ವಾರಸುದಾರ

ವನ ಹೆಸರು ದಯಾನಂದ. ಅವನ ಗುರು ಟೈಲರ್ ಸೋಮನಾಥನನ್ನು ಬಿಟ್ಟು ಬೇರೆ ಯಾರೂ ಹಾಗೆ ಇಡೀ ಹೆಸರು ಹಿಡಿದು ಕರೆಯುತ್ತಿರಲಿಲ್ಲ. ಟೈಲರ್ ಸೋಮನಾಥ ಮಾತ್ರ ಎದುರು ನಿಲ್ಲಿಸಿ ಬಯ್ಯುವುದಕ್ಕೇ ಕರೆಯುವುದಾದರೂ ಲಕ್ಷಣವಾಗಿ ದಯಾನಂದ ಎಂದೇ ಕರೆಯುತ್ತಿದ್ದ. ಉಳಿದಂತೆ ಅಂಗಡಿಗೆ ಬರುವ ಗಿರಾಕಿಗಳೂ ಊರವರೂ ಆತನನ್ನು ದಯಾ ಅಂತಲೇ ಕರೆಯುವುದು. ಅಪ್ಪ ಅಮ್ಮ ಚಿಕ್ಕಂದಿನಲ್ಲಿ ಆನಂದ ಅಂತ ಕರೆಯುತ್ತಿದ್ದದ್ದು ಈಗ ಬರೇ ನೆನಪು ಮಾತ್ರ. ಅವರೊಂದಿಗೆ ಆನಂದವೂ ಹೊರಟುಹೋಗಿತ್ತು. ಅವರು ಜೀವಂತ ಇರುತ್ತಿದ್ದರೆ ಈ ಸೋಮನಾಥನಲ್ಲಿ ಟೈಲರಿಂಗ್ ಕಲಿಯಲು ಬರುವ ಪ್ರಶ್ನೆಯೆಲ್ಲಿ ಏಳುತ್ತಿತ್ತು?! ನಿರಂತರ ಹದಿನೈದು ವರ್ಷ ಆತನ ಜೀತದ ದಯೆಯ ಅಗತ್ಯವೆಲ್ಲಿ ಬರುತ್ತಿತ್ತು? 

ಅಪ್ಪ ಮತ್ತು ಅಮ್ಮ ಇಬ್ಬರೂ ವಿಚಿತ್ರ ಕಾಯಿಲೆ ಬಂದು ಎರಡೇ ದಿನಗಳ ಅಂತರದಲ್ಲಿ ಸತ್ತು ಹೋದಾಗ ಅನಾಥನಾದ ದಯಾನಂದನನ್ನು ಪಕ್ಕದ ಮನೆಯ ಬೇಬಿಯಕ್ಕ ಟೈಲರ್ ಸೋಮನಾಥನ ಬಳಿ ಕರೆದು ತಂದಿದ್ದಳು. “ಇವನಿಗೆ ಊಟಕ್ಕೆ ಕಾಸು ಕೊಟ್ಟು ಹೊಲಿಗೆ ವೃತ್ತಿ ಕಲಿಸಿ ಪುಣ್ಯಕಟ್ಟಿಕೊಳ್ಳು” ಎಂದು ಹೇಳಿ ಆತನ ಉತ್ತರಕ್ಕೂ ಕಾಯದೆ ಹೊರಟು ಹೋಗಿದ್ದಳು. ಉಪೇಕ್ಷೆ ಮಾಡಲಾಗದ ಬೇಬಿಯಕ್ಕನ ಮಾತೋ, ಬಡ ಹುಡುಗನಿಗೆ ಆಸರೆಯಾದ ದೊಡ್ಡಸ್ತಿಕೆಯೋ, ಜುಜುಬಿ ಸಂಬಳಕ್ಕೆ ಸಹಾಯಕನೊಬ್ಬ ಸಿಕ್ಕಿದ್ದಕ್ಕೆ ಹರ್ಷವೋ ಅಥವಾ ಬೇಬಿಯಕ್ಕನ ಜೊತೆಗಿದ್ದ ಹುಡುಗಿ ಕಮಲಳ ಮೈಮಾಟವೋ.. ಒಟ್ಟಾರೆ “ಆಯಿತು ನೀನು ಹೇಳಿದಮೇಲೆ ಮುಗಿಯಿತು” ಎಂದು ಹೇಳಿ, ಮಾರ್ಮಿಕವಾಗಿ ನಕ್ಕು ತನ್ನ ಅಂಗಡಿಯ ಮೂಲೆಯಲ್ಲಿ ದಯಾನಂದನನ್ನು ಕುಳ್ಳಿರಿಸಿ, ಕೈಗೆ ಸೂಜಿನೂಲು ಕೊಟ್ಟಿದ್ದ. 

ಮೊದಲು ಸೂಜಿಗೆ ದಾರ ಪೋಣಿಸಿ ತೋರಿಸಿದ ಸೋಮನಾಥ. ದಯಾನಂದನೂ ಹಾಗೆಯೇ ಪೋಣಿಸಿ ಆತನ ಕೈಗೆ ಕೊಟ್ಟಕೂಡಲೇ ಅದನ್ನು ಎಳೆದು ತೆಗೆದು ಪುನಃ “ಇನ್ನೊಮ್ಮೆ” ಅನ್ನುತ್ತ ದಾರ ಪೋಣಿಸಲು ಹೇಳಿ, ಮತ್ತೂ ಎರಡು ಬಾರಿ ಅದರ ಪುನರಾವರ್ತನೆ ಮಾಡಿ ದಯಾನಂದನ ಕಣ್ಣಿನ ಪರೀಕ್ಷೆ ಮಾಡಿದ್ದ. ಕತ್ತರಿ, ಟೇಪು ಮತ್ತು ನೂಲಿನ ಡಬ್ಬಿಗಳನ್ನು ಮೆಶಿನಿನ ಮೇಲಿಟ್ಟು ನಮಸ್ಕರಿಸುವಂತೆ ಹೇಳಿದ್ದ. ಆಮೇಲೆ ತಾನೇ ದಯಾನಂದನನ್ನು ಎಳೆದು ತನ್ನ ಕಾಲಿಗೂ ಅಡ್ಡಬೀಳಿಸಿಕೊಂಡಿದ್ದ. ಕಣ್ಮುಚ್ಚಿ ಪ್ರಾರ್ಥನೆ ಮುಗಿಸಿ ಆಗಲೇ ಅಲ್ಲಿಯೇ ಕೂತು ಅಂಗಿ ಗುಂಡಿ ಹೊಲಿಯುವುದನ್ನು ಕಲಿಸಿದ್ದ. ಎಡಗೈ ಹೆಬ್ಬೆರಳು ಮತ್ತು ತೋರುಬೆರಳುಗಳಲ್ಲಿ ಬಟ್ಟೆಯ ಮೇಲೆ ಇಟ್ಟ ಅಂಗಿಗುಂಡಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಬಟ್ಟೆಯ ಅಡಿಯಿಂದ ಸೂಜಿಯನ್ನು ಬಟ್ಟೆ ಹಾಗೂ ಅಂಗಿಗುಂಡಿಯ ಮುಖಾಂತರ ತೂರಿಸಿ ಎಳೆಯುವುದು ಮೊದಲ ಹೆಜ್ಜೆ. ಎರಡು ತೂತಿನ ಅಂಗಿಗುಂಡಿಯಾದರೆ ಸೂಜಿಯನ್ನು ಅಂಗಿಗುಂಡಿಯ ಇನ್ನೊಂದು ತೂತಿನ ಹಾಗೂ ಬಟ್ಟೆಯ ಮುಖಾಂತರ ಬಟ್ಟೆಯ ಹಿಂಭಾಗಕ್ಕೆ ಹತ್ತಾರು ಬಾರಿ ಎಳೆದು ನೂಲನ್ನು ಗಂಟು ಹಾಕಿ ಹಲ್ಲಿನಲ್ಲಿ ಕಚ್ಚಿ ಕಡಿಯಬೇಕು. ನಾಲ್ಕು ತೂತಿನ ಅಂಗಿಗುಂಡಿಯಾದರೆ ಅಂಗಿಗುಂಡಿಯ ಮೇಲೆ ಎರಡು ಹೊಲಿಗೆ ಸಮಾನಾಂತರವಾಗಿ ಬೀಳುವಂತೆ ಎಚ್ಚರ ವಹಿಸಬೇಕು ಎಂದು ಹೇಳಿಕೊಟ್ಟ. ಮೊದಲ ಅರ್ಧಗಂಟೆಯಲ್ಲಿ ಕೈಯಲ್ಲಿ ಬಟ್ಟೆಯನ್ನೂ ಕೊಡದೆ ಕೇವಲ ಕಾಗದದ ಚೂರಿನ ಮೇಲೆ ಅಂಗಿಗುಂಡಿಯಿಟ್ಟು ಕೆಳಗಿಂದ ಸೂಜಿ ಚುಚ್ಚಲು ಹೇಳಿದ್ದ ಸೋಮನಾಥ. ಬೆರಳನ್ನು ಸ್ಪರ್ಶಿಸುತ್ತ, ಆದರೆ ಬೆರಳನ್ನು ಚುಚ್ಚದೇ ಅಂಗಿಗುಂಡಿ ಹೊಲಿಯುವುದನ್ನು ಮಹಾನ್ ವಿದ್ಯೆ ಎಂಬಂತೆ ಬಿಂಬಿಸಿದ್ದ. ಮರುದಿನ ಬೆಳಿಗ್ಗೆ ಹತ್ತು ಅಂಗಿ ತಂದು ಗುಡ್ಡೆ ಹಾಕಿ ಕೈಗೆ ನೂಲುಂಡೆ ಮತ್ತು ಅಂಗಿಗುಂಡಿಯ ಡಬ್ಬ ನೀಡಿದ್ದ. “ಮ್ಯಾಚಾಗುವ ಅದೇ ಬಣ್ಣದ ಬಟನ್ನು, ನೂಲು ಹಾಕು. ಬಿಗಿಯಾಗಿ ಎಳೆದು ಹಿಡಿದು ಹೊಲಿಯಬೇಕು. ಮುದುಕರ ಲಂಗೋಟಿಯಂತೆ ಲೂಸುಲೂಸಾಗಿ ಬಟನ್ ನೇತಾಡುವ ಹಾಗೆ ಹೊಲಿದರೆ ಪುನಃ ಬಿಡಿಸಿ ಹೊಲಿಯುವ ಎರಡೆರಡು ಕೆಲಸವಾಗುತ್ತದೆ. ಹಾಗೇನಾದ್ರೂ ಆದರೆ ನಿನ್ನ ಬೆನ್ನಿನ ಚರ್ಮ ಸೀಳಿ ಹಾಕುತ್ತೇನೆ. ನನಗೆ ಕೋಪ ಬರಿಸಬೇಡ, ಮನಸ್ಸಿಟ್ಟು ಕೆಲಸ ಮಾಡು” ಅಂತ ಶುಭಾರಂಭ ಮಾಡಿದ್ದ. 

*****

ಊರಲ್ಲಿ ಇದ್ದದ್ದು ಒಂದೇ ದೇವಾಲಯ. ಗ್ರಾಮ ದೇವರು ಸೋಮನಾಥ. ಹಾಗಾಗಿ ಊರಲ್ಲಿ ಡಜನ್ ಗಟ್ಟಲೆ ಜನರಿಗೆ “ಸೋಮನಾಥ” ಎಂಬ ಹೆಸರು. ಮಾತುಮಾತಿಗೆ ಯಾವ ಸೋಮನಾಥ ಎಂಬ ಪ್ರಶ್ನೆ ತೂರಿಬರುತ್ತಿತ್ತು. ಇದನ್ನು ತಪ್ಪಿಸಲು ಪ್ರತೀ ಸೋಮನಾಥನಿಗೂ ಊರಜನರು ಹೆಸರಿನೊಂದಿಗೆ ವಿಶೇಷಣ ಸೇರಿಸಿದ್ದರು. ಉದಾಹರಣೆಗೆ ಟೈಲರ್ ವೃತ್ತಿಯಲ್ಲಿದ್ದ ಸೋಮನಾಥನಿಗೆ “ಟೈಲರ್ ಸೋಮನಾಥ” ಅನ್ನುತ್ತಿದ್ದರು. ಹಾಗೆಯೇ ಸೋಮನಾಥ ಮಾಸ್ತರರು, ಸೋಮನಾಥ ಮೇಸ್ತ್ರಿ, ಬಿರಿಯಾಣಿ ಸೋಮನಾಥ, ಡ್ರೈವರ್ ಸೋಮನಾಥ – ಹೀಗೆ ವೃತ್ತಿಯ ಅಡ್ಡ ಹೆಸರು ಹೊತ್ತವರು ಹೆಚ್ಚು. ಸದಾ ಕುಡಿದು ರಸ್ತೆ ಅಳೆಯುತ್ತ ಹೋಗುತ್ತಿದ್ದ “ನೈಂಟಿ ಸೋಮನಾಥ” ಮತ್ತು ಬೆಲೆಬಾಳುವ ವಸ್ತುಗಳನ್ನು ಕಂಡರೆ ಬರೇ ಹವ್ಯಾಸಕ್ಕಾಗಿ ಕದಿಯುವ ಅಭ್ಯಾಸವಿದ್ದ “ಡೇಂಜರ್ ಸೋಮನಾಥ” ಇವೂ ವಿಶೇಷ ಉದಾಹರಣೆಗಳು. ಇವರೆಲ್ಲರ ನಡುವೆ ಯಾರಿಗೂ ಲೆಕ್ಕಕ್ಕಿಲ್ಲದ ಒಬ್ಬ ಸೋಮನಾಥ ಕೂಡ ಇದ್ದ, ಮೊದಲು ಆತ ಬೇಬಿಯಕ್ಕನ ಮಗ ಸೋಮನಾಥ. ಹೈವೇಯ ಬಳಿ ಆಮ್ಲೆಟ್ ಮಾಡಿ ಮಾರಿ ಜೀವಿಸುತ್ತಿದ್ದ ಬೇಬಿಯಕ್ಕನ ಒಬ್ಬನೇ ಮಗ ಈ ಸೋಮನಾಥ. ಸ್ವಲ್ಪ ಮಂದ ಬುದ್ಧಿ. ಬಡವರು ಬೇರ‍ೆ. ಮದುವೆಗೆ ಊರಲ್ಲಿ ಯಾರೂ ಹೆಣ್ಣು ಕೊಡಲಿಲ್ಲ. ಹಠ ಬಿಡದ ಬೇಬಿಯಕ್ಕ ಕಷ್ಟಪಟ್ಟು ಯಾವುದೋ ದೂರದ ಊರಿನಿಂದ ತಲಾಶಿ ಮಾಡಿ ತಂದ ಹೆಣ್ಣೇ ಈ ಕಮಲ. ಚುರುಕು ಪ್ರವೃತ್ತಿಯ ಕಮಲ ವ್ಯಾಪಾರ ಮತ್ತು ಮಗನನ್ನು ನಿಭಾಯಿಸಿಕೊಂಡು ಸಂಸಾರ ನಡೆಸುತ್ತಾಳೆ ಎಂಬ ವಿಶ್ವಾಸದೊಂದಿಗೆ ಕಣ್ಮುಚ್ಚಿದ್ದಳು ಬೇಬಿಯಕ್ಕ. ಬೇಬಿಯಕ್ಕ ಸತ್ತು ಅವಳ ಆಮ್ಲೆಟ್ ವ್ಯಾಪಾರ ಮಗ ಸೋಮನಾಥನಿಗೆ ಹಸ್ತಾಂತರವಾಗುತ್ತಲೇ ಆತನಿಗೆ ಸಹಕರಿಸುತ್ತಿದ್ದ ಕಮಲಳ ಮೇಲೆ ಇಡೀ ಊರಿನ ಗಮನ ಬಿದ್ದು ಎಲ್ಲರ ಬಾಯಲ್ಲೂ ಸೋಮನಾಥ “ಕಮಲಳ ಗಂಡ ಆಮ್ಲೆಟ್ ಸೋಮನಾಥ” ನಾಗಿ ಮಾರ್ಪಾಟುಗೊಂಡಿದ್ದ. ಕೆಲವರಂತೂ ಆಮ್ಲೆಟ್ ನುಂಗಿ ಬಾಯಲ್ಲಿ ನೀರೂರಿಸಿಕೊಂಡು “ನಮ್ಮ ಕಮಲಳ ಗಂಡ ಸೋಮನಾಥ” ಎಂದೇ ಹೇಳಲಾರಂಭಿಸಿದ್ದರು.

ಮೊದಲು ಆಮ್ಲೆಟ್ ವ್ಯಾಪಾರ ಚೆನ್ನಾಗಿತ್ತು. ಆಮೇಲೆ ಹತ್ತಿರದಲ್ಲಿ ಆಮ್ಲೆಟ್ಟಿನೊಂದಿಗೆ ಬಿಯರು ಮತ್ತು ವಿಸ್ಕಿ ಕೂಡ ಸಿಗುವ ಬಾರ್ ಆಂಡ್ ರೆಸ್ಟಾರಾಂಟುಗಳು ಬಂದವು. ಅಲ್ಲಿಗೆ ಬರೇ ಆಮ್ಲೆಟ್ ಮಾರುತ್ತಿದ್ದವರನ್ನು ಕೇಳುವವರಿಲ್ಲದೇ ಹೋಯಿತು. ವ್ಯಾಪಾರ ಕುಸಿದು ಬದುಕು ದುಸ್ತರವಾದಾಗ ಎರಡು ಹೊತ್ತಿನ ಊಟಕ್ಕಾಗಿ ಕಮಲ ಹೆಣ್ಮಕ್ಕಳು ಬಳಸುವ ಸೌಂದರ್ಯ ಸಾಧನಗಳ ವ್ಯಾಪಾರಕ್ಕೆ ಇಳಿದಿದ್ದಳು. ಕ್ಲಿಪ್ಪು, ಬಳೆ, ರಿಬ್ಬನ್ ಇತ್ಯಾದಿ ಸಾಧನಗಳ ಗಂಟನ್ನು ತಲೆ ಮೇಲೆ ಹೊತ್ತು ಬೀದಿಬೀದಿ ಅಲೆಯುತ್ತಿದ್ದಳು. ಹತ್ತಿರದ ನಾಲ್ಕೂರಿನ ಸಂತೆಗಳಲ್ಲಿ ಕೂಡ ಅಂಗಡಿ ಇಡಲಾರಂಭಿಸಿದ್ದಳು. ಬದುಕನ್ನು ಹೇಗಾದರೂ ಮುಂದೆ ಸಾಗಿಸುವ ಹೊಸಮಾರ್ಗವೊಂದು ಆಕೆಗೆ ತೆರೆದುಕೊಂಡಿತ್ತು.

ಆಮ್ಲೆಟ್ ಗಾಡಿಯನ್ನು ಸ್ಥಳಾಂತರಿಸಿ ಸೋಮನಾಥ ಒಬ್ಬನೇ ವ್ಯಾಪಾರ ನಡೆಸಲು ಪ್ರಯತ್ನಿಸಿದನಾದರೂ ಅವನಿಗದು ಸಾಧ್ಯವಾಗಲಿಲ್ಲ. ಬೇರಿನ್ನೇನೂ ಮಾಡಲು ತಿಳಿಯದೆ ಕಂಗಾಲಾಗಿ ಒಂದು ದಿನ ಗಾಡಿಯನ್ನೇ ಮಾರಿಬಿಟ್ಟ. ಧೃತಿಗೆಡದ ಕಮಲ ಪೌಡರು, ಲಿಪ್ ಸ್ಟಿಕ್ಕು, ರಿಬ್ಬನು, ಕ್ಲಿಪ್ಪು ಇತ್ಯಾದಿಗಳೊಂದಿಗೆ ನೈಲ್ ಪಾಲಿಶ್, ಹೇರ‍್ ಡೈ, ಬ್ರಾ, ಸ್ಯಾನಿಟರಿ ಪ್ಯಾಡು ಇತ್ಯಾದಿ ವಿಶೇಷ ಸಾಮಗ್ರಿಗಳನ್ನೂ ಸರಬರಾಜು ಮಾಡುತ್ತ ತನ್ನ ವ್ಯಾಪಾರ ಅಭಿವೃದ್ಧಿ ಪಡಿಸಿಕೊಂಡು ಸಂಸಾರ ನಿಭಾಯಿಸಿಕೊಂಡು ಹೋಗಲು ಆರಂಭಿಸಿದ್ದಳು. “ಬೇರೆ ಏನಾದರೂ ಕೆಲಸಕ್ಕೆ ಪ್ರಯತ್ನಿಸೋ” ಎನ್ನುತ್ತಿದ್ದ ಕಮಲಳ ಮಾತಿಗೆ ಕಟ್ಟುಬಿದ್ದು ಬೆಳಗ್ಗೆ ಹೊರಟು ನಿಲ್ಲುತ್ತಿದ್ದ ಸೋಮನಾಥ ಸಂಜೆ ಶೂನ್ಯ ಸಂಪಾದನೆಯೊಂದಿಗೆ ಮನೆಗೆ ಮರಳುತ್ತಿದ್ದ. ಊರಲ್ಲಿ ಅಲ್ಲಲ್ಲಿ ಹೋಗಿ ಸುಮ್ಮನೆ ಕೂರುತ್ತಿದ್ದ. ಯಾರಾದರೂ ಮಾತಿಗೆಳೆದರೆ ಗಂಟೆಗಟ್ಟಲೆ ಕುಳಿತು ಕೇಳುತ್ತಿದ್ದ. ಒಂದು ಕಪ್ ಚಹಾ ತೆಗೆಸಿಕೊಟ್ಟು “ಹೆಂಡತಿ ಅಷ್ಟು ಚೆನ್ನಾಗಿ ಸಂಪಾದನೆ ಮಾಡುವಾಗ ಹೀಗೆ ಆರಾಮವಾಗಿ ಇರುವುದೇ ಸರಿ.. ಏನಂತೀ ಸೋಮನಾಥ” ಎಂದು ಯಾರಾದರೂ ಲೇವಡಿ ಮಾಡಿದರೂ ಸುಮ್ಮನೇ ನಕ್ಕು ಚಹಾ ಹೀರುತ್ತಿದ್ದ. 

ಬಣ್ಣ ಎಣ್ಣೆಗೆಂಪಾದರೂ ನೋಡಲು ಲಕ್ಷಣವಾಗಿದ್ದ ಕಮಲಳಿಗೆ ಕಾಳುಹಾಕಲು ಬೇಬಿಯಕ್ಕ ಇರುವಾಗಲೂ ಪ್ರಯತ್ನಿಸಿದ್ದವರಿಗೇನೂ ಕಡಿಮೆಯಿರಲಿಲ್ಲ. ಬೇಬಿಯಕ್ಕ ತೀರಿಹೋದಮೇಲೆ ಇಂತಹ ಉಪಟಳ ನೀಡುವ ಜನರ ಸಂಖ್ಯೆ ಜಾಸ್ತಿಯಾಗಿತ್ತು. ಸೋಮನಾಥ ಆಮ್ಲೆಟ್ ಅಂಗಡಿ ಮಾರಿ ಬೇರೇನೂ ಉದ್ಯೋಗ ಮಾಡದೆ ‘ಕೈಲಾಗದವನು’ ಎನ್ನಿಸಿಕೊಂಡ ಮೇಲಂತೂ ಊರಲ್ಲಿ ಆಕೆ ನಡೆದಾಡುವುದೂ ಕಷ್ಟಕರವಾಗಿತ್ತು. ದಯಾನಂದ ಬೆಳೆಯುತ್ತ ಬಂದಂತೆ ಕಮಲಳ ಬಗೆಗೆ ಊರಲ್ಲಿ ಹಲವರು ಹಗುರವಾಗಿ ಮಾತನ್ನಾಡುವುದನ್ನು ಕೇಳಿಸಿಕೊಂಡಿದ್ದ. ಅವಳ ಬಗೆಗೆ ಒಳ್ಳೆಯ ಅಭಿಪ್ರಾಯ ಇಲ್ಲದಿರುವುದಕ್ಕೆ ಕಾರಣವೇನಾದರೂ ಇದೆಯೇ ಎಂದು ಬಹಳಷ್ಟು ಗಾಢವಾಗಿ ಹುಡುಕಾಟ ಕೂಡ ನಡೆಸಿದ್ದ. ಆಕೆಯ ಚಾರಿತ್ರ್ಯದಲ್ಲಿ ಏನೇನೂ ಹುಳುಕು ಆತನಿಗೆ ಕಂಡು ಬಂದಿರಲಿಲ್ಲ. ಬದಲಾಗಿ ಕತೆ ಹರಡುವವರು ಆಕೆಯ ಬೆನ್ನಹಿಂದೆ ಬಿದ್ದು ಆಕೆಯಿಂದ ಅವಗಣನೆಗೆ ಒಳಗದಾವರು ಎಂಬುದೂ ಸ್ಪಷ್ಟವಾಗಿ ಅರಿವಾಗುತ್ತಿತ್ತು. ‘ಊರಿನ ಎಲ್ಲ ಸೋಮನಾಥರೂ ಅವಳಿಗೆ ಗಂಡನ ಹಾಗೆಯೇ.. ಅವಳು ಭೇದಭಾವ ಎಣಿಸುವುದಿಲ್ಲ’ ಎಂದು ಹಿಂದಿನಿಂದ ಅಣಕಿಸುತ್ತಿದ್ದರು ಊರಜನ. ಕಮಲಳ ಗಂಡ ಸೋಮನಾಥನ ಮಂದ ಬುದ್ಧಿಗೆ ಇಂತಹ ಕುಚೇಷ್ಟೆಗಳೆಲ್ಲ ಅರಿವಾಗುತ್ತಿರಲಿಲ್ಲ. ಅದನ್ನು ತಿಳಿದ ಕಮಲಳೂ ತಾನು ಅನುಭವಿಸುವ ಹಿಂಸೆಯನ್ನು ಯಾರಲ್ಲೂ ಹೇಳಿಕೊಳ್ಳದೆ ಒಳಗೊಳಗೇ ನುಂಗಿಕೊಂಡು ಹೋಗುತ್ತಿದ್ದಳು. ದಯಾನಂದನಿಗೆ ಕಮಲಳ ಅಸಹಾಯಕತನ ಅರಿವಾಗುತ್ತಿದ್ದಂತೆ ಆಕೆಯ ಬಗ್ಗೆ ಮರುಕವೂ ಅಭಿಮಾನವೂ ಏಕಕಾಲಕ್ಕೆ ಹುಟ್ಟಿಕೊಂಡಿತ್ತು. 

ಕಮಲಳ ಬಗೆಗೆ ಇಂತಹ ಹೊಸಹೊಸ ಕತೆಗಳು ಆಗಾಗ ಹುಟ್ಟಿಕೊಳ್ಳುತ್ತಿದ್ದವು. ಟೈಲರ್ ಸೋಮನಾಥ ಕೂಡ ಆಕೆಯ ಸುತ್ತಮುತ್ತ ಸುಳ್ಳು ಕತೆ ಹೆಣೆಯುವವರಲ್ಲಿ ಒಬ್ಬನೆಂದೂ ದಯಾನಂದ ಕಂಡುಕೊಂಡಿದ್ದ. ಆಗಾಗ ಕಮಲಳಿಂದ ನೂಲು ಮತ್ತು ಬಟನ್ ಕೊಳ್ಳುತ್ತಿದ್ದ ಟೈಲರ್ ಸೋಮನಾಥ. ಆಕೆ ಅಂಗಡಿಗೆ ಬಂದಾಗಲೆಲ್ಲ ಟೈಲರ್ ಸೋಮನಾಥನ ಹಾವಭಾವವೇ ಬದಲಾಗುತ್ತಿತ್ತು. ”ನೀನಿಲ್ಲಿ ಬಂದು ಕುಳಿತುಕೋ, ನಾವು ಲೇಡೀಸ್ ಸೆಕ್ಷನ್ ತೆರೆಯೋಣ” ಎಂದೆಲ್ಲ ಕೊಚ್ಚಿಕೊಳ್ಳುತ್ತಿದ್ದ. ಅವಳ ಹಣಕೊಟ್ಟು ಕಳುಹಿಸುವುದನ್ನು ಬಿಟ್ಟು ಅಲ್ಲೇ ನಿಲ್ಲಿಸಿಕೊಂಡು ಉಳಿದ ಗಿರಾಕಿಗಳ ಎದುರು ”ನಮ್ಮದು ಹತ್ತಾರು ವರ್ಷಗಳ ಪರಿಚಯ” ಎಂದೆಲ್ಲ ದ್ವಂದ್ವಾರ್ಥದಲ್ಲಿ ಮಾತಾಡುತ್ತಿದ್ದ. ಈ ಬಗ್ಗೆ ದಯಾ ಹಲವು ಬಾರಿ ಆತನಲ್ಲಿ ತನ್ನ ಕೋಪವನ್ನು ಪ್ರಕಟಿಸಿದ್ದ. ಅಸಹಾಯಕ ಹೆಣ್ಣೊಬ್ಬಳ ಬಗ್ಗೆ ಹಗುರವಾಗಿ ಮಾತನಾಡುವುದು  ಸರಿಯಲ್ಲ ಎಂದು ನೇರವಾಗಿ ಹೇಳಿದ್ದ. ಒಂದು ಬಾರಿ ಅಂಗಡಿಗೆ ಬಂದು ಕಮಲಳ ಬಗೆಗೆ ಹಗುರವಾಗಿ ಮಾತನಾಡಿ, ದಯಾನನ್ನು ಅಣಕಿಸಲೆಂದೇ ”ನಿಮ್ಮ ದಯಾ ಮನೆಗೆ ಹೋಗುವಾಗ ಹನ್ನೊಂದು ಗಂಟೆಯಾಗುತ್ತೆ. ಪಾಪ ಅವನಿಗೇನು ಗೊತ್ತು” ಎಂದು ನಕ್ಕಿದ್ದ ಇಬ್ಬರು ಹುಡುಗರ ಮೇಲೆ ರೇಗಿ ಹೊಡೆದಾಟಕ್ಕೆ ಹೋಗಿದ್ದ ದಯಾನನ್ನು ಟೈಲರ್ ಸೋಮನಾಥನೇ ಎಳೆದು ತಂದು ಸಮಾಧಾನಗೊಳಿಸಿದ್ದ. ”ಅವರೆಲ್ಲರೂ ಸ್ಥಿತಿವಂತರ ಮಕ್ಕಳು. ನೀನ್ಯಾಕೆ ಅವರ ವೈರ ಕಟ್ಟಿಕೊಳ್ಳುತ್ತೀಯ? ಅದೂ ಯಾರಿಗಾಗಿ? ಕಮಲ ಅಷ್ಟೇನೂ ಹೇಳಿಕೊಳ್ಳುವ ಸನ್ನಡತೆಯವಳಲ್ಲ, ಅದನ್ನು ತಿಳಿದುಕೋ” ಎಂದುಬಿಟ್ಟ. ದಯಾ ಟೈಲರ್ ಸೋಮನಾಥನ ಮೇಲೆಯೇ ಹರಿಹಾಯ್ದ. ”ಅದು ನಿಮಗೆ ಹೇಗೆಗೊತ್ತು? ಆಕೆ ನಿಮ್ಮೊಂದಿಗೆ ಮಲಗಿದ್ದಾಳಾ? ಅಥವಾ ಇತರ ಯಾರೊಂದಿಗಾದರೂ ಮಲಗಿದ್ದನ್ನು ನೀವು ನೋಡಿದ್ದೀರಾ? ಹಾದಿಬೀದಿಯಲ್ಲಿ ಹುಡುಗರು ಆಕೆಯನ್ನು ಬೇಸ್ತುಹುಯ್ಯಿಸಿಕೊಳ್ಳುವುದಕ್ಕೇ ನಕ್ಕುತಲೆದೂಗಿದವರು ನೀವು. ಒಂದು ದಿನವಾದರೂ ಇಂತಹವರಿಗೆ ಬುದ್ಧಿ ಹೇಳಿದ್ದೀರಾ?” ಎಂದು ಚುಚ್ಚಿ ಕೊನೆಗೆ ”ನಿಮ್ಮ ಮನೆಯ ಹೆಂಗಸರಿಗೆ ಹೀಗೆಲ್ಲ ಮಾಡಿದರೆ ನೀವು ಸಹಿಸಿಕೊಳ್ಳುತ್ತೀರಾ?” ಎಂದುಬಿಟ್ಟ. ಟೈಲರ್ ಸೋಮನಾಥನಿಗೆ ಇದು ಇಷ್ಟವಾಗಲಿಲ್ಲ. ಕೋಪದಲ್ಲಿ ”ಸಾಕು ಸಾಕು ಸುಮ್ನಿರೋ.. ನಾನು ಯಾರು, ಯಾರಿಗೆ ಎದುರು ಮಾತಾಡುತ್ತಿದ್ದೀ ಎಂದು ನೆನಪಿಟ್ಟುಕೋ” ಅಂತ ಗದರಿಸಿದ್ದ.

*****

ಎಲ್ಲಾ ಟೈಲರುಗಳು ಗಿರಾಕಿಗಳ ಬಟ್ಟೆಯಲ್ಲಿ ಮಿಕ್ಕುಳಿದ ತುಂಡುಗಳಲ್ಲಿ ಮಕ್ಕಳ ಅಂಗಿ ಚಡ್ಡಿ ಹೊಲಿದರೆ ಟೈಲರ್ ಸೋಮನಾಥ ಅದರಲ್ಲಿ ರವಕೆ ಹೊಲಿದು ಮಾರಾಟ ಮಾಡುತ್ತಿದ್ದ. ಸೋಮನಾಥ ಮಾಸ್ತರರು ಶರ್ಟಿಗೆಂದು ಕೊಟ್ಟ ಬಟ್ಟೆಯ ಉಳಿದ ತುಂಡಿನಲ್ಲಿ ರವಕೆಯ ಬಾಡಿ ಹಾಗೂ ಗಲ್ಫ್ ಹುಡುಗನೊಬ್ಬನ ಶರ್ಟಿನ ಬಟ್ಟೆತುಂಡಿನಲ್ಲಿ ರವಕೆಯ ಕೈ ಹೊಲಿದು ”ಕಾಂಬಿನೇಶನ್ ಚೆನ್ನಾಗಿದೆ” ಎಂದು ಪೂಸಿ ಹೊಡೆದು ಕಮಲಳಿಗೆ ಮಾರಿದ್ದ. ಅವಳ ದುರಾದೃಷ್ಟಕ್ಕೆ ಸೋಮನಾಥ ಮಾಸ್ತರರೂ ಕಮಲಳೂ ಒಂದೇ ಬಸ್ಸಿನಲ್ಲಿ ಕುಳಿತು ಪ್ರಯಾಣಿಸುತ್ತಿದ್ದಾಗ ಅವರಿಬ್ಬರ ಡ್ರೆಸ್ ಮ್ಯಾಚಾಗುವುದನ್ನು ಕಂಡು  ಡ್ರೈವರ್ ಸೋಮನಾಥ ”ಇದೇನು ಸಾರ್, ಫ್ಯಾಮಿಲಿ ಯುನಿಫಾರ್ಮಾ?” ಅಂತ ಶಾಲಾಮಕ್ಕಳ ಎದುರಿನಲ್ಲಿ ಲೇವಡಿ ಮಾಡಿದ್ದು ಊರೆಲ್ಲ ಸುದ್ದಿಯಾಯಿತು. ಸಂಜೆ ಹೊತ್ತಲ್ಲಿ ಟೈಲರ್ ಸೋಮನಾಥನ ಅಂಗಡಿಗೆ ಬಂದ ಮಾಸ್ತರರು ಟೈಲರ್ ಸೋಮನಾಥನನ್ನು ವಾಚಾಮಗೋಚರವಾಗಿ ಬೈದು ಹೋದರು. ಆಮೇಲೆ ಅಂಗಡಿಗೆ ಬಂದು ಅದೇ ಮಾತೆತ್ತಿ ”ಅದೆಲ್ಲ ಬಿಡು ಸೋಮನಾಥಣ್ಣ.. ಅವಳ ರವಕೆಯ ಅಳತೆ ಎಲ್ಲಿಂದ ಸಿಕ್ಕಿತು” ಎಂದು ಅಪಹಾಸ್ಯ ಮಾಡಿದ ಪಡ್ಡೆ ಹುಡುಗರೊಂದಿಗೆ ದಯಾನಂದ ಜಗಳವಾಡಿದ. ಜಗಳ ಕೈ ಕೈ ಮಿಲಾಯಿಸುವ ಮಟ್ಟ ಮೀರಿ ಒಬ್ಬ ಹುಡುಗ ಕೈಯೆತ್ತಿ ದಯಾನಂದನ ಕೆನ್ನೆಯ ಮೇಲೆ ಬಾರಿಸಿದ. ರೌದ್ರಾವತಾರ ತಾಳಿದ ದಯಾನಂದ ಇಬ್ಬರು ಹುಡುಗರಿಗೂ ಮುಖಮೂಗು ನೋಡದೆ ಹಿಗ್ಗಾಮುಗ್ಗ ಥಳಿಸಿದ. ಪ್ರಕರಣ ಪೋಲೀಸು ಸ್ಟೇಶನ್ನು ತಲುಪಿ ಊರೆಲ್ಲ ಸುದ್ದಿಯಾಯಿತು. ಹಳ್ಳಿಯ ರಾಜಕೀಯ ಕುಳಗಳೂ ಪಕ್ಷ ವಹಿಸಿ ರಂಗಕ್ಕೆ ಬಂದರು. ಪರಿಣಾಮವಾಗಿ ಪೋಲೀಸರು ಗೂಂಡಾಗಿರಿ ಆರೋಪ ಹೊರಿಸಿ ಜಾಮೀನು ಕೊಡಿಸುವ ವರೆಗೆ ದಯಾನನ್ನು ಎರಡುದಿನ ಲಾಕಪ್ಪಿನಲ್ಲಿರಿಸಿದರು. 

”ಗಿರಾಕಿಗಳೊಂದಿಗೆ ಜಗಳ ಮಾಡುವ ಅವನಿನ್ನು ಅಂಗಡಿಗೆ ಬರುವುದು ಬೇಡ” ಅಂದ ಕೆಂಡವಾಗಿದ್ದ ಟೈಲರ್ ಸೋಮನಾಥ.

”ಆ ಗಿರಾಕಿಗಳಿಗೆ ಮಾತ್ರವಲ್ಲ, ಇವರಿಗೂ ಮಾನ ಮರ್ಯಾದೆಯಿಲ್ಲ. ನಾನು ಇನ್ನು ಅಂಗಡಿಯಲ್ಲಿ ಕಾಲಿಡುವುದಿಲ್ಲ” ಎಂದ ದಯಾನಂದ. ಕಮಲ ಹೆದರಿಕೊಂಡಿದ್ದಳು. ”ಪೋಲೀಸು, ಕೋರ್ಟು ಅಂತೆಲ್ಲ ಉದ್ದುದ್ದ ಬೇಡವೋ… ಮಾಫಿ ಕೇಳಿ ರಾಜಿ ಮಾಡಿಕೋ” ಎಂದಳಾಕೆ. ”ಎಲ್ಲಾದರೂ ದುಡೀತೀನಿ, ಅಲ್ಲಿಗೆ ಹೋಗಲ್ಲ, ಜೈಲಲ್ಲಾದರೂ ಕೊಳೀತೀನಿ, ಮಾಫಿ ಕೇಳಲ್ಲ” ಖಡಾಖಂಡಿತವಾಗಿ ಹೇಳಿದ ದಯಾ. 

ಅಲ್ಲಿಗೆ ಹದಿನೈದು ವರ್ಷಕ್ಕೂ ಮಿಕ್ಕಿದ ಗುರುಶಿಷ್ಯರ ಸಂಬಂಧದ ಅಧ್ಯಾಯ ಒಂದೇಟಿಗೆ ಕೊನೆಗೊಂಡಿತ್ತು. ದೀರ್ಘ ಕಾಲದ ಸ್ನೇಹ ಮುರಿದಾಗ ಹುಟ್ಟಿಕೊಳ್ಳುವ ಹಗೆತನ ಘನಘೋರವಾಗಿರುತ್ತದೆಯಂತೆ. ದಯಾ ಮತ್ತು ಕಮಲ ಒಂದು ಪಂಗಡ, ಪಡ್ಡೆಹುಡುಗರು ಮತ್ತು ಟೈಲರ್ ಸೋಮನಾಥ ಇನ್ನೊಂದು ಪಂಗಡ. ಸುಮ್ಮಸುಮ್ಮನೆ ದಯಾ ಯಾಕೆ ಕಮಲಳ ಪಕ್ಷ ವಹಿಸಿ ಜಗಳವಾಡುತ್ತಾನೆ? ಇದರಲ್ಲಿ ಏನೋ ಒಳಗುಟ್ಟಿದೆ ಎಂದು ಊರವರು ಹೊಸ ಕತೆ ಹುಟ್ಟಿಸಿ ಹಾಕಿದರು. 

ದಯಾನ ಬಂಧನ ಮಗುವಿನ ಮನಸ್ಸಿನ ಕಮಲಳ ಗಂಡ ಸೋಮನಾಥನ ಮೇಲೆ ಭಾರಿ ಪ್ರಭಾವ ಬೀರಿತು. ಪೋಲೀಸರು ಮನೆಗೆ ಬಂದಾಗ ಕೈಕಾಲು ನಡುಗಿ ಅವಿತಿಟ್ಟುಕೊಂಡ ಆತ ಆಮೇಲೆ ಯಾರಿಗೂ ಹೇಳದೆ ರಾತೋ ರಾತ್ರಿ ಮನೆಬಿಟ್ಟು ಪರಾರಿಯಾದ. ಕಮಲಾ ಹತ್ತಿರದಲ್ಲೆಲ್ಲ ಹುಡುಕಿದಳು. ಎಲ್ಲೂ ಸಿಗದೇ ಹೋದಾಗ ಹೆದರಿ ಪೋಲೀಸ್ ಕಂಪ್ಲೇಂಟ್ ಬರೆಸುವುದೇ ಬೇಡವೇ ಎಂಬ ನಿರ್ಧಾರ ಮಾಡಲಾಗದೆ  ”ಹೋದವನು ತಿರುಗಿ ಬಂದಾನು” ಎಂದು  ಸುಮ್ಮನಾದಳು. ಊರವರಿಗೆ ಮಾತಿಗೆ ಹೊಸ ವಿಷಯ ಸಿಕ್ಕಿತ್ತು.  ”ಇವರ ರಾಸಲೀಲೆಗೆ ತೊಡಕಾಗಿದ್ದ ಅವನನ್ನು ಮುಗಿಸಿದ್ದಾರೆ” ಎಂದು ಹುಯಿಲೆಬ್ಬಿಸಿದರು ವಿರೋಧಿಗಳು. 

ದಿನವೂ ದುಡಿದು ಉಣ್ಣುತ್ತಿದ್ದವರ ಬಾಳಿನಲ್ಲಿ ಪೋಲೀಸು ಕೇಸು ಬಿರುಗಾಳಿಯೆಬ್ಬಿಸಿತು. ಕರೆದಾಗ ಸ್ಟೇಶನ್ನಿಗೆ ಹೋಗ ಬೇಕಾಗಿದ್ದುದರಿಂದ ಕಮಲಳ ಬಿಸಿನೆಸ್ಸಿಗೆ ಇನ್ನಿಲ್ಲದ ಹೊಡೆತ ಬಿದ್ದಿತ್ತು. ಮಾಲೀಕ ಹಾಗೂ ಗಿರಾಕಿಗಳೊಂದಿಗೆ ಜಗಳವಾಡಿದ ಸುದ್ದಿಯಿಂದಾಗಿ  ದಯಾನನ್ನು ಬೇರೆ ಎಲ್ಲೂ ಕೆಲಸಕ್ಕೆ ಸೇರಿಸಿಕೊಳ್ಳಲಿಲ್ಲ. ಇನ್ನು ತನ್ನದೇ ಟೈಲರ್ ಅಂಗಡಿ ತೆರೆಯುವುದು ಮಾತ್ರ ಸಾಧ್ಯ ಎಂದುಕೊಂಡ ದಯಾ ಅದಕ್ಕೆ ಹಣ ಹೊಂದಿಸುವುದೆಲ್ಲಿಂದ ಎಂದು ತಲೆಯ ಮೇಲೆ ಕೈಹೊತ್ತು ಕುಳಿತಿದ್ದ.  ”ಮೆಶಿನು ಖರೀದಿಸೋಣ, ಎಲ್ಲಿಯಾದ್ರೂ ಕುಳಿತು ಹೊಲಿಗೆ ಶುರು ಮಾಡು” ಎಂದಳು ಕಮಲ. ”ಎಲ್ಲಿ ಹೊಲಿಯುವುದು ಎನ್ನುವುದು ಪ್ರಶ್ನೆ ಅಲ್ಲ. ಏನನ್ನು ಹೊಲಿಯುವುದು? ಅದು ಪ್ರಶ್ನೆ” ಎಂದ ದಯಾ.

“ನಿನ್ನ ಪರಿಚಯದವರಲ್ಲಿ ನೀನು ಹೇಳು, ನನ್ನ ಪರಿಚಯದವರಿಗೆಲ್ಲ ನಾನು ಹೇಳುತ್ತೇನೆ. ದಿನಕ್ಕೂಂದು ಶರಟು ಪ್ಯಾಂಟು ಹೊಲಿಯಲು ಸಿಕ್ಕಿದರೂ ಸಾಕು. ನಾನು ಹಾಗೆಯೇ ಆರಂಭಿಸಿದ್ದು” ಎಂದು ಹುರುಪು ತುಂಬಿದಳು ಕಮಲ.

ದಯಾ ಊರಲ್ಲೆಲ್ಲ ಸುತ್ತಾಡಿ ಪರಿಚಯದವರಲ್ಲಿ ವಿನಂತಿ ಮಾಡಿ ಬಂದ. ಕಮಲ ಕೂಡ ತನ್ನ ಗಿರಾಕಿ ಹೆಣ್ಮಕ್ಕಳಿಗೆ ಮನೆಯ ಗಂಡಸರಿಗೆ ಹೇಳುವಂತೆ ಕೇಳಿಕೊಂಡಳು. ಸುದ್ದಿ ಸಿಕ್ಕಿದ ಸೋಮನಾಥ ಮಾಸ್ತರರು ಟೈಲರ್ ಸೋಮನಾಥನಿಗೆ ಬುದ್ಧಿಕಲಿಸಲೆಂದೇ ತಾವಾಗಿ ಬಂದು ಹಳೆವಿದ್ಯಾರ್ಥಿಗಳ ಫಂಡಿನಿಂದ ಬಡಮಕ್ಕಳ ಯುನಿಫಾರ್ಮ್ ಹೊಲಿಗೆಯ ಆರ್ಡರ್ ಕೊಟ್ಟರು. ಅದರ ಬೆನ್ನಿಗೇ ಸೋಮೇಶ್ವರ ಕಾಮತರ ಹೊಟೆಲಿನ ಯುನಿಫಾರ್ಮ್, ಸೋಮಪ್ಪ ಮೇಸ್ತ್ರಿಯ ಮದುವೆಯ ಬಟ್ಟೆಬರೆ ಹೊಲಿಯುವ ಕೆಲಸ ಸಿಕ್ಕಿತು. ಟೈಲರ್ ಸೋಮನಾಥನಿಗೆ ತನ್ನ ಶಿಷ್ಯನ ಹೊಸ ಪ್ಲಾನು ನುಂಗಲಾರದ ತುತ್ತಾಗಿತ್ತು. ಸೋಮನಾಥ ಶಾಸ್ತ್ರಿಗಳು ದೇವರ ರಥದ ಬಣ್ಣದ ಪತಾಕೆಗಳ ಆರ್ಡರ್ ಕೂಡ ದಯಾನಂದನಿಗೆ ಕೊಟ್ಟಾಗ ಟೈಲರ್ ಸೋಮನಾಥನಿಗೆ ತನ್ನೆಲ್ಲ ಗಿರಾಕಿಗಳೂ ಕೈತಪ್ಪಿಹೋಗುವ ಭಯ ಕಾಡತೊಡಗಿತು. ಮನೆಯಲ್ಲೇ ಹೊಲಿದು ಕೊಡುತ್ತಿದ್ದ ದಯಾನಂದ ದೇವಸ್ಥಾನದ ಬಳಿಯ ಕಟ್ಟಡದಲ್ಲಿ ರೂಮು ಹಿಡಿದು ಶ್ರೀ ಸೋಮನಾಥ ಟೈಲರ್ಸ್ ಎಂದು ಬೋರ್ಡು ಹಾಕಿ ಸೋಮನಾಥ ಶಾಸ್ತ್ರಿಗಳ ಅಮೃತ ಹಸ್ತದಿಂದ ಉದ್ಘಾಟನೆ ಮಾಡಿಸಿದಾಗ ಟೈಲರ್ ಸೋಮನಾಥ ಕೈಕೈ ಹಿಸುಕಿಕೊಂಡ. ಕಮಲಳನ್ನು ಸಂಪರ್ಕಿಸಿ ಉಪಾಯವಾಗಿ ರಾಜಿ ಮಾಡಿಕೊಳ್ಳುವ ಮಾತು ಮುಂದಿಟ್ಟ. “ನನ್ನ ಕಣ್ಣ ಮುಂದೆ ಬೆಳೆದ ಹುಡುಗ. ನಾವುನಾವೇ ಕಾಂಪಿಟಿಶನ್ ಮಾಡಿ ಉಳಿದವರಿಗೆ ಸಹಾಯ ಮಾಡಿಕೊಡುತ್ತಿದ್ದೇವೆ. ತಪ್ಪು ನನ್ನದೂ ಇದೆ, ಅವನದ್ದೂ ಇದೆ. ಕೇಸು ಹಿಂದೆ ತೆಗೆಸುತ್ತೇನೆ. ಎಲ್ಲ ಮರೆತು ಒಟ್ಟಿಗಿರೋಣ ಎಂದು ತಿಳಿಸಿ ಹೇಳು” ಅಂತೆಲ್ಲ ಗೋಗರೆದ. ಕಮಲ ”ನಾನು ಹೇಳಿದರೆ ಈಗ ಆತ ಕೇಳುತ್ತಾನೆ ಎಂದು ನನಗನಿಸುವುದಿಲ್ಲ. ನೋಡೋಣ ಸಮಯ ಬಂದಾಗ ಪ್ರಯತ್ನಿಸುತ್ತೇನೆ” ಎಂದಳು.

ಸ್ವಲ್ಪ ಸಮಯದಲ್ಲಿ ಟೈಲರ್ ಸೋಮನಾಥ ತಾನಾಗಿ ಪೋಲೀಸು ಕೇಸು ಹಿಂದೆ ಪಡೆದು ”ನೋಡು ಕಮಲ, ಕೇಸು ತೆಗೆಸಿದ್ದೇನೆ, ಅವನನ್ನು ಒಪ್ಪಿಸು” ಎಂದು ಬೇಡಿಕೊಂಡ.  ಕಮಲ ಸುಮ್ಮನಿದ್ದಳು. ಪಡ್ಡೆ ಹುಡುಗರನ್ನು ಬೆಳೆಸಿ ಊರ ನೆಮ್ಮದಿ ಕೆಡಿಸುತ್ತಿದ್ದದ್ದು ಇವನೇ ಎಂಬ ಅಪಖ್ಯಾತಿ ಬೇರೆ ಟೈಲರ್ ಸೋಮನಾಥನಿಗೆ ಅಂಟಿ ವ್ಯಾಪಾರ ಪಾತಾಳಕ್ಕಿಳಿಯುತ್ತಿತ್ತು. 

ಬದುಕಿಗೆ ಮುಂದಿನ್ನೇನು ಎಂಬ ಚಿಂತೆ ತೀವ್ರವಾಗಿ ಕಾಡಲಾರಂಭಿಸಿದಾಗ ಹೊಸ ವರಸೆಯೊಂದಿಗೆ ಟೈಲರ್ ಸೋಮನಾಥ ಕಮಲಳನ್ನು ಭೇಟಿ ಮಾಡಿದ.  ”ನನಗೂ ವಯಸ್ಸಾಗುತ್ತಾ ಬಂತು. ನನ್ನ ವಾರಸುದಾರ ಆತ. ಮಗಳು ಚಿತ್ರಾ ಬೆಳೆದು ದೊಡ್ಡವಳಾಗಿದ್ದಾಳೆ. ದಯಾ ಒಪ್ಪಿದ್ರೆ ಮದುವೆ ಮಾಡಿಸಿ, ನನ್ನ ಬಿಸಿನೆಸ್ಸನ್ನೂ ಅವನಿಗೇ ಒಪ್ಪಿಸಿ ರಿಟಯರ್ ಆಗೋಣ ಅಂದುಕೊಂಡಿದ್ದೇನೆ. ಅವನಿಗೆ ನೀನು ಬಿಟ್ಟು ಬೇರೆ ಯಾರಿದ್ದಾರೆ? ನೀನು ಮನಸ್ಸು ಮಾಡಬೇಕು” ಎಂದ.  ”ನೀವೇ ಹೋಗಿ ಮಾತಾಡಿ” ಆತನ ಹೊಸ ವರಸೆಗೆ ನಗುತ್ತ ಸೂಚಿಸಿದಳು ಕಮಲ.

ಇದೆಲ್ಲದರ ನಡುವೆ ಎಲ್ಲೆಲ್ಲೋ ತಿರುಗಾಟ ಮಾಡುತ್ತ ಅಲ್ಲಲ್ಲಿ ಗಡ್ಡ ಬಿಳಿ ಮಾಡಿಕೊಂಡು ಕಮಲಳ ಗಂಡ ಸೋಮನಾಥ ಒಂದು ದಿನ ಮನೆಗೆ ಹಿಂತಿರುಗಿದ್ದ. ಕಮಲಳಿಗೆ ಈತ ಸದ್ಯ ಜೀವಂತ ಇದ್ದಾನಲ್ಲ ಎನ್ನುವುದೇ ಸಂಭ್ರಮವಾಗಿತ್ತು. ಮನೆಗೆ ಬಂದು ಹದಿನೈದು ದಿನ ಆರಾಮವಾಗಿ ತಿಂದುಂಡು ತಿರುಗಾಡಿಕೊಂಡಿದ್ದ ಸೋಮಾರಿ ಸೋಮನಾಥನನ್ನು ಒಂದು ದಿನ ಎಳೆದು ತಂದು ದಯಾನ ಅಂಗಡಿಯಲ್ಲಿ ಕೂರಿಸಿದ ಕಮಲ ”ದಯಾ, ಇವರಿಗೂ ಏನಾದರೂ ಹೊಲಿಗೆ ಕಲಿಸು” ಎಂದಳು! 

ದಯಾ ಮುಗುಳ್ನಕ್ಕು ಹೊಲಿಗೆ ಮೆಶೀನು, ಟೇಪು,  ಬಟನ್ ಮತ್ತು ನೂಲಿನ ಡಬ್ಬಿ ಮತ್ತು ಕತ್ತರಿಯನ್ನು ಸೋಮನಾಥ ದೇವರ ಫೋಟೋದ ಮುಂದೆ ಜೋಡಿಸಿ, ಊದುಬತ್ತಿ ಹಚ್ಚಿ ಸೋಮಾರಿ ಸೋಮನಾಥನನ್ನು ಅದರೆದುರು ಅಡ್ಡಬೀಳಿಸಿದ. ಆಗ ಅಲ್ಲಿಗೆ ಹಾಜರಾದ ಟೈಲರ್ ಸೋಮನಾಥ ”ದಯಾನಂದ, ನೀನು ಗುರು. ಅವನನ್ನು ನಿನ್ನ ಕಾಲಿಗೂ ಬೀಳಿಸಿಕೋ” ಎಂದ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ

ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ

Leave a Comment

Your email address will not be published. Required fields are marked *

ಫೇಸ್‌ಬುಕ್‌ ಲಾಗಿನ್ ಬಳಸಿ ಕಮೆಂಟ್‌ ಮಾಡಿ

Sign up for our Newsletter