೆ ವಿಚಾರಿಸಿದೆ. ”ಮಗ, ಆ ಹೆಣ್ಣ್ ಎಂತಾ ಚಂದ ಆಯ್ತಂದ್ರೆ ಒಳ್ಳೆ ಗೊಂಬಿ ಕಣಂಗ್ ಆಯಿತ್…. ಕಾಂಬುಕೆ ಎಯ್ಡ್ ಕಣ್ಣ್ ಸಾಕಾತಿಲ್ಲೆ… ಈಗ ಅವ್ಳು ಉಡುಪಿಯಂಗೆ ಬಿ.ಎಸ್ಸಿ. ಓದ್ತಾ ಇದ್ದಾಳ್.. ಈ ಸಾರಿ ಮದಿ ಮಾಡೋ ಹಾಂಗಿತ್…” ಎಂದರು. ನಾ ಕಟ್ಟುತ್ತಿದ್ದ ಕನಸಿನ ಸೌಧಕ್ಕೆ ಯಾರೋ ಕಲ್ಲು ಹೊಡೆದಂತಾಯ್ತು. ‘ಅರೇ, ನಾ ಬರೋವಾಗ ಅವಳಿಗೂ ಹೇಳಿರಲಿಲ್ಲ. ನನ್ನ ಮನಸ್ಸಲ್ಲಿ ಮಾತ್ರ ನಾ ನಿರ್ಧಾರ ಮಾಡಿದ್ದೆ. ನಾನು ಯಕ್ಷಗಾನದಲ್ಲಿ ದೊಡ್ಡ ಹೆಸರು ಮಾಡಬೇಕು. ಅವಳ ಮುಂದೆ ಅಭಿನಯಿಸಿ ಆಕೆಯ ಬಟ್ಟಲ್ಲುಗಣ್ಣುಗಳಲ್ಲಿ ಮೂಡುವ ಆನಂದವನ್ನು ಅನುಭವಿಸಬೇಕು. ಆಗ ಅವಳಲ್ಲಿ ತನ್ನ ಪ್ರೇಮಭಿಕ್ಷೆ ಬೇಡಬೇಕು…’ ಎಂದುಕೊಂಡು ಬೆನ್ನು ಹಾಕಿ ಬಂದಿದ್ದೆ. ಆದರೇ ನನ್ನ ಬೆನ್ನಿನ ಹಿಂದೆ ಇಷ್ಟೆಲ್ಲಾ ಬೆಳವಣಿಗೆ ನಡೆದಿದೆ ಎಂಬ ಪರಿಕಲ್ಪನೆಯೂ ನನ್ನಲ್ಲಿರಲಿಲ್ಲ. ಆದಷ್ಟು ಬೇಗ ಅವಳಲ್ಲಿಗೆ ಹೋಗಬೇಕು, ನನ್ನ ಮನದ ಮಾತುಗಳನ್ನು ಅವಳೊಂದಿಗಾಡಬೇಕು’ ಎಂಬಾಸೆಯಾದರೂ ಒಪ್ಪಿಕೊಂಡ ಏಳೆಂಟು ಆಟಗಳನ್ನು ಪೂರೈಸುವುದರೊಳಗೆ ಎರಡು ತಿಂಗಳ ಮೇಲಾಯ್ತು.
ಮೇಳದಿಂದ ರಜೆ ಪಡೆದು ಮನೆಗೆ ಮರಳಿದೆ. ಆಗ ತಾನೇ ಅಮ್ಮ ಮದುವೆ ಮನೆಯಿಂದ ಮರಳಿ ಬಂದು ಸೀರೆ ಬಿಚ್ಚಿ ತಂತಿಯ ಮೇಲೆ ಒಣಗಿಸುತ್ತಿದ್ದರು. ನನ್ನನ್ನು ನೋಡಿದವರೇ ಓಡಿಬಂದು ತಲೆಯಿಂದ ಕಾಲಿನವರೆಗೆ ಕೈಯಿಂದ ಸವರಿ ಮುಖವನ್ನು ಬೊಗಸೆಯಲ್ಲಿ ಹಿಡಿದು, ”ಅಯ್ಯಬ್ಬಾ ಮಗ… ಅಂತೂ ಮನಿಗ್ ಬಂದ್ಯಲ್ಲಾ… ನಿನ್ ಕಾಣ್ದೇ ನಾ ಸತ್‌ಗಿತ್ ಹ್ವಾತ್‌ನೇನೋ ಅಂದ್ಕಂಡಿದ್ದಿ… ಅಂತೂ ಬಂದ್ಯಲ್ಲಾ ಮಗ…” ಎಂದು ಒಂದೇ ಸಮನೆ ಗಳಗಳ ಅಳತೊಡಗಿದಳು. ಅಪ್ಪಯ್ಯ, ”ಎಂತಾ ಮರಾತೆ… ಮಗ ಬಂದ್ನಲ್ಲಾ… ಈಗೆಂತಾ ಬರೀ ಮರ್ಕ್‌ತಾ ಇರ್ತಿಯಾ ಇಲ್ಲಾ ಹೋಯಿ ಅವಂಗೆಂತಾರು ತಿಂಬುಕ್ ಮಾಡ್ತ್ಯ” ಎಂದರು. ಅಮ್ಮ ಗಡಿಬಿಡಿಯಿಂದ ”ಹ್ವಾಯ್ ಓಂಚೂರು ಬಸ್ಲಿ ಕುಯ್ಕಬನಿ… ಮನಿಯಾಗೆಂತದೂ ಇಲ್ಲ… ಒಣ್ಕಟಿ ಮೀನ್ ಹಾಕಿ ಬಸ್ಲಿ ಪಾರ್ಥ ಮಾಡ್ತೇ…. ಬೆಳಗ್ನಿಂದ ಸುಶೀಲನ್ ಮದಿ ಸಂಭ್ರಮದಾಗೆ ಎಂತಾದು ನೆನಪ್ ಎಲ್ಲೆ…” ಎಂದರು. ನನ್ನ ಕಿವಿಯನ್ನು ನಾನೇ ನಂಬಲಿಲ್ಲ. ಆಮ್ಮನ ಹಿಂದೆಯೇ ಹೋಗಿ, ”ಎಂತಾ ಹೇಳ್ದೆ ಅಮ್ಮಾ…? ಯಾರ್ ಮದಿ ಅಂದೆ?” ಎಂದು ಕೇಳಿದೆ. ”ಅದೇ ಮಾರಾಯಾ, ನಿನ್ ಬೆನ್ ಹಿಂದೆ ತಿರ್‌ಗ್ತಾ ಇದ್ದಿತಲ್ಲಾ ಆ ಬದಿ ಮನೆ ಹೆಣ್ ಸುಶೀಲ… ಅವ್ಳುದ್ ಮದಿ ಇಂದ್. ಅಮೇರಿಕಾದ್ ಹುಡ್ಗ ಅಂಬ್ರು. ಡಾಕ್ಟರ್ ಓದಿನಂಬ್ರು. ಬಾರೀ ಒಳ್ಳೆ ಸಂಬಂಧ ಮಾರಾಯ… ಮೊನ್ನೆ ಮೊನ್ನೆ ಹುಡ್ಗಿ ಕೇಣ್ಕಂಡ್ ಬಂದಿರ್ ಕಾಣ್… ಇಂದ್ ಮದಿ ಮಾರಾಯಾ…” ಅಮ್ಮನ ಮದುವೆಯ ವರ್ಣನೆ ಮುಂದುವರಿಯುತ್ತಲೇ ಇತ್ತು. ನಾನು ನಿಂತ ನೆಲ ಕುಸಿದಂತಾಯ್ತು. ಅಲ್ಲಿಯೇ ಕುಕ್ಕರಿಸಿದೆ. ಮನಸು ಸಮುದ್ರದಂತೆ ಬೊಬ್ಬಿಡಿದು ಭೋರ್ಗರೆಯುತ್ತಿತ್ತು. ಹೇಳಲಾರದ ಸಂಕಟ…. ಹೃದಯ ಬಾಯಿಗೆ ಬಂದಂತಾಯ್ತು… ಮುಂದೆ ನಡೆದದ್ದೆಲ್ಲಾ ಯಾಂತ್ರಿಕ…
ನನಗೆ ಮೇಳದಲ್ಲಿ ತುರ್ತು ಕೆಲಸವಿದೆಯೆಂದು ಹೇಳಿ ಬೆಳಗ್ಗಿನ ಬಸ್ಸಿಗೆ ಮೇಳಕ್ಕೆ ವಾಪಾಸಾದೆ. ಕನಸು ಮುರಿದಿತ್ತು. ಹೃದಯ ಸತ್ತಿತ್ತು… ಕಣ್ಣಲ್ಲಿ ಕಂಬನಿ ಬತ್ತಿತ್ತು. ಯಕ್ಷಗಾನದಲ್ಲಿ ಕನ್ನಡ ನಾಡಿನ ಮನೆ ಮಾತಾದೆ. ದುಬಾಯಿ, ಕುವೇಯ್ಟ್, ಅಮೇರಿಕಾ…. ಎಲ್ಲಾ ಕಡೆ ಹೆಸರು ಮಾಡಿ ಬಂದೆ. ಹೆಸರಾಯಿತೆ ಹೊರತು ಕಿಸೆಯಲ್ಲಿ ಕಾಸಾಗಲಿಲ್ಲ. ಅಪ್ಪಯ್ಯ ಅಮ್ಮನ ಒತ್ತಾಯಕ್ಕೆ ಮಣಿದು ಮದುವೆಯಾದೆ. ಎರಡು ಮಕ್ಕಳು ಆದವು. ಮಿತಭಾಷಿ ಲಲಿತ ಮನೆಯ ಮಹಾಲಕ್ಷ್ಮಿಯಾಗಿದ್ದಳು. ನನ್ನ ವರಮಾನ ಏನೂ ಹೆಚ್ಚಾಗಲಿಲ್ಲ. ಆರಕ್ಕೆ ಏರಲಿಲ್ಲ, ಮೂರಕ್ಕೆ ಇಳಿಯಲಿಲ್ಲ. ಮಳೆಗಾಲದಲ್ಲಿ ಮನೆಯೊಳಗೆ, ಉಳಿದಂತೆ ಮೇಳದೊಂದಿಗೆ. ಬೀಡಿ ಸೇದಾಟ ಶ್ವಾಸಕೋಶವನ್ನು ಜರ್ಜರಿತವನ್ನಾಗಿಸಿತ್ತು. ದಿನಕಳೆದಂತೆ ಬದುಕು ಸಾಕೆನ್ನಿಸ ತೊಡಗಿತ್ತು. ಮನೆಯ ಹತ್ತಿರವೆಂದು ಮಂದರ್ತಿ ಮೇಳದಲ್ಲಿ ಸೇರಿಕೊಂಡೆ. ಯಾರಾದರೂ ಹರಕೆಯಾಟ ಆಡಿಸಿದಾಗ ಹೋಗಿ ಪಾತ್ರ ಮಾಡಿ ಬರತೊಡಗಿದೆ. ನನ್ನ ಹೆಸರು ಚೆನ್ನಾಗಿದ್ದುದರಿಂದ, ‘ಚಂದೂ ಶೆಟ್ರು ರಂಗಸ್ಥಳಕ್ಕೆ ಬಂದ್ರು ಅಂದ್ರೆ ಆಟಕ್ಕೊಂದು ಕಳೆ ಕಟ್ಟುತ್ತೆ’ ಎನ್ನುತ್ತಿದ್ದರು ಜನ. ನಿಧಾನವಾಗಿ ಮುಪ್ಪು ಹತ್ತಿರ ಬಂದಂತೆನಿಸುತ್ತಿತ್ತು. ಹೆಚ್ಚಿನ ಪಾತ್ರಗಳನ್ನು ನಿರಾಕರಿಸುತ್ತಿದ್ದೆ. ಸುಶೀಲಾಳ ಮೆಚ್ಚಿನ ಸುಧನ್ವ ಪಾತ್ರ ಯಾರೇ ಕೇಳಿದರೂ ಹೋಗಿ ದಿಗ್ಗಣ ಹಾಕಿ ಬರುತ್ತಿದ್ದೆ.
ನಾಲ್ಕೈದು ವಾರದಿಂದ ಎಲ್ಲಿಯೂ ಒಪ್ಪಿಕೊಂಡಿರಲಿಲ್ಲ. ಮುಂಡು ಬೀಡಿ ಸೇದುತ್ತಾ ಕುಳಿತಿದ್ದೆ, ನಾಯಿ ಬೊಗಳಿತು. ”ಹಚ… ಹಚಾ… ಹ್ವಾಯ್ ಚಂದೂ ಶೆಟ್ರು ಇದ್ರ ಮನ್ಯಂಗೆ…” ಎನ್ನುತ್ತಾ ಗೇಟಿನಿಂದಾಚೆಗೆ ನಿಂತವರು ಕೇಳುತ್ತಿದ್ದರು. ನನ್ನ ಹೆಂಡತಿ ಲಲಿತಾ, ”ಮನ್ಯಂಗೆ ಇದ್ರು… ಬನಿ ಒಳ್ಗೆ… ನಾಯಿ ಎಂತಾ ಮಾಡೂದಿಲ್ಲ… ಹಚ ಹಚಾ…. ಆಚೆ ಹೋಗಾ ಹಚ ಹಚಾ… ” ಎನ್ನುತ್ತಾ ಬಂದವರನ್ನು ಒಳ ಕರೆದಳು. ಬಂದವರು ”ನಮಸ್ಕಾರ ಶೆಟ್ರೆ… ಎಂತ ಮಾರಾಯ್ರೇ… ನಿಮ್ಮುನ್ ಹುಡ್ಕುಕೇ ಕಷ್ಟ ಪಡುಕಾಯ್ತಲೇ… ಆಟ ಆಡೂದು ಬಿಟ್ಟಿರ್‍ಯಾ ಹ್ಯಾಂಗೆ?” ಎಂದರು. ನಾನು ಕೈಯಲ್ಲಿದ್ದ ಟವೆಲನ್ನು ಕುಡುಕಿ ಹೆಗಲ ಮೇಲೆ ಹಾಕಿ, ”ಬನಿ ಕೂಕಣಿ…. ಹಾಗೆಂತ ಇಲ್ಲಾ ಮಾರ್‍ರೇ… ಈಚಿಗ್ ಕೈಕಾಲ್ ನನ್ನ್ ಮಾತ್ ಕೇಂತಾ ಇಲ್ಲೆ… ಹಂಗಾಯಿ ಆಟಕ್ಕೆ ಒಪ್ಕಂಬುದು ಕಡ್ಮಿ ಮಾಡಿದಿ… ಹೌದಾ ಲಲ್ತ ಒಂಚೂರಿ ಬೆಲ್ಲ ನೀರು ತಂದ್ಕೊಡು ಇವ್ರಿಗೆಲ್ಲಾ…” ಎಂದೆ. ಬಂದವರು, ”ಅದಿರ್‍ಲಿ ಶೆಟ್ರೆ. ಇಲ್ಕಾಣಿ… ಆ ಶಂಬೂ ಶೆಟ್ರ ಮನೆಯಂಗೆ ಒಂದ್ ಹರ್‍ಕಿ ಆಟ ಇತ್ತ್… ಅವ್ರ ಮಗ್ಳು ಸುಶೀಲ ಅಮೇರಿಕ್ಕಿಂದ ಫೋನ್ ಮಾಡಿ ‘ಸುಧನ್ವ ಮೋಕ್ಷ’ವೇ ಬೇಕ್ ಅಂತ ಹೇಳಿರಂಬ್ರು… ಆ ಪಾತ್ರ ಸಲೀಸಾಯಿ ಮಾಡಿ ಅದ್ಕೊಂದು ಘನತೆ ತಂದ್ಕೊಡೊ ಪಾತ್ರಧಾರಿ ಅಂದ್ರೆ ನೀವ್ ಕಾಣಿ.ಅದ್ಕಾಯಿ ನಿಮ್ಮುನ್ ಹುಡ್ಕಂಡ್ ಬಂದ್ವಿ… ನೀವ್ ಮಾತ್ರ ಆತಿಲ್ಲೆ ಅಂತ ಹೇಳುಕಿಲ್ಲ…” ಎಂದವರೆ ನನ್ನೆರಡು ಕೈಗಳನ್ನು ಹಿಡಿದುಕೊಂಡರು. ಅವರು ಕೇಳಿಕೊಳ್ಳುವುದಕ್ಕಿಂತ ‘ಸುಶೀಲಾ’ ಎಂಬ ಪದವೇ ಕಿವಿಗಳಿಗೆ ಅಮೃತ ಸುರಿದಂತಾಯ್ತು. ನನಗರಿವಿಲ್ಲದೇ ತಲೆ ಆಡಿಸಿದೆ. ಬಂದವರು ಕೈತುಂಬಾ ಹಣವಿಟ್ಟು ಹೋದರು. ಹಣವನ್ನು ಲಲಿತಾಳ ಕೈಗಿಟ್ಟು ಮುಂದಿನ ಸುಧನ್ವ ಪಾತ್ರದ ಬಗ್ಗೆ ಯೋಚಿಸತೊಡಗಿದೆ. ಅದೂ ಕೂಡ ಸುಶೀಲಾಳ ಮುಂದೆ ನಿಲ್ಲುವ ಸುಧನ್ವ!
ಝಗಮಗಿಸುವ ರಂಗಸ್ಥಳದಲ್ಲಿ ಗಣಪತಿ ಪೂಜೆಯಾಗುತ್ತಿದ್ದಂತೆ ನನ್ನ ಕೈ-ಕಾಲುಗಳಲ್ಲಿ ಸಣ್ಣನೆ ನಡುಕ ಆರಂಭವಾಯಿತು. ನನ್ನ ಅಭಿನಯವನ್ನು ಸುಶೀಲಾ ಎಂದೂ ನೋಡಿಲ್ಲ… ಅವಳನ್ನು ಮೆಚ್ಚಿಸುವಂತೆ ಕುಣಿಯಬೇಕು. ಅವಳ ಕಂಗಳಲ್ಲಿ ಬಾಲ್ಯದ ಬೆಳದಿಂಗಳನ್ನು ಕಾಣಬೇಕು ಎಂಬುದು ತಲೆಯಲ್ಲಿ ಓಡುತ್ತಿದ್ದಂತೆ ಮೈ ರೋಮಾಂಚನವಾಯಿತು. ಹೇಳಲಾಗದ ಉದ್ವೇಗ ಮನಸ್ಸನ್ನಾವರಿಸಿತು. ನನ್ನ ರಂಗ ಪ್ರವೇಶದ ‘ಥೈ ಥೈ ಥೈ ಥೈ ಥೈ’ ತಾಳ ನನಗೆ ಕೇಳುತ್ತಿಲ್ಲ. ಅರ್ಜುನನ ಪಾತ್ರಧಾರಿ ”ಚಂದೂ ಯಾವ್ ಲೋಕ್‌ದಾಂಗಿದ್ದೆ… ರಂಗಕ್ ಹ್ವಾತಿಲ್ಯಾ?” ಎಂದೊಡನೆ ವಾಸ್ತವಕ್ಕೆ ಬಂದು ಎಂದೂ ಇಲ್ಲದ ಲವಲವಿಕೆಯಿಂದ ರಂಗಪ್ರವೇಶ ಮಾಡಿದೆ.
ನನ್ನ ಪ್ರವೇಶವಾದೊಡನೆ ಪ್ರೇಕ್ಷಕರ ಸಿಳ್ಳೆ-ಚಪ್ಪಾಳೆ ಮುಗಿಲುಮುಟ್ಟಿತು. ಕಣ್ಣು ಪ್ರೇಕ್ಷಕರ ನಡುವೆ ಕುಳಿತ ಸುಶೀಲಳನ್ನು ಹುಡುಕುತ್ತಿತ್ತು. ಮನಸ್ಸು ‘ಎಲ್ಲಿ ಎಲ್ಲಿ ಸುಶೀಲಾ? ಕಂಡು ಎಷ್ಟು ವರ್ಷವಾಯ್ತು… ಈಗ ಗುರುತು ಸಿಗುತ್ತೋ ಇಲ್ಲವೋ? ಅವಳಿಗೆ ನನ್ನ ಗುರುತು ಸಿಗುತ್ತಾ…’ ಹೀಗೆ ಯೋಚಿಸುತ್ತಾ ಯಾವಾಗಲೂ ಐದು ನಿಮಿಷ ಕುಣಿಯುತ್ತಿದ್ದ ಪ್ರವೇಶ ಕುಣಿಕೆ ಇಂದು ಹತ್ತು ನಿಮಿಷವಾದರೂ ನಿಲ್ಲಲಿಲ್ಲ. ನನ್ನ ಹುರುಪನ್ನು ಕಂಡು ಭಾಗವತರೂ ನಿಲ್ಲಿಸಲಿಲ್ಲ. ತರಹೆವಾರಿ ಅಂಗವಿನ್ಯಾಸವನ್ನು ತೋರುತ್ತಾ ”ಥೋಂ ಥೈಯತ್ತಾ ದಿನ ಥೈ… ಥೈಯತ್ತ ದಿನ ಥೈ” ಅರ್ಧಮಂಡಿಯಲ್ಲಿ ಕುಣಿಯುತ್ತಾ ಮುಂದಿನ ಸಾಲನ್ನೇ ದಿಟ್ಟಿಸುತ್ತಾ ಕುಣಿಯುತ್ತಿದ್ದಂತೆಯೇ ನನ್ನ ದೃಷ್ಠಿಗೆ ಸುಶೀಲಾಳ ಮುದ್ದುಮುಖ ಬಿದ್ದೇ ಬಿಟ್ಟಿತು. ಅದೇ ಬಟ್ಟಲು ಕಂಗಳನ್ನು ಬಿಟ್ಟು ತದೇಕದೃಷ್ಠಿಯಿಂದ ನೋಡುತ್ತಿದ್ದಾಳೆ! ಆ ನೋಟದಲ್ಲಿ ನನ್ನ ಬಗೆಗಿನ ಅಭಿಮಾನ ತುಂಬಿ ತುಳುಕುತ್ತಿತ್ತು. ‘ಆಯ್ತು ನಾ ಕಂಡ ಕನಸು ಇಂದು ನನಸಾಯ್ತು. ಸುಧನ್ವನಿಗೆ ಮೋಕ್ಷ ಅಂದು ಸಿಕ್ಕಿತೋ ಬಿಟ್ಟಿತೋ? ನನಗಂತೂ ಇಂದು ಮೋಕ್ಷ ಪ್ರಾಪ್ತಿಯಾಯ್ತು’ ಎಂದುಕೊಳ್ಳುತ್ತಲೇ ನನ್ನ ಉದ್ವೇಗ ನೂರ್ಮಡಿಯಾಯ್ತು… ಸಾವಿರವಾಯ್ತು… ಕುಣಿತಕ್ಕೆ ಮತ್ತಷ್ಟು ಶಕ್ತಿ ಬಂದಂತೆ, ‘ಥೋಂ ಥೋಂ ದಿನ್ನಗಿಡತಕ; ತದ್ದಿನಕ ದಿಕುತಕ. ಥೋಂ ಥೋಂ ದಿನ್ನಗಿಡತಕ; ತದ್ದಿನಕ ದಿಕುತಕ’ ಎಂದು ಭರಾಟೆಯಿಂದ ಕುಣಿದೆ… ಕುಣಿಯುತ್ತಲೇ ಇದ್ದೆ. ನನ್ನ ವಿಚಾರಲಹರಿ ಮುಂದುವರಿಯುತ್ತಲೇ ಇತ್ತು. ಪಕ್ಕದಲ್ಲಿ ನಿಂತವರು ನನ್ನ ಕೈ ಹಿಡಿದು, ”ಚಂದೂ ಚಂದೂ… ಒಂದು ಸಾರಿ ಕಣ್ ಬಿಟ್ ಕಾಣ್ ಮಾರಾಯಾ… ನಾ ನಿನ್ ಸುಶೀಲಾ ಬಂದಿದಿ… ಎಷ್ಟ್ ವರ್ಷ ಆಯ್ತ್ ನಿನ್ ಕಂಡ್ ಮಾತಾಡ್ಸಿ.. ನೀ ಹೀಂಗ್ ಮನ್ಕಂಬುದು ಸರಿಯಾ…? ನಿನ್ನ್ ಕುಣ್ಕೆ ಕಾಂಬುಕಂತಲೆ ‘ಸುಧನ್ವ ಮೋಕ್ಷ’ ಬೇಕ್ ಅಂತ ಅಪ್ಪಯ್ಯಂಗೆ ಒತ್ತಾಯ ಮಾಡ್ಡಿ… ಒಂದು ಸಾರಿ ಮಾತಾಡ್ ಮಾರಾಯಾ…”. ವಾಸ್ತವಕ್ಕೆ ಕರೆತಂದ ನನ್ನ ಸುಶೀಲಾ, ನನ್ನ ಬಳಿ ನಿಂತು ಮಾತಾಡುತ್ತಿದ್ದಾಳೆ. ಅವಳ ಕಣ್ಣಿಂದ ಜಾರಿದ ಹನಿ ನನ್ನ ಕೆನ್ನೆಗೆ ಮುತ್ತಿಡುತ್ತಿವೆ. ಕಣ್ಣು ತೆರೆಯದಾದೆ… ದೇಹ ಹಗುರಾಯ್ತು… ಒಮ್ಮೆ ನಿರಾಳವಾಗಿ ಉಸಿರಾಡಿದೆ…. ಮತ್ತೆ ಅನಂತದಲ್ಲಿ ಲೀನವಾದೆ…. ದೂರದಿಂದ ಕೇಳುತ್ತಿತ್ತು, ‘ಚಂದೂ ಶೆಟ್ರು ನಮ್ಮನ್ನೆಲ್ಲಾ ಬಿಟ್ಟು ಹ್ವಾದ್ರಿಯಾ…? ಯಕ್ಷಗಾನದ ರಂಗನ ಬರಡು ಮಾಡಿ ಹ್ವಾದ್ರಿಯಾ..???!!!’